ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಿಣಿರಾಮನ ಗಂಭೀರ ವದನೆ

Last Updated 10 ಸೆಪ್ಟೆಂಬರ್ 2020, 19:30 IST
ಅಕ್ಷರ ಗಾತ್ರ

‘ಪಾಪ ಪಾಂಡು’ ಧಾರಾವಾಹಿಯ ‘ಚಾರು’ ಆಗಿ ನಗೆಯ ಕಚಗುಳಿ ಇಡುತ್ತಿದ್ದ ನಯನಾ ನಾಗರಾಜ್‌ ಅವರ ವಿಭಿನ್ನಮುಖ ಈಗ ಪ್ರೇಕ್ಷಕರಿಗೆ ಪರಿಚಿತವಾಗಿದೆ. ಉತ್ತರ ಕನ್ನಡದ ಒಂದು ಮುದ್ದಾದ ಪ್ರೇಮ ಕಥೆಯನ್ನು ಅನಾವರಣಗೊಳಿಸುವ ‘ಗಿಣಿರಾಮ’ದಲ್ಲಿನ ಇವರ ಗಂಭೀರ ವದನವನ್ನು ಜನ ಮೆಚ್ಚಿಕೊಂಡಿದ್ದಾರೆ.

ನೃತ್ಯ, ಸಂಗೀತ, ನಟನೆ... ಹೀಗೆ ಬಹುಮುಖ ಪ್ರತಿಭೆಯನ್ನು ಒಗ್ಗೂಡಿಸಿಕೊಂಡಿರುವ ನಯನಾಬಣ್ಣದ ಲೋಕ ಪ್ರವೇಶಿಸಿದ್ದು, ಕಾಕತಾಳೀಯ. ಮನದೊಳಗೆ ಅಭಿನಯದ ವ್ಯಾಮೋಹ ಜಿಗಿಯುತ್ತಲೇ ಇದ್ದರೂ, ಈ ರಂಗುರಂಗಿನ ಪ್ರಪಂಚ ತನ್ನನ್ನು ಒಪ್ಪಿಕೊಳ್ಳುತ್ತದೆಯೇ ಎಂಬ ಅನುಮಾನವೂ ಅವರಿಗಿತ್ತು.

ನಯನಾ ಅವರ ನಟನೆಯ ಹಂಬಲಕ್ಕೆ ಒದಗಿ ಬಂದಿದ್ದು ರಂಗಭೂಮಿ, ಅಲ್ಲಿಯೇ ಅವರು ಅಭಿನಯದ ಪ್ರಾಥಮಿಕ ಪಟ್ಟುಗಳನ್ನು ಕಲಿತುಕೊಂಡಿದ್ದು.ಸಂಗೀತ, ನೃತ್ಯದ ಮೇಲೆ ವಿಪರೀತ ಮೋಹ ಇದ್ದರೂ, ಮನೆಯ ಆರ್ಥಿಕ ಪರಿಸ್ಥಿತಿಯಿಂದಾಗಿ ಶಾಸ್ತ್ರೀಯವಾಗಿ ತರಬೇತಿ ಪಡೆಯುವುದು ಅವರಿಗೆ ಸಾಧ್ಯವಾಗಲಿಲ್ಲ. ಹಾಡ್ತಾ ಹಾಡ್ತಾ ರಾಗ ಎನ್ನುತ್ತಲೇ ಕೆಲವು ರಾಗಗಳನ್ನು ಅಭ್ಯಾಸ ಮಾಡಿದ ಅವರು, ಸಂಗೀತ ಕಲಿತರು.

‘ಶಾಲಾ ದಿನಗಳಿಂದಲೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸ್ಪರ್ಧಿಸಲು ಮುಂದಿರುತ್ತಿದ್ದೆ.ನಟನಾ ಕ್ಷೇತ್ರದಲ್ಲಿ ಗುರುತಿಸಿಕೊಳ್ಳಬೇಕೆಂಬ ಅದಮ್ಯ ಬಯಕೆಯಿತ್ತು. ಮುಖ್ಯಪಾತ್ರವೇ ಆಗಬೇಕು ಎಂದುಕೊಂಡಿರಲಿಲ್ಲ. ವಿಭಿನ್ನ ಪಾತ್ರಗಳಿಗೆ ನ್ಯಾಯ ಒದಗಿಸಿ, ಜನರಿಗೆ ಮನರಂಜನೆ ನೀಡಬೇಕು ಎಂಬುದಷ್ಟೇ ನನ್ನ ಆದ್ಯತೆಯಾಗಿತ್ತು. ನಟನಾ ಕೌಶಲವನ್ನು ಕರಗತ ಮಾಡಿಕೊಳ್ಳಲು ರಂಗಭೂಮಿಯಲ್ಲೂ ತೊಡಗಿಸಿಕೊಂಡಿದ್ದೆ’ ಎನ್ನುತ್ತಾರೆ ಅವರು.

‘ನನ್ನ ಗೆಳೆಯನೊಬ್ಬ ಜಾಹೀರಾತು ಮಾಡುತ್ತಿದ್ದ. ಅದರಲ್ಲಿ ನಟಿಸುವಂತೆ ಕರೆದ. ಚಿತ್ರೀಕರಣದ ಸ್ಥಳಕ್ಕೆ ಹೋದವಳು, ಧೈರ್ಯ ಮಾಡದೆ ಹಾಗೇ ವಾಪಸು ಬಂದಿದ್ದೆ. ಕೆಲ ದಿನಗಳ ನಂತರ ಅವನ ಸಲಹೆಯಂತೆ ಧಾರಾವಾಹಿಯೊಂದರಆಡಿಷನ್‌ಗೆ ಹೋಗಿದ್ದೆ. ಅಲ್ಲಿ‘ಶಾಂತಂ ಪಾಪಂ’ನಲ್ಲಿ ನಟಿಸುವ ಅವಕಾಶ ದೊರಕಿತು. ಅದಾದ ಬಳಿಕ ‘ಮಂಗ್ಳೂರ್‌ ಹುಡುಗಿ ಹುಬ್ಬಳ್ಳಿ ಹುಡ್ಗ’ ಧಾರಾವಾಹಿಯಲ್ಲಿ ನಟಿಸಿದೆ. ಇವೆರಡೂ ಸಣ್ಣಪುಟ್ಟ ಪಾತ್ರಗಳಾದರೂ, ಜನ ಗುರುತಿಸಲು ಪ್ರಾರಂಭಿಸಿದರು’ ಎಂದು ನಟನಾ ಕ್ಷೇತ್ರದ ಮೊದಲ ಹೆಜ್ಜೆಗಳನ್ನು ಮೆಲುಕು ಹಾಕುತ್ತಾರೆ.

‘ಗಿಣಿರಾಮ ಧಾರಾವಾಹಿ ಪ್ರಾರಂಭವಾಗಿ ಕೆಲವೇ ದಿನಗಳಾಗಿದ್ದರೂ, ಜನರಿಂದ ಸಾಕಷ್ಟು ಪ್ರೀತಿ ದೊರಕಿದೆ. ಮುಖ್ಯಪಾತ್ರಕ್ಕೆ ನಾನು ಹೊಂದಿಕೆಯಾಗುವುದಿಲ್ಲ. ಅಂತಹ ಅವಕಾಶ ನನಗೆ ಸಿಗಲು ಸಾಧ್ಯವೇ ಇಲ್ಲ ಎಂದುಕೊಂಡಿದ್ದೆ. ಈ ಧಾರಾವಾಹಿಯಲ್ಲಿ ‘ಲೀಡ್‌ ರೋಲ್‌’ ಸಿಕ್ಕಾಗ ತುಂಬಾ ಸಂತಸವಾಯಿತು. ಆದರೆ, ಜನರಿಗೆ ನಾನು ಇಷ್ಟ ಆಗುತ್ತೇನೋ, ಇಲ್ಲವೋ ಎಂಬ ಅಳುಕು ಇತ್ತು. ಸಾಮಾಜಿಕ ಜಾಲತಾಣಗಳಲ್ಲಿ ನನ್ನ ನಟನೆಯ ಬಗ್ಗೆ ಮೆಚ್ಚುಗೆ ಬರುತ್ತಿರುವುದು ಕಂಡಾಗ, ಈ ಪಾತ್ರ ಜನರಿಗೆ ಎಷ್ಟು ಹತ್ತಿರವಾಗಿದೆ ಎಂಬುದು ಅರಿವಾಗುತ್ತದೆ’ ಎಂದು ಸಂತಸಹಂಚಿಕೊಳ್ಳುತ್ತಾರೆ.

‘ಪಾಪ ಪಾಂಡು’ ವಿನ ಚಾರು ಮತ್ತು ‘ಗಿಣಿರಾಮ’ದ ಮಹತಿ ಎರಡೂ ಒಂದಕ್ಕೊಂದು ತದ್ವಿರುದ್ಧ ಗುಣದ ಪಾತ್ರಗಳು. ಮಹತಿ ಪಾತ್ರಕ್ಕೆ ಹೊಂದಿಕೊಳ್ಳುವುದು ಪ್ರಾರಂಭದಲ್ಲಿ ತೀರ ಕಷ್ಟವಾಗುತ್ತಿತ್ತು. ಮೊದಲ ದೃಶ್ಯಕ್ಕೆ ನಾಲ್ಕು ಟೇಕ್‌ ತೆಗೆದುಕೊಂಡಿದ್ದೆ. ಆದರೀಗ ಆ ತೂಕದ ವ್ಯಕ್ತಿತ್ವದ ಪಾತ್ರದ ಮೇಲೆ ಪ್ರೀತಿ ಹುಟ್ಟಿದೆ’ ಎಂದು ಎರಡು ವಿಭಿನ್ನ ಪಾತ್ರಗಳಿಗೆ ಜೀವ ತುಂಬಿದ ಬಗೆಯನ್ನು ಅವರು ವಿವರಿಸುತ್ತಾರೆ.

ನಟನಾ ಕೌಶಲದಿಂದಲೇ ಒಂದಾದ ಮೇಲೊಂದರಂತೆ ಅವಕಾಶವನ್ನು ಗಿಟ್ಟಿಸಿಕೊಂಡ ಗಟ್ಟಿಗಿತ್ತಿ ನಯನಾ. ನಟನೆಯ ಬಲವನ್ನೇ ನಂಬಿ ಬಣ್ಣದ ಲೋಕಕ್ಕೆ ಅಡಿಯಿರಿಸಿರುವ ನಯನಾ ಅವರಿಗೆ ಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳಬೇಕೆಂಬ ಇರಾದೆ ಇದೆ. ಒಂದರ ಹಿಂದೊಂದರಂತೆ ಅವಕಾಶಗಳು ಅರಸಿಕೊಂಡು ಬರುತ್ತಿರುವುದೂ ಅವರ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT