ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಲಿಲಂ ವರ್ಷಯ... ವರ್ಷಯ...

Last Updated 23 ಜೂನ್ 2019, 9:50 IST
ಅಕ್ಷರ ಗಾತ್ರ

ಸಂಗೀತದಲ್ಲಿ ಎಷ್ಟು ವಿಧಗಳೆಂದು ಯಾರಾದರೂ ಕೇಳಿದರೆ ಜಗತ್ತಿನ ಎಲ್ಲಾ ಬಗೆಯ ಸಂಗೀತ ಪ್ರಕಾರಗಳನ್ನು ಹೇಳಬಹುದು. ಹೀಗೆ ಹೇಳುವ ಧಾವಂತದಲ್ಲಿ ಈ ಎಲ್ಲಾ ಬಗೆಯ ಸಂಗೀತಕ್ಕೂ ಮೂಲವಾದ ‘ನಿಸರ್ಗ ಸಂಗೀತ’ವನ್ನೇ ಮರೆತುಬಿಡುತ್ತೇವೆ. ಇದು ಭಾಷಾತೀತ, ಸಾಹಿತ್ಯಾತೀತ. ಜೊತೆಗೆ, ಪರಿಶುದ್ಧವೂ ಹೌದು. ಸಂಗೀತ ಪದ್ಧತಿಗಳ ರಾಗ- ತಾಳ- ಲಯ- ಭಾವಗಳಿಗೆ ಇದೇ ಮೂಲ.

ಭಾರತದ ಮಟ್ಟಿಗೆ ಹೇಳುವುದಾದರೆ ಕರ್ನಾಟಕ, ಹಿಂದೂಸ್ತಾನಿ, ಸುಗಮ, ಜಾನಪದ ಹೀಗೆ ಎಲ್ಲ ವಿಧದ ಸಂಗೀತದ ರಾಗಗಳಿಗೂ ಪ್ರಕೃತಿಯ ನಾದವೇ ಮೂಲ. ಸಕಲ ಚರಾಚರ ಜೀವಿಗಳ ದೇಹ ಮತ್ತು ಮನಸ್ಸು ಋತುಗಳು ಹಾಗೂ ಹವಾಮಾನಕ್ಕೆ ಸ್ಪಂದಿಸುವಂತೆ ಹಾಡಿನ ರಾಗಗಳಿಗೂ ತನ್ನದೇ ಆದ ಪ್ರಕೃತಿ ಇರುತ್ತದೆ. ಭಾರತೀಯ ಸಂಗೀತ ಪದ್ಧತಿಗಳನ್ನು ಒಟ್ಟಾಗಿ ಹೇಳುವುದಾದರೆ ಎಲ್ಲಾ ಪದ್ಧತಿಗಳಲ್ಲೂ ಋತುಗಳಿಂದ ಪ್ರಭಾವಿತವಾದ ರಾಗಗಳು, ಹಾಡುಗಳು ಹೇರಳವಾಗಿವೆ.

ಈಗ ವರ್ಷಋತು. ಅಂದರೆ ಮಳೆಯ ರಾಗವನ್ನು ಆಸ್ವಾದಿಸುವ ಕಾಲ. ಮಳೆಯೆಂದರೆ ಭಾವುಕತೆ. ಮಳೆಯೆಂದರೆ ಆಹ್ಲಾದ. ಮಳೆಯೆಂದರೆ ಸಂಗೀತ. ಚಿಟಪಟ ಬೀಳುವ ಮಳೆಹನಿಗಳ ಸ್ವರಕ್ಕೂ, ಧೋ... ಎಂದು ಸುರಿಯುವ ಮಳೆಯ ರಾಗಕ್ಕೂ ಎಲ್ಲರ ಮನಸ್ಸು ತನ್ನಿಂತಾನೆ ಮರುಳಾಗುತ್ತದೆ. ಚೇತೋಹಾರಿಯಾದ ಮಳೆ ಹಸಿರು ಉಕ್ಕಿಸುತ್ತದೆ. ಹೂವರಳಿಸುತ್ತದೆ, ಬದುಕಿಗೆ ಜೀವನಾಡಿಯಾಗುತ್ತದೆ. ಮಳೆಯ ಮಾಧುರ್ಯಕ್ಕೆ ಆಂತರ್ಯದಲ್ಲಡಗಿದ ಸೃಜನಶೀಲತೆಯನ್ನು ಅರಳಿಸುವ ಮಾಂತ್ರಿಕ ಶಕ್ತಿಯಿದೆ. ಮನಸ್ಸು ಮುಟ್ಟುವ ಜೊತೆಗೆ ಬದುಕು ಕಟ್ಟುತ್ತದೆ. ಈ ಕಾರಣಕ್ಕಾಗಿಯೇ ವರ್ಷಾಧಾರೆಯನ್ನು ಆರಾಧಿಸುವ, ಸಂಭ್ರಮಿಸುವ ಹಾಡುಗಳು, ಕಥೆ, ಕವನ, ರೂಪಕಗಳು ಹುಟ್ಟಿಕೊಂಡಿರುವುದು.

ನಿಸರ್ಗ ಶ್ರುತಿ ಹಿಡಿದು ಮಳೆಯನ್ನು ಸುರಿಸುತ್ತದೆ. ಗುಡುಗು, ಸಿಡಿಲು, ಸುಳಿಗಾಳಿ, ಬಿರುಗಾಳಿ, ಹರಿವ ನೀರಿನ, ಕ್ರಿಮಿಕೀಟಗಳ, ಹಕ್ಕಿಗಳ ಕೊರಳಿನ ದನಿಯನ್ನು ಹಿಮ್ಮೇಳವಾಗಿಸುತ್ತದೆ. ನಿಸರ್ಗದ ಆಪ್ಯಾಯಮಾನ ಮತ್ತು ಅಮೂಲ್ಯ ಕೊಡುಗೆಯೆಂದರೆ ಮಳೆ. ಸೋ... ಎನ್ನುವ ಸೋನೆಮಳೆ, ಜಿಟಿಗುಟ್ಟುವ ಜಿಟಿಜಿಟಿ ಮಳೆ, ಧೋ... ಎನ್ನುವ ಕುಂಭದ್ರೋಣ ಮಳೆ ಹೀಗೆ ‘ರಾಗಮಯವಾಗಿ’ ಮಳೆಯನ್ನು ಕಾಣುವ ನಾವುಗಳು ಸಂಗೀತದಲ್ಲಿ ಮಳೆಯ ಸ್ವರಕ್ಕೂ ಸಂಗೀತದ ರೂಪುಕೊಟ್ಟಿದ್ದೇವೆ.

ನಮ್ಮ ಜನಪದರು ಮಳೆಯನ್ನು ಆರಾಧಿಸುವ, ಹೊಗಳುವ, ಓಲೈಸುವ, ಮಳೆಯೆಂದರೆ ಜೀವಧಾರೆ ಎಂದು ತಿಳಿಸುವ ಕೆಲಸವನ್ನು ಜಾನಪದ ಕಲೆಗಳ ಮೂಲಕ ವ್ಯಕ್ತಪಡಿಸಿರುವ ಉದಾಹರಣೆಗಳು ಸಾಕಷ್ಟಿವೆ. ದೈವಭಕ್ತಿ, ವೈರಾಗ್ಯ, ಸನ್ಮಾರ್ಗಗಳನ್ನು ಅಭಿವ್ಯಕ್ತಿಗೊಳಿಸುವ ದೇವರನಾಮ, ಕೀರ್ತನೆಗಳಿಗೆ ಹೆಸರಾದ ಶಾಸ್ತ್ರೀಯ ಸಂಗೀತದಲ್ಲೂ ಮುಸಲಧಾರೆಯನ್ನು ಆಸ್ವಾದಿಸುವ ಹಾಡುಗಳಿವೆ ಎಂದರೆ ಮಳೆಯ ಮಹತ್ವ ಎಂತಹದು ಎಂಬುದು ಮನದಟ್ಟಾಗುತ್ತದೆ.

ಮಳೆ ಭಾರತೀಯ ಸಂಗೀತದಲ್ಲಿ ರಾಗಗಳ ರಂಗು ಪಡೆದಿದೆ. ಕರ್ನಾಟಕ ಶಾಸ್ತ್ರೀಯ ಸಂಗೀತದ ಅಮೃತವರ್ಷಿಣಿ, ಹಿಂದೂಸ್ತಾನಿ ಸಂಗೀತದ ಮೇಘ ಮಲ್ಹಾರ ರಾಗಗಳು ಮಳೆಯಅನುಭಾವ ನೀಡುವ ರಾಗಗಳು. ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಮಳೆಗೆ ಸಂಬಂಧಿಸಿದ ರಾಗವೆಂದರೆ ‘ಅಮೃತವರ್ಷಿಣಿ’. ಈ ಶಾಸ್ತ್ರೀಯ ಸಂಗೀತದ 72 ಮೇಳಕರ್ತ ರಾಗಗಳಲ್ಲಿ 66ನೇ ರಾಗವಾದ ‘ಚಿತ್ರಾಂಬರಿ’ ರಾಗದಿಂದ ಜನ್ಮತಾಳಿದ ಈ ಔಡವ ರಾಗ ರಂಜಕ ಮತ್ತು ಸಂಚಾರಗಳನ್ನು ಹೊಂದಿದ್ದು ಕೇಳುಗರಿಗೆ ವರ್ಷಋತುವಿನ ಅನುಭವ ನೀಡುತ್ತದೆ.

ಅಮೃತವರ್ಷಿಣಿ ಎಂದರೆ ಅಮೃತವನ್ನು ಸುರಿಸುವವಳು, ಅಮೃತವನ್ನು ನೀಡುವವಳು ಎಂದರ್ಥ. ಬೇಡಿದ್ದನ್ನು ನೀಡುವಾಕೆ ಎಂದೂ ಅರ್ಥೈಸಬಹುದು. ಅಮೃತವೆಂದರೆ ಮಳೆಯೇ ಹೊರತು ಬೇರೇನಲ್ಲ ಎಂಬುದನ್ನು ಈಗಷ್ಟೇ ಅಲ್ಲ, ಪೂರ್ವಜರೂ ಅರಿತಿದ್ದರು. ಅದಕ್ಕೆ ಸಾಕ್ಷಿ ಅಮೃತವರ್ಷಿಣಿ ರಾಗ.

ಶಾಸ್ತ್ರೀಯ ಸಂಗೀತ ಪದ್ಧತಿಯಲ್ಲಿ ಪ್ರಕೃತಿ ಆರಾಧನೆಯ ಕುರುಹಾಗಿರುವ ಈ ಅಮೃತವರ್ಷಿಣಿ ರಾಗ ಕೇಳಿದರೆ ಮಳೆಯ ಸಂಭ್ರಮ ತೆರೆದುಕೊಳ್ಳುತ್ತದೆ. ಎಲ್ಲಿಂದಲೋ ಮೋಡಗಳು ತೇಲಿಬಂದು, ಸಣ್ಣಗೆ ಸುಳಿವ ಗಾಳಿಯಲ್ಲಿ ತಟತಟನೆ ಮಳೆ ಸುರಿಯಲಾರಂಭಿಸಿ ನಿಸರ್ಗದಲ್ಲಿ ಆಹ್ಲಾದಕರ ವಾತಾವರಣ ಸೃಷ್ಟಿಸಿದಂತೆ ಭಾಸವಾಗುತ್ತದೆ. ತಟಪಟ ಸುರಿವ ಮಳೆಯಿಂದ ಹೊಮ್ಮುವ ಸ್ವರಗಳಂತೆ ಆರಂಭವಾಗುವ ಈ ರಾಗ ಕೇಳುಗರನ್ನು ರೋಮಾಂಚನಗೊಳಿಸುತ್ತಾ ಜಡಿಮಳೆಯಂತೆ ತಾರಕಕ್ಕೇರಿ ಉಲ್ಲಾಸದ ಉತ್ತುಂಗ ತಲುಪಿಸುವಲ್ಲಿಸಫಲವಾಗಿ ಅಕ್ಷರಶಃ ಮುಂಗಾರು ಮಳೆಯಲ್ಲಿ ತೊಯ್ದ ಹಿತಕರ ಅನುಭವ ನೀಡುತ್ತದೆ.

ಅಮೃತವರ್ಷಿಣಿ ರಾಗದಲ್ಲಿ ಅನೇಕ ಕೀರ್ತನೆಗಳಿದ್ದರೂ ವರ್ಷಧಾರೆಗೆ ಸಂಬಂಧಿಸಿದಂತೆ ಪ್ರಸಿದ್ಧ ವಾಗ್ಗೇಯಕಾರರಾದ ಮುತ್ತುಸ್ವಾಮಿ ದೀಕ್ಷಿತರ ‘ಆನಂದಾಮೃತಕರ್ಷಿಣಿ’ ಹಾಡು ಅತ್ಯಂತ ಜನಪ್ರಿಯ. ಈ ಹಾಡು ರಾಗಕ್ಕೆ ತಕ್ಕಂತೆ ಮಳೆಯನ್ನು ಕುರಿತದ್ದಾಗಿದೆ! ಅಮೃತ ನೀಡುವ ದೇವತೆಯಾಗಿ ಭವಾನಿಯನ್ನು ಸ್ತುತಿಸುತ್ತಾ ಆನಂದಾಮೃತಕರ್ಷಿಣಿ ಅಮೃತವರ್ಷಿಣಿ ಎಂದು ಹಾಡಿ ಹೊಗಳುತ್ತಾ ಕಾಲಕಾಲಕ್ಕೆ ಅಮೃತದಂತಹ ಮಳೆಯನ್ನು ನೀಡಿ ಕಾಪಾಡು ಎಂದು ಪ್ರಾರ್ಥಿಸುವ ಭಾವ ತುಂಬಿದ ಈ ಹಾಡಿನುದ್ದಕ್ಕೂ ಹಿತವಾದ ಮಳೆ ಬಂದಂತೆ ಭಾಸವಾಗುತ್ತದೆ.

ಅಮೃತವರ್ಷಿಣಿ ರಾಗದ ಶಕ್ತಿಯನ್ನೂ ತಿಳಿಸುವ ಉದ್ದೇಶ ಹಾಗೂ ಸಂಗೀತದ ಮೂಲಕ ಸಮಾಜಮುಖಿ ಕಾರ್ಯವೂ ಆಗಬಹುದು ಎಂಬುದಕ್ಕೆ ಪೂರಕವಾದ ಕಥೆಯೊಂದು ಪ್ರಚಲಿತದಲ್ಲಿದೆ. ಮುತ್ತುಸ್ವಾಮಿ ದೀಕ್ಷಿತರು ತಮಿಳುನಾಡಿನ ಬರಪೀಡಿತ ಪ್ರದೇಶದಲ್ಲಿ ಸಂಚರಿಸುತ್ತಿದ್ದಾಗ ಮಳೆಗಾಗಿ ಹಾತೊರೆಯುತ್ತಿದ್ದ ಜನರ ಸಂಕಷ್ಟ ಕಂಡು ನೊಂದುಕೊಳ್ಳುತ್ತಾ ಆನಂದಾಮೃತಕರ್ಷಿಣಿ ಹಾಡನ್ನು ಅಲ್ಲಿಯೇ ರಚಿಸಿ ಭಕ್ತಿ ಹಾಗೂ ನಿಷ್ಠೆಯಿಂದ ದೇವರನ್ನು ನೆನೆಯುತ್ತಾ ಅಮೃತವರ್ಷಿಣಿ ರಾಗದಲ್ಲಿ ಈ ಹಾಡನ್ನು ಹಾಡಿದರಂತೆ.

‘ಸಲಿಲಂ ವರ್ಷಯ... ವರ್ಷಯ...’ ಎಂದು ಭಕ್ತಿಯಿಂದ ಹಾಡಿದಾಗ ಮಳೆ ಮುಸಲಧಾರೆಯಾಗಿ ಸುರಿಯತೊಡಗಿತಂತೆ. ಈ ಹಾಡಿನ ಪ್ರಭಾವದಿಂದ ಧಾರಾಕಾರ ಮಳೆಯಾಗಿ ಪ್ರವಾಹದ ಪರಿಸ್ಥಿತಿ ಎದುರಾಯಿತಂತೆ. ಆಗ ದೀಕ್ಷಿತರು ಚರಣದ ಕೊನೆಯ ಸಾಲಿನಲ್ಲಿ ಸ್ತಂಭಯ ಸ್ತಂಭಯ ಎಂಬ ಸಾಲನ್ನು ಸೇರಿಸಿ ಹಾಡಿದಾಗ ಮಳೆ ನಿಂತಿತೆಂಬ ದಂತಕಥೆ ಇದೆ.

ಅಮೃತವರ್ಷಿಣಿ ರಾಗದ ಮಳೆಯ ಚಮತ್ಕಾರ ತೇತ್ರಾಯುಗದ ಕಾಲದ ರಾವಣನಿಗೂ ತಳುಕು ಹಾಕಿಕೊಂಡಿದೆ. ಹನುಮಂತ ತನ್ನ ಬಾಲದಿಂದ ಲಂಕಾ ದಹನ ಮಾಡುತ್ತಿದ್ದಾಗ ರಾವಣ ತನ್ನ ವೀಣೆಯಿಂದ ಅಮೃತವರ್ಷಿಣಿ ರಾಗ ನುಡಿಸಲಾರಂಭಿಸಿದನಂತೆ. ಆಗ ಮಳೆ ಸುರಿದು ಲಂಕೆಯನ್ನು ಸುಡುತ್ತಿದ್ದ ಬೆಂಕಿ ನಂದಿತಂತೆ.

ಅಮೃತವೆಂದರೆ ವಿದ್ಯೆ, ವಿವೇಕ, ಆಯಸ್ಸು, ಐಶ್ವರ್ಯ, ಸದ್ಗುಣ. ಅದನ್ನು ನೀಡುವ ಅಥವಾ ಧಾರೆಯೆರೆಯುವ ದೇವರನ್ನು ಸ್ತುತಿಸುವಾಗ ಧಾರಾಕಾರ ಮಳೆಯಂತೆ ಭಾಸವಾಗುವ ಅಮೃತವರ್ಷಿಣಿ ರಾಗವೇ ಬಳಕೆಯಾಗಿರುವುದು ವಿಶೇಷ. ಅಮೃತ ಎನ್ನುವ ಸುಧೆ ನೀಡುವ ದೇವಿಯನ್ನು ‘ಸುಧಾಮಯಿ ಸುಧಾನಿಧಿ’ ಎಂದು ಸ್ತುತಿಸುವ ಮುತ್ತಯ್ಯ ಭಾಗವತರ ರಚನೆಯೂ ಅಮೃತವರ್ಷಿಣಿ ರಾಗದಲ್ಲಿದ್ದು ಬದುಕು ಹಸನಾಗಿಸುವ ಮಳೆಯಂತೆ ಆಪ್ತವಾಗುತ್ತದೆ.

ತೋಡಿ ರಾಗವನ್ನು ಚೆಂಬೈ ಭಾಗವತರು ಹಾಡಿದಾಗ

ಚೆಂಬೈ ವೈದ್ಯನಾಥ ಭಾಗವತರು ಸುಪ್ರಸಿದ್ಧ ಕರ್ನಾಟಕ ಶಾಸ್ತ್ರೀಯ ಸಂಗೀತಗಾರರು. ಕಛೇರಿಯೊಂದರಲ್ಲಿ ತೋಡಿ ರಾಗದಲ್ಲಿ ಹಾಡಲು ಕೋರಿಕೆ ಶ್ರೋತೃಗಳಿಂದ ಬಂದಾಗ ‘ನಾನು ತೋಡಿ ರಾಗದಲ್ಲಿ ಹಾಡಿದಾಗಲೆಲ್ಲಾ ಮಳೆ ಬರುತ್ತದೆ. ನಿಮಗೆ ತೊಂದರೆಯಾಗುತ್ತದೆ. ಆದ್ದರಿಂದ ನಾನು ಈಗ ಈ ರಾಗದಲ್ಲಿ ಹಾಡುವುದಿಲ್ಲ’ ಎಂದರಂತೆ ಚೆಂಬೈ ಭಾಗವತರು. ಆದರೆ, ಕೇಳುಗರ ಒತ್ತಾಯ ಹೆಚ್ಚಾದಾಗ ತೋಡಿ ರಾಗದಲ್ಲಿ ಹಾಡಿದರಂತೆ. ಆಗ ಮಳೆಯೂ ಧಾರಾಕಾರವಾಗಿ ಸುರಿಯತೊಡಗಿತಂತೆ. ಮಳೆಯನ್ನೂ ಲೆಕ್ಕಿಸದೆ ಕೇಳುಗರು ಕಾರ್ಯಕ್ರಮವನ್ನು ಆಸ್ವಾದಿಸಿದರು ಎಂಬ ದಂತಕಥೆಯೂ ಚಾಲ್ತಿಯಲ್ಲಿದೆ.

ಈ ರಾಗಗಳು ಮಳೆಯನ್ನು ಆಹ್ವಾನಿಸುತ್ತವೆಯೋ ಇಲ್ಲವೋ ಅದು ಅವರವರ ನಂಬಿಕೆಗೆ ಬಿಟ್ಟದ್ದು. ಮಳೆ ಬರುವ ಕಾಲದಲ್ಲಿ ಈ ಹಾಡುಗಳನ್ನು ಹಾಡುವ ಸಂಪ್ರದಾಯವನ್ನು ಅನೇಕ ವಿದ್ವಾಂಸರು, ಗಾಯಕರು ರೂಢಿಸಿಕೊಂಡಿರುವುದಂತು ಹೌದು. ಮಳೆ ಬರುವ ಕಾಲದಲ್ಲಿ ಈ ರಾಗಗಳು ಮತ್ತಷ್ಟು ಆಪ್ತವಾಗಿ ನಮಗೆ ಹಿತಾನುಭವ ನೀಡುವುದರಲ್ಲಿ ಸಂಶಯವಿಲ್ಲ. ಆದರೆ, ಇಂದಿನ ಅಗತ್ಯತೆ ಮಳೆಯೆಂಬ ಅಮೃತಭೂಮಿಗೆ ಸುರಿಯಬೇಕಿದೆ. ಮಳೆಗಾಗಿ ಕಾದುಕುಳಿತ ನೆಲಕ್ಕೆ ಅಮೃತವರ್ಷಿಣಿಯ ಕೃಪೆ ಬೇಕಿದೆ.

ಹಿಂದೂಸ್ತಾನಿ ಸಂಗೀತದಲ್ಲೂ ಮಳೆಯನ್ನು ಕರೆಯುವ, ಸ್ತುತಿಸುವ ರಾಗಗಳಿವೆ. ಮಿಯಾ ಮಲ್ಹಾರ್, ಗೌಡ್ ಮಲ್ಹಾರ್, ಮೇಘ ಮಲ್ಹಾರ್ ಮೊದಲಾದ ವರ್ಷಾಕಾಲದಲ್ಲಿ ಹಾಡುವ ಮಳೆರಾಗಗಳು. ರಾಜಸ್ಥಾನಿ ಲೋಕ ಸಂಗೀತದಲ್ಲಿ ಮಳೆಯನ್ನು ಆನಂದದಿಂದ ಅನುಭವಿಸುವ ಅಸಂಖ್ಯ ಹಾಡುಗಳಿದ್ದು ಮುಂಗಾರಿನ ಮಳೆಯಷ್ಟೇ ಮುದ ನೀಡುತ್ತವೆ.

ಮಳೆ ಹಾಗೂ ಭೂಮಿಯದು ಕೊಡು- ಕೊಳ್ಳುವ ಸಂಬಂಧವಾದರೂ ಪ್ರದೇಶದಿಂದ ಪ್ರದೇಶಕ್ಕೆ ತಾರತಮ್ಯವಿದೆ. ಮಳೆಯ ಒಂದೊಂದು ಹನಿಯೂ ಮುತ್ತಿಗೆ ಸಮಾನ ಎಂಬುದನ್ನು ಅರಿತಿರುವವರು ಮಳೆಯೇ ವಿರಳವಾದ ಮರುಭೂಮಿಯ ಜನ. ಮರಳುಗಾಡಿನ ರಾಜಸ್ಥಾನದ ಜನರು ಮಳೆಗಾಗಿ ಕಾತರಿಸುವ ಪರಿ, ಮಳೆ ಬಿದ್ದರೆ ಸಂಭ್ರಮಿಸುವ ಸಿರಿ ಹೃದಯಂಗಮವಾದದ್ದು. ಈ ನಿಟ್ಟಿನಲ್ಲಿ ಅಮೃತ ಸ್ವರೂಪಿ ಮಳೆಗೂ ಹಾಗೂ ಸಂಗೀತಕ್ಕೂ ದೈವಿಕ ಸಂಬಂಧವಿದೆ. ಮಳೆಯನ್ನು ಕುರಿತು ಲೋಕ್‍ಗೀತೆಗಳನ್ನು ಹಾಡುವ ಪರಂಪರೆ ರಾಜಸ್ಥಾನದ ಜೈಸಲ್ಮೇರ್ ಮತ್ತು ಬರ್ಮೇರ್ ಪ್ರಾಂತ್ಯದಲ್ಲಿದೆ.

ರಜಪೂತರ ಆಳ್ವಿಕೆಯ ಕಾಲದಿಂದಲೂ ಮಳೆ ಹಾಡುಗಳನ್ನು ಹಾಡುತ್ತಿದ್ದ ಮಾಂಗನಿಯರ್ ಸಮುದಾಯವು ಮಳೆ ಹಾಡುಗಳ ಖಣಜವೆನಿಸಿಕೊಂಡಿದೆ. ಮೇಘ ರಾಗ್, ರಾಗ್ ಮಲ್ಹಾರ್ ಇವರ ಹಾಡುಗಳಲ್ಲಿ ಪ್ರಮುಖವಾದವು. ಸಾರಂಗ್, ದೇಶ್, ಮಲ್ಹಾರ್ ರಾಗಗಳೂ ರಾಜಸ್ಥಾನಿ ಲೋಕ ಸಂಗೀತದಲ್ಲಿ ಮಳೆಯನ್ನು ಹಾಡಿಹೊಗಳುತ್ತವೆ.

ಅಮೃತವರ್ಷಿಣಿ ರಾಗದಂತೆ ರಾಗ್ ಮಲ್ಹಾರ್‌ನ ಶಕ್ತಿ ತಿಳಿಸುವ ದಂತಕಥೆಯೊಂದಿದೆ. ಅಕ್ಬರನ ಆಸ್ಥಾನದಲ್ಲಿದ್ದ ತಾನ್‍ಸೇನ್ ಅಕ್ಬರನ ಅಣತಿಯಂತೆ ‘ದೀಪಕ’ ರಾಗ ಹಾಡಿದಾಗ ಅರಮನೆಯ ದೀಪಗಳು ಬೆಳಗುತ್ತವೆ. ಆದರೆ, ತಾನ್‍ಸೇನ್‍ನ ದೇಹ ಕುದಿಯತೊಡಗಿದಂತಾಗಿ ತೊಳಲಾಡುತ್ತಾನೆ. ತಾನ ಮತ್ತು ರಿರಿ ಎಂಬ ಸಹೋದರಿಯರು ಮಲ್ಹಾರ್ ರಾಗವನ್ನು ಹಾಡಿ ತಾನ್‍ಸೇನ್‍ನನ್ನು ಗುಣಪಡಿಸಿದರಂತೆ.

ರಾಜಸ್ಥಾನದ ಸಂಪ್ರದಾಯಿಕ ಸಾವನ್, ಬರಸ್ ಹಾಡುಗಳನ್ನು ಹಾಡುವ ಮಾಂಗನಿಯರ್ ಸಮುದಾಯ ರಜಪೂತರ ಕಾಲದಲ್ಲಿ ಮಳೆ ಬಾರದಿರುವಾಗ ದೇವಾಲಯಗಳಲ್ಲಿ ಹಾಡುತ್ತಾ ಮಳೆಯನ್ನು ಓಲೈಸುವ ಹಾಡುಗಳನ್ನು ಕಟ್ಟಿ ಹಾಡುತ್ತಿದ್ದರಂತೆ. ಮಳೆ ಬಂದರೆ ಮಳೆಯ ವೈಭವವನ್ನು ಕೊಂಡಾಡುವ ಹಾಡುಗಳ ರಸಧಾರೆ ಕೇಳುಗರನ್ನು ಉಲ್ಲಾಸಿತರನ್ನಾಗಿಸುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT