ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿವಿಎಸ್‌ ಎಕ್ಸ್‌ಎಲ್‌ನಲ್ಲಿ ಗೋವಾ ಪ್ರವಾಸ

Last Updated 10 ಮೇ 2019, 20:00 IST
ಅಕ್ಷರ ಗಾತ್ರ

ನಗರದ ಇಬ್ಬರು ಯುವಕರು ಟಿವಿಎಸ್ ಎಕ್ಸ್‌ಎಲ್‌ ಬೈಕ್‌ನಲ್ಲಿ ಬೆಂಗಳೂರಿನಿಂದ ಗೋವಾಗೆ ಹೋಗಿ ಮತ್ತೆ ಬೆಂಗಳೂರಿಗೆ ಸುರಕ್ಷಿತವಾಗಿ ವಾಪಸ್‌ ಆಗುವ ಮೂಲಕ ಗಮನ ಸೆಳೆದಿದ್ದಾರೆ.

ಸಾಮಾನ್ಯವಾಗಿ ಟಿವಿಎಸ್‌ ಎಕ್ಸ್‌ಎಲ್‌ ಬೈಕ್‌ ಸಿಟಿಯಲ್ಲಿ ಓಡಾಟಕ್ಕೆ ಬಳಸುತ್ತಾರೆ. ಹಳ್ಳಿ ಜನರು ಹಸುವಿಗೆ ಮೇವು ತರುವುದಕ್ಕೂ ಬಳಸುತ್ತಾರೆ. ಆದರೆ 1250 ಕಿಮೀ ಪ್ರವಾಸ ಮಾಡಲು ಈ ಬೈಕ್‌ ಬಳಸಿರುವುದು ಬಹುಶಃ ಇದೇ ಮೊದಲು!ತೇಜಸ್‌ ಎಂ.ಎಲ್‌ ಮತ್ತು ಮಂಜುನಾಥ್‌.ಎಸ್‌ ಇಂಥದೊಂದು ಬೈಕ್‌ ಪ್ರವಾಸದ ಸಾಹಸ ಮಾಡಿದ್ದಾರೆ. ಈ ಇಬ್ಬರು ‘ಫೋನ್‌ ಪೇ’ ಎಂಬ ಖಾಸಗೀ ಕಂಪನಿ ಉದ್ಯೋಗಿಗಳು.

ಇವರಿಬ್ಬರು ಈ ಹಿಂದೆ ಟಿವಿಎಸ್‌ ಸ್ಪೋರ್ಟ್‌ ಬೈಕ್‌ನಲ್ಲಿ 13 ದಿನ ಕೇರಳ ಪ್ರವಾಸ ಕೈಗೊಂಡಿದ್ದರು. ಬಜಾಜ್‌ ಪ್ಲಾಟಿನಾ ಬೈಕ್‌ನಲ್ಲಿ ಒಂದು ವಾರ ಜೋಗ್ ಜಲಪಾತದ ಪ್ರವಾಸವನ್ನೂ ಮಾಡಿದ್ದಾರೆ. ಆದರೆ ಈ ಬಾರಿ ಇವರ ಕಣ್ಣು ಗೋವಾ ಮೇಲೆ ಬಿತ್ತು. ಪ್ರವಾಸಕ್ಕೆ ಆಯ್ದುಕೊಂಡಿದ್ದು ಟಿವಿಎಸ್‌ ಎಕ್ಸ್‌ಎಲ್‌ ಬೈಕ್‌! ಬೆಂಗಳೂರಿನಿಂದ ಗೋವಾ ಮತ್ತು ಗೋವಾದಿಂದ ಬೆಂಗಳೂರಿಗೆ ಸುಮಾರು 1250 ಕಿಮೀ ಪ್ರಯಾಣವನ್ನು ಇದೇ ಬೈಕ್‌ನಲ್ಲಿ ಪೂರೈಸಿ ನಗರಕ್ಕೆ ವಾಪಸ್‌ ಆಗಿದ್ದಾರೆ.

‘ಪ್ರವಾಸದ ವಿಷಯ ಪ್ರಸ್ತಾಪಿಸಿದಾಗ ಮನೆಯಲ್ಲಿ ಬೇಡವೆಂದೇ ಹೇಳಿದ್ದರು. ಎಕ್ಷ್‌ಎಲ್‌ ಬೈಕ್‌ನಲ್ಲಿ ಹೋಗುವುದೆಂದರೆ ಸಾಮಾನ್ಯ ಮಾತಲ್ಲ ಎಂದುಸ್ನೇಹಿತರೂ ಗೊಣಗಿದ್ದರು. ನಾವು ಹಿಂಜರಿಯಲಿಲ್ಲ‘ ಎನ್ನುತ್ತಾರೆ ತೇಜಸ್‌.

ಪ್ರಯಾಣದ ವಿವರ: ಏಪ್ರಿಲ್‌ 27 ರಂದು ರಾತ್ರಿ 8 ಗಂಟೆಗೆ ಬೆಂಗಳೂರಿನಿಂದ ಹೊರಟು ಏಪ್ರಿಲ್‌ 28 ಮಧ್ಯಾಹ್ನ 1ಗಂಟೆಗೆ ಗೋವಾ ತಲುಪಿದ್ದಾರೆ. ರಾತ್ರಿ ಗೋವಾದಲ್ಲಿನ ಖಾಸಗೀ ಹೋಟೆಲ್‌ನಲ್ಲಿ ತಂಗಿದ್ದು ಮರುದಿನ ಏಪ್ರಿಲ್‌ 29 ಬೆಳಿಗ್ಗೆ 8 ಗಂಟೆಗೆ ಗೋವಾ ಬಿಟ್ಟು ಏಪ್ರಿಲ್‌ 30ರಂದು ಬೆಳಿಗ್ಗೆ 5 ಗಂಟೆಗೆ ಬೆಂಗಳೂರನ್ನು ಸುರಕ್ಷಿತವಾಗಿ ತಲುಪಿದ್ದಾರೆ.

‘ನಾವು ಹೋದ ದಿನ ಜೋರು ಮಳೆ ಇತ್ತು. ಬೀದಿ ದೀಪದ ಕಂಬಗಳು, ಮರಗಳು ಮಳೆ–ಗಾಳಿಗೆ ತತ್ತರಿಸಿದ್ದವು. ನಮ್ಮ ಪ್ರಯಾಣ ಕಷ್ಟಕರವಾಗಿಯೇ ಸಾಗಿತ್ತು. ಛಲ ಬಿಡದೆ ನಮ್ಮ ಗುರಿ ತಲುಪಲೇಬೇಕೆಂದು ಸಾಗಿದೆವು. ದಾರಿಯುದ್ದಕ್ಕೂ ಜನ ಪ್ರಸಂಶೆ ವ್ಯಕ್ತಪಡಿಸುತ್ತಿದ್ದರು. ಇದು ನಮ್ಮನ್ನು ಮತ್ತಷ್ಟು ಹುರಿದುಂಬಿಸಿತು‘ ಎನ್ನುತ್ತಾರೆ ಮಂಜುನಾಥ್‌.

ಗುರಿ ನಿರ್ದಿಷ್ಟವಾಗಿದ್ದಲ್ಲಿ, ಸಾಗುವ ದಾರಿ ತಿಳಿದಿದ್ದಲ್ಲಿ ಎಂತಹ ಕಾರ್ಯವನ್ನು ಬೇಕಾದರೂ ಮಾಡಬಹುದು. ಆದರೆ ಆತ್ಮಸ್ತೈರ್ಯ ಇರಬೇಕು ಅಷ್ಟೇ ಎನ್ನುವುದಕ್ಕೆ ಈ ಯುವಕರ ಪ್ರವಾಸವೇ ಸಾಕ್ಷಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT