ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾತ್ರ ಕಳಚಿದ ‘ರಾಧಾ ಮಿಸ್‌’

ಅಕ್ಷರ ಗಾತ್ರ

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ ‘ರಾಧಾ ರಮಣ’ ವೀಕ್ಷಕರಿಗೆ ಇದು ಕಹಿ ಮತ್ತು ಬೇಸರದ ಸುದ್ದಿಯೂ ಹೌದು. ಏಕೆಂದರೆ, ಇನ್ನುಂದೆರಾಧಾ ಮಿಸ್‌ ಪಾತ್ರದಲ್ಲಿಶ್ವೇತಾ ಆರ್‌.ಪ್ರಸಾದ್‌ ಕಾಣಿಸುವುದಿಲ್ಲ!

‘ರಾಧಾ ರಮಣ’ ಧಾರಾವಾಹಿಯ ಆಕರ್ಷಣೆಯೂ ಆಗಿದ್ದ ಶ್ವೇತಾ ಆರ್‌.ಪ್ರಸಾದ್‌ಎರಡೂವರೆ ವರ್ಷಗಳಿಂದ ‘ರಾಧಾ ಮಿಸ್‌’ ಪಾತ್ರಕ್ಕೆ ಜೀವ ತುಂಬಿದ್ದರು. ಮಗಳು, ಟೀಚರ್‌, ಅಕ್ಕ,ಪತ್ನಿ, ಸೊಸೆ, ಅತ್ತಿಗೆ ಎಂದರೆ ಹೀಗಿರಬೇಕೆಂಬ ಮಟ್ಟಿಗೆ ವೀಕ್ಷಕರನ್ನು ಪ್ರಭಾವಿಸಿದ್ದ ‘ರಾಧಾ ಮಿಸ್‌’ ಪಾತ್ರದಲ್ಲಿ ಶ್ವೇತಾ ಅವರ ಅನುಪಸ್ಥಿತಿಯನ್ನು ಅರಗಿಸಿಕೊಳ್ಳಲು ಅವರ ಅಭಿಮಾನಿಗಳು ರೆಡಿಯಾಗಲೇಬೇಕು. ಅವರ ಜಾಗದಲ್ಲಿ ಹೊಸ ‘ರಾಧಾ ಮಿಸ್‌’ ಎಂಟ್ರಿ ಕೊಡಲಿದ್ದಾರೆ. ಆದರೆ,ಯಾರು ಆ ಹೊಸ ‘ರಾಧಾ ಮಿಸ್‌’ ಎನ್ನುವ ಗುಟ್ಟು ಸದ್ಯಕ್ಕೆ ಬಹಿರಂಗವಾಗಿಲ್ಲ. ಇನ್ನು ಕೆಲವೇ ಕೆಲವು ಎಪಿಸೋಡ್‌ಗಳಲ್ಲಿ ಮಾತ್ರ ಶ್ವೇತಾ ಅವರನ್ನು ‘ರಾಧಾ ಮಿಸ್‌’ ಪಾತ್ರದಲ್ಲಿ ವೀಕ್ಷಕರು ಕಣ್ತುಂಬಿಕೊಳ್ಳಬಹುದು.

ಈ ಸುದ್ದಿಯನ್ನು ನಟಿ ಶ್ವೇತಾ ಆರ್‌.ಪ್ರಸಾದ್‌ ಕೂಡ ಖಚಿತಪಡಿಸಿದ್ದು, ಅವರೊಂದಿಗೆ ‘ಸಿನಿಮಾ ಪುರವಣಿ’ ನಡೆಸಿದ ಮಾತುಕತೆಯ ವಿವರ ಇಲ್ಲಿದೆ.

ಈ ಸೀರಿಯಲ್‌ನಿಂದ ಏಕೆ ಹೊರಬಂದ್ರಿ? ಎಂದು ಅವರನ್ನು ಮಾತಿಗೆಳೆದಾಗ, ‘ನಾನು ರಾಧಾ ಪಾತ್ರಕ್ಕೆ ಸಹಿ ಮಾಡುವಾಗಲೇ ಒಂದು ವರ್ಷಕ್ಕೆ ಮಾತ್ರ ಒಪ್ಪಿಕೊಂಡಿದ್ದೆ. ಆದರೆ, ಎರಡೂವರೆ ವರ್ಷದಿಂದ 600 ಎಪಿಸೋಡ್‌ ಮಾಡಿದ್ದೇನೆ. ಧಾರಾವಾಹಿ ಇನ್ನೂ ಎರಡುಮೂರು ಅಥವಾ ಐದು ವರ್ಷವಾದರೂ ನಡೆಯಬಹುದು. ‘ಅಗ್ನಿಸಾಕ್ಷಿ’, ‘ಪುಟ್ಟಗೌರಿ’ ಸೀರಿಯಲ್‌ಗಳು ಇನ್ನೂ ವರ್ಷಾನುಗಟ್ಟಲೆ ನಡೆಯುತ್ತವೆ. ಇದು ಹಾಗೆಯೇ. ನನಗೆ ಅಷ್ಟು ವರ್ಷ ಒಂದೇ ಪಾತ್ರದಲ್ಲಿ ನಟಿಸಲು ಕಷ್ಟ. ಹಾಗಾಗಾಗಿ ಕೊನೆಗೆ ಗಟ್ಟಿ ನಿರ್ಧಾರ ತೆಗೆದುಕೊಂಡು, ಯಾವುದೇ ಮನಸ್ತಾಪ, ಅಸಮಾಧಾನ ಇಲ್ಲದೆ, ಒಳ್ಳೆಯ ರೀತಿಯಿಂದ ಹೊರ ಬಂದಿದ್ದೇನೆ’ ಎಂದುಕಾರಣ ಬಿಚ್ಚಿಟ್ಟರು.

‘ರಾಧಾ ಮಿಸ್‌’ ಪಾತ್ರ ನನಗೆ ತುಂಬಾ ಖುಷಿಕೊಟ್ಟ ಪಾತ್ರ. ಜೀ ಕನ್ನಡದ ‘ಶ್ರೀರಸ್ತು ಶುಭಮಸ್ತು’ ಸೀರಿಯಲ್‌ನಲ್ಲಿ ಜಾನ್ಹವಿ ಪಾತ್ರದಲ್ಲಿ ನಟಿಸಿದ್ದೆ. ಅದು ಕೂಡ ಇದೇ ರೀತಿಯ ಪಾತ್ರವಾಗಿತ್ತು. ಕಲರ್ಸ್‌ ಕನ್ನಡಕ್ಕೆ ಹೆಚ್ಚು ವೀಕ್ಷಕರಿರುವುದರಿಂದಾಗಿ ಹೆಚ್ಚು ಜನಪ್ರಿಯತೆ ಸಿಕ್ಕಿತು. ಹೆಚ್ಚು ಜನರಿಗೆ ಪರಿಚಿತಳಾದೆ’ ಎಂದು ಮಾತು ವಿಸ್ತರಿಸಿದರು.

‘ರಾಧಾ ಮಿಸ್‌’ ಪಾತ್ರದ ಪರಕಾಯ ಪ್ರವೇಶ ಮಾಡಿದವರಿಗೆ ಆ ಪಾತ್ರವನ್ನು ಬೇರೆಯವರಿಗೆ ಬಿಟ್ಟುಕೊಡುವಾಗಬೇಸರವಾಗಲಿಲ್ಲವೇ ಎಂದರೆ, ‘ಜನಪ್ರಿಯತೆ ಸಿಕ್ಕಿದ ತಕ್ಷಣ ಅದಕ್ಕೆ ಅಂಟಿಕೊಂಡರೆ, ಹೊಸದನ್ನು ಮಾಡಲು ಹೆದರಿಕೆ ಆಗುವುದು ಸಹಜ. ಆದರೆ, ನಾನು ಆ ರೀತಿ ಅಂಟಿಕೊಂಡು ಕೂರುವ ಮನಸ್ಥಿತಿಯವಳ್ಳ. ಮುಂದೆ ಒಳ್ಳೆಯದು ಅಥವಾ ಕೆಟ್ಟದ್ದು ಏನೇ ಆಗಬಹುದು, ಅದು ಬೇರೆ ವಿಷಯ. ಆದರೆ, ಚೇಂಜ್‌ ಬಯಸದಿದ್ದರೆ ಹೊಸತನಕ್ಕೆ ನಾವು ಪ್ರಯತ್ನಿಸದಂತೆ ಆಗುವುದಿಲ್ಲ. ಆಪರ್ಚುನಿಟಿಗಳೂ ಮಿಸ್‌ ಆಗುತ್ತವೆ. ಒಬ್ಬರು ಜನಪ್ರಿಯತೆಯ ಉತ್ತುಂಗಕ್ಕೆ ತಲುಪಿದಂತೆ ಅಲ್ಲೇ ಇರಲು ಸಾಧ್ಯವಿಲ್ಲ. ಒಮ್ಮೆ ಕೆಳಗೆ ಬರಲೇಬೇಕು.ನಾವು ಯಾವುದಕ್ಕೂ ಅಡಿಕ್ಟ್‌ ಆಗಬಾರದು. ಯಾವುದೂ ಇಲ್ಲದೆ ಬದುಕಬೇಕು. ಅದೇ ಬದುಕಿಗೆ ದೊಡ್ಡ ಪಾಠ. ನಾನು ಪ್ರಾಕ್ಟಿಕಲ್‌ ಆಗಿ ಇದ್ದೀನಿ. ನೆಮ್ಮದಿಯಾಗಿ ಇರ್ತೀನಿ. ನೆಮ್ಮದಿಯಾಗಿ ಗಂಡನ ಜತೆಗೆ ಇರ್ತೀನಿ’ ಎನ್ನುವುದು ಶ್ವೇತಾ ಅವರ ಮಾತು.

‘ರಾಧಾರಮಣ ಧಾರಾವಾಹಿಯ ನಾಯಕ ‘ರಮಣ್‌’ ಪೆದ್ದ ಎಷ್ಟು ಹೇಳಿದರೂ ಅಷ್ಟೆ ಬದಲಾಗುವುದಿಲ್ಲವೆಂದು ಬೇಸರದಿಂದ ಬಿಟ್ಟು ಹೋಗ್ತಾ ಇದಿರಾ’ ಎಂದು ಕಾಲೆಳೆದರೆ, ಅಷ್ಟೇ ನಗುತ್ತಾ ಉತ್ತರಿಸಿದ ಶ್ವೇತಾ ‘ಖಂಡಿತಾ ಇಲ್ಲ, ರಮಣ್‌ಗೆ ಸ್ವಂತ ಬುದ್ಧಿ ಇದೆ. ಸ್ವಲ್ಪ ಬುದ್ಧಿಯನ್ನೂ ಹೇಳಿದ್ದೀನಿ. ಕಣ್ಬಿಟ್ಟು ನೋಡು ಅಂಥಾ ಒಳ್ಳೆಯವನನ್ನಾಗಿ ಮಾಡಿದ್ದೀನಿ. ನಾನು ಇಲ್ಲದೆಯೇ ಅವರು ಪಾತ್ರ ಮಾಡಿಕೊಂಡು ಹೋಗುತ್ತಾರೆ.ಯಾವುದೇ ನಟ, ನಟಿಯಾಗಲಿ ಅವರು ಅಭಿನಯಿಸುವ ಪಾತ್ರಕ್ಕೆ ಕೊನೆ ಇದ್ದೇ ಇರುತ್ತದೆ. ಅದು ಸ್ವಲ್ಪ ಮುಂದೆ ಇತ್ತು, ಆದರೆ, ನನಗೆ ಈಗಲೇ ಬಂದಿದೆ ಅಷ್ಟೆ. ವೀಕ್ಷಕರು ಸ್ವಲ್ಪ ದಿನ ಬೇಸರ ಮಾಡಿಕೊಳ್ಳುತ್ತಾರೆ. ದಿನ ಕಳೆದಂತೆ ಆ ಜಾಗದಲ್ಲಿ ಬೇರೆಯವರನ್ನು ಸ್ವೀಕರಿಸುತ್ತಾರೆ.

ರಾಧಾ ಮಿಸ್‌ ಪಾತ್ರದಲ್ಲಿ ವೀಕ್ಷಕರು ನನ್ನನ್ನು ಮಿಸ್‌ ಮಾಡಿಕೊಳ್ಳಬಹುದು. ಧಾರಾವಾಹಿಯ ಇಡೀ ತಂಡವಂತೂ ನನ್ನನ್ನು ಮಿಸ್‌ ಮಾಡಿಕೊಳ್ಳುತ್ತಿದೆ. ನಾನೂ ಅಷ್ಟೇ ಅವರನ್ನು ತುಂಬಾ ಮಿಸ್‌ ಮಾಡಿಕೊಳ್ತಾ ಇದಿನಿ.ಒಂದು ಕುಟುಂಬದಂತೆ ಇದ್ದೆವು. ‘ರಾಧಾ ಮಿಸ್‌ ಇನ್ನಿಲ್ಲ’ ಎನ್ನುವ ಗಾಸಿಪ್‌ ಬಗ್ಗೆಯೂ ಮಾತನಾಡಿದ ಶ್ವೇತಾ, ‘ಕೆಲವರು ಸೋಷಿಯಲ್‌ ಮೀಡಿಯಾದಲ್ಲಿ ಆ ರೀತಿ ಗಾಳಿ ಸುದ್ದಿ ಹರಿಬಿಟ್ಟರು. ಪರಿಚಯದವರು, ಹತ್ತಿರದವರು ಸ್ವಲ್ಪ ಪ್ಯಾನಿಕ್‌ ಆದರು. ನಾನು ಇನ್ಸ್ಟಾಗ್ರಾಮ್‌ನಲ್ಲಿ ಆ್ಯಕ್ಟಿವ್‌ ಆಗಿರುವುದನ್ನು ನೋಡಿದ ಮೇಲೆ ಅವರಿಗೆಲ್ಲ ಅದು ರೂಮರ್‌ ಎನ್ನುವುದು ಗೊತ್ತಾಗಿದೆ’ ಎಂದರು.

ಅವಕಾಶಗಳ ಬಗ್ಗೆ ಕೇಳಿದಾಗ, ‘ಕಣ್ಣೆದುರಿಗೆ ಸಾಕಷ್ಟು ಅವಕಾಶಗಳು ಕಾಣಿಸುತ್ತಿವೆ. ಇಷ್ಟು ದಿನ ಆಚೆಈಚೆ ನೋಡದೆ ಬರೀ ಸೀರಿಯಲ್‌ ಮಾಡಿಕೊಂಡು ಬಂದಿದ್ದೆ. ಈಗ ಒಂದೇ ಬಾರಿಗೆ ಫ್ರೀಡಂ ಸಿಕ್ಕಿದಂತಾಗಿದೆ. ಎಕ್ಸೈಟ್‌ಮೆಂಟ್‌ಗೆ ಒಳಗಾಗದೆ ಸ್ವಲ್ಪ ದಿನ ಆರಾಮವಾಗಿದ್ದು, ಒಳ್ಳೆಯ ನಿರ್ಧಾರದೊಂದಿಗೆ ಮುಂದೆ ಹೋಗಬೇಕೆಂದುಕೊಂಡಿದ್ದೇನೆ. ಒಳ್ಳೆಯ ಆಫರ್‌ ಎಲ್ಲಿ ಬರುತ್ತದೆಯೋ ಅಲ್ಲಿ ನಟಿಸುತ್ತೇನೆ. ಅದು ಸಿನಿಮಾ ಆಗಿರಬಹುದು ಅಥವಾ ಸೀರಿಯಲ್ಲೇ ಆಗಿರಬಹುದು. ಸೀರಿಯಲ್‌ನಲ್ಲಿ ನಟಿಸಲಾರೆ ಎನ್ನುವುದಿಲ್ಲ.ಸಿನಿಮಾದಲ್ಲಿ ಸಿಗದೇ ಇರುವಷ್ಟು ಜನಪ್ರಿಯತೆ ಇಂದು ಸೀರಿಯಲ್‌ಗಳಲ್ಲೇ‌‌ಸಿಗುತ್ತಿದೆ.ನನಗೆ ಆಸಕ್ತಿ ಇರುವಂತಹ ಪಾತ್ರಗಳು ಸಿಕ್ಕಿದರೆ ಸಿನಿಮಾ ಅಥವಾ ಸೀರಿಯಲ್‌ನಲ್ಲಿ ನನ್ನ ನಟನೆ ನೋಡಬಹುದು ಎಂದರು ಶ್ವೇತಾ.

ವೀಕ್ಷಕರು, ಅಭಿಮಾನಿಗಳು ‘ರಾಧಾ ಮಿಸ್‌’ ಅವರನ್ನು ಮತ್ತಿನ್ನೆಲ್ಲಿ ಕಾಣಬಹುದು ಎಂದು ಕೇಳಿದರೆ, ‘ಸೋಷಿಯಲ್‌ ಮೀಡಿಯಾದಲ್ಲಂತೂ ಶ್ವೇತಾ ಆಗಿ, ಆರ್‌.ಜೆ.ಪ್ರದೀಪನ ಹೆಂಡ್ತಿಯಾಗಿ ಇದ್ದೇ ಇರುತ್ತೇನೆ. ಸದ್ಯಕ್ಕೆ ಅವಕಾಶ ಯಾವುದೂ ಇಲ್ಲ. ನಾನು ಆರ್ಕಿಟೆಕ್ಟರ್‌. ಐದು ವರ್ಷಗಳಿಂದ ನಿರಂತರ ಅಭಿನಯಿಸುತ್ತಿದ್ದೇನೆ. ಈಗ ಸ್ವಲ್ಪ ಬ್ರೇಕ್‌ ತೆಗೆದುಕೊಂಡಿದ್ದೇನೆ ಅಷ್ಟೇ’ ಎಂದು ಮಾತು ಮುಗಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT