ಹೆಗಡೆ ನಗರ, ಥಣಿಸಂದ್ರ: ಕಾವೇರಿ ಖುಷಿದೂಳು ಫಜೀತಿ

7

ಹೆಗಡೆ ನಗರ, ಥಣಿಸಂದ್ರ: ಕಾವೇರಿ ಖುಷಿದೂಳು ಫಜೀತಿ

Published:
Updated:

ಮಾನ್ಯತಾ ಟೆಕ್‌ ಪಾರ್ಕ್‌ ಸೇರಿದಂತೆ ಹಲವು ಉದ್ಯಮ, ವಾಣಿಜ್ಯ ಮಳಿಗೆಗಳನ್ನು ಹೊಂದಿದ ಉತ್ತರ ಬೆಂಗಳೂರು ಮಹಾನಗರದ ಅತ್ಯಂತ ಮಹತ್ವದ ಪ್ರದೇಶ. ನಾಗವಾರ, ಥಣಿಸಂದ್ರ, ಹೆಗಡೆ ನಗರ, ಚೊಕ್ಕನಹಳ್ಳಿ, ರಾಚೇನಹಳ್ಳಿ, ಹೆಣ್ಣೂರು, ಕೆ. ನಾರಾಯಣ ಪುರ ಮತ್ತಿತರ ಪ್ರಮುಖ ಪ್ರದೇಶಗಳು ಈ ವ್ಯಾಪ್ತಿಗೆ ಸೇರುತ್ತವೆ. ರಿಂಗ್‌ ರೋಡ್‌ ಆಚೆಗಿನ ಪ್ರದೇಶವಾದ್ದರಿಂದ ನಗರದ ಸವಲತ್ತುಗಳು ಇಲ್ಲಿನ್ನೂ ಅಭಿವೃದ್ಧಿಗೊಳ್ಳಬೇಕಿದೆ. ಇದೀಗ ನೀರು ಸರಬರಾಜು, ಒಳಚರಂಡಿ ವ್ಯವಸ್ಥೆಯ ಸುಧಾರಣೆ ಉದ್ದೇಶದ ಮೂಲಸೌಕರ್ಯ ಸಂಬಂಧಿ ಕಾಮಗಾರಿಗಳು ಶುರುವಾದ್ದರಿಂದ ನಾಗವಾರ ಜಂಕ್ಷನ್‌ ಈಗ ಬ್ಯುಸಿ.

ಅತ್ಯಂತ ಪ್ರಮುಖವಾಗಿ ನಾಗವಾರದಿಂದ ಯಲಹಂಕ ರಸ್ತೆಯುದ್ದಕ್ಕೂ ಬರುವ ಸಾರಾಯ್‌ ಪಾಳ್ಯ, ಅಶ್ವತ್ಥನಗರ, ಥಣಿಸಂದ್ರ, ಹೆಗಡೆ ನಗರ, ನೂರ್‌ ನಗರ, ಚೊಕ್ಕನಹಳ್ಳಿ, ಇಟ್ಟಿಗೆ ಫ್ಯಾಕ್ಟರಿ, ಕೋಗಿಲು ಕ್ರಾಸ್‌ವರೆಗೆ ಮತ್ತು ಹೆಬ್ಬಾಳ, ಹೆಣ್ಣೂರು ಪ್ರಮುಖ ಜಂಕ್ಷನ್‌ಗಳನ್ನು ಸೇರಿಸುವ ರಸ್ತೆಗಳುದ್ದಕ್ಕೂ ಕಾಮಗಾರಿಯದೇ ಭರಾಟೆ.

ಹೆಬ್ಬಾಳದಿಂದ ಹೆಣ್ಣೂರುವರೆಗಿನ ಸಿಮೆಂಟ್‌ ರಸ್ತೆ ಕಾಮಗಾರಿ ಒಂದು ಹಂತಕ್ಕೆ ಮುಗಿದು ಮತ್ತೊಂದು ಹಂತದ ತಯಾರಿ ನಡೆಯುತ್ತಿದೆ. ನಾಗವಾರ ಜಂಕ್ಷನ್‌ನಿಂದ ಥಣಿಸಂದ್ರ, ಹೆಗಡೆ ನಗರ ಮುಖ್ಯ ರಸ್ತೆಯ ಉದ್ದಕ್ಕೂ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಈ ಭಾಗಕ್ಕೆ ಕಾವೇರಿ ನೀರು ಒದಗಿಸಲು ಪೈಪ್‌ಲೈನ್‌ ಅಳವಡಿಸುವ ಕೆಲಸ ಕೈಗೆತ್ತಿಕೊಂಡಿದೆ. ರಸ್ತೆಯುದ್ದಕ್ಕೂ ಬೃಹತ್‌ ಪೈಪ್‌ಗಳನ್ನು ರಸ್ತೆಯ ಇಕ್ಕೆಲಗಳಲ್ಲಿ ಕೆಲ ವಾರಗಳ ಹಿಂದೆಯೇ ಸುರಿಯಲಾಗಿತ್ತು. ಬುಲ್ಡೋಜರ್‌ಗಳು, ಜೆಸಿಬಿ ಯಂತ್ರಗಳು ಟಾರು ರಸ್ತೆ ಅಗೆಯುವ ಕೆಲಸದಲ್ಲಿ ತೊಡಗಿವೆ. ಅಲ್ಲಲ್ಲಿ ಕಾರ್ಮಿಕರ ಶೆಡ್‌ಗಳಿವೆ. ಇದೆಲ್ಲದರಿಂದ ದೂಳಿನ ಪ್ರದೇಶವೇ ನಿರ್ಮಾಣಗೊಂಡಿದೆ. ಚಳಿಗಾಳಿಯ ಜೊತೆಗೆ ದೂಳು ಸೇರಿಕೊಂಡು ಇಲ್ಲಿನ ಜನಸಾಮಾನ್ಯರು ತುಂಬ ತೊಂದರೆ ಅನುಭವಿಸುವಂತಾಗಿದೆ.

ಮಕ್ಕಳು, ವೃದ್ಧರು, ಮಹಿಳೆಯರು ಉಸಿರಾಡುವುದಕ್ಕೂ ತುಂಬ ಸಂಕಟ ಪಡುತ್ತಿದ್ದಾರೆ. ಪ್ರದೇಶದ ಬಹುತೇಕ ಜನರ ಶ್ವಾಸಕೋಶಗಳ ತುಂಬ ಕೆಮ್ಮಣ್ಣಿನ ಧೂಳು ತುಂಬಿಕೊಂಡಿರಬಹುದೇನೋ. ಶ್ವಾಸಕೋಶಗಳ ಸೋಂಕಿನಿಂದ ಬಳಲುವರ ಸಂಖ್ಯೆ ಇಲ್ಲಿ ಹೆಚ್ಚಿದಂತಿದೆ. ಅಗೆದ ರಸ್ತೆಯ ಇಕ್ಕೆಲಗಳಲ್ಲಿ ಪೂರಕ ಸುರಕ್ಷಾ ಕ್ರಮಗಳ ವ್ಯವಸ್ಥೆಯೂ ಅದ್ವಾನ. ಜನ ತುಂಬ ಜಾಗರೂಕವಾಗಿ ವಾಹನ ನಡೆಸುವ ಮತ್ತು ಪಾದಚಾರಿಗಳು ಅಂಗೈಯಲ್ಲಿ ಜೀವ ಇಟ್ಟುಕೊಂಡೇ ಹೆಜ್ಜೆ ಇಡುವ ಪರಿಸ್ಥಿತಿ ನಿರ್ಮಾಣಗೊಂಡಿದೆ.

ಕಾಮಗಾರಿಯ ಕಾರ್ಮಿಕರು ಕೂಡ ಅಷ್ಟೇ. ಸುರಕ್ಷಾ ಕವಚಗಳೇ ತುಂಬ ಅಪರೂಪ ಎನ್ನುವಂತಿದೆ. ಕೆಲವರು ಬರಿಗಾಲು ಮತ್ತು ಬರಿಗೈಯಿಂದ ಕೆಲಸ ಮಾಡುವುದು ಕಣ್ಣಿಗೆ ಢಾಳಾಗಿ ಕಾಣಿಸುತ್ತದೆ. ಈ ಕಾಮಗಾರಿಯಲ್ಲಿ ಸುರಕ್ಷಾ ಕ್ರಮಗಳ ಸಮಪರ್ಕ ವ್ಯವಸ್ಥೆ ಇಲ್ಲದೇ ಇರುವುದು ಸ್ಪಷ್ಟ. ಆಧುನಿಕ ಯುಗದಲ್ಲೂ ಕಾರ್ಮಿಕರ ಸುರಕ್ಷತೆಗೆ ಪೂರಕ ಸಾಮಗ್ರಿಗಳನ್ನು ಸಂಬಂಧಪಟ್ಟ ಇಲಾಖೆ ಮತ್ತು ಗುತ್ತಿಗೆದಾರರು ಹೊಂದದೇ ಇರುವುದು ದುರಂತವೇ ಸರಿ.

‘ಅಭಿವೃದ್ಧಿ ಕಾರ್ಯಗಳು ಎಲ್ಲರ ಅಗತ್ಯ. ನಿಜ. ಆದರೆ ಮುಂದೊಮ್ಮೆ ಅನುಕೂಲವಾಗಬಲ್ಲ ಇಂಥ ಕಾಮಗಾರಿಗಳಿಂದ ಈಗಿರುವ ಕನಿಷ್ಠ ನೆಮ್ಮದಿಗೂ ಭಂಗ ತರಬಾರದಲ್ಲವೇ..’ ಎನ್ನುವುದು ಸಾರ್ವಜನಿಕರ ಪ್ರಶ್ನೆ. ಇಷ್ಟಾದರೂ ಜನರ ಮನಸಲ್ಲಿ ಕಾಮಗಾರಿ ಬಗ್ಗೆ ಹಲವು ನಿರೀಕ್ಷೆಗಳಿವೆ. ‘ದಶಕಗಳಿಂದ ಬೆಳೆದುನಿಂತ ನಮ್ಮ ಬಡಾವಣೆಗಳು ಸೌಕರ್ಯಗಳಿಂದ ವಂಚಿತವಾಗಿದ್ದವು. ರಸ್ತೆಗಳು ಡಾಂಬರು ಕಾಣದೆ ಧೂಳಿನ ಹಾದಿಯೇ ನಮಗೆ ಗತಿ ಎನ್ನುವಂತಿತ್ತು. ಎಷ್ಟೋ ಸಮಯದ ನಂತರ ಇಲ್ಲಿನ ರಸ್ತೆಗಳು ಟಾರು ಕಂಡಿದ್ದವು. ಈಗಿನ ಕಾಮಗಾರಿಯಿಂದ ಅವಕ್ಕೂ ಸಂಚಕಾರ ಬಂದೊದಗಿ ಮತ್ತದೇ ಧೂಳಿನ ಹಾದಿಯೇ ಗತಿಯಾದಂತಾಗಿದೆ. ಆದರೂ ಪರವಾಗಿಲ್ಲ ಕಾವೇರಿ ನೀರಿಗಾಗಿ ನಾವಿದನ್ನೆಲ್ಲ ಸಹಿಸಿಕೊಳ್ಳುತ್ತೇವೆ’ ಎನ್ನುತ್ತಾರೆ ಇಲೆಕ್ಟ್ರಿಷಿಯನ್‌ ಮೌಲಾನಾ ಷರೀಫ್‌.

ರಸ್ತೆ ಅಗೆದು ಬೃಹತ್‌ ಪೈಪ್‌ಗಳನ್ನು ಅಳವಡಿಸಿದ ಮೇಲೂ ಉಳಿದ ಮಣ್ಣಿನ ರಾಶಿ ಸುತ್ತಲ ಪ್ರದೇಶಗಳಿಗೆ ಧೂಳು ಉಣ್ಣಿಸುತ್ತಿದೆ. ಇದರಿಂದ ನಾಗರಿಕರು ಬೇಸತ್ತು ಹೋಗಿದ್ದಾರೆ. ಕಾಮಗಾರಿ ನಡೆವ ಪ್ರದೇಶದಲ್ಲಿ ಸುರಕ್ಷೆಯ ಫೆನ್ಸಿಂಗ್‌ ಕೂಡ ಸಮರ್ಪಕವಾಗಿಲ್ಲ. ಧೂಳು ಏಳುವುದು ಗೊತ್ತಿದ್ದರೂ ಅದರ ಸುತ್ತ ಟಾರ್ಪಾಲುಗಳನ್ನೋ ಇಲ್ಲವೇ ತಗಡಿನ ತಡೆಗೋಡೆಯನ್ನೋ ಅಳವಡಿಸಿ ಧೂಳು ತಪ್ಪಿಸಬಹುದಾಗಿತ್ತು. ಅದನ್ನೂ ಮಾಡಿಲ್ಲ.

‘ಒಂದರ್ಧ ಗಂಟೆ ಆಟೋ ನಿಲ್ಲಿಸಿಕೊಂಡರೂ ಸಾಕು. ಇಡೀ ಆಟೋ ಕೆಂಪು ದೂಳಿನಲ್ಲಿ ಸ್ನಾನ ಮಾಡಿದಂತಾಗುತ್ತದೆ. ಉಗುಳಿದರೆ ಗಂಟಲುಗಳ ತುಂಬ ಕಟ್ಟಿಕೊಂಡ ದೂಳು ಹೊರಬರುತ್ತದೆ. ಹದಿನೈದು ದಿನಗಳಿಂದ ಆರೋಗ್ಯವೇ ಹಾಳಾಗಿದೆ’ ಎನ್ನುತ್ತಾರೆ ಆಟೋ ಚಾಲಕ ಪಾಶಾ.

‘ದೂಳಿನಿಂದ ಕೆಮ್ಮು, ನೆಗಡಿ ಜಾಸ್ತಿಯಾಗಿ ತೊಂದರೆ ಅನುಭವಿಸುವವರೇ ನಮ್ಮ ಅಂಗಡಿಗೆ ದೌಡಾಯಿಸುತ್ತಿದ್ದಾರೆ. ಅಲರ್ಜಿ ಸಂಬಂಧಿ ಔಷಧಿಗಳಿಗೆ ನಮ್ಮಲ್ಲಿ ತುಂಬ ಬೇಡಿಕೆ ಬಂದಿದೆ’ ಎನ್ನುತ್ತಾರೆ ಔಷಧ ಅಂಗಡಿ ವ್ಯಾಪಾರಿ ಸಯಿದ್‌.

‘ಒಂದು ಸಮಾಧಾನವೆಂದರೆ ಅಗೆದ ಜಾಗದಲ್ಲಿ ಪೈಪ್‌ ಅಳವಡಿಸಿದ ನಂತರ ಮಣ್ಣು ಎಳೆದು ಸಮ ಮಾಡುವ ಪ್ರಯತ್ನ ಅಲ್ಲಲ್ಲಿಯಾದರೂ ಮಾಡಿದ್ದಾರೆ. ಮಣ್ಣು ಗಟ್ಟಿಯಾಗಿ ಅದರ ಮೇಲೆ ಟಾರು ಹಾಕಿ ರಸ್ತೆ ಮಾಡುವುದಕ್ಕೆ ಹೆಚ್ಚು ಸಮಯವೇ ಬೇಕಾಗಬಹುದು. ನಿವಾಸಿಗಳಲ್ಲಿ ಬೇಸರವಿದೆ ನಿಜ. ಆದರೆ ಅಭಿವೃದ್ಧಿಗಾಗಿ ನಾವಿದನ್ನು ಸಹಿಸಿಕೊಳ್ಳಬೇಕಿದೆ’ ಎನ್ನುತ್ತಾರೆ ಭಾಗದ ಸಾಮಾಜಿಕ ಕಾರ್ಯಕರ್ತ ಮರಿಮಾದಯ್ಯ.

***

ಯಲಹಂಕ, ಬ್ಯಾಟರಾಯನಪುರ, ಮಹದೇವಪುರ ಕೆಆರ್‌ ಪುರ ಹೀಗೆ ಒಟ್ಟು ನಾಲ್ಕು ಝೋನ್‌ಗಳಲ್ಲಿ ಶುರುವಾದ ಈ ಕಾಮಗಾರಿ ಇತ್ತೀಚೆಗೆ ಹೆಚ್ಚು ಚುರುಕಿನಿಂದ ಸಾಗುತ್ತಿದೆ ಅನ್ನಿಸಿದರೂ ಸಾರ್ವಜನಿಕರಿಗೆ ಓಡಾಡಲು ಮತ್ತು ಆರೋಗ್ಯ ಸಂಬಂಧಿ ಸಮಸ್ಯೆಗಳ ಬಗ್ಗೆ ಮುಂಜಾಗರೂಕತೆ ವಹಿಸಬೇಕಿತ್ತು ಎನ್ನುವ ಕೂಗು ಜನರದು. ಯಲಹಂಕ ಝೋನ್‌ ವ್ಯಾಪ್ತಿಯ ಹಳ್ಳಿಗಳಿಗೆ ಕಾವೇರಿ ನೀರು ಒದಗಿಸುವ ಬಹುದೊಡ್ಡ ಕಾಮಗಾರಿ ಇದಾದ್ದರಿಂದ ಸಾರ್ವಜನಿಕರು ಕೂಡ ಪೂರಕ ಸಹಕಾರವನ್ನೇ ನೀಡುತ್ತಿದ್ದಾರೆ.

ಯಲಹಂಕ, ಬ್ಯಾಟರಾಯನಪುರ, ಮಹದೇವಪುರ ಮತ್ತು ಕೆ.ಆರ್‌ ಪುರ.. ಹೀಗೆ ಒಟ್ಟು ನಾಲ್ಕು ಪ್ರದೇಶಗಳ 110 ಗ್ರಾಮಗಳಿಗೆ ಕಾವೇರಿ ನೀರು ಒದಗಿಸುವ ವಿಶೇಷ ಪ್ಯಾಕೇಜ್‌ 2016 ಮೇ ತಿಂಗಳಿನಿಂದ ಪ್ರಾರಂಭಗೊಂಡಿದೆ. ಈ ಪ್ರಾಜೆಕ್ಟ್‌ ಇದೇ ವರ್ಷ ಅಂದರೆ 2019 ಮೇ ತಿಂಗಳಿಗೆ ಮುಕ್ತಾಯಗೊಳ್ಳಬೇಕಿದೆ. ಆದರೆ ಕೆಲವು ತೊಡಕುಗಳಿಂದ ಅಂದುಕೊಂಡ ಗುರಿಯನ್ನು ಮುಟ್ಟಲು ಕಷ್ಟವಾಗಲಿದೆ. ಈ ನಡುವೆ ಒಂದು ವಾರ ಕಾಲ ನಡೆಯಲಿರುವ ಏರ್‌ ಶೋ, ಅಲ್ಲಲ್ಲಿ ಕೆಲ ರೈಲ್ವೆ ಕ್ರಾಸಿಂಗ್‌ ಪ್ರದೇಶಗಳಲ್ಲಿ ಅಧಿಕೃತವಾದ ಅನುಮತಿ ಪ್ರಸ್ತಾವಗಳು ಇತ್ಯರ್ಥಗೊಳ್ಳದೇ ಬಾಕಿ ಉಳಿದಿವೆ. ಚೊಕ್ಕನಹಳ್ಳಿ ಬಳಿ ಕಾವೇರಿ ನೀರು ಸಂಗ್ರಹದ ಜಿಎಲ್‌ಆರ್‌ ಸಿದ್ಧಪಡಿಸಬೇಕಿದೆ. ಹೀಗಾಗಿ ಇಡೀ ಕಾಮಗಾರಿ ಒಂದು ವರ್ಷ ಕಾಲ ಮುಂದಕ್ಕೆ ಹೋಗುವ ಸಾಧ್ಯತೆಯೂ ಇದೆ. ಆದರೆ ವಾರ್ಡ್‌ ನಂಬರ್‌ 6ರಲ್ಲಿ ರಾಚೇನಹಳ್ಳಿ, ದಾಸರಹಳ್ಳಿ ಪ್ರದೇಶಗಳನ್ನು ಐಡೆಂಟಿಫೈ ಮಾಡಿ ಈ ಪ್ರದೇಶಗಳಲ್ಲಿ ಈ ವರ್ಷದ ಡಿಸೆಂಬರ್‌ನಲ್ಲಿ ಕಾವೇರಿ ನೀರು ಒದಗಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ವಿಪರ್ಯಾಸವೆಂದರೆ ಎಷ್ಟೋ ಕಡೆ ಸಾರ್ವಜನಿಕರು ಕನೆಕ್ಷನ್‌ ತೆಗೆದುಕೊಳ್ಳಲು ಅಷ್ಟೊಂದು ಉತ್ಸಾಹ ತೋರುತ್ತಿಲ್ಲ.

–ಲಾಡ್ಲೇಸಾಬ್ ನಲತವಾಡ್,  ಪ್ರಾಜೆಕ್ಟ್‌ ಅಸಿಸ್ಟಂಟ್‌ ಇಂಜಿನಿಯರ್

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !