ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲೋ ಹುಲಿರಾಯ ನಿನ್ನ ಅರಮನೆ?!

Last Updated 29 ಜುಲೈ 2019, 2:58 IST
ಅಕ್ಷರ ಗಾತ್ರ

ಜಿಮ್‌ ಕಾರ್ಬೆಟ್‌ಗೆ ಬೇಟೆಯೇ ಸರ್ವಸ್ವವಾಗಿತ್ತು. ಶಿಕಾರಿ ದಕ್ಕದಿರುವುದಕ್ಕೆ ತಮ್ಮ ಹಣೆಬರಹವೇ ಕಾರಣ ಎಂದು ಆರೋಪಿಸುತ್ತಿದ್ದ ಬೇಟೆಗಾರರ ಮಾತುಗಳು ಆತನಿಗೆ ರುಚಿಸುತ್ತಿರಲಿಲ್ಲ. ಕಾನನದೊಳಗೆ ಗಂಟೆಗಟ್ಟಲೇ ವ್ಯವಧಾನದಿಂದ ಕಾಯುವ ಸಾಮರ್ಥ್ಯ, ಶಿಕಾರಿಯ ನೈಪುಣ್ಯ ಅವರಿಗಿಲ್ಲ ಎನ್ನುವುದು ಅವನ ಅಚಲ ನಂಬಿಕೆಯಾಗಿತ್ತು. ಆತ ಚಾಣಾಕ್ಷ ಗುರಿಕಾರನಾಗಿದ್ದ ಎಂಬುದಕ್ಕೆ ರುದ್ರಪ್ರಯಾಗದ ನರಭಕ್ಷಕನ ಕಥೆಯೇ ಸಾಕ್ಷಿ.

ಬೇಟೆಯನ್ನೇ ಕಸುಬಾಗಿಸಿಕೊಂಡಿದ್ದ ಆತನಿಗೆ ನಿಧಾನಗತಿಯಲ್ಲಿ ಹುಲಿ ಸಂತತಿ ಅವಸಾನದತ್ತ ಸಾಗುತ್ತಿರುವುದು ಆತಂಕ ತಂದಿತು. ಭವಿಷ್ಯದಲ್ಲಿ ಅವುಗಳಿಗೆ ಭಾರತದಲ್ಲಿ ಉಳಿಗಾಲವಿಲ್ಲ. ಬೇಟೆ ಮುಂದುವರಿದರೆ ಜೀವಜಗತ್ತಿನ ಅದ್ಭುತ ಜೀವಿಯೊಂದನ್ನು ಕಳೆದುಕೊಳ್ಳುತ್ತೇವೆ ಎಂದು ಆತಂಕಗೊಂಡ. ಈ ಬಗ್ಗೆ ಸರ್ಕಾರಕ್ಕೂ ಎಚ್ಚರಿಕೆ ನೀಡಿದ.

ಅಷ್ಟನ್ನು ಹೇಳಿ ಆತ ಮೌನವಾಗಿ ಕೂರಲಿಲ್ಲ. ಹುಲಿ ಸಂರಕ್ಷಣಾ ಕಾರ್ಯದಲ್ಲಿ ತನ್ನನ್ನು ತೊಡಗಿಸಿಕೊಂಡ. ತಾನು ವಾಸವಿದ್ದ ಈಗಿನ ಉತ್ತರಾಖಂಡದ ನೈನಿತಾಲ್‌ ಜಿಲ್ಲೆಯ ಛೋಟಾ ಹಲ್ದ್ವಾನಿ (ಕಾರ್ಬೆಟ್‌ ಗ್ರಾಮ) ಹಳ್ಳಿಯನ್ನು ದತ್ತು ಪಡೆದ.

ರಣಥಂಬೋರ್‌ ರಾಷ್ಟ್ರೀಯ ಉದ್ಯಾನದಲ್ಲಿ ಕ್ಯಾಮೆರಾ ಕಣ್ಣಿಗೆ ಸೆರೆಯಾದ ಹುಲಿ ‘ಜೈ’
ರಣಥಂಬೋರ್‌ ರಾಷ್ಟ್ರೀಯ ಉದ್ಯಾನದಲ್ಲಿ ಕ್ಯಾಮೆರಾ ಕಣ್ಣಿಗೆ ಸೆರೆಯಾದ ಹುಲಿ ‘ಜೈ’

ಆ ಗ್ರಾಮದ ಸುತ್ತಲೂ ಕಾಡು ಆವರಿಸಿದೆ. ಸಂಜೆಯ ಬೆಳಕು ಮಾಸಿದ ನಂತರ ಜನರು ಹೊರಗೆ ಬರುತ್ತಿರಲಿಲ್ಲ. ಊರು ಕಾಡಿನ ನಿಗೂಢ ಪ್ರಪಂಚದ ಒಂದು ಭಾಗವಾಗುತ್ತಿತ್ತು. ರೈತರು ಬೆಳೆದ ಫಸಲು ವನ್ಯಜೀವಿಗಳ ಪಾಲಾಗುತ್ತಿತ್ತು. ಜಾನುವಾರುಗಳು ಹುಲಿ, ಚಿರತೆಗಳಿಗೆ ತುತ್ತಾಗುತ್ತಿದ್ದವು. ಮಾನವ- ಕಾಡುಪ್ರಾಣಿಗಳ ನಡುವಿನ ಸಂಘರ್ಷದ ಬಗ್ಗೆ ಆತನಿಗೆ ಅರಿವಿತ್ತು.

ಹಳ್ಳಿಗರೊಂದಿಗೆ ಸಮಸ್ಯೆ ಕುರಿತು ಚರ್ಚಿಸಿದ. ಊರಿನ ಸುತ್ತಲೂ ತಾನು ಕೂಡಿಟ್ಟಿದ್ದ ಹಣದಲ್ಲಿ ಐದು ಕಿಲೋಮೀಟರ್‌ ಉದ್ದದ, ಐದು ಅಡಿ ಎತ್ತರದ ಕಲ್ಲಿನಗೋಡೆ ಕಟ್ಟಿಸಿದ. ಇದರಿಂದ ಕಾಡುಪ್ರಾಣಿಗಳ ಉಪಟಳಕ್ಕೆ ಕಡಿವಾಣ ಬಿದ್ದಿತು. ಕಾರ್ಬೆಟ್‌ ಕೈಗೊಂಡ ಸಂರಕ್ಷಣಾ ಕ್ರಮಕ್ಕೆ ಸಾಕ್ಷಿಪ್ರಜ್ಷೆಯಾಗಿ ಇಂದಿಗೂ ಕಲ್ಲಿನಗೋಡೆಯಿದೆ.

ಹುಲಿ ಯೋಜನೆಯ ಸಾಧಕ– ಬಾಧಕ

ದೇಶದಲ್ಲಿ ಹುಲಿಗಳಿಗೆ ನೀಡಿರುವಷ್ಟು ಪ್ರಾಮುಖ್ಯತೆಯನ್ನು ಬೇರೆ ಯಾವುದೇ ಪ್ರಾಣಿಗೂ ನೀಡಿಲ್ಲ.ಇತಿಹಾಸದುದ್ದಕ್ಕೂ ಮಾನವನ ಸಂಸ್ಕೃತಿಯಲ್ಲಿ ಅದು ಆಕರ್ಷಣೆ ಉಳಿಸಿಕೊಂಡಿದೆ. ಜೊತೆಗೆ, ನಮ್ಮ ಸಾಂಪ್ರದಾಯಿಕ ಸಂಸ್ಕೃತಿಯ ಭಾಗವಾಗಿದೆ.ಹಾಗಾಗಿಯೇ ಕಾಲ್ಪನಿಕ ಕಥೆ, ಜಾನಪದ ಕಥೆ, ಕಲೆಯಲ್ಲಿ ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತದೆ. ಅದರ ಬಗ್ಗೆ ಮಾನವನಲ್ಲಿರುವ ಭಯವೇ ಇದಕ್ಕೆ ಕಾರಣ.

ದೇಶ ಸ್ವಾತಂತ್ರ್ಯಗೊಂಡಾಗ ಕಾಡು, ಪರಿಸರ ಮತ್ತು ಸಂರಕ್ಷಣೆ ಬಗ್ಗೆ ಯಾವ ಕಲ್ಪನೆಯೂ ಇರಲಿಲ್ಲ. ಆಗ ಭಾರತದ ಮುಂದಿದ್ದ ದೊಡ್ಡ ಸವಾಲುಗಳೆಂದರೆ ಹಸಿವು ಮತ್ತು ಬಡತನ.

ವನ್ಯಜೀವಿಗಳ ಸಂರಕ್ಷಣೆಗೆ ಅಷ್ಟೊಂದು ಪ್ರಾಧಾನ್ಯ ಸಿಕ್ಕಿರಲಿಲ್ಲ. ಇನ್ನೊಂದೆಡೆ ಬೇಟೆಯು ರಾಜಮಹಾರಾಜರು ಮತ್ತು ಶ್ರೀಮಂತರ ಮೋಜಿನ ಜೀವನದ ಭಾಗವಾಗಿತ್ತು. ಇದರಿಂದ ಕಾಡುಪ್ರಾಣಿಗಳ ಬದುಕು ಸಂಕಷ್ಟಕ್ಕೆ ಸಿಲುಕಿತ್ತು. ಮತ್ತೊಂದೆಡೆ ಬಡತನ ಹೋಗಲಾಡಿಸಲು ಕಾಡುಗಳನ್ನು ಸವರಿ ವ್ಯವಸಾಯಕ್ಕೆ ಉತ್ತೇಜನ ನೀಡುವುದೇ ಸರ್ಕಾರದ ಮುಖ್ಯ ಗುರಿಯಾಗಿತ್ತು.

ತಡೋಬಾದಲ್ಲಿ ಹುಲಿಮರಿಗಳ ಚಿನ್ನಾಟ
ತಡೋಬಾದಲ್ಲಿ ಹುಲಿಮರಿಗಳ ಚಿನ್ನಾಟ

ಅವ್ಯಾಹತ ಬೇಟೆಯಿಂದ ಹುಲಿ ಸಂತತಿ ಕ್ಷೀಣಿಸತೊಡಗಿತು. 70ರ ದಶಕದ ವೇಳೆಗೆ ದೇಶದಲ್ಲಿ ಹುಲಿ ಸೇರಿದಂತೆ ಕಾಡಿನ ಪರಿಸ್ಥಿತಿ ತೀವ್ರವಾಗಿ ಹದಗೆಟ್ಟಿತು. ಇದರಿಂದ ಎಚ್ಚೆತ್ತುಕೊಂಡ ಅಂದಿನ ಪ್ರಧಾನಿ ದಿವಂಗತ ಇಂದಿರಾ ಗಾಂಧಿ ಅವರು 1972ರಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆಯನ್ನು ಅನುಷ್ಠಾನಕ್ಕೆ ತಂದರು.ಮರುವರ್ಷವೇ ಹುಲಿ ಯೋಜನೆ ರೂಪಿಸಿದರು. ದೇಶದ ಒಂಬತ್ತು ರಕ್ಷಿತಾರಣ್ಯಗಳು ಈ ಯೋಜನೆಗೆ ಸೇರ್ಪಡೆಗೊಂಡವು. ಕರ್ನಾಟಕದ ಬಂಡೀಪುರ ರಾಷ್ಟ್ರೀಯ ಉದ್ಯಾನವೂ ಇದರಲ್ಲಿ ಒಂದು. ಪರಿಸರ ಸಂರಕ್ಷಣೆಗೆ ಸಂಬಂಧಿಸಿದಂತೆ ಇಂದಿರಾ ಗಾಂಧಿ ಹೊಂದಿದ್ದ ಕಾಳಜಿಯನ್ನು ಇಲ್ಲಿಯವರೆಗೂ ಬೇರೆ ಯಾವ ಪ್ರಧಾನಿಯೂ ತೋರಿಲ್ಲ.

ಹುಲಿ ಯೋಜನೆ ಜಾರಿಗೊಂಡು ನಾಲ್ಕೂವರೆ ದಶಕಗಳು ಉರುಳಿವೆ. ಸಂರಕ್ಷಣಾ ಕ್ರಮಗಳ ಪರಿಣಾಮ ಹುಲಿಗಳ ಸಂಖ್ಯೆಯೂ ಹೆಚ್ಚುತ್ತಿದೆ. ಈ ಕ್ರಮಗಳನ್ನು ಮತ್ತಷ್ಟು ಬಿಗಿಗೊಳಿಸಿದರೆ ಬಲಿಪ್ರಾಣಿಗಳ ಸಂಖ್ಯೆಯೂ ವೃದ್ಧಿಸಲಿದೆ. ದೇಶದ ಕಾಡುಗಳಿಗೆ ಹತ್ತು ಸಾವಿರಕ್ಕೂ ಹೆಚ್ಚು ಹುಲಿಗಳನ್ನು ಪೋಷಿಸುವ ಶಕ್ತಿ ಇದೆ ಎನ್ನುವುದು ಜೀವ ವಿಜ್ಞಾನಿಗಳ ಅಭಿಮತ. ಇದು ಉತ್ಪ್ರೇಕ್ಷೆ ಅನಿಸುತ್ತದೆ.

ಹುಲಿ ಗಣತಿ ನಡೆಯುವುದು ಪ್ರತಿನಾಲ್ಕು ವರ್ಷಗಳಿಗೊಮ್ಮೆ.2014ರ ಗಣತಿ ಪ್ರಕಾರ ದೇಶದಲ್ಲಿ 2,226 ಹುಲಿಗಳಿವೆ. ಮೊದಲ ಬಾರಿಗೆ ಹುಲಿ ಸಂರಕ್ಷಿತ ಪ್ರದೇಶಗಳೂ ಸೇರಿದಂತೆ ಇತರೇ ಅರಣ್ಯ ಪ್ರದೇಶದಲ್ಲಿ ಈ ಗಣತಿ ನಡೆದಿತ್ತು. ಇದರಿಂದ ಸಂಖ್ಯೆಯಲ್ಲಿ ಹೆಚ್ಚಳವಾಗಿತ್ತು.

ಭಾರತದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಳಗೊಂಡರೂ ಅವುಗಳು ಅಪಾಯದಿಂದ ಪಾರಾಗಿಲ್ಲ ಎನ್ನುವುದು ಸರ್ವವೇದ್ಯ. ಖ್ಯಾತ ವನ್ಯಜೀವಿ ತಜ್ಞರಾದ ಕೃಪಾಕರ ಮತ್ತು ಸೇನಾನಿ ಇಡೀ ಪ್ರಸಂಗವನ್ನು ಅರ್ಥೈಸುವ ಪರಿಯೇ ಬೇರೆ:‘ಪರಿಸರದಲ್ಲಿ ಯಾವುದೇ ಜೀವಿಯ ಭವಿಷ್ಯವನ್ನು ನಿರ್ಧರಿಸುವುದು ಅವುಗಳ ಪ್ರಸಕ್ತ ಸಂಖ್ಯೆ ಮಾತ್ರ. ಅವುಗಳ ಅಂಕಿಅಂಶಗಳಲ್ಲ. ಆ ಜೀವಿಗಳ ಗುಣಮಟ್ಟದ ವಂಶವಾಹಿನಿ ಪರಿಣಾಮಕಾರಿಯಾಗಿ, ನಿರಂತರವಾಗಿ ಪ್ರವಹಿಸುತ್ತಿರಬೇಕು. ಆಗಷ್ಟೇ ಆ ಜೀವಿಗಳ ಭವಿಷ್ಯಕ್ಕೆ ಸದೃಢತೆ ಇರುತ್ತದೆ. ಅವು ಸದೃಢತೆಯಿಂದ ಇದ್ದಾಗಲಷ್ಟೇ ನಿಸರ್ಗದ ಎಲ್ಲ ಸವಾಲುಗಳನ್ನು ಯಶಸ್ವಿಯಾಗಿ ಎದುರಿಸಿ ಬದುಕುಳಿಯಲು ಸಾಧ್ಯ. ಇದಕ್ಕೆ ವಂಶವಾಹಿನಿಯಲ್ಲಿನ ವೈವಿಧ್ಯ ನಿರ್ಣಾಯಕ. ಯಾವುದೇ, ಜೀವಿ ಕನಿಷ್ಠ ಒಂದೆರಡು ನೂರು ವರ್ಷಗಳ ಕಾಲ ಆತಂಕವಿಲ್ಲದೆ ಬದುಕುಳಿಯಬೇಕಾದಲ್ಲಿ ಇದು ಅತಿಮುಖ್ಯ. ಈ ತರ್ಕಕ್ಕೆ ಬೆಂಬಲವಾಗಿರುವ ಸನ್ನಿವೇಶಗಳು ನಮ್ಮ ಪರಿಸರದಲ್ಲಿ ಗೋಚರಿಸುತ್ತಿಲ್ಲ ಎನ್ನುವುದೇ ದೊಡ್ಡ ಆತಂಕ’.

‘ಯಾವುದೇ, ಜೀವಿಯ ಬದುಕಿನ ಮೂಲ ಉದ್ದೇಶವೇ ವಂಶಾಭಿವೃದ್ಧಿ. ಎಲ್ಲ ಜೀವಿಗಳಿಗೂ ಅದು ಸ್ವಭಾವ ಸಿದ್ಧಿಯಾಗಿ ಬಂದಿರುತ್ತದೆ. ಜೀವಜಾಲದಲ್ಲಿ ಜೀವ ಸಂಕುಲವೊಂದು ದೀರ್ಘಕಾಲ ಬದುಕುಳಿಯಲು ಸದೃಢ ತಳಿಗಳು ಬಹುಮುಖ್ಯ ಪಾತ್ರವಹಿಸುತ್ತವೆ. ಇಲ್ಲವಾದರೆ ಆ ಜೀವಿಯ ಭವಿಷ್ಯ ಕತ್ತಲಿಗೆ ಜಾರುತ್ತದೆ. ಹಾಗಾಗಿ, ಭಾರತದಲ್ಲಿರುವ ಹುಲಿಗಳ ವಂಶವಾಹಿನಿ ಎಷ್ಟು ವೈವಿಧ್ಯದಿಂದ ಕೂಡಿದೆ ಎಂಬುದನ್ನು ನಾವು ಮನಗಾಣಬೇಕಿದೆ’ ಎನ್ನುತ್ತಾರೆ.

‘ಸಾಂಕ್ರಾಮಿಕ ರೋಗಗಳ ಭೀತಿಯಿಂದ ಪಾರಾಗಿ, ಬದುಕುಳಿಯಲು ಸದೃಢ ತಳಿಗಳ ಪಾತ್ರ ಹಿರಿದು. ಆದರೆ, ದೇಶದಲ್ಲಿರುವ ಅರಣ್ಯಗಳ ನಡುವೆ ಒಂದಕ್ಕೊಂದು ಸಂಪರ್ಕವೇ ಇಲ್ಲ. ಬಹುತೇಕ ದ್ವೀಪ ಸ್ವರೂ‍ಪದಲ್ಲಿವೆ. ಇನ್ನೊಂದೆಡೆ ಅವುಗಳ ವಿಸ್ತರಣೆ ಕೂಡ ಸಾಧ್ಯವಿಲ್ಲ. ಹಾಗಾಗಿ, ಹುಲಿಗಳ ತಳಿವೈವಿಧ್ಯವನ್ನು ನಿರೀಕ್ಷಿಸುವುದು ಕಷ್ಟಸಾಧ್ಯ’ ಎಂದು ವಿವರಿಸುತ್ತಾರೆ.

ಇದಕ್ಕೆ ಅವರು ವಿವರಣೆ ನೀಡುವುದು ಹೀಗೆ; ‘ಟಾಂಜಾನಿಯಾದ ಸೆರೆಂಗೆಟ್ಟಿ ಅರಣ್ಯ ಬಹುವಿಸ್ತಾರವಾದುದು. ಎರಡು ದಶಕದ ಹಿಂದೆ ಅಲ್ಲಿ ಸಾಕುನಾಯಿಗಳಿಗೆ ಕಾಡುವ ಕೆನನ್‌ ಡಿಸ್ಟೆಂಪರ್‌ ವೈರಾಣು ದಾಳಿಯಿಂದ ಮುನ್ನೂರಕ್ಕೂ ಹೆಚ್ಚು ಸಿಂಹಗಳು ಜೀವತೆತ್ತವು. ಆದರೆ, ಕಾಡಿನ ಬೇರೆಡೆ ಜೀವಿಸಿದ್ದ ಸಿಂಹಗಳಿಂದ ಮತ್ತೆ ಅವುಗಳ ಸಂತತಿ ವೃದ್ಧಿಸಿತು. ಭಾರತದ ಕಾಡುಗಳಲ್ಲಿ ಅಂತಹ ಆಪತ್ತು ಘಟಿಸಿದರೆ ಹುಲಿ ಸಂತತಿ ಬದುಕುಳಿಯುವುದು ಕಷ್ಟಕರ’ ಎಂದು ವಿಶ್ಲೇಷಿಸುತ್ತಾರೆ.

ಬಾಂಧವಘರ್‌ನಲ್ಲಿ ಕಂಡ ಹುಲಿ
ಬಾಂಧವಘರ್‌ನಲ್ಲಿ ಕಂಡ ಹುಲಿ

ನಿರ್ವಹಣೆಯೇ ದೊಡ್ಡ ಸವಾಲು

ಸಂರಕ್ಷಿತ ಪ್ರದೇಶಗಳಲ್ಲಿ ಹುಲಿಗಳ ಸಂಖ್ಯೆ ವೃದ್ಧಿಸುತ್ತಿದೆ. ಈ ಹುಲಿಗಳು ಹೊಸ ಆವಾಸ ಹುಡುಕಿಕೊಂಡು ಕಾಡಿನಿಂದ ಹೊರಬರುತ್ತಿವೆ. ಅವುಗಳಿಗೆ ಮೊದಲು ತುತ್ತಾಗುವುದು ಕಾಡಂಚಿನ ಗ್ರಾಮಗಳಲ್ಲಿರುವ ಜನ– ಜಾನುವಾರು. ಆಗ ಹುಲಿ ಮತ್ತು ಮಾನವರ ನಡುವೆ ಸಂಘರ್ಷ ಏರ್ಪಡುತ್ತದೆ.

ದಶಕಗಳಿಂದ ಹುಲಿ ಸಂರಕ್ಷಣೆಗಷ್ಟೇ ಆದ್ಯತೆ ನೀಡುತ್ತಿರುವ ಸರ್ಕಾರದ ಬಳಿ ಈ ಸಂಘರ್ಷ ತಡೆಗೆ ಪರಿಹಾರವಿಲ್ಲ. ಸಂರಕ್ಷಣೆಗಿಂತ ಈಗ ನಿಜಕ್ಕೂ ಎದುರಾಗಿರುವ ದೊಡ್ಡ ಸವಾಲು ಎಂದರೆ ‘ನಿರ್ವಹಣೆ’. ಆದರೆ, ಸರ್ಕಾರ ಕೈಚೆಲ್ಲಿ ಕೂತಿರುವುದು ದುರಂತ. ಕಾಡು ಮತ್ತು ಹುಲಿಗಳ ಬಗ್ಗೆ ಜನರಲ್ಲಿ ವೈರತ್ವ ಮೂಡದಂತಹ ವಾತಾವರಣ ಸೃಷ್ಟಿಸುವ ಕೆಲಸವೇ ನಡೆಯುತ್ತಿಲ್ಲ.

ಹುಲಿ ದಾಳಿಗೆ ಹಸುವೊಂದು ಮೃತಪಟ್ಟರೆ ಸರ್ಕಾರದಿಂದ ದೊರೆಯುವ ಪರಿಹಾರದ ಮೊತ್ತ ಅತ್ಯಲ್ಪ. ಇದಕ್ಕಾಗಿ ಸಂತ್ರಸ್ತರು ತಿಂಗಳುಗಟ್ಟಲೆ ಕಚೇರಿಗೆ ಅಂಡಲೆಯಬೇಕು. ಬಹುತೇಕ ಪ್ರಕರಣಗಳಲ್ಲಿ ರೈತರು ಕಳೆದುಕೊಂಡಿದ್ದಕ್ಕೂ, ದೊರೆಯುವ ಪರಿಹಾರದ ಮೊತ್ತ ನ್ಯಾಯಯುತವಾಗಿರುವುದಿಲ್ಲ. ಇನ್ನೂ ವೈಜ್ಞಾನಿಕ ಪರಿಹಾರ ಎಂಬುದು ಮರೀಚಿಕೆ. ಹಾಗಾಗಿ, ಪದೇ ಪದೇ ನಷ್ಟ ಅನುಭವಿಸುವ ಸಂತ್ರಸ್ತರಲ್ಲಿ ಹುಲಿಗಳ ಬಗೆಗೆ ಒಲವು ಮೂಡಲು ಸಾಧ್ಯವೇ?

ಕಾಡಂಚಿನಲ್ಲಿ ಭೀತಿ ಸೃಷ್ಟಿಸುವ ಹುಲಿಗಳನ್ನು ಸುರಕ್ಷಿತವಾಗಿ ಸೆರೆ ಹಿಡಿಯುವ ಅಥವಾ ಕೊಲ್ಲುವ ಅವಕಾಶ ಕಾನೂನಿನಡಿ ಇದೆ. ಸಮಸ್ಯೆ ಉಲ್ಬಣಗೊಳ್ಳುವವರೆಗೂ ಜನಪ್ರತಿನಿಧಿಗಳು ಮತ್ತು ಅಧಿಕಾರಶಾಹಿ ಕ್ರಮವಹಿಸುವುದಿಲ್ಲ. ಜೀವಹಾನಿ ಸಂಭವಿಸಿದಾಗ ಕಾಡಂಚಿನ ಜನರು ಅರಣ್ಯ ಇಲಾಖೆಯ ವಿರುದ್ಧ ಸಿಡಿದೇಳುತ್ತಾರೆ. ಇದು ಅರಣ್ಯಕ್ಕೆ ಬೆಂಕಿ ಇಡುವ ಅಥವಾ ವಿಷವಿಟ್ಟು ಹುಲಿಗಳನ್ನು ಹತ್ಯೆ ಮಾಡುವ ಹಂತಕ್ಕೆ ಮುಟ್ಟುವುದು ವಿಪರ್ಯಾಸ. ಬಂಡೀಪುರ, ನಾಗರಹೊಳೆ, ಬಿಳಿಗಿರಿರಂಗನಾಥ ಸ್ವಾಮಿ ಹುಲಿ ರಕ್ಷಿತಾರಣ್ಯದ ವ್ಯಾಪ್ತಿಯಲ್ಲಿ ಏರ್ಪಟ್ಟಿರುವ ಹುಲಿ– ಮಾನವರ ನಡುವಿನ ಸಂಘರ್ಷ ಇದಕ್ಕೊಂದು ತಾಜಾ ನಿದರ್ಶನ.

ಮತ್ತೊಂದೆಡೆ ಸರ್ಕಾರ ಜನಪ್ರಿಯ ಕಾರ್ಯಕ್ರಮದಡಿ ಸಂತ್ರಸ್ತರಿಗೆ ಜಮೀನು ಹಂಚಿಕೆ ಮಾಡುವುದು ಕಾಡಂಚಿನಲ್ಲಿಯೇ. ಈ ಪ್ರದೇಶ ಹುಲಿ, ಆನೆಗಳು ಸಂಚರಿಸುವ ಕಾರಿಡಾರ್‌ ಎನ್ನುವ ಕನಿಷ್ಠ ತಿಳಿವಳಿಕೆಯು ಆಳುವವರಿಗೆ ಇರುವುದಿಲ್ಲ.ಕಾಡುಪ್ರಾಣಿಗಳ ಹಾವಳಿಯಿಂದ ಇಲ್ಲಿ ಫಸಲು ಬೆಳೆಯುವುದು ದುಸ್ತರ. ಇಂತಹ ಭೂಮಿಯಿಂದ ರೈತರಿಗೂ ಪ್ರಯೋಜನವಿಲ್ಲ. ಅನ್ನದಾತರು ಭೂಮಿ ಮಾರಲು ಸಿದ್ಧವಿದ್ದರೂ ಸರ್ಕಾರ ನ್ಯಾಯಯುತ ಬೆಲೆ ನೀಡಿ ಖರೀದಿಸಲು ಸಿದ್ಧವಿಲ್ಲ. ಇದರಿಂದ ಕಾರಿಡಾರ್‌ಗಳು ದುರ್ಬಲಗೊಂಡಿವೆ.

ಲಂಟಾನಾ ಕಮಾರಾ

ಲಂಟಾನಾ ಕಮಾರಾ ಆಕ್ರಮಣಕಾರಿ ಪೊದೆ ಸಸ್ಯ. ಇದರ ಮೂಲ ಮೆಕ್ಸಿಕನ್‌ ಮರುಭೂಮಿ. ಯುರೋಪಿಯನ್ನರು ಕಾಲಿಟ್ಟ ಪ್ರದೇಶದಲ್ಲಿ ಜೀವಸಂಕುಲ ತಲ್ಲಣಗೊಂಡಿರುವುದು ಈಗ ಇತಿಹಾಸ. ಲಂಟಾನಾವೂ ಭಾರತದ ಕಾಡುಗಳಲ್ಲಿ ಅಂತಹ ತಲ್ಲಣ ಸೃಷ್ಟಿಸಿದೆ. ಹುಲಿ ಸಂರಕ್ಷಿತ ಪ್ರದೇಶಗಳು, ವನ್ಯಜೀವಿಧಾಮಗಳಲ್ಲೂ ಇದರ ಹಾವಳಿ ಎಲ್ಲೆ ಮೀರಿದೆ. ಇದರಿಂದ ಜೀವಜಾಲದ ಸಂಪರ್ಕವೇ ಕಡಿತಗೊಳ್ಳುತ್ತಿದೆ.

ಲಕ್ಷಾಂತರ ವರ್ಷಗಳಿಂದ ಜೀವಜಾಲದಲ್ಲಿ ವಿಕಾಸಗೊಂಡಿದ್ದ ಆಹಾರ ಸರಪಳಿಯ ಕೊಂಡಿಯನ್ನೂ ಕತ್ತರಿಸುತ್ತಿದೆ. ತನ್ನ ಅಸ್ತಿತ್ವಕ್ಕಾಗಿ ಇದು ಟಾನಿಸ್‌ ಮತ್ತು ಫಿನಾಲಿಕ್‌ ಎಂದು ರಾಸಾಯನಿಕ ಸ್ರವಿಸುತ್ತದೆ. ಸ್ಥಳೀಯ ಸಸ್ಯಗಳು ಇದರ ವಿರುದ್ಧ ಪೈಪೋಟಿಗೆ ಇಳಿಯಲು ಸಾಧ್ಯವಾಗದೆ ಶರಣಾಗುತ್ತಿವೆ. ಇದರಿಂದ ಸಸ್ಯ ಅವಲಂಬಿಸಿರುವ ಪ್ರಾಣಿಗಳ ಬದುಕಿನ ಮೇಲೂ ಪರಿಣಾಮ ಬೀರಿದೆ. ವೈಜ್ಞಾನಿಕ ವಿಧಾನದಡಿ ಇದರ ಹಾವಳಿ ನಿಯಂತ್ರಿಸುವ ಅಗತ್ಯವಿದೆ.

ಕಾಡಿನ ಅವಲಂಬನೆ

ಹುಲಿ ಸಂಕುಲ ದೀರ್ಘಕಾಲ ಬದುಕುಳಿಯಲು ಸೂಕ್ತ ತಾಣವೆಂದರೆ ನೀಲಗಿರಿ ಜೈವಿಕ ವಲಯ. ಕರ್ನಾಟಕ, ತಮಿಳುನಾಡು ಮತ್ತು ಕೇರಳ ಒಳಗೊಂಡ ಇದರ ವಿಸ್ತೀರ್ಣ 5,500 ಚದರ ಕಿ.ಮೀ. ಆದರೆ, ಇದರ ಮೇಲೂ ಜನ, ಜಾನುವಾರು ಅವಲಂಬನೆ ಹೆಚ್ಚುತ್ತಿದೆ. ಇದರ ಸಂರಕ್ಷಣೆ ಹೆಚ್ಚು ಒತ್ತು ನೀಡುವ ಅಗತ್ಯವಿದೆ.

ಬಂಡೀಪುರದ ಗಡಿಯಂಚಿನಲ್ಲಿಯೇ 220ಕ್ಕೂ ಹೆಚ್ಚು ಗ್ರಾಮಗಳಿವೆ. ಎರಡು ಲಕ್ಷದಷ್ಟು ಜನರು ವಾಸಿಸುತ್ತಿದ್ದಾರೆ. ಅವರೆಲ್ಲೂ ಒಂದಲ್ಲಾ ಒಂದು ಕಾರಣಕ್ಕೆ ಕಾಡಿನ ಮೇಲೆ ಅವಲಂಬಿತರಾಗಿದ್ದಾರೆ. ಮತ್ತೊಂದೆಡೆ ಹುಲಿಗಳ ಕಳ್ಳಬೇಟೆಗೆ ಕಡಿವಾಣ ಬಿದ್ದಿಲ್ಲ.

ಯಾವುದೇ, ಅರಣ್ಯದಿಂದ ಮತ್ತೊಂದು ಅರಣ್ಯಕ್ಕೆ ಹುಲಿಗಳನ್ನು ತಂದುಬಿಟ್ಟು ಸಂರಕ್ಷಣೆ ಮಾಡಬಹುದಲ್ಲವೇ ಎಂಬ ಪ್ರಶ್ನೆ ಎದುರಾಗುವುದು ಸಹಜ. ಆದರೆ, ಮಾಂಸಾಹಾರಿ ಪ್ರಾಣಿಗಳನ್ನು ಬೇರೊಂದು ಕಾಡಿಗೆ ಬಿಟ್ಟು ಪೋಷಿಸಿ ಯಶಸ್ವಿಯಾದ ಉದಾಹರಣೆಗಳಿಲ್ಲ. ಅಂತಹ ಆಲೋಚನೆಗಳು ಭಾರತದ ಕಾಡಿನ ಮಟ್ಟಿಗೆ ಸಾಧ್ಯವೂ ಇಲ್ಲ. ಜೀವಿಯೊಂದನ್ನು ಅದರ ಮೂಲ ನೆಲೆಯಿಂದ ಬೇರ್ಪಡಿಸಿದರೆ ಅದು ಅವನತಿಯ ಹಾದಿ ಹಿಡಿಯಿತು ಎಂದರ್ಥ. ಇದಕ್ಕೆ ರಾಜಸ್ಥಾನದ ಸರಿಸ್ಕಾ ಮತ್ತು ಮಧ್ಯಪ್ರದೇಶದ ಪೆನ್ನಾ ಹುಲಿ ರಕ್ಷಿತಾರಣ್ಯದಲ್ಲಿ ಕಳ್ಳಬೇಟೆಯಿಂದ ಹುಲಿಗಳು ಕಣ್ಮರೆಯಾದ ಘಟನೆಗಳೇ ಸಾಕ್ಷಿ. ಇರುವ ಜೀವಿಗಳನ್ನು ಉಳಿಸುವುದಷ್ಟೇ ನಮ್ಮ ಮುಂದಿರುವ ಸವಾಲು.

ವನ್ಯಜೀವಿ ಛಾಯಾಗ್ರಹಣ ನನ್ನ ಮೆಚ್ಚಿನ ಹವ್ಯಾಸ. ಹುಲಿಗಳ ಛಾಯಾಚಿತ್ರ ಸೆರೆ ಹಿಡಿಯುವುದೆಂದರೆ ಬಹುಪ್ರೀತಿ. ಇದಕ್ಕೆ ಸಾಕಷ್ಟು ತಾಳ್ಮೆ ಬೇಕು. ಛಾಯಾಗ್ರಹಣಕ್ಕಾಗಿ ನಾನು ಸೆಂಟ್ರಲ್‌ ಇಂಡಿಯಾದಲ್ಲಿ ಬರುವ ರಣಥಂಬೋರ್, ಬಾಂಧವಘರ್‌, ತಡೋಬಾ, ಕಾನ್ಹಾ ಹುಲಿ ರಕ್ಷಿತಾರಣ್ಯಗಳಿಗೆ ಆಗಾಗ್ಗೆ ಭೇಟಿ ನೀಡುತ್ತೇನೆ.

ವನ್ಯಜೀವಿ ಛಾಯಾಗ್ರಾಹಕನ ಅನುಭವ

ರಾಜ್ಯದ ಕಾಡಿನಲ್ಲಿ ಸಫಾರಿಗೆ ಸಿಗುವುದು ಎರಡು ಗಂಟೆಯಷ್ಟೇ. ಅಲ್ಲಿ ಅರ್ಧ ದಿನ ಅಥವಾ ಇಡೀ ದಿನವೂ ಹುಲಿಗಳ ಛಾಯಾಗ್ರಹಣಕ್ಕಾಗಿ ಸಫಾರಿ ಮಾಡಬಹುದು. ಇದಕ್ಕಾಗಿ ವಿಶೇಷ ಪ್ಯಾಕೇಜ್‌ ಸೌಲಭ್ಯ ಉಂಟು.

ಎರಡು ತಿಂಗಳ ಹಿಂದೆ ಮಹಾರಾಷ್ಟ್ರದ ತಡೋಬಾ ರಾಷ್ಟ್ರೀಯ ಉದ್ಯಾನಕ್ಕೆ ತೆರಳಿದ್ದೆ. ಅದರ ಸಮೀಪದಲ್ಲಿಯೇ ಉಮ್ರೇ ಕರನ್ಲಾ ಅರಣ್ಯ ಇದೆ. ಇಲ್ಲಿ ಮಾನವ ಚಟುವಟಿಕೆ ತುಸು ಕಡಿಮೆ. ಬಲಿಪ್ರಾಣಿಗಳ ಸಂಖ್ಯೆ ಹೆಚ್ಚಿದೆ. ಅಲ್ಲಿ ಒಂದು ಗಂಡು ಮತ್ತು ಹೆಣ್ಣು ಹುಲಿ ಮಾತ್ರವೇ ಇದ್ದವಂತೆ.

ಹೆಣ್ಣು ಹುಲಿಯು ನಾಲ್ಕು ಮರಿಗಳೊಂದಿಗೆ ಸಂಚರಿಸುತ್ತಿದೆ ಎಂಬ ಮಾಹಿತಿ ಸಿಕ್ಕಿತು. ನನ್ನ ಛಾಯಾಗ್ರಾಹಕ ಸ್ನೇಹಿತರೊಟ್ಟಿಗೆ ಅಲ್ಲಿಗೆ ತೆರಳಿದೆ. ಎರಡು ತಾಸು ಕಾಯ್ದ ಬಳಿಕ ಮೊದಲಿಗೆ ಹೆಣ್ಣು ಹುಲಿ ನೀರಿನ ತಾಣದತ್ತ ಬಂದಿತು. ಅಮ್ಮನನ್ನು ಹಿಂಬಾಲಿಸಿಕೊಂಡು ಮರಿಗಳು ಬಂದವು. ನನ್ನ ಕ್ಯಾಮೆರಾ ಎಡಬಿಡದೆ ಕಣ್ಣು ಮಿಟುಕಿಸಿತು. ಒಂದು ವರ್ಷದ ಹಿಂದೆ ವಿದ್ಯುತ್‌ ಪ್ರವಹಿಸಿ ಗಂಡು ಹುಲಿಯು ಅಸುನೀಗಿತು ಎಂಬ ಸುದ್ದಿ ಕೇಳಿ ಬೇಸರವೂ ಮಡುಗಟ್ಟಿತು.

–ದಿನೇಶ್‌ ಅಲ್ಲಮಪ್ರಭು, ವನ್ಯಜೀವಿ ಛಾಯಾಗ್ರಾಹಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT