ನೆರೆ ಸಂತ್ರಸ್ತರಿಗೆ ಮಿಡಿದ ನಗರವಾಸಿಗಳು

7

ನೆರೆ ಸಂತ್ರಸ್ತರಿಗೆ ಮಿಡಿದ ನಗರವಾಸಿಗಳು

Published:
Updated:
Deccan Herald

ಕೊಡಗು ಮತ್ತು ಕೇರಳದಲ್ಲಿನ ಮಳೆಯ ರುದ್ರ ನರ್ತನಕ್ಕೆ ಸಿಲುಕಿ ಪ್ರಾಣ, ಆಸ್ತಿ, ಪಾಸ್ತಿ ಕಳೆದುಕೊಂಡ ಸಂತ್ರಸ್ತ್ರರ ನೆರವಿಗೆ ಬೆಂಗಳೂರಿಗರ ಹೃದಯವೂ ಮಿಡಿಯುತ್ತಿದ್ದು, ವಿವಿಧ ಸಂಘ, ಸಂಸ್ಥೆಗಳು, ಎನ್‌ಜಿಒಗಳ ಮೂಲಕ ನೆರವಿನ ಹಸ್ತ ಚಾಚಿದ್ದಾರೆ.

ಆಹಾರ ಸಾಮಗ್ರಿಗಳು, ಬಟ್ಟೆ, ಹೊದಿಕೆ, ಒಳ ಉಡುಪುಗಳು, ನ್ಯಾಪ್ಕೀನ್‌, ಔಷಧಿ, ಬಿಸ್ಕತ್ತು, ನೀರು ತುಂಬಿದ ಬಾಟಲ್‌ಗಳು, ಸೋಪು, ಡಿಟರ್‌ಜೆಂಟ್‌, ತಟ್ಟೆ, ಪಾತ್ರೆ, ಲೋಟಾ ಸೇರಿದಂತೆ ವಿವಿಧ ವಸ್ತುಗಳನ್ನು ಬೆಂಗಳೂರಿಗರು ದೊಡ್ಡ ಪ್ರಮಾಣದಲ್ಲಿ ನೆರವು ನೀಡಿದ್ದಾರೆ. ಅದನ್ನು ಹೊತ್ತ ಹಲವು ಟ್ರಕ್‌ಗಳು ನಿತ್ಯ ಕೇರಳ ಮತ್ತು ಕೊಡಗಿನತ್ತ ಸಾಗಿವೆ ಮತ್ತು ಸಾಗುತ್ತಿವೆ.

ಶಂಕರ್‌ ಐ ಆಸ್ಪತ್ರೆ, ಕಾನ್ಫಿಡರೇಷನ್‌ ಆಫ್‌ ಇಂಡಿಯನ್‌ ಇಂಡಸ್ಟ್ರಿ, ಯುವ ಕರ್ನಾಟಕ ಮತ್ತಿತರ ಸಂಸ್ಥೆಗಳು ಸಾರ್ವಜನಿಕರಿಂದ ವಿವಿಧ ಪದಾರ್ಥಗಳನ್ನು ಸಂಗ್ರಹಿಸಿ ನೆರೆ ಸಂತ್ರಸ್ತರಿಗೆ ತಲುಪಿಸಲು ಪಣತೊಟ್ಟು ಕಾರ್ಯ ನಿರ್ವಹಿಸುತ್ತಿವೆ.

ಪತ್ರಿಕೆ, ಟಿ.ವಿಗಳಲ್ಲಿ ಹಾಗೂ ಸಾಮಾಜಿಕ ಮಾಧ್ಯಮಗಳಾದ ವಾಟ್ಸ್‌ಆ್ಯಪ್‌, ಫೇಸ್‌ಬುಕ್‌, ಟ್ವಿಟರ್‌ನಲ್ಲಿ ನೆರೆಯ ದೃಶ್ಯಗಳನ್ನು ಮತ್ತು ಸಂತ್ರಸ್ತರ ಕಣ್ಣೀರನ್ನು ಕಂಡಿರುವ ನಗರದ ಲಕ್ಷಾಂತರ ಜನರು ಅವರ ನೋವಿಗೆ ಮಿಡಿಯುತ್ತಿದ್ದು ತಮ್ಮ ಕೈಲಾದ ನೆರವು ನೀಡುತ್ತಿದ್ದಾರೆ.

ಶಂಕರ್‌ ಐ ಆಸ್ಪತ್ರೆ: ಮಳೆ ಸಂತ್ರಸ್ತರಿಗಾಗಿ ನಗರದ ಶಂಕರ್‌ ಐ ಆಸ್ಪತ್ರೆಯು ಸಿಐಐ ಮತ್ತು ಯಂಗ್‌ ಇಂಡಿಯಾ ಜತೆಗೂಡಿ ಎಚ್‌ಎಸ್‌ಆರ್‌ ಬಡಾವಣೆ, ಇಂದಿರಾನಗರ, ಬನಶಂಕರಿ, ಮಾರತ್ತಹಳ್ಳಿ ಸೇರಿದಂತೆ 10 ಕಡೆಗಳಲ್ಲಿ ಪದಾರ್ಥಗಳ ಸಂಗ್ರಹಣೆಯಲ್ಲಿ ತೊಡಗಿದೆ. ಆಸ್ಪತ್ರೆಯ ವೈದ್ಯ ಮತ್ತು ವೈದ್ಯಕೇತರ ಸಿಬ್ಬಂದಿ, ಯುವ ಸಮುದಾಯ ಈ ಕಾರ್ಯದಲ್ಲಿ ಕೈಜೋಡಿಸಿದ್ದಾರೆ. ಮೂರು ದಿನದಿಂದ ಸುಮಾರು 250 ಸ್ವಯಂ ಸೇವಕರು ಕಾರ್ಯ ನಿರ್ವಹಿಸುತ್ತಿದ್ದು, ಇಲ್ಲಿಯವರೆಗೆ 25 ಟ್ರಕ್‌ಗಳಷ್ಟು ವಿವಿಧ ಬಗೆಯ ಸಾಮಗ್ರಿಗಳನ್ನು ಕೇರಳ, ಕೊಡಗಿಗೆ ಕಳುಹಿಸಲಾಗಿದೆ.

‘ಸೋಪು, ಫುಡ್‌ ಪ್ಯಾಕೆಟ್‌ಗಳು, ಅಕ್ಕಿ, ಬೇಳೆ, ಬಟ್ಟೆಗಳು, ಕ್ಯಾಂಡಲ್‌ಗಳು, ಬೆಂಕಿ ಪೊಟ್ಟಣ, ನೀರಿನ ಬಾಟಲಿ, ಹಾಲು, ವಿವಿಧ ಬಗೆಯ ಔಷಧಿಗಳು, ಮಕ್ಕಳಿಗೆ ಬೇಕಾದ ಔಷಧಿಗಳು, ಟೂತ್‌ ಬ್ರೆಷ್‌, ಪೇಸ್ಟ್‌, ಶ್ಯಾಂಪು ಮತ್ತು ಬಟ್ಟೆಗಳನ್ನು ಸಂಗ್ರಹಿಸಿ ಅವುಗಳನ್ನು ವಿವಿಧ ಬಾಕ್ಸ್‌ಗಳಲ್ಲಿ ತುಂಬಿ ಟ್ರಕ್‌ಗಳ ಮೂಲಕ ನೆರೆ ಸಂತ್ರಸ್ತರ ಪ್ರದೇಶಗಳಿಗೆ ಕಳುಹಿಸುತ್ತಿದ್ದೇವೆ. ಭಾನುವಾರ ಒಂದೇ ದಿನ 10 ಟ್ರಕ್‌ಗಳನ್ನು ಕಳುಹಿಸಿದ್ದೇವೆ’ ಎಂದು ಶಂಕರ್‌ ಐ ಆಸ್ಪತ್ರೆಯ ವೈದ್ಯ ಡಾ. ಮುರಳಿ ಕೌಶಿಕ್‌ ಮಾಹಿತಿ ನೀಡಿದರು.

‘ಬೆಂಗಳೂರಿಗರು ಜಾತಿ, ಧರ್ಮ, ಭಾಷೆಯನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ತಾನಾಗಿಯೇ ಬಂದು ದೊಡ್ಡ ಪ್ರಮಾಣದಲ್ಲಿ ನೆರವು ನೀಡುತ್ತಿದ್ದಾರೆ. ನಗರದ ಜನರ ಹೃದಯ ವೈಶಾಲ್ಯಕ್ಕೆ ಸಲ್ಯೂಟ್‌ ಹೊಡೆಯಲೇಬೇಕು’ ಎನ್ನುತ್ತಾರೆ ಅವರು.

ಸಿಐಐ: ಇಂದಿರಾನಗರದಲ್ಲಿರುವ ಕಾನ್ಫಿಡರೇಷನ್‌ ಆಫ್‌ ಇಂಡಿಯನ್‌ ಇಂಡಸ್ಟ್ರಿ (ಸಿಐಐ) ತನ್ನ ಕಚೇರಿಯಲ್ಲಿ ವಿವಿಧ ಪದಾರ್ಥಗಳನ್ನು ಸಂಗ್ರಹಿಸುವುದರಲ್ಲಿ ತೊಡಗಿದೆ. ನಾಲ್ಕು ದಿನದಿಂದ ಈ ಕಾರ್ಯದಲ್ಲಿ ಮಗ್ನವಾಗಿರುವ ಈ ಸಂಸ್ಥೆ ನಾಲ್ಕು ಟ್ರಕ್‌ನಷ್ಟು ಬಟ್ಟೆ, ಆಹಾರ ಸಾಮಗ್ರಿ, ಹೊದಿಕೆಯನ್ನು ಕಳುಹಿಸಿಕೊಟ್ಟಿದೆ. ಅಲ್ಲದೆ ಎರಡು ವಿಮಾನಗಳಲ್ಲಿ ಅತ್ಯಗತ್ಯ ಪದಾರ್ಥಗಳನ್ನು ಕೇರಳಕ್ಕೆ ಕಳುಹಿಸಿದೆ ಎಂದು ಮಾಹಿತಿ ನೀಡುತ್ತಾರೆ ಇಲ್ಲಿನ ಸಿಬ್ಬಂದಿ ವೇದಾ.
**


ಯುವ ಕರ್ನಾಟಕ 
ನಟ ಚೇತನ್‌ ಅವರು ಯುವ ಕರ್ನಾಟಕ, ಕಾರ್ಮಿಕ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ನಗರದ ವಿವಿಧೆಡೆ ಸಂಚರಿಸಿ ನಾಗರಿಕರಿಂದ ನೆರವು ಯಾಚಿಸಿದ್ದಾರೆ. ಇದಕ್ಕೆ ಸ್ಪಂದಿಸಿರುವ ನಗರದ ನಿವಾಸಿಗಳು ಲಕ್ಷಾಂತರ ರೂಪಾಯಿ ನೆರವು ನೀಡಿರುವುದಲ್ಲದೆ ಬಟ್ಟೆ, ಪಾತ್ರೆ, ಆಹಾರ ಪದಾರ್ಥ, ನೀರು, ಹಾಲು, ಔಷಧಿಯನ್ನು ನೀಡಿದ್ದಾರೆ.

‘100ಕ್ಕೂ ಹೆಚ್ಚು ಸ್ವಯಂ ಸೇವಕ ಯುವ ಪಡೆಯೊಂದಿಗೆ ನಾನು, ಶೃತಿ ಹರಿಹರನ್‌ ಮತ್ತಿತರ ಚಿತ್ರರಂಗದವರು ಗಾಂಧಿನಗರ ಸೇರಿದಂತೆ ವಿವಿಧೆಡೆ ಸಂಚರಿಸಿ ನೆರೆ ಸಂತ್ರಸ್ತರಿಗೆ ನೆರವು ನೀಡುವಂತೆ ಕೋರಿದೆವು. ನಗರದ ಜನರು ಕೂಡಲೇ ಸ್ಪಂದಿಸಿ ತಮ್ಮ ಕೈಲಾದಷ್ಟು ಹಣವನ್ನೂ, ಪದಾರ್ಥಗಳನ್ನು ನೀಡಿದರು. ಮನುಷ್ಯತ್ವಕ್ಕಾಗಿ ಕೈಗೊಂಡ ಈ ಕಾರ್ಯಕ್ಕೆ ನಗರದ ಜನರ ಸ್ಪಂದನೆ ನೋಡಿ ಬೆರಗಾಯಿತು’ ಎನ್ನುತ್ತಾರೆ ನಟ ಚೇತನ್‌. ಸಂಗ್ರಹಿಸಿದ್ದನ್ನು ಮಂಗಳವಾರ ಅಥವಾ ಬುಧವಾರ ಕೊಡಗಿಗೆ ಭೇಟಿ ನೀಡಿ ಸಂತ್ರಸ್ತರಿಗೆ ವಿತರಿಸುತ್ತೇನೆ ಎಂದು ವಿವರಿಸುತ್ತಾರೆ ಅವರು.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !