ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಲಾಸ್ಟಿಕ್‌ ಹುಡುಕಿ ಸಾಗರ ಉಳಿಸುವ ರೋಬೊ

Last Updated 4 ಜುಲೈ 2018, 20:28 IST
ಅಕ್ಷರ ಗಾತ್ರ

ಅನಾಡ್ಯು 12 ವರ್ಷದ ಹುಡುಗಿ. ಅಮೆರಿಕದ ಬೋಸ್ಟನ್‌ ನಗರದ ಈಕೆಗೆ ಸಾಗರ ಮತ್ತು ಜಲಚರಗಳು ಎಂದರೆ ಪಂಚಪ್ರಾಣ. ಮೈಕ್ರೊಪ್ಲ್ಯಾಸ್ಟಿಕ್‌ನಿಂದ (ಪ್ಲ್ಯಾಸ್ಟಿಕ್‌ನ ಸಣ್ಣ ತುಣುಕುಗಳು) ಜಲಚರಗಳು ಸಂಕಟ ಅನುಭವಿಸುವುದನ್ನು ಅರಿತು ಅದನ್ನು ಹುಡುಕಬಲ್ಲ ರೋಬೊ ಸಾಧನವನ್ನು ಆವಿಷ್ಕರಿಸಲು ಮುಂದಾದಳು.

ಬರಿಗಣ್ಣಿಗೆ ಕಾಣಿಸದ ಈ ಪ್ಲ್ಯಾಸ್ಟಿಕ್ ತುಣುಕುಗಳು ಸಾಗರದ ಪರಿಸರವನ್ನು ಹಾಳು ಮಾಡುವ ಮೂಲಕ ಜಲಚರಗಳ ಬದುಕಿಗೆ ಕುತ್ತು ತಂದಿವೆ. ಈ ವಿಷಯ ಕುರಿತು ಜಗತ್ತಿನ ಎಲ್ಲೆಡೆ ಚರ್ಚೆಯಾಗುತ್ತಿದೆ.

‘ಒಂದು ದಿನ ಬೋಸ್ಟನ್ ಬಂದರಿನ ಮರಳಿನಲ್ಲಿ ಪ್ಲ್ಯಾಸ್ಟಿಕ್ ರಾಶಿ ನೋಡಿದೆ. ಕೆಲವಷ್ಟನ್ನು ಎತ್ತಿಕೊಳ್ಳಲು ಪ್ರಯತ್ನಿಸಿದೆ. ಆದರೆ ಅದು ನನ್ನೊಬ್ಬಳಿಂದ ಆಗುವ ಕೆಲಸವಲ್ಲ ಎನ್ನಿಸಿತು. ನನಗೆ ನೀರಿನಾಳದಲ್ಲಿರುವ ಮೈಕ್ರೊ ಪ್ಲ್ಯಾಸ್ಟಿಕ್ ಪತ್ತೆ ಹಚ್ಚುವ ರೋಬೊ ರೂಪಿಸಿದರೆ ಹೇಗೆ ಎಂಬ ಚಿಂತನೆ ಬಂತು. ಇಂಥದ್ದೊಂದು ಉಪಕರಣ ಇದ್ದರೆ ಮೈಕ್ರೊಪ್ಲ್ಯಾಸ್ಟಿಕ್‌ಗಳು ಎಲ್ಲಿ ಸಂಗ್ರಹವಾಗುತ್ತಿವೆ ಎಂಬುದನ್ನು ಗುರುತಿಸಲು ಸುಲಭವಾಗುತ್ತದೆ’ ಎಂದು ತನ್ನ ಆಲೋಚನೆ ಹಂಚಿಕೊಳ್ಳುತ್ತಾಳೆ ಆನಾ.

ಈಗಿನ್ನೂ ಆರನೇ ತರಗತಿ ಓದುತ್ತಿರುವ ಆನಾ ನೀರಾಳದಲ್ಲಿರುವ ಮೈಕ್ರೊಪ್ಲ್ಯಾಸ್ಟಿಕ್ ಪತ್ತೆಗೆ ROV (remotely operated vehicle) ತಯಾರಿಕೆಗೆ ಮುಂದಾದಳು. ಈ ರೋಬೊ ಇನ್‌ಫ್ರಾರೆಡ್ ಕಿರಣಗಳನ್ನು ಬಳಸಿಕೊಂಡು ಮೈಕ್ರೋಪ್ಲಾಸ್ಟಿಕ್‌ಗಳನ್ನು ಪತ್ತೆ ಮಾಡುತ್ತದೆ. ಇದನ್ನು ಬಳಸಿದ್ದರಿಂದ ಕೇವಲ ‌ವೆಚ್ಚ ಕಡಿಮೆ ಮಾಡಿದ್ದಷ್ಟೇ ಅಲ್ಲ, ಸಾಗರದಲ್ಲಿ ಜಲಚರಗಳ ಬದುಕಿಗೆ ಪೂರಕವಾಗಿರುವ ವಸ್ತುಗಳನ್ನು ಗುರುತಿಸಲು ನೆರವಾಯಿತು.

ತನ್ನ ಸಂಶೋಧನೆಯಿಂದಾಗಿ ಆಕೆ ಇದೀಗ ಅಮೆರಿಕದಲ್ಲಿ ಮನೆಮಾತಾಗಿದ್ದಾಳೆ. ಈಕೆಯ ಆವಿಷ್ಕಾರಕ್ಕೆ ‘ಸ್ಮಾರ್ಟ್‌ ಇನ್‌ಫ್ರಾರೆಡ್‌ ಬೇಸ್ಡ್‌ ಆರ್‌ಒವಿ’ ಎಂದು ಹೆಸರಿಡಲಾಗಿದೆ. ಮುಂದಿನ ದಿನಗಳಲ್ಲಿ ಹೀಗೆ ಗುರುತಿಸಿದ ಪ್ಲ್ಯಾಸ್ಟಿಕ್ ತುಣುಕುಗಳನ್ನು ಸಂಗ್ರಹಿಸಬಲ್ಲ ಉಪಕರಣವೊಂದನ್ನು ರೂಪಿಸುವ ಆಸೆ ಈ ಬಾಲೆಯದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT