ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಶಿಯ ರಾಶಿ ಮಾತು

ಕಿರುತೆರೆ
Last Updated 28 ಮಾರ್ಚ್ 2019, 19:30 IST
ಅಕ್ಷರ ಗಾತ್ರ

ಮುದ್ದಾದ ಮುಖ, ತುಟಿ ಮೇಲೆ ಅರಳಿರುವ ಮುಗ್ಧ ನಗು, ‌ನೀಳ ಕಾಯ, ಪ್ರೌಢತೆಯ ಮಾತು, ಇವೆಲ್ಲವೂ ಆಕೆಯ ಪ್ಲಸ್ ಪಾಯಿಂಟ್‌. ಬಾಲ್ಯದಿಂದಲೂ ನಟಿಯಾಗಬೇಕು ಎಂಬ ಕಸನು ಕಂಡಿದ್ದ ಆಕೆ ನಟನೆಗೆ ಕಾಲಿರಿಸಿದ್ದು ‘ಶಾಲಿನಿ ಐಎಎಸ್‌‘ ಎಂಬ ಸಿನಿಮಾದ ಮೂಲಕ. ಆದರೆ ಈಗ ಆಕೆ ಆಟೊ ಡ್ರೈವರ್‌.

ಅಯ್ಯೋ, ನಟಿ ಆಟೊ ಡ್ರೈವರ್ ಆದ್ರಾ! ಎಂದು ಯೋಚಿಸಬೇಡಿ. ನಾವು ಹೇಳುತ್ತಿರುವುದು ‘ಮಿಥುನ ರಾಶಿ’ ಧಾರಾವಾಹಿಯ ಆಟೊ ಡ್ರೈವರ್‌ ರಾಶಿ ಬಗ್ಗೆ.

ಇವರು ‘ಶಾಂತಂ ಪಾಪಂ’ ಸಿರೀಸ್‌ನ ಎಪಿಸೋಡ್‌ ಒಂದರಲ್ಲಿ ಕಾಣಿಸಿಕೊಂಡಿದ್ದರು. ಆ ಎಪಿಸೋಡ್‌ ಅವರ ನಟನೆಯಬದುಕಿಗೆ ತಿರುವು ನೀಡಿತ್ತು. ಅಲ್ಲಿ ಆಕೆಯ ನಟನೆಯನ್ನು ನೋಡಿ ಮೆಚ್ಚಿದ್ದ ‘ಮಿಥುನ ರಾಶಿ’ ಧಾರಾವಾಹಿಯ ನಿರ್ದೇಶಕರು ಆಡಿಷನ್‌ಗೆ ಕರೆದಿದ್ದರು. ಹೀಗೆ ರಾಶಿ ಪಾತ್ರದ ಮೂಲಕ ಪೂರ್ಣ ಪ್ರಮಾಣದ ನಟಿ ಎನ್ನಿಸಿಕೊಂಡ ಈ ನಟಿಯ ಹೆಸರು ವಿ.ವೈಷ್ಣವಿ.

ಬೆಂಗಳೂರಿನವರಾದ ಇವರು ಪ್ರಥಮ ಪಿಯುಸಿ ಓದುತ್ತಿದ್ದಾರೆ. ತನ್ನ ಮಗಳು ನಟಿಯಾಗಬೇಕು ಎಂಬುದು ವೈಷ್ಣವಿ ಅವರ ತಾಯಿಯ ಕನಸು ಹೌದು. ಸಣ್ಣ ವಯಸ್ಸಿನಿಂದಲೂ ಸ್ನೇಹಿತರು, ಬಂಧುಗಳು ಇವಳು ಹೀರೊಯಿನ್ ಆಗಬಹುದು, ನಟನೆ ಮಾಡಬಹುದು ಎನ್ನುತ್ತಿದ್ದುದ್ದನ್ನು ಕೇಳಿ ತಾಯಿ, ಮಗಳ ಮನಸ್ಸಿನಲ್ಲಿ ನಟನೆಯ ಕನಸು ಮೊಳಕೆಯೊಡೆದಿತ್ತು. ತನ್ನ 16ನೇ ವಯಸ್ಸಿನಲ್ಲಿ ನಟನೆಗೆ ಇಳಿದ ಈ ಸುಂದರಿಗೆ ನಟನಾ ಪ್ರಪಂಚದಲ್ಲೇ ನೆಲೆಯೂರುವ ಕನಸು ಎದ್ದು ಕಾಣುತ್ತದೆ.

ಧಾರಾವಾಹಿಯ ರಾಶಿ ಪಾತ್ರಕ್ಕೂ, ತನ್ನ ನಿಜ ಜೀವನದ ಪಾತ್ರಕ್ಕೂ ಸಾಮ್ಯತೆ ಇದೆ ಎನ್ನುವ ಇವರು ತಮ್ಮ ಪಾತ್ರ ಹಾಗೂ ನಿಜ ಜೀವನವನ್ನು ವಿವರಿಸುವುದು ಹೀಗೆ ‘ರಾಶಿಯದ್ದು ಜವಾಬ್ದಾರಿಯುತ ಹೆಣ್ಣುಮಗಳೊಬ್ಬಳ ಪಾತ್ರ. ಅವಳು ತನ್ನ ಓದು, ಆಸೆ, ಕನಸುಗಳನ್ನೆಲ್ಲಾ ಬದಿಗಿಟ್ಟು ತನ್ನ ಅಕ್ಕನನ್ನು ಓದಿಸಿ, ಮನೆಯ ಜವಾಬ್ದಾರಿಗಳನ್ನು ಹೆಗಲಿಗೇರಿಸಿಕೊಂಡು ಜೀವನ ಸಾಗಿಸುತ್ತಿರುತ್ತಾಳೆ. ಸೀರಿಯಲ್‌ನ ರಾಶಿ ಆಟೊ ಓಡಿಸಿದರೆ, ನಿಜ ಜೀವನದಲ್ಲಿ ನಾನು ನಟನೆ ಮಾಡುತ್ತೇನೆ. ನನಗೂ ಮನೆ ಜವಾಬ್ದಾರಿ ಇದೆ. ಅದನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದೇನೆ. ಆದರೆ ಮನೆಯಲ್ಲಿ ಸಂಪೂರ್ಣವಾಗಿ ನನ್ನ ಮೇಲೆ ಅವಲಂಬಿತರಾಗಿಲ್ಲ. ಆದರೆ ಜವಾಬ್ದಾರಿಯಂತೂ ಖಂಡಿತ ಇದೆ’. ಹೀಗೆ ಹೇಳುವಾಗ ಅವರ ಮಾತಿನಲ್ಲಿ ಪ್ರಬುದ್ಧತೆ ಇತ್ತು.

‘ನಾನು ಆಡಿಷನ್‌ನಲ್ಲಿ ಭಾಗವಹಿಸಿ ಕೆಲ ದಿನಗಳು ಕಳೆದ ಮೇಲೆ ಮಿಥುನ ರಾಶಿ ಧಾರಾವಾಹಿಗೆ ನೀವು ನಾಯಕಿಯಾಗಿ ಆಯ್ಕೆಯಾಗಿದ್ದೀರಿ ಎಂದಾಗ ನನಗೆ ನಂಬಲು ಸಾಧ್ಯವಾಗಿರಲಿಲ್ಲ. ಜೊತೆಗೆ ಸಂತಸವೂ ಮೇಳೈಸಿತ್ತು. ಈಗ ನಮ್ಮ ಧಾರಾವಾಹಿ 50 ಎಪಿಸೋಡ್ ಮುಗಿಸಿದೆ. ವೈಷ್ಣವಿ ಎಂದರೆ ಯಾರು ಎಂದು ತಿಳಿದಿರದ ಜನ ಈಗ ನನ್ನನ್ನು ರಾಶಿ ಪಾತ್ರದ ಮೂಲಕ ಗುರುತಿಸುತ್ತಿದ್ದಾರೆ. ಎಷ್ಟೋ ಜನ ನನ್ನ ಬಳಿ ಬಂದು ನೀವು ನಮ್ಮ ಜೀವನದ ಕಷ್ಟವನ್ನು ಧಾರಾವಾಹಿಯ ಮೂಲಕ ತೋರಿಸುತ್ತಿದ್ದೀರಿ, ನಮ್ಮ ಕಥೆಗೆ ಧಾರಾವಾಹಿ ಪಾತ್ರದ ಮೂಲಕ ಜೀವ ತುಂಬಿದ್ದೀರಿ ಎಂದಾಗ ನಟಿಯಾಗಿದ್ದಕ್ಕೂ ಸಾರ್ಥಕ ಆಯ್ತು ಎನ್ನಿಸುತ್ತದೆ’ ಎನ್ನುವ ರಾಶಿಯ ಮುಖದಲ್ಲಿಖುಷಿ ಮನೆ ಮಾಡಿತ್ತು.

ಬೆಂಗಳೂರಿನ ಜೆ.ಸಿ ರಸ್ತೆಯ ಜೈನ್‌ ಕಾಲೇಜಿನಲ್ಲಿ ಓದುತ್ತಿರುವ ಇವರು, ಓದು ಮತ್ತು ನಟನೆ ಎರಡನ್ನೂ ಸರಿದೂಗಿಸಿಕೊಂಡು ಹೋಗುತ್ತಿದ್ದಾರೆ. ‘ಕಾಲೇಜಿನ ಸಿಬ್ಬಂದಿ, ಮನೆಯವರು ಹಾಗೂ ಧಾರಾವಾಹಿ ತಂಡ ನನಗೆ ಸಂಪೂರ್ಣ ಸಹಕಾರ ನೀಡುತ್ತಿದೆ. ಅವರೆಲ್ಲರ ಸಹಕಾರದಿಂದ ನಾನು ಇಂದು ಧಾರಾವಾಹಿಯಲ್ಲಿ ನಟಿಸಲು ಸಾಧ್ಯವಾಗಿದೆ’ ಎನ್ನುವ ಯುವ ನಟಿ, ತನಗೆ ಬೆಂಬಲವಾಗಿ ನಿಂತವರನ್ನುಕೃತಜ್ಞತೆಯಿಂದ ಸ್ಮರಿಸುವುದನ್ನು ಮರೆಯಲಿಲ್ಲ.

ನಟನೆ ಎಂದರೆ ಬದುಕು ಎಂದುಕೊಂಡಿರುವ ಈ ಪುಟ್ಟ ಹುಡುಗಿಗೆ ಎಲ್ಲಾ ರೀತಿಯ ಪಾತ್ರಗಳಿಗೂ ಜೀವ ತುಂಬುವ ಆಸೆ. ವಿಭಿನ್ನ ಪಾತ್ರಗಳನ್ನು ಮಾಡಿದರಷ್ಟೇ ಜನ ನಮ್ಮನ್ನು ಗುರುತಿಸುತ್ತಾರೆ. ಭಿನ್ನ ಪಾತ್ರಗಳಿಗೆ ಜೀವ ತುಂಬಿದಾಗ ನಮಗೂ ಬೆಲೆ, ನಟನೆಗು ಬೆಲೆ ಎನ್ನುವ ವೈಷ್ಣವಿಗೆ ಒಮ್ಮೆಯಾದರೂ ಪೌರಾಣಿಕ ಪಾತ್ರಕ್ಕೆ ಬಣ್ಣ ಹಚ್ಚುವಾಸೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT