ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಫ್ಗಾನಿಸ್ತಾನದಲ್ಲಿ ಸಂಘರ್ಷ: ಕಾಬೂಲ್‌ ಸಮೀಪಿಸಿದ ತಾಲಿಬಾನ್‌ ಉಗ್ರರು

Last Updated 14 ಆಗಸ್ಟ್ 2021, 5:33 IST
ಅಕ್ಷರ ಗಾತ್ರ

ಕಾಬೂಲ್‌: ಅಫ್ಗಾನಿಸ್ತಾನದಲ್ಲಿ ಪ್ರಾಬಲ್ಯ ಸಾಧಿಸಿ ಹಲವು ನಗರಗಳನ್ನು ವಶಕ್ಕೆ ತೆಗೆದುಕೊಂಡಿರುವ ತಾಲಿಬಾನ್‌, ಈಗ ರಾಜಧಾನಿ ಕಾಬೂಲ್‌ನತ್ತ ಧಾವಿಸುತ್ತಿದೆ.

ಕಾಬೂಲ್‌ನಿಂದ ಕೇವಲ 50 ಕಿಲೋ ಮೀಟರ್‌ ದೂರದಲ್ಲಿರುವ ಲೋಗಾರ್‌ ಪ್ರಾಂತ್ಯವನ್ನು ವಶಪಡಿಸಿಕೊಳ್ಳುವ ಮೂಲಕ ದೇಶದ ಆಡಳಿತದ ಚುಕ್ಕಾಣಿ ಹಿಡಿಯುವ ಗುರಿ ಸಾಧಿಸುತ್ತಿದೆ. ಪ್ರಸ್ತುತ ಮೂರನೇ ಎರಡರಷ್ಟು ಹೆಚ್ಚು ಪ್ರದೇಶವನ್ನು ತಾಲಿಬಾನ್ ಆಕ್ರಮಿಸಿಕೊಂಡಿದೆ.

ದೇಶದ ಎರಡನೇ ಮತ್ತು ಮೂರನೇ ಬೃಹತ್‌ ನಗರಗಳಾದ ಹೆರಾತ್‌ ಮತ್ತು ಕಂದಾಹಾರ್‌ ವಶಪಡಿಸಿಕೊಂಡಿದೆ. ಜತೆಗೆ, ಹೆಲ್ಮಂಡ್‌, ಲಷ್ಕರ್‌ ಗಾಹ್‌, ಖಲಾತ್‌, ಫಿರೊಝ್‌ ಕೊಹ್‌,ಟಿರಿನ್ ಕಾಟ್‌, ಉರುಝ್ಗಾನ್‌ ಪ್ರಾಂತ್ಯಗಳ ರಾಜಧಾನಿಗಳನ್ನು ಸಹ ಶುಕ್ರವಾರ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದೆ. ಇದರಿಂದ, ಅಫ್ಗನ್‌ ಸೇನೆ ತೀವ್ರ ಹಿನ್ನಡೆಯಾಗಿದೆ.

ಲಷ್ಕರ್‌ ಗಾಹ್‌ ಹೊರಗೆ ಇರುವ ಸೇನೆಯ ಮೂರು ನೆಲೆಗಳು ಮಾತ್ರ ಸರ್ಕಾರದ ನಿಯಂತ್ರಣದಲ್ಲಿವೆ ಎಂದು ಹೆಲ್ಮಂಡ್‌ ಪ್ರಾಂತ್ಯ ಮಂಡಳಿಯ ಮುಖ್ಯಸ್ಥ ಅತ್ತೌಲ್ಲಾ ಅಫ್ಗನ್‌ ತಿಳಿಸಿದ್ದಾರೆ.

ಇರಾನ್‌ ಗಡಿ ಸಮೀಪ ಇರುವ ಹೆರಾತ್‌ ನಗರ ಪ್ರಮುಖ ವಾಣಿಜ್ಯ ಕೇಂದ್ರವಾಗಿದೆ. ಇಲ್ಲಿನ ಹೆರಾತ್‌ ವಿಮಾನ ನಿಲ್ದಾಣದಿಂದ ವಾಪಸ್‌ ತೆರಳುವುದಾಗಿ ಸೇನಾ ಪಡೆಗಳೇ ಒಪ್ಪಿಕೊಂಡ ಬಳಿಕ ತಾಲಿಬಾನ್‌ ಅದನ್ನು ವಶಪಡಿಸಿಕೊಂಡಿದೆ.

ಶರಣಾಗತರಾಗುವ ಅಧಿಕಾರಿಗಳಿಗೆ ಯಾವುದೇ ರೀತಿಯ ಜೀವಹಾನಿ ಮಾಡುವುದಿಲ್ಲ ಎಂದು ತಾಲಿಬಾನ್‌ ತಿಳಿಸಿದೆ ಎಂದು ಹೆರಾತ್‌ ಪ್ರಾಂತ್ಯದ ಸ್ಥಳೀಯ ಮುಖಂಡರುತಿಳಿಸಿದ್ದಾರೆ.

‘ಹೆರಾತ್‌ ಈಗ ಯುದ್ಧ ಭೂಮಿ ರೀತಿಯಲ್ಲಿ ಕಾಣಿಸುತ್ತಿದೆ. ವಾಣಿಜ್ಯ ನಗರ ಬಿಕೋ ಎನ್ನುತ್ತಿದೆ. ಬಹುತೇಕ ಮಂದಿ ಮನೆಯಲ್ಲಿ ಅಡಗಿಕೊಂಡಿದ್ದಾರೆ’ ಎಂದು ತಿಳಿಸಿದ್ದಾರೆ.

ಪರಿಸ್ಥಿತಿ ದಿನೇ ದಿನೇ ತೀವ್ರ ಹದಗೆಡುತ್ತಿರುವುದರಿಂದ, ಕಾಬೂಲ್‌ನಲ್ಲಿರುವ ಅಮೆರಿಕ ರಾಯಭಾರ ಕಚೇರಿಯ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಸ್ಥಳಾಂತರಿಸಲು ತನ್ನ ಮೂರು ಸಾವಿರ ಯೋಧರನ್ನು ಅಫ್ಗಾನಿಸ್ತಾನಕ್ಕೆ ಕಳುಹಿಸಲು ಉದ್ದೇಶಿಸಿದೆ.

ಬ್ರಿಟನ್‌ ಮತ್ತು ಕೆನಡಾ ಸಹ ತಮ್ಮ ನಾಗರಿಕರಿಗೆ ನೆರವಾಗಲು ವಿಶೇಷ ಪಡೆಯ ಯೋಧರನ್ನು ಕಳುಹಿಸಲು ನಿರ್ಧರಿಸಿವೆ.

ಕಮಾಂಡರ್‌ ವಶಕ್ಕೆ: ಹೆರಾತ್‌ನ ಕಮಾಂಡರ್‌ ಇಸ್ಮಾಯಿಲ್‌ ಖಾನ್‌ ಅವರನ್ನು ತಾಲಿಬಾನ್‌ ವಶಕ್ಕೆ ತೆಗೆದುಕೊಂಡಿದೆ. ಉಗ್ರರ ವಶದಲ್ಲಿರುವ ಖಾನ್‌ ಅವರ ಚಿತ್ರ ಮತ್ತು ವಿಡಿಯೊಗಳನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ಬಿಡುಗಡೆ ಮಾಡಲಾಗಿದೆ.

ಸೇನೆಯಲ್ಲಿ ಭ್ರಷ್ಟಾಚಾರ: ‘ಮಿತಿಮೀರಿದ ಭ್ರಷ್ಟಾಚಾರ, ಆಡಳಿತ ವೈಫಲ್ಯ, ಶಸ್ತ್ರಾಸ್ತ್ರಗಳ ಕೊರತೆ ಮತ್ತು ಆಕ್ರಮಣಕಾರಿ ಹೋರಾಟ ನಡೆಸಲು ಪ್ರೇರಣೆ ನೀಡದಿರುವುದರಿಂದ ಅಫ್ಗನ್‌ ಸೇನೆ ತಾಲಿಬಾನ್‌ ಎದುರಿಸಲು ಸಾಧ್ಯವಾಗಿಲ್ಲ’ ಎಂದು ಅಮೆರಿಕದ ಫೌಂಡೇಷನ್‌ ಫಾರ್‌ ಡಿಫೆನ್ಸ್‌ ಆಫ್‌ ಡೆಮಾಕ್ರಸಿಸ್‌ನ ಬಿಲ್‌ ರಾಗ್ಗಿಯೊ ಅಭಿಪ್ರಾಯಪಟ್ಟಿದ್ದಾರೆ.

'ಬಲಪ್ರಯೋಗದ ಸರ್ಕಾರಕ್ಕೆ ಮಾನ್ಯತೆ ಇಲ್ಲ'
ವಾಷಿಂಗ್ಟನ್‌: ಅಫ್ಗಾನಿಸ್ತಾನದಲ್ಲಿ ತಾಲಿಬಾನ್‌ ಅಟ್ಟಹಾಸ ಹೆಚ್ಚುತ್ತಿರುವ ನಡುವೆಯೇ, ಬಲ ಪ್ರಯೋಗದ ಮೂಲಕ ರಚನೆಯಾಗುವ ಯಾವುದೇ ಸರ್ಕಾರಕ್ಕೆ ಮಾನ್ಯತೆ ನೀಡದಿರಲು ಭಾರತ, ಅಮೆರಿಕ ಹಾಗೂ ಚೀನಾ ಸೇರಿದಂತೆ 12 ರಾಷ್ಟ್ರಗಳು ನಿರ್ಧರಿಸಿವೆ.

ವಿಶ್ವಸಂಸ್ಥೆ ಹಾಗೂ ಐರೋಪ್ಯ ಒಕ್ಕೂಟ ಸಹ ಈ ನಿರ್ಧಾರಕ್ಕೆ ಬೆಂಬಲ ವ್ಯಕ್ತಪಡಿಸಿವೆ.ಅಫ್ಗಾನಿಸ್ತಾನದಲ್ಲಿ ಶಾಂತಿ ನೆಲೆಸುವಂತೆ ಮಾಡುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಲು ಕತಾರ್‌ನದೋಹಾದಲ್ಲಿ ಆಯೋಜಿಸಿದ್ದ ಸಮಾವೇಶದಲ್ಲಿ ಪಾಲ್ಗೊಂಡಿದ್ದ ರಾಷ್ಟ್ರಗಳು ಈ ಮಹತ್ವದ ನಿರ್ಧಾರಕ್ಕೆ ಬಂದಿವೆ ಎಂದು ಅಮೆರಿಕದ ವಿದೇಶಾಂಗ ಇಲಾಖೆ ಹೇಳಿದೆ.

ಉಜ್ಬೆಕಿಸ್ತಾನ, ಪಾಕಿಸ್ತಾನ, ಬ್ರಿಟನ್, ಜರ್ಮನಿ, ನಾರ್ವೆ, ತಜಕಿಸ್ತಾನ, ಟರ್ಕಿ ಹಾಗೂ ತುರ್ಕ್‌ಮೆನಿಸ್ತಾನ ರಾಷ್ಟ್ರಗಳ ಪ್ರತಿನಿಧಿಗಳು ಸಹ ಈ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ‘ಶಾಂತಿ ನೆಲೆಸುವಂತೆ ಮಾಡುವ ಪ್ರಯತ್ನಗಳಿಗೆ ವೇಗ ನೀಡಬೇಕು ಎಂಬುದಕ್ಕೆ ಎಲ್ಲ ದೇಶಗಳ ಪ್ರತಿನಿಧಿಗಳು ಸಹಮತ ವ್ಯಕ್ತಪಡಿಸಿದರು’ ಎಂದು ವಿದೇಶಾಂಗ ಇಲಾಖೆ ವಕ್ತಾರ ನೆಡ್‌ ಪ್ರೈಸ್ ತಿಳಿಸಿದರು.

ನಾಗರಿಕರಿಗೆ 'ಕ್ರೂರ' ಆಡಳಿತದ ಭೀತಿ
ತಾಲಿಬಾನ್‌ ಮತ್ತೊಮ್ಮೆ ಕ್ರೂರ ಮತ್ತು ದಮನಕಾರಿ ನೀತಿಯ ಆಡಳಿತ ನಡೆಸುವ ಭೀತಿಯಿಂದ ಅಫ್ಗಾನಿಸ್ತಾನದ ಹಲವೆಡೆ ಸಾವಿರಾರು ನಾಗರಿಕರು ತಮ್ಮ ಮನೆಗಳನ್ನು ತೊರೆದಿದ್ದಾರೆ.

ಮಹಿಳೆಯರ ಹಕ್ಕುಗಳನ್ನು ಕಸಿಯಲಿದ್ದಾರೆ ಮತ್ತು ಸಾರ್ವಜನಿಕವಾಗಿ ಗಲ್ಲಿಗೇರಿಸುವ ಶಿಕ್ಷೆಗಳನ್ನು ಜಾರಿಗೊಳಿಸುವ ಭೀತಿ ನಾಗರಿಕರನ್ನು ಕಾಡುತ್ತಿದೆ.

ಕಳೆದ ತಿಂಗಳು, ಕಂದಹಾರ್‌ನ ಅಝಿಜಿ ಬ್ಯಾಂಕ್‌ಗೆ ನುಗ್ಗಿದ ತಾಲಿಬಾನಿಗಳು, ಇನ್ನು ಮುಂದೆ ಕಾರ್ಯನಿರ್ವಹಿಸದಂತೆ ಒಂಬತ್ತು ಮಹಿಳೆಯರಿಗೆ ಆದೇಶ ನೀಡಿದ್ದರು. 1996ರಿಂದ 2001ರವರೆಗಿನ ತಾಲಿಬಾನ್‌ ಆಳಿತಾವಧಿಯಲ್ಲಿ ಮಹಿಳೆಯರು ಕೆಲಸಕ್ಕೆ ತೆರಳದಂತೆ ನಿರ್ಬಂಧ ವಿಧಿಸಲಾಗಿತ್ತು. ಬಾಲಕಿಯರಿಗೂ ಶಾಲೆಗೆ ಹೋಗಲು ಅವಕಾಶ ನೀಡಿರಲಿಲ್ಲ. ಮನೆಯಿಂದ ಹೊರಗೆ ಹೋಗುವಾಗ ತಮ್ಮ ಸಂಬಂಧಿಕ ಪುರುಷರ ಜತೆಗೆ ಮಾತ್ರ ತೆರಳಬೇಕಾಗಿತ್ತು.

ಘಝ್ನಿ ನಗರದಲ್ಲಿ ಶರಣಾಗತ ಅಫ್ಗಾನಿಸ್ತಾನದ ಯೋಧರನ್ನು ಕಾವಲು ಕಾಯುತ್ತಿರುವ ತಾಲಿಬಾನಿಗಳು ಎಪಿ/ಪಿಟಿಐ ಚಿತ್ರ
ಘಝ್ನಿ ನಗರದಲ್ಲಿ ಶರಣಾಗತ ಅಫ್ಗಾನಿಸ್ತಾನದ ಯೋಧರನ್ನು ಕಾವಲು ಕಾಯುತ್ತಿರುವ ತಾಲಿಬಾನಿಗಳು ಎಪಿ/ಪಿಟಿಐ ಚಿತ್ರ

* ಹೆರಾತ್‌ನಲ್ಲಿ ಭಾರತ ₹1,775 ಕೋಟಿ ವೆಚ್ಚದಲ್ಲಿ ನಿರ್ಮಿಸಿದ್ದ ಸಲ್ಮಾ ಅಣೆಕಟ್ಟು ತಾಲಿಬಾನ್‌ ನಿಯಂತ್ರಣಕ್ಕೆ
*ಕಂದಾಹಾರ್‌ ಕಾರಾಗೃಹದ ಮೇಲೆ ದಾಳಿ: ಕೈದಿಗಳ ಬಿಡುಗಡೆ ಮಾಡಿದ ತಾಲಿಬಾನ್‌ ಉಗ್ರರು
*ಕಂದಾಹಾರ್‌ನಲ್ಲಿ ರಾಜ್ಯಪಾಲರ ಕಚೇರಿ ಮತ್ತು ಸರ್ಕಾರಿ ಕಟ್ಟಡಗಳು ವಶಕ್ಕೆ, ರಾಜ್ಯಪಾಲರು ಮತ್ತು ಅಧಿಕಾರಿಗಳು ಕಾಬೂಲ್‌ಗೆ ಪರಾರಿ
*ತಕ್ಷಣವೇ ಅಫ್ಗಾನಿಸ್ತಾನ ತೊರೆಯುವಂತೆ ತನ್ನ ನಾಗರಿಕರಿಗೆ ಅಮೆರಿಕ ರಾಯಭಾರ ಕಚೇರಿ ಸೂಚನೆ
*ಮಝರ್‌–ಇ–ಷರೀಫ್‌ ನಗರ ಸದ್ಯ ಸರ್ಕಾರದ ನಿಯಂತ್ರಣದಲ್ಲಿ

***

ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಮತ್ತು ಮಕ್ಕಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ನಮ್ಮ ಸೇನಾ ಪಡೆಗಳು ಪ್ರಜಾಪ್ರಭುತ್ವದ ರಕ್ಷಣೆಗಾಗಿ ಹೋರಾಟ ನಡೆಸುತ್ತಿವೆ.
-ಅಫ್ಗಾನಿಸ್ತಾನ ಸರ್ಕಾರದ ವಕ್ತಾರ

***

ನಮ್ಮ ಕನಸುಗಳು ನಾಶವಾಗುತ್ತಿವೆ. ಅದೇ ರೀತಿ, ಇತಿಹಾಸ, ಭವಿಷ್ಯ, ಕಲೆ, ಸಂಸ್ಕೃತಿ, ಬದುಕು ಸೇರಿದಂತೆ ಎಲ್ಲವೂ ನಾಶವಾಗುತ್ತಿದೆ. ಯಾರಾದರೂ ಈ ನಾಶ ತಡೆಯಲು ಪ್ರಯತ್ನಿಸಿ.
-ರಾದಾ ಅಕ್ಬರ್‌, ಅಫ್ಗಾನಿಸ್ತಾನದ ಮಹಿಳೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT