ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಜ್ಞಾನಿಕ ಗುದ್ದಾಟದ ಕಲಾತ್ಮಕ ವಿಜ್ಞಾನವೇ ‘ಪ್ರೂಫ್’

Last Updated 14 ಸೆಪ್ಟೆಂಬರ್ 2018, 12:40 IST
ಅಕ್ಷರ ಗಾತ್ರ

ನಾಟಕ: ಪ್ರೂಫ್
ಮೂಲ: ಡೇವಿಡ್ ಆಬರ್ನ್
ಕನ್ನಡಕ್ಕೆ ಅನುವಾದ: ಶಶಿಧರ್ ಡೋಂಗ್ರೆ
ನಿರ್ದೇಶನ: ಸಹಮತ
ತಂಡ: ಸಮತೆಂತೊ

ನಗರದ ಸುರುಚಿ ರಂಗಮನೆಯಲ್ಲಿ ಸೆಪ್ಟೆಂಬರ್ 9ರಂದು ಸಮತೆಂತೊ ತಂಡದಿಂದ ‘ಪ್ರೂಫ್’ ನಾಟಕ ಪ್ರದರ್ಶನಗೊಂಡಿತು.

ಅಮೆರಿಕಾದ ಖ್ಯಾತ ನಾಟಕಕಾರ ಡೇವಿಡ್ ಆಬರ್ನ್ 2000ನೇ ಇಸವಿಯಲ್ಲಿ ಈ ನಾಟಕವನ್ನು ಬರೆಯುತ್ತಾರೆ. ನಾಟಕವು ಕಲಾ-ವಿಜ್ಞಾನವಾದ ಪರಿಗೆ ಈ ರೀತಿಯ ಪ್ರಯತ್ನಗಳು ಕಾರಣ. ವೈಜ್ಞಾನಿಕ ವಿಚಾರಗಳನ್ನು ಕಲಾತ್ಮಕವಾಗಿ ರಂಗಕ್ಕಿಡುವುದು ಎರಡು ದೃಶ್ಯಗಳನ್ನು ಒಂದೆಡೆ ಮೇಳೈಸಿದಂತೆ. ಜನಸಾಮಾನ್ಯರಿಗೆ ವಿಜ್ಞಾನವನ್ನು ಹತ್ತಿರವಾಗಿಸುವ ಈ ಪ್ರಕ್ರಿಯೆ ವಿಶೇಷವಾದದ್ದು. ವೈಜ್ಞಾನಿಕ ಸಂಶೋಧನೆಗಳ ಕುರಿತು ವಿಜ್ಞಾನದ ಪರಿಭಾಷೆಗಳನ್ನು ಹೇರದೆ ಅಷ್ಟೇ ಸಲೀಸಾಗಿ ಜನರಿಗೆ ಅರ್ಥವಾಗುವ ಹಾಗೆ ನಾಟಕವಾಗಿಸಿದ್ದಾರೆ ಡೇವಿಡ್ ಆಬರ್ನ್. ಇದನ್ನು ನಮ್ಮ ಭಾಷೆಯ ಜಾಯಮಾನ, ಸಂಸ್ಕೃತಿ, ಪರಿಸರಕ್ಕೆ ತಂದು ಕನ್ನಡಕ್ಕೆ ಮೂಲ ಕೃತಿ ಎಂಬಂತೆ ಅನುವಾದಿಸಿದ್ದಾರೆ ಶಶಿಧರ್ ಡೋಂಗ್ರೆ. ಡೇವಿಡ್ ಅವರಿಗೆ ಈ ನಾಟಕಕ್ಕೆ ಪುಲಿಟ್ಜರ್‌ ಹಾಗೂ ಟೋನಿ ಪ್ರಶಸ್ತಿಗಳು ಸಂದಿವೆ.

ವೈಜ್ಞಾನಿಕ ವಿಷಯ ಆಧಾರಿತ ನಾಟಕಗಳು ಅತಿ ವಿರಳವಾದರೂ ಆಗೀಗ ಪ್ರದರ್ಶನಗೊಳ್ಳುವ ಇಂಥ ರಂಗಪ್ರಯೋಗಗಳು ರಂಗಭೂಮಿಯ ಹೊಸ ಸಾಧ್ಯತೆಗಳಿಗೆ ಸಾಕ್ಷಿಯಾಗಿವೆ. ಶೈಕ್ಷಣಿಕ ಸಂಶೋಧನಾ ಕ್ಷೇತ್ರದಲ್ಲಿನ ನವ ಆವಿಷ್ಕಾರಗಳ ಸಾರವನ್ನು ಹೇಳುತ್ತಾ ಗಣಿತದಲ್ಲಿನ ಸಂಶೋಧನೆ ಮತ್ತು ಅಲ್ಲಿನ ಕೆಸರೆರಚಾಟ, ಸಂಶೋಧಕರ ನಡುವಿನ ತಿಕ್ಕಾಟಗಳು, ಸಂಶೋಧನಾ ಕೆಲಸದ ಬರಹ, ಆಲೋಚನೆ, ಬದುಕು ಇತ್ಯಾದಿಗಳನ್ನು ಸಾರಾಸಗಟಾಗಿ ತೆರೆದಿಡುತ್ತದೆ.

ಪಾಶ್ಚಿಮಾತ್ಯ ವಿಶ್ವವಿದ್ಯಾಲಯದಲ್ಲಿ ಘಟಿಸುವ ಕಥೆಯೊಂದರ ಸೆಲೆ ಈ ನಾಟಕದ ಕಥಾವಸ್ತು. ನಮ್ಮ ನೆಲಕ್ಕೆ ಅನುಗುಣವಾಗಿ ಮಾರ್ಪಾಡು ಮಾಡಲಾಗಿದೆ. ಗಣಿತತಜ್ಞನ ಮಗಳೊಬ್ಬಳ ಆಪ್ತ ಕಥನ ಇದು. 26ರ ಹರೆಯದ ಸಂಶೋಧಕಿಯ ಬದುಕಿನ ಶೋಧ ಒಂದೆಡೆಯಾದರೆ, ಅಪ್ಪನ ಅಮೋಘ ಪ್ರಾಕ್ ಕಲ್ಪನೆಗಳಿಗೆ ಸಿಲುಕಿ ಅದರಿಂದ ವಿಮುಖಳಾಗಿಯೂ ಅದಕ್ಕೆ ಅಂಟಿಕೊಂಡೆ ಹುಡುಕಾಟ ನಡೆಸುವ ಸನ್ನಿವೇಶಗಳು ಕಟು ಸತ್ಯವನ್ನು ಬಿಂಬಿಸುತ್ತವೆ. ಆಕೆಯ ವಯೋಸಹಜ ಅಭಿಲಾಷೆಗಳು, ವಿಶ್ವವಿದ್ಯಾಲಯದ ಸಂಶೋಧನಾ ಪ್ರಬಂಧ, ಖ್ಯಾತಿ, ಅಪ್ಪನ ಶೋಧಗಳು.. ಹೀಗೆ ಬೇರೆ ಬೇರೆ ಆಯಾಮಗಳಲ್ಲಿ ನಾಟಕ ಸಾಗುತ್ತದೆ. ಶ್ರೇಷ್ಠ ಗಣಿತಶಾಸ್ತ್ರಜ್ಞರಾದ ಜಾನ್ ನಾಶ್ ಮತ್ತು ಶ್ರೀನಿವಾಸ ರಾಮಾನುಜಂ ಅವರ ಬದುಕಿನ ಕೆಲ ಸೂಕ್ಷ್ಮತೆಗಳನ್ನು ಈ ನಾಟಕದಲ್ಲಿ ಕ್ರೋಢೀಕರಿಸಲಾಗಿದೆ. ಸಂಶೋಧಕರ ಬದುಕು ಕೆಲವಷ್ಟು ಮಾನಸಿಕ ಒತ್ತಡಗಳಲ್ಲಿ ಸಾಗುತ್ತಿರುತ್ತದೆ. ಸಮಾಜ ಅವರನ್ನು ನೋಡುವ ಪರಿ ಹಾಗೂ ಅವರಿಗೆ ಸಮಾಜ ಅರಿವಾಗುವೆಡೆ ಒಂದಿಷ್ಟು ತಿಕ್ಕಾಟಗಳು ಸದಾ ಇದ್ದದ್ದೆ. ಇವುಗಳ ನಡುವೆ ಸಂಶೋಧಕಿಯ ವಾಸ್ತವಿಕ ಬದುಕು ಅನಾವರಣಗೊಳ್ಳುತ್ತದೆ.

ವಿಶ್ವವಿದ್ಯಾಲಯದ ಶ್ರೇಣೀಕೃತ ಸಂಶೋಧನಾ ವ್ಯವಸ್ಥೆಯ ಮುಸುಕಿನ ಗುದ್ದಾಟ, ಮಾನವ ವ್ಯಾಪಾರೀಕರಣದ ಸಂಶೋಧಕರ ನಡೆ, ಈ ನಡುವೆ ಮಹಿಳಾ ಸಂವೇದನೆ, ಅಕಾಡೆಮಿಕ್ ಗಿಮಿಕ್‌ಗಳು, ಬೌದ್ಧಿಕ ಗುದ್ದಾಟಗಳನ್ನು ನಿರ್ದೇಶಕಿ ಸಹಮತ ಪ್ರೇಕ್ಷರಿಗೆ ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಕೇವಲ 4 ಪಾತ್ರಗಳಿಂದ ಮುಂದೆ ಸಾಗುವ ನಾಟಕ ಎಲ್ಲೂ ಭಾರವಾಗುವುದಿಲ್ಲ. ವಿಜ್ಞಾನವನ್ನು ಸರಳೀಕರಿಸುವುದೇ ಸವಾಲಿನ ಕೆಲಸ, ಹಾಗಾಗಿ, ಇಲ್ಲಿ ವಿನ್ಯಾಸದ ಪಾತ್ರ ಅತಿ ಮುಖ್ಯ. ದೃಶ್ಯದಿಂದ ದೃಶ್ಯಕ್ಕೆ ನಾಟಕ ತೆರೆದುಕೊಳ್ಳುತ್ತಿದ್ದ ಪರಿ ವಿಶೇಷವಾಗಿತ್ತು. ಇಲ್ಲಿ ಬಳಸಲಾದ ‘ಫ್ಲಾಶ್ ಬ್ಯಾಕ್’ ತಂತ್ರ, ಪೂರಕ ರಂಗ ಪರಿಕರ ಈ ಎಲ್ಲವೂ ಇಂದಿನ ವಿಶ್ವವಿದ್ಯಾಲಯಗಳ
ಕಥೆಯನ್ನೇ ಹೇಳುತ್ತವೆ.

ಬೆಳಕು ಮಹೇಶ್ ಕಲ್ಲತ್ತಿ ಮತ್ತು ಪ್ರಶಾಂತ್ ಮೈಸೂರು. ಭದ್ರಪ್ಪ ಶಿ.ಹೆನ್ಲಿ (ಪ್ರೊ.ಜಮದಗ್ನಿ), ಸಹಮತ (ಮಾನಸಿ), ನಿಖಿಲ್/ಶ್ರೀನಿಧಿ ವಾದಿರಾಜ್ (ರಾಜೀವ್ ಭಾರದ್ವಾಜ್), ಅಶ್ವಿನಿ ಜಯರಾಮ್/ ಐಶ್ವರ‍್ಯ (ಚಿನ್ಮಯಿ) ತಮ್ಮ ಪಾತ್ರಗಳನ್ನು ಬಹಳ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT