ಬಿಗ್‌ಬಾಸ್ ಮನೆಯಲ್ಲಿ ಪ್ರತಿದಿನ ಬೆಳಿಗ್ಗೆ ಹಾಡಿನೊಂದಿಗೆ ಶುರುವಾಗುತ್ತದೆ ಇದು ವಾಡಿಕೆ. ಆದರೆ, ಸ್ಪರ್ಧಿ ವಿನಯ್ ಅವರಿಗೆ ಹಾಡಿನೊಟ್ಟಿಗೆ ಬಿಗ್‌ಬಾಸ್ ಮನೆಯೊಳಗೆ ಆಗಮಿಸಿದ ತಮ್ಮ ಹೆಂಡತಿಯನ್ನು ನೋಡುವ ಮೂಲಕ ಪ್ರಾರಂಭಗೊಂಡಿದೆ. ಬೆಳಗಿನ ಜಾವವೇ ಮನೆಗೆ ಬಂದ ತಮ್ಮ ಹೆಂಡತಿಯನ್ನು ನೋಡಿದ ವಿನಯ್ ಅವರ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ. ನಗುವಿನಿಂದ ತುಂಬಿದ ಅವರ ಮುಖವನ್ನು ನೋಡಿ ತನಿಷಾ ಅವರು ‘ವಿಲನ್ ಮುಖದಲ್ಲೀಗ ಹೀರೊ ಕಳೆ ಬಂದಿದೆ’ ಎಂದು ಛೇಡಿಸಿದ್ದಾರೆ.
ಮನೆಯ ಎಲ್ಲ ಸದಸ್ಯರನ್ನು ಮಾತನಾಡಿಸಿದ ವಿನಯ್ ಪತ್ನಿ ಸಂಗೀತಾ ಅವರ ಬಳಿ ಪ್ರತ್ಯೇಕವಾಗಿ ಮಾತನಾಡಬೇಕು ಎಂದು ಕರೆದಿದ್ದಾರೆ.
ಬಿಗ್‌ಬಾಸ್ ಪ್ರಾರಂಭಗೊಂಡ ಎರಡನೇ ವಾರದಿಂದ ಶುರುವಾದ ಸಂಗೀತಾ ಹಾಗೂ ವಿನಯ್ ಅವರ ಜಗಳ ನಿರಂತರವಾಗಿ ಮುಂದುವರಿದುಕೊಂಡು ಬಂದಿದೆ. ಹಲವು ಸಲ ಇದು ಅತಿರೇಕಕ್ಕೂ ಹೋಗಿದೆ. ಈ ಬಗ್ಗೆ ವಿನಯ್ ಪತ್ನಿ ನೋವು ಕೂಡ ತೋಡಿಕೊಂಡಿದ್ದರು. ಇದರ ಬೆನ್ನಲ್ಲೇ ಸಂಗೀತಾ ಬಳಿ ಪ್ರತ್ಯೇಕವಾಗಿ ಮಾತನಾಡಲು ಬಯಸಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ವಿನಯ್ ಪತ್ನಿ ಸಂಗೀತಾ ಬಳಿ ಏನು ಮಾತನಾಡಿದ್ದಾರೆ, ಅದಕ್ಕೆ ಸಂಗೀತಾ ಅವರು ಹೇಗೆ ಪ್ರತಿಕ್ರಿಯಿಸಿದ್ದಾರೆ. ವಿನಯ್ ಪತ್ನಿ ಜೊತೆಗಿನ ಮಾತುಕತೆ ಸಂಗೀತಾ ಅವರನ್ನು ಕುಗ್ಗಿಸುತ್ತದೆಯೇ. ಈ ವಾರದಲ್ಲಿ ಅನ್ಯೋನ್ಯವಾಗಿ ಇದ್ದ ವಿನಯ್–ಸಂಗೀತಾ ಮಧ್ಯೆ ಮತ್ತೆ ಬಿರುಕು ಮೂಡಲಿದೆಯೇ ಈ ಪ್ರಶ್ನೆಗಳಿಗೆ ಬಿಗ್‌ಬಾಸ್ ಸಂಚಿಕೆಯನ್ನು ಕಾದು ನೋಡಬೇಕಿದೆ.