ಮಂಗಳವಾರ, ನವೆಂಬರ್ 29, 2022
29 °C

ಆಳ-ಅಗಲ | ಬಿಜೆಪಿಯೇತರ ಸರ್ಕಾರಗಳಿಗೆ ರಾಜ್ಯಪಾಲರ ರಗಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜ್ಯಪಾಲರು ಕೇಂದ್ರದ ಕೈಗೊಂಬೆ ಎಂಬ ಆರೋಪ ಹಿಂದಿನಿಂದಲೂ ಇದೆ. ರಾಜ್ಯ ಸರ್ಕಾರದ ವಿರುದ್ಧ ಕೇಂದ್ರಕ್ಕೆ ವರದಿಗಳನ್ನು ಕಳುಹಿಸುವಂತಹ ಕೆಲಸಗಳನ್ನು ರಾಜ್ಯಪಾಲರನ್ನು ಮಾಡಿದ್ದಿದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ, ಬಿಜೆಪಿಯೇತರ ಪಕ್ಷಗಳ ಸರ್ಕಾರ ಇರುವ ರಾಜ್ಯಗಳ ರಾಜ್ಯಪಾಲರ ವರ್ತನೆಯ ಕುರಿತು ತೀವ್ರ ಟೀಕೆಗಳು ವ್ಯಕ್ತವಾಗಿವೆ. ದೆಹಲಿ, ಪಶ್ಚಿಮ ಬಂಗಾಳ, ಜಾರ್ಖಂಡ್‌, ಕೇರಳ, ತೆಲಂಗಾಣ... ಹೀಗೆ ಬಿಜೆಪಿಯೇತರ ಪಕ್ಷಗಳ ಸರ್ಕಾರ ಇರುವ ರಾಜ್ಯಗಳಲ್ಲಿ ರಾಜ್ಯಪಾಲರು ಸರ್ಕಾರದ ಜತೆಗೆ ನೇರವಾಗಿ ಸಂಘರ್ಷಕ್ಕೆ ಇಳಿದ ಹಲವು ಉದಾಹರಣೆಗಳು ಇವೆ. ರಾಜ್ಯಪಾಲರು ಬಿಜೆಪಿ ಏಜೆಂಟ್‌ ಎಂದು‍ ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಆರೋಪಿಸಿದ್ದಾರೆ. ವಿಶ್ವಾಸಮತ ಯಾಚನೆಗಾಗಿ ಅಧಿವೇಶನ ಕರೆಯಲು ಪಂಜಾಬ್‌ ರಾಜ್ಯಪಾಲರು ಅನುಮತಿ ನಿರಾಕರಿಸಿದ್ದನ್ನು ಖಂಡಿಸಿ ಎಎಪಿ ಇತ್ತೀಚೆಗೆ ಭಾರಿ ಪ್ರತಿಭಟನೆಯನ್ನೂ ನಡೆಸಿತ್ತು.


ಮೂವರು ಎಲ್‌.ಜಿ.ಗಳ ಜತೆ ಕೇಜ್ರಿವಾಲ್‌ ಜಟಾಪಟಿ

ದೆಹಲಿಯ ಲೆಫ್ಟಿನೆಂಟ್‌ ಗವರ್ನರ್‌ (ಎಲ್‌.ಜಿ) ಮತ್ತು ದೆಹಲಿ ಸರ್ಕಾರದ ನಡುವಣ ಕಿತ್ತಾಟವು ಅರವಿಂದ ಕೇಜ್ರಿವಾಲ್‌ ಮುಖ್ಯಮಂತ್ರಿಯಾದ ಬಳಿಕ ಅತ್ಯಂತ ಕೀಳು ಮಟ್ಟಕ್ಕೆ ಕುಸಿಯಿತು. 2013ರ ಡಿಸೆಂಬರ್‌ನಲ್ಲಿ ಕೇಜ್ರಿವಾಲ್‌ ಮೊದಲ ಬಾರಿಗೆ ಮುಖ್ಯಮಂತ್ರಿಯಾದ ಬಳಿಕ ಮೂವರು ಎಲ್‌.ಜಿಗಳ ಜತೆಗೆ ಕೆಲಸ ಮಾಡಿದ್ದಾರೆ.

2013ರ ಡಿಸೆಂಬರ್‌ನಲ್ಲಿ ಅಧಿಕಾರಕ್ಕೆ ಬಂದ ಕೇಜ್ರಿವಾಲ್‌ ನೇತೃತ್ವದ ಸರ್ಕಾರವು 2014ರ ಫೆಬ್ರುವರಿಯಲ್ಲಿ ಜನ ಲೋಕಪಾಲ ಮಸೂದೆಯನ್ನು ಅಂಗೀಕರಿಸಿ ಆಗಿನ ಎಲ್‌.ಜಿ ನಜೀಬ್ ಜಂಗ್‌ ಅವರಿಗೆ ಕಳುಹಿಸಿಕೊಟ್ಟಿತ್ತು. ಆದರೆ, ಇದನ್ನು ಜಾರಿಗೆ ತರಬೇಕಾದರೆ ಕೇಂದ್ರ ಸರ್ಕಾರದ ಒಪ್ಪಿಗೆ ಬೇಕು ಎಂದು ಅವರು ಕಾನೂನು ಸಚಿವಾಲಯಕ್ಕೆ ಕಳುಹಿಸಿಕೊಟ್ಟರು. ಇದು ಎಲ್‌.ಜಿ ಜತೆಗೆ ಕೇಜ್ರಿವಾಲ್‌ ಅವರ ಮೊದಲ ಭಿನ್ನಮತ. ಭಾರಿ ಬಹುಮತದೊಂದಿಗೆ ಕೇಜ್ರಿವಾಲ್‌ ಅವರು 2015ರ ಫೆಬ್ರುವರಿಯಲ್ಲಿ ಎರಡನೇ ಅವಧಿಗೆ ಅಧಿಕಾರಕ್ಕೆ ಬಂದರು. ಪೊಲೀಸ್‌, ಸಾರ್ವಜನಿಕ ಸುವ್ಯವಸ್ಥೆ ಮತ್ತು ಜಮೀನಿಗೆ ಸಂಬಂಧಿಸಿದ ಎಲ್ಲ ಕಡತಗಳು ತಮ್ಮ ಮೂಲಕವೇ ಮುಂದಕ್ಕೆ ಹೋಗಬೇಕು ಎಂದು ಕೇಜ್ರಿವಾಲ್‌ ಆದೇಶಿಸಿದರು. ಎಲ್ಲ ಕಡತಗಳನ್ನು ಎಲ್‌.ಜಿ ಅವರಿಗೆ ಕೊಡುವ ಅಗತ್ಯ ಇಲ್ಲ ಎಂದರು. ಕೇಜ್ರಿವಾಲ್‌ ಅವರು ಮಾಡಿದ ಅಧಿಕಾರಿಗಳ ನೇಮಕವನ್ನು ಜಂಗ್‌ ಅವರು ರದ್ದು ಮಾಡಿದರು. ಅಧಿಕಾರಿಗಳ ನೇಮಕ ತಮ್ಮ ಅಧಿಕಾರ ಎಂದರು. 

ಭ್ರಷ್ಟಾಚಾರ ತಡೆ ಘಟಕಕ್ಕೆ ಬಿಹಾರದ ಐವರು ಪೊಲೀಸ್‌ ಅಧಿಕಾರಿಗಳನ್ನು ಕೇಜ್ರಿವಾಲ್‌ ನಿಯೋಜಿಸಿದ್ದನ್ನು ಜಂಗ್ ಅವರು ರದ್ದು ಮಾಡಿದ್ದರು. ಎಸಿಬಿ ತಮ್ಮ ಅಧೀನದಲ್ಲಿ ಕೆಲಸ ಮಾಡುವ ಘಟಕ ಎಂದರು. ನೀರಿನ ಟ್ಯಾಂಕರ್‌ ಹಗರಣದಲ್ಲಿ ಕೇಜ್ರಿವಾಲ್‌ ಮೇಲೆ ಎಫ್‌ಐಆರ್‌ಗೆ ಜಂಗ್‌ ಅನುಮತಿ ಕೊಟ್ಟರು. ಜಂಗ್ ಅವರು ಹಿಟ್ಲರ್ ಎಂದು ಕೇಜ್ರಿವಾಲ್‌ ಜರೆದಿದ್ದರು. ಹೀಗೆ 2016ರ ಡಿಸೆಂಬರ್‌ನಲ್ಲಿ ಜಂಗ್ ರಾಜೀನಾಮೆ ನೀಡುವತನಕ ಈ ರೀತಿಯ ಕಿತ್ತಾಟ ನಿರಂತರವಾಗಿ ನಡೆಯಿತು.  

2016ರಿಂದ 2022ರವರೆಗೆ ಅನಿಲ್‌ ಬೈಜಾಲ್‌ ಅವರು ಎಲ್‌.ಜಿಯಾಗಿದ್ದರು. ಬೈಜಾಲ್‌ ಅವಧಿಯಲ್ಲಿ ಸರ್ಕಾರ ಮತ್ತು ಎಲ್‌.ಜಿ ಅವರ ಆಡಳಿತಾತ್ಮಕ ವ್ಯಾಪ್ತಿಯ ಕುರಿತು ತೀವ್ರ ಭಿನ್ನಾಭಿಪ್ರಾಯ ಉಂಟಾಯಿತು. ಕೇಜ್ರಿವಾಲ್ ಮತ್ತು ಅವರ ಸಚಿವ ಸಂಪುಟದ ಸದಸ್ಯರು 2018ರಲ್ಲಿ ಎಲ್‌.ಜಿ ಮನೆಯ ಹೊರಗೆ ಧರಣಿಯನ್ನೂ ನಡೆಸಿದರು. ವಿಷಯ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತು. ದೆಹಲಿ ಸರ್ಕಾರದ ನೆರವು ಮತ್ತು ಸಲಹೆಗೆ ಅನುಸಾರವಾಗಿ ಎಲ್‌.ಜಿ ಕೆಲಸ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದ ಬಳಿಕ ಸ್ವಲ್ಪ ಕಾಲ ಹೆಚ್ಚಿನ ಕಿತ್ತಾಟ ಇರಲಿಲ್ಲ.

2022ರ ಮೇ 23ರಂದು ವಿನಯ ಕುಮಾರ್ ಸಕ್ಸೇನಾ ಅವರು ಎಲ್‌.ಜಿ ಆಗಿ ನೇಮಕಗೊಂಡರು. ಅಧಿಕಾರಿಗಳ ಜತೆಗೆ ಅವರು ನಿಯಮಿತವಾಗಿ ನಡೆಸುತ್ತಿರುವ ಸಭೆಯು ಆಡಳಿತದಲ್ಲಿ ಹಸ್ತಕ್ಷೇಪ ಎಂದು ಸರ್ಕಾರ ದೂರಿದೆ. ಕೋವಿಡ್ ಸಂದರ್ಭದಲ್ಲಿ ಏಳು ತಾತ್ಕಾಲಿಕ ಆಸ್ಪತ್ರೆ ನಿರ್ಮಾಣದಲ್ಲಿ ಅವ್ಯವಹಾರವಾಗಿದೆ ಎಂಬ ಆರೋಪದ ತನಿಖೆಗೆ ಭ್ರಷ್ಟಾಚಾರ ತಡೆ ಘಟಕಕ್ಕೆ ಸಕ್ಸೇನಾ ಅನುಮತಿ ಕೊಟ್ಟಿದ್ದಾರೆ. ಹೊಸ ಅಬಕಾರಿ ನೀತಿ ಜಾರಿಯಲ್ಲಿ ಅಕ್ರಮವಾಗಿದೆ, ಸಿಬಿಐ ತನಿಖೆ ನಡೆಸಬೇಕು ಎಂದು ಇದೇ ಜುಲೈನಲ್ಲಿ ಕೇಂದ್ರಕ್ಕೆ ಹೇಳಿದರು. ತನಿಖೆ ಆರಂಭವೂ ಆಗಿದೆ. ಇದು ಬಿಜೆಪಿ ಮತ್ತು ಎಎಪಿ ನಡುವೆ ಭಾರಿ ವಾಕ್ಸಮರಕ್ಕೆ ಕಾರಣವಾಗಿದೆ.


ಮಹಾರಾಷ್ಟ್ರ: ಹಲವು ನಿರ್ಧಾರಗಳಿಗೆ ತಿರಸ್ಕಾರ

ರಾಜ್ಯಪಾಲ ಮತ್ತು ಸರ್ಕಾರದ ನಡುವಣ ತಿಕ್ಕಾಟಕ್ಕೆ ಮಹಾರಾಷ್ಟ್ರವೂ ಹೊರತಾಗಿರಲಿಲ್ಲ. ಶಿವಸೇನಾ ನೇತೃತ್ವದ ಎಂವಿಎ ಸರ್ಕಾರವಿದ್ದಾಗ ಅಂದಿನ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮತ್ತು ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಮಧ್ಯೆ ಜಟಾಪಟಿ ಇತ್ತು. ಎಂವಿಎ ಸರ್ಕಾರ ಅಸ್ತಿತ್ವಕ್ಕೆ ಬಂದಂದಿನಿಂದಲೇ ಈ ತಿಕ್ಕಾಟ ಶುರುವಾಗಿತ್ತು. ಸಂಪುಟ ಸದಸ್ಯರ ಪ್ರಮಾಣವಚನ ಸ್ವೀಕಾರಕ್ಕೆ ರಾಜ್ಯಪಾಲ ಕೋಶಿಯಾರಿ ಅವಕಾಶವನ್ನೇ ನೀಡಿರಲಿಲ್ಲ. ಹಲವು ತಿಂಗಳ ನಂತರ ಸಚಿವರು ಅಧಿಕಾರ ಸ್ವೀಕರಿಸಬೇಕಾದ ಮತ್ತು ಆ ಮೂಲಕ ಉದ್ಧವ್ ಅವರನ್ನು ಇಕ್ಕಟ್ಟಿಗೆ ಸಿಲುಕಿಸುವ ಸನ್ನಿವೇಶವನ್ನು ಕೋಶಿಯಾರಿ ಸೃಷ್ಟಿಸಿದ್ದರು.

ಕೋವಿಡ್‌ ಸಂದರ್ಭದಲ್ಲಿ ರಾಜ್ಯ ಸರ್ಕಾರ ತೆಗೆದುಕೊಂಡ  ಹಲವು ನಿರ್ಧಾರಗಳನ್ನು ರಾಜ್ಯಪಾಲರು ತಿರಸ್ಕರಿಸಿದ್ದರು. ಕೋವಿಡ್‌ ಪರಿಸ್ಥಿತಿಯನ್ನು ಚೆನ್ನಾಗಿ ನಿರ್ವಹಿಸಿದ್ದ ರಾಜ್ಯ ಸರ್ಕಾರದ ವರ್ಚಸ್ಸಿಗೆ ಮಸಿ ಬಳಿಯಲೆಂದೇ ಕೋಶಿಯಾರಿ ಹೀಗೆ ಮಾಡುತ್ತಿದ್ದಾರೆ ಎಂದು ಆಡಳಿತಾರೂಢ ಮೈತ್ರಿಕೂಟದ ನಾಯಕರು ಬಹಿರಂಗವಾಗಿಯೇ ಆರೋಪಿಸಿದ್ದರು. ವಿಧಾನಸಭೆಯಲ್ಲಿ ಅಂಗೀಕಾರವಾದ ಮಸೂದೆ, ನಿರ್ಣಯಗಳಿಗೆ ಅನುಮೋದನೆ ನೀಡಲು ತೀರಾ ವಿಳಂಬ ಮಾಡುತ್ತಾರೆ ಮತ್ತು ವಿರೋಧ ಪಕ್ಷ ಬಿಜೆಪಿಯ ಪರವಾಗಿ ಪಕ್ಷಪಾತ ನಡೆಸುತ್ತಾರೆ ಎಂದು ಶಿವಸೇನಾ ಗಂಭೀರ ಆರೋಪ ಮಾಡಿತ್ತು. ಇದನ್ನು ಪುಷ್ಟೀಕರಿಸುವಂತೆ, ವಿಶೇಷ ಅಧಿವೇಶನ ಕರೆಯಿರಿ ಎಂದು ಕೋರಿ ಬಿಜೆಪಿ ಸಲ್ಲಿಸಿದ್ದ ಮನವಿಯನ್ನು ಕೋಶಿಯಾರಿ ಕೆಲವೇ ಗಂಟೆಗಳಲ್ಲಿ ಕಾರ್ಯರೂಪಕ್ಕೆ ತರಲು ಮುಂದಾಗಿದ್ದರು.


ತಮಿಳುನಾಡು: ಮುಸುಕಿನ ಗುದ್ದಾಟ

ತಮಿಳುನಾಡಿನ ರಾಜ್ಯಪಾಲ ಆರ್‌.ಎನ್‌.ರವಿ ಮತ್ತು ಡಿಎಂಕೆ ಸರ್ಕಾರದ ಮಧ್ಯೆ ಮುಸುಕಿನ ಗುದ್ದಾಟ ನಡೆದಿದೆ. 

ಬೇರೆ ರಾಜ್ಯಗಳಲ್ಲಿ ಇದ್ದಂತೆ ತಮಿಳುನಾಡಿನಲ್ಲಿ ರಾಜ್ಯಪಾಲರು ಮತ್ತು ಡಿಎಂಕೆ ಸರ್ಕಾರದ ನಡುವಣ ತಿಕ್ಕಾಟ ಹಾದಿ–ಬೀದಿಯ ರಂಪಾಟದಂತೆ ಆಗಿಲ್ಲ. ಬದಲಿಗೆ ರಾಜ್ಯಪಾಲರು ತಮ್ಮ ಅಧಿಕಾರದ ಮಿತಿಯಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದ್ದಾರೆ. ಇನ್ನೊಂದೆಡೆ ರಾಜ್ಯ ಸರ್ಕಾರವೂ ತನಗೆ ಲಭ್ಯವಿರುವ ಸೀಮಿತ ಅವಕಾಶವನ್ನು ಬಳಸಿಕೊಂಡು ರಾಜ್ಯಪಾಲರ ಅಧಿಕಾರವನ್ನು ಮೊಟಕುಗೊಳಿಸಲು ಯತ್ನಿಸುತ್ತಿದೆ.

ತಮಿಳುನಾಡು ವಿಧಾನಮಂಡಲವು ಅನುಮೋದಿಸಿ ಕಳುಹಿಸಿದ 19 ಪ್ರಮುಖ ಮಸೂದೆಗಳಿಗೆ ರಾಜ್ಯಪಾಲರು ಅಂಕಿತವನ್ನೇ ಹಾಕಿಲ್ಲ. ಇದರಿಂದ ಸರ್ಕಾರದ ಪ್ರಮುಖ ಯೋಜನೆಗಳು, ಕಾರ್ಯಕ್ರಮಗಳು ಮತ್ತು ನೀತಿಗಳು ನನೆಗುದಿಗೆ ಬಿದ್ದಿವೆ. ಆಡಳಿತಯಂತ್ರಕ್ಕೆ ಅಡಚಣೆಯಾಗಿದೆ ಎಂದು ಆಡಳಿತಾರೂಢ ಡಿಎಂಕೆಯ ಹಲವು ನಾಯಕರು ಆರೋಪಿಸಿದ್ದಾರೆ. ಇದಕ್ಕೆ ಸ್ಪಷ್ಟ ನಿದರ್ಶನವೆಂದರೆ ತಮಿಳುನಾಡಿನ ವಿದ್ಯಾರ್ಥಿಗಳಿಗೆ ನೀಟ್‌ ಪರೀಕ್ಷೆಯಿಂದ ವಿನಾಯಿತಿ ನೀಡುವ ಮಸೂದೆ. ಈ ಮಸೂದೆಯನ್ನು ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಲಾಗಿತ್ತು. ಆದರೆ, ಯಾವುದೇ ಕಾರಣ ನೀಡದೆ ರಾಜ್ಯಪಾಲರು ಅದನ್ನು ವಾಪಸ್‌ ಕಳುಹಿಸಿದ್ದರು. ಕೆಲವೇ ದಿನಗಳಲ್ಲಿ ಸರ್ಕಾರವು ಯಥಾರೂಪದಲ್ಲೇ ಹೊಸ ಮಸೂದೆಯನ್ನು ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಿತು. ಅದನ್ನು ರಾಜ್ಯಪಾಲರು ರಾಷ್ಟ್ರಪತಿಗೆ ಕಳುಹಿಸಬೇಕಿತ್ತು. ಆದರೆ, ಹತ್ತಾರು ತಿಂಗಳು ಕಳೆದರೂ ಆ ಮಸೂದೆ ತಮಿಳುನಾಡು ರಾಜಭವನದಲ್ಲೇ ಉಳಿದಿದೆ.

ಮಸೂದೆಯನ್ನು ರಾಷ್ಟ್ರಪತಿಗೆ ಕಳುಹಿಸುವಂತೆ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಅವರು ಮನವಿ ಸಲ್ಲಿಸಿದ್ದರು. ಅದರಿಂದಲೂ ಏನೂ ಉಪಯೋಗವಾಗಿಲ್ಲ. ಕೇಂದ್ರ ಸರ್ಕಾರದ ನೀಟ್‌ ನೀತಿಯನ್ನು ವಿರೋಧಿಸುವ ತಮಿಳುನಾಡು ಸರ್ಕಾರದ ನಿಲುವನ್ನು, ರಾಜ್ಯಪಾಲರು ತಮ್ಮ ಈ ಕ್ರಮದ ಮೂಲಕ ದುರ್ಬಲಗೊಳಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

ಈ ತಿಕ್ಕಾಟವು ಇಷ್ಟಕ್ಕೇ ಸೀಮಿತವಾಗಿಲ್ಲ. ರಾಜ್ಯದ ವಿಶ್ವವಿದ್ಯಾಲಯಗಳಿಗೆ ಉಪಕುಲಪತಿಗಳನ್ನು ನೇಮಕ ಮಾಡುವ ರಾಜ್ಯಪಾಲರ ಅಧಿಕಾರವನ್ನು ಮೊಟಕುಗೊಳಿಸಲು ಸಂವಿಧಾನದ ಚೌಕಟ್ಟಿನಲ್ಲೇ ಡಿಎಂಕೆ ಸರ್ಕಾರ ಕ್ರಮ ತೆಗೆದುಕೊಂಡಿದೆ. ಕೇಂದ್ರ ಸರ್ಕಾರವು ರಾಜ್ಯಪಾಲರನ್ನು ಬಳಸಿಕೊಂಡು, ತಮ್ಮ ಪರವಾಗಿ ಇರುವವರನ್ನು ವಿಶ್ವವಿದ್ಯಾಲಯಗಳಿಗೆ ನೇಮಕ ಮಾಡುತ್ತಿದೆ ಎಂದು ಡಿಎಂಕೆ ಆರೋಪಿಸಿತ್ತು. ಇದನ್ನು ತಡೆಯುವ ಉದ್ದೇಶದಿಂದ, ರಾಜ್ಯದ ವಿಶ್ವವಿದ್ಯಾಲಯಗಳಿಗೆ ಕುಲಪತಿಗಳನ್ನು ನೇಮಕ ಮಾಡುವ ಅಧಿಕಾರವನ್ನು ರಾಜ್ಯ ಸರ್ಕಾರಕ್ಕೆ ನೀಡುವ ನಿರ್ಣಯವನ್ನು ಡಿಎಂಕೆ ಸರ್ಕಾರ ಕೈಗೊಂಡಿದೆ. ಇದೂ ರಾಜ್ಯಪಾಲ–ಸರ್ಕಾರದ ನಡುವಣ ತಿಕ್ಕಾಟವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದೆ.


ಮಮತಾ–ಧನಕರ್ ನಿರಂತರ ಸಂಘರ್ಷ

ಉಪರಾಷ್ಟ್ರಪತಿಯಾಗಿ ಇತ್ತೀಚೆಗೆ ಆಯ್ಕೆಯಾಗಿರುವ ಜಗದೀಪ್ ಧನಕರ್ ಅವರು, ಇದಕ್ಕೂ ಮುನ್ನ ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿದ್ದರು. ಆದರೆ, ಅವರು ಅಧಿಕಾರದಲ್ಲಿದ್ದ ಅಷ್ಟೂ ದಿನಗಳ ಕಾಲ, ರಾಜ್ಯದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಜೊತೆ ಸಂಘರ್ಷಕ್ಕಿಳಿದಿದ್ದರು. ಟ್ವೀಟ್ ಮಾಡಿ, ಸಲಹೆಗಳನ್ನು ನೀಡುತ್ತಿದ್ದ ಅವರು, ಸರ್ಕಾರದ ನಡೆಯನ್ನು ಆಗಾಗ್ಗೆ ಪ್ರಶ್ನಿಸುತ್ತಿದ್ದರು. ಇದು ಮಮತಾ ಬ್ಯಾನರ್ಜಿ ಅವರನ್ನು ಕೆರಳಿಸುತ್ತಿತ್ತು. ಇದೇ ಜನವರಿಯಲ್ಲಿ ಜಗದೀಪ್ ಅವರ ಟ್ವಿಟರ್ ಖಾತೆಯನ್ನು ಮಮತಾ ಬ್ಲಾಕ್ ಮಾಡಿದ್ದರು. ಧನಕರ್ ಅವರು ಟ್ವೀಟ್ ಮಾಡುವಾಗ ತಮ್ಮ ಹೆಸರನ್ನು ಟ್ಯಾಗ್ ಮಾಡದಂತೆ ತಡೆಯಲು ಅವರು ಈ ಕ್ರಮಕ್ಕೆ ಮುಂದಾಗಿದ್ದರು. ರಾಜ್ಯಪಾಲರ ಟ್ವೀಟ್‌ಗಳು ಕಿರಿಕಿರಿ ಉಂಟು ಮಾಡುತ್ತಿವೆ ಎಂದು ಮಮತಾ ಬಹಿರಂಗವಾಗಿ ಹೇಳಿದ್ದರು.

ರಾಜಭವನವು ತಮ್ಮ ದೂರವಾಣಿಗಳನ್ನು ಕದ್ದಾಲಿಸುತ್ತಿದೆ ಎಂಬುದು ಜಗದೀಪ್ ಅವರ ಬಗ್ಗೆ ಮಮತಾ ಅವರ ಗಂಭೀರ ಆರೋಪ. ರಾಜ್ಯಪಾಲರು ಸಾಂವಿಧಾನಿಕ ಅಧಿಕಾರಗಳನ್ನು ಮೀರಿ ನಡೆದುಕೊಳ್ಳುತ್ತಿದ್ದಾರೆ ಎಂದು ಟೀಕಿಸಿದ್ದರು. ಆದರೆ, ಸಂವಿಧಾನದ 167ನೇ ವಿಧಿಯ ಪ್ರಕಾರ, ರಾಜ್ಯಪಾಲರ ಜೊತೆ ರಾಜ್ಯದ ಮುಖ್ಯಮಂತ್ರಿ ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ಮಮತಾ ಅವರಿಗೆ ಧನಕರ್ ನೆನಪಿಸಿದ್ದರು. ರಾಜ್ಯಪಾಲರ ನಡೆಯ ಬಗ್ಗೆ ಸಂಸತ್ತಿನ ಅಧಿವೇಶನದಲ್ಲಿ ಚರ್ಚಿಸಲು ಟಿಎಂಸಿ ಸಂಸದರು ಮುಂದಾಗಿದ್ದರು. ಆದರೆ ಸಭಾಪತಿ ಚರ್ಚೆಗೆ ಅವಕಾಶ ನೀಡಿರಲಿಲ್ಲ. ಪಶ್ಚಿಮ ಬಂಗಾಳ ವಿಧಾನಸಭೆ ಅಧಿವೇಶವನ್ನು ಮುಕ್ತಾಯಗೊಳಿಸುವುದಾಗಿ ರಾಜ್ಯಪಾಲರು ಇತ್ತೀಚೆಗೆ ಮಾಡಿದ್ದ ಟ್ವೀಟ್‌ ಸಹ ಉಭಯ ನಾಯಕರ ಮಧ್ಯೆ ಭಿನ್ನಮತಕ್ಕೆ ಕಾರಣವಾಗಿತ್ತು. ಸರ್ಕಾರದ ಗಮನಕ್ಕೆ ತಾರದೇ ಅಧಿವೇಶನ ಮುಕ್ತಾಯಗೊಳಿಸುವುದನ್ನು ಟಿಎಂಸಿ ಪ್ರಶ್ನಿಸಿತ್ತು. ಆದರೆ, ಈ ಆರೋಪವನ್ನು ಧನಕರ್ ಅಲ್ಲಗಳೆದಿದ್ದರು. ರಾಜ್ಯಪಾಲರ ಅಧಿಕಾರ ದುರುಪಯೋಗ ವಿಚಾರದ ಕುರಿತು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ಜೊತೆ ಮಮತಾ ಇತ್ತೀಚೆಗೆ ಚರ್ಚೆ ನಡೆಸಿದ್ದರು.


ತೆಲಂಗಾಣ: ಕಿತ್ತಾಟಕ್ಕೆ ಮುನ್ನುಡಿ

ತೆಲಂಗಾಣದಲ್ಲಿಯೂ ಇತ್ತೀಚಿನ ದಿನಗಳಲ್ಲಿ ರಾಜ್ಯಪಾಲರು ಮತ್ತು ಸರ್ಕಾರದ ನಡುವೆ ಕಿತ್ತಾಟ ಆರಂಭವಾಗಿದೆ. ಮಹಿಳೆ ಎಂಬ ಕಾರಣಕ್ಕೆ ತಮ್ಮನ್ನು ಸರ್ಕಾರವು ಕೆಟ್ಟದಾಗಿ ನಡೆಸಿಕೊಂಡಿದೆ, ರಾಜ್ಯಪಾಲ ಹುದ್ದೆಗೂ ಗೌರವ ಕೊಡುತ್ತಿಲ್ಲ ಎಂದು ರಾಜ್ಯಪಾಲರಾದ ತಮಿಳ್‌ಸೈ ಸೌಂದರರಾಜನ್‌ ಆರೋಪಿಸಿದ್ದಾರೆ. ಸರ್ಕಾರದ ವಿರುದ್ಧ ಹಲವು ಗಂಭೀರ ಆರೋಪಗಳನ್ನೂ ಅವರು ಮಾಡಿದ್ದಾರೆ. ಸರ್ಕಾರಿ ಆಸ್ಪತ್ರೆಗಳು ಅತ್ಯಂತ ಕೆಟ್ಟ ಸ್ಥಿತಿಯಲ್ಲಿವೆ, ಸರ್ಕಾರಿ ಆಸ್ಪತ್ರೆಯ ನಿರ್ದೇಶಕರು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಾರೆ ಎಂದೂ ಆಪಾದಿಸಿದ್ದಾರೆ.

ತಮಿಳ್‌ಸೈ ಅವರು ರಾಜ್ಯಪಾಲರಂತೆ ವರ್ತಿಸುವ ಬದಲು ರಾಜಕೀಯ ಪಕ್ಷವೊಂದರ ಪ್ರತಿನಿಧಿಯಂತೆ ವರ್ತಿಸುತ್ತಿದ್ದಾರೆ ಎಂದು ಆಡಳಿತಾರೂಢ ಟಿಆರ್‌ಎಸ್‌ ಹೇಳಿದೆ. ರಾಜ್ಯಪಾಲರಾಗಿ ಗುರುತಿಸಿಕೊಳ್ಳಬೇಕೋ ರಾಜಕೀಯ ಪಕ್ಷದ ಪ್ರತಿನಿಧಿಯಾಗಿ ಗುರುತಿಸಿಕೊಳ್ಳಬೇಕೋ ಎಂಬುದನ್ನು ಅವರೇ ನಿರ್ಧರಿಸಬೇಕು ಎಂದು ಬುಡಕಟ್ಟು ವ್ಯವಹಾರಗಳ ಸಚಿವೆ ಸತ್ಯವತಿ ರಾಥೋಡ್‌ ಹೇಳಿದ್ದಾರೆ. ‘ರಾಜ್ಯಪಾಲರು ಲಕ್ಷ್ಮಣರೇಖೆ ಮೀರಿದ್ದಾರೆ’ ಎಂದು ಸಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಕೆ. ನಾರಾಯಣ ಹೇಳಿದ್ದಾರೆ.


ಕೇರಳ ರಾಜ್ಯಪಾಲರ ವಿಳಂಬ ನಡೆ: ಸರ್ಕಾರಕ್ಕೆ ಇಕ್ಕಟ್ಟು

ಕೇರಳ ರಾಜ್ಯಪಾಲರಾಗಿರುವ ಆರಿಫ್ ಮೊಹಮ್ಮದ್ ಖಾನ್ ಹಾಗೂ ರಾಜ್ಯದ ಆಡಳಿತಾರೂಢ ಎಡರಂಗದ ಸರ್ಕಾರವೂ ಸಂಘರ್ಷದಿಂದ ಹೊರತಾಗಿಲ್ಲ. ವಿಧಾನಸಭೆ ಅನುಮೋದನೆ ನೀಡಿ ಕಳುಹಿಸಿದ ಮಸೂದೆಗಳು ಹಾಗೂ ಸುಗ್ರೀವಾಜ್ಞೆಗಳಿಗೆ ಸಹಿ ಹಾಕಲು ರಾಜ್ಯಪಾಲರು ವಿಳಂಬ ಮಾಡುತ್ತಿದ್ದಾರೆ ಎಂಬುದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರದ
ಪ್ರಮುಖ ಆಕ್ಷೇಪ. 

ಕೇರಳ ಸರ್ಕಾರ ಹೊರಡಿಸಿದ್ದ ಪ್ರಮುಖ ಸುಗ್ರೀವಾಜ್ಞೆಗಳಿಗೆ ರಾಜ್ಯಪಾಲರು ನಿಗದಿತ ಸಮಯದೊಳಗೆ ಸಹಿ ಹಾಕದ್ದರಿಂದ ಅವುಗಳ ಅವಧಿ ಮುಕ್ತಾಯವಾಗಿದೆ ಎಂದು ಆರೋಪಿಸಲಾಗಿದೆ. ರಾಜ್ಯದ ವಿಶ್ವವಿದ್ಯಾಲಯಗಳಿಗೆ ಕುಲಪತಿ ನೇಮಕಾತಿಯಲ್ಲಿ ರಾಜ್ಯಪಾಲರ ಅಧಿಕಾರವನ್ನು ಮೊಟಕುಗೊಳಿಸುವ ಮಹತ್ವದ ಸುಗ್ರೀವಾಜ್ಞೆಯೂ ಇದರಲ್ಲಿ ಸೇರಿತ್ತು. ಸುಗ್ರೀವಾಜ್ಞೆಯ ಕಡತಗಳ ಅಧ್ಯಯನಕ್ಕೆ ಸಮಯ ಬೇಕಾಗುತ್ತದೆ ಎಂಬುದು ರಾಜ್ಯಪಾಲರ ಸ್ಪಷ್ಟನೆ. 

ವಿಶ್ವವಿದ್ಯಾಲಯಗಳ ಕುಲಾಧಿಪತಿಯಾಗಿ ಕಾರ್ಯ ನಿರ್ವಹಿಸುತ್ತಿರುವ ರಾಜ್ಯಪಾಲರು, ಅಧಿಕಾರ ಮೊಟಕು ಮಾಡಲು ಮುಂದಾಗಿರುವ ರಾಜ್ಯ ಸರ್ಕಾರಕ್ಕೆ ತಿರುಗೇಟು ನೀಡಿದ್ದರು. ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದ್ದ ಬೆನ್ನಲ್ಲೇ, ಕೇರಳ ವಿಶ್ವವಿದ್ಯಾಲಯ ಕುಲಪತಿ ನೇಮಕಕ್ಕೆ ಶೋಧನಾ ಸಮಿತಿ ರಚಿಸಿದ್ದರು. ರಾಜ್ಯಪಾಲರ ಕಾರ್ಯ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರವು ಹಸ್ತಕ್ಷೇಪ ಮಾಡುತ್ತಿದೆ ಎಂದು ಅವರು ಟೀಕಿಸಿದ್ದರು. ರಾಜ್ಯಪಾಲರ ಆಪ್ತ ಕಾರ್ಯದರ್ಶಿಯನ್ನಾಗಿ ಬಿಜೆಪಿ ಮುಖಂಡರೊಬ್ಬರನ್ನು ನೇಮಕ ಮಾಡಿಕೊಂಡಿದ್ದೂ ಸಹ ಆರಿಫ್ ಖಾನ್ ಮತ್ತು ಪಿಣರಾಯಿ ನಡುವೆ ಸಂಘರ್ಷ ಸೃಷ್ಟಿಸಿತ್ತು. 

ರಾಜ್ಯಪಾಲರ ನೇಮಕಾತಿ ಹಾಗೂ ತೆಗೆದುಹಾಕುವ ವಿಚಾರದಲ್ಲಿ ರಾಜ್ಯ ಸರ್ಕಾರಗಳ ಜೊತೆ ಸಮಾಲೋಚನೆ ನಡೆಸಬೇಕು ಎಂಬುದು ಎಡಪಕ್ಷಗಳ ಬೇಡಿಕೆ. ರಾಜ್ಯಪಾಲರ ಹುದ್ದೆಯ ಅಗತ್ಯವನ್ನೂ ಎಡಪಕ್ಷಗಳು ಈ ಹಿಂದೆ ಪ್ರಶ್ನೆ ಮಾಡಿದ್ದವು. ರಾಜ್ಯಪಾಲರ ನೇಮಕಾತಿಯಲ್ಲಿ ಸುಧಾರಣೆ ತರಬೇಕು ಎಂಬ ಆಗ್ರಹವನ್ನೂ ಮಂಡಿಸಿದ್ದವು.

ಆಧಾರ: ಪಿಟಿಐ, ರಾಯಿಟರ್ಸ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು