ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗಿಸುತ್ತಲೇ ಕಣ್ಣಲ್ಲಿ ಪಸೆಯುಳಿಸುವ ಹ್ಯಾಪ್ಪಿಕುಮಾರ

ವಿಶ್ವಕುಟುಂಬ ದಿನ ವಿಶೇಷ
Last Updated 16 ಮೇ 2020, 2:03 IST
ಅಕ್ಷರ ಗಾತ್ರ

ನಾನುಆನಂದ ಕುಮಾರ್‌ಹುಬ್ಬಳ್ಳಿಯವ ಅಂದಾಗ ಅಲ್ಲಿ ಹದಿಹರೆಯದ ಕನಸುಕಂಗಳ ಚೆಲುವ. ಹುಬ್ಬಗಲಿಸಿ, ಮಾತನಾಡುವಾಗ ಒಂದು ಪಾತ್ರ, ಪ್ರತಿಷ್ಠೆ, ಕಣ್ಣಲ್ಲಿ ಅಹಂಕಾರ, ಕೆನ್ನೆಯುಬ್ಬಿಸುವಾಗ ಗರ್ವ, ಕೆನ್ನೆಯಿಳಿಸಿದಾಗ ಉಡಾಫೆತನ, ಹುಬ್ಬು ಕೊಂಕಿಸಿ, ತುಟಿಯುಬ್ಬಿಸಿದಾಗ ಸಿನಿಮಾನಟಿಯ ವೈಯ್ಯಾರ..., ನಾಲಗೆ ಹೊರಚಾಚಿ, ಕಣ್ಣಲ್ಲಿ ಆಸೆ ತೋರುವಾಗ ಅಲ್ಲಿ ಮುದ್ದು ಮಾಡಿದ ನಾಯಿಗಳದ್ದೇ ರೂಪ..

ನೋಡಲು ಯಶವಂತ ಸರದೇಶಪಾಂಡೆ ಒಬ್ಬರೇ... ಮಾತು, ಹಾವಭಾವಗಳಲ್ಲಿ ಇಣುಕಿ ಹೋಗಿದ್ದು 15 ಪಾತ್ರಗಳು. ಹಲವಾರು ಭಾವಗಳು. ನಾಟಕದ ದೃಶ್ಯರೂಪವೊಂದನ್ನು ನುಡಿಚಿತ್ರದಲ್ಲಿ ತೋರಿಸಿದ್ದು ‘ಪ್ರಜಾವಾಣಿ’ಯ ಫೇಸ್‌ಬುಕ್‌ಲೈವ್‌ನಲ್ಲಿ.

ಕುಟುಂಬದ ಜನರೆಲ್ಲ ಒಗ್ಗೂಡಿ ನಗಲಿ ಎಂದೇ ಈ ಏಕವ್ಯಕ್ತಿ ಪ್ರದರ್ಶನವನ್ನು ವಿನ್ಯಾಸಗೊಳಿಸಿದ್ದು. ‘ಪ್ರಜಾವಾಣಿ’ಗಾಗಿಯೇ ವಿಶೇಷ ರೂಪಕ್ಕೆ ಇಳಿಸಿದ್ದರು. ಸಣ್ಣದೊಂದು ಪಡಸಾಲೆಯಲ್ಲಿ, ಜನರ ನಡುವೆ ಮಾಡಬೇಕಾದ ನಾಟಕವನ್ನು ಫೇಸ್‌ಬುಕ್‌ ಪ್ರಸ್ತುತಿಗಾಗಿ ಮರುವಿನ್ಯಾಸಗೊಳಿಸಿದ್ದರು.

ನಟನಾಗಲು ಬಂದ ನವಯುವಕನೊಬ್ಬ ಬಣ್ಣದ ಬದುಕಿನ ಹಲವಾರು ಬಣ್ಣಗಳನ್ನು ನೋಡಿದ ನಂತರ ತೆರೆಯ ಮರೆಗೆ ಸರಿಯುತ್ತಾನೆ. ಹೊಟ್ಟೆತುಂಬಿಸಿಕೊಳ್ಳಲು ಜಿಮ್‌ನಲ್ಲಿ ಫಿಸಿಕಲ್‌ ಇನ್‌ಸ್ಟ್ರಕ್ಟರ್‌ ಆಗಿ ಕೆಲಸಕ್ಕೆ ಸೇರ್ತಾನೆ. ನಂತರ ಮಸಾಜರ್‌ ಆಗಿ ಬದಲಾಗ್ತಾನೆ. ಜೀವನದ ಇಳಿಸಂಜೆಯಲ್ಲಿ ಲೈಫ್‌ ಕೋಚ್‌ ಆಗಿ ಬದುಕಿನ ಪಾಠಗಳನ್ನು ಮಾಡ್ತಾನೆ. ಇದಿಷ್ಟು ’ಹ್ಯಾಪ್ಪಿಕುಮಾರ ಹುಬ್ಬಳ್ಳಿಯವ’ ನಾಟಕದ ವಿಷಯವಸ್ತು.

45 ನಿಮಿಷಗಳಿಂದ ಒಂದೂವರೆ ಗಂಟೆಯ ಅವಧಿಯವರೆಗಿನ ಈ ನಾಟಕವನ್ನು ಅಗತ್ಯಕ್ಕೆ ತಕ್ಕಂತೆ ಮಾರ್ಪಡಿಸಿದ್ದಾರೆ. ಮನೆಮನೆಗೆ ಬಂದು ಪ್ರದರ್ಶನ ನೀಡಲು ಅನುಕೂಲವಾಗುವಂತೆ ಮರುವಿನ್ಯಾಸಗೊಳಿಸಿದ್ದಾರೆ. ವಿಶ್ವ ಕುಟುಂಬ ದಿನದ ಸಂಭ್ರಮಾಚರಣೆಗಾಗಿ ’ಪ್ರಜಾವಾಣಿ’ ವೇದಿಕೆಯ ಮೇಲೆ ಶುಕ್ರವಾರ ಈ ನಾಟಕವನ್ನು ಪ್ರದರ್ಶಿಸಿದರು. ಹೆಚ್ಚಿನ ಮಾಹಿತಿಗೆ:+91 98452 17869

ಮಾಸದ ನಗು, ಉಳಿಸಿದ ಪಸೆ

* ನಟ ಆಗಾಕ ಬಂದೆ. ಅವಕಾಶಕ್ಕ ಕಾಯ್ಕೊಂತ, ಇದ್ದಾಗಲೇ ನಾಲ್ಕನೆ ಅಸಿಸ್ಟೆಂಟ್‌ ಪ್ರೊಡ್ಯುಸರ್‌ ಆಗ್ತಾನ. ಕೂಲಿಯಿಲ್ಲದ ಜೀತಕ್ಕಿದ್ದೋರಂಗ ಎಲ್ಲ ಕೆಲಸಾನೂ ಮಾಡೂದೆ. ಕೆಲಸ ಮಾಡ್ಕೊಂತ ಮಾಡ್ಕೊಂತ ತನ್ನ ದೇಹವನ್ನು ಅಕ್ಕರೆಯಿಂದ ನೋಡ್ಕೊಂತಾನ. ಸಿಟ್ಟಿನಿಂದ ದಂಡಸ್ತಾನ. ಕೆಲಸದೊಳಗ ದಣಸ್ತಾನ. ಕನಸು ಕಸುವು ಕಳಕೊಳ್ದೆ ಇರುಹಂಗ ನೋಡ್ಕೊಂತಾನ.

* ಅಕಿ ಸಿನಿಮಾ ನಟಿ ಶ್ರೀಮಾಲಾ ಮೆಟ್ಟಿಲ ಮ್ಯಾಗಿಂದ ಇಳೀತಾಳ.. ಎಂಥಾ ಚಂದ.. ಅಪ್ಸರೆಯೊಬ್ಬಳು ಇಳಿದುಬಂದಂಗ.. ನಾನೂ ಹಂಗೆ ನೋಡ್ತಿದ್ದೆ. ಆದ್ರ ಅಕಿ ನನ್ನ ಹೆಂಗ ನೋಡಿದ್ಲಂದ್ರ... ಗಟಾರನಾಗಿನ ಕ್ರಿಮಿಯೊಂದು ಬಂದು ಮನಿಯೊಳಗ ಕುಂತಂಗ.. ಯಶಸ್ಸು ಮನಷಾಗ ಮನಷಾನಂಗ ನೋಡದೆ ಇರೂಹಂಗ ಮಾಡ್ತದ?

* ಹ್ಯಾಪ್ಪಿ ಕುಮಾರ... ಈ ಜಿಮ್ಮಿಗೆ ಬರೂದ ಚಂದ ಕಾಣಲಿ ಅಂತ.. ಕೆಲವರಿಗೆ ಉಬ್ಬು ತಗ್ಗುಗಳನ್ನು ಇಳಿಸಿಕೊೊಂಡು ತಿರುವು ಕಾಣಬೇಕು. ಇನ್ನು ಕೆಲವರಿಗೆ ಉಬ್ಬು ತೆಗ್ಗು ಎದ್ದು ಕಾಣಬೇಕು. ದೇಹ ದಂಡಿಸುವುದು, ಹಿಗ್ಗಸಾಕ ಕುಗ್ಗಸಾಕ ಅಲ್ಲ. ಶಿಸ್ತಿನ ಜೀವನ ಇದ್ರ ಸದೃಢ ಕಾಯ ಆಗ್ತದ.

* ಹ್ಯಾಪ್ಪಿ ಕುಮಾರ ನಟಿಯ ಅಮ್ಮನೊಟ್ಟಿಗೆ ಇದ್ದಾಗ... ಅಕಿ ಹ್ಯಾಪ್ಪಿಕುಮಾರ ಅಪ್ಗೊತಾಳ, ತಬ್ಕೊತಾಳ. ಆ ಅಮ್ಮನ ಎದಿ ನನ್ನೆದಿಗೆ ತಾಕಿದ್ವು. ಸೋಕಿದ್ವು. ಭಾರದಿಂದ ನೂಕಿದ್ವು.. ಉಸಿರಾಟದೊಳಗ ರಾಗದ ಜುಗಲ್ಬಂದಿ.. ವಾಂಛೆ ಎಂಬುದು ಕತ್ತಲೆಯೊಳಗ ಬೆಳಕಿಗೆ ಬರ್ತದ. ಬೆಳಕಾದ್ರ ಕತ್ಲಿಗೆ ಇಳೀತದ.

* ರಾಜಕಾರಣಿಯೊಬ್ಬ ಹ್ಯಾಪ್ಪಿಕುಮಾರನಿಂದ ದೇಹ ಮಜ್ಜನ ಬೇಕು ಅಂತಾನ. ಬರೂಮುಂದ ಕಾರು ಕಳಿಸಿ ಕರಕೊಂತಾರ. ಕೆಟ್ಟ ಹೊಲಸುಪಾದ, ಅವನ ಅಧಿಕಾರ, ಅವನ ದರ್ಪ, ಎಲ್ಲವೂ ದೇಹವನ್ನುಜ್ಜುವುದರಲ್ಲಿ ಧಾರಾಶಾಯಿಯಾಗಿ ನಿದ್ದಿಗಿಳೀತಾವ. ಆದ್ರ ಆ ಹೊಲಸುತನ ಮಾತ್ರ ಉಜ್ಜಾಕ ಆಗೂದಿಲ್ಲ. ಹ್ಯಾಪ್ಪಿ ಕುಮಾರಗ ಬರಿಗೈಲೆ ಕಳಸ್ತಾರ.

ಹಿಂಗ ಹ್ಯಾಪ್ಪಿಕುಮಾರ ಬದುಕಿನ ಒಳಹೊರಗೆ ಹೊಕ್ಕು, ಖುಷಿಖುಷಿಯಾಗಿಯೇ ಜೀವನದ ಒಳನೋಟ ಕೊಡ್ತಾನ. ಕನಸು, ಯಶಸ್ಸು ಅನ್ನುವ ಹಾರುಗುದರಿ ಹಿಂದ ತನ್ನತನ ಕಳಕೊಳ್ದೆ ಇದ್ರೂ ತಾನು, ತನ್ನವರನ್ನು ಕಳಕೊಂಡ ಬಗೆ ಹೇಳ್ತಾನ. ತುಟಿ ಮ್ಯಾಲಿನ ನಗಿ ಮಾಸದೇ ಇದ್ರೂ, ಕಣ್ಣಾಗ ಪಸೆ ಉಳಿಸಿ ಹೋಗ್ತಾನ. ಥೇಟ್‌ ನಮ್ಮೊಳಗಿನ ಮಗುವಿನ್ಹಂಗ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT