ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗಭೂಮಿ: ದ ಚೆರ್ರಿ ಆರ್ಕಾರ್ಡ್– ರಷ್ಯಾದ ಆ ತೋಟ ನಮ್ಮದೂ ಹೌದು..

19ನೇ ಶತಮಾನದ ಈ ಕಥೆ ರಂಗದ ಮೇಲೆ ಪ್ರಸ್ತುತಪಡಿಸುವ ಪ್ರಯತ್ನವನ್ನು ಸಾಣೇಹಳ್ಳಿಯ ಶ್ರೀ ಶಿವಕುಮಾರ ರಂಗಪ್ರಯೋಗ ಶಾಲೆಯ ವಿದ್ಯಾರ್ಥಿಗಳು ಪ್ರಾಮಾಣಿಕವಾಗಿ ಮಾಡಿದ್ದಾರೆ.
ಎಚ್ ಎಸ್ ನವೀನ ಕುಮಾರ್ ಹೊಸದುರ್ಗ
Published 13 ಏಪ್ರಿಲ್ 2024, 20:35 IST
Last Updated 13 ಏಪ್ರಿಲ್ 2024, 20:35 IST
ಅಕ್ಷರ ಗಾತ್ರ

ರಷ್ಯಾದ ಸುಪ್ರಸಿದ್ಧ ಕಥೆಗಾರ, ನಾಟಕಕಾರ ಆಂಟನ್ ಚೆಕಾವ್ ನ ಹೆಸರಾಂತ ನಾಟಕ, ‘ದ ಚೆರ್ರಿ ಆರ್ಕಾರ್ಡ್’ ಆಧಾರಿತ ‘ಆ ತೋಟ’  (ಅನುವಾದ- ಕೆ.ವಿ. ಅಕ್ಷರ) ಕನ್ನಡದ ಒಂದು ವಿಶಿಷ್ಟ ನಾಟಕ. 19ನೇ ಶತಮಾನದಲ್ಲಿ ರಷ್ಯಾ ದೇಶದಲ್ಲಿ ಆಗುತ್ತಿದ್ದ ಸಾಮಾಜಿಕ ಪಲ್ಲಟ ಈ ಕಥೆಯ ಮೂಲವಸ್ತು.

ವರ್ಗಾಧಾರಿತ ಸಮಾಜ ವ್ಯವಸ್ಥೆಯ ಕಾಲದಲ್ಲಿ ಜೀತ ಪದ್ಧತಿಯ ಅನುಸರಿಸುತ್ತಾ ಉಳ್ಳವರ ವರ್ಗ ತಮ್ಮ ಅನುಕೂಲಕ್ಕಾಗಿ, ಐಷಾರಾಮಕ್ಕಾಗಿ ನಿರ್ಮಿಸಿಕೊಂಡಿದ್ದ ತೋಟವೇ ಈ ನಾಟಕದ ಕೇಂದ್ರ ವಸ್ತು. ಜೀತಮುಕ್ತ ವ್ಯವಸ್ಥೆಗೆ ಸಮಾಜ ತೆರೆದುಕೊಂಡ ನಂತರ, ಈ ತೋಟದ ಮಾಲೀಕರಿಗೆ ಅದರ ನಿರ್ವಹಣೆ ಕಷ್ಟ ಸಾಧ್ಯವಾಗುತ್ತದೆ. ಅವರಲ್ಲಿ ಸರಿಯಾದ ಆರ್ಥಿಕ ಶಿಸ್ತು ಇರದ ಕಾರಣ, ತಮ್ಮ ಕೆಲಸವನ್ನು ತಾವೇ ಮಾಡಿಕೊಳ್ಳುವವರಾಗಿರದ ಕಾರಣ ಸಾಲಗಾರರಾಗುತ್ತಾರೆ.

ಕೊನೆಗೆ ತನ್ನ ಪೂರ್ವಜರು ಅದೇ ತೋಟದಲ್ಲಿ ಜೀತಗಾರರಾಗಿದ್ದು ಈಗ ಅದರ ಮ್ಯಾನೇಜರ್ ಆಗಿರುವ ವ್ಯಕ್ತಿ ತೋಟವನ್ನು ಹರಾಜಿನಲ್ಲಿ ಕೊಂಡುಕೊಳ್ಳುತ್ತಾನೆ. ಇದು ಆ ಮಾಲೀಕರ ಆರ್ಥಿಕ ಅಶಿಸ್ತನ್ನು ಎತ್ತಿ ಹಿಡಿಯುತ್ತದೆ. ಜೊತೆಗೆ ಆಳಿಸಿಕೊಳ್ಳುವವರ ಕೈಗೂ ಅಧಿಕಾರ ಬರುತ್ತದೆ ಎಂಬುದನ್ನು ಸೂಚಿಸುತ್ತದೆ.

19ನೇ ಶತಮಾನದ ಈ ಕಥೆ ಸಾರ್ವಕಾಲಿಕವಾಗುವಂತೆ ರಂಗದ ಮೇಲೆ ಪ್ರಸ್ತುತಪಡಿಸುವ ಪ್ರಯತ್ನವನ್ನು ಸಾಣೇಹಳ್ಳಿಯ ಶ್ರೀ ಶಿವಕುಮಾರ ರಂಗಪ್ರಯೋಗ ಶಾಲೆಯ ವಿದ್ಯಾರ್ಥಿಗಳು ಪ್ರಾಮಾಣಿಕವಾಗಿ ಮಾಡಿದ್ದಾರೆ. ಎನ್.ಎಸ್.ಡಿ ಪದವೀಧರ, ಇದೇ ರಂಗಶಾಲೆಯ ಹಳೆಯ ವಿದ್ಯಾರ್ಥಿ ಎಂ. ಮಧು ನಾಟಕದ ನಿರ್ದೇಶಕರು. ಯುವ ನಿರ್ದೇಶಕರ ಕೈಯಲ್ಲಿ ಹದವಾದ ಕಥಾವಸ್ತುವೊಂದು ಉತ್ತಮ ದೃಶ್ಯಕಾವ್ಯವಾಗಿ ರಂಗದ ಮೇಲೆ ಮೂಡಿ ಬಂದಿದೆ.

ನಿರ್ದೇಶಕರು ಇಲ್ಲಿ ರಂಗಸಜ್ಜಿಕೆ ಹಾಗೂ ಅತ್ಯುತ್ತಮ ಬೆಳಕಿನ ನಿರ್ವಹಣೆಯ ಮೂಲಕ ನಾಟಕವನ್ನು ಪ್ರೇಕ್ಷಕರ ಮನಸ್ಸಿನಲ್ಲಿ ಯಶಸ್ವಿಯಾಗಿ ನಿಲ್ಲಿಸುತ್ತಾರೆ. ರಂಗದ ಮಧ್ಯದಲ್ಲಿ ಬರುವ ಬಿಳಿ ಪರದೆಗಳು ನೆರಳು ಬೆಳಕಿನಲ್ಲಿ ತೋಟವಾಗಿ ಕಂಡರೆ, ಬೇರೆ ಸಮಯದಲ್ಲಿ ಅದು ಮನೆಯಾಗುತ್ತದೆ. ತೋಟದ ಮರ-ಗಿಡಗಳು ಅದರ ಜೊತೆಗೆ ಬೆರೆತುಕೊಂಡಿರುವ ಆ ಮನೆಯವರ ನೆನಪುಗಳು ಎಲ್ಲವೂ ಸಹ ನೆರಳು ಬೆಳಕಿನ ಮಾಧ್ಯಮದಲ್ಲಿ ಗೋಚರಿಸುತ್ತಾ, ಈ ನಾಟಕದಲ್ಲಿ ಅಲ್ಲಲ್ಲಿ ಕೊರತೆ ಎನಿಸುವ ನಟರ ಅಭಿನಯದ ಪಕ್ವತೆಯನ್ನು ತುಂಬಿ ಕೊಡುತ್ತದೆ.

ಹೀಗಾಗಿ ಈ ತೋಟವೇ ನಾಟಕದ ಅತಿ ಮುಖ್ಯ ಜೀವಂತ ಪಾತ್ರ ಎಂದು ಪ್ರೇಕ್ಷಕರಿಗೆ ಅನಿಸಿಬಿಡುತ್ತದೆ. ಈ ತೋಟದ ಜೊತೆಗೆ ಹೆಣೆದುಕೊಂಡಿರುವ, ಜೀವಂತ ಪಾತ್ರಗಳ ಮಾನವೀಯ ಸಂಘರ್ಷಗಳು ತೊಳಲಾಟಗಳು, ಪ್ರೀತಿ ಪ್ರೇಮ ಎಲ್ಲವೂ ಕೂಡ ಅನಾವರಣಗೊಳ್ಳುತ್ತಾ ಹೋಗುತ್ತವೆ. ಜೊತೆಗೆ ವಿಭಿನ್ನ ಪಾತ್ರಗಳು ಅವರದೇ ಕಾಲಘಟ್ಟದಲ್ಲಿ ಬದುಕುತ್ತಾ ಯೋಚಿಸುತ್ತಾ ಭೂತ ಭವಿಷ್ಯತ್ತಿನ ಚಿಂತನೆಯಲ್ಲಿ ವರ್ತಮಾನವನ್ನು ಮರೆತಿರುವುದನ್ನು ಸ್ಪಷ್ಟವಾಗಿ ಗುರುತಿಸಬಹುದು.

ತೋಟವನ್ನು ಹರಾಜಿಗೆ ಹಾಕಿಸುವುದು ಬೇಡ, ಅದನ್ನು ರೆಸಾರ್ಟ್ ಮಾಡಬಹುದು ಅದೇ ಇಂದಿನ ಟ್ರೆಂಡ್ ಎಂದು ಮಾಲೀಕರಿಗೆ ಮ್ಯಾನೇಜರ್ ಸಲಹೆ ನೀಡುವಾಗ ಆತ ಇಂದಿನ ವಸ್ತುಸ್ಥಿತಿಯನ್ನು ಮನದಟ್ಟು ಮಾಡುತ್ತಾನೆ. ಆದರೆ ಭಾವನಾತ್ಮಕವಾಗಿ ತೋಟದೊಂದಿಗೆ ಬೆಸೆದುಕೊಂಡಿರುವ ಮಾಲೀಕರಾದ, ತಮ್ಮ ಹಾಗೂ ಅಕ್ಕ,  ತಮ್ಮ ಬಾಲ್ಯದ ನೆನಪುಗಳನ್ನು ಅದರಲ್ಲಿ ಹುಡುಕುತ್ತಿರುತ್ತಾರೆ. ಮರೆಯಾಗಿ ಹೋಗಿರುವ ತಮ್ಮ ಅಮ್ಮನನ್ನು ಅಲ್ಲಿ ಅರಸುತ್ತಾರೆ ಹಾಗೂ ಅದರ ಆಧುನಿಕ ಪರಿವರ್ತನೆಗೆ ಅವರು ಒಪ್ಪಿಕೊಳ್ಳುವುದಿಲ್ಲ. ಕೊನೆಗೆ ತೋಟವನ್ನು ಕೊಂಡುಕೊಂಡ ಮ್ಯಾನೇಜರ್ ತಕ್ಷಣವೇ ಅಲ್ಲಿನ ಗಿಡಮರಗಳನ್ನು ಕತ್ತರಿಸಿ ಹಾಕುತ್ತಾನೆ. ಇದು ಪ್ರಕೃತಿಯ ಮೇಲೆ ಮನುಷ್ಯ ಮಾಡುತ್ತಿರುವ ನಿರಂತರ ದೌರ್ಜನ್ಯದ ಚಿತ್ರಣ. ಇಂತಹ ಕ್ರೌರ್ಯವನ್ನು ಸರಳವಾದ ನೆರಳು ಬೆಳಕಿನಲ್ಲಿ ತೋರಿಸಿರುವುದರಿಂದ ನಾಟಕ ನೋಡುಗರ ಮನಕ್ಕೆ ನಾಟುತ್ತದೆ.

ಅಭಿನಯದ ದೃಷ್ಟಿಯಿಂದ ಹೇಳುವುದಾದರೆ  ರೆಪರ್ಟರಿ ವಿದ್ಯಾರ್ಥಿಗಳ ಅಭ್ಯಾಸ ಮಾಲಿಕೆಯ ಪ್ರಯೋಗ ಇದಾಗಿರುವುದರಿಂದ ಎಲ್ಲರೂ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆಂದು ಖಂಡಿತ ಹೇಳಬಹುದು. ಅದರಲ್ಲೂ ಕೆಲವು ಚಿಕ್ಕ ಪಾತ್ರಗಳು, ಉದಾಹರಣೆಗೆ ಮಧ್ಯದಲ್ಲಿ ಬಂದು ಹೋಗುವ ಹುಚ್ಚ ಭಿಕ್ಷುಕನ ಪಾತ್ರ ರಂಗದಲ್ಲಿ ಸಂಚಲನ ಮೂಡಿಸಿಬಿಡುತ್ತದೆ. ಉಳಿದವರ ಅಭಿನಯದಲ್ಲಿ ಇನ್ನೂ ಏನೋ ಬೇಕಿತ್ತು ಎಂಬ ಭಾವ ಪ್ರೇಕ್ಷಕರಲ್ಲಿ ಮೂಡುತ್ತದೆ. ರಂಗಶಾಲೆಯ ಹಳೆಯ ವಿದ್ಯಾರ್ಥಿನಿ ವಿದ್ಯಾರಾಣಿಯವರ ವಸ್ತ್ರ ವಿನ್ಯಾಸ, ಅಚ್ಚುಕಟ್ಟಾಗಿ ಮೂಡಿ ಬಂದಿರುವ ಗರೀಮ ಹಾಗೂ ಶಾಂತನು ಅವರ ಗಾಯನ ನಾಟಕದ ಮೆರಗನ್ನು ಹೆಚ್ಚಿಸುತ್ತದೆ

‘ಆ ತೋಟ’ ನಾಟಕದಲ್ಲಿ ಸಾಣೇಹಳ್ಳಿಯ ಶ್ರೀ ಶಿವಕುಮಾರ ರಂಗಪ್ರಯೋಗ ಶಾಲೆಯ ವಿದ್ಯಾರ್ಥಿಗಳು
‘ಆ ತೋಟ’ ನಾಟಕದಲ್ಲಿ ಸಾಣೇಹಳ್ಳಿಯ ಶ್ರೀ ಶಿವಕುಮಾರ ರಂಗಪ್ರಯೋಗ ಶಾಲೆಯ ವಿದ್ಯಾರ್ಥಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT