ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಗುಸಿಗಳ ಚಿನ್ನಾಟ...

Last Updated 27 ಮೇ 2019, 19:30 IST
ಅಕ್ಷರ ಗಾತ್ರ

ಅವತ್ತು ನಾನು ಧಾರವಾಡ ಜಿಲ್ಲೆಯ ಕಲಘಟಕಿ ತಾಲ್ಲೂಕಿನ ಮಿಶ್ರಿಕೋಟಿ ಗ್ರಾಮಕ್ಕೆ ಭೇಟಿಕೊಟ್ಟಿದ್ದೆ. ಬೆಳಗಿನ ಬೆಳಕಿನಲ್ಲಿ ಹಕ್ಕಿಗಳ ಫೋಟೊ ತೆಗೆಯುವುದು ನನ್ನ ಉದ್ದೇಶ. ನಸುಕಿನ 6 ಗಂಟೆಯ ಸುಮಾರಿಗೆ ಪುಟ್ಟಕ್ಯಾಮೆರಾ ಹೆಗಲಿಗೇರಿಸಿಕೊಂಡು, ಊರಿನ ಹೊರವಲಯಕ್ಕೆ ನನ್ನ ಸವಾರಿ ನಡೆಯಿತು. ಸುಮ್ಮನೆ ಹೋಗುತ್ತಿದ್ದ ನನ್ನ ಕಾಲುಗಳಿಗೆಹೊಲದ ಮೂಲೆಯೊಂದರಲ್ಲಿ ಆದ ಅಲುಗಾಟ ತಡೆಯೊಡ್ಡಿತು. ನನ್ನ ಊಹೆ ತಪ್ಪಾಗಲಿಲ್ಲ. ಅಲ್ಲಿ ಎರಡು ಮುಂಗುಸಿಗಳು ಗುದ್ದಾಟಕ್ಕೆ ನಿಂತಿದ್ದಂತೆ ಕಂಡವು.

ಒಂದು ಕೆಳಗೆ, ಮತ್ತೊಂದು ಅದರ ಮೇಲೆ ಸವಾರಿ ಮಾಡುತ್ತಾ, ಕಿಚಿ ಕಿಚಿ... ಕಿರುಚಾಡುತ್ತಿದ್ದವು. ಅವಕ್ಕೆ ಇಹಲೋಕದ ಪರಿವೆ ಇರಲಿಲ್ಲ. ಇಷ್ಟಕ್ಕೂ ಕಾಡಲ್ಲಿ ಇಹ ಲೋಕದ ಪರಿವೆ ಏಕಿರಬೇಕು? ಅವುಗಳದ್ದೇ ಜಾಗವಲ್ಲವೇ

ಸಾಮಾನ್ಯವಾಗಿ ಮುಂಗುಸಿಗಳು ಹಾವುಗಳೊಂದಿಗೆ ಕಾದಾಡುವಾಗ ಹೀಗೆ ಚೀರಾಡುವುದನ್ನು ನೋಡಿದ್ದೆ. ಇಲ್ಲೂ ಹಾಗೇ ಆಗಿರಬೇಕು ಎಂದುಕೊಂಡು ಪೊದೆಗಳ ಮರೆಯಲ್ಲಿ ಅವಿತು ಕುಳಿತು, ಹೆಗಲೇರಿದ ಕ್ಯಾಮೆರಾ ಇಳಿಸಿದೆ. ಲೆನ್ಸ್‌ ಕ್ಯಾಪ್ ತೆರೆದು, ಮುಂಗುಸಿಗಳತ್ತ ಕ್ಯಾಮೆರಾ ಗುರಿ ಇಟ್ಟು, ಜೂಮ್ ಮಾಡಿದೆ. ನಾನು ಅಂದುಕೊಂಡಂತೆ ಅದು ಮುಂಗುಸಿಗಳಜಗಳ ಆಗಿರಲಿಲ್ಲ; ಅದು ಅವುಗಳ ಸರಸ ಸಲ್ಲಾಪ, ಮಿಲನೋತ್ಸವವಾಗಿತ್ತು!

ಕುತೂಹಲ ಹೆಚ್ಚಾಯಿತು. ಇನ್ನಷ್ಟು ಹತ್ತಿರದಿಂದ ಫೋಟೊ ತೆಗೆಯಬೇಕೆನ್ನಿಸಿತು. ಅವುಗಳ ಸಮೀಪಕ್ಕೆ ಹೋಗೋಣ ಎಂದುಕೊಂಡೆ. ಆದರೆ, ಮುಂಗುಸಿಗಳು ಮಾತ್ರವಲ್ಲ ಕಾಡುಪ್ರಾಣಿಗಳು ಬಹಳ ಸೂಕ್ಷ್ಮಗ್ರಾಹಿಗಳು. ಸಣ್ಣ ಸದ್ದಾದರೂ ಕುತ್ತಿಗೆ ಸರಕ್ ಸರಕ್‌ ಎಂದು ಅಲ್ಲಾಡಿಸಿಕೊಂಡು ಓಡಿಬಿಡುತ್ತವೆ. ಅದಕ್ಕೆ ನಾನೇ ಒಂದು ಕಡೆ ಠಿಕಾಣಿ ಹಾಕಿದೆ. ಕ್ಯಾಮೆರಾ ಫಿಕ್ಸ್ ಮಾಡಿಕೊಂಡೆ. ಶುರುವಾಯ್ತು ‘ಫ್ರೇಮ್ ಬೈ ಫ್ರೇಮ್‌’ ಫೋಟೊ ತೆಗೆಯುತ್ತಿದ್ದೆ. ಆ ದೃಶ್ಯದಲ್ಲಿ ಒಂದು ಮುಂಗುಸಿ ಮತ್ತೊಂದರ ಮೇಲೆ ಹತ್ತಿ, ಮೂತಿಗೆ ತಿವಿಯಿತ್ತಿತ್ತು. ಅವುಗಳ ಭಾವ, ಭಂಗಿ, ನೋಟ, ನಾಲಿಗೆ ತಿರುಗಿಸುವ, ಹಲ್ಲು ಕಿರಿಯುವುದನ್ನು ನೋಡುತ್ತಿದ್ದರೆ ‘ಸರಸಕೆ ಬಾರೇ ಪ್ರೇಮ ಸಖಿ’ ಎಂದು ಹಾಡಿಗೆ ನೃತ್ಯ ಮಾಡಿದಂತಿತ್ತು. ಅವುಗಳ ಕ್ಷಣ ಕ್ಷಣದ ಭಂಗಿಗಳು ಕ್ಯಾಮೆರಾದಲ್ಲಿ ಸೆರೆಯಾದವು.

ಇಷ್ಟೆಲ್ಲ ಕಂಡ ಮೇಲೆ ಮನಸ್ಸು ಕೇಳುತ್ತದೆಯೇ. ಅವುಗಳ ಸಮೀಪಕ್ಕೆ ಹೋಗಲೇಬೇಕೆಂದು ಹಟ ಹಿಡಿಯಿತು. ಹಾಗೇ ನೆಲದ ಮೇಲೆ ತೆವಳುತ್ತಾ ಮುಂದೆ ಹೋದೆ. ಒಂದು ಮುಂಗುಸಿಗೆ ತೆವಳುವ ಶಬ್ದ ಕೇಳಿಸಿತೇನೋ, ಅದು ನನ್ನತ್ತ ದುರುಗುಟ್ಟಿ ನೋಡಿತು. ಶಬ್ದವೇಧಿ ಬಾಣದಂತೆ, ಕತ್ತನ್ನು ಅತ್ತಿತ್ತ ಹೊರಳಿಸಿತು. ಬಿರಿದ ಕಣ್ಣುಗಳನ್ನು ನೋಡಿ, ‘ಓ... ಇವರು ಜಾಗ ಬಿಟ್ರಪ್ಪಾ’ ಎಂದುಕೊಂಡೆ. ಆದರೆ, ಇನ್ನೊಂದು ಮುಂಗುಸಿ, ಅದರ ನೋಟವನ್ನೇ ಬದಲಿಸಿ, ಸರಸಕೆ ಕರೆಯಿತೇನೋ... ಮತ್ತೆ ‘ಶೋ’ ಮುಂದುವರಿಯಿತು.

ಎಳೆ ಬಿಸಿಲು ಮೆಲ್ಲಗೆ ಕಾಲಿಡಲು ಶುರು ಮಾಡಿತು. ತಂಗಾಳಿಯೂ ಜತೆಯಾಯಿತು. ಚಿರಿ ಚಿರಿ ಎಂದು ತರಗೆಲೆಗಳ ಶಬ್ದವೂ ನನ್ನಚಿತ್ರೀಕರಣಕ್ಕೆಹಿನ್ನೆಲೆ ಸಂಗೀತದಂತಿತ್ತು.

ಅಲ್ಲಿವರೆಗೂ ಒಂದು ಮುಂಗುಸಿ ಶಬ್ದ ಆಲಿಸುತ್ತಿದ್ದರೆ, ಈಗ ಎರಡೂ ಕಣ್ಣರಳಿಸಿ ನೋಡಲಾರಂಭಿಸಿದವು. ಛಾಯಾಗ್ರಹಣ ಮುಂದುವರಿದಿತ್ತು. ಒಂದೆರಡು ತುಣುಕು ವಿಡಿಯೊ ರೆಕಾರ್ಡ್ ಮಾಡಿದೆ. ನೋಡ ನೋಡುತ್ತಿರುವಂತೆಯೇ, ಕ್ಯಾಮೆರಾ ಎದುರಿನಿಂದ ಎರಡೂ ಮುಂಗುಸಿಗಳು ಸದ್ದಿಲ್ಲದೇ ಸರಿದ ಹೋದವು. ಪಾತ್ರಧಾರಿಗಳು ಕೈಕೊಟ್ಟಿದ್ದರಿಂದಾಗಿ ಶೃಂಗಾರಮಯ ಸಿನಿಮಾದ ಚಿತ್ರೀಕರಣ ನಿಂತಿತು.

ಬಹುಶಃ, ಮುಂಗುಸಿಗಳಿಗೆ ಇದು ಪ್ರಣಯದ ಕಾಲ ಎನ್ನಿಸುತ್ತದೆ. ಅದಕ್ಕೆ ಈ ಕಾಡಿನಲ್ಲಿ ವಿಹರಿಸಲು ಬಂದಿರಬಹುದು. ನಾನೇನಾದರೂ ತೊಂದರೆ ಮಾಡಿಬಿಟ್ಟನೇನೋ ಎಂದು ಮನಸ್ಸು ಚೂರು ಕಸಿವಿಸಿಗೊಂಡಿದ್ದಂತೂ ಹೌದು.

ಚಿತ್ರಗಳು: ಲೇಖಕರವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT