ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ, ಬಿಎಸ್‌ವೈರಿಂದ ಮಾತ್ರ ಒಬಿಸಿ ಅಭಿವೃದ್ಧಿ

Last Updated 27 ಫೆಬ್ರುವರಿ 2018, 8:46 IST
ಅಕ್ಷರ ಗಾತ್ರ

ಕಲಬುರ್ಗಿ: ‘ಟಿಪ್ಪು ಸುಲ್ತಾನ್ ಮತ್ತು ಬಹಮನಿ ಜಯಂತಿ ಆಚರಿಸುವವರಿಗೆ ಹಿಂದುಳಿದ ವರ್ಗದವರ ನೋವು ಅರ್ಥವಾಗುವುದಿಲ್ಲ. ಹಿಂದುಳಿದ ವರ್ಗಗಳ ಅಭಿವೃದ್ಧಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿ.ಎಸ್.ಯಡಿಯೂರಪ್ಪ ಅವರಿಂದ ಮಾತ್ರ ಸಾಧ್ಯ’ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪ್ರತಿಪಾದಿಸಿದರು.

ನಗರದ ಗೋಲ್ಡ್ ಹಬ್ ಸಭಾಂಗಣದಲ್ಲಿ ಸೋಮವಾರ ನಡೆದ ಹಿಂದುಳಿದ ವರ್ಗಗಳ ಪ್ರಮುಖರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಹಿಂದುಳಿದ ವರ್ಗಗಳ ಅಭಿವೃದ್ಧಿಯಿಂದ ದೇಶದ ಅಭಿವೃದ್ಧಿ ಸಾಧ್ಯ.

ಈ ಕಾರಣಕ್ಕಾಗಿಯೇ ಉಜ್ವಲ್ ಯೋಜನೆಯಡಿ 3.80 ಕೋಟಿ ಕುಟುಂಬಗಳಿಗೆ ಉಚಿತ ಅಡುಗೆ ಅನಿಲ ವಿತರಿಸಲಾಗಿದೆ. ಅವರಲ್ಲಿ ಬಹುತೇಕರು ಹಿಂದುಳಿದ ವರ್ಗಕ್ಕೆ ಸೇರಿದವರಾಗಿದ್ದಾರೆ. ಮುದ್ರಾ ಯೋಜನೆಯಡಿ ರಾಜ್ಯದ 1ಕೋಟಿ ಯುವಕ, ಯುವತಿಯರಿಗೆ ಬ್ಯಾಂಕುಗಳಿಂದ ₹39ಸಾವಿರ ಕೋಟಿ ಸಾಲ ಮಂಜೂರು ಮಾಡಿಸಲಾಗಿದೆ’ ಎಂದು ಹೇಳಿದರು.

‘ದಿವಂಗತ ಎನ್.ಧರ್ಮಸಿಂಗ್ ಹಾಗೂ ಸಂಸದ ಮಲ್ಲಿಕಾರ್ಜುನ ಖರ್ಗೆ ಅವರು 50 ವರ್ಷದಿಂದ ರಾಜಕೀಯದಲ್ಲಿದ್ದರೂ ಈ ಭಾಗದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲ. ಕಲಬುರ್ಗಿಯಲ್ಲಿ ಬಸ್ ನಿಲ್ದಾಣ ಕಟ್ಟಿಸಲೂ ಯಡಿಯೂರಪ್ಪ ಅವರೇ ಅಧಿಕಾರಕ್ಕೆ ಬರಬೇಕಾಯಿತು’ ಎಂದು ವ್ಯಂಗ್ಯವಾಡಿದರು.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ‘ಹಿಂದುಳಿದ ವರ್ಗಗಳ ನಾಯಕ ಎಂದು ಹೇಳಿಕೊಳ್ಳುವ ಸಿದ್ದರಾಮಯ್ಯ ಹಿಂದುಳಿದವರಿಗೆ ಮೋಸ ಮಾಡಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ಮರು ಬಜೆಟ್ ಮಂಡಿಸಿ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ₹2ಸಾವಿರ ಕೋಟಿ ಅನುದಾನ ಮೀಸಲಿಡುತ್ತೇನೆ’ ಎಂದು ಭರವಸೆ ನೀಡಿದರು.

ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಮಾತನಾಡಿ, ‘ಮುಖ್ಯಮಂತ್ರಿ ಸಿದ್ದರಾಮಯ್ಯ ನಕಲಿ ಹಿಂದುಳಿದ ವರ್ಗಗಳ ನಾಯಕ. ಯಡಿಯೂರಪ್ಪ ಅಸಲಿ ಹಿಂದುಳಿದ ವರ್ಗಗಳ ನಾಯಕ. ದಲಿತರು, ಹಿಂದುಳಿದ ವರ್ಗಗಳಿಗೆ ಮೀಸಲಿರಿಸಿದ್ದ ಅನುದಾನವನ್ನು ಸಿದ್ದರಾಮಯ್ಯ ಅವರು ಬೇರೆ ಯೋಜನೆಗಳಿಗೆ ಬಳಸಿಕೊಂಡಿದ್ದಾರೆ’ ಎಂದು ಆರೋಪಿಸಿದರು.

‘ದಲಿತರು, ಹಿಂದುಳಿದ ವರ್ಗದವರಿಗೆ ಕಾಂಗ್ರೆಸ್ ಸರ್ಕಾರ ಅರಣ್ಯ ಭೂಮಿಯನ್ನು ಮಂಜೂರು ಮಾಡಿದೆ. ಇನ್ನೊಂದೆಡೆ ಸರ್ಕಾರವೇ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದೆ. ದಲಿತರು ಮತ್ತು ಹಿಂದುಳಿದ ವರ್ಗಗಳ ಬಗ್ಗೆ ನಿಜವಾದ ಕಾಳಜಿ ಇದ್ದರೆ ಅರಣ್ಯ ಭೂಮಿಯನ್ನು ಮಂಜೂರು ಮಾಡುತ್ತಿರಲಿಲ್ಲ’ ಎಂದರು.

ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರರಾವ್, ಹೈದರಾಬಾದ್ ಕರ್ನಾಟಕ ಜಿಲ್ಲೆಗಳ ಬಿಜೆಪಿ ಉಸ್ತುವಾರಿ ಡಿ.ಪುರಂದರೇಶ್ವರಿ, ಸಂಸದ ಭಗವಂತ ಖೂಬಾ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್, ಶಾಸಕರಾದ ಬಿ.ಜಿ.ಪಾಟೀಲ, ಕೆ.ಬಿ.ಶಾಣಪ್ಪ, ಮುಖಂಡರಾದ ರಾಜಗೋಪಾಲರೆಡ್ಡಿ, ಅವ್ವಣ್ಣ ಮ್ಯಾಕೇರಿ, ಶರಣಪ್ಪ ತಳವಾರ ಇದ್ದರು.

ನಡೆಯದ ಸಂವಾದ

ಹಿಂದುಳಿದ ವರ್ಗಗಳ ಪ್ರಮುಖರೊಂದಿಗೆ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆದರೆ ಸಂವಾದ ನಡೆಯಲಿಲ್ಲ. 10.50 ಗಂಟೆಗೆ ಆರಂಭವಾಗಬೇಕಿದ್ದ ಕಾರ್ಯಕ್ರಮವು ಮಧ್ಯಾಹ್ನ 12.30ಗಂಟೆಗೆ ಆರಂಭವಾಯಿತು. ಅಮಿತ್ ಶಾ, ಯಡಿಯೂರಪ್ಪ ಸೇರಿ ಪ್ರಮುಖ ನಾಯಕರು ಮಾತನಾಡಿದರು. ಇದರಿಂದ ಸಂವಾದಕ್ಕೆಂದು ಬಂದವರು ನಿರಾಸೆ ಹೊಂದಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT