ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೈರ್‌ಕ್ರ್ಯಾಕರ್‌ ಫ್ಲವರ್ ಯಾವುದು ಗೊತ್ತೆ?

Last Updated 24 ಜುಲೈ 2019, 19:30 IST
ಅಕ್ಷರ ಗಾತ್ರ

‘ಹೂವನು ಮಾರುತ ಹೂವಾಡಗಿತ್ತಿ ಹಾಡುತ ಬರುತಿಹಳು!’ ಎಂಬ ಚಿಕ್ಕಂದಿನ ಕವಿತೆ ಈಗಲೂ ಸವಿ ನೆನಪುಗಳು ತರಿಸುತ್ತವೆ. ಮುಂಜಾನೆಯ ವೇಳೆ ಪಕ್ಷಿಗಳ ಕಲರವದೊಂದಿಗೆ - ‘ಮಲ್ಲಿಗೆ, ಕನಕಾಂಬರ, ಮಳ್ಳೇ, ಜಾಜಿ, ಗುಲಾಬಿ..’ ಹೀಗೆ ತರಹೇವಾರಿ ಹೂವುಗಳನ್ನು ಮಾರುತ್ತ ಬರುವ ಹೂವಾಡಿಗರ ಕೂಗು ನಮ್ಮಲ್ಲಿ ಸಾಮಾನ್ಯ.

ಮಲ್ಲಿಗೆಯ ನಂತರ ಸುಪ್ರಸಿದ್ಧ ಹೂವು, ಕನಕಾಂಬರವೆಂದರೆ ತಪ್ಪಾಗಲಾರದು. ಕೇಸರಿ ಬಣ್ಣದಲ್ಲಿ ಇರುವ ಈ ಹೂ ಮಾರುಕಟ್ಟೆಗಳಲ್ಲಿ ರಾರಾಜಿಸುತ್ತಿರುತ್ತವೆ.

ನಮ್ಮಲ್ಲಿ ‘ಕನಕಾಂಬರ’ ಎಂಬ ಪದವು ಎಷ್ಟು ಸಾಮಾನ್ಯ ಮತ್ತು ಬಳಕೆಯಲ್ಲಿರುವ ಪದವೆಂದರೆ, ಯಾರನ್ನಾದರೂ ಫೈರ್‌ ಕ್ರ್ಯಾಕರ್‌ ಫ್ಲವರ್‌ (Firecracker flower) ಕೊಡಿ ಎಂದು ಕೇಳಿದರೆ, ಅವರು ಗೊಂದಲಕ್ಕೊಳಗಾಗುವುದು ಖಚಿತ! ಅಷ್ಟರ ಮಟ್ಟಿಗೆ ನಾವು ‘ಕನಕಾಂಬರ’ ಎಂಬ ಪದಕ್ಕೆ ಹೊಂದಿಕೊಂಡಿದ್ದೇವೆ. ಇದರ ವೈಜ್ಞಾನಿಕ ನಾಮ ಕ್ರಾಸಾಂಡ್ರ ಇನ್‌ಫಂಡಿಬುಲಿಫಾರ್ಮಿಸ್‌ (Crossandra infundibuliformis). ಅಕ್ಯಾಂತೇಸೀ ಕುಟುಂಬದ ಸದಸ್ಯವಾಗಿರುವ ಈ ಚಿಕ್ಕ ಪೊದೆ ಗಿಡವು ದಕ್ಷಿಣ ಭಾರತದ ರಾಜ್ಯಗಳಿಗೆ, ಹಾಗೂ ಶ್ರೀಲಂಕಾ ದೇಶಕ್ಕೆ ಸ್ವಂತ. ಇವು ನಮ್ಮ ರಾಜ್ಯದಲ್ಲಿ ಮಲೆನಾಡು ಪ್ರದೇಶದಲ್ಲಿ ಹೆಚ್ಚಾಗಿ ಕಾಣಸಿಗುತ್ತವೆ.

ಇದರ ಸಾಮಾನ್ಯ ಆಂಗ್ಲ ನಾಮ ‘ಫೈರ್ ಕ್ರ್ಯಾಕರ್’ ಇದರ “ಸ್ಪೋಟಕ”ದಂತೆ ತೆರೆದುಕೊಳ್ಳುವ ಬೀಜಕೋಶಗಳಿಂದ ಬಂದಿದೆ. ಅತಿ ಹೆಚ್ಚು ತಾಪಮಾನ ಅಥವಾ ಅತಿ ಹೆಚ್ಚು ಆರ್ದ್ರತೆ ಕಂಡುಬಂದಲ್ಲಿ, ಇದರ ಒಣ ಬೀಜಕೋಶಗಳು ‘ಸಿಡಿದು’ ಬೀಜಗಳನ್ನು ನೆಲಕ್ಕೆ ಬಿಡುಗಡೆ ಮಾಡಿ ಸಸಿಗಳನ್ನು ಹುಟ್ಟುಹಾಕುತ್ತವೆ.

ಇದು ಸುಮಾರು 1 ಮೀಟರ್ ಅಥವಾ ಸುಮಾರು 3 ಅಡಿಗಳಷ್ಟು ಬೆಳೆಯುವ ಒಂದು ಚಿಕ್ಕ ಪೊದೆ. ಇದರ ಎಲೆಗಳು ಪರ್ಯಾಯವಾಗಿ ವ್ಯವಸ್ಥಿತವಾಗಿರುತ್ತವೆ, ನುಣುಪಾಗಿ, ಹೊಳೆಯುವ ವಿನ್ಯಾಸ ಹೊಂದಿರುತ್ತವೆ ಮತ್ತು ಗಾಢಹಸಿರುಬಣ್ಣವಿರುತ್ತವೆ. ಇದರ ಪುಷ್ಪಮಂಜರಿ ಕದಿರಂತೆ ಇರುತ್ತದೆ, ಮತ್ತು ಕೇಸರಿ ಬಣ್ಣದ, 3-6 ದಳಗಳಲ್ಲಿ ಇರುವ, ಬೀಸಣಿಕೆ ಆಕಾರದಲ್ಲಿನ ಹೂವುಗಳು ಸುತ್ತಲೂ ವ್ಯವಸ್ಥಿತವಾಗಿರುತ್ತವೆ. ಇವು ಕದಿರಂತೆ ಇರುವ ಕಾಂಡದಿಂದ ಬೆಳೆಯುತ್ತವೆ. ಇದರ ಹೂವು ಬಿಡುವ ಕಾಲ ಜೂನ್ಇಂದ ಜನವರಿ ತಿಂಗಳು.

ಈ ಪೊದೆಯನ್ನು ಅಲಂಕಾರಿಕ ಗಿಡವಾಗಿ ಬೆಳೆಸಲಾಗುತ್ತದೆ, ಮತ್ತು ವಾಣಿಜ್ಯ ಬೆಳೆಯಾಗಿಯೂ ಬೆಳೆಸಲಾಗುತ್ತದೆ. ಇದು ಗೋವಾ ರಾಜ್ಯದ ರಾಜ್ಯ ಹೂವೆಂದು ಪ್ರಸಿದ್ಧಿ ಪಡೆದಿದೆ.

ರಮ್ಯಾ ಬದರಿನಾಥ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT