ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡನಾಡಿನ ಚಳಿಗಾಲದ ಪ್ರವಾಸಿ ತಾಣಗಳು

Last Updated 26 ಡಿಸೆಂಬರ್ 2018, 19:30 IST
ಅಕ್ಷರ ಗಾತ್ರ

ಗೋಕಾಕಿನ ಗೊಡಚಿನಮಲ್ಕಿ

ಇತ್ತ ಮಲೆನಾಡೂ ಅಲ್ಲ, ಅತ್ತ ಬಯಲು ಪ್ರದೇಶವೂ ಅಲ್ಲದ, ಜಮೀನುಗಳಿಂದ ಸುತ್ತುವರಿದಿರುವ ಪ್ರದೇಶ ಬೆಳಗಾವಿ ಜಿಲ್ಲೆಯ ಗೋಕಾಕ ತಾಲ್ಲೂಕಿನ ಗೊಡಚಿನಮಲ್ಕಿ ಜಲಪಾತ ಪ್ರದೇಶ. ಕೆಂಬಣ್ಣದ ನೀರು, ಅಲೆ ಅಲೆಯಂತೆ ಹರಿಯುತ್ತಾ, ಧುಮ್ಮಿಕ್ಕುವ ಈ ಜಲಪಾತ, ಚಳಿಗಾಲದ ಪ್ರವಾಸಕ್ಕೆ ಸೂಕ್ತ ತಾಣ. ಹೊಸ ವರ್ಷಾಚರಣೆಗೆ ಹೇಳಿ ಮಾಡಿಸಿದ ಜಾಗ.

ಕುರುಚಲು ಕಾಡಿನಂತಿರುವ ಚಿಕ್ಕ ಬೆಟ್ಟಗಳ ಮಧ್ಯದಿಂದ ಹರಿದುಬರುವ ಮಾರ್ಕಂಡೇಯ ನದಿ ಇಲ್ಲಿ ಜಲಪಾತ ಸೃಷ್ಟಿಸುತ್ತದೆ. ಮಳೆಗಾಲದಲ್ಲಿ ಇಲ್ಲಿನ ಸೌಂದರ್ಯ ಸವಿಯುವುದು ಕಣ್ಣಿಗೆ ಹಬ್ಬ. ಈ ನೀರಿನ ಪ್ರಮಾಣ ಕಡಿಮೆ ಇದೆ. ಜಲಪಾತದ ಸೌಂದರ್ಯ ಕುಗ್ಗಿದೆ. ಆದರೆ, ಮೇಕೆದಾಟು ಮಾದರಿಯಲ್ಲಿ ಶಿಲಾಪದರಗಳಿದ್ದು, ಸುತ್ತಲಿನ ಪರಿಸರವೇ ಪ್ರವಾಸಿಗರಿಗೆ ಮುದ ನೀಡುತ್ತದೆ. ಸ್ನೇಹಿತರು, ಕುಟುಂಬದವರು ಸೇರಿ ಎಂಜಾಯ್‌ ಮಾಡಬಹುದಾದ ಜಾಗ ಇದು. ವಿಶೇಷವಾಗಿ ಇಲ್ಲಿಗೆ ಕಾಲೇಜು ಯುವಕ– ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ರಾಜ್ಯವಷ್ಟೇ ಅಲ್ಲ, ನೆರೆಯ ಗೋವಾ, ಮಹಾರಾಷ್ಟ್ರದಿಂದಲೂ ಇಲ್ಲಿಗೆ ಪ್ರವಾಸಿಗರು ಬರುತ್ತಾರೆ.

ನದಿ ತೀರದಿಂದ ಬಂಡೆಗಲ್ಲುಗಳ ನಡುವೆ ಅಲ್ಲಿನ ದೃಶ್ಯವೈಭವ ಸವಿಯುತ್ತಾ ತಂಗಾಳಿಯ ಜೋಗುಳದ ನಡುವೆ ಒಂದೂವರೆ ಕಿ.ಮೀ. ನಷ್ಟು ನಡೆದುಕೊಂಡು ಮುಂದೆ ಸಾಗಿದರೆ ಎತ್ತರವಾದ ವಿಶಾಲವಾದ ಜಲಪಾತ ಪ್ರದೇಶ ಮನಸ್ಸಿಗೆ ಮುದ ನೀಡುತ್ತದೆ. ನಡೆದು ಬಂದ ಆಯಾಸವನ್ನೆಲ್ಲಾ ಹೋಗಲಾಡಿಸುತ್ತದೆ. ಕಲ್ಲುಬಂಡೆಯ ಪ್ರದೇಶದಲ್ಲಿ ನಡೆದಾಡುವಾಗ ಎಚ್ಚರ ವಹಿಸಬೇಕು.

ತಲುಪುವುದು ಹೇಗೆ?

ಬೆಂಗಳೂರು ಕಡೆಯಿಂದ ಬರುವವರು ಬೆಳಗಾವಿ ಮೂಲಕ ಗೋಕಾಕ ತಲುಪಬೇಕು. ಗೋಕಾಕದಿಂದ 11 ಕಿ.ಮೀ., ಗೋಕಾಕ ರೋಡ್ ರೈಲು ನಿಲ್ದಾಣದಿಂದ ಸುಮಾರು 5 ಕಿ.ಮೀ. ಬಸ್‌, ಟ್ರ್ಯಾಕ್ಸಿಗಳ ವ್ಯವಸ್ಥೆ ಇದೆ. ‌ ಅವುಗಳು ಜಲಪಾತಕ್ಕೆ ಹೋಗುವ ದಾರಿಯಲ್ಲಿ ನಿಲುಗಡೆ ಮಾಡುತ್ತವೆ. ಅಲ್ಲಿಂದ ನಡೆದೇ ಹೋಗಬೇಕು. ಸ್ವಂತ ವಾಹನವಿದ್ದರೆ ಸಾಧ್ಯವಾದಷ್ಟು ಸಮೀಪಕ್ಕೇ ಹೋಗಬಹುದು. ಅಲ್ಲಿ ಯಾವುದೇ ವ್ಯವಸ್ಥಿತ ಹೋಟೆಲ್‌ ಅಥವಾ ಅಂಗಡಿಗಳಿಲ್ಲ. ಹೋಗುವಾಗಲೇ ಕುಡಿಯುವ ನೀರು, ತಿನಿಸುಗಳನ್ನು ಒಯ್ಯುವುದು ಒಳ್ಳೆಯದು. ವಾಸ್ತವ್ಯಕ್ಕೆ ಅಲ್ಲಿ ವ್ಯವಸ್ಥೆ ಇಲ್ಲ. ಗೋಕಾಕದಲ್ಲಿ ಹೋಟೆಲ್‌ಗಳಿವೆ.

–ಎಂ. ಮಹೇಶ

**

ಏರ ಬನ್ನಿ ಗಡಾಯಿಕಲ್ಲು

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲೇ ಅತ್ಯಂತ ಆಕರ್ಷಣೀಯವಾದ ಸ್ಥಳ ಗಡಾಯಿಕಲ್ಲು. ಚಳಿಗಾಲದ ಚಾರಣಕ್ಕೆ ಹೇಳಿಮಾಡಿಸಿದ ತಾಣ.

ನಡ ಗ್ರಾಮದಲ್ಲಿರುವ ಇದು ಕುದುರೆಮುಖ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯಲ್ಲಿದೆ. ಅದಮ್ಯ ಪ್ರಾಕೃತಿಕ ಸೌಂದರ್ಯ ಹೊಂದಿರುವ ಪಶ್ಚಿಮಘಟ್ಟದ ತಪ್ಪಲಿನಲ್ಲಿರುವ ಈ ತಾಣ ಚಾರಣಿಗರನ್ನು ಕೈ ಬೀಸಿ ಕರೆಯುತ್ತಿದೆ.

ತಳದಿಂದ 2,800 ಮೆಟ್ಟಿಲು ಹತ್ತಿದರೆ ನರಸಿಂಹಗಡ ಅಥವಾ ಜಮಲಾಗಡ ಎಂಬ ಕೋಟೆ ಸಿಗುತ್ತದೆ. ತುಂಬಾ ಕಡಿದಾದ ಈ ಮೆಟ್ಟಿಲುಗಳ ಮೇಲೆ ಸಾಗುವುದೇ ಒಂದು ಸವಾಲು. ಮೇಲೆ ಏರಿದ ಬಳಿಕ ಅದ್ಭುತ ಲೋಕವನ್ನು ಕಾಣಬಹುದು.

ಮೇಲ್ಭಾಗದಲ್ಲಿ ಕಲ್ಲಿನ ದ್ವಾರವಿದ್ದು, ಮೇಲ್ಭಾಗದಲ್ಲಿ ಇಂಡೋ ಸಾರ್ಸೆನಿಕ್ ಶೈಲಿಯ ಶಿಲ್ಪಚಿತ್ರಗಳಿವೆ. ಸುಣ್ಣದ ಕಲ್ಲಿನ ಗಾರೆಯಿಂದ ನಿರ್ಮಿಸಿದ ಎರಡು ಕಟ್ಟಡಗಳಿವೆ. ಅಲ್ಲಿರುವ ಕೆರೆಯಲ್ಲಿ ಬಿರು ಬೇಸಿಗೆಯಲ್ಲೂ ಸದಾ ನೀರಿರುತ್ತದೆ. ಎರಡು ದೊಡ್ಡ ಫಿರಂಗಿಗಳು ಇಲ್ಲಿನ ಆಕರ್ಷಣೆಯ ಕೇಂದ್ರಬಿಂದು.

ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗ ಈ ಸ್ಥಳವನ್ನು ನಿರ್ವಹಿಸುತ್ತದೆ. ಈ ಸ್ಥಳಕ್ಕೆ ₹ 20 ಪ್ರವೇಶ ಶುಲ್ಕವಿದೆ. ಮಕ್ಕಳಿಗೆ ₹ 10. ಬೆಳಿಗ್ಗೆ 7ರಿಂದ ಸಂಜೆ 4ರ ತನಕ ತೆರೆದಿರುತ್ತದೆ. ಗಡಾಯಿಕಲ್ಲು ಏರಿದವರು ಸಂಜೆ 6.30ರೊಳಗೆ ವಾಪಸ್‌ ಬರಬೇಕು ಎಂಬ ನಿಯಮವಿದೆ.

ಗಮನವಿಡಿ: ಚಳಿ ಇರುವ ಸಮಯದಲ್ಲಿ ಪ್ರವಾಸಿಗರು ಇಲ್ಲಿಗೆ ಹೆಚ್ಚು ಬರುತ್ತಾರೆ. ರಾತ್ರಿ ಬೆಟ್ಟದ ಮೇಲೆ ತಂಗಲು ಅವಕಾಶವಿಲ್ಲ. ಅಂಗಡಿ, ಹೋಟೆಲ್ ಇಲ್ಲ. ಅಗತ್ಯ ಆಹಾರ, ನೀರು ಕೊಂಡೊಯ್ಯಬೇಕು.

ಹೋಗುವುದು ಹೇಗೆ ?

ಮಂಗಳೂರು– ಉಜಿರೆ ಹೆದ್ದಾರಿಯಲ್ಲಿರುವ ಲಾಯಿಲ ಎಂಬಲ್ಲಿಂದ 8 ಕಿ.ಮೀ. ಎಡಕ್ಕೆ ಸಾಗಿದರೆ ಮಂಜೊಟ್ಟಿ ಎಂಬ ಸ್ಥಳ ಸಿಗುತ್ತದೆ. ಅಲ್ಲಿಂದ ಮತ್ತೆ ಎಡಕ್ಕೆ 1 ಕಿ.ಮೀ. ಸಾಗಿದರೆ ಈ ಪ್ರವಾಸಿ ಸ್ಥಳದ ಬುಡ ಗೋಚರಿಸುತ್ತದೆ. ಈ ಸ್ಥಳ ಬೆಳ್ತಂಗಡಿ ಪಟ್ಟಣದಿಂದ 12 ಕಿ.ಮೀ. ದೂರವಿದ್ದು, ಇಲ್ಲಿಂದ ಬಾಡಿಗೆಗೆ ಆಟೋ, ಟ್ಯಾಕ್ಸಿ ಲಭ್ಯವಿದೆ.
ಮಾಹಿತಿಗೆ ಮೋನಪ್ಪ– 97418 45675

–ಪ್ರದೀಶ್ ಹಾರೊದ್ದು

**

ಹತ್ತಿ ಬನ್ನಿ ಪಟ್ಲ ಬೆಟ್ಟ

ಕಣ್ಣು ಹಾಯಿಸಿದಷ್ಟು ಹಸಿರು ಹೊದ್ದಿಸಿದ ಬೆಟ್ಟಗಳ ಸಾಲು. ಕೈ ಹಿಡಿದು ಸಾಲಾಗಿ ನಿಂತಿರುವ ಮಕ್ಕಳಂತೆ ಕಾಣುವ ಈ ಸರಣಿ ಬೆಟ್ಟಗಳಿಗೆ ಪಟ್ಲ ಬೆಟ್ಟ ಎನ್ನುತ್ತಾರೆ. ಸಮುದ್ರ ಮಟ್ಟದಿಂದ ಸಾವಿರಾರು ಅಡಿ ಎತ್ತರದಲ್ಲಿರುವ ಸುಂದರ ಬೆಟ್ಟವನ್ನು ಏರುತ್ತಾ ಹೋದಂತೆ ತಣ್ಣನೆ ಗಾಳಿ ಮೈ ತಾಕುತ್ತದೆ. ಮಳೆಗಾಲದಲ್ಲಿ ಮೋಡಗಳೇ ಬೆಟ್ಟಕ್ಕೆ ಬಂದು ಅಪ್ಪಳಿಸುವಂತಿರುತ್ತವೆ.

ಬೆಟ್ಟ ಏರಿ ನಿಂತರೆ, ಒಂದೆಡೆ ಬಿಸ್ಲೆ ವೀವ್ ಪಾಯಿಂಟ್‌, ಮತ್ತೊಂದೆಡೆ ಪುಷ್ಪಗಿರಿಯ ಜೋಡಿ ಬೆಟ್ಟಗಳು, ನಡುವೆ ಹರಿಯುವ ಕುಮಾರ ಧಾರ ಕಾಣುತ್ತದೆ. ಎಡಕ್ಕೆ ನೂರಾರು ಅಡಿ ಎತ್ತರದಿಂದ ಧುಮ್ಮಿಕ್ಕುವ ಮಲ್ಲಳ್ಳಿ ಜಲಪಾತ ಇದೆ. ಬೆಟ್ಟದ ಸುತ್ತಲು ನಿತ್ಯಹರಿದ್ವರ್ಣ ಪಶ್ಚಿಮ ಘಟ್ಟದ ದಟ್ಟ ಅಡವಿ ಕಣ್ಣಿಗೆ ಇಂಪು ನೀಡುತ್ತದೆ. ಕನ್ನಡದ ‘ಗಜಕೇಸರಿ’ ಚಲನಚಿತ್ರದಲ್ಲಿ ಬುಡಕಟ್ಟು ಜನರು ವಾಸಿಸುವ ಹಾಡಿ ಸನ್ನಿವೇಶಗಳನ್ನು ಇಲ್ಲಿ ಚಿತ್ರೀಕರಿಸಲಾಗಿದೆ.

ಪಟ್ಲಬೆಟ್ಟ ಹಾಸನದಿಂದ ಸುಮಾರು 80 ಕಿ.ಮೀ ದೂರದಲ್ಲಿದೆ. ಸಕಲೇಶಪುರ ಮಾರ್ಗವಾಗಿ ಸಾಗಿ ಬಾಳ್ಳುಪೇಟೆ ಬಳಿ ಎಡಕ್ಕೆ, ನಂತರ, ಮಾಗಲು, ಯಸಳೂರು, ಉಚ್ಚಂಗಿ, ಕೂಡುರಸ್ತೆ, ಬಿಸ್ಲೆ ರಸ್ತೆಯಲ್ಲಿ ಮುಂದೆ ಸಾಗಿದರೆ ಬಿಸ್ಲೆ ವೀವ್‌ ಪಾಯಿಂಟ್‌ಗೂ ಮುನ್ನ (ಇಲ್ಲಿ ಎಡಕ್ಕೆ 2 ಕಿ.ಮೀ. ಕಲ್ಲು ರಸ್ತೆಯಲ್ಲಿ ಸಾಗಬೇಕು) ಪಟ್ಲ ಬೆಟ್ಟ ಸಿಗುತ್ತದೆ. ಬೆಟ್ಟದವರೆಗೂ ವಾಹನಗಳಲ್ಲಿ ಸಾಗಬಹುದು. ಈ ಮಾರ್ಗವಾಗಿ ಬೆಳಿಗ್ಗೆ ಮತ್ತು ಸಂಜೆ ಬಸ್‌ ಸಂಚರಿಸುತ್ತದೆ.

ಪಟ್ಲ ಬೆಟ್ಟದಿಂದ 3 ಕಿ.ಮೀ ವ್ಯಾಪ್ತಿಯೊಳಗೆ ಮಲ್ಮನೆ, ಗಿರಿಮನೆ ಹಾಗೂ ಒಡ್ಡಿಗದ್ದೆ ಹೋಂ ಸ್ಟೇಗಳಿವೆ. ಅಲ್ಲಿಂದ 8 ಕಿ.ಮೀ ದೂರದ ವನಗೂರು ಬಳಿ ಕಸರ್ಗಾಲಿ ಹೋಂ ಸ್ಟೇ ಇದೆ.

–ಕೆ. ಎಸ್‌. ಸುನೀಲ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT