ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗಭೂಮಿ | ಬೆಳಕಿನ ವಿನ್ಯಾಸದಲ್ಲಿ ಕಾಡುವ ‘ಅವಳ’ ನೆರಳು

Published 6 ಮೇ 2023, 22:08 IST
Last Updated 6 ಮೇ 2023, 22:08 IST
ಅಕ್ಷರ ಗಾತ್ರ

ಎನ್. ಸಂಧ್ಯಾರಾಣಿ

‘Don't tell me the moon is shining. Show me the glint of light on broken glass’ – ಆಂಟನ್ ಚೆಕೋವ್ ಹೇಳಿದ ಈ ಮಾತನ್ನು ರಂಗಕರ್ಮಿ ಅಹಲ್ಯಾ ಬಲ್ಲಾಳ್ ಮತ್ತು ನಾನು ಆ ದಿನ ಬೆಳಿಗ್ಗೆ ತಾನೆ ಚರ್ಚಿಸಿದ್ದೆವು. ಯಾವುದೇ ಕಲಾಪ್ರಕಾರದಲ್ಲಿ ‘ತೋರಿಸುವುದು’ ಮತ್ತು ‘ಹೇಳುವುದು’ ಎರಡೂ ಮೆಟ್ಟಿಲುಗಳೇ. ಹೇಳುವುದು ಮೊದಲ ಮೆಟ್ಟಿಲಲ್ಲಿದ್ದರೆ, ಇನ್ನೊಂದಿಷ್ಟು ಎತ್ತರದಲ್ಲಿರುವುದು ತೋರಿಸುವುದು. ಹೇಳುವುದು ಸುಲಭ, ಆತ ಅದೆಷ್ಟು ಒಳ್ಳೆಯವ ಅಥವಾ ಕೆಟ್ಟವ ಎಂದು ಒಂದೇ ವಾಕ್ಯದಲ್ಲಿ ಹೇಳಿಬಿಡಬಹುದು. ಆದರೆ ಆಗ ಓದುಗ ಅಥವಾ ನೋಡುಗರ ಕಲ್ಪನೆ ಮತ್ತು ಆಲೋಚನೆಗಳಿಗೆ ನಾವೇ ಮಿತಿಯನ್ನು ಹಾಕಿದಂತಾಗುತ್ತದೆ. ಆದರೆ ಹಾಗೇನೂ ‘ಹೇಳದೆ’ ದೃಶ್ಯಗಳನ್ನು, ಸನ್ನಿವೇಶಗಳನ್ನು ಕಟ್ಟುತ್ತಾ ಹೋಗಿ ನಾವು ಹೇಳಬೇಕಾಗಿರುವುದು ಓದುಗರಿಗೆ ತಾನೇ ಸ್ಫುರಿಸುವ ಹಾಗೆ ಮಾಡುವುದು ಕಲಾವಿದರಿಗೆ ನಿಜವಾದ ಸವಾಲು, ಅದೇ ಸಂಜೆ, ಅಹಲ್ಯಾ ಇಂತಹ ಸವಾಲನ್ನು ಕೈಗೆತ್ತಿಕೊಂಡು, ಅದನ್ನು ಸಮರ್ಥವಾಗಿ ನಿಭಾಯಿಸಿದ್ದರು.

ಜಯಲಕ್ಷ್ಮಿ ಪಾಟೀಲ್ ಸಾರಥ್ಯದ ‘ಈ ಹೊತ್ತಿಗೆ’ ಸಂಸ್ಥೆಗೆ ಈಗ ದಶಕದ ಸಂಭ್ರಮ. ಮೊದಲು ತಿಂಗಳಿಗೊಮ್ಮೆ ಸೇರಿ ಒಂದು ಪುಸ್ತಕವನ್ನು ಕುರಿತು ಚರ್ಚಿಸುವ ಉದ್ದೇಶವನ್ನಿಟ್ಟುಕೊಂಡು ಪ್ರಾರಂಭವಾದ ಸಂಸ್ಥೆ ನಂತರ ಹಲವು ಮಗ್ಗಲುಗಳಿಗೆ ಹೊರಳಿಕೊಂಡಿದೆ. ಕಮ್ಮಟಗಳು, ಕಥಾಪ್ರಶಸ್ತಿ, ವಿಚಾರ ಸಂಕಿರಣಗಳು, ಕಾವ್ಯ ಪ್ರಶಸ್ತಿ- ಹೀಗೆ ಸಾಹಿತ್ಯ ಪರಿಚಾರಿಕೆಯ ಹಲವಾರು ಟಿಸಿಲುಗಳಲ್ಲಿ ತೊಡಗಿಸಿಕೊಂಡು ಬಂದಿದೆ. ಈ ದಶಮಾನೋತ್ಸವದ ಸಂಭ್ರಮಕ್ಕಾಗಿ ನಡೆದದ್ದು ರವೀಂದ್ರನಾಥ್ ಟ್ಯಾಗೂರರ ಕೆಲವು ಕತೆಗಳನ್ನಾಧರಿಸಿದ ರಂಗ ಪ್ರಯೋಗ ‘ಅವಳ ಕಾಗದ’. ಇದರ ರಂಗರೂಪ ಸುಧಾ ಆಡುಕಳ, ವಿನ್ಯಾಸ ಶ್ವೇತಾ ಹಾಸನ, ಪರಿಕಲ್ಪನೆ ಮತ್ತು ನಿರ್ದೇಶನ ಶ್ರೀಪಾದ ಭಟ್ ಮತ್ತು ಪ್ರಸ್ತುತಿ ಅಹಲ್ಯಾ ಬಲ್ಲಾಳ್.

ಹೆಣ್ಣಿನ ಭಾವುಕತೆ ಮತ್ತು ಬುದ್ಧಿವಂತಿಕೆ ಅವಳಿಗೆ ವರವೋ ಅಥವಾ ಶಾಪವೋ? ಈ ಪ್ರಯೋಗ ಶುರುವಾಗುವುದು ಯಾವುದೋ ಕಡಲ ದಂಡೆಯಲ್ಲಿ. ಮರಳಿನಲ್ಲಿ ಪಾದದ ಆಸರೆಕೊಟ್ಟು, ಪ್ರೀತಿಯಿಂದ, ಆಸೆಯಿಂದ, ಆಸ್ಥೆಯಿಂದ ‘ಅವಳು’ ಕಟ್ಟುವ ಗೂಡುಗಳು ಯಾವುದೂ ಸರಿಯಾಗಿ ಬರುವುದೇ ಇಲ್ಲ. ಅಷ್ಟು ಜಾಣೆ, ಕವಯಿತ್ರಿಗೆ ಗೂಡು ಕಟ್ಟಿಕೊಳ್ಳುವುದಕ್ಕೆ ಆಗುವುದೇ ಇಲ್ಲ. ಆ ಪ್ರಯತ್ನ ನಿಲ್ಲಿಸಿ ಒಂದೂವರೆ ದಶಕ ಸಂಸಾರ ಮಾಡಿದ ಗಂಡನೊಡನೆ ಆಡಲಾಗದ ಅಥವಾ ಅವನೆಂದೂ ಕೇಳಲೊಲ್ಲದ ಮಾತುಗಳನ್ನು ‘ಅವಳು’ ಅಕ್ಷರವಾಗಿಸತೊಡಗುತ್ತಾಳೆ. ಕೋಲ್ಕತ್ತದ ಶ್ರೀಮಂತ ಜಮೀನ್ದಾರರ ಮನೆಗೆ ದೂರದ ಹಳ್ಳಿಯಿಂದ ತಂದ ವಧು ಆಕೆ, ಮನೆಯ ಛೋಟಿ ಬಹು, ಎರಡನೆಯ ಸೊಸೆ. ಮದುವೆಯಲ್ಲಿ ಮುಖ್ಯವಾಗುವುದು ಅವಳ ರೂಪ ಮಾತ್ರ. ಅವಳ ವಿದ್ಯೆ, ಬುದ್ಧಿವಂತಿಕೆ, ಬರವಣಿಗೆ ಯಾವುದೂ ಅಲ್ಲ. ಹಾಗಾಗಿ ಸಂಸಾರದಲ್ಲೂ ಅವಳ ಅಸ್ತಿತ್ವ ಎಂದರೆ ರೂಪ ಮಾತ್ರ. ಇಲ್ಲಿ ‘ಅವಳು’ ಸರ್ವನಾಮವಲ್ಲ, ಅದೊಂದು ನಾಮವಾಚಕ. ಏಕೆಂದರೆ ಯಾರದೋ ಮಗಳು, ಹೆಂಡತಿ, ಸೊಸೆ, ಓರಗಿತ್ತಿ, ಅಕ್ಕ ಆದ ‘ಅವಳಿಗೆ’ ಸ್ವಂತದ್ದಾದ ಒಂದು ಹೆಸರೂ ಇರುವುದಿಲ್ಲ. ಅವಳ ಬಂಡಾಯವೂ ಅಷ್ಟೇ ಘೋಷಣೆಯಲ್ಲ, ತಣ್ಣಗಿನ ಪ್ರತಿಭಟನೆ.

ಸರೋವರದ ಹಾಗೆ ಯಾವಾಗಲೂ ಶಾಂತ ಮತ್ತು ಅಗೋಚರ ಎಲ್ಲೆಕಟ್ಟಿನೊಳಗಿರುವ ಅಹಲ್ಯಾ, ನಾಟಕದ ಛೋಟಿಬಹು ಆಗಿ ನದಿಯಾಗುತ್ತಾರೆ, ಜಲಪಾತವಾಗುತ್ತಾರೆ, ಭೋರ್ಗರೆಯುತ್ತಾರೆ ಮತ್ತು ಕಡಲಿನ ಪಕ್ಕ ಬಂದು ಕಡಲೇ ಆಗುತ್ತಾರೆ. ಈ ಪರಿವರ್ತನೆ, ಅವರ ಧ್ವನಿಯಲ್ಲಿ ಭಾಷೆಗೆ ಸಿಕ್ಕುವ ಲಯ ಮತ್ತು ಚಾಕುವಿನ ತೀಕ್ಷ್ಣತೆ ಹೆಣ್ಣಿನ ಬದುಕಿನ ದುರಂತ ಅಭಿವ್ಯಕ್ತಗೊಂಡರೆ, ಅವರ ದೇಹಚಲನೆ ಹಸುವಿನಲ್ಲಿ, ಹಠದಲ್ಲಿ, ಭಾವಭಂಗಿಗಳಲ್ಲಿ, ಸೀರೆ, ಚಪ್ಪಲಿಗಂಟಿದ ಅಗೋಚರ ಮರಳು ಕಣಗಳನ್ನು ಕೊಡವಿಕೊಳ್ಳುವ ಲಾಲಿತ್ಯದಲ್ಲಿ ವ್ಯಕ್ತಗೊಳ್ಳುತ್ತದೆ. ಈ ಸಾಧ್ಯತೆಯೊಡನೆ ಇಟ್ಟು ನೋಡುವಾಗ ಇಡೀ ರಂಗವನ್ನು ಬಳಸಿಕೊಳ್ಳುವ ಹಾಗೆ ವಿನ್ಯಾಸ ಮಾಡಿ, ನಾಟಕಕ್ಕೊಂದಿಷ್ಟು ಬಿರುಸು ತರಬಹುದಿತ್ತೇನೋ ಅನ್ನಿಸುತ್ತದೆ. ಏಕೆಂದರೆ ಕಡಲದಂಡೆಯಲ್ಲಿ ಕುಳಿತ ಅವಳು ಮುದುಡಿ ಕೂರುವುದನ್ನು ನಿರಾಕರಿಸಿದವಳು.

ಕೆಲವು ಸಲ ಏನೂ ಅಂದುಕೊಳ್ಳದೆ ಪ್ರಯೋಗಗಳಿಗೆ ವಿಶೇಷತೆಯೊಂದು ಒದಗಿ ಬಂದುಬಿಡುತ್ತದೆ. ಈ ಪ್ರಯೋಗಕ್ಕೆ ಹಾಗೆ ಒದಗಿ ಬಂದ ವಿಶೇಷ ಕಪ್ಪಣ್ಣ ಅವರ ಬೆಳಕಿನ ವಿನ್ಯಾಸ. ಇದು ಪ್ರಯೋಗಕ್ಕೆ ಒಂದು ಹಿನ್ನೆಲೆ ಮತ್ತು ಭೂತಕಾಲ ಎರಡನ್ನೂ ಕಟ್ಟಿಕೊಟ್ಟಿತ್ತು. ನಾಟಕದ ನಂತರವೂ ನಾಟಕ ನಮ್ಮೊಳಗಿನಲ್ಲಿ ಮುಂದುವರೆಯುತ್ತಲೇ ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT