ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Explainer | ಕೊರೊನಾ ದ್ವಿಗುಣ ಪ್ರಮಾಣ ವಿದೇಶಗಳಿಗಿಂತ ಭಾರತದಲ್ಲೇ ಕಡಿಮೆ: ಹೇಗೆ?

Last Updated 18 ಏಪ್ರಿಲ್ 2020, 11:15 IST
ಅಕ್ಷರ ಗಾತ್ರ

ನವದೆಹಲಿ: ಚೀನಾದ ವುಹಾನ್‌ ನಗರದಲ್ಲಿ ಡಿಸೆಂಬರ್‌ನಲ್ಲಿ ಮೊದಲು ಪತ್ತೆಯಾದ ಕೊರೊನಾ ವೈರಸ್ ಸೋಂಕು ಮಾರ್ಚ್ ವೇಳೆಗೆ ವಿಶ್ವದೆಲ್ಲೆಡೆ ವೇಗವಾಗಿ ಹರಡತೊಡಗಿತು. ಇಟಲಿ, ಅಮೆರಿಕ, ಸ್ಪೇನ್‌ನಲ್ಲಿ ಕಡಿಮೆ ಅವಧಿಯಲ್ಲಿಯೇ ವ್ಯಾಪಕವಾಗಿ ಹರಡಿದ್ದಲ್ಲದೆ ಲಕ್ಷಾಂತರ ಜನರನ್ನು ಬಲಿ ಪಡೆದಿದೆ. ಆದಾಗ್ಯೂ ಜಗತ್ತಿನ ಪ್ರಮುಖ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದಲ್ಲಿ ಸೋಂಕಿನ ಹರಡುವಿಕೆಯ ತೀವ್ರತೆ ಕಡಿಮೆ ಇದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಅಮೆರಿಕ, ಸ್ಪೇನ್, ಇಟಲಿಯಲ್ಲಿ ಒಂದೆರಡು ದಿನಗಳಲ್ಲೇ ಸೋಂಕು ದುಪ್ಪಟ್ಟು, ನಾಲ್ಕುಪಟ್ಟಾಗಿ ಹರಡಿದರೆ ಭಾರತದಲ್ಲಿ ದ್ವಿಗುಣಗೊಳ್ಳಲು ತೆಗೆದುಕೊಂಡ ಸಮಯ ತುಸು ದೀರ್ಘವಿದೆ ಎಂದು ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಟಣೆಯಿಂದ ತಿಳಿದು ಬಂದಿದೆ. ಏಪ್ರಿಲ್ 16ರ ವರೆಗಿನ ಅಂಕಿ ಅಂಶಗಳು ಈ ಪ್ರಕಟಣೆಯಲ್ಲಿದ್ದು, ಇದರ ಪ್ರಕಾರ 7 ದೇಶಗಳಿಗೆ ಹೋಲಿಸಿದರೆ ಕೊರೊನಾ ಸೋಂಕು ದ್ವಿಗುಣಗೊಂಡ ಪ್ರಮಾಣ ಭಾರತದಲ್ಲೇ ಕಡಿಮೆ ಇದೆ. 12 ರಾಷ್ಟ್ರಗಳಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಮಾಣ ಭಾರತಕ್ಕಿಂಲೂ ಹೆಚ್ಚಿದೆ.

ಏಪ್ರಿಲ್ 16 ವರೆಗಿನ ಲೆಕ್ಕಾಚಾರ ಪ್ರಕಾರ, ಭಾರತಕ್ಕಿಂತ ಹೆಚ್ಚು ಪ್ರಕರಣ ದಾಖಲಾದ ದೇಶಗಳು ಅಮೆರಿಕ, ಸ್ಪೇನ್, ಇಟಲಿ, ಜರ್ಮನಿ, ಫ್ರಾನ್ಸ್, ಬ್ರಿಟನ್, ಚೀನಾ, ಇರಾನ್, ಟರ್ಕಿ, ಬೆಲ್ಜಿಯಂ, ಬ್ರೆಜಿಲ್, ಕೆನಡಾ, ನೆದರ್ಲೆಂಡ್ಸ್, ಸ್ವಿಜರ್ಲೆಂಡ್, ರಷ್ಯಾ, ಪೋರ್ಚುಗಲ್, ಆಸ್ಟ್ರಿಯಾ, ಐರ್ಲೆಂಡ್ಸ್ ಮತ್ತು ಇಸ್ರೇಲ್ ಆಗಿವೆ.

ದ್ವಿಗುಣ ಲೆಕ್ಕಾಚಾರವೇ ಏಕೆ?

ಕೊರೊನಾ ಹರಡುವಿಕೆಯ ತೀವ್ರತೆಯನ್ನು ಸಾಮಾನ್ಯವಾಗಿ ಅದು ದ್ವಿಗುಣಗೊಳ್ಳುವ ಆಧಾರದಲ್ಲೇ ತಜ್ಞರು ಲೆಕ್ಕಹಾಕುತ್ತಾರೆ. ಎಷ್ಟು ಬೇಗ ಸೋಂಕು ಹರಡಿತು ಎಂಬುದನ್ನು ಲೆಕ್ಕಹಾಕುವ ಸಲುವಾಗಿ ಈ ವಿಧಾನವನ್ನೇ ಆಯ್ದುಕೊಳ್ಳಲಾಗುತ್ತದೆ. ಕಡಿಮೆ ಅವಧಿಯಲ್ಲಿ ಸೋಂಕು ತಗುಲಿದವರ ಸಂಖ್ಯೆ ದುಪ್ಪಟ್ಟಾದರೆ ಆತಂಕ ಹೆಚ್ಚು.

ಆರೋಗ್ಯ ಸಚಿವಾಲಯ ಲೆಕ್ಕ ಹಾಕಿದ್ದು ಹೀಗೆ...

ನಾಲ್ಕು ಹಂತದಲ್ಲಿ ಸೋಂಕಿತರ ಲೆಕ್ಕ ಹಾಕಿ ವಿಶ್ವದ ಇತರ ದೇಶಗಳ ಜತೆ ತುಲನೆ ಮಾಡಲಾಗಿದೆ. 750ರಿಂದ 1,500; 1,500ರಿಂದ 3,000; 3,000ದಿಂದ 6,000; 6,000ದಿಂದ 12,000ಕ್ಕೆ ತಲುಪಿದ ದಿನಗಳನ್ನು ಲೆಕ್ಕಹಾಕಲಾಗಿದೆ. ವಿಶ್ವದ ಇತರ ರಾಷ್ಟ್ರಗಳ ಸೋಂಕಿತರ ಸಂಖ್ಯೆಯನ್ನು ಜಾನ್ಸ್ ಹಾಪ್‌ಕಿನ್ಸ್‌ನಿಂದ ತೆಗೆದುಕೊಳ್ಳಲಾಗಿದೆ.

ಹಂತಗಳಲ್ಲಿ ಲೆಕ್ಕಾಚಾರ...

ಹಂತ 1: ಭಾರತದಲ್ಲಿ ಸೋಂಕಿತರ ಸಂಖ್ಯೆ 750ರಿಂದ 1,500 ತಲುಪಲು 5 ದಿನ ತೆಗೆದುಕೊಂಡಿದೆ. ಇರಾನ್, ಸ್ಪೇನ್, ಟರ್ಕಿಯಂತಹ ದೇಶಗಳಿಗೆ ಹೋಲಿಸಿದರೆ ಇದು ದೀರ್ಘ ಅವಧಿ. ಆ ದೇಶಗಳಲ್ಲಿ ಸೋಂಕಿತರ ಸಂಖ್ಯೆ ಕೇವಲ ಒಂದು ದಿನದಲ್ಲಿ 1,500ಕ್ಕೆ ತಲುಪಿತ್ತು.

ಹಂತ 2: ಎರಡನೇ ಹಂತದಲ್ಲಿ, ಅಂದರೆ 1,500ರಿಂದ 3,000 ತಲುಪಲು ಭಾರತದಲ್ಲಿ 3 ದಿನಗಳು ಬೇಕಾದವು. ಈ ಅವಧಿಯಲ್ಲಿ 7 (ಬ್ರಿಟನ್, ರಷ್ಯಾ, ಪೋರ್ಚುಗಲ್, ಆಸ್ಟ್ರಿಯಾ, ನೆದರ್ಲೆಂಡ್ಸ್, ಬ್ರೆಜಿಲ್ ಮತ್ತು ಐರ್ಲೆಂಡ್) ದೇಶಗಳಲ್ಲಿ ಭಾರತಕ್ಕಿಂತಲೂ ನಿಧಾನವಾಗಿ ಸೋಂಕು ಹರಡಿತ್ತು. ಈ ದೇಶಗಳಲ್ಲಿ 6 ದಿನಗಳಲ್ಲಿ ಸೋಂಕಿತರ ಸಂಖ್ಯೆ ದುಪ್ಪಟ್ಟಾಗಿತ್ತು. ಸುಮಾರು 12 ದೇಶಗಳಲ್ಲಿ ಭಾರತದಲ್ಲಿ ಹರಡಿದ ವೇಗದಲ್ಲೇ ಸೋಂಕು ಹರಡಿತ್ತು.

ಹಂತ 3: ಈ ಹಂತದಲ್ಲಿ ಭಾರತದಲ್ಲಿ ಸೋಂಕಿತರ ಸಂಖ್ಯೆ 3,000ದಿಂದ 6,000 ತಲುಪಲು 5 ದಿನಗಳು ಬೇಕಾದವು. ಆದರೆ, ಐರ್ಲೆಂಡ್ ಹೊರತುಪಡಿಸಿ (8 ದಿನ) ಉಳಿದೆಲ್ಲ ದೇಶಗಳಲ್ಲಿ ಭಾರತಕ್ಕಿಂತಲೂ ಕಡಿಮೆ ಅವಧಿಯಲ್ಲಿ ಸೋಂಕಿತರ ಸಂಖ್ಯೆ 6,000 ದಾಟಿತ್ತು. ಸ್ಪೇನ್‌ನಲ್ಲಿ ಒಂದೇ ದಿನದಲ್ಲಿ ದುಪ್ಪಟ್ಟಾಗಿತ್ತು.

ಹಂತ 4: ಈ ಹಂತದಲ್ಲಿ ಸೋಂಕಿತರ ಸಂಖ್ಯೆ 6,000ದಿಂದ 12,000 ತಲುಪಲು ಭಾರತದಲ್ಲಿ 6 ದಿನಗಳು ಬೇಕಾದವು. ಕೇವಲ 4 ದೇಶಗಳಲ್ಲಿ ಇದಕ್ಕಿಂತಲೂ ಹೆಚ್ಚು ಸಮಯ ಬೇಕಾಯಿತು. ಇಸ್ರೇಲ್‌ನಲ್ಲಿ 13 ದಿನ ಬೇಕಾಯಿತು. ಆಸ್ಟ್ರಿಯಾದಲ್ಲಿ 10 ದಿನ, ಪೋರ್ಚುಗಲ್‌ನಲ್ಲಿ 8, ಐರ್ಲೆಂಡ್‌ನಲ್ಲಿ 7 ದಿನಗಳು ಬೇಕಾದವು. ಆದರೆ ಅಮೆರಿಕ, ಜರ್ಮನಿ, ಚೀನಾದಲ್ಲಿ ಸೋಂಕಿತರ ಸಂಖ್ಯೆ 2 ದಿನಗಳಲ್ಲೇ 6,000 ದಾಟಿತ್ತು.

ಒಟ್ಟು ಜನಸಂಖ್ಯೆ ಲೆಕ್ಕಾಚಾರದಲ್ಲೂ ಭಾರತ ಮೇಲು

ದೇಶದ ಒಟ್ಟು ಜನಸಂಖ್ಯೆ ಮತ್ತು ಸೋಂಕು ತಗುಲಿದವರ ಪ್ರಮಾಣಕ್ಕೆ ಹೋಲಿಸಿದರೂ ಭಾರತ ಇತರ ಅನೇಕ ದೇಶಗಳಿಂದ ಉತ್ತಮ ಸ್ಥಿತಿಯಲ್ಲಿದೆ. 32.82 ಕೋಟಿ (ವಿಕಿಪೀಡಿಯಾ ಮಾಹಿತಿ ಪ್ರಕಾರ) ಜನಸಂಖ್ಯೆ ಹೊಂದಿರುವ ಅಮೆರಿಕದಲ್ಲೇ ಈವರೆಗೆ 7 ಲಕ್ಷಕ್ಕೂ ಹೆಚ್ಚು ಜನರಿಗೆ ಕೋವಿಡ್–19 ತಗುಲಿದೆ. 37 ಸಾವಿರಕ್ಕೂ ಹೆಚ್ಚು ಜನ ಅಲ್ಲಿ ಮೃತಪಟ್ಟಿದ್ದಾರೆ. ಆದರೆ, 135 ಕೋಟಿಗೂ ಹೆಚ್ಚು ಜನರಿರುವ ಭಾರತದಲ್ಲಿ ಈವರೆಗೆ 14,378 ಜನರಿಗೆ ಸೋಂಕು ತಗುಲಿದ್ದು, 480 ಮಂದಿ ಮೃತಪಟ್ಟಿದ್ದಾರೆ.

ದೇಶಗಳ ಜನಸಂಖ್ಯೆ ಮತ್ತು ಸೋಂಕಿತರ ಸಂಖ್ಯೆ

* ಭಾರತದ ಜನಸಂಖ್ಯೆ – 135.26 ಕೋಟಿ
* ಭಾರತದಲ್ಲಿ ಸೋಂಕಿತರ ಸಂಖ್ಯೆ – 14,378
* ಮೃತರ ಸಂಖ್ಯೆ – 480

* ಅಮೆರಿಕದ ಜನಸಂಖ್ಯೆ – 32.82 ಕೋಟಿ
* ಅಮೆರಿಕದಲ್ಲಿ ಸೋಂಕಿತರ ಸಂಖ್ಯೆ – 706,779‌
* ಮೃತರ ಸಂಖ್ಯೆ – 37,079

* ಸ್ಪೇನ್ ಜನಸಂಖ್ಯೆ – 4.69 ಕೋಟಿ
* ಸ್ಪೇನ್‌ನಲ್ಲಿ ಸೋಂಕಿತರ ಸಂಖ್ಯೆ – 190,839
* ಮೃತರ ಸಂಖ್ಯೆ – 20,002

* ಇಟಲಿ ಜನಸಂಖ್ಯೆ – 6.04
* ಇಟಲಿಯಲ್ಲಿ ಸೋಂಕಿತರ ಸಂಖ್ಯೆ – 172,434
* ಮೃತರ ಸಂಖ್ಯೆ – 22,745

ಭಾರತದಲ್ಲಿ ಲಾಕ್‌ಡೌನ್ ಪ್ರಯೋಜನ

ಭಾರತದಲ್ಲಿ ಸೋಂಕು ವ್ಯಾಪಕಗೊಳ್ಳುವುದನ್ನು ತಡೆಯುವ ನಿಟ್ಟಿನಲ್ಲಿ ಲಾಕ್‌ಡೌನ್ ಪರಿಣಾಮ ಬೀರಿದೆ ಎನ್ನಲಾಗಿದೆ. ಮೊದಲಿಗೆ ಮಾರ್ಚ್‌ 25ರಿಂದ ಏಪ್ರಿಲ್‌ 14ರ ವರೆಗೆ ಲಾಕ್‌ಡೌನ್ ಘೋಷಿಸಲಾಗಿತ್ತು. ಬಳಿಕ ಇದೀಗ ಏಪ್ರಿಲ್ 15ರಿಂದ ಮೇ 3ರ ವರೆಗೆ ಎರಡನೇ ಹಂತದ ಲಾಕ್‌ಡೌನ್ ಜಾರಿಯಲ್ಲಿದೆ.

ದೇಶದಾದ್ಯಂತ ಲಾಕ್‌ಡೌನ್‌ ಘೋಷಣೆ ಮಾಡಿರುವ ಭಾರತ ಸರ್ಕಾರದ ಕ್ರಮವನ್ನು ಅಂತರರಾಷ್ಟ್ರೀಯ ಹಣಕಾಸು ನಿಧಿಯೂ (ಐಎಂಎಫ್‌) ಇತ್ತೀಚೆಗೆ ಬೆಂಬಲಿಸಿತ್ತು. ‘ಆರ್ಥಿಕತೆ ಮಂದಗತಿಯಲ್ಲಿ ಸಾಗುತ್ತಿದ್ದಾಗಲೇ ಭಾರತಕ್ಕೆ ಜಾಗತಿಕ ಪಿಡುಗಿನ ಸಂಕಷ್ಟ ಎದುರಾಯಿತು. ಆರ್ಥಿಕ ಚೇತರಿಕೆಯ ನಿರೀಕ್ಷೆಯು ಅನಿಶ್ಚಿತವಾಗಿದೆ. ಆರ್ಥಿಕ ಕುಸಿತದ ಹೊರತಾಗಿಯೂ, ಸರ್ಕಾರವು ರಾಷ್ಟ್ರವ್ಯಾಪಿ ಲಾಕ್‌ಡೌನ್ ಜಾರಿಗೆ ತಂದಿದೆ. ಭಾರತದ ಪೂರ್ವಭಾವಿ ನಿರ್ಧಾರವನ್ನು ನಾವು ಬೆಂಬಲಿಸುತ್ತೇವೆ’ ಎಂದು ಐಎಂಎಫ್‌ನ ಏಷ್ಯಾ ಮತ್ತು ಪೆಸಿಫಿಕ್ ವಿಭಾಗದ ನಿರ್ದೇಶಕ ಚಾಂಗ್ ಯೋಂಗ್ ರೀ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT