ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರಾವಾಹಿ ಚಿತ್ರೀಕರಣ: ಆ್ಯಕ್ಷನ್‌... ಕಟ್‌... ಹ್ಯಾಂಡ್‌ವಾಶ್‌!

Last Updated 5 ಜೂನ್ 2020, 4:12 IST
ಅಕ್ಷರ ಗಾತ್ರ

ನಿರ್ದೇಶಕರು‌ ‘ಕಟ್’‌ ಎನ್ನುತ್ತಿದ್ದಂತೆ ಎಲ್ಲರೂ ಸ್ಯಾನಿಟೈಸರ್‌ ಎದುರು ಪ್ರತ್ಯಕ್ಷವಾಗುತ್ತಾರೆ. ಸೆಟ್‌ ಒಳಗೆ ಹೋಗಬೇಕಾದರೆ ಥರ್ಮಲ್‌ ಸ್ಕ್ರೀನಿಂಗ್‌ಗೆ ಒಳಗಾಗುತ್ತಾರೆ. ಟೆಂಪರೇಚರ್‌ ಚೆಕ್ ಮಾಡಿಸುವುದು ಕಡ್ಡಾಯ. ಹರಟೆ, ಕೀಟಲೆ ಇಲ್ಲವೇ ಇಲ್ಲ. ಇದು ಧಾರಾವಾಹಿ ಸೆಟ್‌ಗಳ ಈಗಿನ ನೋಟ.

ಈಗ ಬಹುತೇಕ ಎಲ್ಲಾ ಧಾರಾವಾಹಿಗಳ ಚಿತ್ರೀಕರಣ ಆರಂಭಗೊಂಡಿವೆ. ಕೊರೊನಾ ಸೋಂಕಿನ ಭಯದಿಂದಾಗಿಸೆಟ್‌ನಲ್ಲಿ ತುಂಬಾ ಬದಲಾವಣೆಗಳನ್ನು ಮಾಡಿಕೊಂಡಿದ್ದಾರೆ.ತಿಂಗಳಿಗೆ 10–12 ದಿನ ಶೂಟಿಂಗ್‌, ಕಡಿಮೆ ಕಲಾವಿದರು, ಅಂತರ ಕಾಯ್ದುಕೊಳ್ಳುವುದು, ಮಾಸ್ಕ್‌, ಸ್ಯಾನಿಟೈಸರ್‌ ಬಳಕೆ – ಇಂತಹ ಕೆಲವೊಂದು ನಿಯಮಗಳನ್ನು ಪಾಲಿಸುತ್ತಿದ್ದಾರೆ. ಚಿತ್ರೀಕರಣ, ಧಾರಾವಾಹಿ ಕತೆಯಲ್ಲಿ ಬದಲಾವಣೆ ಮಾಡಿಕೊಂಡಿದ್ದಾರೆ. ಇನ್ನು ಕೈ ಕುಲುಕುವುದು, ಅಪ್ಪಿಕೊಳ್ಳುವಂತಹ ದೃಶ್ಯಗಳು ಸೆಟ್‌ನಲ್ಲೂ ಇಲ್ಲವೇ ಇಲ್ಲ.

‘ಈಗ ತಿಂಗಳಿಗೆ 15 ದಿನ ಶೂಟಿಂಗ್‌ ಪ್ಲಾನ್ ಮಾಡಿದ್ದಾರೆ. ಪ್ರತಿ ಎರಡು ಗಂಟೆಗೊಮ್ಮೆ ಟೆಂಪರೇಚರ್‌ ಪರೀಕ್ಷೆ, ಆಗಾಗ ಹ್ಯಾಂಡ್ ಸ್ಯಾನಿಟೈಸರ್‌ ಬಳಕೆ ಮಾಡುತ್ತಿರುತ್ತೇವೆ. ಈಗ ಯಾವುದನ್ನೂ ಹಗುರವಾಗಿ ತೆಗೆದುಕೊಳ್ಳುವಂತಿಲ್ಲ. ಮೊದಲು ಸೆಟ್‌ನಲ್ಲಿ ಬಿಂದಾಸ್‌ ಆಗಿರುತ್ತಿದ್ದೆವು. ಈಗ ನಿರ್ದೇಶಕರೇ ಹತ್ತಿರ ಬಂದರೂ ದೂರ ಸರಿದು ನಿಂತುಬಿಡುವಷ್ಟು ಕೊರೊನಾ ಭಯ ಹುಟ್ಟಿಸಿದೆ’ ಎಂದು ತಮ್ಮ ಅನುಭವವನ್ನು ಬಿಚ್ಚಿಟ್ಟರು ‘ಮುದ್ದು ಲಕ್ಷ್ಮೀ’ ಧಾರಾವಾಹಿಯ ನಾಯಕ ಚರಿತ್‌ ಬಾಲಪ್ಪ.

ಶೂಟಿಂಗ್ ಸ್ಥಳದಲ್ಲಿ ಸಿಬ್ಬಂದಿಯನ್ನೂ ಕಡಿಮೆ ಮಾಡಿದ್ದಾರಂತೆ. ಮೊದಲು ಕಲಾವಿದರಿಗೊಬ್ಬರಂತೆ ಟಚಪ್‌‌ ಮ್ಯಾನ್‌, ಲೈಟ್‌ಬಾಯ್‌ಗಳಿರುತ್ತಿದ್ದರು. ನಿರ್ದೇಶಕರ ಜೊತೆ ಎರಡು ಮೂರು ಮಂದಿ ಸಹಾಯಕರಿರುತ್ತಿದ್ದರು. ಈಗ ಒಬ್ಬರು ನಿರ್ದೇಶಕ, ಮತ್ತೊಬ್ಬ ಸಹಾಯಕ ನಿರ್ದೇಶಕ, ಒಬ್ಬರೇ ಮೇಕಪ್‌ಮ್ಯಾನ್‌, ಟಚಪ್‌ ಮ್ಯಾನ್‌. ಅಗತ್ಯ ಕಲಾವಿದರನ್ನು ಮಾತ್ರ ಚಿತ್ರೀಕರಣಕ್ಕೆ ಕರೆಯುತ್ತಿದ್ದಾರೆ. ಸೆಟ್‌ನಲ್ಲಿ ತಂತ್ರಜ್ಞರು, ಕಲಾವಿದರು ಸೇರಿ 20 ಜನ ಮೀರುವುದಿಲ್ಲ. ಶೂಟಿಂಗ್‌ ಆರಂಭಕ್ಕೂ ಮುನ್ನ ಚಿತ್ರೀಕರಣ ನಡೆಸುವ ಮನೆ ಅಥವಾ ಆಫೀಸ್‌ಗಳನ್ನು ಕಡ್ಡಾಯವಾಗಿ ಸ್ಯಾನಿಟೈಸ್‌ ಮಾಡಲಾಗುತ್ತದೆ. ಕ್ಯಾಮೆರಾಮನ್‌, ತಂತ್ರಜ್ಞರು ಮಾಸ್ಕ್‌, ಗ್ಲೌಸ್‌ ಜೊತೆ ಫೇಸ್‌ಶೀಲ್ಡ್‌ ಕೂಡ ಬಳಸುತ್ತಾರಂತೆ.

‘ಈಗ ನಾನೇ ಮೇಕಪ್‌ ಮಾಡಿಕೊಳ್ಳುತ್ತಿದ್ದೇನೆ. ಮೇಕಪ್‌ ಬಳಿಕ ಮಾಸ್ಕ್‌ ಹಾಕಿಕೊಳ್ಳಲಾಗುವುದಿಲ್ಲ. ಹಾಗಾಗಿ ಎಲ್ಲರಿಂದ ಅಂತರ ಕಾಯ್ದುಕೊಳ್ಳುತ್ತೇನೆ’ ಎನ್ನುತ್ತಾರೆ ‘ನನ್ನರಸಿ ರಾಧೆ’ ಧಾರಾವಾಹಿಯ ನಾಯಕಿ ಕೌಸ್ತುಭಮಣಿ‌.

‘ನಿಧಾನವಾಗಿ ಚಿತ್ರೀಕರಣ ಮಾಡುತ್ತಾರೆ. ಪ್ರತಿ ಎರಡು ಗಂಟೆಗೊಮ್ಮೆ ಟೆಂಪರೇಚರ್‌ ಚೆಕ್‌ ಮಾಡಿ ವಾಹಿನಿಯವರಿಗೆ ರಿಪೋರ್ಟ್‌ ಕೊಡುತ್ತಾರೆ. ಬಾತ್‌ರೂಮ್‌, ಶೂಟಿಂಗ್‌ ಲೊಕೇಷನ್‌, ಪೀಠೋಪಕರಣಗಳನ್ನು ಗಂಟೆಗೊಮ್ಮೆ ಸ್ಯಾನಿಟೈಸ್‌ ಮಾಡುತ್ತಾರೆ. ಸೆಟ್‌ನಲ್ಲಿಟೀ, ಕಾಫಿ ಕೊಡುವ ಬದಲು ಈಗ ಕಷಾಯ ಕೊಡುತ್ತಿದ್ದಾರೆ’ ಎನ್ನುತ್ತಾರೆ ‘ಕಮಲಿ‘ ಧಾರಾವಾಹಿಯ ರಚನಾ.

‘ಕೆಲ ದೃಶ್ಯಗಳ ಮೂಲಕ ಕೊರೊನಾ ಜಾಗೃತಿಯನ್ನೂ ಮೂಡಿಸುತ್ತಿದ್ದೇವೆ. ಚಿಕ್ಕ ಸ್ಥಳದಲ್ಲಿ ಶೂಟಿಂಗ್‌ ಮಾಡಬೇಕಾಗಿರುವುದರಿಂದ ಪ್ರೇಕ್ಷಕರಿಗೆ ಬೋರಾಗದಂತೆಯೂ ಧಾರಾವಾಹಿ ಮಾಡಬೇಕಿದೆ’ ಎಂಬುದು ‘ಮೂರು ಗಂಟು’ ಧಾರಾವಾಹಿಯ ಅನಿರುದ್ಧ‌ ಬಾಲಾಜಿ ಮಾತು.

‘ಶೂಟಿಂಗ್‌ ಸ್ಥಳದಲ್ಲಿ ಮೊದಲಿಗಿಂತ ತುಂಬಾನೇ ಬದಲಾವಣೆ ಆಗಿದೆ. ಟೆಂಪರೇಚರ್ ಜಾಸ್ತಿ ಇದ್ರೆ ನಾವೇ ಸೆಟ್‌ ಒಳಗೆ ಹೋಗುವುದಿಲ್ಲ. ಗೊತ್ತಿರುವ ಮನೆಯಿಂದಲೇ ಆಹಾರ ತರಿಸುತ್ತಾರೆ. ಈ ಬದಲಾವಣೆ ನಡುವೆಯೂ ಶೂಟಿಂಗ್‌ ತುಸು ಆತಂಕದಿಂದಲೇ ಮುಂದುವರೆದಿದೆ’ ಎನ್ನುತ್ತಾರೆ ‘ಅವಳು ಸುಜಾತಾ’ ಧಾರಾವಾಹಿಯ ಮೇಘಶ್ರೀ.⇒v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT