ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮ್ಮನ ಕನಸು ನನಸಾದ ಕ್ಷಣ; ಸಿನಿಮಾ ಪುರವಣಿ ಜತೆ ಕಿರುತೆರೆ ನಟಿ ದುರ್ಗಾಶ್ರೀ ಮಾತು

Last Updated 25 ಮಾರ್ಚ್ 2021, 19:30 IST
ಅಕ್ಷರ ಗಾತ್ರ

ಕನ್ನಡ ಚಿತ್ರರಂಗದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ, ಡಾ.ರಾಜ್‌ಕುಮಾರ್‌ ಕುಟುಂಬದ ಪೂರ್ಣಿಮಾ ಪ್ರೊಡಕ್ಷನ್ಸ್‌ ಲಾಂಛನದಡಿ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ ‘ನೇತ್ರಾವತಿ’ ಧಾರಾವಾಹಿ ಮುಖಾಂತರ ಕನ್ನಡ ಕಿರುತೆರೆಗೆ ದುರ್ಗಾಶ್ರೀ ಕಾಲಿಟ್ಟಿದ್ದಾರೆ. ಪ್ರಸ್ತುತ ಬಿಕಾಂ ಮೊದಲ ಸೆಮಿಸ್ಟರ್‌ನಲ್ಲಿ ಓದುತ್ತಿರುವ ಇವರು ಸಣ್ಣವಯಸ್ಸಿನಲ್ಲೇ ಧಾರಾವಾಹಿಯ ಮುಖ್ಯಭೂಮಿಕೆಯ ಜವಾಬ್ದಾರಿ ಹೊತ್ತಿದ್ದಾರೆ. ಈ ಪಯಣದ ಕುರಿತು ಅವರು ‘ಸಿನಿಮಾ ಪುರವಣಿ’ ಜೊತೆಗೆ ಅನುಭವ ಹಂಚಿಕೊಂಡಿದ್ದಾರೆ.

ಸಣ್ಣ ಪ್ರಾಯದಲ್ಲೇ ದೊಡ್ಡ ಜವಾಬ್ದಾರಿ
ನಾನು ಹುಟ್ಟಿದ್ದು ಬೆಳೆದಿದ್ದು ಬೆಂಗಳೂರಿನಲ್ಲೇ. ಜಕ್ಕೂರು ನಮ್ಮ ಊರು. ಸಹಕಾರ ನಗರದಲ್ಲಿರುವ ಕಾವೇರಿ ಪಬ್ಲಿಕ್‌ ಸ್ಕೂಲ್‌ನಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಮುಗಿಸಿ, ಯಲಹಂಕ ನಾಗಾರ್ಜುನ ಪಿಯು ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣ ಮುಗಿಸಿದೆ. ಪ್ರಸ್ತುತ ಹೆಸರಘಟ್ಟದ ಆಚಾರ್ಯ ಇನ್‌ಸ್ಟಿಟ್ಯೂಟ್‌ನಲ್ಲಿ ಮೊದಲನೇ ವರ್ಷದ ಬಿಕಾಂ ಓದುತ್ತಿದ್ದೇನೆ. ಈ ಸಂದರ್ಭದಲ್ಲೇ ಒದಗಿ ಬಂದ ಅವಕಾಶ ‘ನೇತ್ರಾವತಿ’.

ಮೂಲತಃ ನಾನು ನೃತ್ಯಗಾರ್ತಿ.ಕಳೆದ 9 ವರ್ಷದಿಂದ ಅನುರಾಧ ವೆಂಕಟರಮಣ ಅವರ ಬಳಿ ಭರತನಾಟ್ಯವನ್ನು ಕಲಿಯುತ್ತಿದ್ದೇನೆ. ನೃತ್ಯದಲ್ಲೇ ಏನಾದರೂ ಸಾಧನೆ ಮಾಡಬೇಕು ಎನ್ನುವ ಕನಸಿತ್ತು. ಅಮ್ಮನ ಕನಸೂ ಇದೇ ಆಗಿತ್ತು. ಜೊತೆಗೆ ನನ್ನನ್ನು ನಟಿಯಾಗಿ ನೋಡಬೇಕು ಎನ್ನುವ ಆಸೆಯೂ ಅಮ್ಮನಿಗಿತ್ತು. ಇದನ್ನು ಸವಾಲಾಗಿ ನಾನೂ ಸ್ವೀಕರಿಸಿದ್ದೆ. ಹಲವು ಬಾರಿ ಆಡಿಷನ್‌ ನೀಡಿದ್ದೆ. ಇತ್ತೀಚೆಗೆ ತಂಗಿ ಪಾತ್ರವೊಂದಕ್ಕೆ ಆಡಿಷನ್‌ ಇದೆ ಎಂದು ಒಬ್ಬರು ತಿಳಿಸಿದ್ದರು. ಆ ಪಾತ್ರಕ್ಕೆ ಸಿದ್ಧತೆ ನಡೆಸಿ ತೆರಳಿದ್ದೆ. ನನ್ನ ನಟನೆಯನ್ನು ಗುರುತಿಸಿ ಆಡಿಷನ್‌ ಬಳಿಕ ಮತ್ತೆ ಕರೆದರು. ಎರಡನೇ ಆಡಿಷನ್‌ ನಡೆಸಿ, ತಂಗಿ ಪಾತ್ರದ ಬದಲು ಧಾರಾವಾಹಿಯಲ್ಲಿನ ಮುಖ್ಯಪಾತ್ರವನ್ನೇ ನನಗೆ ನೀಡಿದರು.

ನಟನೆಯ ಸವಾಲು
ನೃತ್ಯದಲ್ಲಷ್ಟೇ ನನಗೆ ಆಸಕ್ತಿ ಇತ್ತು. ನಟನೆಯ ಗಂಧಗಾಳಿ ನನಗಿರಲಿಲ್ಲ. ಮೊದಲ ಬಾರಿ ಕ್ಯಾಮೆರಾ ಮುಂದೆ ಬಂದಾಗ ಹೆದರಿಕೆ ಆಗಿತ್ತು. ಈಗಾಗಲೇ ಕಲಿತ ನೃತ್ಯವನ್ನು ಬಹಳ ಸುಲಭವಾಗಿ ವೇದಿಕೆ ಮೇಲೆ ಮಾಡಬಹುದು. ಆದರೆ ಪಾತ್ರಕ್ಕೆ ಜೀವ ತುಂಬುವುದು ಕಷ್ಟವಾಗಿತ್ತು. ಈ ಸಂದರ್ಭದಲ್ಲಿ ನಿರ್ದೇಶಕರಾದ ಸಂತೋಷ್‌ ಗೌಡ ಅವರು ಪ್ರತಿಹೆಜ್ಜೆಯಲ್ಲೂ ನನಗೆ ಮಾರ್ಗದರ್ಶನ ನೀಡಿದರು.

ಮೊದಲ ಬಾರಿ ಆಡಿಷನ್‌ ನೀಡಲು ತೆರಳುವಾಗ ಯಾವ ಪ್ರೊಡಕ್ಷನ್ಸ್‌ ಎಂದು ನನಗೆ ತಿಳಿದಿರಲಿಲ್ಲ. ವಿಷಯ ತಿಳಿದಾಗ ನನ್ನಷ್ಟು ಖುಷಿಪಟ್ಟವರು ಯಾರೂ ಇಲ್ಲ. ಪುನೀತ್‌ ರಾಜ್‌ಕುಮಾರ್‌ ಅವರ ಅಭಿಮಾನಿ ನಾನು. ಅವರ ಡ್ಯಾನ್ಸ್‌ಗೆ ನಾನು ಫ್ಯಾನ್‌. ಅವರ ಪ್ರೊಡಕ್ಷನ್ಸ್‌ನಲ್ಲಿ ಕಾರ್ಯನಿರ್ವಹಿಸಿದಕ್ಕೆ ಜೀವನ ಸಾರ್ಥಕ ಎನಿಸಿತು. ಪುನೀತ್‌ ರಾಜ್‌ಕುಮಾರ್‌ ಅವರು ಪ್ರೊಮೊದಲ್ಲಿ ನಮ್ಮ ಧಾರಾವಾಹಿ ಹೆಸರು ಹೇಳಿದಾಗ, ನನ್ನ ಪಾತ್ರದ ಬಗ್ಗೆ ವಿವರಿಸಿದಾಗ ಆದ ಖುಷಿಗೆ ಪಾರವೇ ಇಲ್ಲ.

ಪಾತ್ರದ ಬಗ್ಗೆ
ನೇತ್ರಾವತಿ ಮಂಜುನಾಥನ ಪರಮಭಕ್ತೆ. ಆಶಾ ಕಾರ್ಯಕರ್ತೆಯ ಪಾತ್ರ ನನ್ನದು. ಅವಳಿಗೆ ಅಪ್ಪ ಇಲ್ಲ. ಆದರೆ ಅಪ್ಪ ಇದ್ದಾರೆ ಎನ್ನುವ ನಂಬಿಕೆ ಇದೆ. ಬೇರೆಯವರ ಕಷ್ಟಕ್ಕೆ ಸ್ಪಂದಿಸುತ್ತಾ, ತನ್ನೊಳಗೆ ನೋವಿದ್ದರೂ ತೋರಿಸಿಕೊಳ್ಳದೇ ಇತರರಿಗೆ ನಗು ಹಂಚುವ ಪಾತ್ರ ಇದು. ಚಿತ್ರೀಕರಣದ ಸಂದರ್ಭದಲ್ಲಿ ನಟನೆ ನನಗೆ ಹೊಸತಾದರೂ, ಸಹಕಲಾವಿದರು ನನಗೆ ಬಹಳ ಹುಮ್ಮಸ್ಸು ಹಾಗೂ ಧೈರ್ಯ ನೀಡಿದರು. ಈ ಧಾರಾವಾಹಿಗಾಗಿ ನಾನು ‘ನದಿ’ಯ ಟ್ಯಾಟೂ ಹಾಕಿಸಿಕೊಂಡೆ. ಕಥೆಯಲ್ಲಿ ಮುಖ್ಯ ತಿರುವು ಇರುವುದೇ ಇದರಿಂದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT