ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಮೈಲಿಗಲ್ಲುಗಳು.....

Last Updated 14 ಆಗಸ್ಟ್ 2022, 20:32 IST
ಅಕ್ಷರ ಗಾತ್ರ

ದೇಶ ಸ್ವಾತಂತ್ರ್ಯ ಪಡೆದು 75 ವರ್ಷಗಳಾಗುತ್ತಿವೆ. ಅಮೃತ ಮಹೋತ್ಸವದ ಈ ಸಂಭ್ರಮದಲ್ಲಿ ಭಾರತ ಸಾಗಿಬಂದ ಹಾದಿಯ ಮಹತ್ವದ ಮೈಲಿಗಲ್ಲುಗಳನ್ನು ಇಲ್ಲಿ ದಾಖಲಿಸಲಾಗಿದೆ. ರಾಜಕೀಯ, ವಿಜ್ಞಾನ–ತಂತ್ರಜ್ಞಾನ, ಕ್ರೀಡೆ, ಕಲೆ... ಹೀಗೆ ವಿವಿಧ ಕ್ಷೇತ್ರಗಳಲ್ಲಿ ಸಂಭ್ರಮಪಡುವಂಥ, ಹೆಮ್ಮೆ ಪಡುವಂಥ ಕ್ಷಣಗಳನ್ನು ಇಲ್ಲಿ ಚುಟುಕಾಗಿ ತೆರೆದಿಡಲಾಗಿದೆ.

1950: ಸಂವಿಧಾನ ರಚನಾ ಸಮಿತಿಯು 1949ರ ನವೆಂಬರ್‌ 26ರಂದು ಭಾರತದ ಸಂವಿಧಾನವನ್ನು ಅಂಗೀಕರಿಸಿತು. 1950ರ ಜನವರಿ 26ರಂದು ಸಂವಿಧಾನ ಅಧಿಕೃತವಾಗಿ ಜಾರಿಗೆ ಬಂತು.

1951: ಮೊದಲ ಸಾರ್ವತ್ರಿಕ ಚುನಾವಣೆ. ಒಟ್ಟು 489 ಸ್ಥಾನಗಳಲ್ಲಿ 364 ಸ್ಥಾನಗಳನ್ನು ಗೆದ್ದುಕೊಂಡ ಕಾಂಗ್ರೆಸ್‌ ಅಧಿಕಾರ ಹಿಡಿಯಿತು. ಜವಾಹರಲಾಲ್‌ ನೆಹರೂ ದೇಶದ ಮೊದಲ ಪ್ರಧಾನಿಯಾದರು.

1951: ಮೊದಲ ಪಂಚವಾರ್ಷಿಕ ಯೋಜನೆ ಆರಂಭವಾಯಿತು. ಈ ಯೋಜನೆಯ ಬಹುಪಾಲು ಮೊತ್ತವನ್ನು ರೈಲು ಮಾರ್ಗಗಳ ಪುನರ್ ನಿರ್ಮಾಣ, ನೀರಾವರಿ ಯೋಜನೆಗಳು ಮತ್ತು ಕಾಲುವೆಗಳ ನಿರ್ಮಾಣಕ್ಕೆ ಬಳಸಲಾಯಿತು

1951: ಮೊದಲ ಏಷ್ಯನ್‌ ಗೇಮ್ಸ್‌ ನವದೆಹಲಿಯಲ್ಲಿ ನಡೆಯಿತು. 11 ರಾಷ್ಟ್ರಗಳು ಭಾಗವಹಿಸಿದ್ದವು. ಭಾರತ 15 ಚಿನ್ನ ಸೇರಿ ಒಟ್ಟು 51 ಪದಕಗಳನ್ನು ಗೆದ್ದುಕೊಂಡು ಎರಡನೇ ಸ್ಥಾನ ಪಡೆಯಿತು

1952: ಮಹಾರಾಷ್ಟ್ರದ ಕಶೋಬಾ ಡಿ. ಜಾಧವ್‌, ಹೆಲ್ಸಿಂಕಿ ಒಲಿಂಪಿಕ್ಸ್‌ನ ಕುಸ್ತಿ ಸ್ಪರ್ಧೆ (ಫ್ರೀಸ್ಟೈಲ್‌)ಯಲ್ಲಿ ಕಂಚಿನ ಪದಕ ಗೆದ್ದುಕೊಂಡರು. ಇದು ವೈಯಕ್ತಿಕ ಕ್ರೀಡೆಗಳಲ್ಲಿ ಭಾರತ ಗೆದ್ದುಕೊಂಡ ಮೊದಲ ಪದಕ.

1953 ಆಗಸ್ಟ್‌ 1: ದೇಶದ ಪ್ರಮುಖ ವಿಮಾನಯಾನ ಸಂಸ್ಥೆ ಏರ್‌ ಇಂಡಿಯಾ ರಾಷ್ಟ್ರೀಕರಣಗೊಂಡಿತು. ಸರ್ಕಾರಿ ಸ್ವಾಮ್ಯದಲ್ಲಿ ಏರ್‌ ಇಂಡಿಯಾ ಮತ್ತು ಇಂಡಿಯನ್‌ ಏರ್‌ಲೈನ್ಸ್‌ ಆರಂಭಕ್ಕೆ ಇದು ದಾರಿಮಾಡಿಕೊಟ್ಟಿತು.

1956 ಆಗಸ್ಟ್‌ 4: ದೇಶದ (ಏಷ್ಯಾದ) ಮೊದಲ ಪರಮಾಣು ಸ್ಥಾವರ ‘ಅಪ್ಸರಾ’ ಮುಂಬೈ ಹೊರವಲಯದ ಟ್ರಾಂಬೆಯಲ್ಲಿ ಕಾರ್ಯಾರಂಭ ಮಾಡಿತು. ಈ ಯೋಜನೆಗೆ ಇಂಗ್ಲೆಂಡ್‌ ಸಹಯೋಗ ನೀಡಿತ್ತು.

1956: ಭಾಷಾವಾರು ಆಧಾರದಲ್ಲಿ ರಾಜ್ಯಗಳ ವಿಂಗಡಣೆಗಾಗಿ ‘ರಾಜ್ಯ ಪುನರ್‌ ವಿಂಗಡಣೆ ಕಾಯ್ದೆ’ಯನ್ನು ಸಂಸತ್ತು ಅಂಗೀಕರಿಸಿತು

1959 ಸೆಪ್ಟೆಂಬರ್‌ 15: ದೂರದರ್ಶನ ತನ್ನ ಪ್ರಸಾರ ಆರಂಭಿಸಿತು. 1976ರಲ್ಲಿ ಇದು ಆಕಾಶವಾಣಿಯಿಂದ ಬೇರ್ಪಟ್ಟಿತು.

1958: ಮೆಹಬೂಬ್‌ ಖಾನ್‌ ನಿರ್ದೇಶನದ ‘ಮದರ್‌ ಇಂಡಿಯಾ’ ವಿದೇಶಿ ಭಾಷೆಗಳಲ್ಲಿ ಶ್ರೇಷ್ಠ ಚಿತ್ರವಾಗಿ ಆಸ್ಕರ್‌ ಪ್ರಶಸ್ತಿಗೆ ನಾಮಕರಣಗೊಂಡ ದೇಶದ ಮೊದಲ ಚಲನಚಿತ್ರ ಎನಿಸಿತು.

1961 ಡಿಸೆಂಬರ್‌ 19: ‘ಅಪರೇಷನ್‌ ವಿಜಯ್’ ಕಾರ್ಯಾಚರಣೆ ಮೂಲಕ ಗೋವಾವನ್ನು ಪೋರ್ಚುಗೀಸರ ಆಡಳಿತದಿಂದ ಮುಕ್ತಗೊಳಿಸಲಾಯಿತು. 1510 ರಿಂದ ಗೋವಾ ಪೋರ್ಚಗೀಸರ ವಸಾಹತು ಆಗಿತ್ತು.

1965: ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಲು ‘ಹಸಿರು ಕ್ರಾಂತಿ’ ಯೋಜನೆಗೆ ಚಾಲನೆ ನೀಡಲಾಯಿತು. ಕೃಷಿ ವಿಜ್ಞಾನಿ ಡಾ.ಎಂ.ಎಸ್‌.ಸ್ವಾಮಿನಾಥನ್‌ ‘ಹಸಿರು ಕ್ರಾಂತಿಯ ಪಿತಾಮಹ’ ಎಂಬ ಗೌರವಕ್ಕೆ ಪಾತ್ರರಾದರು. ಕೆಲವೇ ವರ್ಷಗಳಲ್ಲಿ ಆಹಾರ–ಧಾನ್ಯಗಳ ಉತ್ಪಾದನೆ ಪ್ರಮಾಣ ಗಮನಾರ್ಹವಾಗಿ ಹೆಚ್ಚಿತು.

1966: ಮುಂಬೈನ ವೈದ್ಯೆ ರೀಟಾ ಫರಿಯಾ ವಿಶ್ವ ಸುಂದರಿ ಪ್ರಶಸ್ತಿಗೆ ಭಾಜನರಾದ ದೇಶದ (ಮತ್ತು ಏಷ್ಯಾದ) ಮೊದಲ ಸ್ಪರ್ಧಿ ಎನಿಸಿದರು.

1967: ಸಿತಾರ್‌ ಮಾಂತ್ರಿಕ ಪಂಡಿತ್‌ ರವಿ ಶಂಕರ್‌, ಗ್ರ್ಯಾಮಿ ಪುರಸ್ಕಾರಕ್ಕೆ ಪಾತ್ರರಾದ ಭಾರತದ ಮೊದಲ ಕಲಾವಿದ ಎಂಬ ಗೌರವಕ್ಕೆ ಪಾತ್ರರಾದರು.

1969 ಜುಲೈ 19: ಇಂದಿರಾ ಗಾಂಧಿ ನೇತೃತ್ವದ ಸರ್ಕಾರ ಸುಗ್ರೀವಾಜ್ಞೆ ಮೂಲಕ ದೇಶದ ಪ್ರಮುಖ 14 ಬ್ಯಾಂಕ್‌ಗಳ ರಾಷ್ಟ್ರೀಕರಣ ನಿರ್ಧಾರ ತೆಗೆದುಕೊಂಡಿತು. ದೇಶದ ಒಟ್ಟು ಠೇವಣಿಗಳ ಪೈಕಿ ಶೇ 85ರಷ್ಟನ್ನು ಈ ಬ್ಯಾಂಕುಗಳು ಹೊಂದಿದ್ದವು.

1971: ಇಂದಿರಾ ಗಾಂಧಿ ಪ್ರಧಾನಿಯಾಗಿದ್ದ ಅವಧಿಯಲ್ಲಿ ದೇಶದ ವಿವಿಧ ರಾಜ್ಯಗಳ ರಾಜಮನೆತನದವರಿಗೆ ನೀಡಲಾಗುತ್ತಿದ್ದ ರಾಜಧನ (privy purses) ರದ್ದುಗೊಳಿಸಲಾಯಿತು. ಸಂವಿಧಾನದ 26ನೇ ತಿದ್ದುಪಡಿಯ ಅನುಸಾರ ಇದು ಜಾರಿಗೆ ಬಂತು.

1973: ಕೇಶವಾನಂದ ಭಾರತಿ Vs. ಭಾರತ ಸರ್ಕಾರ ಪ್ರಕರಣ ದೇಶದ ಕಾನೂನು ಇತಿಹಾಸದ ಪ್ರಮುಖ ಘಟ್ಟ. ಸಂವಿಧಾನದ ಮೂಲ ಸ್ವರೂಪವನ್ನು ಯಾವುದೇ ಕಾರಣಕ್ಕೆ ಬದಲಾಯಿಸುವಂತಿಲ್ಲ ಎಂದು 13 ಸದಸ್ಯರನ್ನು ಹೊಂದಿದ್ದ ಪೂರ್ಣಪ್ರಮಾಣದ ಪೀಠ 7–6 ಬಹುಮತದ ತೀರ್ಪು ನೀಡಿತು. ಕಾಸರಗೋಡಿನ ಎಡನೀರು ಮಠದ ಸ್ವಾಮೀಜಿಯಾಗಿದ್ದ ಕೇಶವಾನಂದ ಭಾರತಿ (1940–2020) ಸಲ್ಲಿಸಿದ ಅರ್ಜಿಯ ಮೇಲಿನ ವಿಚಾರಣೆ ಇದಾಗಿತ್ತು.

1973: ಹುಲಿಗಳ ಸಂರಕ್ಷಣೆಗಾಗಿ ಜಿಮ್‌ ಕಾರ್ಬೆಟ್‌ ರಾಷ್ಟ್ರೀಯ ಉದ್ಯಾನದಲ್ಲಿ (ಈಗಿನ ಉತ್ತರಾಖಂಡ) ‘ಪ್ರಾಜೆಕ್ಟ್‌ ಟೈಗರ್‌’ ಯೋಜನೆ ರೂಪಿಸಲಾಯಿತು. 2018ರ ಗಣತಿ ಪ್ರಕಾರ ದೇಶದಲ್ಲಿ 2,967 ಹುಲಿಗಳಿವೆ.

1974: ಮೇ 18ರಂದು ರಾಜಸ್ತಾನದ ಪೊಖ್ರಾನ್‌ ಪರೀಕ್ಷಾ ಕೇಂದ್ರದಲ್ಲಿ ಭಾರತ ಮೊದಲ ಬಾರಿ ಯಶಸ್ವಿಯಾಗಿ ಪರಮಾಣು ಬಾಂಬ್‌ ಪರೀಕ್ಷೆ ನಡೆಸಿತು. ‘ಅಪರೇಷನ್‌ ಸ್ಮೈಲಿಂಗ್‌ ಬುದ್ಧ’ ಹೆಸರಿನಲ್ಲಿ ಈ ಪರೀಕ್ಷೆ ನಡೆಸಲಾಯಿತು.

1975: ಭಾರತ ದೇಶಿಯವಾಗಿ ತಯಾರಿಸಿದ ಮೊದಲ ಉಪಗ್ರಹ ’ಆರ್ಯಭಟ’ವನ್ನು ಅಂದಿನ ಸೋವಿಯತ್‌ ರಷ್ಯಾದ ಕಪುಸ್ಟಿನ್‌ ಯಾರ್‌ ಕೇಂದ್ರದಿಂದ ಕಾಸ್ಮೋಸ್‌ 3ಎಂ ರಾಕೆಟ್‌ ಮೂಲಕ ಬಾಹ್ಯಾಕಾಶಕ್ಕೆ ಹಾರಿಸಲಾಯಿತು. ಭಾರತ ಈ ಸಾಧನೆ ಮಾಡಿದ ವಿಶ್ವದ 11 ನೇ ರಾಷ್ಟ್ರವಾಯಿತು.

1975: ಮಲೇಷ್ಯಾದ ಕ್ವಾಲಾಲಂಪುರದಲ್ಲಿ ನಡೆದ ವಿಶ್ವಕಪ್‌ ಹಾಕಿ ಟೂರ್ನಿಯಲ್ಲಿ ಅಜಿತ್‌ ಪಾಲ್‌ ಸಿಂಗ್‌ ನೇತೃತ್ವದ ಭಾರತ ತಂಡ ಚಾಂಪಿಯನ್‌ ಕಿರೀಟ ಧರಿಸಿತು. ಫೈನಲ್‌ನಲ್ಲಿ 2–1 ಗೋಲುಗಳಿಂದ ಪಾಕಿಸ್ತಾನ ಮೇಲೆ ಜಯಗಳಿಸಿತು. ವಿಶ್ವಕಪ್‌ ಹಾಕಿಯಲ್ಲಿ ಭಾರತ ಗೆದ್ದ ಕೊನೆಯ ಪದಕ ಇದಾಗಿದೆ

1980: ಕನ್ನಡಿಗ ಪ್ರಕಾಶ್ ಪಡುಕೋಣೆ ಅವರು ವಿಶ್ವದ ಅಗ್ರ ಕ್ರಮಾಂಕದ ಬ್ಯಾಡ್ಮಿಂಟನ್‌ ಆಟಗಾರ ಎನಿಸಿದರು. ಆ ವರ್ಷ ಪ್ರತಿಷ್ಠಿತ ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್‌ ಓಪನ್‌ ಸಿಂಗಲ್ಸ್ ಪ್ರಶಸ್ತಿ ಗೆದ್ದುಕೊಂಡ ಭಾರತದ ಮೊದಲ ಆಟಗಾರ ಎನಿಸಿದರು. ಫೈನಲ್‌ನಲ್ಲಿ ಇಂಡೊನೇಷ್ಯಾದ ಲೀಮ್‌ ಸ್ವಿ ಕಿಂಗ್ ಅವರನ್ನು ಮಣಿಸಿದರು.

1982 ಗಾಂಧಿ ಚಿತ್ರ ಬಿಡುಗಡೆ, ಚಿತ್ರದಲ್ಲಿ ಕಾಸ್ಟ್ಯೂಮ್ ಡಿಸೈನರ್‌ ಆಗಿದ್ದ ಭಾನು ಅಥೈಯಾ ಆಸ್ಕರ್‌ ಪ್ರಶಸ್ತಿ ಪುರಸ್ಕೃತರಾದ ಮೊದಲ ಭಾರತೀಯರಾದರು. ಬೆನ್‌ ಕಿಂಗ್‌ ಸ್ಲೇ ಗಾಂಧಿ ಪಾತ್ರ ವಹಿಸಿದ್ದರು.

1983 ಜೂನ್‌ 25: ಕಪಿಲ್‌ ದೇವ್‌ ನೇತೃತ್ವದ ಭಾರತ ತಂಡ ಇಂಗ್ಲೆಂಡ್‌ನ ಲಾರ್ಡ್ಸ್‌ನಲ್ಲಿ ನಡೆದ ವಿಶ್ವಕಪ್‌ ಏಕದಿನ ಕ್ರಿಕೆಟ್‌ ಟೂರ್ನಿಯ ಫೈನಲ್‌ನಲ್ಲಿ ಫೆವರೀಟ್‌ ಆಗಿದ್ದ ವೆಸ್ಟ್‌ ಇಂಡೀಸ್‌ ತಂಡವನ್ನು ಮಣಿಸಿ ಟ್ರೋಫಿ ಗೆದ್ದುಕೊಂಡಿತು.

1983: ಮಾರುತಿ ಕಾರು ಮಾರುಕಟ್ಟೆಗೆ. ಇಂಡಿಯನ್‌ ಏರ್‌ಲೈನ್ಸ್‌ನ ಉದ್ಯೋಗಿ, ದೆಹಲಿಯ ಹರಪಾಲ್‌ ಸಿಂಗ್‌ ಮೊದಲನೆಯದಾಗಿ ಕಾರು ಕಿ ಪಡೆದರು.

1984: ಏಪ್ರಿಲ್‌ 3: ವಾಯುಪಡೆ ಅಧಿಕಾರಿ ರಾಕೇಶ್ ಶರ್ಮಾ, ಭಾರತದ ಮೊದಲ ಗಗನಯಾತ್ರಿ ಎನಿಸಿದರು. ರಷ್ಯದ ಇಬ್ಬರು ಗಗನಯಾತ್ರಿಗಳೊಂದಿಗೆ ಅವರು ಸಲ್ಯೂಟ್ ಬಾಹ್ಯಾಕಾಶ ಕೇಂದ್ರದಲ್ಲಿಳಿದರು. ವಿಂಗ್‌ ಕಮಾಂಡರ್‌ ಆಗಿದ್ದಾಗ ವಾಯುಪಡೆಯಿಂದ ನಿವೃತ್ತರಾದರು.

1985: ಜನವರಿ 30ರಂದು ಪಕ್ಷಾಂತರ ನಿಷೇಧ ಕಾಯಿದೆ ಜಾರಿಗೆ ಬಂದಿತು. ರಾಜೀವ್ ಗಾಂಧಿ ಪ್ರಧಾನಿಯಾಗಿದ್ದ ಅವಧಿಯಲ್ಲಿ 52ನೆ ತಿದ್ದುಪಡಿಯ ಮೂಲಕ ಈ ಕಾಯಿದೆಯನ್ನು ಸಂವಿಧಾನದ 10ನೇ ಷೆಡ್ಯೂಲ್‌ನಲ್ಲಿ ಸೇರ್ಪಡೆಗೊಳಿಸಲಾಯಿತು.

1985 ಏಪ್ರಿಲ್‌: ಮಧ್ಯಪ್ರದೇಶದ ಶಾ ಬಾನೊ ಅವರಿಗೆ ಜೀವನಾಂಶ ನೀಡಬೇಕೆಂದು ಪತಿ ಮೊಹಮದ್‌ ಅಹಮದ್‌ ಖಾನ್‌ ಅವರಿಗೆ ಸುಪ್ರೀಂ ಕೋರ್ಟ್‌ ಆದೇಶಿಸಿತು. ಇದು ಶಾ ಬಾನೊ ಪ್ರಕರಣ ಎಂದೇ ಪ್ರಸಿದ್ಧಿ ಪಡೆಯಿತು.

1989: ದೇಶದಲ್ಲಿ ಮತದಾನದ ವಯಸ್ಸನ್ನು 21 ರಿಂದ 18ಕ್ಕೆ ಇಳಿಸಲಾಯಿತು. ಸಂವಿಧಾನದ 61ನೇ ತಿದ್ದುಪಡಿ ಮೂಲಕ ಈ ಕಾಯಿದೆ ಜಾರಿಗೆ ಬಂದಿತು. ರಾಜೀವ್ ಗಾಂಧಿ ಆಗ ಪ್ರಧಾನಿಯಾಗಿದ್ದರು.

1988: ಚೆನ್ನೈನ ವಿಶ್ವನಾಥನ್‌ ಆನಂದ್‌ ಅವರು ದೇಶದ ಮೊದಲ ಚೆಸ್‌ ಗ್ರ್ಯಾಂಡ್‌ಮಾಸ್ಟರ್‌ ಗೌರವಕ್ಕೆ ಪಾತ್ರರಾದರು.

1989 ಮೇ: ಭಾರತದ ಮೊದಲ ಮಧ್ಯಂತರ ಶ್ರೇಣಿಯ ಖಂಡಾಂತರ ಕ್ಷಿಪಣಿ ಅಗ್ನಿಯನ್ನು ಮೊದಲ ಬಾರಿಗೆ ಪರೀಕ್ಷಿಸಲಾಯಿತು.

1991 ನವೆಂಬರ್‌: ಪಿ.ವಿ.ನರಸಿಂಹ ರಾವ್‌ ಸರ್ಕಾರದಲ್ಲಿ ಹಣಕಾಸು ಸಚಿವರಾಗಿದ್ದ ಡಾ.ಮನಮೋಹನ್‌ ಸಿಂಗ್‌ ಅವರು ಆರ್ಥಿಕ ಉದಾರೀಕರಣ ನೀತಿಯನ್ನು ಪ್ರಕಟಿಸಿ, ಅದನ್ನು ಜಾರಿಗೆ ತರುವ ಪ್ರಯತ್ನ ಆರಂಭಿಸಿದರು. ಜಗತ್ತಿನ ದೊಡ್ಡ ಆರ್ಥಿಕ ಶಕ್ತಿಯಾಗಿ ದೇಶ ಹೊರಹೊಮ್ಮಲು ಈ ನಿರ್ಧಾರ ನೆರವಾಯಿತು.

1992: ಪ್ರಸಿದ್ಧ ಹಿಂದಿ ಮತ್ತು ಬಂಗಾಳಿ ಚಿತ್ರ ನಿರ್ದೇಶಕ ಸತ್ಯಜಿತ್‌ ರೇ ಅವರಿಗೆ ಜೀವಮಾನದ ಸಾಧನೆಗಾಗಿ ಗೌರವ ಆಸ್ಕರ್‌ ಪ್ರದಾನ ಮಾಡಲಾಯಿತು.

1992: ಸಂವಿಧಾನದ 73 ಮತ್ತು 74ನೇ ತಿದ್ದುಪಡಿಯೊಡನೆ ಪಂಚಾಯತ್‌ ರಾಜ್‌ ಕಾಯ್ದೆ ಜಾರಿಗೆ ಬಂದಿತು.

1993: ಭಾರತದಲ್ಲಿ ಮೊದಲ ಬಾರಿ ಚುನಾವಣಾ ಗುರುತಿನ ಚೀಟಿ ನೀಡುವ ವ್ಯವಸ್ಥೆ ಜಾರಿಗೆ ಬಂದಿತು. ಟಿ.ಎನ್‌. ಶೇಷನ್‌ ಆಗ ಮುಖ್ಯ ಚುನಾವಣಾ ಆಯುಕ್ತರಾಗಿದ್ದರು.

1994 ಮಾರ್ಚ್‌ 11: ಬೊಮ್ಮಾಯಿ vs ಭಾರತ ಸರ್ಕಾರ ಪ್ರಕರಣ. 1989ರ ಏಪ್ರಿಲ್‌ನಲ್ಲಿ ಅಲ್ಪಮತಕ್ಕಿಳಿದಿದೆ ಎಂದು ತಮ್ಮ ಸರ್ಕಾರವನ್ನು ರಾಜ್ಯಪಾಲ ಪಿ.ವೆಂಕಟಸುಬ್ಬಯ್ಯ ಅವರು ವಜಾಗೊಳಿಸಿದ್ದನ್ನು ಪ್ರಶ್ನಿಸಿ ಎಸ್‌.ಆರ್‌.ಬೊಮ್ಮಾಯಿ ಅವರು ಸುಪ್ರಿಂ ಕೋರ್ಟ್‌ ಮೊರೆ ಹೋಗಿದ್ದ ಪ್ರಕರಣ ಇದು. ಸರ್ಕಾರವೊಂದು ಬಹುಮತ ಹೊಂದಿದೆಯೇ, ಇಲ್ಲವೇ ಎಂಬುದನ್ನು ತೀರ್ಮಾನಿಸುವ ಸಂವಿಧಾನದ ವೇದಿಕೆ ವಿಧಾನಸಭೆಯೇ ಹೊರತು ರಾಜಭವನ ಅಲ್ಲ. ಸಂವಿಧಾನದ 356ನೇ ವಿಧಿ ರಾಷ್ಟ್ರಪತಿಗೆ ನೀಡಿರುವುದು ಷರತ್ತುಬದ್ಧ ಅಧಿಕಾರವನ್ನೇ ಹೊರತು ಪರಮಾಧಿಕಾರವನ್ನಲ್ಲ ಎಂಬುದು ತೀರ್ಪಿನ ಸಾರಾಂಶ.

2003 ಆಗಸ್ಟ್ 31 ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಭಾರತ ಮೊದಲ ಪದಕ ಗಳಿಸಿತು. ಪ್ಯಾರಿಸ್‌ ಕೂಟದ ಮಹಿಳೆಯರ ಲಾಂಗ್‌ಜಂಪ್‌ನಲ್ಲಿ ಕೇರಳದ ಅಂಜು ಬಾಬಿ ಜಾರ್ಜ್‌ 6.7 ಮೀ. ಜಿಗಿದು ಕಂಚಿನ ಪದಕ ಗೆದ್ದುಕೊಂಡರು.

2005 ಆಗಸ್ಟ್‌ 23: ಸಾಮಾಜಿಕ ಭದ್ರತೆಯ ಭಾಗವಾಗಿ ಉದ್ಯೋಗ ಖಾತರಿ ಯೋಜನೆ ಜಾರಿಗೆ ಬಂತು. 2009ರಲ್ಲಿ ಇದಕ್ಕೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಎಂದು ಕರೆಯಲಾಯಿತು. ಹಣಕಾಸು ವರ್ಷವೊಂದರಲ್ಲಿ 100 ದಿನ ಉದ್ಯೋಗ ನೀಡುವಂಥ ಯೋಜನೆ ಇದು.

2005: ಮಾಹಿತಿ ಹಕ್ಕು ಕಾಯ್ದೆ ಸಂಸತ್ತಿನಲ್ಲಿ ಅಂಗೀಕಾರಗೊಂಡಿತು. ಸರ್ಕಾರಿ ಇಲಾಖೆಗಳಿಂದ ತಮಗೆ ಬೇಕಾದ ಮಾಹಿತಿಯನ್ನು ಪಡೆಯುವ ಅಧಿಕಾರವನ್ನು ಇದು ಪ್ರಜೆಗಳಿಗೆ ನೀಡಿತು.

2007: ದೇಶದಲ್ಲಿ ಚೆಸ್‌ ಕ್ರಾಂತಿಗೆ ಕಾರಣರಾದ ಚೆನ್ನೈನ ವಿಶ್ವನಾಥನ್‌ ಆನಂದ್‌ ಫಿಡೆ ವಿಶ್ವ ಚೆಸ್‌ ಚಾಂಪಿಯನ್‌ಷಿಪ್‌ನಲ್ಲಿ ಮೊದಲ ಬಾರಿ ಚಾಂಪಿಯನ್‌ ಆದರು. 2000ನೇ ಇಸವಿಯಲ್ಲಿ ಅವರು ಪಿಸಿಎ ವಿಶ್ವ ಚಾಂಪಿಯನ್‌ ಆಗಿದ್ದರು.

2007: ಭಾರತ ತಂಡಕ್ಕೆ ಚೊಚ್ಚಲ ಟಿ–20 ಕ್ರಿಕೆಟ್ ವಿಶ್ವಕಪ್‌ ಪ್ರಶಸ್ತಿ. ಜೋಹಾನ್ಸ್‌ಬರ್ಗ್‌ನ ವಾಂಡರರ್ಸ್‌ನಲ್ಲಿ ನಡೆದ ಫೈನಲ್‌ನಲ್ಲಿ ಎಂ.ಎಸ್‌.ಧೋನಿ ಪಡೆಗೆ ಪಾಕಿಸ್ತಾನ ವಿರುದ್ಧ ಐದು ರನ್‌ಗಳ ಜಯ.

2007: ಜುಲೈ 25: ಪ್ರತಿಭಾ ದೇವಿಸಿಂಗ್ ಪಾಟೀಲ್‌ ಅವರು ದೇಶದ ಮೊದಲ ಮಹಿಳಾ ರಾಷ್ಟ್ರಪತಿಯಾಗಿ ಪ್ರಮಾಣವಚನ ಸ್ವೀಕರಿಸಿದರು.

2008: ಅಕ್ಟೋಬರ್‌ 22ರಂದು ಭಾರತ ಚಂದ್ರಯಾನ -1 ಅನ್ನು ಪ್ರಾರಂಭಿಸಿತು. 2009ರ ಆಗಸ್ಟ್‌ವರೆಗೆ ಇದು ಕಾರ್ಯನಿರ್ವಹಿಸಿತು.

2008: ಒಲಿಂಪಿಕ್ಸ್‌ ವೈಯಕ್ತಿಕ ಕ್ರೀಡೆಗಳಲ್ಲಿ ಭಾರತ ಮೊದಲ ಬಾರಿ ಚಿನ್ನದ ಪದಕ ಪಡೆದ ಕ್ಷಣ. ಅಭಿನವ್‌ ಬಿಂದ್ರಾ, ಬೀಜಿಂಗ್‌ ಕ್ರೀಡೆಗಳ 10 ಮೀ. ಏರ್‌ ರೈಫಲ್‌ ವಿಭಾಗದಲ್ಲಿ ಚಿನ್ನದ ಪದಕ ಗೆದ್ದುಕೊಂಡರು.

2009: ಯುಪಿಎ ಸರ್ಕಾರದ ಅವಧಿಯಲ್ಲಿ 12 ಅಂಕಿಗಳ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ ಅಸ್ತಿತ್ವಕ್ಕೆ ಬಂದಿತು. 2010ರ ನವೆಂಬರ್‌ನಲ್ಲಿ ಮಹಾರಾಷ್ಟ್ರದ ಟೆಂಬ್ಲಿ ಹಳ್ಳಿಯ 10 ಆದಿವಾಸಿಗಳಿಗೆ ಮೊದಲು ಆಧಾರ್‌ ಕಾರ್ಡ್‌ ನೀಡಲಾಯಿತು.

2009: ಶಿಕ್ಷಣ ಹಕ್ಕು ಕಾಯಿದೆ ಜಾರಿಗೆ ಬಂತು. 6 ರಿಂದ 14 ವರ್ಷದೊಳಗಿನ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ನೀಡಬೇಕೆಂದು ಸಂವಿಧಾನದ 21ಎ ವಿಧಿಯಲ್ಲಿ ಸೇರಿಸಲಾಯಿತು (86ನೇ ತಿದ್ದುಪಡಿ)

2013: ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಜಾರಿಗೆ ಬಂತು.

2013: ಅಮೆರಿಕದ ನ್ಯೂಯಾರ್ಕ್‌ ಷೇರು ಮಾರುಕಟ್ಟೆಯಲ್ಲಿ ನೋಂದಾಯಿತವಾದ ದೇಶದ ಮೊದಲ ಖಾಸಗಿ ಕಂಪನಿ ಎಂಬ ಹಿರಿಮೆ ಇನ್ಫೊಸಿಸ್ ಕಂಪನಿಯದ್ದಾಯಿತು.

2014 ಸೆಪ್ಟೆಂಬರ್‌: ಮಂಗಳ ಗ್ರಹದ ಅಧ್ಯಯನಕ್ಕಾಗಿ ಇಸ್ರೊ ‘ಮಂಗಳಯಾನ’ ಆರಂಭಿಸಿತು. ಮಂಗಳನ ಕಕ್ಷೆಗೆ ಉಪಗ್ರಹ ತಲುಪಿಸಿದ ಏಷ್ಯಾದ ಮೊದಲ ದೇಶ ಭಾರತ ಎನಿಸಿತು.

2015 ಜನವರಿ 1: ಯೋಜನಾ ಆಯೋಗದ ಬದಲಿಗೆ, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನೀತಿ ಆಯೋಗ ಆಸ್ತಿತ್ವಕ್ಕೆ ತಂದಿತು.

2017 ಜುಲೈ 1: ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ) ಜಾರಿ. ಹಲವಾರು ಪರೋಕ್ಷ ತೆರಿಗೆಗಳನ್ನು ರದ್ದುಗೊಳಿಸಿ ಉದಯಿಸಿದಂತಹ ಏಕೀಕೃತ ತೆರಿಗೆ ವ್ಯವಸ್ಥೆಯೇ ಜಿಎಸ್‍ಟಿ.

2019 ಆಗಸ್ಟ್‌ 5: ಸಂವಿಧಾನದ 370ನೇ ವಿಧಿಯಡಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಲಾಯಿತು. ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಯಿತು. ಲಡಾಕ್‌ ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶ ಎಂದು ಘೋಷಿಸಲಾಯಿತು.

2019 ನವೆಂಬರ್ 9: ರಾಮಜನ್ಮಭೂಮಿ– ಬಾಬ್ರಿ ಮಸೀದಿ ವಿವಾದಕ್ಕೆ ಸಂಬಂಧಿಸಿ ಸುಪ್ರಿಂ ಕೋರ್ಟ್‌ ತೀರ್ಪು ನೀಡಿತು. ಅಯೋಧ್ಯೆಯ ರಾಮಜನ್ಮಭೂಮಿ ಎಂದು ಹೇಳಲಾದ ಸ್ಥಳದಲ್ಲಿ ಮಂದಿರ ನಿರ್ಮಾಣಕ್ಕೆ ಅವಕಾಶ ನೀಡಿ, ಮಸೀದಿ ನಿರ್ಮಾಣಕ್ಕೆ ಐದು ಎಕರೆಯಷ್ಟು ಪರ್ಯಾಯ ಸ್ಥಳವನ್ನು ಸುನ್ನಿ ವಕ್ಫ್‌ ಬೋರ್ಡ್‌ಗೆ ನೀಡಲು ಸರ್ಕಾರಕ್ಕೆ ಆದೇಶಿಸಿತು.

2019: ಪಿ.ವಿ.ಸಿಂಧು ಬ್ಯಾಡ್ಮಿಂಟನ್‌ನಲ್ಲಿ ವಿಶ್ವ ಚಾಂಪಿಯನ್‌ ಆದ ಭಾರತದ ಮೊದಲ ಕ್ರೀಡಾಪಟು ಎನಿಸಿದರು. ಸ್ವಿಟ್ಜರ್ಲೆಂಡ್‌ನ ಬಾಸೆಲ್‌ನಲ್ಲಿ ನಡೆದ ಟೂರ್ನಿಯ ಮಹಿಳಾ ಸಿಂಗಲ್ಸ್‌ ಫೈನಲ್‌ನಲ್ಲಿ ಜಪಾನ್‌ನ ನೊಝೊಮಿ ಓಕುಹಾರ ವಿರುದ್ಧ 21–7–, 21–7ರಲ್ಲಿ ಗೆದ್ದರು.

2020: ಕೇಂದ್ರದ ಮೂರು ಕೃಷಿ ಕಾಯಿದೆಗಳು ರೈತರ ಹಿತಾಸಕ್ತಿಗೆ ಮಾರಕವಾಗಿವೆ ಎಂದು ದೆಹಲಿಯಲ್ಲಿ ರೈತರು ಸಂಯುಕ್ತ ಕಿಸಾನ್‌ ಮೋರ್ಚಾ ನೇತೃತ್ವದಲ್ಲಿ ಬೃಹತ್‌ ಪ್ರತಿಭಟನೆ ಆರಂಭಿಸಿದರು. ದೀರ್ಘ ಹೋರಾಟಕ್ಕೆ ಮಣಿದ ಕೇಂದ್ರವು 2021ರ ನವೆಂಬರ್ 29ರಂದು ಕಾಯಿದೆ ರದ್ದುಪಡಿಸುವುದಾಗಿ ಪ್ರಕಟಿಸಿತು.

2021 ಜೂನ್‌ 24: ಜಾವೆಲಿನ್‌ ಪಟು ನೀರಜ್‌ ಚೋಪ್ರಾ, ಒಲಿಂಪಿಕ್ಸ್‌ ಅಥ್ಲೆಟಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಭಾರತದ ಮೊದಲ ಸ್ಪರ್ಧಿಯಾದರು. ಟೋಕಿಯೊ ಕ್ರೀಡೆಗಳಲ್ಲಿ 87.58 ಮೀ. ಸಾಧನೆಯೊಡನೆ ಮೊದಲ ಸ್ಥಾನ ಪಡೆದರು. ಈ ಹಿಂದೆ ಮಿಲ್ಖಾ ಸಿಂಗ್‌ (1960, 400 ಮೀ.), ಪಿ.ಟಿ.ಉಷಾ (1984, 400 ಮೀ. ಹರ್ಡಲ್ಸ್) ಅವರಿಗೆ ಕೂದಲೆಳೆಯಲ್ಲಿ ಕಂಚಿನ ಪದಕ ಕೈತಪ್ಪಿತ್ತು.

2022: ಒಡಿಶಾದ ಮಯೂರಭಂಜ್‌ ಜಿಲ್ಲೆಯ ದ್ರೌಪದಿ ಮುರ್ಮು, ದೇಶದ ರಾಷ್ಟ್ರಪತಿಯಾದ ಬುಡಕಟ್ಟು ಜನಾಂಗದ ಮೊದಲ ಮಹಿಳೆ ಎನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT