ಬೆಂಗಳೂರಿನ ರಂಗಶಂಕರದಲ್ಲಿ ಪ್ರದರ್ಶನಗೊಂಡ, ಕುಡಿಯಾಟ್ಟಂ ಶೈಲಿಯ ‘ಮೃಚ್ಛಕಟಿಕಂ’ ನಾಟಕ ಭೂಮಿಜಾ ಸಂಸ್ಥೆಯು ಪ್ರಸ್ತುತಪಡಿಸುತ್ತಿರುವ ಕಾರ್ಯಕ್ರಮಗಳಲ್ಲಿ ವಿಶಿಷ್ಟ ಸ್ಥಾನವನ್ನು ಪಡೆಯುತ್ತದೆ. ಏಕೆಂದರೆ ಕ್ರಿ.ಶ ಐದನೇ ಶತಮಾನದಲ್ಲಿದ್ದನೆಂದು ಹೇಳಲಾದ ಶೂದ್ರಕ ಮಹಾರಾಜ ಸಂಸ್ಕೃತದಲ್ಲಿ ರಚಿಸಿದ ನಾಟಕವಿದು. ಭಾರತದ ಅತ್ಯಂತ ಪ್ರಾಚೀನ ರಂಗಕಲೆ ಕುಡಿಯಾಟ್ಟಂ ಪ್ರಕಾರ ಇವೆರಡೂ ಸಂಗತಿಗಳು ಪ್ರಸ್ತುತ ಸಮಕಾಲೀನ ರಂಗಭೂಮಿಯಲ್ಲಿ ಮೇಳೈಸಿದ ರೀತಿ ಮತ್ತು ಇಂದಿನ ಪ್ರೇಕ್ಷಕರು ಅದನ್ನು ಮನದುಂಬಿ ಸ್ವೀಕರಿಸಿದ ಬಗೆ ರಂಗಕಲೆಯ ಕುರಿತು ಮಹತ್ವದ ಸಂದೇಶವನ್ನು ನೀಡುತ್ತದೆ. ಹಳತನ್ನು ಹೊಸದಾಗಿಸಿದ ಈ ಪ್ರಯೋಗ ಇತ್ತೀಚಿನ ರಂಗ ಪ್ರಯೋಗಗಳಲ್ಲಿ ಮಹತ್ವದ ಸ್ಥಾನ ಪಡೆಯುತ್ತದೆ.

‘ಮೃಚ್ಛಕಟಿಕಂ’ ಅಂದಿನ ಕಾಲಕ್ಕೂ ಅತ್ಯಾಧುನಿಕವೆನ್ನಿಸಿಕೊಂಡಿತ್ತು ಮತ್ತು ಸುಮಾರು ಸಾವಿರ ವರ್ಷಗಳಿಗೂ ಮೀರಿ ಭಾರತೀಯ ನಾಟಕಕಾರರ ಮೇಲೆ ದಟ್ಟ ಪ್ರಭಾವ ಬೀರಿತು. ಇಂದಿಗೂ ಕೂಡಾ ‘ಮೃಚ್ಛಕಟಿಕಂ’ ಟೆಂಪ್ಲೇಟ್ ನ ಛಾಯೆ ನಮ್ಮ ನಾಟಕಗಳಲ್ಲಿ ಅಲ್ಲಲ್ಲಿ ಕಂಡೇ ಕಾಣುತ್ತದೆ. ಒಬ್ಬಳು ಸುಂದರಿ ದೇವದಾಸಿಗಾಗಿ ಒಬ್ಬ ಸದ್ಗುಣಿ ವರ್ತಕ ಮತ್ತು ಒಬ್ಬ ದುಷ್ಟ ಶ್ರೀಮಂತನ ನಡುವಿನ ಸಂಘರ್ಷ ಇದರ ವಸ್ತು. ಜೊತೆಗೆ ರಾಜಕೀಯ, ಸಾಮಾನ್ಯ ಜನರ ಜೀವನ ಅವರ ವರ್ತನೆ, ನಾಯಕಿ ವಸಂತಸೇನೆಯ ದಿಟ್ಟ ವ್ಯಕ್ತಿತ್ವ ಎಲ್ಲವೂ ಕಾಲಾಂತರದಲ್ಲಿ ನಮ್ಮ ನಾಟಕಗಳಲ್ಲಿ ಬೇರೆಬೇರೆ ರೀತಿಯಲ್ಲಿ ಮರುಕಳಿಸಿವೆ.

ಇದು ಸುಪ್ರಸಿದ್ದ ಕುಡಿಯಾಟ್ಟಂ ಕಲಾವಿದ 80ರ ವಯಸ್ಸಿನ ಜಿ. ವೇಣು ಅವರ ಸಾಹಸ. ಈ ಹಿಂದೆಯೇ ಕಾಳಿದಾಸನ ‘ಶಾಕುಂತಲಂ’, ಭಾಸನ ‘ಊರುಭಂಗಂ’ ನಾಟಕಗಳನ್ನು ಕುಡಿಯಾಟ್ಟಂ ಶೈಲಿಯಲ್ಲಿ ಪ್ರಯೋಗಿಸಿ ರಾಷ್ಟ್ರಮಟ್ಟದಲ್ಲಿ ಮೆಚ್ಚುಗೆ ಗಳಿಸಿದವರು. ನಿರ್ದೇಶಕ ಜಿ. ವೇಣು ಅವರು ಹೇಳಿದಂತೆ, ‘ಎರಡು ಸಾವಿರ ವರ್ಷಗಳ ನಂತರವೂ ಕುಡಿಯಾಟ್ಟಂ ನಲ್ಲಿ ‘ಮೃಚ್ಛಕಟಿಕ’ವನ್ನು ಮಾಡುತ್ತೇವೆ ಎಂದಾಗ ಹಳಬರು ತೀವ್ರವಾಗಿ ವಿರೋಧಿಸಿದರು. ಹಿಂದೆ ನಾವು ‘ಶಾಕುಂತಲಂ’ ಮಾಡಿದಾಗಲೂ ವಿರೋಧಿಸಿದ್ದರು. ಅವರ ಪ್ರಕಾರ ಶಕುಂತಲೆಯಾಗಲೀ, ವಸಂತಸೇನೆಯಾಗಲೀ ಕುಡಿಯಾಟ್ಟಂ ನಾಯಕಿಯರಾಗಲು ಅರ್ಹರಲ್ಲ ಮತ್ತು ದೇವಸ್ಥಾನದಲ್ಲಿ ಪ್ರದರ್ಶಿಸಲು ಯೋಗ್ಯವಲ್ಲ.’

ಇದು ದೇವಸ್ಥಾನದಲ್ಲಿ ಪ್ರಯೋಗವಾಗಲು ಇರುವ ಇನ್ನೊಂದು ತಡೆ ಎಂದರೆ ಪರಂಪರಾಗತವಾಗಿ ಕುಡಿಯಾಟ್ಟಂ ಮಾಡುವ ಕುಟುಂಬ/ ಜಾತಿಗೆ ಸೇರದ ಕಲಾವಿದರು ಇದನ್ನು ಮಾಡುತ್ತಿರುವುದು. ‘ವಾಸ್ತವವಾಗಿ ಅವರಿಗೆ ದೇವಸ್ಥಾನದೊಳಗೆ ಪ್ರವೇಶವೇ ಇಲ್ಲ. ಇನ್ನು ಕುಡಿಯಾಟ್ಟಂ ಮಾಡುವುದೇನು ಬಂತು!’ ಆದರೆ ಕೇರಳದ ನಟನಕೈರಳಿ ತಂಡ ಎಲ್ಲ ತಡೆಗಳನ್ನೂ ಮೀರಿ ನಾಟಕ ಪ್ರದರ್ಶಿಸಿತು. ಜನಮೆಚ್ಚುಗೆ ಗಳಿಸಿತು. ಇದಕ್ಕೆ ಒತ್ತಾಸೆಯಾಗಿ ನಿಂತಿದ್ದು ಭೂಮಿಜಾ ಸಂಸ್ಥೆಯ ಗಾಯತ್ರಿ ಕೃಷ್ಣ. ಸೆರೆಂಡಿಪಿಟಿ ಉತ್ಸವದಲ್ಲಿ ಗಾಯತ್ರಿಯವರು ‘ಶಾಕುಂತಲಂ’ ನೋಡಿ ಮೆಚ್ಚಿ ಕೇರಳಕ್ಕೆ ಹೋಗಿ ವೇಣು ಅವರನ್ನು ಭೇಟಿ ಮಾಡಿದರು. ನಿಮ್ಮ ಮುಂದಿನ ಪ್ರೊಡಕ್ಷನ್ ಯಾವುದು ಅಂದಾಗ ವೇಣು ಹೊಸದು ಮಾಡಲು ಕಷ್ಟವಿದೆ ಅಂದರಂತೆ. ಆದರೆ ರೋಹಿಣಿ ನಿಲೇಕಣಿ ದತ್ತಿದಾನ ಸಂಸ್ಥೆ ಇಡೀ ಪ್ರೊಡಕ್ಷನ್ಗೆ ಆರ್ಥಿಕ ನೆರವು ನೀಡಿ ಸಾಧ್ಯವಾಗಿಸಿತು.

ನಿರ್ದೇಶಕ ಜಿ.ವೇಣು ಅವರು ಹೇಳಿದಂತೆ ‘ಡಿಯಾಟ್ಟಂ ಪ್ರೊಡಕ್ಷನ್ಗೆ ಧನಸಹಾಯ ಸಿಗುವುದಿಲ್ಲ. ಅದು ಯುನೆಸ್ಕೊ ಟ್ಯಾಗ್ ಪಡೆದುಕೊಂಡಿದ್ದರೂ ಸರಿ. ಬೇರೆ ದೇಶಗಳಲ್ಲಿ ಅಂತಹ ಟ್ಯಾಗ್ ಸಿಕ್ಕಿದರೆ ಆ ಕಲೆಯನ್ನು ಇಡೀ ದೇಶ ರಾಷ್ಟ್ರೀಯ ಸಂಪತ್ತು ಎಂದು ಭಾವಿಸಿ ಪೋಷಿಸುತ್ತಾರೆ. ನಮ್ಮಲ್ಲಿ ಯಾವುದೇ ಸಾಂಪ್ರದಾಯಿಕ ಕಲೆಗಳಿಗೂ ಪ್ರೋತ್ಸಾಹ ಸಿಗುವುದಿಲ್ಲ. ಇದೊಂದು ದುರಂತ’ ಎಂದರು.

ಭಾರತೀಯ ಕಲೆಗಳ ಪುನರುಜ್ಜೀವನಕ್ಕೆ ಸಾಕಷ್ಟು ಶ್ರಮಿಸಿದ ಕಮಲಾದೇವಿ ಚಟ್ಟೋಪಾಧ್ಯಾಯ ಅವರೇ ಕುಡಿಯಾಟ್ಟಂನ ಮೆಂಟರ್ ಆಗಿದ್ದರು. ಕಮಲಾದೇವಿಯವರೇ ಒಮ್ಮೆ ನಾರ್ಮಲ್ ಶೈಲಿಯ ನಾಟಕದಲ್ಲಿ ವಸಂತಸೇನೆಯ ಪಾತ್ರ ವಹಿಸಿದ್ದರಂತೆ ಮತ್ತು ಆ ಪಾತ್ರದ ಬಗ್ಗೆ ಅವರಿಗೆ ಬಹಳ ಅಭಿಮಾನವಿತ್ತಂತೆ. ವೇಣು ಅವರಿಗೆ ಸ್ವತಃ ಕಮಲಾದೇವಿಯವರೇ ಕುಡಿಯಾಟ್ಟಂನಲ್ಲಿ ‘ಮೃಚ್ಛಕಟಿಕಂ’ ಮಾಡಿ ಅಂತ ಸೂಚಿಸಿದ್ದರಂತೆ. ‘ಮೃಚ್ಛಕಟಿಕ’ವನ್ನು ಜಾನಪದ ಶೈಲಿಯಲ್ಲಿ ನಿರ್ದೇಶಿಸಿದ್ದ ಹಬೀಬ್ ತನ್ವಿರ್ ಅವರು ವೇಣು ಅವರ ‘ಶಾಕುಂತಲಂ’ ನಾಟಕವನ್ನು 2004 ರಲ್ಲಿ ನೋಡಿ ‘ಮೃಚ್ಛಕಟಿಕ’ವನ್ನು ಕುಟ್ಟಿಯಾಟ್ಟಂನಲ್ಲಿ ಮಾಡಿ ಎಂದು ಒತ್ತಾಯಪೂರ್ವಕವಾಗಿ ಹೇಳಿದ್ದರಂತೆ.

ವೇಣು ಅವರು ಎದುರಿಸಿದ ಮಿತಿ ಎಂದರೆ ಈ ನಾಟಕ ಮೂಲದಲ್ಲಿ ಐದು ಗಂಟೆ ಅವಧಿಯಲ್ಲಿ ಮಾಡಬೇಕಾದ ನಾಟಕ. ಇವತ್ತಿನ ಕಾಲಕ್ಕೆ ತಕ್ಕಂತೆ ನಾನು ನಾಟಕವನ್ನು ಎರಡೂವರೆ ಗಂಟೆಗಳಿಗೆ ಇಳಿಸಬೇಕಾಯಿತು. ಹಾಗಾಗಿ ಪ್ರಸಿದ್ಧ ಶಕಾರನ ಪಾತ್ರವನ್ನು ತೆರೆಮರೆಯ ಧ್ವನಿಗೆ ಮಿತಿಗೊಳಿಸಬೇಕಾಯಿತು. ಆದರೂ ಕುಡಿಯಾಟ್ಟಂನ ಶುದ್ಧ ಶೈಲಿಯಲ್ಲಿ ಇದನ್ನು ರಂಗ ಪ್ರದರ್ಶನಕ್ಕೆ ಸಿದ್ಧಗೊಳಿಸಿದ್ದರ ಬಗ್ಗೆ ತಮಗೆ ಸಮಾಧಾನ ಇರುವುದಾಗಿ ಹೇಳುತ್ತಾರೆ.

ಸಾಂಪ್ರದಾಯಿಕ ಕಲೆಗಳನ್ನು ಉಳಿಸಿಕೊಳ್ಳಲು ಇಂತಹ ಪ್ರೋತ್ಸಾಹಕರು ಹಾಗೂ ಆಸಕ್ತಿಯುಳ್ಳ ಕಲಾವಿದರ ತಂಡ ಎರಡೂ ಇಂದಿನ ತುರ್ತಾಗಿದೆ. ಇಂದಿನ ಯುವಜನತೆ ಪಾಪ್ ಕಲೆಗಳಿಗೆ ಮಾರುಹೋಗಿದ್ದಾರೆ. ಅವರಿಗೆ ಸಾಂಪ್ರಾದಾಯಿಕ ಕಲೆಗಳಲ್ಲಿ ಆಸಕ್ತಿ ಇಲ್ಲ ಎನ್ನುವ ವಾದಕ್ಕೆ ಸಡ್ಡು ಹೊಡೆದಂತೆ ಈಚೆಗೆ ಜೋಗೇರ ಹಾಡಿನ ‘ಅನ್ಯಾಯಕಾರಿ ಬ್ರಹ್ಮಾ ಸುಂದರ ಸನ್ಯಾಸಿ ಮಾಡಬಹುದೇ’ ಎಂದು ಹಾಸ್ಟೆಲಿನ ಹುಡುಗಿಯರು ಮಾಡಿದ ರೀಲ್ಸ್ ವೈರಲ್ ಆಯಿತು. ಹಳತು ಬೇಕಾಗಿಲ್ಲ ಎಂದು ಗುಡಿಸಿ ಹಾಕುವ ಬದಲು ಹಳತನ್ನು ಹೊಸದು ಮಾಡಿ ಕೊಟ್ಟರೆ ಮುಂದಿನ ಪೀಳಿಗೆ ಖಂಡಿತಾ ಅದನ್ನು ಎತ್ತಿಕೊಳ್ಳುತ್ತದೆ. ಕಲೆಯನ್ನು ಉಳಿಸಿಕೊಳ್ಳುವುದು ಅಂದರೆ ಇದೇ. ರಂಗಶಂಕರದಲ್ಲಿ ಬಂದಿದ್ದ ಯುವ ಪ್ರೇಕ್ಷಕರು ಇಡೀ ನಾಟಕಕ್ಕೆ ಸ್ಪಂದಿಸಿದ ರೀತಿ ಆಹ್ಲಾದಕರವಾಗಿತ್ತು. ನಗಬೇಕಾದಲ್ಲಿ ನಕ್ಕು, ಚಪ್ಪಾಳೆ ತಟ್ಟುವಲ್ಲಿ ತಟ್ಟಿ ಕೊನೆಗೆ ನಾಟಕ ಮುಗಿದಾಗ ಎದ್ದು ನಿಂತು ಕೈತಟ್ಟಿ ಮೆಚ್ಚುಗೆ ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.