ಭಾನುವಾರ, ಮಾರ್ಚ್ 29, 2020
19 °C

ಫೆ. 2ರಿಂದ ‘ತಕಧಿಮಿತ’ ಡಾನ್ಸ್‌ ಶೋ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಫೆ. 2ರಿಂದ ‘ತಕಧಿಮಿತ’ ಡಾನ್ಸ್‌ ರಿಯಾಲಿಟಿ ಶೋ ಕಾರ್ಯಕ್ರಮ ಆರಂಭವಾಗಲಿದೆ. 

ಮೂರು ವರ್ಷದ ಬಳಿಕ ದೊಡ್ಡಮಟ್ಟದ ನೃತ್ಯ ಕಾರ್ಯಕ್ರಮದ ಆಯೋಜನೆಗೆ ವಾಹಿನಿ ಸಜ್ಜಾಗಿದೆ. ಇದರಲ್ಲಿ ಕಿರುತೆರೆ ಮತ್ತು ಹಿರಿತೆರೆಯ ಕಲಾವಿದರು ಭಾಗವಹಿಸುತ್ತಿದ್ದಾರೆ.

ನಟ ರವಿಚಂದ್ರನ್‌, ನಟಿ ಸುಮನ್‍ ರಂಗನಾಥ್ ಮತ್ತು ಶಾಸ್ತ್ರೀಯ ಶೈಲಿಯ ನೃತ್ಯಗಾರ್ತಿ ಅನುರಾಧಾ ವಿಕ್ರಾಂತ್ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ವಿಜೇತ ಜೋಡಿಗೆ ₹ 10 ಲಕ್ಷ ನಗದು ಬಹುಮಾನ ನೀಡಲಾಗುತ್ತದೆ. ಅಕುಲ್‌ ಬಾಲಾಜಿ ಕಾರ್ಯಕ್ರಮದ ನಿರೂಪಣೆಯ ಜವಾಬ್ದಾರಿ ಹೊತ್ತಿದ್ದಾರೆ. ಕಾರ್ಯಕ್ರಮದ ನಿರ್ದೇಶಕಿ ಶ್ರದ್ಧಾ ಮತ್ತು ವಾಹಿನಿಯ ಬ್ಯುಸಿನೆಸ್‌ ಹೆಡ್‌ ಪರಮೇಶ್ವರ್‌ ಗುಂಡ್ಕಲ್‌ ಅವರ ಸಾರಥ್ಯದಲ್ಲಿ ಕಾರ್ಯಕ್ರಮ ಮೂಡಿಬರಲಿದೆ. 

ಈ ಕಾರ್ಯಕ್ರಮ ಹೊಸ ಪ್ರಯೋಗ ಎಂದು ವಾಹಿನಿ ಹೇಳಿಕೊಂಡಿದೆ. ಶ್ರುತಿ ಪ್ರಕಾಶ್‌, ದಿಶಾ ರಾಮ್, ರಕ್ಷಿತಾ, ಕರುಣಾ ರಾಮ್, ನೇಹಾ ಗೌಡ, ಆ್ಯಡಂ ಪಾಷಾ, ನಮ್ರತಾ ಗೌಡ, ದಿಲೀಪ್‌ ಆರ್‌. ಶೆಟ್ಟಿ, ಅರ್ಚನಾ ಜೋಯಿಸ್‌, ಅಶೋಕ್, ರಾಜೇಶ್‌ ಧ್ರುವ, ಲಾಸ್ಯಾ ನಾಗರಾಜ್, ಆರ್‌. ಸುನಿಲ್, ದಿವ್ಯಾ ಉರುಗದ ಸ್ಪರ್ಧಿಗಳಾಗಿ ನೃತ್ಯ ಅಖಾಡಕ್ಕೆ ಇಳಿಯಲಿದ್ದಾರೆ. 16 ವಾರಗಳ ಕಾಲ ಸ್ಪರ್ಧೆ ನಡೆಯಲಿದೆ.

ಪ್ರತಿಯೊಬ್ಬ ಸೆಲೆಬ್ರಿಟಿಯೊಂದಿಗೆ ಒಬ್ಬ ಸಾಮಾನ್ಯ ವ್ಯಕ್ತಿ ಒಂದು ತಂಡವಾಗಿ ಭಾಗವಹಿಸುತ್ತಾರೆ. ವೇದಿಕೆ ಮೇಲೆ ಹದಿನಾಲ್ಕು ಜೋಡಿಗಳು ಗೆಲುವಿಗಾಗಿ ಪೈಪೋಟಿ ನಡೆಸಲಿವೆ. ತೀರ್ಪುಗಾರರು ನೀಡುವ ಅಂಕಗಳ ಆಧಾರದಲ್ಲಿ ಕನಿಷ್ಠ ಅಂಕ ಪಡೆಯುವ ಮೂರು ಜೋಡಿಗಳು ಡೇಂಜರ್ ಝೋನ್‍ಗೆ ತಲುಪುತ್ತವೆ. ಆ ಸ್ಪರ್ಧಿಗಳಿಗೆ ತಮ್ಮ ಬೆಂಬಲಿಗರ ಮತಯಾಚಿಸಲು ಅವಕಾಶ ಕಲ್ಪಿಸಲಾಗಿದೆ. ವೀಕ್ಷಕರು ವೂಟ್‌ ಆ್ಯಪ್‌ನಲ್ಲಿ ಮತ ಚಲಾಯಿಸಬೇಕು. ಕಡಿಮೆ ಮತ ಪಡೆಯುವ ಸ್ಪರ್ಧಿ ಸ್ಪರ್ಧೆಯಿಂದ ನಿರ್ಗಮಿಸುತ್ತಾರೆ.  

‘ಪ್ರಯೋಗಾತ್ಮಕ ಕಾರ್ಯಕ್ರಮಗಳಿಗೆ ಪ್ರೇಕ್ಷಕರಿಂದ ಯಾವಾಗಲೂ ಬೆಂಬಲ ಸಿಗುತ್ತದೆ. ಪ್ರೇಕ್ಷಕರಿಗೆ ರಸದೌತಣ ಉಣಬಡಿಸುವುದೇ ನಮ್ಮ ಉದ್ದೇಶ. ಅದಕ್ಕಾಗಿಯೇ ಭಿನ್ನವಾದ ರಿಯಾಲಿಟಿ ಶೋ ಕಾರ್ಯಕ್ರಮವನ್ನು ಆರಂಭಿಸಲಾಗಿದೆ’ ಎನ್ನುತ್ತಾರೆ ಪರಮೇಶ್ವರ್‌ ಗುಂಡ್ಕಲ್‌.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)