ಬುಧವಾರ, ಸೆಪ್ಟೆಂಬರ್ 29, 2021
20 °C

ಅನಿರುದ್ಧ್‌ ಜೊತೆ ಜೊತೆಯಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಲವತ್ತೈದು ವರ್ಷದ ಉದ್ಯಮಿ ಹಾಗೂ ಮಧ್ಯಮ ವರ್ಗದ ಇಪ್ಪತ್ತು ವರ್ಷದ ಯುವತಿಯ ನಡುವೆ ಪ್ರೇಮಾಂಕುರವಾದರೆ ಹೇಗೆ? ವಯಸ್ಸು, ಅಂತಸ್ತು, ಜೀವನಶೈಲಿ ಎಲ್ಲದರಲ್ಲೂ ಅಜಗಜಾಂತರ ವ್ಯತ್ಯಾಸವಿದೆ. ಆದರೂ ಇವರಿಬ್ಬರು ಹೇಗೆ ಒಂದಾಗುತ್ತಾರೆ? ಇವರ ಜೀವನ ಶೈಲಿ ಹೇಗಿರುತ್ತದೆ ಎಂಬ ಕಥಾಹಂದರದ ವಿಶಿಷ್ಟ ಪ್ರೇಮಕಥೆಯನ್ನು ರಸವತ್ತಾಗಿ ಹೇಳಲಿದೆ ‘ಜೊತೆ ಜೊತೆಯಲಿ’ ಧಾರಾವಾಹಿ.

‘ಒಂದು ಗಂಡಿಗೆ ಒಂದು ಹೆಣ್ಣನ್ನು ಜೋಡಿ ಮಾಡಿ, ಆ ದೇವರು ನಮ್ಮ ಹಣೆಬರಹದಲ್ಲಿ ಮೊದಲೇ ಬರೆದಿರುತ್ತಾನೆ’ ಎನ್ನುವುದು ಲೋಕದ ಮಾತು. ಸಾಮಾನ್ಯವಾಗಿ ಗಂಡಿಗಿಂತ ಹೆಣ್ಣು ಮೂರ್ನಾಲ್ಕು ವರ್ಷ ಅಥವಾ ಐದಾರು ವರ್ಷ ಚಿಕ್ಕವಳಾಗಿರಬೇಕು, ಆಗಲೇ ಆ ಜೋಡಿಯ ಜೀವನ ಪಯಣ ಸುಖಕರ ಎನ್ನುವುದು ರೂಢಿಗತವಾಗಿದೆ. ಆದರೆ, ಈ ಅಂತರ ಹತ್ತು-ಹದಿನೈದು ವರ್ಷಗಳಷ್ಟು ದೊಡ್ಡದಾದರೆ ಏನಾಗಬಹುದು, ಏನೆಲ್ಲಾ ಸನ್ನಿವೇಶಗಳು ಎದುರಾಗಬಹುದು? ಎಂಬುದನ್ನು ಈಗಾಗಲೇ ಜೀ ಕನ್ನಡದ ‘ಜೊತೆ ಜೊತೆಯಲಿ’ ಧಾರಾವಾಹಿಯಲ್ಲಿ ಹೇಳಲಾಗಿತ್ತು. ತನಗಿಂತ ಹೆಚ್ಚು ವಯಸ್ಸಿನ ಹೆಣ್ಣನ್ನು ಪ್ರೀತಿಸುವ ಯುವಕರ ಕಥೆ ಈ ಧಾರಾವಾಹಿಯಲ್ಲಿತ್ತು. ಈಗ ಅದೇ ಹೆಸರಿನಲ್ಲಿ ಮತ್ತೊಂದು ಹೊಸ ಕಥೆಯೊಂದಿಗೆ ‘ಜೊತೆ ಜೊತೆಯಲಿ’ ಮೂಡಿಬರುತ್ತಿದೆ. ಇದೇ ತಿಂಗಳ 9ರಂದು ಈ ಹೊಸ ಧಾರಾವಾಹಿ ಆರಂಭವಾಗಲಿದೆ. ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿ ರಾತ್ರಿ 8.30ಕ್ಕೆ ಜೀ ಕನ್ನಡದಲ್ಲಿ ಪ್ರಸಾರವಾಗಲಿದೆ.

ಸಾಹಸ ಸಿಂಹ ವಿಷ್ಣುವರ್ಧನ್‌ ಅವರ ಅಳಿಯ, ಚಿತ್ರನಟ ಅನಿರುದ್ಧ್‌ ಈ ಧಾರಾವಾಹಿಯಲ್ಲಿ ನಾಯಕ ಆರ್ಯವರ್ಧನ್‌ ಪಾತ್ರದ ಮುಖೇನ ಕಿರುತೆರೆಗೆ ಮತ್ತೆ ಪ್ರವೇಶ ನೀಡುತ್ತಿದ್ದಾರೆ. ಕಥೆ ಕೇಳಿದಾಗಲೇ, ಪಾತ್ರದ ವಿಶೇಷತೆ ಗುರುತಿಸಿ, ನಿರ್ವಹಿಸಲು ಒಪ್ಪಿಕೊಂಡಿದ್ದಾರಂತೆ. ಆರ್ಯವರ್ಧನ್ ಎಂಬ ಶ್ರೀಮಂತ ಉದ್ಯಮಿಯ ಪಾತ್ರದಲ್ಲಿ ಅನಿರುದ್ಧ್‌ ಕಾಣಿಸಿಕೊಳ್ಳುತ್ತಿದ್ದಾರೆ.

ಇನ್ನು ಇಪ್ಪತ್ತರ ಹರೆಯದ ಯುವತಿ ಪಾತ್ರದಲ್ಲಿ ಹೊಸ ಪ್ರತಿಭೆ ಮೇಘನಾ ಶೆಟ್ಟಿ ಅಭಿನಯಿಸಿದ್ದಾರೆ. ಶುಭ ವಿವಾಹ, ಜೋಡಿಹಕ್ಕಿಯಂತಹ ಯಶಸ್ವಿ ಧಾರಾವಾಹಿಗಳನ್ನು ನಿರ್ದೇಶಿಸಿದ್ದ ಆರೂರು ಜಗದೀಶ್ ಈ ಸೀರಿಯಲ್ ಸಾರಥ್ಯ ವಹಿಸಿಕೊಂಡಿದ್ದಾರೆ.

‘ಈಗಾಗಲೇ ಪ್ರೋಮೊ ಮೂಲಕವೇ ವೀಕ್ಷಕರಲ್ಲಿ ಹೆಚ್ಚಿನ ಕಾತರ, ಕುತೂಹಲವನ್ನು ಈ ಧಾರಾವಾಹಿ ಹುಟ್ಟುಹಾಕಿದೆ. ನಿರೀಕ್ಷೆಗಿಂತ ಹೆಚ್ಚಿನ ಮನರಂಜನೆಯನ್ನು ಪ್ರೇಕ್ಷಕರಿಗೆ ನೀಡಲು ಪ್ರಯತ್ನಿಸಿದ್ದೇವೆ’ ಎಂದು ನಿರ್ದೇಶಕ ಆರೂರು ಜಗದೀಶ್‌ ಹೇಳಿದ್ದಾರೆ.

‘ಜೊತೆ ಜೊತೆಯಲಿ’ ಧಾರಾವಾಹಿ ಕಿರುತೆರೆಯಲ್ಲಿ ಒಂದು ಹೊಸ ಟ್ರೆಂಡ್ ಹುಟ್ಟುಹಾಕಲಿದೆ ಎನ್ನುವುದು ಜೀ ಕನ್ನಡದ ಬ್ಯುಸಿನೆಸ್‌ ಹೆಡ್ ರಾಘವೇಂದ್ರ ಹುಣಸೂರು ಅವರ ವಿಶ್ವಾಸದ ನುಡಿ.

ಕಥೆ ಸುಧೀಂದ್ರ ಭಾರದ್ವಾಜ್, ಪವನ್ ಶ್ರೀವತ್ಸ ಚಿತ್ರಕಥೆ, ಸತ್ಯ ಕೆ. ಸಂಭಾಷಣೆ ರಚಿಸಿದ್ದಾರೆ. ಸುನಾದ ಗೌತಮ್ ಹಾಡುಗಳಿಗೆ ಸಂಗೀತ ನೀಡಿದ್ದಾರೆ. ಸಂತೋಷ್ ಖಾರ್ವಿ ಛಾಯಾಗ್ರಹಣ ಮಾಡಿದ್ದಾರೆ. ನಾಯಕಿಯ ಮನೆ, ನಾಯಕನ ಕಚೇರಿ ಸೆಟ್‍ಗಳನ್ನು ಕಲಾ ನಿರ್ದೇಶಕ ಹೊಸಮನೆ ಮೂರ್ತಿ ಹಾಗೂ ಸುರೇಶ್ ಬಾಗಣ್ಣನವರ ವಿಶೇಷವಾಗಿ ರೂಪಿಸಿದ್ದಾರೆ. ಅಪೂರ್ವ, ಶಿವಾಜಿರಾವ್, ಜಾದವ್ ಸುಂದರಶ್ರೀ, ಮಾನಸ ಮನೋಹರ್, ಮುರಳಿ, ಶ್ರೀದೇವಿ ಸೇರಿದಂತೆ ಅನೇಕ ಕಲಾವಿದರು ಅಭಿನಯಿಸಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು