ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷೀಣಿಸುತ್ತಿರುವ ಹೀಲಿಯಂ ಧಾತು: ಬಲೂನ್‌ಗಳು ಇನ್ನು ಹಾರುವುದಿಲ್ಲವೇ?

Last Updated 20 ಆಗಸ್ಟ್ 2019, 11:11 IST
ಅಕ್ಷರ ಗಾತ್ರ

ಜನ್ಮದಿನಾಚರಣೆ, ಶಾಲಾ ವಾರ್ಷಿಕೋತ್ಸವ, ಮದುವೆ ಸಮಾರಂಭ... ಕಾರ್ಯಕ್ರಮ ಯಾವುದೇ ಇದ್ದರೂ ಬಲೂನ್‌ಗಳ ಅಲಂಕಾರ ಈ ಸಂಭ್ರಮಗಳಿಗೆ ವಿಶೇಷ ಮೆರುಗು ನೀಡುತ್ತವೆ. ಎಲ್ಲ ವಯೋಮಾನದವರ ಗಮನವನ್ನೂ ಸೆಳೆಯುತ್ತವೆ. ಮಕ್ಕಳ ಆಕರ್ಷಿಸುವ ಪ್ರಮುಖ ವಸ್ತುಗಳಲ್ಲಿ ಇವು ಕೂಡ ಒಂದು. ಆದರೆ ಈ ಬಲೂನ್‌ಗಳಿಗೆ ಗಾಳಿ ತುಂಬಬೇಕೆಂದರೂ, ರಾಕೆಟ್‌ಗಳನ್ನು ಉಡಯಿಸಬೇಕೆಂದರೂ, ಸ್ಕ್ಯಾನಿಂಗ್ ಮಾಡಬೇಕೆಂದರೂ ಹೀಲಿಯಂ ಧಾತು ಅವಶ್ಯಕ. ಆದರೆ ಈ ಧಾತು ನಮ್ಮ ವಾತಾವರಣದಲ್ಲಿ ದಿನೇ ದಿನೇ ಕ್ಷೀಣಿಸುತ್ತಿದೆ ಎಂದು ವಿಜ್ಞಾನಿಗಳು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಈ ಹೀಲಿಯಂ ಕುರಿತು ಒಂದಿಷ್ಟು ಮಾಹಿತಿ ಇಲ್ಲಿದೆ.

ಅಮೆರಿಕದಲ್ಲಿ ಸಭೆ–ಸಮಾರಂಭಗಳನ್ನು ನಡೆಸುವ ಈವೆಂಟ್ ಮ್ಯಾನೇಜ್‌ಮೆಂಟ್ ಸಂಸ್ಥೆ ಪಾರ್ಟಿ ಸಿಟಿ. ಅಮೆರಿಕದ ಹಲವು ಯುವಕರಿಗೆ ಈ ಸಂಸ್ಥೆ ಪರಿಚಯವಿರುತ್ತದೆ. ಈಚೆಗಷ್ಟೇ ಈ ಸಂಸ್ಥೆ 45 ಶಾಖೆಗಳನ್ನು ಮುಚ್ಚಿದೆ. ಆರ್ಥಿಕ ನಷ್ಟದಿಂದ ಈ ಕ್ರಮ ಕೈಗೊಂಡಿದ್ದರೆ ವಿಶೇಷ ಎನಿಸುತ್ತಿರಲಿಲ್ಲ, ಆದರೆ ಕಾರಣ ಅದಲ್ಲ. ಸಮಾರಂಭಗಳಲ್ಲಿ ಅಲಂಕರಿಸುವ ಬಲೂನ್‌ಗಳನ್ನು ಹಿಗ್ಗಿಸುವುದಕ್ಕೆ ಹೀಲಿಯಂ ಧಾತು ಕೊರತೆಯಿಂದ ಮುಚ್ಚಿರುವುದಾಗಿ ಪಾರ್ಟಿ ಸಿಟಿ ತಿಳಿಸಿದೆ.

ಎಲ್ಲೊ ಅಮೆರಿಕದಲ್ಲಿ ಹೀಗಾಗಿದೆಯಷ್ಟೇ, ಬಲೂನ್‌ಗಳಿಲ್ಲದಿದ್ದರೆ ಸಮಾರಂಭಗಳನ್ನು ನಡೆಸುವುದಕ್ಕೆ ಆಗುವುದಿಲ್ಲವೇ ಎಂಬ ‍ಪ್ರಶ್ನೆ ಮೂಡಬಹದು. ಆದರೆ, ಹೀಲಿಯಂ ಧಾತು ಕೇವಲ ಬಲೂನ್‌ಗಳಿಗಷ್ಟೇ ಅಲ್ಲ, ವೈದ್ಯಕೀಯ, ಬಾಹ್ಯಾಕಾಶ, ಔಷಧ ಸೇರಿದಂತೆ ಕೆಲವು ಕ್ಷೇತ್ರಗಳಲ್ಲಿ ಸಂಶೋಧನೆಗಳಿಗೆ ಆಧಾರವಾಗಿದೆ. ಇದು ಇನ್ನು ಕೆಲವೇ ವರ್ಷಗಳಲ್ಲಿ, ಭೂಮಿಯ ವಾತಾವರಣದಿಂದ ಮರೆಯಾಗುವ ಸಾಧ್ಯತೆ ಇದೆ ಎಂದು ಹಲವು ವಿಜ್ಞಾನಿಗಳು, ಸಂಶೋಧಕರು ಎಚ್ಚರಿಸುತ್ತಿದ್ದಾರೆ. ಇದರಿಂದ ಪರ್ಯಾಯ ಧಾತುಗಳ ಬಗ್ಗೆ, ಪುನರ್ಬಳಕೆ ಬಗ್ಗೆ ಚರ್ಚೆಗಳು ಆರಂಭವಾಗಿವೆ.

ಎಲ್ಲಿ ಬಳಸುತ್ತಾರೆ?

ಈ ಧಾತು ಗಾಳಿಗಿಂತ ಹಗುರವಾಗಿರುತ್ತದೆ. ಹೀಗಾಗಿ ಇದನ್ನು ಬಲೂನ್‌ಗಳಲ್ಲಿ ತುಂಬಿಸುವುದಕ್ಕೆ ಹೆಚ್ಚಾಗಿ ಬಳಸಲಾಗುತ್ತಿತ್ತು. ಆದರೆ ಇದರ ಪ್ರಯೋಜನಗಳ ಬಗ್ಗೆ ತಿಳಿದ ಮೇಲೆ ವಿವಿಧ ಕ್ಷೇತ್ರಗಳಲ್ಲಿ ಬಳಸಲಾಗುತ್ತಿದೆ.

ಆಸ್ಪತ್ರೆಗಳಲ್ಲಿ ಬಳಸುವ ಎಂಆರ್‌ಐ ಸ್ಕ್ಯಾನರ್ಸ್‌ಗಳಲ್ಲಿನ ಸೂಪರ್ ಮ್ಯಾಗ್ನೆಟಿಕ್ ಕಂಡಕ್ಟರ್‌ ಬಿಸಿ ನಿಯಂತ್ರಿಸಿ ಸರಾಗವಾಗಿ ಕಾರ್ಯನಿರ್ವಹಿಸಲು, ಅಸ್ತಾಮ ರೋಗ ನಿವಾರಣೆಗೆ ನೆರವಾಗುವ ಉಪಕರಣಗಳಲ್ಲಿ ಈ ಧಾತು ಬಳಕೆಯಾಗುತ್ತಿತ್ತು.

ಅಧಿಕ ಉಷ್ಣಾಂಶ ಮತ್ತು ಹೆಚ್ಚು ಒತ್ತಡ ಇರುವಂತಹ ವಾತಾವರಣದಲ್ಲಿ ಹೀಲಿಯಂ ರಕ್ಷಣಾ ಧಾತುವಾಗಿ ನೆರವಾಗುತ್ತದೆ. ಉದಾಹರಣೆಗೆ ಸಮುದ್ರದಲ್ಲಿ ಆಳಕ್ಕೆ ಹೋದಂತೆಲ್ಲಾ ನೀರಿನ ಒತ್ತಡ ಹೆಚ್ಚಾಗುತ್ತದೆ. ಇಂತಹ ಪ್ರದೇಶಗಳಲ್ಲಿ ಅಧ್ಯಯನ ಮಾಡಬೇಕೆಂದರೆ, ಉಸಿರಾಡುವುದಕ್ಕೆ ನೆರವಾಗುವ ಆಕ್ಸಿಜನ್ ಸಿಲಿಂಡರ್‌ಗಳಲ್ಲಿ ಹೀಲಿಯಂ ಕೂಡ ತುಂಬಿಸುತ್ತಾರೆ. ಇದು ನೈಟ್ರೊಜನ್‌ನಿಂದ ಉಂಟಾಗುವ ನೈಟ್ರೋಜನ್ ನಾರ್ಕೊಸಿನ್‌ ಪರಿಣಾಮವನ್ನು ತಡೆಯಲು ನೆರವಾಗುತ್ತದೆ.

ಸೌರಮಂಡಲದಲ್ಲಿ ಅಧ್ಯಯನಕ್ಕೆ ನೆರವಾಗುವ ದೂರದರ್ಶಕಗಳಲ್ಲಿ ಅಳವಡಿಸುವ ಲೆನ್ಸ್‌ಗಳು ತೀವ್ರ ಬಿಸಿಗೆ ಹಾಳಾಗದಂತೆ ಮತ್ತು ತಂಪಾಗಿರುವಂತೆ ಹೀಲಿಯಂ ಧಾತು ಬಳಸಲಾಗುತ್ತದೆ.

ಗಡಿಯಲ್ಲಿ ಶತ್ರು ದೇಶಗಳ ನಡೆಸುವ ಚಲನವಲನಗಳನ್ನು ಪರಿಶೀಲಿಸಲು, ಹೀಲಿಯಂ ತುಂಬಿರುವ ಏರ್‌ಷಿಪ್ಸ್‌ ಮತ್ತು ಬ್ಲಿಂಪ್‌ಗಳನ್ನು ಸೈನಿಕರು ಗಾಳಿಯಲ್ಲಿ ಹಾರಿಬಿಡುತ್ತಾರೆ.

ದೂರ ಸಂಪರ್ಕ ಕ್ಷೇತ್ರದಲ್ಲಿ, ಡೇಟಾ ಟ್ರಾನ್ಸ್‌ಫರ್ ಮಾಡುವುದಕ್ಕೆ ಉಪಯೋಗಿಸುವ ಆಪ್ಟಿಕ್ ಫೈಬರ್ಸ್‌ ತಂತಿಗಳ ನಡುವೆ ಗಾಳಿ ತುಂಬಿಕೊಂಡು ಮಾಹಿತಿ ಪ್ರಸಾರಕ್ಕೆ ಅಡ್ಡಿಯಾಗದಂತೆ ತಡೆಯಲು ಹೀಲಿಯಂ ತುಂಬಿಸಲಾಗುತ್ತದೆ.

ಮರೆಯಾದರೆ?

ಹೀಲಿಯಂನ ವಿಶೇಷ ಗುಣದಿಂದಾಗಿಯೇ ಅದನ್ನು ‘ನೊಬೆಲ್ ಗ್ಯಾಸ್‌’ ಎನ್ನುತ್ತಾರೆ. ಈ ವರೆಗೆ ಇದಕ್ಕೆ ಪರ್ಯಾಯ ಧಾತು ಕೂಡ ಪತ್ತೆ ಮಾಡಲು ಆಗಿಲ್ಲ. ಕತಾರ್, ತಾಂಜಾನಿಯಾ ಸೇರಿದಂತೆ ಕೆಲವು ರಾಷ್ಟ್ರಗಳಲ್ಲಿ ಹೀಲಿಯಂ ನಿಕ್ಷೇಪಗಳನ್ನು ಪತ್ತೆ ಮಾಡಲಾಗಿದ್ದರೂ ಅದನ್ನು ಪಡೆಯುವುದು ಸವಾಲಿನ ಕೆಲಸವಾಗಿದೆ.

ಇತರೆ ಗ್ರಹಗಳಲ್ಲಿರುವ ಹೀಲಿಯಂ ಅನ್ನು ಭೂಮಿಗೆ ತೆಗೆದುಕೊಂಡು ಬರುವುದಷ್ಟೇ ಉಳಿದಿರುವ ದಾರಿ. ಹೀಗಾಗಿಯೇ ಚೀನಾ, ಅಮೆರಕ, ಭಾರತ ಸೇರಿದಂತೆ ಕೆಲವು ರಾಷ್ಟ್ರಗಳು ಚಂದ್ರಗ್ರಹದಲ್ಲಿ ಪರಿಶೋಧನೆ ಮಾಡಲು ಮುಂದಾಗಿವೆ.

ಹೀಲಿಯಂ ಇಲ್ಲದಿದ್ದರೆ ಏನಾಗುತ್ತದೆ?

ಭೂಮಿಯ ಶೇ 76ರಷ್ಟು ನೀರಿನಿಂದಲೇ ಆವೃತವಾಗಿದೆ. ಸಮುದ್ರಗಳಲ್ಲಿ ಕಣ್ಣು ಹಾಯಿಸಿದಷ್ಟೂ ಜಲವೇ ಕಾಣ ಸಿಗುತ್ತದೆ. ಆದರೆ ಒಂದು ಹನಿಯೂ ಬಳಸಿಕೊಳ್ಳುವುದಕ್ಕೆ ಆಗುವುದಿಲ್ಲ. ಹೀಲಿಯಂ ಪರಿಸ್ಥಿತಿ ಕೂಡ ಹಾಗೆಯೇ ಇದೆ.

ನಕ್ಷತ್ರಗಳು, ಗ್ರಹಗಳಲ್ಲಿ ಯಥೇಚ್ಛವಾಗಿ ಹೀಲಿಯಂ ಇದೆ. ಬ್ರಹ್ಮಾಂಡದಲ್ಲಿ ಅತಿ ಹೆಚ್ಚಾಗಿ ಲಭ್ಯವಿರುವ ಧಾತುಗಳಲ್ಲಿ ಹೈಡ್ರೋಜನ್ ನಂತರದ ಸ್ಥಾನದಲ್ಲಿ ಹೀಲಿಯಂ ಇದೆ. ಆದರೆ ಭೂಮಿಯಲ್ಲಿ ಇದರ ಲಭ್ಯತೆ ತೀರಾ ಕಡಿಮೆ.

ಇದು ಗಾಳಿಗಿಂತ ಹಗುರವಾಗಿರುವುದರಿಂದ ಗಾಳಿಯಿಂದ ಬೇರ್ಪಡಿಸಿದರೂ ಶೇಖರಿಸಿ ಇಡುವುದು ಕಷ್ಟ. ಪುನರ್ಬಳಕೆ ಮಾಡುವುದು ಕೂಡ ದುಬಾರಿ. ಹೀಗಾಗಿಯೇ ಇದನ್ನು ಸಂಶೋಧಕರು ಚಿನ್ನಕ್ಕಿಂತ ದುಬಾರಿಯಾದ ಧಾತುವಾಗಿ ಪರಿಗಣಿಸಿದ್ದಾರೆ. ದ್ರವರೂಪದ ಹೀಲಿಯಂ ಅನ್ನು ‘ಸೂಪರ್ ಲಿಕ್ವಿಡ್‌’ ಎಂದೂ ಕರೆಯುತ್ತಾರೆ.

ಅಮೆರಿಕದ ಟೆಕ್ಸಾಸ್‌ನಲ್ಲಿರುವ ಯುಎಸ್ ಫೆಡರಲ್ ಹೀಲಿಯಂ ರಿಸರ್ವ್‌, ಶೇ 30ರಷ್ಟು ಹೀಲಿಯಂ ಒದಗಿಸುತ್ತಿದೆ. ಇಲ್ಲಿರುವ ಹೀಲಿಯಂ 2021ಕ್ಕೆ ಖಾಲಿಯಾಗುತ್ತದೆ ಎಂದು ವಿಜ್ಞಾನಿಗಳು ಅಭಿಪ್ರಾಯ ಪಟ್ಟಿದ್ದಾರೆ.

ಒಟ್ಟಿನಲ್ಲಿ ಹೀಲಿಯಂ ಖಾಲಿಯಾದರೆ, ಎಂಆರ್‌ಐ ಸ್ಕ್ಯಾನಿಂಗ್‌ ಸೇರಿದಂತೆ ಕೆಲವು ವೈದ್ಯಕೀಯ ಸೇವೆಗಳು ದುಬಾರಿಯಾಗಲಿವೆ. ಬಲೂನ್ ತಯಾರಿಸುವ ಕಾರ್ಖಾನೆಗಳಿಗೂ ಬೀಗ ಹಾಕಬೇಕಾಗುತ್ತದೆ. ಈಗಾಗಲೇ ಇದರ ಕೊರತೆಯಿಂದ ಕೆಲವು ವಿಜ್ಞಾನ ಪ್ರಯೋಗಗಳು ಅರ್ಧಕ್ಕೇ ನಿಂತಿವೆ. ಇನ್ನೂ ಹಲವು ನಷ್ಟಗಳು ಆಗುವ ಸಾಧ್ಯತೆಯೂ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT