ಖಾಸಗಿ ಬಸ್ ದರ್ಬಾರ್‌ಗೆ ಕಡಿವಾಣ

ಶನಿವಾರ, ಏಪ್ರಿಲ್ 20, 2019
28 °C

ಖಾಸಗಿ ಬಸ್ ದರ್ಬಾರ್‌ಗೆ ಕಡಿವಾಣ

Published:
Updated:
Prajavani

ಬಸವನಗುಡಿಯ ಸೌತ್ ಎಂಡ್ ಸರ್ಕಲ್‌ನ ಡಾ.ಪಾರ್ವತಮ್ಮ ರಾಜ್‌ಕುಮಾರ್ ರಸ್ತೆಯಲ್ಲಿ ಎಸ್‌ಆರ್‌ಎಸ್  ಖಾಸಗಿ ಬಸ್‌ಗಳ ಕಾನೂನುಬಾಹಿರ ನಿಲುಗಡೆಗೆ ನಗರ ಸಂಚಾರ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ಈ ರಸ್ತೆಯಲ್ಲಿ ಬೆಳಿಗ್ಗೆ ಮತ್ತು ಸಂಜೆ ಎಸ್‌ಆರ್‌ಎಸ್ ಬಸ್‌ಗಳು ಖಾಸಗಿ ಬಸ್ ಡಿಪೊಗೆ ತೆರಳಲು ಮಾರ್ಗಮಧ್ಯೆ ನಿಲುಗಡೆ ಮತ್ತು ತಿರುವು ತೆಗೆದುಕೊಳ್ಳುತ್ತಿದ್ದವು. ಇದರಿಂದಾಗಿ ಸಾರ್ವಜನಿಕರು ಸಂಚಾರ ದಟ್ಟಣೆ ಮತ್ತು ಅಪಘಾತದ ಸಮಸ್ಯೆ ಎದುರಿಸುತ್ತಿದ್ದರು. ಈ ಬಗ್ಗೆ ಪ್ರಜಾವಾಣಿ ಮೆಟ್ರೊ ಏಪ್ರಿಲ್ 8ರಂದು ವರದಿ ಪ್ರಕಟಿಸಿತ್ತು. ಖಾಸಗಿ ಬಸ್‌ಗಳ ನಿಲುಗಡೆ ಮತ್ತು ಸಂಚಾರ ದಟ್ಟಣೆ ನಿಭಾಯಿಸಲು ಸಂಚಾರ ಪೊಲೀಸರು ಇಬ್ಬರು ಸಿಬ್ಬಂದಿಯನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ.  

‘ನಾಲ್ಕು ವರ್ಷಗಳಿಂದ ಬೆಳ್ಳಂಬೆಳಿಗ್ಗೆಯೇ ಖಾಸಗಿ ಬಸ್‌ಗಳ ನಿಲುಗಡೆ ಮತ್ತು ಕರ್ಕಶ ಹಾರ್ನ್ ಶಬ್ದದಿಂದಾಗಿ ಸ್ಥಳೀಯ ನಾಗರಿಕರು ಕಿರಿಕಿರಿ ಅನುಭವಿಸುತ್ತಿದ್ದರು. ಈಗ ಪೊಲೀಸರ ಕ್ರಮದಿಂದಾಗಿ ಇಲ್ಲಿನ ನಾಗರಿಕರು ನೆಮ್ಮದಿಯ ನಿಟ್ಟುಸಿರುಬಿಡುವಂತಾಗಿದೆ’ ಎಂದು  ಸ್ಥಳೀಯ ನಿವಾಸಿ ಸುಚಿತ್ರಾ ಭಟ್‌, ಆರ್. ರವಿಚಂದ್ರನ್, ಮೀರಾ ಮತ್ತು ಡಾ.ಕೆ. ರಾಮಚಂದ್ರ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

‘ಪತ್ರಿಕೆಯಲ್ಲಿ ವರದಿ ಪ್ರಕಟವಾದ ಬಳಿಕ ಎರಡು ದಿನಗಳಿಂದ ಖಾಸಗಿ ಬಸ್‌ಗಳು ಇಲ್ಲಿ ನಿಲುಗಡೆ ಮಾಡುತ್ತಿಲ್ಲ’ಎಂದು ಅಡ್ಯಾರ್ ಆನಂದಭವನದ ವ್ಯವಸ್ಥಾಪಕ ಆನಂದ ಹೇಳಿದ್ದಾರೆ.

ಸರ್ಕಾರವೇ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕು

‘ಖಾಸಗಿ ಬಸ್‌ಗಳಿಗೆ ಪ್ರತ್ಯೇಕವಾಗಿ ಪಾರ್ಕಿಂಗ್ ವ್ಯವಸ್ಥೆಯನ್ನು ಸರ್ಕಾರವೇ ಕಲ್ಪಿಸಬೇಕು’ ಎನ್ನುತ್ತಾರೆ ಹೆಚ್ಚುವರಿ ಪೊಲೀಸ್ ಆಯುಕ್ತ (ಸಂಚಾರ) ಪಿ. ಹರಿಶೇಖರನ್.

‘ಬಸವನಗುಡಿಯಲ್ಲಿ ಖಾಸಗಿ ಬಸ್‌ಗಳ ನಿಲುಗಡೆ ಮತ್ತು ಅದರಿಂದಾಗಿ ಸಂಚಾರದಟ್ಟಣೆ ಆಗುತ್ತಿರುವುದು ಇತ್ತೀಚಿನ ಬೆಳವಣಿಗೆ. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗಿದೆ. ಸಾರಿಗೆ ಇಲಾಖೆ ಅನೇಕ ಕಡೆ ಬಸ್‌ ನಿಲ್ದಾಣಗಳನ್ನು ಸ್ಥಾಪಿಸಿದೆ ಆದರೆ, ಅಲ್ಲಿ ಖಾಸಗಿ ಬಸ್‌ಗಳ ನಿಲುಗಡೆ ಅನುಮತಿ ಇಲ್ಲ. ಸರ್ಕಾರ, ಖಾಸಗಿ ಬಸ್‌ಗಳಿಂದ ತೆರಿಗೆ ಸಂಗ್ರಹಿಸುತ್ತಿದೆ. ಹಾಗಾಗಿ, ಖಾಸಗಿ ಬಸ್‌ಗಳ ನಿಲುಗಡೆಗೆ ವ್ಯವಸ್ಥೆ ಕಲ್ಪಿಸುವ ಜವಾಬ್ದಾರಿಯೂ ಸರ್ಕಾರದ್ದೇ. ನಿಗದಿತ ಪಾರ್ಕಿಂಗ್ ಸ್ಥಳಗಳಲ್ಲಿ ನಿಲುಗಡೆಗೆ ಅನುಮತಿ ಕಲ್ಪಿಸಿ ಪಾರ್ಕಿಂಗ್ ಶುಲ್ಕವನ್ನು ವಸೂಲಿ ಮಾಡಬಹುದು. ಈ ಕ್ರಮ ಕೈಗೊಳ್ಳದಿರುವ ಕಾರಣಕ್ಕಾಗಿಯೇ ಖಾಸಗಿ ಬಸ್‌ಗಳು ಸಾರ್ವಜನಿಕ ಸ್ಥಳಗಳಲ್ಲಿ ಬಸ್ ನಿಲುಗಡೆ ಮಾಡುವಂತಾಗಿದೆ’ ಎಂದು ಅಭಿಪ್ರಾಯಪಡುತ್ತಾರೆ ಹರಿಶೇಖರನ್. 

ಹೆಚ್ಚುವರಿ ಸಿಬ್ಬಂದಿ ನೀಡಲು ಸಿದ್ಧ

ಖಾಸಗಿ ಬಸ್‌ಗಳ ಅಸಮರ್ಪಕ ನಿಲುಗಡೆ ಮತ್ತು ಸಂಚಾರ ದಟ್ಟಣೆ ವಿಚಾರವಾಗಿ ಕ್ರಮ ಕೈಗೊಳ್ಳಲು ಸಂಚಾರ ಪೊಲೀಸರಿಗೆ ಸಹಯೋಗ ನೀಡುತ್ತೇವೆ. ಅಗತ್ಯಬಿದ್ದಲ್ಲಿ ಹೆಚ್ಚುವರಿ ಸಿಬ್ಬಂದಿಯನ್ನೂ ನೀಡಲು ಸಿದ್ಧ ಎನ್ನುತ್ತಾರೆ ಡಿಸಿಪಿ (ದಕ್ಷಿಣ ವಿಭಾಗ) ಅಣ್ಣಾಮಲೈ. 

***

 ಸಮಸ್ಯೆ ಬಗ್ಗೆ ತಿಳಿದಿದೆ. ಬೆಳಿಗ್ಗೆ 8ರವರೆಗೆ ಮಾತ್ರ ಪಾರ್ಕಿಂಗ್ ಮಾಡಲು ಎಸ್‌ಆರ್‌ಎಸ್‌ನವರಿಗೆ ಅನುಮತಿ ನೀಡಲಾಗಿತ್ತು. ಶೀಘ್ರದಲ್ಲೇ ಆ ರಸ್ತೆಯಲ್ಲಿ ಬಸ್ ನಿಲುಗಡೆಯನ್ನು ತೆರವುಗೊಳಿಸಲಾಗುವುದು.

–ಕೆ.ಎನ್. ರಮೇಶ, ಸಹಾಯಕ ಪೊಲೀಶ್ ಆಯುಕ್ತ, ಜಯನಗರ (ಸಂಚಾರ)

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !