ಮಂಗಳವಾರ, ಮೇ 18, 2021
30 °C

ಗಿಣಿರಾಮನ ತಂಗಿ: ಕಾವೇರಿ ಬಾಗಲಕೋಟೆ ಸಂದರ್ಶನ

ರೇಷ್ಮಾ Updated:

ಅಕ್ಷರ ಗಾತ್ರ : | |

Prajavani

ಬಾಲ್ಯದಿಂದಲೂ ನಟನೆಯ ಕನಸು ಹೊತ್ತು ಸಾಗಿದ್ದ ಬಾಗಲಕೋಟೆಯ ಹುಡುಗಿಗೆ ಅವಕಾಶ ಅರಸಿ ಬಂದಿತ್ತು. ಬಂದ ಅವಕಾಶವನ್ನು ತ್ಯಜಿಸದ ಆಕೆ ಇಂದು ಕರ್ನಾಟಕದ ತಂಗಿಯಾಗಿದ್ದಾಳೆ. ಮೊದಲ ಧಾರಾವಾಹಿಯಲ್ಲೇ ‘ಬೆಸ್ಟ್ ಸಿಸ್ಟರ್‌’ ಪ್ರಶಸ್ತಿ ಪಡೆದಿರುವ ಈ ಹುಡುಗಿ ಕಲರ್ಸ್‌ ಕನ್ನಡ ವಾಹಿನಿಯ ‘ಗಿಣಿರಾಮ’ ಧಾರಾವಾಹಿಯ ನಾಯಕನ ತಂಗಿ ಸೀಮಾ. ಈಕೆಯ ನಿಜನಾಮಧೇಯ ಕಾವೇರಿ.

ಈಕೆ ಶಾಲಾ ದಿನಗಳಲ್ಲಿ ಪ್ರತಿಭಾ ಕಾರಂಜಿಯಂತಹ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ನಟನೆಯ ಆಸೆಗೆ ನೀರೆರೆದು ಪೋಷಿಸಿದವರು. ಬಿ.ಕಾಂ. ಮುಗಿಸಿದ್ದ ಇವರಿಗೆ ಗಿಣಿರಾಮ ಧಾರಾವಾಹಿಯಲ್ಲಿನ ಆಡಿಷನ್‌ ಬಗ್ಗೆ ತಿಳಿಯಿತು. ಆಡಿಷನ್‌ ನೀಡಿ ಆಯ್ಕೆಯಾದ ಕಾವೇರಿ ಈಗ ಸೀಮಾಳಾಗಿಯೇ ಮನೆಮಾತು. ಈಕೆ ತಮ್ಮ ಕಿರುತೆರೆ ಪಯಣದ ಕುರಿತು ‘ಸಿನಿಮಾ ಪುರವಣಿ’ ಜೊತೆ ಮಾತನಾಡಿದ್ದಾರೆ.

ಗಿಣಿರಾಮ ಧಾರಾವಾಹಿ ಹಾಗೂ ಪಾತ್ರದ ಬಗ್ಗೆ

ಇದು ಉತ್ತರ ಕರ್ನಾಟಕ ಭಾಷಾ ಸೊಗಡಿನ ಧಾರಾವಾಹಿ. ನಾನು ಆ ಕಡೆಯವಳಾದ ಕಾರಣ ನನಗೆ ಭಾಷೆಯ ಸಮಸ್ಯೆ ಕಾಡಿರಲಿಲ್ಲ. ಧಾರಾವಾಹಿಯಲ್ಲಿ ನನ್ನದು ಸೀಮಾ ಎಂಬ ಮುಗ್ಧ ಕಾಲೇಜು ಹುಡುಗಿಯ ಪಾತ್ರ. ಅಣ್ಣನನ್ನು ಅತಿಯಾಗಿ ಪ್ರೀತಿಸುವ, ಅತ್ತಿಗೆಯನ್ನು ಸ್ನೇಹಿತೆಯಂತೆ ನೋಡುವ ಅಪ್ಪನ ಮುದ್ದಿನ ಮಗಳು ಸೀಮಾ.

ಪಾತ್ರ ತಂದುಕೊಟ್ಟ ಯಶಸ್ಸು

ಸೀಮಾ ಪಾತ್ರ ನನ್ನ ನಟನಾ ಬದುಕಿನ ಅಡಿಪಾಯ. ಇದರಿಂದಲೇ ನಾನು ಇಷ್ಟರಮಟ್ಟಿಗೆ ಖ್ಯಾತಿ ಗಳಿಸಲು ಸಾಧ್ಯವಾಗಿದ್ದು. ಧಾರಾವಾಹಿ ಆರಂಭವಾಗಿ ನಾಲ್ಕೇ ತಿಂಗಳಲ್ಲಿ ನನಗೆ ಪ್ರಶಸ್ತಿ ಕೂಡ ಸಿಕ್ಕಿತ್ತು. ನನ್ನ ವೈಯಕ್ತಿಕ ಜೀವನಕ್ಕೂ ಪಾತ್ರಕ್ಕೂ ಸಾಮ್ಯತೆ ಇರುವ ಕಾರಣ ಇನ್ನಷ್ಟು ಚೆನ್ನಾಗಿ ಪಾತ್ರಕ್ಕೆ ಜೀವ ತುಂಬಲು ಸಾಧ್ಯವಾಗಿತ್ತು. ಒಟ್ಟಾರೆ ಈ ಪಾತ್ರದ ಬಗ್ಗೆ ತುಂಬಾನೇ ಖುಷಿ ಇದೆ.

ಪರಭಾಷೆಯಿಂದಲೂ ಅವಕಾಶ

ನನಗೆ ತೆಲುಗು ಕಿರುತೆರೆ ಕ್ಷೇತ್ರದಿಂದಲೂ ಅವಕಾಶ ಬಂದಿದೆ. ಆದರೆ ಸದ್ಯ ಕನ್ನಡದಲ್ಲೇ ನೆಲೆ ನಿಲ್ಲಬೇಕು ಎಂಬ ಆಶಯವಿದೆ. ಹಳ್ಳಿ ಹುಡುಗಿ ಪಾತ್ರದಲ್ಲಿ ನಟಿಸುವ ಆಸೆ ಇದೆ. ಸಿನಿಮಾಗಳಲ್ಲಿ ಅವಕಾಶ ಸಿಕ್ಕರೆ ಖಂಡಿತ ನಟಿಸುತ್ತೇನೆ.

ಜನರ ಪ್ರೀತಿಗೆ ಅಭಾರಿ

ಸೀಮಾ ಪಾತ್ರದಲ್ಲಿ ನಟಿಸಲು ಆರಂಭಿಸಿದ ಮೇಲೆ ಜನರು ನನ್ನನ್ನು ಎಲ್ಲಿ ನೋಡಿದರೂ ‘ನೀವು ಸೀಮಾ ಅಲ್ವಾ? ತುಂಬಾ ಚೆನ್ನಾಗಿ ನಟಿಸ್ತೀರಿ, ನಮಗೆ ನಿಮ್ಮ ನಟನೆ ತುಂಬಾ ಇಷ್ಟವಾಗುತ್ತದೆ’ ಎನ್ನುತ್ತಾರೆ. ಎಲ್ಲೋ ಬಾಗಲಕೋಟೆಯ ಹಳ್ಳಿ ಹುಡುಗಿ ಇಷ್ಟರ ಮಟ್ಟಿಗೆ ಹೆಸರು ಮಾಡುವಂತೆ ಮಾಡಿದ್ದು ಈ ಪಾತ್ರ ಹಾಗೂ ಜನರು. ಹಾಗಾಗಿ ಜನರಿಗೆ ನಾನು ಅಭಾರಿ.

ಧಾರಾವಾಹಿ ತಂಡದ ಸಹಕಾರ

ನಾನು ನಟಿಸಲು ಹೋಗುತ್ತೇನೆ ಎಂದಾಗ ಮನೆಯಲ್ಲಿ ನಮ್ಮ ತಾಯಿ ಹಾಗೂ ಅಕ್ಕ ತುಂಬಾನೇ ಸಹಕಾರ ನೀಡಿದ್ದರು. ಈಗ ಧಾರಾವಾಹಿ ತಂಡವೂ ನನಗೆ ಎರಡನೇ ಮನೆಯಂತಾಗಿದೆ. ತಂಡದವರೂ ನನಗೆ ನಟನೆ ಕಲಿಸುತ್ತಾರೆ. ನನ್ನಳೊಗಿನ ನಟಿಯನ್ನು ಹೊರ ತರುವಲ್ಲಿ ನಮ್ಮ ನಿರ್ದೇಶಕರ ಪಾತ್ರವೂ ಹೆಚ್ಚಿದೆ. ಒಟ್ಟಾರೆ ಎಲ್ಲರ ಸಹಕಾರದಿಂದ ನಾನು ಇಂದು ನಟಿಯಾಗಿದ್ದೇನೆ. v

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು