ಬಾವಿ ಬಳಿ ಬರಲಿದೆ ಗಾಂಧಿ ಮ್ಯೂಸಿಯಂ

7
ಗಾಂಧಿ ಸ್ಮರಣೆ

ಬಾವಿ ಬಳಿ ಬರಲಿದೆ ಗಾಂಧಿ ಮ್ಯೂಸಿಯಂ

Published:
Updated:

ಅದು 1934ರ ಜನವರಿ 6. ಅಸ್ಪೃಶ್ಯತಾ ನಿವಾರಣೆ ಸಲುವಾಗಿ ಬೆಂಗಳೂರಿಗೆ ಬಂದಿದ್ದ ಮಹಾತ್ಮ ಗಾಂಧಿ ಅವರು ಕೆಂಗೇರಿಗೂ ಭೇಟಿ ನೀಡಿದ್ದರು. ಅಂದು ಅಲ್ಲಿ ಬಾವಿಯೊಂದನ್ನು ಉದ್ಘಾಟಿಸಿದ್ದ ಅವರು, ಬಾವಿಯ ನೀರನ್ನು ಬೆಳ್ಳಿ ಚೊಂಬಿನಲ್ಲಿ ತೆಗೆದು ನೆರೆದಿದ್ದ ಜನರಿಗೆ ತೀರ್ಥದಂತೆ ವಿತರಿಸಿದ್ದರು.

ಬಳಿಕ ಬೆಳ್ಳಿ ಚೊಂಬು ಹಾಗೂ ಇತರರು ಕಾಣಿಕೆಯಾಗಿ ಕೊಟ್ಟಿದ್ದ ವಸ್ತುಗಳನ್ನು ಹರಾಜು ಹಾಕಿದ್ದರು. ಇದೇ ವೇಳೆ ವ್ಯಕ್ತಿಯೊಬ್ಬರು ತಾವು ಸಿದ್ಧಪಡಿಸಿದ್ದ ಬಾಪು ಅವರ ಕಿರು ಪ್ರತಿಮೆಯನ್ನು ಗಾಂಧಿ ಅವರಿಗೆ ಕಾಣಿಕೆಯಾಗಿ ನೀಡಿದರು. ಅದನ್ನು ಕೈಯಲ್ಲಿ ಹಿಡಿದ ಅವರು, ‘ಏ ಕಿಸ್‌ ಬುಡ್ಢಾ ಕಾ ಪ್ರತಿಮಾ ಹೈ’ ಎಂದು ಹಾಸ್ಯ ಚಟಾಕಿ ಹಾರಿಸಿದ್ದರು. ಬಳಿಕ ‘ಇದು ನನ್ನ ವಿಗ್ರಹವಂತೆ, ನನ್ನನ್ನು ಯಾರು ಕೊಳ್ಳುವಿರಿ’ ಎಂದು ಅದನ್ನೂ ಹರಾಜಿಗಿಟ್ಟರು.

ಅಲ್ಲಿಯೇ ಇದ್ದ ಬ್ರಿಟಿಷ್‌ ವ್ಯಕ್ತಿಯೊಬ್ಬರು ₹ 25 ಕೊಟ್ಟು ಈ ಕಿರು ಪ್ರತಿಮೆಯನ್ನು ಖರೀದಿಸಿ, ಖುಷಿಯಿಂದ ತಲೆಯ ಮೇಲಿಟ್ಟುಕೊಂಡು ಕುಣಿದಾಡಿದ್ದರಂತೆ. ಈ ಸಂಗತಿಗಳು ಇತಿಹಾಸದ ಪುಟಗಳಲ್ಲಿ ದಾಖಲಾಗಿವೆ. ಆದರೆ ಅಂದು ಗಾಂಧೀಜಿ ಉದ್ಘಾಟಿಸಿದ ಬಾವಿ ಮತ್ತು ಅದರ ಸುತ್ತಮುತ್ತಲಿನ ಸ್ಥಿತಿ ಇಂದು ಶೋಚನೀಯವಾಗಿದೆ.

ಕೆಂಗೇರಿ ಪೊಲೀಸ್‌ ಠಾಣೆಯ ಎದುರಿನ ಬೆಂಗಳೂರು– ಮೈಸೂರು ಹೆದ್ದಾರಿ ಬದಿಯಲ್ಲಿ ಈ ಪುಟ್ಟ ಬಾವಿ ಇದೆ. ಇದರ ಸುತ್ತ ಅಂದಾಜು ಒಂದು ಎಕರೆ ಬಯಲು ಪ್ರದೇಶವಿದೆ. ಈ ಜಾಗದ ಮಹತ್ವದ ಅರಿವಿಲ್ಲದೆ ಇಲ್ಲಿನ ಸುತ್ತಲಿನ ಕೆಲ ಜನರು ಬಾವಿ ಮತ್ತು ಅದರ ಬದಿಯಲ್ಲಿ ಕಸ ಸುರಿಯುವುದು ಸಾಮಾನ್ಯವಾಗಿದೆ. ಆ ಜಾಗದಲ್ಲಿ ನೈರ್ಮಲ್ಯದ ಕೊರತೆ ಇದೆ. ಅಲ್ಲದೆ ಈ ಆವರಣ ಸಾರ್ವಜನಿಕರಿಗೆ ಬಯಲು ಶೌಚಾಲಯದಂತೆ ಬಳಕೆಯಾಗುತ್ತಿದೆ.

ನಿರ್ವಹಣೆ ಕೊರತೆ: ‘ಕೆಂಗೇರಿ ಗುರುಕುಲಾಶ್ರಮಕ್ಕೆ ಸೇರಿದ ಈ ಜಾಗ ಮತ್ತು ಅದರಲ್ಲಿರುವ ಹಳೆ ಕಟ್ಟಡ ನಿರ್ವಹಣೆ ಕೊರತೆಯಿಂದ ಸೊರಗಿದೆ. ನೆರೆಕರೆಯ ಕೆಲ ನಿವಾಸಿಗಳಿಗೆ ಈ ಪ್ರದೇಶದ ಮಹತ್ವವೇನೋ ಗೊತ್ತಿದೆ. ಆದರೆ ಹೆದ್ದಾರಿ ಬದಿಯಲ್ಲಿಯೇ ಇರುವುದರಿಂದ ಕಸ ತಂದು ಸುರಿಯುವವರನ್ನು ನಿಯಂತ್ರಿಸುವುದು ಅವರಿಗೂ ಕಷ್ಟವಾಗಿದೆ. ಗುರುಕುಲಾಶ್ರಮ ಇಲ್ಲಿಂದ ಒಂದು ಕಿ.ಮೀ ದೂರದಲ್ಲಿದೆ. ಆಶ್ರಮದವರು ಅಪರೂಪಕ್ಕೊಮ್ಮೆ ಇಲ್ಲಿ ಸ್ವಚ್ಛಗೊಳಿಸಿ ಹೋಗುತ್ತಾರೆ. ಅದಾದ ಕೆಲ ದಿನಗಳಲ್ಲಿಯೇ ಬಾವಿ ಮತ್ತು ಸುತ್ತಮುತ್ತಲ ಪ್ರದೇಶ ಮತ್ತೆ ಕೊಳೆತು ನಾರಲು ಶುರುವಾಗುತ್ತದೆ’ ಎನ್ನುತ್ತಾರೆ ಇಲ್ಲಿನ ನಿವಾಸಿ ಕೆ.ಸಿ.ಹರೀಶ್‌.

‘ಗಾಂಧಿ ಜಯಂತಿ ಪ್ರಯುಕ್ತ ಆಶ್ರಮದ ಸಿಬ್ಬಂದಿ ಇತ್ತೀಚೆಗೆ ಆವರಣದಲ್ಲಿ ಸ್ವಚ್ಛತಾ ಅಭಿಯಾನ ನಡೆಸಿದ್ದಾರೆ. ಬಾವಿಗೂ ಸುಣ್ಣ ಬಳೆದಿದ್ದಾರೆ. ಆದರೆ ಕೆಲವೇ ದಿನಗಳಲ್ಲಿ ಇಲ್ಲಿ ಮತ್ತೆ ಕಸ ತಂದು ಸುರಿಯತೊಡಗಿದ್ದಾರೆ. ಇದನ್ನು ತಡೆಯಬೇಕು ಎಂದರೆ ಆಶ್ರಮದವರು ಮೊದಲು ತಮ್ಮ ಈ ಜಾಗವನ್ನು ಬಂದೋಬಸ್ತ್‌ ಮಾಡಿಕೊಳ್ಳಬೇಕು. ಭದ್ರತಾ ಸಿಬ್ಬಂದಿಯನ್ನಿಟ್ಟು ಶುಚಿತ್ವ ಕಾಯ್ದುಕೊಳ್ಳಬೇಕು’ ಎನ್ನುತ್ತಾರೆ ಅವರು.

ಮ್ಯೂಸಿಯಂ ನಿರ್ಮಿಸುವ ಯೋಜನೆ: ‘ಬಾಪೂಜಿ ಉದ್ಘಾಟಿಸಿದ ಈ ಬಾವಿ ಮತ್ತು ಅದರ ಆವರಣದಲ್ಲಿನ ಕಸವನ್ನು ಹಲವು ಬಾರಿ ತೆಗೆದಿದ್ದೇವೆ. ಈ ಜಾಗಕ್ಕೆ ಕಾಯಕಲ್ಪ ಕೊಡುವ ಉದ್ದೇಶವಿದ್ದು, ಕುಮಾರಕೃಪಾದ ಬಳಿ ಇರುವ ಗಾಂಧಿ ಭವನ ಮಾದರಿಯಲ್ಲಿಯೇ ಇಲ್ಲಿ ಕಟ್ಟಡ ನಿರ್ಮಿಸಿ, ಗಾಂಧೀಜಿ ಕುರಿತ ಮ್ಯೂಸಿಯಂ ಸ್ಥಾಪಿಸುವ ಯೋಜನೆ ಹೊಂದಿದ್ದೇವೆ’ ಎನ್ನುತ್ತಾರೆ ಗುರುಕುಲಾಶ್ರಮದ ಕಾರ್ಯದರ್ಶಿ ಪಿ.ಕೆ.ಅರವಿಂದ್‌.

‘ಬಾಪೂಜಿ ಜ್ಞಾಪಕಾರ್ಥವಾಗಿರುವ ಈ ಬಾವಿಯನ್ನು ಮತ್ತು ಇಲ್ಲಿರುವ ಹಳೆ ಕಟ್ಟಡವನ್ನು ಉಳಿಸಿಕೊಳ್ಳುತ್ತೇವೆ. ಅದರ ಜತೆಗೆ ಹೊಸ ಕಟ್ಟಡ ನಿರ್ಮಿಸಿ, ಬಾಪೂಜಿ ಪುತ್ಥಳಿ ಅನಾವರಣಗೊಳಿಸುತ್ತೇವೆ. ಜತೆಗೆ ಸ್ವಾತಂತ್ರ್ಯ ಚಳವಳಿಯಲ್ಲಿ ಗಾಂಧೀಜಿಯೊಂದಿಗೆ ಭಾಗವಹಿಸಿದ್ದ ಮಹಾನ್‌ ನಾಯಕರ ಭಾವಚಿತ್ರಗಳನ್ನು ಹಾಗೂ ಅವರ ಹೋರಾಟದ ಚಾರಿತ್ರಿಕ ರೂಪಕವನ್ನು ಇಲ್ಲಿ ಕಟ್ಟಿಕೊಡಲು ಯೋಜನೆ ಹೊಂದಿದ್ದೇವೆ’ ಎಂದು ವಿವರಿಸುತ್ತಾರೆ ಅವರು.

‘ಪುತ್ಥಳಿ, ಭವನ, ಮ್ಯೂಸಿಯಂ ಮತ್ತು ಸ್ಮಾರಕ ನಿರ್ಮಾಣದ ರೂಪರೇಷೆಗಳು ಹೇಗಿರಬೇಕು ಎಂಬುದನ್ನು ಹಿರಿಯ ಗಾಂಧಿವಾದಿಗಳು, ಕುಮಾರಕೃಪಾದಲ್ಲಿನ ಗಾಂಧಿ ಭವನ, ಬೆಂಗಳೂರು ವಿ.ವಿ ಗಾಂಧಿ ಭವನದ ಮುಖ್ಯಸ್ಥರ ಜತೆ ಚರ್ಚಿಸುತ್ತೇವೆ. ‌ಜನಪ್ರತಿನಿಧಿಗಳು ಮತ್ತು ದಾನಿಗಳ ಕೊಡುಗೆ, ಬಿಬಿಎಂಪಿ ಹಾಗೂ ಸರ್ಕಾರದ ಸಹಾಯವನ್ನು ಪಡೆದು ಈ ಜಾಗವನ್ನು ಸ್ಮರಣೀಯವಾಗಿಸುತ್ತೇವೆ. ಮುಂದಿನ ಪೀಳಿಗೆಗೆ ಗಾಂಧೀಜಿಯ ವಿಚಾರಗಳನ್ನು ತಿಳಿಸುವ ಕೇಂದ್ರವಾಗಿ ಇದನ್ನು ಅಭಿವೃದ್ಧಿಪಡಿಸುತ್ತೇವೆ’ ಎಂದು 
ಪಿ.ಕೆ.ಅರವಿಂದ್‌ ತಮ್ಮ ಯೋಜನೆಯ ಬಗ್ಗೆ ಮಾಹಿತಿ ನೀಡುತ್ತಾರೆ.


ಕೆಂಗೇರಿ ಗುರುಕುಲಾಶ್ರಮಕ್ಕೆ ಸೇರಿದ ಜಾಗದಲ್ಲಿರುವ ಬಾವಿ

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !