ಹಾರುತಾ ದೂರ ದೂರ...

7

ಹಾರುತಾ ದೂರ ದೂರ...

Published:
Updated:

ಆಲಮಟ್ಟಿ ಅಣೆಕಟ್ಟು ಬಂದ ಮೇಲೆ ಬಾಗಲಕೋಟೆ ಭೌಗೋಳಿಕ ಹಾಗೂ ಸಾಂಸ್ಕೃತಿಕವಾಗಿಯೂ ಸಾಕಷ್ಟು ಬದಲಾವಣೆಗಳನ್ನು ಕಂಡಿದೆ. ಅಣೆಕಟ್ಟಿನ ಹಿನ್ನೀರಿನಲ್ಲಿ ಮನೆ ಕಳೆದುಕೊಂಡವರು, ನವನಗರದಲ್ಲಿ ಹೊಸನೆಲೆ ಕಂಡುಕೊಳ್ಳುತ್ತಾ ಹೊಸ ಬದುಕು ಕಟ್ಟಿಕೊಂಡಿದ್ದಾರೆ. ಹೀಗೆ ನವಜೀವನ ಕಂಡುಕೊಂಡವರ ಪಟ್ಟಿಯಲ್ಲಿ ಪಕ್ಷಿಸಂಕುಲವೂ ಸೇರಿದೆ.

ಹಿನ್ನೀರು ಪ್ರದೇಶದಲ್ಲಿ ಈ ಹತ್ತು ವರ್ಷಗಳಲ್ಲಿ ಪಕ್ಷಿಗಳ ಚಟುವಟಿಕೆಗಳು ಹೆಚ್ಚಾಗಿವೆ. ವಿಜಯಪುರ ಜಿಲ್ಲೆಗೆ ಹೊಂದಿಕೊಂಡಂತಿರುವ ಚಿಕ್ಕಸಂಗಮ, ಬೀಳಗಿ, ಹೆರ್ಕಲ್, ಕೋಲ್ಹಾರ್, ಆಲಮಟ್ಟಿ, ಹಿಪ್ಪರಗಿ ಭಾಗಗಳಲ್ಲಿ ಬಂದು ಬಿಡಾರಹೂಡುವ ಪಕ್ಷಿಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಅಂಥ ಪಕ್ಷಿಗಳಲ್ಲಿ ಪ್ರಮುಖವಾಗಿ ಕರಿಕೆಂಬರಲು, ರಾಜಹಂಸ ಮತ್ತು ಬಣ್ಣದ ಕೊಕ್ಕರೆಗಳ ಪಾಲು ದೊಡ್ಡದು. ಇವುಗಳಲ್ಲಿ ಪ್ರಮುಖವಾಗಿ ರಾಜಹಂಸ (ಫ್ಲೆಮಿಂಗೋ)ಗಳಂತೂ ತುಸು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿವೆ.

ವಿಶಿಷ್ಟ ಆಕಾರದ ‘ರಾಜಹಂಸ’
ನೀಳಕಾಯ, ಉದ್ದವಾಗಿ ಹಿಮ್ಮುಖವಾಗಿ ಮಡಿಸಬಹುದಾದ ಕೆಂಪು ಬಣ್ಣದ ಉದ್ದನೆಯ ಕಾಲುಗಳು, ಇಂಗ್ಲಿಷ್‌ನ ‘S’ ಆಕಾರದಂತೆ ಕಾಣುವ ಕೊರಳು, ಗುಲಾಬಿ, ದೇಹದ ಬಹುಭಾಗವನ್ನಾವರಿಸಿಕೊಂಡ ಕೆನೆಮಿಶ್ರಿತ ಬಿಳಿ, ಕೆಲವೊಮ್ಮೆ ಕಿತ್ತಳೆ ಬಣ್ಣಗಳ ಗರಿ - ಇದು ರಾಜಹಂಸದ ಪ್ರಮುಖ ಲಕ್ಷಣಗಳು.

ಈ ಹಕ್ಕಿ ಐದು ಅಡಿ ಎತ್ತರದವರೆಗೆ ಬೆಳೆಯುತ್ತದೆ. ಎತ್ತರಕ್ಕೆ ಹೋಲಿಸಿದರೆ, ದೇಹದ ತೂಕ ಕಡಿಮೆ. ಇದರ ಕಾಲ ಬೆರಳುಗಳ ನಡುವೆಯಿರುವ ತೆಳುಚರ್ಮದಂತಹ ಪಾದಗಳ ರಚನೆಯಿಂದಾಗಿ ನೀರಿನಲ್ಲಿ ತುಸು ದೂರದವರೆಗೆ ನಡೆಯಬಲ್ಲವು. ಹುಟ್ಟಿದಾಗ ಬಿಳಿ ಬಣ್ಣ ಹೊಂದಿರುವ ರಾಜಹಂಸದ ಮರಿಯ ಪುಕ್ಕಗಳು ಪ್ರಾಯಕಳೆದಂತೆ ಬಣ್ಣ ಬದಲಾಯಿಸುತ್ತವೆ. ತಾನು ತಿನ್ನುವ ಆಹಾರದಿಂದ ಈ ಗುಲಾಬಿ ಬಣ್ಣವನ್ನು ಪಡೆಯುವ ಈ ಪಕ್ಷಿಯು ಸೋಸುಕಗಳನ್ನೊಳಗೊಂಡ ತನ್ನ ಕೊಕ್ಕನ್ನು ಬಳಸಿ ನೀರಿನಿಂದ ತಾನು ಹೆಕ್ಕಿ ತೆಗೆದ ಆಹಾರದ ಜೊತೆಗಿರುವ ಕೆಸರು ಮತ್ತು ಮರಳನ್ನು ಪ್ರತ್ಯೇಕಿಸುತ್ತದೆ. ಈ ಪಕ್ಷಿಗಳು ಮರಿಮಾಡುವ ಸಮಯದಲ್ಲಿ ಗಂಡು, ಹೆಣ್ಣು ಎರಡೂ ಜೊತೆಗೆ ಗೂಡನ್ನು ಕಟ್ಟುತ್ತವೆ. ಪ್ರಸವದ ನಂತರ ಹೆಣ್ಣಿನ ಜೊತೆಗೆ ಗಂಡೂ ಮರಿಗೆ ಹಾಲು ಉಣಿಸುತ್ತದೆ. ಇಂಥ ಅಪರೂಪದ ಪ್ರಕ್ರಿಯೆಯನ್ನು ಪಾರಿವಾಳಗಳಲ್ಲೂ ಕಾಣಬಹುದು.

ಗುಂಪಿನಲ್ಲಿ ವಾಸಿಸುವ ಆಕರ್ಷಕ ಬಣ್ಣಗಳ ರಾಜಹಂಸಗಳ ಜೀವನಶೈಲಿಯೇ ವಿಶಿಷ್ಟ. ನದಿ, ಕೆರೆ ತೀರದಲ್ಲಿ ದೊಡ್ಡ ದೊಡ್ಡ ಸಂಖ್ಯೆಯ ತಂಡದಲ್ಲಿ ಬಿಡಾರ ಹೂಡುವ ಈ ಹಕ್ಕಿಗಳನ್ನು ನೋಡುವುದೇ ಕಣ್ಣಿಗೆ ಹಬ್ಬ. ಮೊದಲಿಗೆ ಇವುಗಳನ್ನು ಕಂಡಾಗ ಇವು ಬಾತುಗಳೋ, ಕೊಕ್ಕರೆಯೋ ಎಂಬುದರ ಬಗ್ಗೆ ಪಕ್ಷಿತಜ್ಞರಲ್ಲಿ ಸಾಕಷ್ಟು ಚರ್ಚೆಗಳು ನಡೆದವು. ಕೊನೆಗೆ ಇವುಗಳನ್ನು ರಾಜಹಂಸವೆಂದು ಪ್ರತ್ಯೇಕ ಪ್ರಬೇಧವಾಗಿ ಗುರುತಿಸಲಾಯಿತು. ಇವುಗಳಲ್ಲಿ ಆರು ಉಪಜಾತಿಗಳನ್ನು ಪತ್ತೆ ಮಾಡಲಾಗಿದೆ. ನದಿ, ಕೆರೆ ತೀರದಲ್ಲಿ, ಹೆಚ್ಚು ನೀರಿರುವ ಸ್ಥಳದಲ್ಲಿ ಇವು ನೆಲೆ ನಿಲ್ಲುತ್ತವೆ. ಅದರಲ್ಲೂ ತಮ್ಮ ನೆಚ್ಚಿನ ಆಹಾರವಾದ ಮೃದ್ವಂಗಿ, ಕೀಟಗಳು ಹಾಗೂ ಪಾಚಿ ಲಭ್ಯವಿದ್ದಕಡೆ ರಾಜಹಂಸಗಳು ಠಿಕಾಣಿ ಹೂಡುತ್ತವೆ.


ವಲಸಿಗ ಹಕ್ಕಿಗಳು
ರಾಜಹಂಸಗಳ ವಾಸಕ್ಕೆ ಅನುಕೂಲಕರ ವಾತಾವರಣವಿರುವುದರಿಂದ ಬಾಗಲಕೋಟೆ ಅವುಗಳಿಗೆ ಭದ್ರಕೋಟೆಯಾಗಿದೆ. ಅಷ್ಟಕ್ಕೂ ಈ ಹಂಸಗಳು ಇಷ್ಟೊಂದು ಸಂಖ್ಯೆಯಲ್ಲಿ ಏಕೆ ಬರುತ್ತಿವೆ?
ಅದನ್ನು ಪಕ್ಷಿತಜ್ಞರು ಹೀಗೆ ವಿಶ್ಲೇಷಿಸುತ್ತಾರೆ. ರಾಜಹಂಸ ಪಕ್ಷಿಗಳು ಭಾರತದಲ್ಲಿ ಹೆಚ್ಚಾಗಿ ಕಂಡುಬರುವುದು ಗುಜರಾತಿನ ಕಛ್ ಪ್ರದೇಶದಲ್ಲಿ. ಆದರೆ, ಆ ಪ್ರದೇಶದಲ್ಲಿ ಕಟ್ಟಡ ನಿರ್ಮಾಣ ಸೇರಿದಂತೆ ಬೇರೆ ಬೇರೆ ಚಟುವಟಿಕೆಗಳು ನಡೆಯುತ್ತಿರುವ ಕಾರಣ, ಈ ಪಕ್ಷಿಗಳ ವಾಸಕ್ಕೆ ತೊಡಕಾಗಿದ್ದು, ಹೀಗಾಗಿ ಇವುಗಳು ಹೊಸ ನೆಲೆಯ ಹುಡುಕಾಟದಲ್ಲಿವೆ. ಹೇಳಿಕೇಳಿ ಬಹುದೂರ ಹಾರುವ ಈ ಪಕ್ಷಿಗಳು ಹೊಸನೆಲೆ ಹುಡುಕಿಕೊಂಡು ಇಲ್ಲಿಗೂ ಬಂದಿವೆ. ಇಲ್ಲಿ ಅವುಗಳ ಸಂತಾನೋತ್ಪತ್ತಿಗೆ ಪೂರಕ ವಾತಾವರಣವಿರುವುದರಿಂದ ನೆಲೆ ನಿಲ್ಲಲು ಕಾರಣವಾಗಿದೆ. ಈ ಮಾತನ್ನು ಬೀಳಗಿಯ ಪಕ್ಷಿವೀಕ್ಷಕ ದಾವಲ್ ನದಾಫ ಪುಷ್ಟಿಕರಿಸುತ್ತಾರೆ. ‘ಬೀಳಗಿ ಭಾಗದಲ್ಲಿ ಎರಡು ವರ್ಷಗಳ ಹಿಂದೆ ಎರಡು ಸಾವಿರ ಪಕ್ಷಿಗಳನ್ನು ಪತ್ತೆ ಮಾಡಿದ್ದೆವು. 2017ರಲ್ಲಿ ಅವುಗಳ ಸಂಖ್ಯೆ ನಾಲ್ಕುನೂರಕ್ಕೆ ಕುಸಿಯಿತು. ಆ ವರ್ಷ ಮಳೆ ಹೆಚ್ಚಾಗಿರುವುದೇ ಕಾರಣವಿರಬಹುದು’ ಎನ್ನುವುದು ಅವರ ಅಭಿಪ್ರಾಯ.

ಬಾಗಲಕೋಟೆಗೆ ನವೆಂಬರ್ ತಿಂಗಳ ಹೊತ್ತಿಗೆ ರಾಜಹಂಸಗಳು ಬರುತ್ತವೆ. ಮುಂದಿನ ಮೇ ತಿಂಗಳವರೆಗೆ ಇಲ್ಲೇ ಮೊಕ್ಕಾಂ ಹೂಡುತ್ತವೆ. ಪಕ್ಷಿಗಳನ್ನು ನೋಡಲು, ಛಾಯಾಗ್ರಹಣಕ್ಕಾಗಿ ಬೆಂಗಳೂರು, ಮೈಸೂರು ಕಡೆಯಿಂದ ಪಕ್ಷಿವೀಕ್ಷಕರು ಇಲ್ಲಿಗೆ ಬರುತ್ತಾರೆ. ಈ ಪಕ್ಷಿಗಳ ಆವಾಸಕ್ಕೆ ಕುತ್ತು ಬರದಂತೆ ನೋಡಿಕೊಳ್ಳುವ ಜವಾಬ್ದಾರಿ ಎಲ್ಲರ ಮೇಲಿದೆ.

ವಲಸೆ ಪಕ್ಷಿತಾಣದ ಸಾಧ್ಯತೆ ?
ಪರಿಸರವಾದಿ ಡಾ. ಅ.ನಾ. ಯಲ್ಲಪ್ಪರೆಡ್ಡಿ ಅವರ ನೇತೃತ್ವದ ತಂಡವೊಂದು ಈ ಭಾಗದಲ್ಲಿ ಪಕ್ಷಿಗಳ ಸಮೀಕ್ಷೆ ನಡೆಸಿತ್ತು. ಇಲ್ಲಿನ ಪಕ್ಷಿಗಳ ಸಂತತಿಯ ಪ್ರಮಾಣವನ್ನು ಗಮನಿಸಿದ ತಂಡ, ಈ ಭಾಗವನ್ನು ವಲಸೆ ಪಕ್ಷಿ ಸಂರಕ್ಷಿತ ಪ್ರದೇಶವನ್ನಾಗಿ ಘೋಷಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಿದೆಯಂತೆ. ಹಾಗೇನಾದರೂ ಆದರೆ, ಈ ಬಾಗಲಕೋಟೆ ಪಕ್ಷಿಗಳಿಗೆ ಇನ್ನಷ್ಟು ನೆಲೆ ಒದಗಿಸುವ ತಾಣವಾಗುತ್ತದೆ. ಜಾಗತಿಕ ಭೂಪಟದಲ್ಲಿ ಒಂದು ಪ್ರಮುಖ ವಲಸೆ 
ಪಕ್ಷಿಗಳ ತಾಣವಾಗಿ ಪರಿಚಯಗೊಳ್ಳುವುದರಲ್ಲಿ ದೂರವಿಲ್ಲ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !