ಶನಿವಾರ, ಜನವರಿ 18, 2020
20 °C

ಮಳ್ಳಿ ಮಳ್ಳಿ..ಮಿಂಚುಳ್ಳಿ

ಶಿವು.ಕೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕವನಿದ್ದಾಗ ಬೇಸಿಗೆ ರಜೆಯಲ್ಲಿ ನಮ್ಮ ಹಳ್ಳಿಗೆ ಹೋಗುತ್ತಿದ್ದೆ. ಅಲ್ಲಿನ ಕೆರೆಯ ನೀರಿನಲ್ಲಿ ಆಟವಾಡುತ್ತಿದ್ದಾಗ, ಆಗಸದಲ್ಲಿ ಕಪ್ಪು ಚುಕ್ಕೆಗಳುಳ್ಳ ಬಿಳಿಯ ಪುಟ್ಟ ಹಕ್ಕಿಯೊಂದು ಹೆಲಿಕಾಪ್ಟರ್‌ನಂತೆ ನಿಂತ ಜಾಗದಲ್ಲಿಯೇ ನಿಂತು ರೆಕ್ಕೆ ಬಡಿಯುವುದನ್ನು ಬೆರಗಿನಿಂದ ನೋಡುತ್ತಿದ್ದೆ.

ಹವ್ಯಾಸಿ ಛಾಯಾಗ್ರಾಹಕನಾದ ಮೇಲೆ ಕೆರೆ, ಹೊಳೆ, ಕಾಲುವೆಗಳ ಬಳಿ ಕುಳಿತು ಪಕ್ಷಿ ವೀಕ್ಷಿಸುವಾಗ ಅಂಥದ್ದೇ ಹಕ್ಕಿ ಅದೇ ರೀತಿ ಹೆಲಿಕಾಪ್ಟರ್‌ನಂತೆ ನಿಂತಲ್ಲೆ ನಿಂತು ರೆಕ್ಕೆ ಬಡಿಯುತ್ತಿದ್ದನ್ನು ನೋಡಿದೆ. ಈ ಹಿಂದೆ ಹಲವು ಬಾರಿ ಈ ಹಕ್ಕಿಯನ್ನು ನೋಡಿದ್ದರೂ, ದೂರದಲ್ಲಿದ್ದ ಕಾರಣ ಫೋಟೊ ತೆಗೆಯಲಾಗುತ್ತಿರಲಿಲ್ಲ. ಜತೆಗೆ, ಕೆಳಮುಖವಾಗಿ ರಾಕೆಟ್‌ ವೇಗದಲ್ಲಿ ಜುಯ್‌ ಎಂದು ನೀರಿನಲ್ಲಿ ಮುಳುಗಿ ಕೊಕ್ಕಿನಲ್ಲಿ ಮೀನನ್ನು ಕಚ್ಚಿಕೊಂಡು ಮೇಲೆದ್ದು ಹಾರಿಹೋಗುತ್ತಿತ್ತು.

ಸ್ವಲ್ಪ ದಿನಗಳ ನಂತರ ಆ ಪಕ್ಷಿಯ ಹೆಸರು ‘ಪೈಡ್ ಕಿಂಗ್‌ಫಿಷರ್’ ಅಂತ ಗೊತ್ತಾಯಿತು. ಇದು ಮಿಂಚುಳ್ಳಿಗಳಲ್ಲೇ ಚೆಂದನೆಯ ಬಣ್ಣದ ಹಾಗೂ ಅತಿ ಚಿಕ್ಕದಾದದ ಮಿಂಚುಳ್ಳಿ (small blue kingfisher). ಇದೂ ಹೆಲಿಕಾಪ್ಟರ್‌ನಂತೆ ನಿಂತಲ್ಲಿಯೇ ರೆಕ್ಕೆ ಬಡಿದುಕೊಂಡು ನಿಂತು ಮೀನು ಬೇಟೆಯಾಡುತ್ತದೆ. ದೂರದಲ್ಲಿ ಹಾರುತ್ತಾ, ತುಂಬಾ ಸಣ್ಣದಾಗಿ ಕಾಣಿಸುವುದರಿಂದ ಈ ಪಕ್ಷಿಯು ನಿಂತ ಕಡೆ ರೆಕ್ಕೆ ಬಡಿಯುವಂತಹ (ಚಲನಾತ್ಮಕ ರೀತಿಯ ಫೋಟೊ) ಫೋಟೊ ತೆಗೆಯುವುದು ಅಸಾಧ್ಯ ಎನ್ನಿಸುತ್ತಿತ್ತು. ಇಷ್ಟಾದರೂ ನನ್ನ ಪ್ರಯತ್ನ ನಿಲ್ಲಿಸಿರಲಿಲ್ಲ. ಹಾಗೆಯೇ ಆ ತರಹದ ಫೋಟೊ ತೆಗೆಯುವ ಕನಸು ಕಾಣುವುದನ್ನೂ ನಿಲ್ಲಿಸಲಿಲ್ಲ.

ಕೆಲವು ದಿನಗಳ ಹಿಂದೆ ಪಕ್ಷಿ ವೀಕ್ಷಣೆ ಮತ್ತು ಛಾಯಾಗ್ರಾಹಣಕ್ಕೆ ಹೋಗಿದ್ದಾಗ, ಈ ಪುಟ್ಟ ಮಿಂಚುಳ್ಳಿ ನನ್ನಿಂದ ಇಪ್ಪತ್ತು ಅಡಿ ದೂರದಲ್ಲಿದ್ದ ಸಣ್ಣ ಕೊಂಬೆಯ ಮೇಲೆ ಬಂದು ಕುಳಿತುಕೊಂಡಿದ್ದನ್ನು ಕಂಡೆ. ಅಚ್ಚರಿಯಾಯಿತು. ತಕ್ಷಣವೇ ಚಕ್‌ ಚಕ್‌ ಅಂತ ಅದರ ನಾಲ್ಕೈದು ಚಿತ್ರಗಳನ್ನು ಕ್ಲಿಕ್ಕಿಸಿದೆ. ಅದು ಏನು ಮಾಡುತ್ತದೆ ನೋಡೋಣವೆಂದು ನಿಶ್ಯಬ್ಧವಾಗಿ ನಿಂತೆ. ಬರಿಗಣ್ಣಿನಲ್ಲೇ ಅದರ ಚಟುವಟಿಕೆಯನ್ನು ಗಮನಿಸುತ್ತಿದ್ದೆ. ನಾಲ್ಕು ಸೆಕೆಂಡು ಕಳೆದಿರಬಹುದು, ಅದು ಪಕ್ಕನೆ ಹಿಕ್ಕೆ ಹಾಕಿತು. ಕತ್ತನ್ನು ಮೇಲಕ್ಕೆ ಕೆಳಕ್ಕೆ ಆಡಿಸಿ ಮೇಲೆ ಹಾರಿತು.

‘ಎಲ್ಲಿ ಹೋಯಿತು’ ಅಂತ ನೋಡಿದರೆ, ಅರ್ಧ ಸೆಕೆಂಡಿನಲ್ಲಿ ಅದು ನನ್ನೆದುರಿಗೆ ಹಾರಿ ಬಂದು ಹೆಲಿಕಾಪ್ಟರ್‌ನಂತೆ ನಿಂತು ರೆಕ್ಕೆಬಡಿಯುತ್ತಿತ್ತು. ಕ್ಷಣಾರ್ಧದಲ್ಲಿ ಕ್ಯಾಮೆರಾವನ್ನು ಅದರೆಡೆಗೆ ತಿರುಗಿಸಿ ಫೋಕಸ್ ಬಟನ್ ಒತ್ತಿದೆ. ಚಕ್ ಅಂತ ಫೋಕಸ್ ಆಗಿಬಿಟ್ಟಿತು. ಕ್ಲಿಕ್, ಕ್ಲಿಕ್ ಕ್ಲಿಕ್...ಸತತವಾಗಿ ಎರಡು ಸೆಕೆಂಡ್ ಕ್ಲಿಕ್ಕಿಸಿರಬಹುದು, ಆಷ್ಟೆ. ಅಷ್ಟರಲ್ಲಿ ಮಿಂಚುಳ್ಳಿ ಹಾರಿಹೋಗಿತ್ತು.

ಆದರೆ, ಕ್ಲಿಕ್ಕಿಸಿದ ಫೋಟೊ ನೋಡುವ ತವಕ. ಥಟ್ಟನೆ ಕ್ಯಾಮೆರಾದ ಹಿಂಬದಿಯ ಪ್ರಿವ್ಯೂವ್ ಸ್ಕ್ರೀನ್‌ಲ್ಲಿ ಕ್ಲಿಕ್ಕಿಸಿದ ಫೋಟೊ ನೋಡಿದೆ. ಓಹ್! ಆ ಕ್ಷಣವನ್ನು ವರ್ಣಿಸಲು ಸಾಧ್ಯವಿಲ್ಲ. ಕೊನೆಗೂ ‘ನಿಂತಲ್ಲೇ ರೆಕ್ಕೆಬಡಿಯುವ ಮಿಂಚುಳ್ಳಿ’ಯನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿವ ನನ್ನ ಕನಸು ಅಂದು ನನಸಾಗಿತ್ತು.

ಕ್ಲಿಕ್ಕಿಸಿದ್ದು ಎರಡು ಸೆಕೆಂಡ್‌ ಆದರೂ ಅದು ಮುಂದಕ್ಕೆ ಹಾರಿ ಹೋಗಿ, ಕೆಳಗಿದ್ದ ಪುಟ್ಟ ಹೊಂಡದಲ್ಲಿ ಮೀನು ಇರಬಹುದೇ ಅಂತ ಇಣುಕಿ ನೋಡಲು ಹೆಲಿಕಾಪ್ಟರ್‌ನಂತೆ ನಿಂತಿತು. ಆಗ ಫೋಕಸ್ ಆದ ನನ್ನ ಕ್ಯಾಮೆರಾ (ಬಹುತೇಕ ಕಡೆ ಪಕ್ಷಿ ಫೋಟೊ ತೆಗೆಯುವಾಗ ಫೋಕಸ್‌ ವಿಫಲವಾಗಿದ್ದುಂಟು) ಸೆಕೆಂಡಿಗೆ ನಾಲ್ಕು ಫ್ರೇಮ್‌ನಲ್ಲಿ, ಎರಡು ಸೆಕೆಂಡಿಗಿಂತ ಕಡಿಮೆ ಅವಧಿಯಲ್ಲಿ ಏಳು ಫ್ರೇಮ್‌ಗಳನ್ನು ಕ್ಲಿಕ್ಕಿಸಿತ್ತು. ಅದರಲ್ಲಿನ ಆರು ಫ್ರೇಮ್‌ನಲ್ಲಿ ಈಗ ನೀವು ನೋಡುತ್ತಿರುವ ಈ ಮಿಂಚುಳ್ಳಿ ವಿವಿಧ ಭಂಗಿಗಳು ಸೆರೆಯಾದವು. ಅದರಲ್ಲಿ ರೆಕ್ಕೆ ಅಗಲಿಸಿ ಕಾಲು ಮಡಿಚಿ, ತಲೆಕೆಳಗು ಮಾಡಿ ಕಣ್ಣಿನಿಂದ ಕೆಳಗಿರುವ ನೀರನ್ನು ನೋಡುತ್ತಿರುವುದು ನನ್ನ ಮೆಚ್ಚಿನ ಚಿತ್ರ. ನನ್ನ ಪಕ್ಷಿ ಛಾಯಾಗ್ರಹಣ ಜೀವನದಲ್ಲೇ ಮರೆಯಲಾಗದ ಅನುಭವ ಅದು! ಇನ್ನೊಂದು ಅತ್ಯುತ್ತಮ ಫೋಟೊವನ್ನು ಕ್ಲಿಕ್ಕಿಸುವವರೆಗೂ, ಈ ಚಿತ್ರ ನನ್ನ ಮನಃಪಟಲದಲ್ಲಿ ಅಚ್ಚೊತ್ತಿರುತ್ತದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು