ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಮೋಡಿ ಮಾಡಲು ಬಂದ ‘ಆಹಾ!’

Last Updated 24 ಜುಲೈ 2018, 12:23 IST
ಅಕ್ಷರ ಗಾತ್ರ

‘ಆಹಾ!’, ದೇಶದಲ್ಲೇ ಮೊದಲ ಬಾರಿಗೆ ಪುಟ್ಟ ಮಕ್ಕಳಿಗೆಂದೇ ಏರ್ಪಡಿಸಲಾದ ನಾಟಕೋತ್ಸವ. ಇದು ದೇಶದಲ್ಲಿಯೇ ರಂಗಭೂಮಿಗೆಂದೇ ಮೀಸಲಾಗಿರುವ ಕೆಲವೇ ಕೆಲವು ಉತ್ಕೃಷ್ಟ ಸ್ಥಳಗಳ ಪೈಕಿ ಒಂದಾಗಿರುವ ರಂಗಶಂಕರದ ಕೊಡುಗೆ.

‘ದಿನಕ್ಕೊಂದು ನಾಟಕ’ ಎಂಬ ಧ್ಯೇಯವನ್ನಿಟ್ಟುಕೊಂಡು ಹದಿನಾಲ್ಕು ವರ್ಷಗಳಿಂದ ರಂಗಶಂಕರದಲ್ಲಿ 4,500ಕ್ಕೂ ಹೆಚ್ಚು ನಾಟಕಗಳು ಪ್ರದರ್ಶಿಸಲಾಗಿದೆ. ಈ ಮೂಲಕ ಸುಮಾರು 8 ಲಕ್ಷ ಪ್ರೇಕ್ಷಕರ ಮನಸ್ಸನ್ನು ರಂಗಭೂಮಿಯಲ್ಲಿ ತೊಡಗುವಂತೆ ಮಾಡಿರುವುದೇ ಅದರ ಹೆಮ್ಮೆ.

‘ಆಹಾ!’ ಎನ್ನುವುದೊಂದು ಬೆರಗು, ಭಾಷೆಯನ್ನೂ ಮೀರಿದ ಉತ್ಸಾಹ. ಇದು ಮಕ್ಕಳಿಗಾಗಿಯೇ ತಯಾರಾದ ಕಾರ್ಯಕ್ರಮಗಳ ಗುಚ್ಛ. ‘ಆಹಾ!’ ಕಾರ್ಯಕ್ರಮದ ಅಡಿಯಲ್ಲಿ ರಂಗ ಶಂಕರ ಸುಮಾರು ₹ 1.50 ಲಕ್ಷ ಮಕ್ಕಳ ಮನಸ್ಸುಗಳನ್ನು ಅರಳಿ
ಸಿದೆ. 2006ರಲ್ಲಿ ಶುರುವಾದ ‘ಆಹಾ!’ ಇಲ್ಲಿಯ ತನಕ ಎಂಟು ಮಕ್ಕಳ ನಾಟಕಗಳು, ಎಂಟು ಅಂತರರಾಷ್ಟ್ರೀಯ ಮಕ್ಕಳ ನಾಟಕೋತ್ಸವಗಳು, ಹತ್ತು ಬೇಸಿಗೆ ಶಿಬಿರಗಳು, ಐದು ಅಂತರರಾಷ್ಟ್ರೀಯ ಸಹಯೋಗಗಳು ಮತ್ತು ಅಸಂಖ್ಯಾತ ಮಕ್ಕಳ ನಾಟಕ ಪ್ರದರ್ಶನಗಳನ್ನು ನೀಡಿದೆ.

ಭಾರತದ ಸಾಂಸ್ಕೃತಿಕ ನಕಾಶೆಯಲ್ಲಿ ಭದ್ರವಾಗಿ ನೆಲೆಗೊಂಡಿರುವ ‘ಆಹಾ!’ ಮಕ್ಕಳ ನಾಟಕೋತ್ಸವವನ್ನು ಅತ್ಯಂತ ಕಾತುರದಿಂದ ಜನ ಎದುರು ನೋಡುತ್ತಾರೆ. ಆಸ್ಟ್ರೇಲಿಯಾ, ಆಸ್ಟ್ರಿಯಾ, ಜರ್ಮನಿ, ಸ್ವಿಟ್ಜರ್‌ಲೆಂಡ್, ಪೋಲೆಂಡ್, ದಕ್ಷಿಣ ಕೊರಿಯಾ, ಪೋರ್ಚುಗಲ್, ಶ್ರೀಲಂಕಾ, ನೆದರ್‌ಲೆಂಡ್, ಇಟಲಿ ಸೇರಿದಂತೆ ಹಲವು ದೇಶಗಳ ಮಕ್ಕಳುಜುಲೈನಲ್ಲಿ ನಡೆಯಲಿರುವ ಈ ನಾಟಕೋತ್ಸವದಲ್ಲಿ ಭಾಗಿಯಾಗಿ ಪ್ರದರ್ಶನ ನೀಡಿದ್ದಾರೆ. ಇಂತಹ ಹಿನ್ನೆಲೆಯುಳ್ಳ ಈ ನಾಟಕೋತ್ಸವವು ಮತ್ತೆ ಪ್ರೇಕ್ಷಕರ ಮುಂದೆ ಬರುತ್ತಿದೆ.

ಈಗ ತಾನೇ ಅಂಬೆಗಾಲಿಡಲು ಪ್ರಯತ್ನಿಸುತ್ತಿರುವ, ತೊದಲು ನುಡಿಗಳನ್ನು ನುಡಿಯುತ್ತಾ ಡೈಪರಿನಲ್ಲಿ ಕೂತಿರುವ, ಶಬ್ದಗಳ ಸೊಬಗನ್ನು ಈಗಷ್ಟೇ ಕಂಡು ಕೊಳ್ಳುತ್ತಿರುವ ಪುಟಾಣಿ ಮಕ್ಕಳೆಡೆಗೆ ಈ ಬಾರಿಯಆಹಾ!’ ನಾಟಕೋತ್ಸವವು ಲಕ್ಷ್ಯವಿಟ್ಟಿದೆ. 1ರಿಂದ 5 ವರ್ಷದ ಒಳಗಿನ ಈ ಕೂಸುಗಳಲ್ಲಿ ನಾಳೆಯ ಪ್ರೇಕ್ಷಕರಿದ್ದಾರೆ. ತಮ್ಮ ಸುತ್ತಲೂ ಮನರಂಜನೆ ಹುಡುಕುವ ಮಕ್ಕಳಿಗೆ ನಾಟಕ ರಂಗದ ಮೇಲೆ ಏನು ಸಿಕ್ಕೀತು ಎಂಬ ಪ್ರಶ್ನೆಗೆ ಈ ನಾಟಕೋತ್ಸವದ ಕೊನೆಗೆ ಉತ್ತರವಂತೂ ಸಿಗುತ್ತದೆ. ಮಗುವನ್ನು ತನ್ನದೇ ಪರಿಚಿತ ಪರಿಸರದಲ್ಲಿರಿಸಿ, ಬಣ್ಣ-ವಾಸನೆ-ವಿನ್ಯಾಸ-ಗಾತ್ರ ಇತ್ಯಾದಿಗಳ ಮೂಲಕ ಪರಿಚಯಿಸುವ ಸುಖ ರಂಗಭೂಮಿಗೆ ಸಿಕ್ಕಷ್ಟು ಇನ್ಯಾವ ಮಾಧ್ಯಮಕ್ಕೂ ಸಿಗಲಾರದು.

ಹಾಗಾದರೆ ಇದು ಮಕ್ಕಳ ಬೆಳವಣಿಗೆಗೆ ಪೂರಕವೇನು? ಇದಕ್ಕೆ ಹೌದು ಎಂತಾಗಲೀ, ಇಲ್ಲ ಎಂತಾಗಲೀ ಖಡಾಖಂಡಿತವಾಗಿ ಹೇಳಲು ಸಾಧ್ಯವಿಲ್ಲ. ಮಕ್ಕಳ ರಂಗಭೂಮಿ ಹೀಗೇ ಬೆಳೆಯಬೇಕು ಎಂದು ಹೇಳಲೂ ಆಗದು. ಇದೆಲ್ಲಾ ಒಂದು ಖುಷಿ. ಒಂದು ದೊಡ್ಡ ಸಂತೋಷ. ಒಂದು ಅಚ್ಚರಿ. ಒಂದು ಮರೆಯಲಾಗದ ಅನುಭವದ ಮುದ್ದಿನ ಮೂಟೆ. ಇದಕ್ಕಾಗಿ ’ಆಹಾ!’ ಕಾದು ಕೂತಿದೆ.

ಮಕ್ಕಳಿಗೇಕೆ ಥಿಯೇಟರ್?

‘ಪುಟ್ಟ ಮಕ್ಕಳ ಥಿಯೇಟರು ಅಥವಾ ರಂಗಭೂಮಿ ಅಥವಾ ಒಂದು ರಂಗಾನುಭವ ಅವರ ಮನಸ್ಸಿನಲ್ಲಿ ಅಚ್ಚೊತ್ತಿದಂತೆ ಉಳಿಯುವ ರೀತಿಯಲ್ಲಿ ವಿನ್ಯಾಸ ಮಾಡಲಾಗಿದೆ. ಅವರ ಕಿವಿಗೆ ಬೀಳುವ ಶಬ್ದಗಳ ಮೂಲಕ, ಅವರ ಕಣ್ಣಿಗೆ ಕಾಣುವ ಬಣ್ಣಗಳ ಮೂಲಕ ಒಂದು ಪ್ರದರ್ಶನ ಮಕ್ಕಳ ಮನಸ್ಸಲ್ಲಿ ಮನೆ ಮಾಡುತ್ತದೆ. ಮಕ್ಕಳ ಮಟ್ಟಿಗೆ ಹೇಳುವುದಾದಲ್ಲಿ ಮಾತುಗಳ ಮೂಲಕ ಉಂಟಾಗುವ ಅನುಭವ ಅತಿ ಕಡಿಮೆ ಪರಿಣಾಮ ಉಂಟುಮಾಡುವಂಥಾದ್ದು. ಅವರ ಮನಸ್ಸು ಬಣ್ಣಗಳನ್ನು, ಶಬ್ದಗಳನ್ನು ತಕ್ಷಣ ಗ್ರಹಿಸುತ್ತದೆಯೇ ಹೊರತು ಮಾತುಗಳಿಂದಲ್ಲ, ರೂಪಕಗಳಿಂದಲ್ಲ’ ಎನ್ನುತ್ತಾರೆ ಅರುಂಧತಿ ನಾಗ್.

‘ಗ್ರಹಿಸುವಿಕೆ ಮತ್ತು ಕಲಿಕೆ, ಎರಡೂ ಮಗುವೊಂದು ಗರ್ಭದಿಂದ ಹೊರಬಿದ್ದ ಕೂಡಲೇ ಅದರ ಅನುಭವ ಭಂಡಾರವನ್ನು ಅನೂಹ್ಯ ಸ್ಮರಣೆಗಳಿಂದ ತುಂಬಿಸಲು ಪ್ರಾರಂಭಿಸುತ್ತವೆ. ನಂತರ ಒಂದರಿಂದ ಮೂರು ವರ್ಷದವರೆಗೂ ಅನುಭವ ಅಂದರೆ ಶಬ್ದ, ಸ್ಪರ್ಷ, ನೋಟ ಇತ್ಯಾದಿಗಳಿಂದ ಮಗು ತನ್ನ ಪರಿಸರಕ್ಕೆ ಪ್ರತಿಕ್ರಿಯಿಸುತ್ತದೆ. ಈ ಮೂಲಕ ಜಗತ್ತು ತನ್ನ ಭವಿಷ್ಯದ ಪುಟ್ಟ ಬೀಜವನ್ನು ಮುಂಬರುವ ದಿನಗಳಿಗಾಗಿ ತಯಾರು ಮಾಡುತ್ತಾ ಹೋಗುತ್ತದೆ. ಮಕ್ಕಳ ಮನಸ್ಸಿನಲ್ಲಿ ಉಂಟಾಗುವ ಲೆಕ್ಕಾಚಾರ ಕೊನೆಗೆ ಉಳಿಯುವ ಅನುಭವದ ಮೂಟೆ ಎಲ್ಲವೂ ಮನಸ್ಸೆಂಬ ದಿಗಂತದಾಚೆ ನಡೆಯುವಂಥವೇ, ತರ್ಕಕ್ಕೆ ಸಿಕ್ಕು ಸರಳವಾಗಿ ಅರ್ಥವಾಗುವ ವಾದದಂತಲ್ಲ, ಇವತ್ತೆ ಬೇರೆಯೇ ಮಟ್ಟದ ತಾದ್ಯಾತ್ಮ ಬೇಕು’ ಅಂದರು ಅವರು.

‘2 ವರ್ಷದ ಮಗುವಿಗೆ ಏನು ಅರ್ಥವಾಗುತ್ತದೆ, ಹತ್ತು ತಿಂಗಳ ಮಗುವಿಗೆ ರಂಗಭೂಮಿ ಬಗ್ಗೆ ಯಾವ ಅನುಭವ ಕಟ್ಟಿಕೊಡಲು ಸಾಧ್ಯ, ಸಂಕೀರ್ಣ ಮಾತುಗಳನ್ನು ಅವರಿಗೆ ಹೇಗೆ ತಿಳಿಸುತ್ತೀರಿ ಎಂಬೆಲ್ಲ ಪ್ರಶ್ನೆಗಳಿಗೆ ಉತ್ತರ ಒಂದೇ. ಮಕ್ಕಳು, ನಮ್ಮಂತೆ, ವಯಸ್ಕರಂತೆ ಕಡ್ಡಿಯನ್ನು ಗುಡ್ಡ ಮಾಡಿ ಅನುಭವಿಸುವುದಿಲ್ಲ. ಅವರ ಅಭಿವ್ಯಕ್ತಿಗಳು ಸರಳ, ನಿರಂತರ ಮತ್ತು ಅತ್ಯಂತ ಪ್ರಾಮಾಣಿಕವಾದವು. ಅದರಲ್ಲಿ ಯಾವ ಅನುಮಾನವೂ ಬೇಡ’ಎನ್ನುತ್ತಾರೆ ಇಟಾಲಿಯನ್ ನಿರ್ದೇಶಕರೊಬೆರ್ಟೋ ಫ್ರಬೆಟಿ.

ಆಡುತಾಣಗಳು
ನಾಟಕ ವೀಕ್ಷಣೆಗೆ ಹೋಗುವ ಮುನ್ನ ಆ ವಾತಾವರಣಕ್ಕೆ ಹೊಂದಿಕೊಳ್ಳುವಂತೆ ಮಕ್ಕಳನ್ನು ಸಜ್ಜುಗೊಳಿಸುವ ಪ್ರಯತ್ನ ಆಡು ತಾಣಗಳಲ್ಲಿ ನಡೆಯುತ್ತದೆ. ಒಟ್ಟು ಐದು ಆಡುತಾಣಗಳಿದ್ದು, ಒಂದೊಂದರಲ್ಲೂ ಒಬ್ಬೊಬ್ಬ ಸ್ವಯಂ ಸೇವಕರಿರುತ್ತಾರೆ. ಅವರು, ಅಲ್ಲಿ ನಡೆಯುವ ಚಟುವಟಿಕೆಯ ಉದ್ದೇಶವನ್ನು ಪೋಷಕರಿಗೆ ತಿಳಿಸುತ್ತಾರೆ. ಅಂತೆಯೇ ಮಕ್ಕಳಿಗೂ ಆಡಲು ಸಹಾಯ ಮಾಡುತ್ತಾರೆ.

ಇತರ ಕಾರ್ಯಕ್ರಮಗಳು

ಚಿಣ್ಣರಿಗಾಗಿ ಕಲಿಕಾವಿಧಾನ ಮತ್ತು ರಂಗಭೂಮಿ:ಈ ಶಿಬಿರದ ಮೂಲ ಉದ್ದೇಶ ಅತೀ ಚಿಕ್ಕ ಮಕ್ಕಳಿಗಾಗಿ ಸೃಷ್ಟಿ ಮಾಡುವ ರಂಗಭೂಮಿಯ ಕಲಿಕಾವಿಧಾನದ ಸಾಧ್ಯತೆಗಳು ಹಾಗೂ ಇದರಲ್ಲಿ ಬಳಕೆಯಾಗಬಹುದಾದ ಸೃಜನಶೀಲ ಮಾಧ್ಯಮದ ವಸ್ತು ಮತ್ತು ರಂಗಭೂಮಿಯ ಲೌಕಿಕತೆಯನ್ನು ಪರಿಶೋಧಿಸುವುದು.

ಜುಲೈ 26ರ ಸಂಜೆ 4.30ಕ್ಕೆ ನಡೆಯಲಿರುವ ಈ ಶಿಬಿರವನ್ನುಮಕ್ಕಳ ರಂಗಭೂಮಿಯ ಬಗ್ಗೆ ಆಳವಾಗಿ ಅಭ್ಯಾಸಿಸಿರುವ ಡಾ.ಶುಭಾಶಿಮ್ ಗೋಸ್ವಾಮಿ ಅವರು ಈಶಿಬಿರ ನಿರ್ವಹಿಸಲಿದ್ದಾರೆ. ಅರುಂಧತಿ ನಾಗ್ ಹಾಗೂ ಮೊದಲಾದ ಮಕ್ಕಳ ರಂಗತಜ್ಞರು ಪಾಲ್ಗೊಳ್ಳಲಿದ್ದಾರೆ.

ಮಕ್ಕಳ ಪಾಲನೆ ಮತ್ತು ಕಲೆಗಳು: ರಂಗಭೂಮಿಗೆ ನಿಮ್ಮ ಮಕ್ಕಳನ್ನು ಪರಿಚಯಿಸಿದ್ದೀರಾ, ಮೂರು ವರ್ಷದ ನಿಮ್ಮ ಮಗು ನೋಡುವ, ಅನುಭವಿಸುವ ರಂಗಭೂಮಿ ಎಲ್ಲಿಯಾದರೂ ಇದೆಯಾ, ಕಲೆ ಸಮಗ್ರ ಬೆಳವಣಿಗೆಗೆ ಪೂರಕವೇ ಎನ್ನುವ ಅಂಶ ಸತ್ಯವೇ ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಹುಡುಕುವ ಉದ್ದೇಶ ಈ ಶಿಬಿರದ್ದು.

ಜುಲೈ 28ರ ಸಂಜೆ 4.30ಕ್ಕೆ ಈ ಶಿಬಿರ ಪ್ರಾರಂಭವಾಗಲಿದ್ದು,ಕೊಲ್ಕೊತ್ತಾದ ಖ್ಯಾತ ಮಕ್ಕಳ ರಂಗತಜ್ಞೆ ರುಚಿರಾ ದಾಸ್ ಮತ್ತು ಆಯ್ದ ಮಕ್ಕಳ ತಂದೆ-ತಾಯಂದಿರು ಭಾಗವಹಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT