ಶನಿವಾರ, ಮೇ 30, 2020
27 °C

Explainer | ಕೋವಿಡ್-19: ವಿಜ್ಞಾನಿಗಳ ಸಲಹೆ ಸರ್ಕಾರಕ್ಕೆ ಕೇಳಿದ್ದು ತಿಂಗಳ ಬಳಿಕ

ನಿತಿನ್‌ ಸೇಠಿ, ಕುಮಾರ ಸಂಭವ ಶ್ರೀವಾಸ್ತವ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕೋವಿಡ್‌–19 ಪಿಡುಗನ್ನು ಎದುರಿಸಲು ತಕ್ಕ ಸಿದ್ಧತೆ ಮಾಡಿಕೊಳ್ಳಬೇಕು ಎಂದು ವಿಜ್ಞಾನಿಗಳು ನೀಡಿದ್ದ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸುವಲ್ಲಿ ಭಾರತ ಸರ್ಕಾರ ವಿಳಂಬ ಮಾಡಿತೇ? ವಿಜ್ಞಾನಿಗಳು ನೀಡಿದ ಸಲಹೆಗಳು ಮತ್ತು ಆಂತರಿಕ ಸಭೆಯ ದಾಖಲೆಗಳನ್ನು ವಿಶ್ಲೇಷಿಸಿರುವ ‘ಆರ್ಟಿಕಲ್‌ 14’ (ತನಿಖಾ ಪತ್ರಿಕೋದ್ಯಮ ಪೋರ್ಟಲ್‌) ವರದಿಯು ಈ ಪ್ರಶ್ನೆಗೆ ‘ಹೌದು’ ಎಂಬ ಉತ್ತರ ನೀಡಿದೆ.

‘ನೀವು ಕ್ರಮ ಕೈಗೊಂಡರೆ ಎಲ್ಲವೂ ಸರಿಯಾಗಿರುತ್ತದೆ. ಚರ್ಚೆ ಬಹಳ ಕಾಲದಿಂದ ನಡೆಯುತ್ತಿದೆ. ಆದರೆ, ಯಾವ ಕ್ರಮವನ್ನೂ ಕೈಗೊಳ್ಳಲಾಗಿಲ್ಲ. ಇಲ್ಲ, ಇಲ್ಲ. ನಾವು ಸತ್ಯವನ್ನು ಹೇಳಲೇಬೇಕು’ ಎಂದು ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಏಮ್ಸ್‌) ಮೆಡಿಸಿನ್‌ ವಿಭಾಗದ ಮುಖ್ಯಸ್ಥ ನವೀತ್‌ ವಿಗ್‌ ಅವರು ಹೇಳಿದ್ದ ಮಾತುಗಳಿವು. ಸಾರ್ವಜನಿಕ ಆರೋಗ್ಯ ಪರಿಣತರ ಕಾರ್ಯಪಡೆಯ ಮಾರ್ಚ್‌ 29ರ ಸಭೆಯಲ್ಲಿ ವಿಗ್‌ ಅವರು ಇತರ ಸದಸ್ಯರಿಗೆ ಈ ಮಾತನ್ನು ಹೇಳಿದ್ದರು. 

‘ಮುಂಬೈ, ಪುಣೆ, ದೆಹಲಿ ಅಥವಾ ಬೆಂಗಳೂರಿನ ಜನರಿಗೆ ನಾವು ಸತ್ಯವನ್ನು ಹೇಳುವುದು ಸಾಧ್ಯವಾಗುತ್ತಿಲ್ಲ ಎಂದಾದರೆ, ದೇಶದ ಎಲ್ಲ 700 ಜಿಲ್ಲೆಗಳ ಜನರಿಗೆ ಮನವರಿಕೆ ಮಾಡಿಕೊಡುವುದು ಹೇಗೆ’ ಎಂದು ಕಾರ್ಯಪಡೆಯ ಇನ್ನೊಬ್ಬ ಸದಸ್ಯ ಅದೇ ಸಭೆಯಲ್ಲಿ ಪ್ರಶ್ನಿಸಿದ್ದರು. 

ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್‌ 24ರಂದು ರಾಷ್ಟ್ರವ್ಯಾಪಿ ಲಾಕ್‌ಡೌನ್‌ ಘೋಷಿಸಿದ್ದರು. ಅದಾದ ನಾಲ್ಕು ದಿನಗಳ ಬಳಿಕ ಕಾರ್ಯಪಡೆಯ ಸಭೆ ಏಮ್ಸ್‌ನಲ್ಲಿ ನಡೆದಿತ್ತು. 

ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್‌ನ (ಐಸಿಎಂಆರ್‌) ಸೋಂಕುಶಾಸ್ತ್ರ ಮತ್ತು ಸಾಂಕ್ರಾಮಿಕ ರೋಗಗಳ ವಿಭಾಗದ ಮುಖ್ಯಸ್ಥ ರಮಣ್‌ ಗಂಗಾಖೇಡ್ಕರ್‌ ಅವರೂ ಕಾರ್ಯಪಡೆಯ ಸದಸ್ಯರಲ್ಲಿ ಒಬ್ಬರು.

ಯಾವುದೇ ಯೋಜನೆ ಇಲ್ಲದೆ ಲಾಕ್‌ಡೌನ್‌ ಘೋಷಣೆ ಮಾಡಿದ ಸರ್ಕಾರವು, ಕೊರೊನಾ ವೈರಾಣು ಸೋಂಕಿತರ ಪರೀಕ್ಷೆಗೆ ಮಾನದಂಡವನ್ನೇ ರೂಪಿಸಿರಲಿಲ್ಲ ಎಂಬುದು ಆ ಸಭೆಯ ದಾಖಲೆಗಳ ಪರಿಶೀಲನೆಯಿಂದ ವೇದ್ಯವಾಗುತ್ತದೆ. ಎಲ್ಲವೂ ಗೊಂದಲಮಯವಾಗಿತ್ತು; ಮುಂಚಿತವಾಗಿ ಸಲಹೆ ನೀಡಿದ್ದರೂ ಯಾವ ಕ್ರಮವನ್ನೂ ಕೈಗೊಂಡಿಲ್ಲ ಎಂಬ ವಿಚಾರದಲ್ಲಿ ಪರಿಣತರು ಹತಾಶೆಗೊಂಡಿದ್ದರು. 

ಲಾಕ್‌ಡೌನ್‌ ಹೇರಿಕೆಯ ವಿಚಾರದಲ್ಲಿ, ಹಿರಿಯ ವಿಜ್ಞಾನಿಗಳ ಶಿಫಾರಸುಗಳನ್ನು ಕೂಡ ಸರ್ಕಾರವು ನಿರ್ಲಕ್ಷಿಸಿತು ಎಂಬುದನ್ನೂ ದಾಖಲೆಗಳು ತೋರಿಸುತ್ತವೆ. ಈಗ ಜಾರಿಯಲ್ಲಿರುವ ‘ಹೇರಿಕೆ’ಯ ಲಾಕ್‌ಡೌನ್‌ ಬದಲಿಗೆ, ‘ಸಮುದಾಯ ಮತ್ತು ನಾಗರಿಕ ಸಮಾಜದ ನೇತೃತ್ವದ ಸ್ವಯಂ ಪ್ರತ್ಯೇಕವಾಸ ಮತ್ತು ಸ್ವಯಂ ನಿಗಾ’ ಧೋರಣೆಯನ್ನು ಅನುಸರಿಸಬೇಕು ಎಂದು ವಿಜ್ಞಾನಿಗಳು ಹೇಳಿದ್ದರು. ಫೆಬ್ರುವರಿಯಲ್ಲಿ ನಡೆಸಿದ ಸಂಶೋಧನೆಯ ಆಧಾರದಲ್ಲಿ ಈ ಸಲಹೆ ನೀಡಲಾಗಿತ್ತು. 


ನಿತಿನ್‌ ಸೇಠಿ

ಭಾರತದಲ್ಲಿ ಕೊರೊನಾ ವೈರಾಣು ಸೋಂಕು ಭಾರಿ ಪ್ರಮಾಣದಲ್ಲಿ ಪಸರಿಸಲಿದೆ ಮತ್ತು ಅದನ್ನು ಎದುರಿಸಲು ಈವರೆಗೆ ಕೈಗೊಂಡಿರುವ ಕ್ರಮಗಳು ಏನೇನೂ ಸಾಲುವುದಿಲ್ಲ ಎಂದು ಸಂಶೋಧನೆಯು ಎಚ್ಚರಿಕೆ ನೀಡಿತ್ತು. ಪರೀಕ್ಷೆ ಮತ್ತು ಪ್ರತ್ಯೇಕವಾಸ ಸೌಲಭ್ಯಗಳನ್ನು ದೊಡ್ಡ ಪ್ರಮಾಣದಲ್ಲಿ ಹೆಚ್ಚಿಸಬೇಕು, ದೇಶವ್ಯಾಪಿ ನಿಗಾ ವ್ಯವಸ್ಥೆಯೊಂದನ್ನು ರೂಪಿಸಬೇಕು ಮತ್ತು ಆರೋಗ್ಯ ಕಾರ್ಯಕರ್ತರಿಗೆ ಬೇಕಾದಷ್ಟು ರಕ್ಷಣಾ ಸಾಧನಗಳನ್ನು ವ್ಯವಸ್ಥೆ ಮಾಡಬೇಕು ಎಂದು ವಿಜ್ಞಾನಿಗಳು ಶಿಫಾರಸು ಮಾಡಿದ್ದರು. ಈ ಸಂಶೋಧನೆ ನಡೆಸಿದ ವಿಜ್ಞಾನಿಗಳಲ್ಲಿ ಹಲವರನ್ನು ಕೋವಿಡ್‌ಗೆ ಸಂಬಂಧಿಸಿ ಸರ್ಕಾರ ರಚಿಸಿದ ಕಾರ್ಯಪಡೆಯ ಸದಸ್ಯರನ್ನಾಗಿ ನೇಮಿಸಲಾಗಿದೆ. 

ಸಂಶೋಧನೆ ಮತ್ತು ಈ ವಿಜ್ಞಾನಿಗಳ ಸಲಹೆಯನ್ನು ಒಂದು ತಿಂಗಳಿಗೂ ಹೆಚ್ಚು ಕಾಲ ನಿರ್ಲಕ್ಷಿಸಲಾಯಿತು. ವೈಜ್ಞಾನಿಕವಾದ ಯಾವುದೇ ಕಾರ್ಯತಂತ್ರ ಇಲ್ಲದೆ, ಸಿದ್ಧತೆಯನ್ನೂ ಮಾಡಿಕೊಳ್ಳದೆ, ಬರೇ ನಾಲ್ಕು ತಾಸಿನ ಮೊದಲು ಸೂಚನೆ ಕೊಟ್ಟು ದೇಶವ್ಯಾಪಿ ದಿಗ್ಬಂಧನ ಹೇರಲಾಯಿತು. ಈ ದಿಗ್ಬಂಧನವು ಬಡವರು ಮತ್ತು ವಲಸಿಗರ ಜೀವನೋಪಾಯ, ಆಹಾರ ಬಿಕ್ಕಟ್ಟು ಸೃಷ್ಟಿಸಿತು. 

ವೈಜ್ಞಾನಿಕ ಯೋಜನೆಯೊಂದನ್ನು ಸಿದ್ಧಪಡಿಸಲು ಲಾಕ್‌ಡೌನ್‌ ಅವಧಿಯನ್ನು ಅತ್ಯುತ್ತಮವಾಗಿ ಬಳಸಿಕೊಳ್ಳಬೇಕು ಎಂದು ನೀತಿ ಆಯೋಗದ ಸದಸ್ಯ ವಿನೋದ್‌ ಕೆ. ಪಾಲ್‌ ಅವರು ಏಪ್ರಿಲ್‌ ಮೊದಲ ವಾರದಲ್ಲಿ ಸರ್ಕಾರಕ್ಕೆ ಸಲಹೆ ಕೊಟ್ಟಿದ್ದರು. 

ಹೆಚ್ಚು ಜನ ದಟ್ಟಣೆಯ ಪ್ರದೇಶದಲ್ಲಿ ಸಾಮೂಹಿಕ ಪ್ರತ್ಯೇಕವಾಸ, ಬಡವರಿಗೆ ಮನೆಮನೆಗೆ ಆಹಾರ ಪೂರೈಕೆ, ಸೋಂಕು ಇರುವ ಕ್ಲಸ್ಟರ್‌ಗಳಲ್ಲಿ ತ್ವರಿತವಾಗಿ ಪರೀಕ್ಷೆ, ಜಿಲ್ಲೆಗಳಲ್ಲಿ ಕೊರೊನಾ ಪಸರಿಸುವಿಕೆ ಹೇಗಿದೆ ಎಂಬುದನ್ನು ತಿಳಿದುಕೊಳ್ಳುವ ವ್ಯವಸ್ಥೆ, ತೀವ್ರ ನಿಗಾ ಘಟಕಗಳ ಸಂಖ್ಯೆ ಹೆಚ್ಚಳ, ಸೋಂಕು ತೀವ್ರಮಟ್ಟಕ್ಕೆ ತಲುಪಿದ ಸಂದರ್ಭ‌ಕ್ಕಾಗಿ ಆಸ್ಪತ್ರೆ ಹಾಸಿಗೆಗಳನ್ನು ಸಜ್ಜುಗೊಳಿಸುವುದು ಎಲ್ಲವೂ ಈ ಯೋಜನೆಯಲ್ಲಿ ಇರಬೇಕು ಎಂದು ಪಾಲ್‌ ಸಲಹೆ ಕೊಟ್ಟಿದ್ದರು. ಇಂತಹ ಕಾರ್ಯಯೋಜನೆ ಸಿದ್ಧಪಡಿಸಲು ಸರ್ಕಾರಕ್ಕೆ ಒಂದು ವಾರ ಬೇಕಾಗಬಹುದು ಎಂದೂ ಅವರು ಸೂಚಿಸಿದ್ದರು.

ಪಾಲ್‌ ಅವರು ನೀಡಿದ್ದ ಸಲಹೆಗಳು ಹೊಸ ವಿಚಾರಗಳೇನೂ ಆಗಿರಲಿಲ್ಲ. ವಿಜ್ಞಾನಿಗಳು ಫೆಬ್ರುವರಿಯಲ್ಲಿ ನಡೆಸಿದ್ದ ಸಂಶೋಧನೆಯು ಈ ಶಿಫಾರಸುಗಳನ್ನೇ ಮುಂದಿಟ್ಟಿತ್ತು. ಕೋವಿಡ್‌ ಲಕ್ಷಣಗಳು ಇರುವ ಪ್ರತಿ ಇಬ್ಬರಲ್ಲಿ ಒಬ್ಬರನ್ನು 48 ತಾಸುಗಳೊಳಗೆ ಪ್ರತ್ಯೇಕವಾಸಕ್ಕೆ ಕಳುಹಿಸಲು ಸಾಧ್ಯವಾಗಬೇಕು. ಅದು ಸಾಧ್ಯವಾದರೆ, ಪಿಡುಗಿನ ಪಸರಿಸುವಿಕೆಯು ಶೇ 62ರಷ್ಟು ಕಡಿಮೆ ಆಗುತ್ತದೆ. ಪಿಡುಗು ಗರಿಷ್ಠ ಮಟ್ಟಕ್ಕೆ ತಲುಪಿದ ಸಂದರ್ಭದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಕಮ್ಮಿ ಇರುತ್ತದೆ ಎಂಬುದು ವಿಜ್ಞಾನಿಗಳ ವಾದವಾಗಿತ್ತು. 

ತಾನೇ ನಿಯೋಜಿಸಿದ ವಿಜ್ಞಾನಿಗಳ ಸಲಹೆಯನ್ನು ಗಣನೆಗೆ ತೆಗೆದುಕೊಳ್ಳಲು ಸರ್ಕಾರಕ್ಕೆ ಒಂದು ತಿಂಗಳು ಬೇಕಾಯಿತು. 

ಇದಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಆರೋಗ್ಯ ಸಚಿವಾಲಯ ಮತ್ತು ಐಸಿಎಂಆರ್‌ಗೆ ‘ಆರ್ಟಿಕಲ್‌ 14’ ಕಳುಹಿಸಿದೆ. ಹಲವು ಬಾರಿ ಸಂಪರ್ಕಿಸಿ ಉತ್ತರ ಪಡೆಯಲು ಯತ್ನಿಸಲಾಗಿದೆ. ಆದರೆ, ಯಾವುದೇ ಪ್ರತಿಕ್ರಿಯೆ ಬಂದಿಲ್ಲ. 

ಫೆಬ್ರುವರಿ: ಸಂಶೋಧನೆ ಮತ್ತು ಎಚ್ಚರಿಕೆಗಳು
ಕೊರೊನಾವೈರಸ್ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಜನವರಿಯಲ್ಲಿ ವಿಶ್ವದ ಎಲ್ಲಾ ರಾಷ್ಟ್ರಗಳಿಗೂ ಸೂಚನೆ ನೀಡಿತ್ತು. ಜನವರಿ 30ರ ವೇಳೆಗೆ ಭಾರತದಲ್ಲಿ ಮೊದಲ ಕೋವಿಡ್–19 ಪ್ರಕರಣ ಪತ್ತೆಯಾಯಿತು. ಇದೇ ವೇಳೆಗೆ ಐಸಿಎಂಆರ್‌ ಸೇರಿದಂತೆ ಭಾರತದ ವಿವಿಧ ವೈಜ್ಞಾನಿಕ ಸಂಸ್ಥೆಗಳ ವಿಜ್ಞಾನಿಗಳು, ಭಾರತವು ಕೋವಿಡ್–19 ಎದುರಿಸಲು ಹೇಗೆ ಸಿದ್ಧವಾಗಬೇಕು ಎಂಬುದರ ಸಾಧ್ಯತೆ ಬಗ್ಗೆ ಸಂಶೋಧನೆ ನಡೆಸಲಾರಂಭಿಸಿದ್ದರು. 

ಫೆಬ್ರುವರಿ ಕೊನೆಯ ವಾರದ ಹೊತ್ತಿಗೆ ಎರಡು ಸಂಶೋಧನಾ ವರದಿಗಳು ಸಿದ್ಧವಾಗಿದ್ದವು. ಒಂದು ಸಂಶೋಧನೆಯು ಪರಿಸ್ಥಿತಿಯ ಪರಿಶೀಲನೆಯ ವರದಿಯಾಗಿತ್ತು. ಮತ್ತೊಂದು ಕೋವಿಡ್–19 ನ್ನು ಎದುರಿಸುವ ಮಾದರಿ ವಿಧಾನಗಳ ಫಲಿತಾಂಶದ ವರದಿಯಾಗಿತ್ತು. ಈ ಎರಡೂ ವರದಿಗಳನ್ನು ‘ಇಂಡಿಯನ್ ಜರ್ನಲ್ ಆಫ್ ಮೆಡಿಕಲ್ ರಿಸರ್ಚ್’ನಲ್ಲಿ ಪ್ರಕಟಿಸಲಾಗಿತ್ತು. ಅಲ್ಲದೆ ಎರಡೂ ವರದಿಗಳನ್ನು ಸರ್ಕಾರದ ಮುಂದೆ ಇರಿಸಲಾಗಿತ್ತು.

‘ದಿ 2019 ನೋವೆಲ್ ಕೊರೊನಾವೈರಸ್ ಡಿಸೀಸ್ ಪ್ಯಾಂಡೆಮಿಕ್; ಎ ರಿವ್ಯೂ ಆಫ್‌ ದಿ ಕರೆಂಟ್ ಎವಿಡೆನ್ಸ್’ ಎಂಬುದು ಮೊದಲ ಸಂಶೋಧನಾ ವರದಿ. ಇದನ್ನು ಕೇಂದ್ರ ಸರ್ಕಾರದ ಆರೋಗ್ಯ ಸಂಶೋಧನೆಗಳ ಇಲಾಖೆಯ ಪ್ರಣಬ್ ಚಟರ್ಜಿ, ಅನೂಪ್ ಅಗರ್ವಾಲ್ ಮತ್ತು ಸ್ವರೂಪ್ ಸರ್ಕಾರ್, ಮೌಲಾನಾ ಆಜಾದ್ ವೈದ್ಯಕೀಯ ಕಾಲೇಜ್‌ನ ನಾಜಿಯಾ ನಾಗಿ, ಕೇಂದ್ರ ಸರ್ಕಾರದ ಟಿಎಚ್‌ಎಸ್‌ಟಿಐನ ಬಾಬಾತೋಶ್ ದಾಸ್, ಡಬ್ಲ್ಯುಎಚ್‌ಒನ ಸಯಾಂತನ್ ಬ್ಯಾನರ್ಜಿ, ಐಸಿಎಂಆರ್‌ನ ನಿವೇದಿತಾ ಗುಪ್ತಾ ಮತ್ತು ರಮಣ್ ಆರ್.ಗಂಗಾಖೇಡ್ಕರ್‌ ಅವರು ಸಿದ್ಧಪಡಿಸಿದ್ದರು.

ಚೀನಾದಲ್ಲಿ ಜಾರಿಗೆ ತಂದಿದ್ದಂತಹ ಲಾಕ್‌ಡೌನ್ ಜಾರಿಗೆ ತರುವುದು ಬೇಡ ಎಂದು ಈ ವರದಿ ಹೇಳಿತ್ತು. ‘ಸರ್ಕಾರ ಹೇರುವ ಒತ್ತಾಯಪೂರ್ವಕವಾದ ಪ್ರತ್ಯೇಕವಾಸದಿಂದ ಉಪಯೋಗವಿಲ್ಲ. ಬದಲಿಗೆ ಜನರೇ ಸ್ವಯಂಪ್ರೇರಿತರಾಗಿ ಸ್ವಯಂಪ್ರತ್ಯೇಕವಾಸ ಮಾಡಬೇಕು. ಕೋವಿಡ್–19ನಂತಹ ಮಹಾಸೋಂಕಿನ ಸಂದರ್ಭದಲ್ಲಿ ಇದು ಅತ್ಯಂತ ಸುಸ್ಥಿರವಾದ ತಂತ್ರ’ ಎಂದು ಈ ವರದಿಯು ಶಿಫಾರಸು ಮಾಡಿತ್ತು.

ಪ್ರುಡೆಂಟ್ ಪಬ್ಲಿಕ್ ಹೆಲ್ತ್ ಇಂಟರ್‌ವೆನ್ಷನ್‌ ಸ್ಟ್ರಾಟೆಜೀಸ್ ಟು ಕಂಟ್ರೋಲ್ ದಿ ಕೊರೊನಾವೈರಸ್ ಡಿಸೀಸ್ 2019 ಟ್ರಾನ್ಸ್‌ಮಿಷನ್ ಇನ್ ಇಂಡಿಯಾ: ಎ ಮ್ಯಾಥಮೆಟಿಕಲ್ ಮಾಡೆಲ್ ಬೇಸ್ಡ್‌ ಅಪ್ರೋಚ್’ ಎಂಬುದು ಎರಡನೇ ಸಂಶೋಧನಾ ವರದಿ. ಇದನ್ನು ಕೇಂದ್ರ ಸರ್ಕಾರದ ಆರೋಗ್ಯ ಸಂಶೋಧನೆಗಳ ಇಲಾಖೆಯ ಅನೂಪ್ ಅಗರ್ವಾಲ್, ಅಮರ್ತ್ಯ ಚೌಧರಿ ಮತ್ತು ಸ್ವರೂಪ್ ಸರ್ಕಾರ್, ಐಸಿಎಂಆರ್‌ನ ತರುಣ್ ಭಟ್ನಾಗರ್, ಮನೋಜ್ ಮುರ್ಹೇಕರ್, ರಮಣ್ ಆರ್.ಗಂಗಾಖೇಡ್ಕರ್ ಅವರು ಸಿದ್ಧಪಡಿಸಿದ್ದರು.

ದೇಶದ ನಾಲ್ಕು ಮಹಾನಗರಗಳಾದ ದೆಹಲಿ, ಮುಂಬೈ, ಕೋಲ್ಕತ್ತ ಮತ್ತು ಬೆಂಗಳೂರಿನಲ್ಲಿ ಸೋಂಕು ಹೇಗೆ ಹರಡಬಹದು ಎಂಬುದರ ಸಂಭಾವ್ಯ ನಕ್ಷೆಯನ್ನು ಈ ತಂಡವು ಸಿದ್ಧಪಡಿಸಿತ್ತು. ‘ಯಾವುದೇ ಮುನ್ನೆಚ್ಚರಿಕಾ ಕ್ರಮವಿಲ್ಲದೇ ಇದ್ದರೆ, ಸೋಂಕಿನ ಉತ್ತುಂಗದ ಅವಧಿಯಲ್ಲಿ ದೆಹಲಿ ಒಂದರಲ್ಲೇ ಸುಮಾರು 15 ಲಕ್ಷ ಜನರಿಗೆ ಸೋಂಕು ತಗಲುತ್ತದೆ. ಸೋಂಕು ದೃಢಪಟ್ಟ ಇಬ್ಬರು ವ್ಯಕ್ತಿಗಳಲ್ಲಿ ಒಬ್ಬರನ್ನು, ಲಕ್ಷಣಗಳು ಕಾಣಿಸಿಕೊಂಡ ಮೂರನೇ ದಿನದೊಳಗೆ ಪ್ರತ್ಯೇಕವಾಸಕ್ಕೆ ಹಾಕಬೇಕು. ಆಗ ಒಟ್ಟು ಸೋಂಕಿನ ಪ್ರಮಾಣವನ್ನು ಶೇ 62ರಷ್ಟು ಕಡಿಮೆ ಮಾಡಬಹದು’ ಎಂದು ವರದಿಯು ಶಿಫಾರಸು ಮಾಡಿತ್ತು.

ಫೆಬ್ರುವರಿಯಲ್ಲಿ ಸರ್ಕಾರವು ಈ ಸಂಶೋಧನೆಗಳ ಯಾವ ಶಿಫಾರಸುಗಳನ್ನೂ ಪರಿಗಣಿಸಲೇ ಇಲ್ಲ.

‘ಭಾರತದ ಸಂದರ್ಭದಲ್ಲಿ ಲಾಕ್‌ಡೌನ್‌, ಅಂತರ ಕಾಯ್ದುಕೊಳ್ಳುವ ಅವಕಾಶವನ್ನು ಶ್ರೀಮಂತರಿಗೆ ಮಾತ್ರವೇ ನೀಡುತ್ತದೆ. ಅವರು ತೀರಾ ಯೋಜಿತ, ಅತ್ಯಂತ ಕಡಿಮೆ ಜನಸಾಂದ್ರತೆ ಇರುವ ಪ್ರದೇಶಗಳಲ್ಲಿ ವಾಸಿಸುವ ಕಾರಣ ಇದು ಸಾಧ್ಯವಾಗುತ್ತದೆ. ಸೋಂಕು ಹರಡುವುದನ್ನು ಇದು ಸ್ವಲ್ಪಮಟ್ಟಿಗೆ ತಡೆಯುತ್ತದೆ’ ಎಂದು ಈ ವಿಜ್ಞಾನಿಗಳ ತಂಡದಲ್ಲಿದ್ದ ಒಬ್ಬರು ಹೇಳಿದ್ದಾರೆ. ತಮ್ಮ ಹೆಸರು ಬಹಿರಂಗಪಡಿಸದೇ ಇರಲು ಅವರು ಬಯಸಿದ್ದಾರೆ.

‘ಆದರೆ ಬಡವರ ಸಂದರ್ಭದಲ್ಲಿ, ಸಮುದಾಯದ ಒಳಗೇ ಸೋಂಕು ಹರಡಲು ಲಾಕ್‌ಡೌನ್ ಮತ್ತಷ್ಟು ಇಂಬು ನೀಡುತ್ತದೆ. ಮನೆ–ಮನೆ ತಪಾಸಣೆ ಇಲ್ಲದ ಕಾರಣ ಮತ್ತು ತ್ವರಿತ ಪ್ರತ್ಯೇಕವಾಸ ಸಾಧ್ಯವಿಲ್ಲದ ಕಾರಣ ಹೀಗಾಗುತ್ತದೆ. ನಗರಪ್ರದೇಶಗಳಲ್ಲಿ ಬಡವರು ಅತ್ಯಂತ ಕಡಿಮೆ ವಿಸ್ತೀರ್ಣದ ಪ್ರದೇಶದಲ್ಲಿ ವಾಸಿಸುತ್ತಾರೆ. ಸಾರ್ವಜನಿಕ ಶೌಚಾಲಯದಂತಹ ಮೂಲಸೌಕರ್ಯಗಳನ್ನು ಅವಲಂಬಿಸಿರುತ್ತಾರೆ. ಸಂಭಾವ್ಯ ಕೋವಿಡ್–19 ರೋಗಿಯು ಲಾಕ್‌ಡೌನ್‌ನ ಕಾರಣ ಸಾರ್ವಜನಿಕ ಶೌಚಾಲಯವನ್ನೇ ಹಲವು ವಾರ ಬಳಸುತ್ತಾನೆ ಎಂದಿಟ್ಟುಕೊಳ್ಳಿ. ಆ ಶೌಚಾಲಯವನ್ನು ಪ್ರತಿದಿನ ನೂರು ಜನ ಬಳಸಿದರೆ, ಸೋಂಕು ಅವರಿಗೆಲ್ಲರಿಗೂ ಹರಡುತ್ತದೆ. ಲಾಕ್‌ಡೌನ್‌ನ ಕಾರಣ ಸೋಂಕಿತ ವ್ಯಕ್ತಿ ಸಂಬಂಧಪಟ್ಟ ಪ್ರಾಧಿಕಾರವನ್ನು ಸಂಪರ್ಕಿಸಲು ಸಾಧ್ಯವೇ ಆಗುವುದಿಲ್ಲ’ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

 

ಮಾರ್ಚ್‌: ಕಾರ್ಯಪಡೆ ಮತ್ತು ಯೋಜಿತವಲ್ಲದ ಲಾಕ್‌ಡೌನ್
ಮಾರ್ಚ್ 18ರಂದು ಕೇಂದ್ರ ಸರ್ಕಾರವು ವಿಜ್ಞಾನಿಗಳು ಮತ್ತು ಸಾರ್ವಜನಿಕ ಆರೋಗ್ಯ ತಜ್ಞರನ್ನು ಒಳಗೊಂಡ 21 ಸದಸ್ಯರ ‘ಕೋವಿಡ್–19 ರಾಷ್ಟ್ರೀಯ ಕಾರ್ಯಪಡೆ’ ರಚಿಸಿತು. ಈ ಎರಡೂ ಸಂಶೋಧನಾ ತಂಡಗಳಲ್ಲಿ ಇದ್ದ ವಿಜ್ಞಾನಿಗಳಲ್ಲಿ ನಾಲ್ವರನ್ನು ಸರ್ಕಾರವು, ಕಾರ್ಯಪಡೆಗೆ ನೇಮಕ ಮಾಡಿತ್ತು. ಕಾರ್ಯಪಡೆಯಲ್ಲಿ ಸ್ವರೂಪ್ ಸರ್ಕಾರ್, ರಮಣ್ ಆರ್. ಗಂಗಾಕೇದ್ಕರ್, ತರುಣ್ ಭಟ್ನಾಗರ್ ಮತ್ತು ಮನೋಜ್ ಮುರ್ಹೇಕರ್ ಸ್ಥಾನ ಪಡೆದಿದ್ದರು. ನೀತಿ ಆಯೋಗದ ಸದಸ್ಯ ವಿನೋದ್ ಕೆ.ಪೌಲ್ ಅವರು ಈ ಕಾರ್ಯಪಡೆಯ ಮುಖ್ಯಸ್ಥ.

ಕೋವಿಡ್–19 ತಡೆಹಿಡಿಯುವ ಬಗ್ಗೆ ಚರ್ಚೆಗಳು ನಡೆಯುತ್ತಿರುವ ಹೊತ್ತಿನಲ್ಲೇ ಮಾರ್ಚ್‌ 24ರಂದು ಪ್ರಧಾನಿ ನರೇಂದ್ರ ಮೋದಿ ಅವರು ದೇಶವ್ಯಾಪಿ 21 ದಿನಗಳ ಲಾಕ್‌ಡೌನ್ ಘೋಷಿಸಿದರು. ಇದಾಗಿ ನಾಲ್ಕು ದಿನಗಳ ನಂತರ ಅಂದರೆ, ಮಾರ್ಚ್ 28ರಂದು ಕಾರ್ಯಪಡೆ ಸಭೆ ಸೇರಿತು.

ವೈಜ್ಞಾನಿಕವಾಗಿ ಯೋಜಿತವಲ್ಲದ ರೀತಿಯಲ್ಲಿ ಲಾಕ್‌ಡೌನ್ ಜಾರಿಗೆ ತಂದದ್ದರ ಬಗ್ಗೆ ಏಮ್ಸ್‌ನ ಔಷಧಗಳ ವಿಭಾಗದ ಮುಖ್ಯಸ್ಥ ನವನೀತ್ ವಿಗ್ ಅವರು, ಸಭೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ‘ಮಹಾಸೋಂಕಿಗೆ ಕಾರ್ಯಪಡೆಯ ಪ್ರತಿಕ್ರಿಯೆ ಮತ್ತು ಸ್ಪಂದನೆ ಏನು? ನಾವು ಏನು ಮಾಡುತ್ತಿದ್ದೇವೆ? ನಾವು ಯೋಚನೆ ಮಾಡಬೇಕಾಗಿದೆ. ಈವರೆಗೆ ನಾವು ಏನು ಮಾಡಿದ್ದೇವೆ ಎಂಬುದನ್ನು ಹೇಳಿ’ ಎಂದು ಅವರು ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದರು.

ಕಾರ್ಯಪಡೆ ಮುಖ್ಯಸ್ಥರಾದ ವಿನೋದ್ ಕೆ.ಪೌಲ್, ಉಪಾಧ್ಯಕ್ಷರಾಗಿದ್ದ ಆರೋಗ್ಯ ಕಾರ್ಯದರ್ಶಿ ಪ್ರೀತಿ ಸುದಾನ್ ಮತ್ತು ಐಸಿಎಂಆರ್ ಮಹಾ ನಿರ್ದೇಶಕ ಭಾರ್ಗವ ಅವರು ಸಭೆಗೆ ಗೈರುಹಾಜರಾಗಿದ್ದರು. ಹೀಗಾಗಿ ಗಂಗಾಕೇದ್ಕರ್ ಅವರು ಈ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದ್ದರು. ‘ಇದು ಸರಿಯಾದ ಪ್ರಶ್ನೆ. ಆದರೆ, ನನ್ನನ್ನು ಕೇಳಬೇಡಿ. ನಾನು ಕಾರ್ಯಪಡೆಯ ಮುಖ್ಯಸ್ಥ ಅಲ್ಲ. ಅಲ್ಲದೆ, ನಾನೂ ಇದನ್ನೇ ಪ್ರಶ್ನಿಸಬೇಕೆಂದಿದ್ದೆ’ ಎಂದು ಉತ್ತರಿಸಿದ್ದರು.

‘ಲಾಕ್‌ಡೌನ್‌ನ ಕಾರಣದಿಂದ ಜನರು ಆಸ್ಪತ್ರೆಗೆ ಬರಲು ಸಾಧ್ಯವಾಗುತ್ತಿಲ್ಲ. ಇದೇ ದೊಡ್ಡ ಸಮಸ್ಯೆ‌. ಎಸ್‌ಎಆರ್‌ಐ (ಸೆವೆರ್ ಅಕ್ಯೂಟ್ ರೆಸ್ಪಿರೇಟರಿ ಇಲ್‌ನೆಸ್‌) ರೋಗಿಗಳನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ. ಆದರೆ, ಆಸ್ಪತ್ರೆಗೆ ಬರುತ್ತಿರುವವರ ಸಂಖ್ಯೆ ಅತ್ಯಂತ ಕಡಿಮೆ. ಹೀಗಾಗಿ ಮನೆಮೆನೆಗೆ ಹೋಗಿ ತಪಾಸಣೆ ನಡೆಸಬೇಕಿದೆ. ಇದಕ್ಕಾಗಿ ‘ಸಮಗ್ರ ರೋಗ ಕಣ್ಗಾವಲು ಕಾರ್ಯಕ್ರಮ‍’ವನ್ನು ರಚಿಸಬೇಕೇ ಅಥವಾ ಜಿಲ್ಲಾಡಳಿತಗಳಿಗೇ ಈ ಕೆಲಸವನ್ನು ವಹಿಸಬೇಕೇ ಎಂಬುದೇ ಈಗ ಉಳಿದಿರುವ ಪ್ರಶ್ನೆ. ಇದನ್ನು ಮೊದಲು ನಿರ್ಧರಿಸಬೇಕಿದೆ’ ಎಂದು ಕಾರ್ಯಪಡೆ ಸದಸ್ಯರಲ್ಲಿ ಒಬ್ಬರಾಗಿದ್ದ ಹಿರಿಯ ಸೋಂಕುರೋಗ ವಿಜ್ಞಾನಿ ಹೇಳಿದ್ದರು.


ಕುಮಾರ ಸಂಭವ ಶ್ರೀವಾಸ್ತವ​

ಲಾಕ್‌ಡೌನ್ ಇರುವ ಕಾರಣ ಇನ್‌ಫ್ಲುಯೆಂಜಾನಂತಹ ಸೊಂಕಿತರೂ ಆಸ್ಪತ್ರೆಗೆ ಬರಲಾಗುತ್ತಿಲ್ಲ ಎಂಬುದನ್ನು ಸಭೆಯಲ್ಲಿದ್ದ ಇತರ ತಜ್ಞರು ಒತ್ತಿ ಹೇಳಿದ್ದರು.

ಕೋವಿಡ್–19 ತಗುಲಿದ್ದವರನ್ನು ಪತ್ತೆಮಾಡುವ ವ್ಯವಸ್ಥೆಯನ್ನು ಸರ್ಕಾರವು ಮಾರ್ಚ್‌ ಅಂತ್ಯದ ವೇಳೆಗೂ ರೂಪಿಸಿರಲಿಲ್ಲ. ಲಾಕ್‌ಡೌನ್‌ನಿಂದ ಒಳಿತಿಗಿಂತ ಕೆಡುಕೇ ಆಗಿದೆ. ಸೋಂಕಿತರನ್ನು ಪತ್ತೆ ಮಾಡುವ ಕಾರ್ಯವನ್ನು ವಿಸ್ತರಿಸುವುದು ಹೇಗೆ ಎಂಬುದೂ ನಿರ್ಧಾರವಾಗಿರಿಲಿಲ್ಲ ಎಂಬುದನ್ನು ಸಭೆಯ ಈ ಮಾತುಗಳು ಸ್ಪಷ್ಟಪಡಿಸುತ್ತವೆ. 

ತಪಾಸಣೆ ಸಲುವಾಗಿ ನಡೆಸಬೇಕಿರುವ ಸಮೀಕ್ಷೆ ಮತ್ತು ಸಾಮೂಹಿಕ ಸಮೀಕ್ಷೆಯ ಕ್ರಮಾವಳಿಗಳನ್ನು ಸಭೆಗಳಲ್ಲಿ ಚರ್ಚಿಸಲಾಗಿದೆ. ಯಾರು ಸಮೀಕ್ಷೆ ನಡೆಸಬೇಕು, ಲಾಕ್‌ಡೌನ್ ಅವಧಿಯಲ್ಲಿ ಜನರು ಆಸ್ಪತ್ರೆಗೆ ಬರದೇ ಇರುವಾಗ ಮನೆಮನೆಗೆ ಯಾರು ಹೋಗಬೇಕು ಎಂಬುದು ಚರ್ಚೆಯ ಕೇಂದ್ರವಿಷಯಗಳಾಗಿದ್ದವು.

‘ಜನರು ಆಸ್ಪತ್ರೆಗ ಬರುತ್ತಿಲ್ಲ ಎಂಬುದನ್ನೇ ಎಲ್ಲರೂ ಹೇಳುತ್ತಿದ್ದೇವೆ. ಆದರೆ, ಇದಕ್ಕಾಗಿ ಸಚಿವಾಲಯಗಳು ಏನು ಮಾಡುತ್ತಿವೆ ಎಂಬುದನ್ನೂ ನಾವು ಪರಿಶೀಲಿಸಬೇಕಿದೆ. ಹಲವು ರಾಜ್ಯ ಸರ್ಕಾರಗಳೂ ಆ್ಯಪ್‌ ಆಧಾರಿತ ಸಮೀಕ್ಷೆಯನ್ನು ಆರಂಭಿಸಿವೆ’ ಎಂದು ಸಭೆಯಲ್ಲಿದ್ದ ಮತ್ತೊಬ್ಬ ತಜ್ಞರು ಹೇಳಿದ್ದಾರೆ.

‘ತಪಾಸಣಾ ಕ್ರಮಾವಳಿಗಳು ಅಸ್ತಿತ್ವದಲ್ಲಿ ಇಲ್ಲ. ಇದನ್ನು ನಾನು ಐಸಿಎಂಆರ್ ಮುಖ್ಯಸ್ಥರ ಜತೆ ಮತ್ತು ಇತರ ವಿಜ್ಞಾನಿಗಳ ಜತೆ ಚರ್ಚಿಸುತ್ತೇನೆ’ ಎಂದು ಗಂಗಾಕೇದ್ಕರ್ ಅವರು ಸಭೆಯಲ್ಲಿ ಹೇಳಿದ್ದಾರೆ.

ಆದರೆ, ‘ತಪಾಸಣಾ ಕಾರ್ಯತಂತ್ರವನ್ನು ರೂಪಿಸುವ ಸಭೆ ಇನ್ನಷ್ಟೇ ನಡೆಯಬೇಕಿದೆ. ಮುಂದಿನ ದಿನಗಳಲ್ಲಿ ಐಸಿಎಂಆರ್ ನಡೆಸಲಿರುವ ಸಭೆಗಳಲ್ಲಿ ದೇಶವ್ಯಾಪಿ ತಪಾಸಣಾ ಕಾರ್ಯತಂತ್ರವನ್ನು ರೂಪಿಸಲಾಗುತ್ತದೆ’ ಎಂದು ಸಭೆಯಲ್ಲಿದ್ದ ಐಸಿಎಂಆರ್‌ನ ಹಿರಿಯ ಸೋಂಕುರೋಗ ವಿಜ್ಞಾನಿ ಮಾಹಿತಿ ನೀಡಿದ್ದಾರೆ.

ಏಪ್ರಿಲ್‌: ಫೆಬ್ರುವರಿಯ ಸಂಶೋಧನೆಗಳ ಪರಿಶೀಲನೆ
ಕಾರ್ಯಪಡೆಯ ಮುಖ್ಯಸ್ಥ ಮತ್ತು ನೀತಿ ಆಯೋಗದ ಸದಸ್ಯ ವಿನೋದ್ ಕೆ. ಪೌಲ್ ಅವರು ಎರಡೂ ಸಂಶೋಧನಾ ವರದಿಗಳನ್ನು ಏಪ್ರಿಲ್ ಮೊದಲ ವಾರದಲ್ಲಿ ಪರಿಶೀಲಿಸಿದರು. ನಂತರ ವರದಿಗಳ ಶಿಫಾರಸುಗಳನ್ನು ಸರ್ಕಾರಕ್ಕೆ ಮುಟ್ಟಿಸಿದರು. ವಿಜ್ಞಾನಿಗಳು ತಿಳಿಸಿದ್ದಂತೆ, ‘ಲಾಕ್‌ಡೌನ್‌ನ ಬದಲಿಗೆ, ಸಮುದಾಯ ಆಧರಿತ ಸಮೀಕ್ಷೆ ಮತ್ತು ತ್ವರಿತ ಪ್ರತ್ಯೇಕವಾಸ ಅಗತ್ಯವಿದೆ’ ಎಂದು ಪೌಲ್ ಅವರು ಸರ್ಕಾರಕ್ಕೆ ತಿಳಿಸಿದ್ದರು. 

ಲಾಕ್‌ಡೌನ್ ವಾಪಸ್ ಪಡೆಯಬೇಕು ಎಂದು ಪೌಲ್ ಹೇಳಿರಲಿಲ್ಲ. ಆದರೆ ಲಾಕ್‌ಡೌನ್ ಅವಧಿಯಲ್ಲಿ ಆಗಬೇಕಿದ್ದ ಸಿದ್ಧತೆಗಳು ಮತ್ತು ಮನೆಮನೆ ಸಮೀಕ್ಷೆ ಆಗಿಲ್ಲ ಎಂಬುದಕ್ಕೆ ಅವರು ಒತ್ತು ನೀಡಿ ಹೇಳಿದ್ದರು. 

‘ಅತ್ಯಂತ ತ್ವರಿತಗತಿಯ ಸಮೀಕ್ಷೆ ಮತ್ತು ತಪಾಸಣೆಯನ್ನು ಹೆಚ್ಚಿಸಬೇಕಿದೆ. ಇದರಿಂದ ಸರ್ಕಾರ ರೂಪಿಸಿರುವ ಪ್ರತ್ಯೇಕವಾಸದ ವಾರ್ಡ್‌ಗಳಲ್ಲಿ ರೋಗಿಗಳನ್ನು ಇರಿಸಲು ನೆರವಾಗುತ್ತದೆ. ಸ್ವಯಂಪ್ರತ್ಯೇಕವಾಸ ಮಾಡಲು ಸಾಧ್ಯವಿದ್ದವರು, ಅದಕ್ಕೆ ಮೊರೆ ಹೋಗಲೂ ಅವಕಾಶ ನೀಡಬಹುದು’ ಎಂದು ಅವರು ಹೇಳಿದ್ದರು.

ಕೋವಿಡ್–19 ಹೋರಾಟದ ಆದ್ಯತೆಗಳನ್ನು ಗುರುತಿಸಲು ಮತ್ತು ಮನೆಮನೆ ಸಮೀಕ್ಷೆಯೂ ಸೇರಿದಂತೆ ಅಗತ್ಯ ವಿಷಯಗಳಿಗೆ ಸಂಬಂಧಿಸಿದ ಸಂಶೋಧನೆ ನಡೆಸಲು ಕಾರ್ಯಪಡೆಯು ಸಂಶೋಧನಾ ತಂಡಗಳನ್ನು ಏಪ್ರಿಲ್ 6ರಂದು ರಚಿಸಿತ್ತು. ಏಪ್ರಿಲ್ 14 ಕಳೆದರೂ, ಮನೆಮನೆ ಸಮೀಕ್ಷೆಗೆ ಸಿದ್ಧತೆಗಳು ಅಂತಿಮವಾಗಿಲ್ಲ. ತ್ವರಿತ ತಪಾಸಣೆ ನಡೆಯುತ್ತಿಲ್ಲ. ಬದಲಿಗೆ ಕೇಂದ್ರ ಸರ್ಕಾರವು ಲಾಕ್‌ಡೌನ್‌ ಅನ್ನು ಮೇ 3ರವರೆಗೆ ವಿಸ್ತರಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು