ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆಕ್ಕಿಗಳ 'ಭಕ್ತಿ ಮಾರ್ಗ'ಕ್ಕೆ 'ಹ್ಯಾಟ್ಸ್' ಆಫ್!

Last Updated 14 ಜುಲೈ 2018, 19:30 IST
ಅಕ್ಷರ ಗಾತ್ರ

‘ವಿಠೋಬಾಚೆ ಯಾತ್ರಿ, ಪ್ಲಾಸ್ಟಿಕಲಾ ಕಾತ್ರಿ...’ ಬಿಳಿ ಟೊಪ್ಪಿಗೆಗಳ ಮೇಲೆ ಕೆಂಪು ಬಣ್ಣದಿಂದ ಬರೆದಿದ್ದ ಈ ಸಾಲುಗಳು ಮೂರು ಲಕ್ಷಕ್ಕೂ ಹೆಚ್ಚು ಮಂದಿಯ ಗಮನ ಸೆಳೆದವು.

ಮೂರು ದಿನಗಳ ಜಾಗೃತಿ, ಮೂರು ತಂಡಗಳು, 70 ಕಿ.ಮೀ ದೂರ, ಎರಡು ಸಾವಿರ ಟೊಪ್ಪಿಗೆಗಳು. ಇದು ಪ್ಲಾಸ್ಟಿಕ್ ಚೀಲಗಳ ಬಾಯಿಗೆ ಬೀಗ ಜಡಿಯಲು ‘ಭಕ್ತಿಮಾರ್ಗ’ದಲ್ಲಿ ಟೆಕ್ಕಿಗಳೇ ರೂಪಿಸಿದ್ದ ಹೊಸ ‘ತಂತ್ರ’! ಮಂತ್ರಗಳ ನಡುವೆ ಫಲಿಸಿದ ಈ ತಂತ್ರಕ್ಕೆ ನೂರಾರು ಕಾಮೆಂಟ್‍ಗಳು, ಸಾವಿರಾರು ಲೈಕ್‍ಗಳು.

ಮಹಾರಾಷ್ಟ್ರದ ಅಳಂದ ಗ್ರಾಮದಿಂದ ಪಂಡರಪುರದವರೆಗೆ ಪ್ರತಿವರ್ಷ ಬೃಹತ್ ಪಾದಯಾತ್ರೆ ನಡೆಯುತ್ತದೆ. ಆಷಾಢ ಶುದ್ಧ ಏಕಾದಶಿ ದಿನ ವಿಠ್ಠಲನ ದರ್ಶನ ಪಡೆಯುವುದು ಇವರ ಸಂಪ್ರದಾಯ. ಕೆಲವು ವರ್ಷಗಳಿಂದ ಐಟಿ ಉದ್ಯೋಗಿಗಳೂ ಈ ಯಾತ್ರೆಯಲ್ಲಿ ಹೆಜ್ಜೆ ಹಾಕುತ್ತ ಸಾಮಾಜಿಕ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.

ಪ್ರತಿವರ್ಷ ಒಂದೊಂದು ಥೀಮ್‍ನೊಂದಿಗೆ ಗಮನ ಸೆಳೆಯುವ ಇವರು ಈ ವರ್ಷ ‘ಪ್ಲಾಸ್ಟಿಕ್ ಬಳಕೆಗೆ ಕತ್ತರಿ ಹಾಕೋಣ’ ಎಂಬ ಅರಿವು ಮೂಡಿಸಿದರು. ಒಂದು ತಂಡದ ಕಳಕಳಿಯಿಂದ ಮೂರು ದಿನ ಸ್ವಾಮಿ ಕಾರ್ಯದ ಜೊತೆಗೆ ಸಾಮಾಜಿಕ ಕಾರ್ಯವೂ ನಡೆಯಿತು. ಪಂಡರಪುದತ್ತ ಇನ್ನೂ ಹೆಜ್ಜೆ ಹಾಕುತ್ತಿರುವ ಮೂರು ಲಕ್ಷ ಭಕ್ತರು ವಿಠ್ಠಲನ ಧ್ಯಾನದಿಂದ ಹೊರಬಂದಾಗ ಪ್ಲಾಸ್ಟಿಕ್ ಬಳಸುವುದಿಲ್ಲ ಎಂಬ ಸಂಕಲ್ಪ ಮಾಡುತ್ತಿದ್ದಾರೆ.

ಐಟಿ ದಿಂಡಿ
2006ರಲ್ಲಿ ಐಟಿ ದಿಂಡಿ ರೂಪುಗೊಂಡಿತು. ಕೇವಲ ಆರು ಜನರ ನೋಂದಣಿಯಿಂದ ಆರಂಭವಾದ ಈ ತಂಡದ ಸದಸ್ಯರ ಸಂಖ್ಯೆ ನಾಲ್ಕು ವರ್ಷಗಳಲ್ಲಿ ಗಣನೀಯವಾಗಿ ಹೆಚ್ಚಳವಾಗಿದೆ. 2014ರಲ್ಲಿ 375, 2015ರಲ್ಲಿ 700ಕ್ಕೂ ಹೆಚ್ಚು ಮಂದಿ, 2016ರಲ್ಲಿ ಸಾವಿರಕ್ಕೂ ಹೆಚ್ಚು ಮಂದಿ, 2017ರಲ್ಲಿ 1.200 ಮಂದಿ ಪಾಲ್ಗೊಂಡಿದ್ದರು. ಪ್ರಸಕ್ತ ವರ್ಷ 1,300ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. ವೈದ್ಯರು, ವಕೀಲರು, ಉದ್ಯಮಿಗಳು, ಚಾರ್ಟೆಡ್‌ ಅಕೌಂಟಂಟ್‍ಗಳು ಭಾಗವಹಿಸುತ್ತಾರೆ.

ಈ ತಂಡದಲ್ಲಿ ಪಾಲ್ಗೊಳ್ಳಲು ನೋಂದಣಿ ಅಗತ್ಯ ಕೆಲವರು ತಿತಿತಿ.ತಿಚಿಚಿಡಿi.oಡಿg ಸೈಟ್ ಮೂಲಕ ಆನ್‍ಲೈನ್‍ನಲ್ಲೂ ನೋಂದಾಯಿಸಿಕೊಂಡು ಯಾತ್ರೆಯಲ್ಲಿ ಭಾಗವಹಿಸುತ್ತಾರೆ. ಪ್ರತಿವರ್ಷ ಯಾತ್ರೆ ಹೊರಡುವ ಮೊದಲೇ ನೋಂದಣಿ ಆರಂಭಿಸಲಾಗುತ್ತದೆ. ಆನ್‍ಲೈನ್‍ನಲ್ಲಿ ನೋಂದಣಿಯ ಕೊನೆಯ ದಿನಾಂಕವನ್ನೂ ತಿಳಿಸಲಾಗಿರುತ್ತದೆ.

ಥೀಮ್‍ನೊಂದಿಗೆ ನಡಿಗೆ
ನೋಂದಣಿ ಆರಂಭಿಸುವ ಮೊದಲೇ ಯಾವ ಥೀಮ್‍ನೊಂದಿಗೆ ಹೆಜ್ಜೆ ಹಾಕಬೇಕು ಎಂಬುದನ್ನು ನಿರ್ಧರಿಸಲಾಗುತ್ತದೆ. ಜ್ವಲಂತ ಸಮಸ್ಯೆ ಬಗ್ಗೆ ಅರಿವು ಮೂಡಿಸುವುದು ಇದರ ಉದ್ದೇಶ. 2016ರಲ್ಲಿ ‘ನಿರ್ಮಲ ವಾರಿ’ ಎಂಬ ಥೀಮ್‍ನೊಂದಿಗೆ ಹೆಜ್ಜೆ ಹಾಕಿ ಯಾತ್ರಿಕರಲ್ಲಿ ಸ್ವಚ್ಛತೆ, ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳುವ ಬಗ್ಗೆ ಅರಿವು ಮೂಡಿಸಲಾಗಿತ್ತು. ಐಟಿ ದಿಂಡಿ ವತಿಯಿಂದ ಯಾತ್ರಿಕರಿಗೆ 25 ಶೌಚಾಲಯಗಳನ್ನೂ ನಿರ್ಮಿಸಲಾಗಿತ್ತು.

2017ರಲ್ಲಿ ‘ಜೈ ಜವಾನ್ ಸಂಗೆ, ಹರಿನಾಮ ರಂಗೆ’ ಎಂಬ ಥೀಮ್‍ನೊಂದಿಗೆ ಸೈನಿಕರನ್ನು ಗೌರವಿಸಿ ಎಂಬ ಅರಿವು ಮೂಡಿಸಲಾಗಿತ್ತು. ಇದಕ್ಕೂ ಮೊದಲು ಪುಣೆದಲ್ಲಿರುವ ಮಿಲಿಟರಿ ಕಚೇರಿಗೆ ಹೋಗಿ 100ಕ್ಕೂ ಹೆಚ್ಚು ಕಾರ್ಗಿಲ್ ಯೋಧರಿಗೆ ಸಿಹಿ ಹಂಚಿದ್ದರು. ಕಾರ್ಗಿಲ್ ಗಡಿಯಲ್ಲಿ ಸೇವೆಯಲ್ಲಿ ನಿರತರಾದ 50ಕ್ಕೂ ಹೆಚ್ಚು ಜನರಿಗೆ ಅಂಚೆ ಮೂಲಕವೂ ಸಿಹಿ ಕಳುಹಿಸಲಾಗಿತ್ತು. ಇದಕ್ಕಾಗಿ ಪ್ರತಿಯೊಬ್ಬರೂ ಸ್ವಯಂಪ್ರೇರಣೆಯಿಂದ ಹಣ ಸಂಗ್ರಹಿಸಿದ್ದರು. ಕಳೆದ ವರ್ಷ ₹ 5 ಲಕ್ಷಕ್ಕೂ ಹೆಚ್ಚು ಹಣ ಸೇರಿಸಿ ಅದನ್ನು ಹುತಾತ್ಮ ಯೋಧರ ಕುಟುಂಬಗಳಿಗೆ ನೀಡಲು ನಿರ್ಧರಿಸಿದ್ದರು. ಇದಕ್ಕಾಗಿ ಬೃಹತ್ ಕಾರ್ಯಕ್ರಮ ಆಯೋಜಿಸಿ ಹದಿನೈದು ಕುಟುಂಬಗಳಿಗೆ ತಲಾ ₹ 15,251 ಸಹಾಯ ಧನ ನೀಡಲಾಯಿತು. ಬೇರೆ ಬೇರೆ ಊರುಗಳಲ್ಲಿರುವ ಯೋಧರ ಕುಟುಂಬಗಳನ್ನು ಗುರುತಿಸಿ ಕರೆತರುವ, ಕಾರ್ಯಕ್ರಮದ ನಂತರ ಪುನಃ ಊರಿಗೆ ಬೀಳ್ಕೊಡುವ ವ್ಯವಸ್ಥೆ ಕಲ್ಪಿಸಲಾಗಿತ್ತು.

ರೈತರ ಆತ್ಮಹತ್ಯೆಗಳು ಹೆಚ್ಚಾಗಿ ನಡೆದ ವರ್ಷ ‘ರೈತರೇ ದೇಶದ ಬೆನ್ನೆಲುಬಾದ ನಿಮಗೆ ನಾವು ಬೆನ್ನೆಲುಬಾಗಿದ್ದೇವೆ. ಸಮಸ್ಯೆಗೆ ಆತ್ಮಹತ್ಯೆಯೇ ಪರಿಹಾರವಲ್ಲ. ಧೈರ್ಯದಿಂದ ಬದುಕು ನಡೆಸಿ’ ಎಂಬ ಅರಿವು ಮೂಡಿಸಿದ್ದರು.

ಪ್ರಸಕ್ತ ವರ್ಷ ಸಮುದ್ರ ಜೀವಿಗಳ ಪ್ರಾಣಕ್ಕೆ ಪ್ಲಾಸ್ಟಿಕ್ ಕುತ್ತು ತಂದಿದೆ ಎಂಬ ಅಪಾಯಕಾರಿ ಸುದ್ದಿ ಹರಡಿದ್ದನ್ನು ಕೇಳಿ ಭಕ್ತಸಾಗರದ ಮಧ್ಯೆ ‘ಪ್ಲಾಸ್ಟಿಕಲಾ ಕಾತ್ರಿ’ (ಪ್ಲಾಸ್ಟಿಕ್ ಬಳಕೆಗೆ ಕತ್ತರಿ ಹಾಕಿ) ಎಂಬ ಅರಿವು ಮೂಡಿಸಲು ನಿರ್ಧರಿಸಿ ಅದಕ್ಕಾಗಿ ಐಟಿ ದಿಂಡಿ ವತಿಯಿಂದ ‘ವಿಠೋಬಾಚೆ ಯಾತ್ರಿ, ಪ್ಲಾಸ್ಟಿಕಲಾ ಕಾತ್ರಿ’ (ವಿಠ್ಠಲನ ಯಾತ್ರೆ, ಪ್ಲಾಸ್ಟಿಕ್ ಬಳಕೆಗೆ ಕತ್ತರಿ) ಎಂದು ಬರೆಸಲಾದ ಎರಡು ಸಾವಿರ ಟೊಪ್ಪಿಗೆಗಳನ್ನು ತಯಾರಿಸಿದ್ದರು. ಅವುಗಳನ್ನು ಧರಿಸಿ ಯಾತ್ರೆಯಲ್ಲಿ ಪಾಲ್ಗೊಂಡರು.

ಈ ವರ್ಷ ಬ್ರೆಜಿಲ್ ದೇಶದ ರಾಫೆಲ್ ವಾಲಿಮ್ ಹಾಗೂ ಜಪಾನಿನ ಯು ವೋತ್ಸಾನಾ ಎಂಬ ಎಂಜಿನಿಯರ್‌ಗಳೂ ಭಾಗವಹಿಸಿ ಭಾರತೀಯ ಪಾದಯಾತ್ರೆಯ ಸಂಸ್ಕೃತಿಯನ್ನು ಸಂಭ್ರಮಿಸಿದರು.

ಈ ವರ್ಷ ಮೂರು ದಿನ
ಅಳಂದದಿಂದ ಪಂಡರಪುರವರೆಗೆ ಒಟ್ಟು ಇಪ್ಪತ್ತೊಂದು ದಿನಗಳ ಯಾತ್ರೆ ನಡೆಯುತ್ತದೆ. ಆದರೆ ಐಟಿ ದಿಂಡಿ ಸದಸ್ಯರು ಮೊದಲ ಎರಡು ದಿನ ಮಾತ್ರ ಯಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ. ಅಳಂದದಿಂದ ಪುಣೆ (ಮೊದಲ ದಿನ), ಪುಣೆದಿಂದ ಸಾಸವಾಡ್‌ವರೆಗೆ (ಎರಡನೇ ದಿನ) ಮಾತ್ರ. ಈ ವರ್ಷ ಮೂರನೇ ದಿನವೂ (ಸಾಸವಾಡ್‍ದಿಂದ ಜೆಜೂರಿವರೆಗೆ) ಟೆಕಿಗಳು ಭಾಗವಹಿಸಿ ಜಾಗೃತಿ ಮೂಡಿಸಿದರು. ಉಳಿದ ಭಕ್ತಸಾಗರ ಮುಂದೆ ಸಾಗಿದ್ದು, ಜು. 22ರಂದು ಪಂಡರಪುರ ತಲುಪಲಿದೆ.

ಪ್ಲಾಸ್ಟಿಕ್ ತ್ಯಜಿಸುವ ಜವಾಬ್ದಾರಿಯ ಟೊಪ್ಪಿಗೆಗಳೂ ಕೆಲವರ ತಲೆಯ ಮೇಲೆ ಇನ್ನೂ ಕಾಣುತ್ತಿವೆ. ಈ ಜವಾಬ್ದಾರಿ ಹೊತ್ತು ದರ್ಶನ ಪಡೆಯುವ ಭಕ್ತರನ್ನು ಕಂಡು ವಿಠ್ಠಲ ಹೆಚ್ಚು ಪ್ರಸನ್ನನಾಗಲಿದ್ದಾನೆ. ಏಕೆಂದರೆ ಈ ಭಕ್ತರು ಅವನ ಮಡದಿಯಾದ ಭೂದೇವಿಯನ್ನು ಪ್ಲಾಸ್ಟಿಕ್‍ನಿಂದ ಮುಕ್ತಗೊಳಿಸಿ ಸಂರಕ್ಷಿಸುವ ಜವಾಬ್ದಾರಿ ಹೊತ್ತವರಲ್ಲವೇ? ಐಟಿ ದಿಂಡಿಯ ಸಾಮಾಜಿಕ ಕಳಕಳಿಗೊಂದು ‘ಹ್ಯಾಟ್ಸ್’ ಆಫ್!
****
ಸ್ಪಿರಿಚ್ಯುವಲ್ ಜಾಯ್...
ಒತ್ತಡದಿಂದ ಹೊರಬರಲು, ಸಾಮಾಜಿಕವಾಗಿ ಎಲ್ಲ ವರ್ಗದ ಜನರೊಂದಿಗೆ ಬೆರೆಯಲು, ಮತ್ತೊಬ್ಬರ ಕಷ್ಟ ಸುಖ ಕೇಳಿ ಮನದ ನೋವು ಮರೆಯಲು, ನಾವೂ ಸಮಾಜದ ಒಂದು ಭಾಗ ಎಂಬುದನ್ನು ಅರಿಯಲು ಈ ಯಾತ್ರೆಯಲ್ಲಿ ಪಾಲ್ಗೊಳ್ಳುತ್ತೇವೆ. ಎರಡು ದಿನ ದೇಹ ದಣಿಯುತ್ತದೆ. ಆದರೆ ಮನಸ್ಸು ಸಂತೃಪ್ತಿಯಿಂದ ಕುಣಿಯುತ್ತದೆ. ತಾಳ, ಮೃದಂಗಗಳ ನಾದ, ಭಜನೆ ಮಾನಸಿಕ ಒತ್ತಡವನ್ನೂ ಕಡಿಮೆಗೊಳಿಸುತ್ತದೆ.
-ರಾಜೇಂದ್ರ ಪಾಟೀಲ,ಬಿಜಿನೆಸ್ ಹೆಡ್, ಧೀ ಟೆಕ್ನಾಲಾಜಿ, ಪುಣೆ
*

ಥೀಮ್‍ನೊಂದಿಗೆ ದಿಂಡಿಯಲ್ಲಿ ಪಾಲ್ಗೊಳ್ಳುವ ಭಕ್ತರಿಗೆ ಪ್ರತಿ ವರ್ಷ ಐಟಿ ದಿಂಡಿ ವತಿಯಿಂದ ಊಟ, ಔಷಧೋಪಚಾರ ಸೇವೆಗಳನ್ನು ಕೈಗೊಳ್ಳುತ್ತೇವೆ. ಕೆಲವು ವರ್ಷಗಳಿಂದ ಸಂತರ ಸೇವೆ ಜೊತೆಗೆ ಸುಂದರ ಸಮಾಜ ನಿರ್ಮಾಣಕ್ಕೆ ಕೊಡುಗೆ ಸಲ್ಲಿಸಿದ ಸಂತೃಪ್ತಿಯೂ ನಮ್ಮದಾಗುತ್ತಿದೆ. ಇಲ್ಲಿವರೆಗೆ ಎರಡು ದಿನ ನಡೆಯುತ್ತಿದ್ದ ಯಾತ್ರೆ ಪ್ರಸಕ್ತ ವರ್ಷ ಮೂರು ದಿನಕ್ಕೆ ಭಡ್ತಿ ಪಡೆದಿದೆ.
-ಕೌಸ್ತುಭ ಸಾಕರೆ, ಎಂಜಿನಿಯರಿಂಗ್ ಕಾಲೇಜ್ ಉಪನ್ಯಾಸಕ, ಪುಣೆ
*

ಈ ಬಾರಿ ವೀಕೆಂಡ್‍ಗಳಲ್ಲಿ ಪಾದಯಾತ್ರೆ ಪುಣೆ ನಗರಕ್ಕೆ ಆಗಮಿಸಿದ್ದರಿಂದ ನಾವು ಪಾಲ್ಗೊಂಡಿದ್ದೆವು. ಭಾರತದಲ್ಲಿ ಕಳೆದ ದಿನಗಳಲ್ಲಿ ದಿಂಡಿಯಾತ್ರೆಯ ಅಪರೂಪದ ದಿನವನ್ನು ಎಂದಿಗೂ ಮರೆಯುವುದಿಲ್ಲ. ಈ ಯಾತ್ರೆಯಲ್ಲಿ ಹಿರಿಯ ನಾಗರಿಕರೂ ಪಾಲ್ಗೊಂಡಿದ್ದನ್ನು ಕಂಡು ತುಂಬಾ ಹೆಮ್ಮೆ ಎನಿಸಿತು. ಇಂಥ ಸಂತಸ ನಮ್ಮ ದೇಶದಲ್ಲಿ ಅಪರೂಪ.
-ಯು ವೋತ್ಸಾನ್ (ಜಪಾನ್) ಹಾಗೂ ರಾಫೆಲ್ ವಾಲಿಮ್ (ಬ್ರೆಝಿಲ್)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT