ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಪಾತ್ರಕ್ಕೆ ಕಾಯುತ್ತಿದ್ದಾರೆ ಶರ್ಮಿತಾ

Last Updated 2 ಜುಲೈ 2020, 19:39 IST
ಅಕ್ಷರ ಗಾತ್ರ

ಮಲಮಗನನ್ನು ಅತಿಯಾಗಿ ಮುದ್ದಿಸುವ ಅಮ್ಮ, ಅವನ ಮೇಲೆ ಹಿಡಿ ಹೆಚ್ಚೇ ಪ್ರೀತಿ. ಆದರೆ ಈ ಪ್ರೀತಿ ಹಿಂದೆ ಇರುವುದು ಪ್ರೀತಿನಾ ಅಥವಾ ಸ್ವಾರ್ಥ ಸಾಧಿಸುವ ತಂತ್ರವಾ... ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಗೀತಾ’ ಧಾರಾವಾಹಿಯ ‘ಭಾನುಮತಿ’ ಪಾತ್ರಕ್ಕೆ ಜೀವ ತುಂಬಿ ನಟಿಸುತ್ತಿರುವವರು ಚಿಕ್ಕಮಗಳೂರಿನ ಶರ್ಮಿತಾ ಗೌಡ.

ಒಂದೆಡೆ ಪ್ರೀತಿ, ಮತ್ತೊಮ್ಮೆಸಿಡುಕು, ಕಿಡಿಕಾರುವ ಕಣ್ಣೋಟ, ಕಾರ್ಯಸಾಧನೆಗೆ ಸದಾ ತಂತ್ರ ಹೆಣೆಯುವ ಖಳ ನಾಯಕಿ ಪಾತ್ರದ ಮೂಲಕ ಶರ್ಮಿತಾ ಮನೆಮಾತಾಗಿದ್ದಾರೆ.

ಇವರು ವೃತ್ತಿಯಲ್ಲಿ ನ್ಯೂಟ್ರಿಷಿಯನಿಸ್ಟ್‌ ಆಗಿದ್ದವರು. ಎಂ.ಎಸ್ಸಿ ಬಯೋಕೆಮಿಸ್ಟ್ರಿ ಮುಗಿಸಿದ ಬಳಿಕ ನ್ಯೂಟ್ರಿಷಿಯನಿಸ್ಟ್‌ ಆಗಿ ಕೆಲಸ ಮಾಡುತ್ತಿದ್ದರು. ಅವರ ಸೌಂದರ್ಯ, ಪ್ರತಿಭೆ ಕಂಡ ಅವರ ಸ್ನೇಹಿತರು ನಟನಾಕ್ಷೇತ್ರ, ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗವಹಿಸುವಂತೆ ಒತ್ತಾಯಿಸಿದ್ದರು. ಮೊದಲ ಪ್ರಯತ್ನದಲ್ಲಿಯೇ ‘ಮಿಸೆಸ್ ಕರ್ನಾಟಕ’ ಸೌಂದರ್ಯ ಸ್ಪರ್ಧೆಯಲ್ಲಿ ರನ್ನರ್‌ ಅಪ್‌ ಕಿರೀಟ ತಲೆಗೇರಿತು. ನಂತರ ಇವರ ನಟನೆಯ ಕನಸಿಗೆ ವೇದಿಕೆಯಾಗಿದ್ದು ಕಿರುತೆರೆ.

ಇವರು ಮೊದಲು ನಟಿಸಿದ ಧಾರಾವಾಹಿ ‘ಜಾನಕಿ ರಾಘವ’. ಇದರಲ್ಲಿ ನಾಯಕನ ಚಿಕ್ಕಮ್ಮನ ಪಾತ್ರ. ಇದರಲ್ಲಿ ನೆಗೆಟಿವ್‌ ಪಾತ್ರದಲ್ಲಿ ನಟಿಸಿರುವ ಶರ್ಮಿತಾಗೆ ಅದು ಸಾಕಷ್ಟು ಜನಪ್ರಿಯತೆ ತಂದುಕೊಟ್ಟಿತು. ‘ಅದರಲ್ಲಿ ನನ್ನ ನಿಜವಯಸ್ಸಿಗಿಂತ ಹಿರಿಯ ಮಹಿಳೆಯ ಪಾತ್ರ. ದೊಡ್ಡ ಮಹಿಳೆಯ ಪಾತ್ರದಲ್ಲಿ ನಟಿಸಿ, ಸೈ ಎನಿಸಿಕೊಂಡಿದ್ದಕ್ಕೆ ನನಗೆ ಹೆಮ್ಮೆಯಿದೆ’ ಮೊದಲ ಬಾರಿ ಬಣ್ಣ ಹಚ್ಚಿದ ಅನುಭವವನ್ನು ಹಂಚಿಕೊಂಡರು.

ಈ ಧಾರಾವಾಹಿ ಮುಗಿಯುತ್ತಿದ್ದಂತೆ ಅವರಿಗೆ ‘ಮನೆಯೇ ಮಂತ್ರಾಲಯ’ದಲ್ಲಿ ಕಿರಿಸೊಸೆ ಪಾತ್ರ ದೊರೆಯಿತು. ಅದೂ ವಿಲನ್‌ ಪಾತ್ರವೇ. ‘ಈಗಲೂ ಜನರು ನನ್ನನ್ನು ಈ ಧಾರಾವಾಹಿಯ ಪ್ರಿಯಾಂಕಾ ಹೆಸರಿನಿಂದಲೇ ಗುರುತಿಸುತ್ತಾರೆ’ ಎಂದು ಖುಷಿ ವ್ಯಕ್ತಪಡಿಸುತ್ತಾರೆ. ಈಗ ‘ಗೀತಾ’ ಜೊತೆಗೆ ತಮಿಳಿನಲ್ಲೂ ‘ನಿಲ’ ಎಂಬ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.ಈ ಪಾತ್ರದ ನಟನೆಗೆ ಶರ್ಮಿತಾ ಅವರಿಗೆ ‘ಅತ್ಯುತ್ತಮ ಖಳನಟಿ’ ಪ್ರಶಸ್ತಿ ದೊರೆತಿದೆ. ಆಹಾರ ಕ್ಷೇತ್ರದಿಂದ ನೇರ ನಟನೆಗೆ ಬಂದಿರುವ ಶರ್ಮಿತಾ ಎಲ್ಲಿಯೂ ನಟನೆ ತರಬೇತಿಯನ್ನು ಪಡೆದುಕೊಂಡಿಲ್ಲ. ‘ಜಾನಕಿ ರಾಘವ’ದಲ್ಲಿ ವಿನು ಬಳಂಜ ಸರ್‌ ನಟನೆಯ ಬಗ್ಗೆ ತಿಳಿಸಿಕೊಟ್ಟರು. ನನ್ನ ಜೊತೆ ಕೆಲಸ ಮಾಡುವ ಹಿರಿಯ ನಟ–ನಟಿಯರಿಂದ ಕಲಿತೆ’ ಎನ್ನುತ್ತಾರೆ.

ಶರ್ಮಿತಾ ವೈವಿಧ್ಯಮಯ ಪಾತ್ರಗಳ ನಿರೀಕ್ಷೆಯಲ್ಲಿದ್ದಾರೆ. ಸೌಂದರ್ಯದ ಜತೆಗೆ ಪ್ರತಿಭೆಯೂ ಇರುವುದರಿಂದ ಇವರಿಗೆ ಅವಕಾಶಗಳಿಗೆ ಕೊರತೆಯಿಲ್ಲ. ಆದರೆ ಒಂದೇ ಪಾತ್ರಕ್ಕೆ ಬ್ರಾಂಡ್‌ ಆಗಲು ಇವರಿಗಿಷ್ಟವಿಲ್ಲ. ‘ಪಾತ್ರ ಕೇಳಿದ ತಕ್ಷಣ ಥ್ರಿಲ್‌ ಆಗುವಂತಿರಬೇಕು. ನನ್ನೊಳಗಿನ ಕಲಾವಿದೆಗೆ ಸವಾಲೊಡ್ಡುವ ಪಾತ್ರವಾಗಿರಬೇಕು’ ಎಂದು ಮನದಾಸೆ ಹಂಚಿಕೊಂಡರು.

ಖಳನಟಿಯಾಗಿ ತಮ್ಮದೇ ಆಗ ಟ್ರೆಂಡ್‌ ಸೆಟ್‌ ಮಾಡಿದ್ದಾರೆ ಶರ್ಮಿತಾ. ಇವರ ಉಡುಗೆ, ಮೇಕಪ್‌, ನಟನೆ ಎಲ್ಲವೂ ಇವರಿಗೆ ಅಭಿಮಾನಿ ಬಳಗವನ್ನು ಹುಟ್ಟುಹಾಕಿದೆ.ಕಿರುತೆರೆ ಜೊತೆಗೆ ಬೆಳ್ಳಿತೆರೆಗೂ ಶರ್ಮಿತಾ ಕಾಲಿಟ್ಟಿದ್ದಾರೆ. ‘ವೆಂಕಟ್‌ ಭಾರಧ್ವಜ್‌ ನಿರ್ದೇಶನದ ‘ಆಮ್ಲೆಟ್‌’ ಚಿತ್ರದಲ್ಲಿ ನಟಿಸಿದ್ದಾರೆ. ಇದರಲ್ಲಿ ಸರಳ, ಶಾಂತಸ್ವಭಾವದ ಯುವತಿ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ‘ಸೀತಾಯಾನ’ ಚಿತ್ರದಲ್ಲಿ ವಿಲನ್‌ ಪತ್ನಿ ಪಾತ್ರದಲ್ಲಿ ನಟಿಸಿದ್ದಾರೆ.

ಡಯೆಟ್‌:ಶರ್ಮಿತಾ ಆಹಾರ, ಫಿಟ್‌ನೆಸ್‌ ಬಗ್ಗೆ ಕಾಳಜಿ ಮಾಡುತ್ತಾರೆ. ನಿದ್ರೆಯಿಲ್ಲದೇ, ಸರಿಯಾಗಿ ಪೌಷ್ಟಿಕ ಆಹಾರ ತೆಗೆದುಕೊಳ್ಳದೇ ದೇಹ ದಂಡಿಸಿದರೆ ಆಗುವ ಪರಿಣಾಮದ ಬಗ್ಗೆನ್ಯೂಟ್ರಿಯನಿಸ್ಟ್‌ ಆಗಿರುವ ಶರ್ಮಿತಾಗೆ ಅರಿವಿದೆ. ಹಾಗಾಗಿ ಶೂಟಿಂಗ್‌ ಇದ್ದ ಸಮಯದಲ್ಲಿ ಸರಳವಾದ ವ್ಯಾಯಾಮ, ಕಾರ್ಡಿಯೊ ಅಷ್ಟೇ ಮಾಡುತ್ತಾರೆ. ಇವರು ಫುಡ್ಡಿ (ಆಹಾರಪ್ರಿಯೆ). ‘ನನ್ನಿಂದ ಕಟ್ಟುನಿಟ್ಟಾಗಿ ಡಯೆಟ್‌ ಮಾಡುವುದಿಲ್ಲ. ಆದರೆ ಎಷ್ಟು ತಿನ್ನುತ್ತೇನೋ ಅಷ್ಟೇ ವರ್ಕೌಟ್‌ ಮಾಡಿ ಕ್ಯಾಲೊರಿ ಕರಗಿಸಿಕೊಳ್ಳುತ್ತೇನೆ’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT