ಬುಧವಾರ, ಫೆಬ್ರವರಿ 19, 2020
21 °C

ಜೀ ಕನ್ನಡದಲ್ಲಿ ನಾಗಿಣಿಯ ಹೊಸ ಅವತಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಜೀ ಕನ್ನಡ ವಾಹಿನಿಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಪ್ರಸಾರವಾಗುತ್ತಿದ್ದ ‘ನಾಗಿಣಿ’ ಧಾರಾವಾಹಿ ಇತ್ತೀಚೆಗೆ ಮುಕ್ತಾಯಗೊಂಡಿತ್ತು. ಈಗ ನಾಗಿಣಿ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲು ಸಜ್ಜಾಗಿದ್ದಾಳೆ. ‘ನಾಗಿಣಿ 2’ ಧಾರಾವಾಹಿಯು ಫೆ. 17ರಿಂದ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9ಕ್ಕೆ ಪ್ರಸಾರವಾಗಲಿದೆ. ಇದರ ನಿರ್ಮಾಣ ಮತ್ತು ಪ್ರಧಾನ ನಿರ್ದೇಶನದ ಹೊಣೆ ಹೊತ್ತಿರುವುದು ರಾಮ್‍ಜೀ. 

ನಾಗಿಣಿ ಭಾಗ ಒಂದರಲ್ಲಿದ್ದ ಗ್ರಾಫಿಕ್ಸ್ ವೈಭವ ಇಲ್ಲಿ ದುಪ್ಪಟ್ಟಾಗಲಿದೆಯಂತೆ. ಕಿರುತೆರೆ ಮೂಲಕವೇ ಜನಪ್ರಿಯರಾದ ನಟ ಜಯರಾಮ್ ಕಾರ್ತಿಕ್(ಜೆಕೆ) ಎರಡನೇ ಭಾಗದ ಪ್ರಮುಖ ಆಕರ್ಷಣೆ. ಅವರೊಟ್ಟಿಗೆ ನಟ ಮೋಹನ್ ಕೇಂದ್ರಬಿಂದುವಾಗಲಿದ್ದಾರೆ ಎಂದು ಧಾರಾವಾಹಿ ತಂಡ ಹೇಳಿಕೊಂಡಿದೆ.

ಕಿರುತೆರೆಯಲ್ಲಿ ಹೆಸರಾಗಿರುವ ನಮ್ರತಾ ಇಲ್ಲಿ ಹೊಸ ನಾಗಿಣಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ನಿನಾದ್, ಪ್ರಣವ್, ಜೆನ್ನಿಫರ್, ಸೂರ್ಯಕಿರಣ್ ಉಳಿದ ಪಾತ್ರಗಳಲ್ಲಿ ನಟಿಸಲಿದ್ದಾರಂತೆ. ಸಿನಿಮಾದ ಮಾದರಿಯಲ್ಲಿಯೇ ನಾಗಿಣಿ 2ರ ಚಿತ್ರೀಕರಣ ನಡೆಯಲಿದೆ. ಕೊಡಚಾದ್ರಿ, ಚಿಕ್ಕಮಗಳೂರು, ಮೂಡಬಿದ್ರೆ, ಸಕಲೇಶಪುರ, ಕೋಟಿಲಿಂಗದ ಸುತ್ತಮುತ್ತ ಚಿತ್ರೀಕರಣ ನಡೆಸಲು ಯೋಜನೆ ರೂಪಿಸಲಾಗಿದೆ. ₹1 ಕೋಟಿ ವೆಚ್ಚದಡಿ ಅದ್ದೂರಿ ಸೆಟ್ ಕೂಡ ಸಿದ್ಧವಾಗಿದೆ. ಪ್ಯಾಂಟಮ್ ಕ್ಯಾಮೆರಾದಲ್ಲಿ ನಾಗಿಣಿಯ ವೈಭವವನ್ನು ಸೆರೆ ಹಿಡಿಯಲಾಗುತ್ತಿದೆಯಂತೆ.

ಮನುಷ್ಯನ ದುರಾಸೆ, ಅಹಂಕಾರ, ದೈವದ ಬಗ್ಗೆ ಆತನಿಗಿರುವ ನಿರ್ಲಕ್ಷ್ಯ ಮತ್ತು ಅದರಿಂದ ಆತ ಅನುಭವಿಸುವ ನೋವು, ನಿರಾಸೆಯ ಸುತ್ತ ಎರಡನೇ ಭಾಗದ ಕಥೆ ಹೆಣೆಯಲಾಗಿದೆಯಂತೆ.

‘ಇದೊಂದು ಕಾಲ್ಪನಿಕ ಕಥೆ. ಅದಕ್ಕೆ ಈಗಿನ ಕಾಲಘಟ್ಟದ ನೈಜ ದೃಶ್ಯಗಳನ್ನು ಹೆಣೆದು ನೋಡುಗರ ಮುಂದಿಡಲು ನಿರ್ಧರಿಸಲಾಗಿದೆ. ಯಾವುದೇ ಮೂಢನಂಬಿಕೆಗಳಿಗೆ ಪ್ರೋತ್ಸಾಹ ನೀಡುವುದಿಲ್ಲ. ಮನರಂಜನೆಗಾಗಿ ಮಾತ್ರವೇ ಈ ಧಾರಾವಾಹಿ ರೂಪಿಸಲಾಗಿದೆ’ ಎನ್ನುತ್ತಾರೆ ಜೀ ಕನ್ನಡ ವಾಹಿನಿಯ ಬ್ಯುಸಿನೆಸ್‌ ಹೆಡ್‌ ರಾಘವೇಂದ್ರ ಹುಣಸೂರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು