ಆಮೆ ಚಿಪ್ಪಿನ ಜೀರುಂಡೆ

7

ಆಮೆ ಚಿಪ್ಪಿನ ಜೀರುಂಡೆ

Published:
Updated:

ಜುಲೈ ತಿಂಗಳ ಆರಂಭದಲ್ಲಿ ಹಕ್ಕಿಗಳ ಫೋಟೋ ತೆಗೆಯಲು ನಾನು ಕೆರೆಯೊಂದರ ಬಳಿ ಹೋದೆ. ಅಲ್ಲಿ ಬೆಳೆದಿದ್ದ pink morning glory ಗಿಡಗಳಲ್ಲಿ ಒಂದು ರೀತಿಯ ವಿಚಿತ್ರ ಹುಳುಗಳು ಕಾಣಿಸಿದವು. ಅವು ಒಂದು ಜಾತಿಯ ಕಂಬಳಿಹುಳಗಳೆಂದು ನಾನು ತಿಳಿದಿದ್ದೆ. ಕುತೂಹಲ ಹೆಚ್ಚಾಗಿ ಅವನ್ನು ನಿತ್ಯ ಗಮನಿಸಲು ಆರಂಭಿಸಿದೆ. ಕೀಟದ ಬೆಳವಣಿಗೆ ನೋಡುತ್ತಾ, ಪ್ರತಿಹಂತದ ಫೋಟೊ ತೆಗೆಯುತ್ತಾ ಮಾಹಿತಿ ಸಂಗ್ರಹಿಸುತ್ತಿದ್ದಾಗ ಸುಮಾರು ಹದಿನೈದು ದಿನಗಳಲ್ಲಿ ಆ ಹುಳುವಿನ ಇಡೀ ಜೀವನವೇ ಅನಾವರಣಗೊಂಡಿತು.

ಇದೊಂದು ಚೆಂದದ ಕೀಟ. ಈ ಕೀಟವನ್ನು ಇಂಗ್ಲಿಷಿನಲ್ಲಿ Tortoiseshell Beetle‌ ಎನ್ನುತ್ತಾರೆ. ವೈಜ್ಞಾನಿಕ ಹೆಸರು: Cassidinae. ಕನ್ನಡದಲ್ಲಿ ಆಮೆ ಚಿಪ್ಪಿನ ಜೀರುಂಡೆ ಅಥವಾ ಆಮೆ ದುಂಬಿ ಎನ್ನಬಹುದು. ಇದು ಆಮೆಯಂತೆ ಕಾಣುವ ಕವಚ ಹೊಂದಿದೆ. ಬಹುಶಃ ಅದೇ ಕಾರಣಕ್ಕೆ ಈ ಹೆಸರು ಬಂದಿರಬಹುದು. ಇದು ಎಲೆ ಕೀಟದ ವರ್ಗಕ್ಕೆ ಸೇರಿದೆ. ಇದೇ ಹೆಸರಿನಲ್ಲಿ ಈ ಕೀಟದ ಹಲವು ಪ್ರಭೇದಗಳಿವೆ. ಆಫ್ರಿಕಾದಾದ್ಯಂತ, ದಕ್ಷಿಣ ಚೀನಾ, ಆಗ್ನೇಯ ಏಷ್ಯಾ ಭಾಗಗಳಲ್ಲಿ ಮುಖ್ಯವಾಗಿ ಇವು ಕಂಡು ಬರುತ್ತವೆ.

ಚಿಟ್ಟೆಯ ಬೆಳವಣಿಗೆಯ ಹಂತಗಳಂತೆಯೇ ಈ ದುಂಬಿಯ ಜೀವನ ಕ್ರಮವನ್ನು ಮೊಟ್ಟೆ, ಮರಿಹುಳು (ಲಾರ್ವಾ), ಕೋಶಾವಸ್ಥೆ (ಪ್ಯೂಪ) ಮತ್ತು ದುಂಬಿ ಎಂದು ನಾಲ್ಕು ಭಾಗಗಳಾಗಿ ವಿಂಗಡಿಸಬಹುದು.

***

1. ಮೊಟ್ಟೆ:  ಮಳೆಗಾಲದ ಆರಂಭದಲ್ಲಿ ವಯಸ್ಸಿಗೆ ಬಂದ ದುಂಬಿಗಳು ಎಲೆಗಳ ಹಿಂಭಾಗದಲ್ಲಿ ಗುಂಪಾಗಿ ಮೊಟ್ಟೆಗಳನ್ನಿಡುತ್ತವೆ. ಈ ಮೊಟ್ಟೆಗಳು ಕೆನೆ ಹಾಲು ಬಣ್ಣದಲ್ಲಿದ್ದು, ಗೂಡಿನಲ್ಲಿ ರಕ್ಷಣೆಪಡೆದಿರುತ್ತವೆ. ಈ ಗೂಡು ಹಲವು ಪದರಗಳಲ್ಲಿದ್ದು, ಪ್ರತಿ ಪದರದಲ್ಲೂ ಎರಡು - ಮೂರು ಮೊಟ್ಟೆಗಳಿರುತ್ತವೆ.

***

2. ಮರಿಹುಳು (ಲಾರ್ವಾ): ಮೊಟ್ಟೆಯೊಡೆದು ಹೊರಬಂದ ಮರಿಗಳು 2 ಸೆಂ.ಮೀ ನಿಂದ 5 ಸೆಂ.ಮೀವರೆಗೂ ಬೆಳೆಯುತ್ತವೆ. ಮರಿ ಬಿಳಿ ಬಣ್ಣದಲ್ಲಿದ್ದು, ಮೈಮೇಲೆ ಕಪ್ಪು ಚುಕ್ಕೆಗಳಿರುತ್ತವೆ. ಇದರ ದೇಹದ ಮೇಲ್ಭಾಗದಲ್ಲಿ ಮುಳ್ಳಿನ ರಚನೆ ಇದೆ. ಇದು ಬೇರೆ ಕೀಟಗಳಿಂದ ತಮ್ಮನ್ನು ರಕ್ಷಿಸಿಕೊಳ್ಳುವ ಉಪಾಯ. ಇವು ಎಲೆಯ ಮೃದು ಭಾಗಗಳನ್ನು ಮಾತ್ರ ತಿನ್ನುತ್ತವೆ. 

***

3. ಕೋಶಾವಸ್ಥೆ (ಪ್ಯೂಪ): ಇದು ದುಂಬಿಯಾಗಿ ರೂಪಗೊಳ್ಳುವ ಹಂತ. ಈ ಹಂತದಲ್ಲಿ ಹುಳಗಳು ತಮ್ಮ ಮೈಮೇಲಿನ ಪೊರೆಯನ್ನೇ ಕೋಶವನ್ನಾಗಿಸಿಕೊಳ್ಳುತ್ತವೆ. ಈ ಕೋಶಗಳು, ಮರಿ ಹುಳಗಳು ತಿಂದುಂಡು ಉಳಿದ ಎಲೆಯ ದಂಟುಗಳಿಗೇ ಅಂಟಿಕೊಂಡಿರುತ್ತವೆ.

4. ದುಂಬಿಗಳು (Adult): ಪೊರೆ ಕಳಚಿ ಹೊರಬಂದ ದುಂಬಿಗಳು(ಜೀರುಂಡೆ) ಆಮೆಯಂತೆ ಕವಚವನ್ನು ಹೊಂದಿರುತ್ತವೆ. ಈ ಕವಚವು ಪಾರದರ್ಶಕವಾಗಿರುತ್ತದೆ. ಮೇಲ್ಭಾಗದಲ್ಲಿ ಕಪ್ಪು ಚುಕ್ಕೆಗಳಿರುತ್ತವೆ. ಕೇವಲ ಮೀಸೆ ಮಾತ್ರವೇ ಕವಚದಿಂದ ಹೊರ ಚಾಚಿರುತ್ತದೆ. ಈ ದುಂಬಿಗಳು ಗೋಸುಂಬೆಯಂತೆ ಬಣ್ಣ ಬದಲಿಸುತ್ತವೆ. ನನಗೆ ಕಂಡ ಮೂರು ಬಣ್ಣದ ದುಂಬಿಗಳೂ ಒಂದೇ ಜಾತಿಯವು. ಈ ಜೀರುಂಡೆಗಳು ಆಹಾರಕ್ಕಾಗಿ ಗೆಣಸು, ಕೋಸು ಮತ್ತಿತರ ಬೆಳೆಗಳಿಗೆ ದಾಳಿ ಮಾಡುತ್ತವೆ. 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !