ಭಾನುವಾರ, ಆಗಸ್ಟ್ 1, 2021
23 °C

ಭಕ್ತಿಪ್ರಧಾನ ಧಾರಾವಾಹಿ ಮಾಡುವುದೇ ಸವಾಲು: ನವೀನ್ ಕೃಷ್ಣ

ರೇಷ್ಮಾ Updated:

ಅಕ್ಷರ ಗಾತ್ರ : | |

Prajavani

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ‘ಉಘೇ ಉಘೇ ಮಾದೇಶ್ವರ’ ಧಾರಾವಾಹಿ ಮೂಲಕ ಮಾದಪ್ಪನ ಚರಿತೆಯನ್ನು ಲೋಕಕ್ಕೆ ತಿಳಿಸಿದ್ದ ಖ್ಯಾತ ನಿರ್ದೇಶಕ ನವೀನ್ ಕೃಷ್ಣ ಈಗ ಮತ್ತೊಂದು ಭಕ್ತಿಪ್ರಧಾನ ಧಾರಾವಾಹಿಯ ಸಾರಥ್ಯ ವಹಿಸಿದ್ದಾರೆ. ಎಡೆಯೂರು ಶ್ರೀ ಸಿದ್ಧಲಿಂಗೇಶ್ವರ ಚರಿತೆಯನ್ನು ಧಾರಾವಾಹಿ ರೂಪದಲ್ಲಿ ತೆರೆ ಮೇಲೆ ತಂದಿದ್ದಾರೆ ನವೀನ್‌. 16ನೇ ಶತಮಾನದ ಕಥೆ ಹೊಂದಿರುವ ಈ ಧಾರಾವಾಹಿ ಪ್ರೋಮೊ ಮೂಲಕವೇ ಜನರನ್ನು ಸೆಳೆದಿತ್ತು.

ಡಿಸೆಂಬರ್‌ 21ರಿಂದ ಸ್ಟಾರ್‌ ಸುವರ್ಣವಾಹಿನಿಯಲ್ಲಿ ರಾತ್ರಿ 8 ಗಂಟೆಗೆ ಪ್ರಸಾರವಾಗುತ್ತಿರುವ ‘ಎಡೆಯೂರು ಶ್ರೀ ಸಿದ್ಧಲಿಂಗೇಶ್ವರ’ ಧಾರಾವಾಹಿ ಪ್ರಸಾರವಾದ ಕೆಲವೇ ದಿನಗಳಲ್ಲಿ ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಧಾರಾವಾಹಿಯ ಹಿನ್ನೆಲೆ, ಕಥಾಸಾರಾಂಶ ಹಾಗೂ ಪಾತ್ರವರ್ಗ ಸೇರಿದಂತೆ ಇನ್ನಿತರ ವಿಷಯಗಳ ಬಗ್ಗೆ ‘ಪ್ರಜಾಪ್ಲಸ್’ ಜೊತೆ ಮಾತನಾಡಿದ್ದಾರೆ ನಿರ್ದೇಶಕ ನವೀನ್ ಕೃಷ್ಣ.

ಕಥೆಯ ಆಯ್ಕೆಯ ಹಿಂದೆ...

‘ಈ ಕಥೆಯನ್ನು ಆಯ್ದುಕೊಳ್ಳಲು ಮೊಟ್ಟ ಮೊದಲ ಕಾರಣ ಎಂದರೆ ಇದು ನಮ್ಮ ಕನ್ನಡದ ಕಥೆ. ಅಂದರೆ ನಮ್ಮಲ್ಲಿ ಇರುವಂತಹ ಕೆಲವೇ ಕೆಲವು ಪವಾಡ ಪುರುಷರಲ್ಲಿ ಸಿದ್ಧಲಿಂಗೇಶ್ವರರು ಮೊದಲಿಗರಾಗಿ ನಿಲ್ಲುತ್ತಾರೆ. 11ನೇ ಶತಮಾನದಲ್ಲಿ ಬಸವಣ್ಣನವರು ಬಿಟ್ಟು ಹೋದ ವಚನ ಸಾಹಿತ್ಯ ಭಂಡಾರ ಹಾಗೂ ಶಿವತತ್ವವನ್ನು ಮತ್ತೆ ಪ್ರಚಾರಕ್ಕೆ ತಂದವರು ಸಿದ್ಧಲಿಂಗೇಶ್ವರ ಅವರು. ಈ ಕಥೆ ಬಹಳ ಜನಕ್ಕೆ ಗೊತ್ತಿರಲಿಲ್ಲ. ಹಾಗಾಗಿ ಜನಕ್ಕೆ ಕಥೆ ಹೇಳಬೇಕು ಎಂಬ ಉದ್ದೇಶದಿಂದ ಇದನ್ನು ಆಯ್ಕೆ ಮಾಡಿಕೊಂಡಿದ್ದೇವೆ’.

ಧಾರಾವಾಹಿಯ ಸಾರಾಂಶ

‘ಸಿದ್ಧಲಿಂಗೇಶ್ವರ ಅವರು ಅವರ ತಂದೆ–ತಾಯಿಗೆ ಹಡೆದ ಮಗನಲ್ಲ, ಬದಲಾಗಿ ಪಡೆದ ಮಗನಾಗಿ ಶಿವನ ಅಂಶವಾಗಿ ಜನಿಸುತ್ತಾರೆ. ನಿರಂಜನ ಗಣಾಧೀಶನನ್ನು ಶಿವ ‘ಇನ್ನು ಮುಂದೆ ನೀನು ಶಿವತತ್ವವನ್ನು ಸಾರು’ ಎಂದು ಭೂಲೋಕಕ್ಕೆ ಕಳುಹಿಸುತ್ತಾರೆ. ಸಿದ್ಧಲಿಂಗೇಶ್ವರರ ತಂದೆ–ತಾಯಿಗೆ ಈ ಜನ್ಮದಲ್ಲಿ ಮಗುವನ್ನು ಹಡೆಯಲು ಸಾಧ್ಯವಾಗುವುದಿಲ್ಲ, ಪಡೆಯಬಹುದು ಎಂಬ ಶಾಪವಿರುತ್ತದೆ. ಈ ಕಾರಣಕ್ಕೆ ದಂಪತಿಯ ವ್ರತಕ್ಕೆ ಮೆಚ್ಚಿ ಪಡೆದ ಮಗನಾಗಿ ಭೂಮಿಗೆ ಬರುತ್ತಾರೆ. ಬಾಲ್ಯದಿಂದಲೇ ಅವರ ಪವಾಡಗಳು, 8ನೇ ವಯಸ್ಸಿಗೆ ಲೋಕೋದ್ಧಾರಕ್ಕಾಗಿ ಸನ್ಯಾಸತ್ವ ಸ್ವೀಕರಿಸುವುದು, ಮುಂದೆ ಶಿವತತ್ವದ ಪ್ರಚಾರದ ಮೂಲಕ ಹೇಗೆ ಲೋಕೊದ್ಧಾರ ಮಾಡುತ್ತಾರೆ ಎಂಬೆಲ್ಲಾ ಅಂಶಗಳು ಧಾರಾವಾಹಿಯಲ್ಲಿವೆ’ ಎಂದು ವಿವರಣೆ ನೀಡುತ್ತಾರೆ ನವೀನ್‌.

ಭಕ್ತಿಪ್ರಧಾನ ಕಥೆಯನ್ನೇ ಆಯ್ದುಕೊಳ್ಳಲು ಕಾರಣ

‘ನಾನು ಈ ಹಿಂದೆ ‘ಉಘೇ ಉಘೇ ಮಾದೇಶ್ವರ’ ಧಾರಾವಾಹಿಯನ್ನು ನಿರ್ದೇಶನ ಮಾಡಿದ್ದೆ. ಸಾಮಾನ್ಯ ಕಮರ್ಷಿಯಲ್ ಧಾರಾವಾಹಿ ಮಾಡುವುದಕ್ಕಿಂತ ಭಕ್ತಿಪ್ರಧಾನ ಧಾರಾವಾಹಿ ಮಾಡುವಾಗ ಹೆಚ್ಚು ಸವಾಲುಗಳಿರುತ್ತವೆ. ತಂತ್ರಜ್ಞಾನ, ಕಥೆ ಹೇಳುವ ರೀತಿ ಹಾಗೂ ಕಲಾವಿದರ ಅಭಿನಯ ಈ ಎಲ್ಲದರಲ್ಲೂ ಸವಾಲಿರುತ್ತದೆ. ಅದರೊಂದಿಗೆ ನನಗೆ ಮೊದಲಿನಿಂದಲೂ ಪೌರಾಣಿಕ ಕಥಾಹಿನ್ನೆಲೆಯ ಮೇಲೆ ಒಲವು ಜಾಸ್ತಿ. ಆ ಕಾರಣಕ್ಕೆ ನಾನು ಈ ರೀತಿಯ ಧಾರಾವಾಹಿಯನ್ನು ಆಯ್ಕೆ ಮಾಡಿಕೊಳ್ಳುತ್ತೇನೆ’ ಎಂದು ಭಕ್ತಿಪ್ರಧಾನ ಧಾರಾವಾಹಿಗಳನ್ನೇ ಆಯ್ಕೆ ಮಾಡಿಕೊಳ್ಳುವ ಕಾರಣ ತಿಳಿಸುತ್ತಾರೆ.

ಶೂಟಿಂಗ್ ಸ್ಥಳಗಳು

‘ಸದ್ಯ ಬೆಂಗಳೂರಿನ ಪುಟ್ಟಣ್ಣ ಸ್ಟುಡಿಯೊದಲ್ಲಿ ಹಳ್ಳಿಯೊಂದರ ಸೆಟ್ ಹಾಕಿದ್ದೇವೆ. ಕೆಲವು ಗ್ರಾಫಿಕ್ಸ್ ದ್ರಶ್ಯಗಳನ್ನು ರಾಮ್‌ಜೀ ಗ್ರೀನ್‌ ಮ್ಯಾಟ್ ಸ್ಟುಡಿಯೊದಲ್ಲಿ ಗ್ರೀನ್ ಮ್ಯಾಟ್‌ನಲ್ಲಿ ಶೂಟಿಂಗ್ ಮಾಡಿದ್ದೇವೆ. ಮಾಗಡಿ ಬಳಿ 500 ವರ್ಷ ಹಳೆಯದಾದ ಮಾಗಡಿ ಸೋಮೇಶ್ವರ ದೇವಸ್ಥಾನ, ಬೆಂಗಳೂರು ಸುತ್ತಮುತ್ತ ನದಿ, ಕೆರೆಗಳಿರುವ ಕಡೆ ಶೂಟಿಂಗ್ ಮಾಡುತ್ತಿದ್ದೇವೆ’.

ಧಾರಾವಾಹಿ ಹಿಂದಿನ ಸವಾಲುಗಳು

‘ಇಂತಹ ಧಾರಾವಾಹಿಗಳನ್ನು ತೆರೆ ಮೇಲೆ ತರುವಾಗ ನಾವು ವೀಕ್ಷಕರನ್ನು ಹಿಂದಿನ ಶತಮಾನಕ್ಕೆ ತೆಗೆದುಕೊಂಡು ಹೋಗುವ ಪ್ರಯತ್ನ ಮಾಡಬೇಕು. ಬೇರೆ ಪ್ರಕಾರದ ಧಾರಾವಾಹಿ ಮಾಡುವಾಗ ವಿದ್ಯುತ್‌ ಕಂಬ, ಮೊಬೈಲ್ ಗೋಪುರ ಕಾಣಿಸಬಹುದು. ಆದರೆ ಭಕ್ತಿಪ್ರಧಾನ ಧಾರಾವಾಹಿ ಮಾಡುವಾಗ ಸಣ್ಣ ಸಣ್ಣ ಸೂಕ್ಷ್ಮಗಳನ್ನೂ ಗಮನಿಸಬೇಕಾಗುತ್ತದೆ. ಶೇ 99 ರಷ್ಟು ಆ ಕಾಲವನ್ನು ಹೋಲುವಂತೆ ಮಾಡಿ ಜನರನ್ನು ಆ ಕಾಲಘಟಕ್ಕೆ ತೆಗೆದುಕೊಂಡು ಹೋಗುವಂತೆ ಮಾಡುವುದು ದೊಡ್ಡ ಸವಾಲು. ಅದರೊಂದಿಗೆ ಕಲಾವಿದರ ನಟನೆ, ಭಾಷೆ ಎಲ್ಲದರಲ್ಲೂ ಎಚ್ಚರಿಕೆ ಬೇಕು. ಅದೆಲ್ಲಕ್ಕಿಂತ ಮುಖ್ಯವಾಗಿ ಜನರ ನಂಬಿಕೆ, ಆಚಾರ–ವಿಚಾರಕ್ಕೆ ಮೋಸ ಆಗದಂತೆ, ಎಲ್ಲೂ ತಪ್ಪಾಗದಂತೆ ಚಿತ್ರೀಕರಣ ಮಾಡಬೇಕು’ ಎಂದು ಮಾತಿಗೆ ವಿರಾಮ ಹಾಕಿದರು ನವೀನ್‌ ಕೃಷ್ಣ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು