ಮಂಗಳವಾರ, ಜೂನ್ 28, 2022
21 °C

ಕೋವಿಡ್‌–19: ಸುಳ್ಳು ಸುದ್ದಿಗಳ ಸುತ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾಹಿತಿ ಸ್ಫೋಟ ಮತ್ತು ಸಾಮಾಜಿಕ ಜಾಲತಾಣಗಳ ಭರಾಟೆಯ ಈ ಸಂದರ್ಭದಲ್ಲಿ ಕೋವಿಡ್‌–19 ಪಿಡುಗಿನ ಸುತ್ತ ಹುಟ್ಟಿಕೊಂಡ ಮತ್ತು ಹರಿದಾಡಿದ ಸುಳ್ಳು ಸುದ್ದಿಗಳಿಗೆ ಲೆಕ್ಕವಿಲ್ಲ. ಕೋವಿಡ್‌ನಂತಹ ಪಿಡುಗಿನ ವಿಚಾರದಲ್ಲಿ ಸುಳ್ಳು ಸುದ್ದಿಗಳನ್ನು ಹರಡುವುದು ಮತ್ತು ಜನರು ಅದನ್ನು ನಂಬಿ ಅದಕ್ಕೆ ಅನುಗುಣವಾಗಿ ನಡೆದುಕೊಳ್ಳುವುದು ಅಪಾಯಕ್ಕೆ ಕಾರಣ ಆಗಬಹುದು. ಇಂತಹ ಸುಳ್ಳು ಸುದ್ದಿಗಳು ಹೇಳಿದಂತೆ ಮಾಡಿದ ಕಾರಣಕ್ಕಾಗಿ 2020ರ ಮೊದಲ ಮೂರು ತಿಂಗಳಲ್ಲಿ ಜಗತ್ತಿನಾದ್ಯಂತ ಆರು ಸಾವಿರಕ್ಕೂ ಹೆಚ್ಚು ಜನರು ಆಸ್ಪತ್ರೆಗೆ ದಾಖಲಾಗಬೇಕಾದ ಪರಿಸ್ಥಿತಿ ಉಂಟಾಗಿತ್ತು ಎಂದು ಇತ್ತೀಚಿನ ಅಧ್ಯಯನವೊಂದು ಹೇಳಿದೆ. ಕನಿಷ್ಠ 800 ಮಂದಿ ಮೃತಪಟ್ಟಿದ್ದಾರೆ ಎಂದೂ ಸಂಶೋಧಕರು ಮಾಹಿತಿ ನೀಡಿದ್ದಾರೆ.

ಕೊರೊನಾ ಎಂಬ ವೈರಾಣು ಇಲ್ಲ, ಕೋವಿಡ್‌ ಎಂಬ ರೋಗವೇ ಇಲ್ಲ ಎಂಬುದರಿಂದ ತೊಡಗಿ ಕೋವಿಡ್‌ ಲಸಿಕೆಯು ಅತ್ಯಂತ ಅಪಾಯಕಾರಿ ಎಂಬಲ್ಲಿವರೆಗೆ ಸುಳ್ಳುಸುದ್ದಿಗಳು ಹರಡಿವೆ. ಕೋವಿಡ್‌ ಲಸಿಕೆಯು ಮನುಷ್ಯನ ಡಿಎನ್‌ಎಯನ್ನೇ ಬದಲಾಯಿಸುತ್ತದೆ, ಜನರ ಸಂತಾನೋತ್ಪತ್ತಿ ಸಾಮರ್ಥ್ಯವನ್ನು ಇಲ್ಲವಾಗಿಸುತ್ತದೆ ಮುಂತಾದ ಸುಳ್ಳುಗಳು ಭಾರತದಲ್ಲಿ ಮಾತ್ರವಲ್ಲ ಜಗತ್ತಿನ ಎಲ್ಲೆಡೆಯೂ ಹರಿದಾಡುತ್ತಿದೆ. ಲಸಿಕೆ ಕುರಿತ ಸುಳ್ಳು ಸುದ್ದಿಗಳಿಂದಾಗಿ ಲಸಿಕೆ ಹಾಕಿಸಿಕೊಳ್ಳಲು ಜನರು ಹಿಂದೇಟು ಹಾಕುತ್ತಿದ್ದಾರೆ. ಕೋವಿಡ್‌ ತಡೆಗೆ ಇರುವ ಅತ್ಯಂತ ಪರಿಣಾಮಕಾರಿ ದಾರಿ ಲಸಿಕೆ ಹಾಕಿಸಿಕೊಳ್ಳುವುದು. ಸುಳ್ಳು ಸುದ್ದಿಯಿಂದಾಗಿ ಜನರು ಲಸಿಕೆ ಹಾಕಿಸಿಕೊಳ್ಳದೇ ಇದ್ದರೆ ಕೋವಿಡ್‌ ವಿರುದ್ಧದ ಹೋರಾಟವೇ ವಿಫಲವಾಗಬಹುದು.

ಈಗಿನ ಡಿಜಿಟಲ್‌ ಯುಗದಲ್ಲಿ ಕೋವಿಡ್‌ನಂತಹ ಸಾಂಕ್ರಾಮಿಕದ ಬಗ್ಗೆ ಸುದ್ದಿಗಳು ಹರಡುವುದನ್ನು ತಪ್ಪಿಸಲು ಸಾಧ್ಯವಿಲ್ಲ. ಆದರೆ, ಅದರ ಪರಿಣಾಮವನ್ನು ಕನಿಷ್ಠಗೊಳಿಸಬಹುದು. ಅದಕ್ಕಾಗಿ ಹಲವು ಸಂಘ ಸಂಸ್ಥೆಗಳು ಕೆಲಸ ಮಾಡುತ್ತಿವೆ. ಹತ್ತಾರು ಜನರೂ ಇದಕ್ಕೆ ಕೈಜೋಡಿಸಿದ್ದಾರೆ. ಸುಳ್ಳು ಸುದ್ದಿಯನ್ನು ಪರಿಶೀಲಿಸಿ, ಸತ್ಯ ಏನು ಎಂಬುದನ್ನು ತಿಳಿಸುವ ಕೆಲಸವನ್ನು ಮಾಡಲಾಗುತ್ತಿದೆ. 2020ರ ಜನವರಿ–ಮಾರ್ಚ್‌ ಅವಧಿಯಲ್ಲಿ ಇಂಗ್ಲಿಷ್‌ ಭಾಷೆಯಲ್ಲಿ ಹರಿದಾಡಿದ ಸುಳ್ಳು ಸುದ್ದಿಗಳ ಪರಿಶೀಲನೆ ಪ್ರಮಾಣವು ಶೇ 900ರಷ್ಟು ಹೆಚ್ಚಿದೆ ಎಂದು ರಾಯಿಟರ್ಸ್‌ ಪತ್ರಿಕೋದ್ಯಮ ಅಧ್ಯಯನ ಸಂಸ್ಥೆಯು ಹೇಳಿದೆ. 

ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಕೂಡ ಸುಳ್ಳು ಸುದ್ದಿ ತಡೆಯುವುದಕ್ಕಾಗಿ ಶ್ರಮಿಸುತ್ತಿದೆ. ‘ಸ್ಟಾಪ್‌ ದ ಸ್ಪ್ರೆಡ್‌’ ಎಂಬ ಜಾಗೃತಿ ಅಭಿಯಾನವನ್ನೂ ನಡೆಸಿದೆ. ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾದ ಸುದ್ದಿಗಳ ಸತ್ಯಾಸತ್ಯತೆಯನ್ನು ಪರಿಶೀಲಿಸುವುದು ಹೇಗೆ ಎಂಬ ಬಗ್ಗೆ ಜಾಗೃತಿಯನ್ನೂ ಮೂಡಿಸಿದೆ. ಆದರೆ, ಡಬ್ಲ್ಯುಎಚ್‌ಒ ಬಗ್ಗೆಯೇ ಹಲವು ಸುಳ್ಳು ಸುದ್ದಿಗಳನ್ನು ಹರಿಬಿಡಲಾಗಿದೆ. ಲಾಕ್‌ಡೌನ್‌ಗೆ ಸಂಬಂಧಿಸಿ ನಾಲ್ಕು ಹಂತಗಳ ಪ್ರಕ್ರಿಯೆಯನ್ನು ಭಾರತಕ್ಕೆ ಡಬ್ಲ್ಯುಎಚ್‌ಒ ಸೂಚಿಸಿದೆ ಎಂಬುದು ಅದರಲ್ಲಿ ಒಂದು. ಇಂತಹ ಯಾವುದೇ ಪ್ರಕ್ರಿಯೆಯನ್ನು ಸೂಚಿಸಿಲ್ಲ, ಇದು ಸುಳ್ಳು ಸುದ್ದಿ ಎಂಬುದನ್ನು ಡಬ್ಲ್ಯುಎಚ್‌ಒ ತನ್ನ ವೆಬ್‌ಸೈಟ್‌ನಲ್ಲಿಯೇ ಪ್ರಕಟಿಸಿದೆ. 

5ಜಿ ಆರಂಭವೇ ಆಗಿಲ್ಲ, ವೈರಾಣು ಪ್ರಸರಣ ಹೇಗೆ?

2020ರ ಆರಂಭದಲ್ಲಿ ಕೋವಿಡ್‌ ಮೊದಲ ಅಲೆ ಜೋರಾಗಿದ್ದ ಸಮಯದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಒಂದು ಧ್ವನಿಮುದ್ರಿಕೆಯು ಜನರನ್ನು ಭೀತಿಗೆ ತಳ್ಳಿತು. ಐದನೇ ತಲೆಮಾರಿನ ತಂತ್ರಜ್ಞಾನಕ್ಕೂ (5ಜಿ) ಕೋವಿಡ್ ವ್ಯಾಪಕವಾಗಿ ಪಸರಿಸುವುದಕ್ಕೂ ನಂಟಿದೆ ಎಂದು ಈ ಧ್ವನಿಮುದ್ರಿಕೆಯಲ್ಲಿ ಹೇಳಲಾಗಿತ್ತು. ಜನರು ಈ ಪರಿ ಕೋವಿಡ್‌ಗೆ ಒಳಗಾಗುತ್ತಿರುವುದಕ್ಕೆ 5ಜಿ ತರಂಗಾಂತರಗಳು ಕಾರಣ ಎಂಬ ವದಂತಿ ಹಬ್ಬಿತು. ಭಾರತದಲ್ಲಿ 5ಜಿ ತಂತ್ರಜ್ಞಾನ ಜಾರಿ ಮಾಡಲು ಸಿದ್ಧತೆಗಳು ಭರದಿಂದ ಸಾಗಿರುವಾಗ ಅಪ್ಪಳಿಸಿದ ಈ ಸುದ್ದಿ ಸಾಕಷ್ಟು ಚರ್ಚೆಗೆ ಗ್ರಾಸವಾಯಿತು.

ಇದು ಭಾರತಕ್ಕೆ ಮಾತ್ರ ಸಂಬಂಧಿಸಿದ ಸುದ್ದಿ ಆಗಿರಲಿಲ್ಲ. ಇಂಗ್ಲೆಂಡ್‌ನಲ್ಲಿ 50ಕ್ಕೂ ಹೆಚ್ಚು 5ಜಿ ಮೊಬೈಲ್ ಗೋಪುರಗಳನ್ನು ನೆಲಸಮ ಮಾಡಲಾಯಿತು. ನ್ಯೂಜಿಲೆಂಡ್‌, ಅಮೆರಿಕ ಹಾಗೂ ಯುರೋಪ್‌ನ ಕೆಲವೆಡೆ ಗೋಪುರಗಳನ್ನು ಸುಡಲಾಯಿತು. ಉತ್ತರ ಪ್ರದೇಶದ ಕೆಲವೆಡೆ ಟವರ್‌ಗಳಿಗೆ ಹಾನಿ ಮಾಡಲಾಯಿತು.

ಕೋವಿಡ್‌ಗೂ 5ಜಿ ತರಂಗಾಂತರಗಳಿಗೂ ಸಂಬಂಧವಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ವದಂತಿಗೆ ತೆರೆ ಎಳೆಯಿತು. ವೈರಸ್‌ಗಳು ರೇಡಿಯೊ ತರಂಗಾಂತರ ಅಥವಾ ಮೊಬೈಲ್ ಗೋಪುರಗಳ ಮೂಲಕ ಸಂಚರಿಸುವುದಿಲ್ಲ ಎಂದು ಭಾರತದ ಸೆಲ್ಯುಲಾರ್ ಆಪರೇಟರ್ ಸಂಘಟನೆ (ಸಿಒಎಐ) ಸ್ಪಷ್ಟನೆ ನೀಡಿತು. ‘ದೇಶದಲ್ಲಿ 5ಜಿ ಪ್ರಾಯೋಗಿಕ ಪರೀಕ್ಷೆಯೇ ಶುರುವಾಗಿಲ್ಲ. ಹೀಗಿರುವಾಗ 5ಜಿ ತರಂಗಾಂತರಗಳು ಕೊರೊನಾ ವೈರಸ್ ಅನ್ನು ಹೊತ್ತೊಯ್ಯುವುದು ಹೇಗೆ ಸಾಧ್ಯ’ ಎಂದು ಕೇಂದ್ರ ದೂರಸಂಪರ್ಕ ಇಲಾಖೆ ತನ್ನ ವಾದ ಮುಂದಿಟ್ಟಿತು.

ಇತ್ತೀಚೆಗೆ, ಬಾಲಿವುಡ್ ನಟಿ ಜೂಹಿ ಚಾವ್ಲಾ ಅವರು 5ಜಿ ಜಾರಿ ಬೇಡ ಎಂದು ಆಗ್ರಹಿಸಿ ಕೋರ್ಟ್ ಮೊರೆ ಹೋಗಿದ್ದಾರೆ. ಮನುಷ್ಯರು, ಪ್ರಾಣಿಗಳು, ಪಕ್ಷಿಗಳ ಮೇಲೆ 5ಜಿ ತರಂಗಾಂತರಗಳು ಹಾನಿ ಮಾಡುತ್ತದೆಯೇ ಎಂಬ ಬಗ್ಗೆ ಅಧ್ಯಯನವೊಂದು ನಡೆಯುವ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಸುಳ್ಳುಗಳ ಸರಮಾಲೆ

*ಲಸಿಕೆ ಹಾಕಿಸಿಕೊಂಡವರು ಎರಡು ವರ್ಷ ಮಾತ್ರ ಬದುಕುತ್ತಾರೆ ಎಂದು ನೊಬೆಲ್ ಪುರಸ್ಕೃತ ವಿಜ್ಞಾನಿ ಲುಚ್ ಮೊಂಟಾನಿಯರ್ ಹೇಳಿದ್ದಾರೆ ಎಂಬ ಸುದ್ದಿ ವೈರಲ್ ಆಗಿತ್ತು. ಅವರು ಹಾಗೆ ಹೇಳಿಲ್ಲ ಎಂದು ಕೆಲವು ಫ್ಯಾಕ್ಟ್‌ಚೆಕ್‌ ವೇದಿಕೆಗಳು ಸ್ಪಷ್ಟಪಡಿಸಿವೆ

*ಆಮ್ಲಜನಕ ಸಿಲಿಂಡರ್‌ಗೆ ನೆಬ್ಯುಲೈಸರ್ ಪರ್ಯಾಯ ಎಂಬುದಾಗಿ ವೈದ್ಯರೊಬ್ಬರು ಪ್ರಾತ್ಯಕ್ಷಿಕೆ ನೀಡುತ್ತಿರುವ ವಿಡಿಯೊ ವೈರಲ್ ಆಗಿತ್ತು. ಅವರು ನೆಬ್ಯುಲೈಸರ್ ಬಳಕೆ ವಿಧಾನ ತೋರಿಸಿದ್ದರೇ ವಿನಾ, ಅದು ಪರ್ಯಾಯ ಎಂದು ಹೇಳಿರಲಿಲ್ಲ

*‘ಮಾಸ್ಕ್‌ನಲ್ಲಿ ಬ್ಯಾಕ್ಟೀರಿಯಾಗಳಿದ್ದು, ಅದನ್ನು ಧರಿಸಿದರೆ ಕೋವಿಡ್ ತಗುಲುತ್ತದೆ. ಬಿಸಿ ಮಾಡಿದರೆ ಕೀಟಾಣುಗಳು ಹೊರಬರುತ್ತವೆ’ ಎಂದು ಬಿಂಬಿಸುವ ವಿಡಿಯೊವೊಂದು ವೈರಲ್ ಆಗಿತ್ತು. ಆದರೆ, ಬಟ್ಟೆಯ ಎಳೆಗಳು ಬಿಸಿ ಮಾಡಿದಾಗ ಅಲುಗಾಡಿದಂತೆ ಕಾಣಿಸುತ್ತದೆ. ಅದು ವೈರಾಣು ಅಲ್ಲ ಎಂಬುದನ್ನು ನಂತರ ಸ್ಪಷ್ಟಪಡಿಸಲಾಗಿತ್ತು

*ಕೋಳಿಗಳಿಂದ ಕಪ್ಪು ಶಿಲೀಂಧ್ರ ಸೋಂಕು ಮನುಷ್ಯರಿಗೆ ಹರಡುತ್ತದೆ ಎಂಬ ಸುದ್ದಿ ಇತ್ತೀಚೆಗೆ ವ್ಯಾಪಕವಾಗಿ ಹರಿದಾಡಿತ್ತು. ಇದಕ್ಕೆ ವೈಜ್ಞಾನಿಕ ಪುರಾವೆಗಳಿಲ್ಲ

*ಲಸಿಕೆಯನ್ನು ಮಾನವನ ಮೇಲೆ ಪ್ರಯೋಗಕ್ಕೆ ಒಳಪಡಿಸಿದ ವೇಳೆ ಸ್ವಯಂಸೇವಕರೊಬ್ಬರು ಮೃತಪಟ್ಟರು ಎಂದು ವರದಿಯಾಗಿತ್ತು. ಅವರ ಸಾವಿಗೆ ಲಸಿಕೆ ಕಾರಣವಲ್ಲ ಎಂದು ತಯಾರಿಕಾ ಸಂಸ್ಥೆ ಖಚಿತಪಡಿಸಿತ್ತು

*ಕೋವಿಡ್ ಪ್ರಸರಣ ತಡೆಯಲು ಮಾಸ್ಕ್ ಧರಿಸುವಿಕೆ ಹಾಗೂ ಅಂತರ ಕಾಯ್ದುಕೊಳ್ಳುವುದು ಅಗತ್ಯವಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ ಎಂಬ ಸುದ್ದಿಯೂ ವೈರಲ್ ಆಗಿತ್ತು. ಇಂತಹ ಹೇಳಿಕೆಯನ್ನು ಸಂಸ್ಥೆ ನೀಡಿರಲಿಲ್ಲ

*ಕೋವ್ಯಾಕ್ಸಿನ್ ಲಸಿಕೆಯನ್ನು 12 ವರ್ಷ ಮೇಲ್ಪಟ್ಟ ಮಕ್ಕಳಿಗೆ ನೀಡಲು ಸರ್ಕಾರ ಒಪ್ಪಿದೆ ಎಂಬ ಸುಳ್ಳು ಸುದ್ದಿಯೂ ಹರಿದಾಡಿತ್ತು

*ಕೋವಿಡ್ ತಗಲುವುದನ್ನು ತಡೆಯಲು ಹಲವು ಮನೆಮದ್ದುಗಳು ವೈರಲ್ ಆಗಿವೆ. ಬಿಸಿನೀರಿಗೆ ನಿಂಬೆರಸ ಹಾಗೂ ಅಡುಗೆ ಸೋಡಾ ಸೇರಿಸಿ ಕುಡಿದರೆ, ವೈರಾಣು ನಾಶವಾಗುತ್ತದೆ ಎಂಬುದು ಈ ಪೈಕಿ ಒಂದು. ಇದಕ್ಕೆ ವೈಜ್ಞಾನಿಕ ಪುರಾವೆಗಳು ಇಲ್ಲ ಎಂದು ಪಿಐಬಿ ಫ್ಯಾಕ್ಟ್ ಚೆಕ್ ವೇದಿಕೆ ತಿಳಿಸಿತ್ತು

‘ಕೊರೊನಾ ವೈರಾಣು ಮಾನವ ನಿರ್ಮಿತವಲ್ಲ’

‘ಕೋವಿಡ್‌-19ಗೆ ಕಾರಣವಾಗಿರುವ ಕೊರೊನಾ ವೈರಾಣುವನ್ನು ಚೀನಾದ ಪ್ರಯೋಗಾಲಯದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಈ ವೈರಾಣು ಮಾನವ ನಿರ್ಮಿತ. ವಿಶ್ವದ ಆರ್ಥಿಕತೆಯನ್ನು ಸಂಕಷ್ಟಕ್ಕೆ ಈಡು ಮಾಡಲು ಚೀನಾ ಈ ವೈರಾಣುವನ್ನು ಅಭಿವೃದ್ಧಿಪಡಿಸಿದೆ’ ಎಂಬ ಸುದ್ದಿ, ಕೋವಿಡ್ ಬಂದಾಗಿನಿಂದಲೂ ಪ್ರಚಲಿತದಲ್ಲಿ ಇದೆ. 2020ರಲ್ಲಿ ಅಮೆರಿಕದ ಅಂದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹ ಇದನ್ನೇ ಹೇಳಿದ್ದರು. ‘ಚೀನಾದ ವುಹಾನ್‌ನ ವೈರಾಣು ವಿಜ್ಞಾನ ಪ್ರಯೋಗಾಲಯದಲ್ಲಿ ಇದನ್ನು ಅಭಿವೃದ್ಧಿಪಡಿಸಲಾಗಿದೆ' ಎಂದು ಟ್ರಂಪ್ ಆರೋಪಿಸಿದ್ದರು.

ಜಗತ್ತಿನ ಎಲ್ಲೆಡೆಯಿಂದ ಇದೇ ಆರೋಪ ಕೇಳಿಬಂದ ಕಾರಣಕ್ಕೆ, ಕೊರೊನಾ ವೈರಾಣುವಿನ ಮೂಲವನ್ನು ಪತ್ತೆ ಮಾಡಲು ವಿಶ್ವ ಆರೋಗ್ಯ ಸಂಸ್ಥೆಯು ಜಾಗತಿಕ ಮಟ್ಟದ ತಜ್ಞರ ತಂಡವನ್ನು ರಚಿಸಿತು. ಈ ತಂಡವು ಚೀನಾದ ವುಹಾನ್‌ಗೆ ಭೇಟಿ ನೀಡಿ, ಹಲವು ತಿಂಗಳ ಕಾಲ ಪರಿಶೀಲನೆ ನಡೆಸಿತು. ಜತೆಗೆ ವಿಶ್ವದ ಕೆಲವು ವಿಶ್ವವಿದ್ಯಾಲಯಗಳೂ ಈ ಬಗ್ಗೆ ಸಂಶೋಧನೆ ನಡೆಸಿದ್ದವು.

ಕೋವಿಡ್‌-19ಗೆ ಕಾರಣವಾಗುವ ಕೊರೊನಾ ವೈರಾಣುವಿನ ಪೂರ್ಣ ಹೆಸರು ‘ಸಿವಿಯರ್‌ ಅಕ್ಯೂಟ್ ರೆಸ್ಪಿರೇಟರಿ ಸಿಂಡ್ರೋಮ್ ಕೊರೊನಾ ವೈರಸ್-2 (ಸಾರ್ಸ್‌ ಕೋವ್-2)’. ಕೊರೊನಾ ವೈರಾಣುಗಳು ಸಾಮಾನ್ಯವಾಗಿ ಬಾವಲಿಗಳಲ್ಲಿ ಮಾತ್ರವೇ ಇರುತ್ತವೆ. ಚೀನಾದ ವುಹಾನ್‌ನಿಂದ 300 ಕಿ.ಮೀ. ದೂರದಲ್ಲಿರುವ ಕಾಡಿನಲ್ಲಿ ಹಾರ್ಸ್‌ಷೂ ಬಾವಲಿಗಳು ಇವೆ. ಸಾರ್ಸ್‌ ಕೋವ್‌-2 ವೈರಾಣು ಈ ಬಾವಲಿಗಳಲ್ಲೇ ವಿಕಾಸವಾಗಿದೆ ಎಂದು ಈ ಸಂಶೋಧನಾ ವರದಿಗಳು ಹೇಳಿದವು. ಆದರೆ, ಬಾವಲಿಗಳಿಂದ ಈ ವೈರಾಣುಗಳು ಮನುಷ್ಯನಿಗೆ ನೇರವಾಗಿ ಹರಡುವುದಿಲ್ಲ. ಹೀಗಿದ್ದಾಗ ಸಾರ್ಸ್‌ ಕೋವ್‌-2 ಮನುಷ್ಯನಿಗೆ ಹೇಗೆ ಹರಡಿತು ಎಂಬುದಕ್ಕೆ ಸಾಕ್ಷ್ಯಸಹಿತ ಸಮರ್ಥನೆ ದೊರೆತಿಲ್ಲ. ಆದರೆ ಬಾವಲಿಗಳಿಂದ ಚಿಪ್ಪುಹಂದಿ ಅಥವಾ ಪುನುಗುಬೆಕ್ಕಿಗೆ ಈ ವೈರಾಣುಗಳು ಹರಡಿಕೊಂಡಿರಬೇಕು. ಈ ಪ್ರಾಣಿಗಳು ಈ ವೈರಾಣುವಿನ ವಾಹಕಗಳಂತೆ ಕೆಲಸ ಮಾಡಿರುವ ಸಾಧ್ಯತೆ ಅತ್ಯಧಿಕವಾಗಿದೆ. ವುಹಾನ್‌ನ ಜೀವಂತ ಕಾಡುಪ್ರಾಣಿ ಮಾರುಕಟ್ಟೆಯಲ್ಲಿ ಚಿಪ್ಪುಹಂದಿ ಅಥವಾ ಪುನುಗುಬೆಕ್ಕಿನಿಂದ ಮನುಷ್ಯನಿಗೆ ಈ ವೈರಾಣು ತಗುಲಿದೆ ಎಂದು ಈಗ ಪ್ರತಿಪಾದಿಸಲಾಗುತ್ತಿದೆ.

ಕೊರೊನಾ ವೈರಾಣು ಮನುಷ್ಯ ನಿರ್ಮಿಸಿದ್ದಲ್ಲ ಎಂಬುದನ್ನು ಈ ಸಂಶೋಧನೆಗಳು ಸಾಬೀತು ಮಾಡಿವೆ. ಜತೆಗೆ ಚೀನಾದ ವುಹಾನ್‌ನಲ್ಲೇ ಇದು ಮೊದಲು ಕಾಣಿಸಿಕೊಂಡಿದ್ದು ಎಂಬುದನ್ನೂ ಸಾಬೀತು ಮಾಡಿವೆ. ಆದರೆ, ಬಾವಲಿಯಿಂದ ಮನುಷ್ಯನಿಗೆ ಈ ವೈರಾಣುವನ್ನು ಹರಡಿಸಿದ ವಾಹಕ ಪ್ರಾಣಿ ಯಾವುದು ಎಂಬುದು ಇನ್ನಷ್ಟೇ ಪತ್ತೆಯಾಗಬೇಕಿದೆ.

ಗಾಳಿಯ ಮೂಲಕ ಹರಡುವುದಿಲ್ಲ

‘ಕೋವಿಡ್‌-19ಗೆ ಕಾರಣವಾಗುವ ಕೊರೊನಾ ವೈರಾಣು ಗಾಳಿಯ ಮೂಲಕ ಹರಡುತ್ತದೆ’ ಎಂಬ ಸುದ್ದಿ ಆರಂಭದ ದಿನಗಳಿಂದಲೂ ಪ್ರಚಲಿತದಲ್ಲಿದೆ. ಗಾಳಿಯ ಮೂಲಕ ವೈರಾಣು ಹರಡುತ್ತದೆಯೇ ಎಂಬುದನ್ನು ಪತ್ತೆ ಮಾಡುವ ಉದ್ದೇಶದಿಂದ ಹಲವು ಸಂಶೋಧನೆಗಳು ನಡೆದಿವೆ. ಗಾಳಿಯ ಮೂಲಕ ಈ ವೈರಾಣು ಹರಡುವುದಿಲ್ಲ ಎಂಬುದನ್ನು ಈ ಸಂಶೋಧನೆಗಳು ಸಾಬೀತು ಮಾಡಿವೆ. ವಿಶ್ವ ಆರೋಗ್ಯ ಸಂಸ್ಥೆಯು ಸಹ ಕೊರೊನಾ ವೈರಾಣು ಗಾಳಿಯ ಮೂಲಕ ಹರಡುವುದಿಲ್ಲ ಎಂಬುದನ್ನು ದೃಢಪಡಿಸಿದೆ.

‘ಕೊರೊನಾ ವೈರಾಣು ಮನುಷ್ಯನ ಮೂಗು ಮತ್ತು ಗಂಟಲಿನ ದ್ರವದಲ್ಲಿ ಇರುತ್ತದೆ. ಸೋಂಕಿತ ವ್ಯಕ್ತಿ ಸೀನಿದಾಗ, ಆತನ ಮೂಗು ಮತ್ತು ಬಾಯಿಯಿಂದ ಸಿಡಿಯುವ ಕಣಗಳಲ್ಲಿ ಈ ವೈರಾಣು ಇರುತ್ತದೆ. ಈ ಕಣಗಳ ಸಂಪರ್ಕಕ್ಕೆ ಬಂದವರಿಗೆ ಸೋಂಕು ತಗಲುತ್ತದೆ’ ಎಂದು ಬಹುತೇಕ ಎಲ್ಲಾ ಸಂಶೋಧನೆಗಳು ಪ್ರತಿಪಾದಿಸಿವೆ. ‘ಮನುಷ್ಯ ಸೀನಿದಾಗ ಅವನ ಮೂಗಿನಿಂದ ಮತ್ತು ಬಾಯಿಯಿಂದ ಸಿಡಿಯುವ ಕಣಗಳು ಗರಿಷ್ಠ 3-4 ಅಡಿ ದೂರದವರೆಗೆ ಹರಡುತ್ತವೆ. ಈ ಕಣಗಳ ತೂಕ ಹೆಚ್ಚಿರುವ ಕಾರಣ ಅವು ನೆಲಕ್ಕೆ ಬೀಳುತ್ತವೆ, ಗಾಳಿಯಲ್ಲಿ ತೇಲುವುದಿಲ್ಲ. ಹೀಗಾಗಿ ವೈರಾಣು ಗಾಳಿಯಲ್ಲಿ ಹರಡುವ ಸಾಧ್ಯತೆ ಇಲ್ಲವೇ ಇಲ್ಲ’ ಎಂದು ಈ ಸಂಶೋಧನೆಗಳು ಹೇಳಿವೆ.

ಆದರೆ ಕೆಲವು ಸಂಶೋಧನೆಗಳು ಮಾತ್ರ ಗಾಳಿಯ ಮೂಲಕವೂ ಈ ವೈರಾಣು ಹರಡುತ್ತವೆ ಎಂಬುದನ್ನು ಪ್ರತಿಪಾದಿಸಿವೆ. ಆದರೆ ಸಂಶೋಧನೆಗೆ ಆಯ್ಕೆಮಾಡಿಕೊಂಡ ಮಾದರಿಗಳ ಸಂಖ್ಯೆ (ಸ್ಯಾಂಪಲ್‌ ಸೈಜ್) ಎರಡಂಕಿಯನ್ನು ದಾಟದ ಕಾರಣ, ಈ ಸಂಶೋಧನೆಯ ಪ್ರತಿಪಾದನೆಗಳನ್ನು ಮಾನ್ಯ ಮಾಡಿಲ್ಲ.

ಆಧಾರ: ವಿಶ್ವ ಆರೋಗ್ಯ ಸಂಸ್ಥೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು