ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಗಳಿಗೆ ಮಮಕಾರದ ಆಹಾರ

Last Updated 26 ಆಗಸ್ಟ್ 2019, 19:30 IST
ಅಕ್ಷರ ಗಾತ್ರ

ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ಚಂದಾಪುರ ಪುಟ್ಟ ಹಳ್ಳಿ. ಇದು ತುಂಗಭದ್ರೆಯ ತಟದಲ್ಲಿದೆ. ಹದಿನೈದು ದಿನಗಳ ಹಿಂದೆ ಐದಾರು ದಿನಗಳ ಕಾಲ ಬಿಡುವಿಲ್ಲದೇ ಸುರಿದ ಮಳೆಯಿಂದಾಗಿ ಈ ಗ್ರಾಮ ಜಲಾವೃತವಾಯಿತು. ಮಳೆಯ ಜತೆಗೆ, ಭದ್ರಾ ಜಲಾಶಯದಿಂದ ಕಾಲುವೆಗೆ ನೀರು ಬಿಟ್ಟಿದ್ದರಿಂದ, ಊರಷ್ಟೇ ಅಲ್ಲ, ಸುತ್ತಲಿನ ಕೃಷಿ ಜಮೀನಿನಲ್ಲಿ ನೀರು ತುಂಬಿಕೊಂಡಿತು.‌

ಜಲಾಶಯದ ನೀರು ಹೆಚ್ಚಾಗುವ ಮುನ್ಸೂಚನೆ ಅರಿತಿದ್ದ ಗ್ರಾಮಸ್ಥರು, ತಮ್ಮ ದನಕರು, ಸಾಮಾನು ಸರಂಜಾಮುಗಳನ್ನು ಸುರಕ್ಷಿತ ಪ್ರದೇಶಕ್ಕೆ ತಲುಪಿಸಿದರು. ಆದರೆ, ದೋಣಿ ನಂಬಿಕೊಂಡಿರುವವರು ಮಾತ್ರ ಮನೆಗೊಬ್ಬರಂತೆ ಊರಿನಲ್ಲಿಯೇ ಉಳಿದರು. ಪ್ರವಾಹದ ನೀರು ಊರಿನ ಅಗಸಿ ಬಾಗಿಲನ್ನು ಎಡತಾಕಿ ‘ಜೀವ’ದ ಅಂಗಳಕ್ಕೆ ಎಗರುವ ಹಂತದಲ್ಲಿ ಮಳೆ ಕಡಿಮೆಯಾಯಿತು. ನೆರೆ ಪ್ರಮಾಣ ತಗ್ಗಿತು.

ಆದರೆ, ನೆರೆ ಊರಿನಿಂದ ತುಸುದೂರದಲ್ಲಿ ಹುಣಸೆಮರಕ್ಕೆ ಜಲದಿಗ್ಭಂದನ ಹಾಕಿತ್ತು. ಆ ಮರದ ಮೇಲೆ ಐವತ್ತಕ್ಕೂ ಹೆಚ್ಚು ಮಂಗಗಳಿದ್ದವು. ನೀರು ಸುತ್ತುವರಿದಿದ್ದರಿಂದ ಕೆಳಗಿಳಿಯಲಾಗದೇ ಎರಡು ಮೂರು ದಿನಗಳಿಂದ ಆಹಾರವೂ ಸಿಗದೇ ಮರದಲ್ಲೇ ಕುಳಿತುಕೊಂಡು ಆಹಾರಕ್ಕಾಗಿ ಅರಚತೊಡಗಿದವು. ಮಂಗಗಳ ಆರ್ತನಾದ ಊರಿನ ಗ್ರಾಮ ದೇವತಾ ಕಮಿಟಿಯ ಹಿರಿಯರ ಕಿವಿಗೆ ಕೇಳಿಸಿತು. ಕಮಿಟಿಯವರು ಊರಿನ ಯುವಕರಿಗೆ (ಚಂದ್ರಮೌಳೇಶ್ವರ ಯುವಕ ಸಂಘದ ಸದಸ್ಯರು) ‘ಮಂಗಗಳಿಗೆ ಬಾಳೆ ಹಣ್ಣಾದರೂ ತಲುಪಿಸಿ’ ಎಂದು ಸಲಹೆ ನೀಡಿದರು.

ಹಿರಿಯರ ಮಾತಿಗೆ ಸ್ಪಂದಿಸಿದ ಯುವಕರು ಚೀಲದಲ್ಲಿ ಬಾಳೆಹಣ್ಣು ತುಂಬಿಕೊಂಡು, ದೋಣಿ ಏರಿ ಮರದ ಬಳಿ ಹೋಗಿ, ಮರದ ಮೇಲಿದ್ದ ಮಂಗಗಳಿಗೆ ಬಾಳೆ ಹಣ್ಣು ಹಂಚಿದರು. ಹಸಿವಿನಿಂದ ಕಂಗಾಲಾಗಿದ್ದ ಮಂಗಗಳು ತುಸು ಸಮಾಧಾನಗೊಂಡವು.

ಯುವಕರ ಈ ಕಾರ್ಯ ಊರಿಗೆಲ್ಲ ಹರಡಿತು. ಮರುದಿನ ಕೆಲವು ದಾನಿಗಳು ಇನ್ನಷ್ಟು ಬಾಳೆಹಣ್ಣು ತಂದುಕೊಟ್ಟರು. ಹೀಗೆ ಪ್ರವಾಹ ಉಂಟಾದ ಐದೂ ದಿನಗಳಲ್ಲೂ ಊರಿನವರೆಲ್ಲ ಸೇರಿ ಮರ ಏರಿದ್ದ ಮಂಗಗಳಿಗೆ ಬಾಳೆಹಣ್ಣು ನೀಡುತ್ತಾ, ಅವುಗಳ ಹಸಿವು ನೀಗಿಸಿದರು.

ಇಷ್ಟಕ್ಕೂ ಊರಿನವರ ಪರಿಸ್ಥಿತಿ ಪ್ರಾಣಿಗಳಿಗಿಂತ ಭಿನ್ನವಾಗಿರಲಿಲ್ಲ. ಪ್ರವಾಹದ ನೀರು ಊರಿನ ಅಂಗಳದಾಟಿ, ಮನೆಗಳ ಅಡುಗೆ ಮನೆಗೂ ನುಗ್ಗಿತ್ತು. ಯಾರೂ ಅಡುಗೆ ಮಾಡುವ ಸ್ಥಿತಿಯಲ್ಲಿರಲಿಲ್ಲ. ಅನ್ನ ಮಾಡಿದರೆ, ಸಾಂಬಾರು ಇಲ್ಲದೇ ಊಟ ಮಾಡುತ್ತಿದ್ದರು. ಇನ್ನೊಂದು ಕಡೆ ಭತ್ತ ನಾಟಿ ಮಾಡಿದ್ದ ಗದ್ದೆಗಳೆಲ್ಲ ನಾಶವಾಗಿದ್ದವು. ಪೈರುಗಳು ನೆಲ ಕಚ್ಚಿತು. ಮನೆಯ ಗೋಡೆಗಳು ಬಿದ್ದು ಹೋದವು. ಇಂಥ ಸಂಕಷ್ಟದ ನಡುವೆ ತಮ್ಮ ನೋವಿಗಿಂತ, ಪ್ರಾಣಿಗಳ ಹಸಿವೇ ದೊಡ್ಡದೆಂದು ತಿಳಿದುಕೊಂಡರು ಗ್ರಾಮಸ್ಥರು. ಆ ಮೂಕ ಪ್ರಾಣಿಗಳ ಹಸಿವಿನ ಕೂಗಿಗೆ ಸ್ಪಂದಿಸಿ ಮಾನವೀಯತೆ ಮೆರೆದ ಅವರ ಕಾರ್ಯ ನಿಜಕ್ಕೂ ಶ್ಲಾಘನೀಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT