ಮರ ಅಭಿವೃದ್ಧಿಯಲ್ಲಿ ಹೊಸ ಬೆಳಕು...

7

ಮರ ಅಭಿವೃದ್ಧಿಯಲ್ಲಿ ಹೊಸ ಬೆಳಕು...

Published:
Updated:

‘ಕಾ ಳು ಮೆಣಸಿನ ಬಳ್ಳಿ ಬೆಳಸಾಕ ಸಿಲ್ವರ್ ಅಗಿ ಏಲ್ಲಿ ಸಿಗತಾವ್ರೀ?’ ಚಿತ್ರದುರ್ಗದ ರೈತರು ಕೇಳುತ್ತಾರೆ. ‘ಹೆಬ್ಬೇವು ಎಷ್ಟು ವರ್ಷಕ್ಕೆ ಕಟಾವಿಗೆ ಬರತದ್ರಿ?’– ಮರ ಬೆಳೆಸಿದ ರಾಣಿಬೆನ್ನೂರಿನ ಅರೆಮಲ್ಲಾಪುರದ ಜಗದೀಶಗೌಡ ಪಾಟೀಲರ ಪ್ರಶ್ನೆ. ‘ನಮಗೂ ಒಂದೀಟು ಮಹಾಗನಿ ಸಸಿ ಕೊಡ್ರಲಾ ....ತ್ವಾಟದಾಗ ಹಚ್‍ತೇವಿ’ – ಮುಂಡರಗಿಯ ಬಿದರಹಳ್ಳಿ ರೈತ ರವೀಂದ್ರರ ಸಸಿ ಹುಡುಕಾಟ ಹೀಗೆ ಸಾಗಿದೆ. ಮಳೆ ಇಲ್ಲ, ನೀರಿಲ್ಲವೆಂದು ಹೇಳುತ್ತಿದ್ದ ಹಳ್ಳಿಗಳಲ್ಲಿಯೂ ಹಸಿರು ಉಕ್ಕಿಸುವ ಉತ್ಸಾಹ ಷಗರಿಗೆದರಿದೆ. ಮಿಂಚು ಹೊಡೆದಂತೆ ಮರ ಅಭಿವೃದ್ಧಿ ಲೋಕದಲ್ಲಿ ಅಚ್ಚರಿಯ ಹೊಸ ಬೆಳಕು ದಶಕದೀಚೆಗೆ ಕಾಣಿಸಿದೆ. ಬರ, ಬೆಲೆ ಕುಸಿತ, ಕೀಟಬಾಧೆಗಳಂಥ ಹಲವು ಸಂಕಷ್ಟಗಳ ಮಧ್ಯೆ ಕೃಷಿಗೇರಿದ ಹೊಸ ತಲೆಮಾರು ಮರಗಳ ಜೊತೆ ಮಾತಾಡಲು ಆರಂಭಿಸಿದೆ.

ಮರ ಬೆಳೆಸುವ ಈ ಪ್ರೀತಿ ಜನಿಸಿದ್ದು ಏಲ್ಲಿ? ಹೇಳೋದು ಕಷ್ಟ. ದಶಕಗಳ ಹಿಂದೆ ಬಳ್ಳಾರಿ ಹಗರಿಬೊಮ್ಮನಹಳ್ಳಿಯ ಶಿವರುದ್ರಪ್ಪ ಎತ್ತಿನಮನಿಯವರ ದಾಳಿಂಬೆ ತೋಟದಲ್ಲಿ ನೈಸರ್ಗಿಕವಾಗಿ ಒಂದು ಹೆಬ್ಬೇವಿನ ಮರ ಬೆಳೆಯಿತು. ಹೆಬ್ಬೇವಿನ ಪಕ್ಕದ ದಾಳಿಂಬೆ ಗಿಡಗಳು ಆರೋಗ್ಯವಂತವಾಗಿರುವುದು ಅವರ ಚಿಕಿತ್ಸಕ ಕಣ್ಣಿಗೆ ಬಿತ್ತು. ‘ಹೆಬ್ಬೇವು-ದಾಳಿಂಬೆ’ ಸ್ನೇಹ ಗುರುತಿಸಿದ ಕೃಷಿಕ ದಾಳಿಂಬೆ ಜೊತೆ ಸಾವಿರಾರು ಹೆಬ್ಬೇವಿನ ಸಸಿ ನಾಟಿ ಆರಂಭಿಸಿದರು. ಇಂದು ದಾಳಿಂಬೆ ಬೆಳೆಸುವವರೆಲ್ಲ ಹೆಬ್ಬೇವು ನೆಡುವುದು ಮಾಮೂಲಿಯಾಗಿದೆ. ರಾಯಚೂರು, ಕೊಪ್ಪಳ, ಚಿತ್ರದುರ್ಗ ಜಿಲ್ಲೆಗಳ ಹಣ್ಣಿನ ತೋಟಗಳಲ್ಲಿ ಹೆಬ್ಬೇವು ನಲಿಯುತ್ತಿದೆ. ಒಮ್ಮೆ ದಾಳಿಂಬೆಗೆ ರೋಗ ಬಂದರೆ ಮರ ಕೈಹಿಡಿಯುತ್ತದೆಂಬ ಯೋಜನೆಯೂ ಇಲ್ಲಿದೆ.

ಸಸಿ ಬೆಳೆಸುವ ಮಾದರಿಗಳು ರಾಜ್ಯದ ಎಲ್ಲೆಡೆ ಸಿಗುತ್ತವೆ. ಸದಾ ನೀರಿನ ಸಂಕಷ್ಟ ಹೇಳುವ ಕೋಲಾರದಲ್ಲಿ ಮಳೆ ನೀರು ನಂಬಿ ಮರ ಗೆಲ್ಲಿಸಿದ ಪಾಲೂರಹಳ್ಳಿ ಹನುಮಂತರೆಡ್ಡಿ, ರಾಂಪುರದ ಅಶೋಕಕುಮಾರ್, ನೆನಮನಹಳ್ಳಿ ಚಂದ್ರಶೇಖರ್ ಸಿಗುತ್ತಾರೆ. ಗೋಕಾಕದ ರೈತನಾಳ, ಹೊಸೂರು ಹೊಲಗಳಲ್ಲಿ ಬೆಳೆಸಿದ ಕಾಡು ನೇರಳೆ ಹಣ್ಣುಗಳು ಬಾಂಬೆ, ಡೆಲ್ಲಿ, ಬೆಂಗಳೂರು ಮಾರುಕಟ್ಟೆಗೆ ಹೋಗುತ್ತಿವೆ.

ರಾಗಿ, ಬತ್ತ, ಜೋಳ, ಸಜ್ಜೆ, ಹುರಳಿ, ತೊಗರಿ, ಕಬ್ಬು, ಕಡಲೆಯಲ್ಲಿ ಕನಸು ಕಾಣುತ್ತಿದ್ದ ಮಳೆ ಆಶ್ರಿತ ರೈತರು ಮರ ನೋಡಲು ಆರಂಭಿಸಿದ್ದಾರೆ. ಸಸಿಯೊಂದಕ್ಕೆ ಒಂದು ರೂಪಾಯಿ ನೀಡಿ ‌1984ರಲ್ಲಿ ಸಾವಿರಾರು ತೇಗ ನಾಟಿ ಮಾಡಿದ ಮುಂಡರಗಿಯ ಈಶ್ವರಪ್ಪ ಹಂಚಿನಾಳರ ಮೊಗದಲ್ಲಿಂದು ಬೆಲೆಬಾಳುವ ಹೆಮ್ಮರದ ನಗುವಿದೆ. ಬತ್ತದ ಖ್ಯಾತಿಯ ಮೈಸೂರಿನ ಕಿರಗಾವಲು ಪ್ರದೇಶ ಆಗಲೇ ಗಾಳಿ( ಕ್ಯಾಸುರಿನಾ) ಮರಗಳಿಗೆ ಆಶ್ರಯ ನೀಡಿದೆ. ನೀರಾವರಿಯಲ್ಲಿ ಬೆಳೆ ಬೆಳೆಯುವ ಸಾಹಸಕ್ಕಿಂತ ಸಹಜವಾಗಿ ಬೆಳೆಯುವ ಸುಬಾಬುಲ್ ಮರದಲ್ಲಿ ಹಣ ದೊರಕುವ ಸತ್ಯ ದಾವಣಗೆರೆ ಜಗಳೂರಿನ ಚಿಕ್ಕಬನ್ನಿಹಟ್ಟಿಯ ಶೇಖಪ್ಪ ಮೇಷ್ಟ್ರಿಗೆ ಗೊತ್ತಿದೆ.

ಕೊಪ್ಪಳದ ಯಲಬುರ್ಗಾದ ಮಂಡಲಮರಿ ತೋಟದಲ್ಲಿ ಶ್ರೀಗಂಧ ಆಧಾರಿತ ತೋಟಗಾರಿಕೆ ಆರಂಭಿಸಿದವರು ಕೃಷಿಕ ದೇವೇಂದ್ರಪ್ಪ ಬಲೂಟಗಿ. ಬೇವು, ಶ್ರೀಗಂಧ, ಹೊಂಗೆ, ಹೆಬ್ಬೇವು, ಬಿದಿರು ಸೇರಿದಂತೆ ಕಾಡಿನ ಪ್ರತಿರೂಪವೇ ಕೃಷಿ ನೆಲದಲ್ಲಿದೆ. ಮರ ಬೆಳೆಸುವ ಲಾಭದ ಪಾಠ ಹೇಳಲು ಯುವ ಕೃಷಿಕ ರಮೇಶ ಬಳೂಟಗಿ ಯಾವತ್ತೂ ಉತ್ಸುಕರು. ಕಳೆದ 10 ವರ್ಷಗಳಲ್ಲಿ 3,500ಕ್ಕೂ ಹೆಚ್ಚು ರೈತರು ಇವರ ಪ್ರೇರಣೆಯಿಂದ ಸುಮಾರು 15,000 ಎಕರೆಯಲ್ಲಿ ಶ್ರೀಗಂಧ ಆಧಾರಿತ ಮರ ಬೇಸಾಯ ನಡೆಸಿದ್ದಾರೆ. ಈ ಕಾರ್ಯ ನಡೆದದ್ದು ಮಳೆ ಬೀಳುವ ಮಲೆನಾಡಿನಲ್ಲಿ ಅಲ್ಲ, ವಾರ್ಷಿಕ 400-500 ಮಿಲಿ ಮೀಟರ್ ಸುರಿಯದ ಯಲಬುರ್ಗಾ, ಕೊಪ್ಪಳದ ಪ್ರದೇಶದಲ್ಲಿ ಎಂಬುದು ಮುಖ್ಯ.

ಬರ, ಜಲಕ್ಷಾಮವೆಂದು ನಾವು ಸಬೂಬು ಹೇಳುವಾಗ ಮಂಡಲಮರಿಯ ಬಡ ರೈತ ಕಂದಕೂರಪ್ಪ ಹರಿಜನ ನೀರಿಲ್ಲದ ತಮ್ಮ ನಾಲ್ಕೂವರೆ ಎಕರೆ ಗುಡ್ಡದ ಹೊಲದಲ್ಲಿ 18 ಜಾತಿಯ 1500 ಗಿಡ ಬೆಳೆಸಿದ್ದಾರೆ! ಮರ ಬೆಳೆಸಿದ ಹಲವರು ಹೊಲದ ಮರಗಳ ನೆರಳಲ್ಲಿ ಹೊಸ ಮನೆ ನಿರ್ಮಿಸಿದ್ದಾರೆ. ಬಿರು ಬಿಸಿಲಿನ ಬೇಸಿಗೆ ದಿನಗಳಲ್ಲಿ ಜಾನುವಾರುಗಳಲ್ಲಿ ಗರ್ಭಧಾರಣೆಯಾಗುವುದಿಲ್ಲ.

ಆದರೆ ಇಲ್ಲಿ ಜಾನುವಾರುಗಳನ್ನು ಮರಗಳ ನೆರಳಲ್ಲಿ ಸಾಕುತ್ತಿದ್ದು ಬೇಸಿಗೆಯಲ್ಲಿ ಗರ್ಭಧಾರಣೆಯಾಗುತ್ತಿದೆ. ಹಸಿರು-ಹೈನು ಫಲ ಶ್ರೀಸಾಮಾನ್ಯರಿಗೂ ಅರ್ಥವಾಗುತ್ತಿದೆ. ಹೆಬ್ಬೇವಿನ ಸೊಪ್ಪು ಮೇವಾಗಿ ಆಡು, ಕುರಿ ಸಾಕಣೆಗೆ ಅನುಕೂಲವೆಂಬ ಆರ್ಥಿಕ ನೀತಿ ಜನಿಸಿದೆ. ಮಣ್ಣಿಗೆ ಸಾವಯವ ಶಕ್ತಿ ದೊರಕುತ್ತಿದೆ.

ತಂಬಾಕು ಹೋಯ್ತು ಹೆಬ್ಬೇವು ಬಂತು:

ಹುಣಸೂರು, ಪಿರಿಯಾಪಟ್ಟಣ, ಎಚ್.ಡಿ.ಕೋಟೆ, ಕೆ.ಆರ್.ನಗರ ಪ್ರದೇಶಗಳಲ್ಲಿ 40 ವರ್ಷಗಳಿಂದ ಮರ ಸುಡುವ ಮಾತು ಜೋರಾಗಿದೆ. ತಂಬಾಕು ಸಂಸ್ಕರಣೆಗಾಗಿ ಸುಮಾರು 16,000 ಎಕರೆಯಲ್ಲಿ ಬೆಳೆದ ಮರಗಳು ಪ್ರತಿ ವರ್ಷ ಖಾಲಿಯಾಗುತ್ತಿವೆ. ಒಂದು ಕಾಲದಲ್ಲಿ ಹುಣಸೆಮರಗಳಿಗೆ ಹುಣಸೂರು ಖ್ಯಾತವಾಗಿತ್ತಂತೆ! ತಂಬಾಕು ಬಂದ ಬಳಿಕ ಹುಣಸೆಯಷ್ಟೇ ಅಲ್ಲ ಸುತ್ತಲಿನ ಆಲ, ಬಸರಿ, ಅತ್ತಿ ಮರಗಳು ನಾಶವಾಗಿವೆ. ವಿಶ್ವ ಆರೋಗ್ಯ ಸಂಸ್ಥೆಯ ಜಿನೀವಾ ಒಪ್ಪಂದಕ್ಕೆ ಭಾರತ ಸಹಿ ಹಾಕಿದೆ.

ಇದರನ್ವಯ 2020 ರ ವೇಳೆಗೆ ತಂಬಾಕು ಬೆಳೆಯುವುದನ್ನು ಕಡಿಮೆ ಮಾಡಬೇಕು. ಈಗ ತಂಬಾಕು ಹೊಲಗಳಲ್ಲಿ ಹೆಬ್ಬೇವಿನ ತೋಟಗಳು ಹೆಚ್ಚುತ್ತಿವೆ. ಹುಣಸೂರು ಅರಣ್ಯ ವಿಭಾಗವೊಂದಲ್ಲಿಯೇ ಈವರೆಗೆ ಸುಮಾರು 15 ಲಕ್ಷಕ್ಕೂ ಹೆಚ್ಚು ಹೆಬ್ಬೇವು ರೈತರ ಭೂಮಿಗಳಲ್ಲಿ ನಾಟಿಯಾಗಿದೆ. ಕರ್ನಾಟಕ ಅರಣ್ಯ ಇಲಾಖೆ, ಪರಿಸರ ಇಲಾಖೆಯ ನಿವೃತ್ತ ಕಾರ್ಯದರ್ಶಿ ಎ.ಸಿ. ಲಕ್ಷ್ಮಣ, ಹುಣಸೂರು ಪ್ಲೈವುಡ್ ಕಾರ್ಖಾನೆಯ ಮೊಯಿದ್ ವಾಘ್, ಪರಿಸರ ಕಾರ್ಯಕರ್ತರಾದ ಹನೂರಿನ ಸುಧಾಮಣಿ, ಬಸವರಾಜು ಸೇರಿದಂತೆ ಹಸಿರೀಕರಣದಲ್ಲಿ ಹಲವರ ಪ್ರಯತ್ನವಿದೆ.

ಮಲೆನಾಡಿನ ತೋಟಗಳಲ್ಲಿ ಮರಗಳ ನೆರಳಲ್ಲಿ ಕಾಫಿ, ಕಾಳುಮೆಣಸು ಬೆಳೆ ಪರಿಸರ ಪ್ರೀತಿಯ ಕೃಷಿ ದರ್ಶನ ಮಾಡಿಸುತ್ತಿದೆ. ಮರ ಬೆಳೆಸಲು ಪಾರಿಸಾರಿಕ ಲಾಭದ ಜೊತೆಗೆ ಆರ್ಥಿಕ ಲಾಭವೂ ಮುಖ್ಯ. ಕೃಷಿ ನೆಲದಲ್ಲಿ ಉತ್ಪಾದನೆಯಾಗುವ ಮರ, ಫಲ ಕೊಯ್ಲು ಹಾಗೂ ಮಾರಾಟದಲ್ಲಿ ಸರಳೀಕರಣ ಅಗತ್ಯವಿದೆ. ಶ್ರೀಗಂಧ, ಹೆಬ್ಬೇವು, ನೀಲಗಿರಿ, ಕ್ಯಾಸುರಿನಾ ಸೇರಿದಂತೆ ಹಲವು ಸಸ್ಯಗಳ ಕುರಿತು ರಾಜ್ಯದ ಮರಕಾಯ್ದೆ ಬದಲಾವಣೆಯಿಂದ ಹೊಲಗಳಲ್ಲಿ ಹಸಿರು ಉತ್ಸಾಹ ಹೆಚ್ಚಿದೆ.

ಗಿಡ ಹಂಚುವ 'ಗ್ರೀನ್ ಆರ್ಮಿ'

ಬದುವಿನಲ್ಲಿ ಮರ ಬೆಳೆಸಿ ಗೆದ್ದವರು ಬರದ ರಾಯಚೂರು, ವಿಜಯಪುರ, ಯಾದಗಿರಿ, ಕಲಬುರಗಿಗಳಲ್ಲಿಯೂ ಸಿಗುತ್ತಾರೆ. ಗಜೇಂದ್ರಗಡದ ನರೇಗಲ್ ದ್ಯಾಮವ್ವನ ಜಾತ್ರೆಯಲ್ಲಿ ಕಳೆದ ವರ್ಷ ಹಲಸು, ಮಾವು, ಬನ್ನಿ, ಬೇವು, ನೇರಳೆ ಮುಂತಾದ 6,000 ಗಿಡ ಹಂಚಿದ ಚಂದ್ರು ರಾಥೋಡ್ ಜೊತೆ ‘ಗ್ರೀನ್ ಆರ್ಮಿ’ಯಿದೆ. ಶಿಕ್ಷಕರು, ವ್ಯಾಪಾರಿಗಳು, ಸರಕಾರಿ ನೌಕರರು, ಕೃಷಿಕರ ಗುಂಪು ಇಲ್ಲಿ ಪ್ರತಿ ತಿಂಗಳು ತಮ್ಮ ಆದಾಯದ ನೂರು ರೂಪಾಯಿ ಸಂಗ್ರಹಿಸುತ್ತ ಆ ಹಣದಲ್ಲಿ ಮರ ಬೆಳೆಸುತ್ತಿದೆ.

ಧಾರವಾಡದ ಡಾ. ಪ್ರಕಾಶ್ ಭಟ್ ದಶಕಗಳ ಹಿಂದೆಯೇ ರೈತರ ಹೊಲದಲ್ಲಿ ಮರ ಬೆಳೆಸುವ ’ಹಸಿರು ಹಬ್ಬ’ ರೂಪಿಸಿದವರು. ಹುಬ್ಬಳ್ಳಿಯ ಲಿಂಗರಾಜ ನಿಡುವಣಿ ವಿವಿಧ ಸಂಘ ಸಂಸ್ಥೆಗಳ ಜೊತೆಯಾಗಿ ಗಿಡ ಹಚ್ಚಿದವರು. ಕೊಪ್ಪಳದ ವೀರಬಸಪ್ಪ ಶೆಟ್ಟರಿಗೆ ಶಾಲೆ, ದೇಗುಲ, ಕೆರೆ, ರಸ್ತೆಯ ಅಂಚುಗಳಲ್ಲಿ ಗಿಡ ಬೆಳೆಸುವುದೇ ಹುಚ್ಚು. ರಾಜ್ಯದ ಹಳ್ಳಿ, ನಗರಗಳ ಎಲ್ಲೆಡೆ ಮರ ಪ್ರೀತಿಸುವವರು ಸಿಗುತ್ತಾರೆ. ಹೊಲದ ಬದುವಿಗೆ ಹೊಂಗೆ ನೆಡುವ ಕೃಷಿ ವಿಜ್ಞಾನದ ಅಕಾಡೆಮಿಕ್ ಮಾತಿಗಿಂತ ಮುಂದೆ ಸಮಗ್ರ ಕೃಷಿಯ ವಕ್ತಾರರು ಹಳ್ಳಿ ಹಳ್ಳಿಗಳಲ್ಲಿ ಜನಿಸಿದ್ದಾರೆ. ಹೊಲ, ಬೇಲಿ, ಬದು, ಕೆರೆ, ರಸ್ತೆಯಂಚುಗಳಲ್ಲಿ ಹಸಿರು ತುಂಬುವ ಕೆಲಸ ನಡೆದಿದೆ.

ಹಸಿರು ಹರಿಕಾರರು ಬೇಕಾಗಿದ್ದಾರೆ

ಬೇಡಿಕೆ ಹೆಚ್ಚುತ್ತ ವನೀಕರಣ ಮೀರಿ ಹಸಿರು ಹನನವೂ ಜೋರಾಗಿದೆ. ಮರ ಬೆಳೆಸಲು ಮಿತಿಯಿದೆಯೇ? ಇನ್ನಷ್ಟು ಮತ್ತಷ್ಟು ಹಸಿರು ಹರಿಕಾರರು ಎಲ್ಲೆಡೆ ಬೇಕಾಗಿದ್ದಾರೆ. ಪರ್ಯಾವರಣ ಬದಲಾವಣೆಯ ಪರ್ಯಾಯ ದಾರಿಗೆ ಶಕ್ತಿ ಬರಬೇಕಿದೆ. ಬೀದರ್ ಜಿಲ್ಲೆಯ ಜೋಳದ ಹೊಲದಲ್ಲಿ ಕರಿಜಾಲಿ ಗೆದ್ದ ಕತೆ ಪಕ್ಕದ ಹುಮನಾಬಾದ್ ತಲುಪಬೇಕು.

ಕಡು ಬರದಲ್ಲೂ ತಿಪಟೂರಿನಲ್ಲಿ ಹುಣಸೆಯಲ್ಲಿ ಸಿಕ್ಕ ಲಾಭ ತುಮಕೂರು ಕಾಣಬೇಕು. ಬೇಲದ ಫಲದಿಂದ ಬದುಕಲು ಕಲಿತ ಬಳ್ಳಾರಿಯ ಹುಲಿಕೆರೆಯ ವಿಶ್ವೇಶ್ವರ ಸಜ್ಜನ್ ಸುದ್ದಿ ಮಳೆಯಿಲ್ಲದ ಮೊಳಕಾಲ್ಮರಿಗಾದರೂ ಗೊತ್ತಾಗಬೇಕು. ಸಂರಕ್ಷಣೆ ಮಾತ್ರದಿಂದ ಸಾವಿರಾರು ಎಕರೆ ಕಮರಾ ಕಾಡು ಬೆಳೆಸಿದ ಬಾಂಡ್ರಾವಿಯ ಫಾರೆಸ್ಟ್‍ಗಾರ್ಡ್ ದಿ| ನಾಗಪ್ಪ ಜುಮ್ಮಣ್ಣ ಮೇಟಿ ಬದುಕು ಎಲ್ಲರಿಗೂ ಪ್ರೇರಣೆಯಲ್ಲವೇ?

ದೀಪದಿಂದ ದೀಪ ಹಚ್ಚುವಂತೆ ಹಸಿರು ಜನಕರ ಅರಿವು ನಾಡಿಗೆಲ್ಲ ಬಿತ್ತನೆಯಾಗಬೇಕು. ಶ್ರೀಸಾಮಾನ್ಯರೇ ಅಸಾಮಾನ್ಯ ಕಾಯಕ ಮಾಡುತ್ತಿರುವಾಗ ಅರಣ್ಯಾಭಿವೃದ್ಧಿಯೇ ಕಾಯಕವಾದ ಕರ್ನಾಟಕ ಅರಣ್ಯ ಇಲಾಖೆ ಎಚ್ಚರಾಗಬೇಕು. ರಚನಾತ್ಮಕ ಕಾರ್ಯಕ್ಕೆ ಜೊತೆ ನಿಲ್ಲಬೇಕು. ಮರ ಅಭಿವೃದ್ಧಿಯ ವಿವರಗಳಿಗೆ ಸಂಪರ್ಕ ಸಂಖ್ಯೆ: 9448023715

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry