ಕ್ಯಾನ್ಸರ್‌.. ಇದೆ ಆನ್ಸರ್‌!

7

ಕ್ಯಾನ್ಸರ್‌.. ಇದೆ ಆನ್ಸರ್‌!

Published:
Updated:
Prajavani

 ಅಮ್ಮ ನಮ್ಮನ್ನು ಬಿಟ್ಟುಹೋದಾಗ ಅವರಿಗೆ ಬರೀ 42 ವರ್ಷ. ಅಮ್ಮನನ್ನು ಬಲಿತೆಗೆದುಕೊಂಡಿದ್ದು ಕ್ಯಾನ್ಸರ್‌. ಇಂದಿಗೂ ಅಮ್ಮನ ಸಾವು ಕಣ್ಣೆದುರಿಗೆ ಕಟ್ಟಿದಂತಿದೆ. ಅಂದೇ ನಿರ್ಧರಿಸಿಬಿಟ್ಟೆ. ನಾನು ವೈದ್ಯ ಆಗುವುದಾದರೆ ಅದು ಕ್ಯಾನ್ಸರ್ ತಜ್ಞನೇ ಆಗಬೇಕೆಂದು. ಅಮ್ಮನಿಗೆ ಬಂದ ಸ್ಥಿತಿ ಮತ್ಯಾವ ತಾಯಿಗೂ ಬಾರದಿರಲಿ.. 

– ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಪ್ರಮೋದ್ ಕೆ.ಪಿ.ಆರ್. ಹೇಳುತ್ತಿದ್ದರೆ ಅವರ ದನಿಯಲ್ಲಿ ಕ್ಯಾನ್ಸರ್ ಮಹಾಮಾರಿಗೆ ಬಲಿಯಾದ ನೂರಾರು ರೋಗಿಗಳ ಸಂಕಟವೇ ಕಾಣುತ್ತಿತ್ತು. ವಿದೇಶಗಳಲ್ಲಿ ಕ್ಯಾನ್ಸರ್ ಕುರಿತು ಅಧ್ಯಯನ ಮಾಡಿರುವ ಅವರು, ಕರ್ನಾಟಕ ರಾಜ್ಯ ಬ್ರೈನ್ ಟ್ಯೂಮರ್ ಸೊಸೈಟಿಯ ಅಧ್ಯಕ್ಷ ಹಾಗೂ ಬೆಂಗಳೂರು ಕ್ಯಾನ್ಸರ್ ಸೊಸೈಟಿಯ ಸಲಹೆಗಾರರು ಹೌದು.

‘ಪುಟ್ಟಮಕ್ಕಳಿಂದ ಹಿಡಿದು ವೃದ್ಧರವರೆಗೆ ಕಾಡಬಹುದಾದ ಕ್ಯಾನ್ಸರ್‌ಗೆ ಈ ಹಿಂದೆ ನೋ ಆನ್ಸರ್ ಅನ್ನುವುದು ವೈದ್ಯರ ಷರಾ ಆಗಿರುತ್ತಿತ್ತು. ಆದರೆ, ಈಗ ಕ್ಯಾನ್ಸರ್‌ಗೂ ಇದೆ ಆನ್ಸರ್’ ಎನ್ನುತ್ತಾರೆ ಡಾ.ಪ್ರಮೋದ್.

1985ರಿಂದ ಕಿದ್ವಾಯಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಮೋದ್ ಅವರಲ್ಲಿ ಸಾವಿರಾರು ಕ್ಯಾನ್ಸರ್ ರೋಗಿಗಳ ಅನುಭವದ ಕಥನ ಮಡುಗಟ್ಟಿದೆ. ನಿತ್ಯವೂ ನೋವಿನಲ್ಲೇ ಬದುಕು ಕಳೆಯುವ ಕ್ಯಾನ್ಸರ್ ಪೀಡಿತರಿಗಾಗಿ ಅವರು ನವರಂಗ್ ಥಿಯೇಟರ್ ಸಮೀಪದ ಗಾಯತ್ರಿದೇವಿ ಉದ್ಯಾನದಲ್ಲಿ ನಗೆಕೂಟ ನಡೆಸುತ್ತಿದ್ದಾರೆ.

‘ನಾನೊಮ್ಮೆ ಮಹಿಳಾ ರೋಗಿಯೊಬ್ಬರ ತಪಾಸಣೆ ಮಾಡುತ್ತಿದ್ದಾಗ ಅವರು ಮಂಕಾಗಿದ್ದರು. ಏನಮ್ಮಾ ನೀವು ನಕ್ಕು ಎಷ್ಟು ದಿನವಾಯಿತು ಎಂದು ಪ್ರಶ್ನಿಸಿದೆ. ಆಗವರು, ಡಾಕ್ಟ್ರೇ ಮದುವೆಯಾಗಿ ಹನಿಮೂನ್‌ಗೆ ಹೋದಾಗಲೇ ನಾನು ಮನಃಪೂರ್ವಕವಾಗಿ ಜೋರಾಗಿ ನಕ್ಕಿದ್ದು. ಆನಂತರ ಗಂಡ, ಮಕ್ಕಳು, ಸಂಸಾರದಲ್ಲಿ ಸರಿಯಾಗಿ ನಗಲು ಆಗಲೇ ಇಲ್ಲ ಎಂದು ಬೇಸರದಿಂದ ನುಡಿದರು. ಅದನ್ನು ಕೇಳಿ ನನಗೆ ನಿಜಕ್ಕೂ ಶಾಕ್ ಆಯಿತು. ಗೃಹಿಣಿಯರು ತಮ್ಮ ಜೀವನವನ್ನು ಗಂಡ– ಮಕ್ಕಳಿಗಾಗಿಯೇ ಮುಡಿಪಿಡುತ್ತಾರೆ. ತಮ್ಮ ಸ್ವಂತ ವ್ಯಕ್ತಿತ್ವದತ್ತ ಗಮನ ಹರಿಸುವುದೇ ಇಲ್ಲ. ಇದು ತಪ್ಪು. ಕ್ಯಾನ್ಸರ್ ಅಷ್ಟೇ ಅಲ್ಲ ಬಹುತೇಕ ಕಾಯಿಲೆಗಳು ನಿತ್ಯಬದುಕಿನ ಒತ್ತಡದಿಂದಲೂ ಬರುತ್ತವೆ. ಅದಕ್ಕೆ ಹೆಣ್ಣುಮಕ್ಕಳೇ ಹೆಚ್ಚು ಬಲಿಯಾಗುತ್ತಾರೆ’ಎನ್ನುವುದು ಪ್ರಮೋದ್ ಅವರ ಅಭಿಪ್ರಾಯ.

‘ಮಹಿಳೆಯರು ಸಾಮಾನ್ಯವಾಗಿ ಸ್ತನ ಇಲ್ಲವೇ ಗರ್ಭಕೋಶದ ಕ್ಯಾನ್ಸರ್‌ಗೆ ಬಹುಬೇಗ ತುತ್ತಾಗುತ್ತಾರೆ. ಅದಕ್ಕೆ ಒತ್ತಡದ ಬದುಕು, ವ್ಯಾಯಾಮವಿಲ್ಲದ ಜೀವನಶೈಲಿ. ಮಾನಸಿಕ ದಣಿವು ಇವೆಲ್ಲವೂ ಕಾರಣವಾಗಬಲ್ಲವು. ಅದಕ್ಕಾಗಿಯೇ ಮಹಿಳೆಯರು ಗಂಡ– ಮನೆ– ಮಕ್ಕಳು ಚೌಕಟ್ಟನ್ನು ಮೀರಿ ತಮ್ಮತ್ತಲೂ ಗಮನ ಹರಿಸಬೇಕು. ಬರೀ ದೈಹಿಕ ಆರೋಗ್ಯವಷ್ಟೇ ಅಲ್ಲ ಮನಸ್ಸಿನ ಆರೋಗ್ಯದತ್ತಲೂ ಗಮನ ಕೊಡಬೇಕು. ಇದರಿಂದಲೇ ಎಷ್ಟೋ ಕಾಯಿಲೆಗಳನ್ನು ತಡೆಯಬಹುದು’ ಅನ್ನುವುದು ಅವರ ಸಲಹೆ.

‘ಮುಖ್ಯವಾಗಿ ಹೆಣ್ಣುಮಕ್ಕಳು ತಮ್ಮ ಸ್ತನಗಳನ್ನು ಆಗಾಗ ಪರೀಕ್ಷಿಸಿಕೊಳ್ಳುತ್ತಿರಬೇಕು. ಅನುಮಾನ ಬಂದಲ್ಲಿ ಸಂಕೋಚ ಬದಿಗಿರಿಸಿ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳಬೇಕು. ಈಗಂತೂ ಕ್ಯಾನ್ಸರ್ ನಿವಾರಣೆಗೆ ಎಷ್ಟೊಂದು ಆಧುನಿಕ ಉಪಕರಣಗಳಿವೆ. ಅಪಾಯಕಾರಿ ಕ್ಯಾನ್ಸರ್‌ಗಳನ್ನು ಸುಲಭವಾಗಿ ಹತ್ತಿಕ್ಕಬಹುದು. ಲಿಂಗಾನುಪಾತದ ಕುಸಿತದ ಈ ದಿನಗಳಲ್ಲಿ ಹೆಣ್ಣುಉಳಿಸಿ, ಮನೆ ಬೆಳೆಸಿ ಎಂಬುದು ನನ್ನ ಮನವಿ. ಕ್ಯಾನ್ಸರ್ ಕುರಿತು ಅರಿವು ಅಗತ್ಯ. ವಿದೇಶಗಳಲ್ಲಷ್ಟೇ ಇದ್ದ ಪ್ರೋಟಾನ್‌ಬೀನ್ ಥೆರಪಿ ಈಗ ಚೆನ್ನೈಗೂ ಬರುತ್ತಿದೆ. ಅಣುಅಣುವಿನಲ್ಲಿರುವ ಕ್ಯಾನ್ಸರ್ ಸೋಂಕನ್ನು ಪ್ರೋಟಾನ್‌ಬೀನ್ ನಾಶ ಗೊಳಿಸುತ್ತದೆ. ನಿತ್ಯವೂ ಈ ಕ್ಷೇತ್ರದಲ್ಲಿ ಅನೇಕ ಸಂಶೋಧನೆಗಳಾಗುತ್ತಿವೆ. ಈ ನಿಟ್ಟಿನಲ್ಲಿ ಕಿದ್ವಾಯಿ ಆಸ್ಪತ್ರೆ ಹಿಂದೆ ಬಿದ್ದಿಲ್ಲ. ಆಯುರ್ವೇದ ಮತ್ತು ಕ್ಯಾನ್ಸರ್ ಸೇರಿದಂತೆ ಅನೇಕ ಸಂಶೋಧನೆಗಳು ನಡೆಯುತ್ತಿವೆ. ಕ್ಯಾನ್ಸರ್ ರೋಗಿಗಳಲ್ಲಿ ಚೈತನ್ಯ ತುಂಬುವ ಕಾರ್ಯಕ್ರಗಳೂ ಇಲ್ಲಿವೆ. ಕ್ಯಾನ್ಸರ್ ಕ್ಯಾನ್ಸರ್ ನೋ ಅನ್ಸರ್ ಅನ್ನುವ ದಿನಗಳು ಈಗಿಲ್ಲ. ಕ್ಯಾನ್ಸರ್ ಗೂ ಇದೆ ಆನ್ಸರ್’ ಎನ್ನುವ ಮಾತು ಅವರದ್ದು.

‘ಐ ಆ್ಯಮ್ ಅಂಡ್ ಐ ವಿಲ್’ ಎಂಬುದು ಈ ಬಾರಿಯ ವಿಶ್ವ ಕ್ಯಾನ್ಸರ್ ದಿನದ ಘೋಷವಾಕ್ಯ.

ಆರೋಗ್ಯಕರ ಜೀವನ ಶೈಲಿ ಅಳವಡಿಸಿಕೊಳ್ಳಿ

ಒತ್ತಡದ ಬದುಕು, ದುಶ್ಚಟಗಳು, ಕರಿದ ಆಹಾರ ಪದಾರ್ಥಗಳ ಸೇವನೆ, ಪರಿಸರ ಮಾಲಿನ್ಯ, ಬೊಜ್ಜು ಮತ್ತು ದೈಹಿಕ ಚಟುವಟಿಕೆ ಇಲ್ಲದಿರುವಿಕೆಯೇ ಕ್ಯಾನ್ಸರ್‌ಗೆ ಮುಖ್ಯ ಕಾರಣಗಳು. ಹಾಗಾಗಿ, ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಳ್ಳಿ. ಮನಃಪೂರ್ವಕವಾಗಿ ಜೋರಾಗಿ ನಗಿ. ಮಾನಸಿಕ ಆರೋಗ್ಯವನ್ನು ಚೆನ್ನಾಗಿಟ್ಟುಕೊಳ್ಳಿ. ಹೊಟ್ಟೆಕಿಚ್ಚು, ಅಸೂಯೆ, ದ್ವೇಷ ಇವೆಲ್ಲವನ್ನೂ ಬಿಟ್ಟುಬಿಡಿ ಎಂಬುದು ಡಾ. ಪ್ರಮೋದ್ ಅವರ ಸಲಹೆ.

***
ಬದುಕಿನ ಕೊನೆಯಲ್ಲ ಆರಂಭ..

ಹಿಂದೆ ಯಾವ್ಯಾವುದಕ್ಕೋ ಖಿನ್ನಳಾಗುತ್ತ ಬದುಕೇ ಸಾಕು ಅಂದುಕೊಳ್ಳುತ್ತಿದ್ದೆ ಎಷ್ಟೊಂದು ಸಲ. ನನಗೆ ಕ್ಯಾನ್ಸರ್ ಅಂತ ತಿಳಿದಾಗಲೇ ನನ್ನಲ್ಲಿ ಬದುಕುವ ಅದಮ್ಯ ತುಡಿತ ಅಷ್ಟೊಂದು ಇದೆಯೆಂದು ನನಗೆ ಅರ್ಥವಾಗಿದ್ದು! ತಿಳಿದ ಆ ಕ್ಷಣದಲ್ಲಿ ಆಕಾಶ ತಲೆಯ ಮೇಲೆ ಕಳಚಿಬಿದ್ದಿತ್ತು. ಸ್ವಲ್ಪ ಕಠಿಣವೇ ಅನ್ನಿಸುವ ಟ್ರೀಟ್‌ಮೆಂಟ್ ಅವುಡುಗಚ್ಚಿ ಮುಗಿಸಿದೆ. ಬದುಕು ಹೆಚ್ಚು ಅರ್ಥಪೂರ್ಣ ಅನಿಸುತ್ತಿದೆ. ಇಡೀ ಆಕಾಶದುದ್ದಕ್ಕೂ ಹಾರಾಡುತ್ತಲೇ ಇರಬೇಕೆಂಬ ಹುಚ್ಚು ಜೀವನಪ್ರೀತಿ ನನ್ನೊಳಗೆ. ಕ್ಯಾನ್ಸರ್ ಬದುಕಿನ ಕೊನೆಯಲ್ಲ, ಆರಂಭ.

     -ಭಾರತಿ ಬಿ.ವಿ. ಲೇಖಕಿ

***

ಕಿದ್ವಾಯಿ ಸೌಲಭ್ಯಗಳು

ಸರ್ಜರಿ, ರೇಡಿಯೋಥೆರಪಿ, ಪೀಡಿಯಾಟ್ರಿಕ್ ಆಂಕಾಲಜಿ, ವೈದ್ಯಕೀಯ ಆಂಕಾಲಜಿ, ಹೆಡ್ ಅಂಡ್‌ ನೆಕ್ ಸರ್ಜರಿ, ಒರಲ್ ಸರ್ಜರಿ, ಗೈನಕಾಲಜಿ ಆಂಕಾಲಜಿ, ಅನಸ್ತೆಟಿಕ್ ಮತ್ತು ನೋವು ಪರಿಹಾರ, ರೇಡಿಯೊ ರೋಗ ನಿರ್ಣಯ, ಪೆಥಾಲಜಿ, ಮೈಕ್ರೋಬಯಾಲಜಿ.

Tags: 

ಬರಹ ಇಷ್ಟವಾಯಿತೆ?

 • 48

  Happy
 • 0

  Amused
 • 0

  Sad
 • 2

  Frustrated
 • 0

  Angry

Comments:

0 comments

Write the first review for this !