ಬುಧವಾರ, ಜೂನ್ 23, 2021
30 °C

ಪುನುಗು ಬೆಕ್ಕಿನ ಮಲದಲ್ಲಿ ತಯಾರಾಗುತ್ತದೆ ದುಬಾರಿ ಕಾಫಿ

ನವೀನ ಪ್ಯಾಟಿಮನಿ Updated:

ಅಕ್ಷರ ಗಾತ್ರ : | |

Prajavani

ಪ್ರಪಂಚದಲ್ಲೇ ಅತ್ಯಂತ ಬೆಳೆಬಾಳುವ ಕಾಫಿಯಾದ ಕೊಫಿ ಲೂವಾಕ ಕಾಫಿ (Kopi Luwak Coffee) ತಯಾರಾಗುವುದು ಪುನುಗು ಬೆಕ್ಕಿನ (Civet Cat) ಸಹಾಯದಿಂದ ಎಂದರೆ ನಂಬಲಾಗುತ್ತಿಲ್ಲವೆ? ಹೌದು; ಇದು ಸತ್ಯ ಸಂಗತಿ. ಪ್ರಪಂಚದಲ್ಲೇ ಅತ್ಯಂತ ಬೆಳೆಬಾಳುವ ಕಾಫಿ ತಯಾರಾಗುವುದು ಪುನುಗು ಬೆಕ್ಕಿನ ಸಹಾಯದಿಂದ. 100 ಗ್ರಾಂ ಕಾಫಿಗೆ ₹12 ಸಾವಿರ ಬೆಲೆ. 

ಕಾಫಿಗೂ ಪುನುಗು ಬೆಕ್ಕಿಗೂ ಅದೇಗೆ ಸಂಬಂಧ ಎಂಬುದು ನಿಮ್ಮ ಪ್ರಶ್ನೆಯಾಗಿರಬಹುದು. ಪುನುಗು ಬೆಕ್ಕಿನ ಇಷ್ಟವಾದ ಆಹಾರ ಕಾಫಿಹಣ್ಣುಗಳು. ಪುನುಗು ಬೆಕ್ಕುಗಳು ಕಾಫಿ ತೋಟಕ್ಕೆ ಹೋಗಿ ಅತ್ಯುತ್ತಮವಾದ ಕಾಫಿ ಹಣ್ಣುಗಳನ್ನು ಆರಿಸಿ ತಿನ್ನುತ್ತವೆ. ಆದರೆ ಅದರ ಹೊಟ್ಟೆಯಲ್ಲಿ ಕಾಫಿ ಬೀಜಗಳು ಕರಗುವುದಿಲ್ಲ. ಬೀಜಗಳು ವಿಸರ್ಜನೆ(ಮಲದ) ಮುಖಾಂತರ ಹೊರ ಬರುತ್ತವೆ. ಇವುಗಳನ್ನು ಸಂಗ್ರಹಿಸಿ, ತೊಳೆದು, ಶುಚಿಮಾಡಿ, ಹುರಿದು ಪುಡಿ ಮಾಡಿ ಮಾರಾಟ ಮಾಡಲಾಗುತ್ತದೆ.

ಪುನುಗು ಬೆಕ್ಕುಗಳು ಕಾಫಿ ಬೀಜಗಳನ್ನು ತಿಂದಾಗ ಅದರ ಜೀರ್ಣಕ್ರಿಯೆಯಲ್ಲಿ ಕಾಫಿ ಬೀಜಗಳಲ್ಲಿರುವ ಆಮ್ಲದ ಅಂಶವನ್ನು (Acidic Content) ಬೇರ್ಪಡಿಸುತ್ತದೆ. ಉಪಯುಕ್ತವಾದ ಪ್ರೋಟೀನ್‌ನನ್ನು ತುಂಡರಿಸಲೂ ಸಹಾಯಮಾಡುತ್ತದೆ. ಈ ಕಾಫಿಯಿಂದ ಅನೇಕ ಆರೋಗ್ಯಕರ ಪ್ರಯೋಜನಗಳಿವೆ ಎಂಬುದು ವಿಜ್ಞಾನಿಗಳ ಅಭಿಪ್ರಾಯ. ಈ ಕಾಫಿಯನ್ನು ಕುಡಿಯುವುದರಿಂದ ಹಲ್ಲುಗಳು ಆರೋಗ್ಯಕರವಾಗಿರುತ್ತವೆ ಮತ್ತು ಶುಚಿಯಾಗಿರುತ್ತವೆ. ಚರ್ಮದ ಕ್ಯಾನ್ಸರ್ ಸಂಭವವನ್ನು ಶೇ 17ರಷ್ಟು ಕಡಿಮೆ ಮಾಡುತ್ತದೆ. ಸಕ್ಕರೆ ಕಾಯಿಲೆಯನ್ನು ಕಡಿಮೆ ಮಾಡುತ್ತದೆ. ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ ಮತ್ತು ಜೀರ್ಣಕ್ರಿಯೆಗೆ ಹೆಚ್ಚಿನ ನೇರವು ನೀಡುತ್ತದೆ. ವ್ಯಾಯಾಮ ಮಾಡಿದ ನಂತರ ಈ ಕಾಫಿಯನ್ನು ಕುಡಿದರೆ ಮಾಂಸಖಂಡಗಳ ನೋವು ಶೇ 48ರಷ್ಟು ಕಡಿಮೆಯಾಗುತ್ತದೆ. ನರಕ್ಕೆ ಸಂಬಂಧಪಟ್ಟ ರೋಗಗಳನ್ನು ತಡೆಯಲು ಸಹಾಯಮಾಡುತ್ತದೆ ಎನ್ನುತ್ತಾರೆ ವಿಜ್ಞಾನಿಗಳು.

ಕರ್ನಾಟಕ ಸೇರಿದಂತೆ ಇಡೀ ದಕ್ಷಿಣ ಭಾರತದ ಬಯಲು ಪ್ರದೇಶಗಳಲ್ಲಿ ಈ ಪುನುಗು ಬೆಕ್ಕುಗಳು ಕಂಡು ಬರುತ್ತವೆ. ಕರ್ನಾಟಕದಲ್ಲಿ ಉತ್ತರ ಕನ್ನಡ, ದಕ್ಷಿಣ ಕನ್ನಡ, ಕೊಡಗು ಜಿಲ್ಲೆಗಳಲ್ಲಿ ಕಂಡು ಬರುತ್ತದೆ. ಇವು ಮರವಾಸಿ. ಬಹಳವಾಗಿ ತಾಳೆ ಮರ, ಮಾವಿನ ಮರ ಮುಂತಾದ ಮರಗಳ ಮೇಲೆ ವಾಸಿಸುತ್ತವೆ. ದಟ್ಟ ಕಾಡುಗಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ನಗರಗಳು ಮತ್ತು ಹಳ್ಳಿಗಳ ಹತ್ತಿರವೂ ಕಂಡು ಬರುವುದುಂಟು. ಇವು ಪೊಟರೆ ಅಥವಾ ಕಲ್ಲುಗಳ ಕೆಳಗೆ ಅಥವಾ ಹುಲ್ಲಿನ ಮಧ್ಯೆ ಅಥವಾ ಪೊದರುಗಳಲ್ಲಿ ರಕ್ಷಣೆ ಪಡೆಯುತ್ತವೆ. ಇವು ನಿಶಾಚಾರಿ (Nocturnal). ಮರದ ಪೊಟರೆಗಳಲ್ಲಿ ಹಗಲೆಲ್ಲಾ ಅವಿತಿದ್ದು ರಾತ್ರಿ ಆಹಾರಾನ್ವೇಷಣೆಗೆ ಹೊರಡುತ್ತವೆ. ಮರವಾಸಿಯಾದರೂ ಆ ಜೀವನ ಬಿಟ್ಟು ಜನ ಸಂದಣಿಯಿರುವ ಊರುಗಳಲ್ಲಿ ವಾಸಿಸಲು ಹೊಂದಿಕೊಂಡಿವೆ. ಇವುಗಳ ಉದ್ದಳತೆ 2 ಅಡಿ ಇದ್ದರೆ ಅಷ್ಟೇ ಉದ್ದ ಬಾಲವನ್ನು ಹೊಂದಿರುತ್ತದೆ. ತೂಕ 2.7ರಿಂದ 4.5 ಕೆ.ಜಿ. ಮನೆಯ ಬೆಕ್ಕುಗಳಿಗಿಂತ ಸ್ವಲ್ಪ ದೊಡ್ಡವು. ತಲೆ ನೀಳ ಮತ್ತು ಮೂತಿ ಚೂಪಾಗಿದ್ದು, 40 ಹಲ್ಲುಗಳಿರುತ್ತವೆ. ವರ್ಷದ ಎಲ್ಲ ಕಾಲದಲ್ಲಿಯೂ ಮರಿ ಹಾಕುತ್ತವೆ. ಮರಿಗಳನ್ನು ಮರದ ಪೊಟರೆಗಳಲ್ಲಿ ಅಥವಾ ಬಂಡೆಗಳ ನಡುವಿನ ಸುರಕ್ಷಿತ ಸ್ಥಾನದಲ್ಲಿ ಹಾಕುತ್ತವೆ. ಒಮ್ಮೆಲೆ ಸಾಮಾನ್ಯವಾಗಿ 2–4 ಮರಿಗಳನ್ನು ಈಯುತ್ತವೆ. ಮರಿಗಳನ್ನು ಈಯಲು ನಿರ್ದಿಷ್ಟ ಪ್ರಾಯವಿಲ್ಲ. ಇಲಿ, ಅಳಿಲು, ಹಕ್ಕಿಗಳು ಇದರ ಮುಖ್ಯ ಆಹಾರ. ಇದರ ಜೊತೆಗೆ ವಿವಿಧ ಹಣ್ಣುಗಳನ್ನು ತಿನ್ನುತ್ತವೆ. ಸೇಂದಿ (ತಾಳೆ) ಮರಕ್ಕೆ ಹೆಂಡ ಇಳಿಸಲೆಂದು ಕಟ್ಟುವ ಮಡಿಕೆಗಳನ್ನು ಕೊಳ್ಳೆ ಹೊಡೆದು ಶೇಖರಿಸಿರುವ ಹೆಂಡವನ್ನು ಕುಡಿಯುವ ವಿಚಿತ್ರ ಸ್ವಭಾವ ಇವುಗಳಿಗೆ ಇರುವುದರಿಂದ ತಾಳೆ ಬೆಕ್ಕು ಎನ್ನುವ ಹೆಸರು ಕೂಡ ಬಂದಿದೆ.

ಕೊಳೆ ಬೂದು ಅಥವಾ ಬೂದು ಕಂದು ಮೈಬಣ್ಣ, ಬೆನ್ನಿನ ಭಾಗದಲ್ಲಿ ಉದ್ದಕ್ಕೆ ಹರಡಿದ ಪಟ್ಟೆಗಳಿವೆ. ಪಕ್ಕೆಗಳ ಸಾಲುಗಳಲ್ಲಿ ವ್ಯವಸ್ಥಿತವಾದ ಚುಕ್ಕೆಗಳಿವೆ. ಕುತ್ತಿಗೆಯ ಬಳಿ ಹೆಚ್ಚು ಕಡಿಮೆ ಅಡ್ಡಪಟ್ಟೆಯ ಸಾಲುಗಳಿವೆ. ಬಾಲ ಬಿಳಿ. ಬಾಲದುದ್ದಕ್ಕೂ ಕಪ್ಪು ಉಂಗುರಗಳಿವೆ. ಗಿಡ್ಡ ತಲೆ, ದೊಡ್ಡ ಕಿವಿ, ಹದನಾದ ನಖಗಳಿವೆ. ಗಂಡು ಮತ್ತು ಹೆಣ್ಣುಗಳೆರಡಲ್ಲಿಯೂ ಜನನೇಂದ್ರಿಯಗಳ ಬಳಿ ಸುಗಂಧ ಗ್ರಂಥಿಗಳಿವೆ. ಇವು ದೊಡ್ಡ ಚೀಲಗಳಂತಿದ್ದು ಅದನ್ನು ಮುಚ್ಚುವ ಮತ್ತು ತೆರೆಯುವ ರೋಮಭರಿತ ತುಟಿಗಳಿವೆ.

ಪುನುಗಿನ ಸುಗಂಧದ ದ್ರವ್ಯವನ್ನು ವಾರಕ್ಕೆ ಒಂದು ದಿನ ದೇವರಿಗೆ ಲೇಪನ ಮಾಡಲು ದೊಡ್ಡ ದೊಡ್ಡ ದೇವಾಲಯಗಳಲ್ಲಿ ಉಪಯೋಗಿಸುತ್ತಾರೆ. ಇದೊಂದು ವಿಶಿಷ್ಟವಾದ ದ್ರವ್ಯ ಎಂದು ದೇವಾಲಯದ ಅರ್ಚಕರು ಹೇಳುತ್ತಾರೆ. ಈ ದ್ರವ್ಯವನ್ನು ದೇವರಿಗೆ ಲೇಪನ ಮಾಡಿದಾಗ ಅದರ ಸುಗಂಧದ ಪರಿಮಳ ಪಸರಿಸಿ ಅಲ್ಲಿ ಹುಳುಗಳು, ಕೀಟಗಳು, ಇಲಿಗಳು, ಹೆಗ್ಗಣಗಳು ಮತ್ತು ಹಾವುಗಳು ಬರುವುದಿಲ್ಲ ಎಂದು ಅರ್ಚಕರು ಹೇಳುತ್ತಾರೆ. ಶಾಸ್ತ್ರದ ಪ್ರಕಾರ ಈ ಪುನುಗಿನ ದ್ರವ್ಯದಲ್ಲಿ 64 ಪುಷ್ಪಗಳ ಪರಿಮಳ ಇರುತ್ತದೆಯಂತೆ. ಒಮ್ಮೆ ಪುನುಗು ದ್ರವ್ಯವನ್ನು ದೇವರಿಗೆ ಲೇಪಿಸಿದರೆ 64 ಪುಷ್ಪಗಳನ್ನು ದೇವರಿಗೆ ಸಮರ್ಪಣೆ ಮಾಡಿದಂತಾಗುತ್ತದೆ ಎಂಬುದು ಅರ್ಚಕರು ನೀಡುವ ವಿವರಣೆ.

ಶ್ರೀಕೃಷ್ಣದೇವರಾಯರು 1517ರಲ್ಲಿ ಒಂದು ಸಹಸ್ರ ಚಿನ್ನದ ನಾಣ್ಯವನ್ನು ಮೂಡಿಪಾಗಿಟ್ಟು ಪುನುಗು ದ್ರವ್ಯವನ್ನು ವಾರಕ್ಕೆ ಒಂದು ದಿನ ದೇವರಿಗೆ ಲೇಪಿಸಲೆಬೇಕೆಂದು ಕಾನೂನು ಮಾಡಿ ಶಾಸನ ಬರೆಸಿದ್ದರು ಎಂಬುದು ಇತಿಹಾಸದ ಪುಟಗಳಲ್ಲಿ ಓದಲು ಸಿಗಲಿದೆ. ಪುನುಗಿನ ದ್ರವ್ಯ ನಿರ್ಮಾಣ ಆಗುವುದು ವಿಶೇಷವಾದ ಗ್ರಂಥಿಗಳಿಂದ, ಬೆಕ್ಕಿನ ದೇಹದಲ್ಲಿ ಉಷ್ಣತೆ ಹೆಚ್ಚಾದಾಗ ದ್ರವ್ಯ ಪಸರಿಸುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ.

ಮನುಷ್ಯನ ಶಾರೀರಿಕ ತೊಂದರೆಗಳನ್ನೂ ಸರಿಪಡಿಸಲು ಈ ಸುಗಂಧದ ದ್ರವ್ಯವನ್ನು ಅರೋಮಾಥೆರಪಿ (Aroma Therapy) ಮುಖಾಂತರ ಉಪಯೋಗಿಸುತ್ತಾರೆ. ಸುಗಂಧ ದ್ರವ್ಯವನ್ನು ಪಡೆಯುವುದಕ್ಕಾಗಿ ಊದುಕಡ್ಡಿ ತಯಾರಕರು ಇವುಗಳನ್ನು ಸಾಕುತ್ತಾರೆ. ಇವುಗಳನ್ನು ಸುಲಭವಾಗಿ ಪಳಗಿಸಬಹುದು. ಇದರಲ್ಲಿ ಐದು ಪ್ರಭೇದಗಳಿವೆ. ಅವುಗಳಲ್ಲಿ ಕೆಲವು ಕರ್ನಾಟಕದಲ್ಲಿಯೂ ದೊರಕುತ್ತವೆ.

ಉದಾಹರಣೆಗೆ ತಾಳೆ ಬೆಕ್ಕು(Palm Civet Cat)- ಶಾಸ್ತ್ರೀಯ ನಾಮ ಪ್ಯಾರಡಕ್ಸೂರಸ್ ಹರ್ಮಾಪ್ರೊಡೈಟಸ್ (Paradoxurus hermaphrodites)

ಪುನುಗು ಬೆಕ್ಕು (Small Indian Civet Cat)- ಶಾಸ್ತ್ರೀಯ ನಾಮ ವಿವೆರಿಕುಲ ಇಂಡಿಕ (Viverricula indica)

ಮಲಬಾರ್ ಪುನುಗು ಬೆಕ್ಕು(Malbar Civet Cat)- ಶಾಸ್ತ್ರೀಯ ನಾಮ ವಿವೆರ ಮೆಗಾಸ್ಪಿಲ(Viverra megaspila)

**

ಲೇಖಕರು: ನವೀನ ಪ್ಯಾಟಿಮನಿ, ಸಹಾಯಕ ಉಪನ್ಯಾಸಕ, ಕರ್ನಾಟಕ ವಿಜ್ಞಾನ ಮಹಾವಿದ್ಯಾಲಯ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು