ಬುಧವಾರ, ನವೆಂಬರ್ 20, 2019
21 °C

60ರ ಸಂಭ್ರಮದಲ್ಲಿ ದೂರದರ್ಶನ

Published:
Updated:

‘ಜಂಗಲ್ ಜಂಗಲ್ ಬಾತ್ ಚಲಿ ಹೇ, ಪತಾ ಚಲಾ ಹೇ...

ಅರೆ ಚಡ್ಡಿ ಪೆಹನ್ ಕೆ ಫೂಲ್ ಕಿಲಾ ಹೇ... ಫೂಲ್ ಕಿಲಾ ಹೈ...’

ನನ್ನ ಬಾಲ್ಯದಲ್ಲಿ ಅದೆಷ್ಟು ಸಲ ಈ ಹಾಡನ್ನು ತಪ್ಪು ತಪ್ಪಾಗಿ ಗುನುಗಿಕೊಳ್ಳುತ್ತಾ ಉಚ್ಚಾರ ಬರದೆ ಕೇವಲ ರಾಗವನ್ನು ಮಾತ್ರ ಹೊರಡಿಸುತ್ತಾ ‘ಮೊಗ್ಲಿ’ಯ ಗುಂಗಿನೊಳಗೆ ಜಾರಿ ಎಷ್ಟೊಂದು ಬೆಟ್ಟ, ಗುಡ್ಡದೊಳಗೆ ವಿಹರಿಸಿದ್ದೆನೇನೋ. ನಮ್ಮನೆಯ ಪುಟ್ಟ ನಾಯಿಗೆ ‘ಮೊಗ್ಲಿ’ ಎಂದು ನಾಮಕರಣ ಮಾಡಿ ಅದರೊಂದಿಗೆ ತೋಟ, ಗದ್ದೆಯಲ್ಲಿ ಎಲ್ಲೆಲ್ಲಾ ಅಲೆದಾಡುತ್ತಿದ್ದೆನೋ. ಇದೆಲ್ಲಾ ನನಗೆ ತಿಳಿದಿದ್ದೇ ಇತ್ತೀಚೆಗೆ. ನನ್ನೊಂದಿಗೆ ಕಳೆದ ವರ್ಷ ‘ಜಂಗಲ್ ಬುಕ್’ ಸಿನಿಮಾ ನೋಡಿದ ನನ್ನಮ್ಮ ದೂರದರ್ಶನದಲ್ಲಿ ಬರುತ್ತಿದ್ದ ‘ಜಂಗಲ್ ಬುಕ್’ ಧಾರಾವಾಹಿಯ ನನ್ನ ಗೀಳನ್ನು ಮತ್ತೆ ಮೆಲುಕು ಹಾಕುವಂತೆ ಮಾಡಿದ್ದರು.

ನಮ್ಮ ಮನೆಗೆ ಆಗಿನ್ನೂ ಟಿ.ವಿ. ಕಾಲಿಟ್ಟಿರಲಿಲ್ಲ. ರಜಾ ದಿನಗಳಲ್ಲಿ ಹತ್ತಿರದಲ್ಲೇ ಇದ್ದ ಸೋದರ ಮಾವನ ಮನೆಗೆ ದಾಂಗುಡಿ ಇಡುತ್ತಿದ್ದ ನಾವು, ಅವರ ಮನೆಯ ಚೌಕಿಯನ್ನೇ ಥಿಯೇಟರ್ ಮಾಡುತ್ತಿದ್ದೆವು. ಅಲ್ಲೊಂದು ಮಕ್ಕಳ ಸೈನ್ಯವೇ ನೆರೆಯುತ್ತಿತ್ತು. ಧಾರಾವಾಹಿ ನೋಡುತ್ತಾ ನೋಡುತ್ತಾ ಅಲ್ಲೆಲ್ಲಾ ಹತ್ತಾರು ‘ಮೊಗ್ಲಿ’ಗಳು ಕನಸಿನ ಲೋಕದಲ್ಲಿ ತೇಲಿ ಹೋಗುತ್ತಿದ್ದರು.

ರಿಮೋಟ್ ಕಸಿದುಕೊಂಡು ಬೇರೊಂದು ಕಾರ್ಯಕ್ರಮ ನೋಡಲು ದೊಡ್ಡವರಿಗೆ ಈಗಿನಂತೆ ಉಳಿದ ಚಾನೆಲ್‍ಗಳಿರಲಿಲ್ಲ. ಗುಲ್ಜಾರ್ ಸಂಗೀತ ನೀಡಿದ್ದ ‘ಜಂಗಲ್ ಜಂಗಲ್ ಬಾತ್ ಚಲಿ ಹೇ...’ ನಮ್ಮ ಅಂತ್ಯಾಕ್ಷರಿ ಹಾಡಿನ ‘ಜ’ ಅಕ್ಷರಕ್ಕೆ ಬರಲೇ ಬೇಕಾಗಿದ್ದ ಹಾಗೂ ಬಂದೇ ಬರುತ್ತಿದ್ದ ಹಾಡು. ಅಮ್ಮ ಹಾಗೂ ಟೀಚರ್‌ ಇಬ್ಬರ ಸಹಾಯವಿಲ್ಲದೇ ಸ್ವತಂತ್ರವಾಗಿ ಕಲಿತ ಹಾಡೆಂದರೆ ಅದೊಂದೇ. ತದನಂತರ ಕಲಿತದ್ದು ಹೇಮಾ, ರೇಖಾ, ಜಯಾ ಮತ್ತು ಸುಷ್ಮಾರ ವಾಷಿಂಗ್ ಪೌಡರ್ ನಿರ್ಮಾ ಹಾಡು. ನಿರ್ಮಾವನ್ನು ‘ಮಿರ್ಮಾ’ ಎಂದು ರಾಗವಾಗಿ ಹೇಳುತ್ತಿದ್ದುದು ಈಗಲೂ ನೆನಪಿದೆ.

ಮುಖದಲ್ಲಿ ಕಿರುನಗೆ ತಂದೊಡ್ಡಿ ಮತ್ತೆ ನೆನಪಿನ ಬುತ್ತಿಯೊಳಗಿನ ಸುಂದರ ಕ್ಷಣಗಳಿಗೆ ಮರಳುವಂತೆ ಮಾಡುವ, ಕೆಲವರ್ಷಗಳ ಹಿಂದಿನವರೆಗೂ ನಮ್ಮ ಸಂಸ್ಕೃತಿಯ ಭಾಗವಾಗಿ ಹೋಗಿದ್ದ ದೂರದರ್ಶನಕ್ಕೀಗ 60ರ ಹರೆಯ. 1959ರ ಸೆಪ್ಟೆಂಬರ್ 15ರಂದು ದೆಹಲಿ ಟೆಲಿವಿಷನ್ ಎನ್ನುವ ಹೆಸರಿನೊಂದಿಗೆ ಬೆಳ್ಳಿತೆರೆ ಮೇಲೆ ತನ್ನ ಝಲಕ್ ತೋರಿದ ದೂರದರ್ಶನ ಜನರನ್ನು ಭಾವನಾತ್ಮಕವಾಗಿ ಬೆಸೆದುಕೊಂಡದ್ದು ಸುಳ್ಳಲ್ಲ. ದೂರದರ್ಶನದಲ್ಲಿ ಬರುತ್ತಿದ್ದ ಜಾಹೀರಾತನ್ನೂ ಆಸಕ್ತಿಯಿಂದ, ಕುತೂಹಲದಿಂದ ವೀಕ್ಷಿಸಿ ಅದನ್ನು ಮತ್ತೆ ಮತ್ತೆ ಗುನುಗಿಕೊಳ್ಳುತ್ತಿದ್ದ ಕಾಲವದು. ದೇವರ ಕಥೆಯನ್ನೊಳಗೊಂಡ ಸಿನಿಮಾ ಅಥವಾ ಧಾರಾವಾಹಿ ಬಂತೆಂದರೆ ಟಿ.ವಿ.ಗೆ ಹಣ್ಣುಕಾಯಿ ಒಡೆದು, ಆರತಿ ಮಾಡಿ ಧನ್ಯತೆ ಪಡೆಯುವಂತಹ ಘಟನೆಗಳು ನಡೆಯುತ್ತಿದ್ದ ಕಾಲವದು.

1980-90ರ ಆಸುಪಾಸಿನಲ್ಲಿ ದೇಶವಾಸಿಗಳ ಮನೆ ಮನ ಹೊಕ್ಕ ದೂರದರ್ಶನ ಕೇವಲ ಟಿ.ವಿ. ಚಾನೆಲ್ ಆಗಿ ಉಳಿದಿರಲಿಲ್ಲ. ಅದು ಮನೆಯ ಅತ್ಯಂತ ಗೌರವಾನ್ವಿತ ಹಾಗೂ ಜತನದಿಂದ ನೋಡಿಕೊಳ್ಳಲೇ ಬೇಕಾದ ಸದಸ್ಯನಾಗಿತ್ತು. ‘ರಾಮಾಯಣ’, ‘ಬುನಿಯಾದ್’, ‘ಮಾಲ್ಗುಡಿ ಡೇಸ್‍’ನಂತಹ ಧಾರಾವಾಹಿ ಬಿತ್ತರವಾಗುವ ಗಳಿಗೆ ಎಂದರೆ ಅದು ಊರಿನ ಟಿ.ವಿ. ಮೋಹಿಗಳೆಲ್ಲಾ ಒಂದೆಡೆ ಸೇರುವ ಸಮಯ. ಯಾಕೆಂದರೆ ಆಗೆಲ್ಲಾ ಊರಿಗೊಂದು ಟಿ.ವಿ. ಇದ್ದರೆ ಹೆಚ್ಚು. ಧಾರಾವಾಹಿಯನ್ನೋ ಸಿನಿಮಾವನ್ನೋ ನೋಡಲು ಬಂದು ಸೇರುತ್ತಿದ್ದ ಟಿ.ವಿ. ಪ್ರಿಯರ ಪಟಾಲಂ ಕಥನಗಳನ್ನು ತಮ್ಮ ಕಣ್ಮನದಲ್ಲೆಲ್ಲಾ ತುಂಬಿಕೊಂಡ ನಂತರವಷ್ಟೇ ಇತರರ ಯೋಗಕ್ಷೇಮ ವಿಚಾರಿಸಿ ಮತ್ತೆ ಮನೆ ಸೇರುತ್ತಿದ್ದ ಸಮಯವದು. ಆಗೆಲ್ಲಾ ಟಿ.ವಿ. ಇದ್ದ ಮನೆಯ ಸದಸ್ಯರ ಠೀವಿಯೇ ಬೇರೆ. ಅವರ ಅಂತಸ್ತು ಇತರರಿಗಿಂತ ಒಂದಂಗುಲ ಮೇಲೇಯೇ ಇರುತ್ತಿತ್ತು.

ಮನೆಯಲ್ಲಿ ಟಿ.ವಿ. ಇದ್ದರೂ ಮನೆಯ ಒಡೆಯನನ್ನು ಬಿಟ್ಟರೆ ಟಿ.ವಿ.ಯನ್ನು ಮುಟ್ಟುವ ಧೈರ್ಯ ಯಾರಿಗೂ ಇರುತ್ತಿರಲಿಲ್ಲ. ಮರದ ಕಾಪಾಟಿನ ಒಳಗೆ ವೆಲ್ವೆಟ್ ಬಟ್ಟೆಯ ಹೊದಿಕೆಯೊಳಗೆ, ಜೋಪಾನವಾಗಿದ್ದ ‘ಫಿಲಿಪ್ಸ್’ ಕಂಪನಿಯ ಹೆಮ್ಮೆಯ ಸಾಧನದ ಜಾಗ, ದೇವರ ಮನೆಯ ನಂತರದ ಪವಿತ್ರ ಸ್ಥಳ. ಮಕ್ಕಳಿಗಂತೂ ನಿಷಿದ್ಧ ಪ್ರದೇಶವದು. ಅವರದೇನಿದ್ದರೂ ಟಿ.ವಿ. ಚಾಲೂ ಆದ ನಂತರ ನೆಲದಲ್ಲಿ ಚಕ್ಕಳಮಕ್ಕಳ ಹಾಕಿ ತೆರೆಯ ಮೇಲೆ ದೃಷ್ಟಿ ಹರಿಸುವುದು ಅಷ್ಟೆ. ಅದೊಂದು ತರಹದ ಸ್ವಯಂ ಘೋಷಿತ ‘ಪೇರೆಂಟಲ್ ಕಂಟ್ರೋಲ್’.

ಜನರ ಸಾಂಸ್ಕೃತಿಕ ಬದುಕಿನ ಭಾಗವಾಗಿ ಹೋಗಿದ್ದ ದೂರದರ್ಶನ ಇಂದಿಗೂ ನೆನಪಿನಲ್ಲಿ ಅಚ್ಚಳಿಯದೇ ಉಳಿಯುವಂತಹ, ಸಾರ್ವಕಾಲಿಕ ಮನ್ನಣೆ ಇರುವಂತಹ ಕಾರ್ಯಕ್ರಮಗಳನ್ನು ನೀಡಿದ ಗರಿಮೆ ಹೊಂದಿದೆ. ದೂರದರ್ಶನದ ಮೊದಲ ಧಾರಾವಾಹಿ ಮಧ್ಯಮ ವರ್ಗದ ಕುಟುಂಬಸ್ಥರ ಜೀವನಕ್ಕೆ ಕನ್ನಡಿ ಹಿಡಿಯುವ ‘ಹಮ್‍ಲೋಗ್’ ಇರಬಹುದು, ಓದಿ- ಕೇಳಿ ತಿಳಿದು ಕಾಲ್ಪನಿಕ ರೂಪದೊಂದಿಗೆ ಜನರ ಮನದೊಳಗೆ ಭಯ- ಭಕ್ತಿ ಭಾವ ಮೂಡಿಸುತ್ತಿದ್ದ ದೈವತ್ವಕ್ಕೆ ಮೂರ್ತರೂಪ ಕೊಟ್ಟ ರಾಮಾಯಣದಂತಹ ಧಾರಾವಾಹಿ ಇರಬಹುದು, ಇದು ‘ನಮ್ಮ ಕಥೆ- ನಮ್ಮೂರಿನ ಕಥೆ’ ಎಂದು ಅತ್ಯಂತ ಮುಚ್ಚಟೆಯಿಂದ ನೋಡುತ್ತಿದ್ದ ಮಾಲ್ಗುಡಿ ಡೇಸ್ ಇರಬಹುದು ಎಲ್ಲವೂ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ಅತ್ಯದ್ಭುತ ಕಲಾಕೃತಿಗಳು.

ಶಿಕ್ಷಣ ಹಾಗೂ ಅಭಿವೃದ್ಧಿಯಲ್ಲಿ ಟಿ.ವಿ. ಮಾಧ್ಯಮವನ್ನು ತೊಡಗಿಸಿಕೊಳ್ಳುವ ಸಾಧ್ಯತೆಯ ಉದ್ದೇಶವನ್ನಿಟ್ಟುಕೊಂಡು 1959ರ ಸೆಪ್ಟೆಂಬರ್ 5ರಂದು ಪ್ರಾಯೋಗಿಕ ಪ್ರಸಾರ ಆರಂಭಿಸಿದ ಭಾರತೀಯ ಟೆಲಿವಿಷನ್ ಎಂಬ ನಾಮಾಂಕಿತ ದೂರದರ್ಶನ ವಾರದಲ್ಲಿ ಮೂರು ದಿನ ಪೂರ್ವ ಮುದ್ರಿತ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲು ಆರಂಭಿಸಿತು.

ಆಲ್ ಇಂಡಿಯಾ ರೇಡಿಯೊದ ಅಧೀನ ಸಂಸ್ಥೆಯಾಗಿ ಕಾರ್ಯಾರಂಭ ಮಾಡಿದ ದೂರದರ್ಶನಕ್ಕೆ ಪೋಷಣೆ ನೀಡಿದ್ದು ಬಾನುಲಿ ವಿಭಾಗವೇ. 1965ರಲ್ಲಿ ಈ ಕಾರ್ಯಕ್ರಮದ ವ್ಯಾಪ್ತಿ ಒಂದು ವಾರದವರೆಗೂ ವಿಸ್ತರಿಸಿತು. ಇದೇ ಸಂದರ್ಭದಲ್ಲಿ ಐದು ನಿಮಿಷಗಳ ವಾರ್ತಾ ಪ್ರಸಾರ ಆರಂಭವಾಯಿತು. ಸುದ್ದಿ ನಿರೂಪಕಿ ಪ್ರತಿಮಾ ಪೂರಿಗೆ ಈ ವೇದಿಕೆ ಭಾರತದ ಪ್ರಥಮ ವಾರ್ತಾವಾಚಕಿ ಎಂಬ ಹೆಗ್ಗಳಿಕೆಯನ್ನು ತಂದುಕೊಟ್ಟಿತು. 1959ರಲ್ಲೇ ಬಳಕೆಗೆ ಬಂದ ಮನುಷ್ಯನ ಅಕ್ಷಿಯ ವಿನ್ಯಾಸದ ದೂರದರ್ಶನ ಲಾಂಛನ ಭಾರತೀಯರ ಕಣ್ಣಿಗೂ ಮನಸ್ಸಿಗೂ ಚಿರಪರಿಚಿತವಾಯಿತು. ರಾಷ್ಟ್ರೀಯ ವಿನ್ಯಾಸ ಸಂಸ್ಥೆಯ ದ್ಯಶ್ಯ ಸಂವಹನ ವಿಭಾಗದ ವಿದ್ಯಾರ್ಥಿ ದೇವಶಿಸ್ ಭಟ್ಟಾಚಾರ್ಯ ತರಗತಿಯ ಚಟುವಟಿಕೆಯ ಅಂಗವಾಗಿ ಬಿಡಿಸಿದ ಈ ಚಿತ್ರ ದೂರದರ್ಶನದ ಲಾಂಛನವಾಯಿತು (ಇತ್ತೀಚೆಗೆ ಹೊಸ ವಿನ್ಯಾಸದ ಲಾಂಛನವನ್ನು ಹೊರತರುವ ಪ್ರಕ್ರಿಯೆ ನಡೆಯುತ್ತಿದೆ).

1976ರ ಏಪ್ರಿಲ್ ಒಂದರಂದು ತನ್ನ ಮಾತೃಸಂಸ್ಥೆಯೊಂದಿಗಿನ ಹೊಕ್ಕುಳ ಬಳ್ಳಿಯನ್ನು ಕಳೆದುಕೊಂಡ ದೂರದರ್ಶನ ಸ್ವಂತ ಅಸ್ತಿತ್ವ ಪಡೆದುಕೊಂಡಿತು. 1982ರಲ್ಲಿ ಬಣ್ಣ ಪಡೆದುಕೊಂಡ ದೂರದರ್ಶನ ಗಲ್ಫ್ ಯುದ್ಧದ ಜೊತೆಗೆ ಏಷ್ಯನ್ ಗೇಮ್ಸ್ ಅನ್ನು ಬಿತ್ತರಿಸುವ ಕೆಲಸವೂ ಮಾಡಿತು. ಫಿಲಿಪ್ಸ್ ಕಂಪನಿಯ ಈ ಬಣ್ಣದ ಪೆಟ್ಟಿಗೆ ಜನರನ್ನು ತನ್ನ ಮಾಯಾಜಾಯದೊಳಗೆ ಬಂದಿಯಾಗಿಸುವಲ್ಲಿ ತಡಮಾಡಲಿಲ್ಲ. ಸುಮಾರು 50 ಸಾವಿರ ಬಣ್ಣದ
ಟಿ.ವಿ.ಯನ್ನು ಆಮದು ಮಾಡಿಕೊಳ್ಳುವಲ್ಲಿ ಕೇಂದ್ರ ಸರ್ಕಾರ ನೀಡಿದ ಅನುಮತಿ ಭಾರತದ ಟೆಲಿವಿಷನ್ ಸೆಟ್ ಕ್ರಾಂತಿಗೆ ನಾಂದಿ ಹಾಡಿತು.

ನಿಯತಕಾಲಿಕವೊಂದರ ವರದಿಯಂತೆ ಇದುವರೆಗೆ ಕಪ್ಪುಬಿಳುಪು ಪ್ರಪಂಚವನ್ನು ನೋಡಿದ ಭಾರತೀಯರ ಕಣ್ಣುಗಳಿಗೆ ಬಹುವರ್ಣದ ಬಣ್ಣದ ಪ್ರಪಂಚವನ್ನು ನೋಡುವ ಹುಮ್ಮಸ್ಸು ಎಷ್ಟಿತ್ತೆಂದರೆ ಹಾಂಗ್‌ಕಾಂಗ್, ಸಿಂಗಪುರ ಮತ್ತ ದುಬೈನ ಟಿ.ವಿ. ಮಳಿಗೆಗಳು ಭಾರತದ ಟಿ.ವಿ. ಸೆಟ್ ಬೇಡಿಕೆಯನ್ನು ಪೂರೈಸುವಲ್ಲಿ ತಮ್ಮ ಕಪಾಟುಗಳನ್ನು ಬರಿದು ಮಾಡಿದ್ದವಂತೆ!

ದೂರದರ್ಶನದಲ್ಲಿ ಪ್ರಸಾರವಾದ ರಾಮಾಯಾಣ, ಮಹಾಭಾರತ ಕಥಾನಕಗಳು ಜನಮನ ಸೂರೆಗೊಂಡು ಪೌರಾಣಿಕ ಗ್ರಂಥಗಳ ಸನ್ನಿವೇಶಗಳಿಗೆ ಹಾಗೂ ವ್ಯಕ್ತಿಗಳಿಗೆ ಮೂರ್ತರೂಪ ಕೊಡುವ ಕೆಲಸ ಮಾಡಿದವು. ಆ ಧಾರಾವಾಹಿಗಳಲ್ಲಿ ಬರುವ ಪಾತ್ರಧಾರಿಗಳನ್ನು ದೈವತ್ವಕ್ಕೆ ಏರಿಸಿ ಆರಾಧಿಸುವ ಘಟನೆಗಳೂ ನಡೆದವು. ಇದರ ನಂತರ ಸಾಲು ಸಾಲಾಗಿ ಅತ್ಯಂತ ಜನಪ್ರಿಯ ಕಾರ್ಯಕ್ರಮಗಳು ದೂರದರ್ಶನದಲ್ಲಿ ಪ್ರಸಾರವಾದವು. ವಿಕ್ರಮ ಮತ್ತು ಬೇತಾಳ, ಭಾರತ್ ಏಕ್ ಖೋಜ್, ಚಂದ್ರಕಾಂತ, ಶಕ್ತಿಮಾನ್, ಮಾಲ್ಗುಡಿ ಡೇಸ್, ತಮಸ್, ಮಿರ್ಜಾ ಗಾಲೀಬ್, ದೇಖ್ ಬಾಯಿ ದೇಖ್, ರಂಗೋಲಿ, ಚಿತ್ರಹಾರ್ ಕಾರ್ಯಕ್ರಮಗಳು ಜನಪ್ರಿಯತೆಯ ಉತ್ತುಂಗಕ್ಕೆ ಏರಿದವು.

ಖಾಸಗಿ ಚಾನೆಲ್‍ಗಳ ಸವಾಲು

ಆರ್ಥಿಕ ಉದಾರ ನೀತಿಯ ಫಲವಾಗಿ 1991ರ ನಂತರ ಭಾರತಕ್ಕೆ ಕಾಲಿಟ್ಟ ಅಂತರರಾಷ್ಟ್ರಿಯ ಚಾನೆಲ್‍ಗಳು ದೂರದರ್ಶನಕ್ಕೆ ಬಹುದೊಡ್ಡ ಪೆಟ್ಟು ನೀಡುವ ಕೆಲಸ ಮಾಡಿದವು. ಮನರಂಜನೆಯನ್ನೇ ಮುಖ್ಯ ಉದ್ದೇಶವಾಗಿಟ್ಟುಕೊಂಡು ಪಾಶ್ಚಾತ್ಯ ದೃಶ್ಯ ಕಾರ್ಯಕ್ರಮ ಕಂಪನಿಗಳು ಉತ್ಪಾದಿಸಿದ ಕಾರ್ಯಕ್ರಮಗಳನ್ನು, ಹಾಡುಗಳನ್ನು ಪ್ರಸಾರ ಮಾಡುತ್ತಿದ್ದ ಈ ಚಾನೆಲ್‍ಗಳು ದೂರದರ್ಶನದ ವೀಕ್ಷಕರನ್ನು ತನ್ನ ತೆಕ್ಕೆಯೊಳಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾದವು.

ಸರ್ಕಾರದ ನೀತಿಗಳು, ಆಡಳಿತಾತ್ಮಕ ಸಮಸ್ಯೆಗಳು, ಬದಲಾಗುತ್ತಿರುವ ಸನ್ನಿವೇಶಗಳಿಗೆ ಹೊಂದಿಕೊಳ್ಳಲು ಅಡೆತಡೆಗಳು, ದೂರ ಸರಿಯುತ್ತಿರುವ ಜಾಹೀರಾತುದಾರರು, ಕಾಲಕಾಲಕ್ಕೆ ಬಂದ ಸರ್ಕಾರಗಳು ಅದನ್ನು ರಾಜಕೀಯ ಪಕ್ಷದ ಮುಖವಾಣಿಯಾಗಿ ಮಾಡಿಕೊಳ್ಳುತ್ತಾ ಬಂದಿರುವುದು ದೂರದರ್ಶನಕ್ಕೆ ತೊಡಕುಗಳಾದವು. ಗತವೈಭವದ ದಿನಗಳನ್ನು ಮತ್ತೆ ಕಾಣುವ ಹಂಬಲದಲ್ಲಿರುವ ದೂರದರ್ಶನಕ್ಕೆ 60 ತುಂಬಿದ ಈ ಸಂದರ್ಭದಲ್ಲಿ ಒಂದು ಶುಭ ಹಾರೈಕೆ.

ಪ್ರತಿಕ್ರಿಯಿಸಿ (+)