ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ಆಳ-ಅಗಲ | ಬೀದಿ ಬೀದಿಯಲ್ಲಿ ಪೆನ್‌ಡ್ರೈವ್‌; 
ಹೆಣ್ಣಿನ ಮಾನವೂ ಬೀದಿಗೆ...
ಆಳ-ಅಗಲ | ಬೀದಿ ಬೀದಿಯಲ್ಲಿ ಪೆನ್‌ಡ್ರೈವ್‌; ಹೆಣ್ಣಿನ ಮಾನವೂ ಬೀದಿಗೆ...
Published 28 ಏಪ್ರಿಲ್ 2024, 23:51 IST
Last Updated 28 ಏಪ್ರಿಲ್ 2024, 23:51 IST
ಅಕ್ಷರ ಗಾತ್ರ

ಹಾಸನದ ಬೀದಿ ಬೀದಿಗಳಲ್ಲಿ ಪೆನ್‌ಡ್ರೈವ್‌ಗಳನ್ನು ಬಿಸಾಡಲಾಗಿತ್ತು. ಬಿಕರಿಗೆ ಇಟ್ಟ ವಸ್ತುವಿನಂತೆ ಜನರು ಸಾಮಾಜಿಕ ಜಾಲತಾಣಗಳಲ್ಲಿ ಪೆನ್‌ಡ್ರೈವ್‌ನಲ್ಲಿನ ದೃಶ್ಯಗಳನ್ನು, ವಿಡಿಯೊಗಳನ್ನು ಹಂಚಿಕೊಂಡರು. ಯಾಕಾಗಿ ಇಂಥ ಪೆನ್‌ಡ್ರೈವ್‌ಗಳನ್ನು ಹಂಚಲಾಯಿತೊ, ಇದರ ಹಿಂದಣ ‘ರಾಜಕಾರಣ’ವು ಎಂಥದ್ದೇ ಆಗಿರಲಿ. ಆದರೆ, ಬೀದಿ ಬೀದಿಗಳಲ್ಲಿ ಬಿದ್ದಿದ್ದ ಪೆನ್‌ಡ್ರೈವ್‌ಗಳು ನೂರಾರು ಹೆಣ್ಣುಮಕ್ಕಳ ಬದುಕನ್ನು ಬೀದಿಗೆ ತಂದಿದ್ದು ಮಾತ್ರ ಕೌರ್ಯ.

ಈ ಪ್ರಕರಣದ ಸುತ್ತ ಹಲವು ಆರೋಪಗಳು, ಹಲವು ವಿಷಯಗಳು ಚರ್ಚೆಯಾಗುತ್ತಿದೆ. ಕೆಲವು ವರ್ಷಗಳ ಹಿಂದಿನ ವಿಡಿಯೊಗಳು ಇವು ಎಂದೂ ಹೇಳಲಾಗುತ್ತಿದೆ. ಅತ್ಯಾಚಾರಕ್ಕೆ, ದೌರ್ಜನ್ಯಕ್ಕೆ ಒಳಗಾಗಿ ಆ ತಲ್ಲಣದಿಂದ ಹೊರಬರುತ್ತಿದ್ದ ಹೆಣ್ಣುಮಕ್ಕಳು, ಈಗ ಮತ್ತೊಂದು ಆಘಾತಕ್ಕೆ ಒಳಗಾಗುವಂತಾಗಿದೆ. ವಿಡಿಯೊಗಳನ್ನು ಲಕ್ಷಾಂತರ ಸಂಖ್ಯೆಯಲ್ಲಿ ಹಂಚಿಕೊಳ್ಳಲಾಗುತ್ತಿದೆ. ಆರೋಪಿಯು ಪ್ರಭಾವಿ ವ್ಯಕ್ತಿ. ವಿದೇಶಕ್ಕೂ ಹೋಗಿಬಿಡಬಹುದು. ಆದರೆ, ಈ ಹೆಣ್ಣುಮಕ್ಕಳು ಮಾತ್ರ ಇದೇ ಸಮಾಜದಲ್ಲಿ, ಇದೇ ಜನರ ಮಧ್ಯೆಯೇ ಬದುಕಬೇಕು. ‘ಇಂಥ ಪ್ರಕರಣಗಳಲ್ಲಿ ಮಹಿಳೆಯರ ಮೇಲೆಯೇ ಹೆಚ್ಚು ಪರಿಣಾಮ ಉಂಟಾಗುತ್ತದೆ’ ಎನ್ನುತ್ತಾರೆ ಮನೋವೈದ್ಯ ಡಾ. ಸಿ.ಆರ್‌. ಚಂದ್ರಶೇಖರ್‌.

‘ಇಂಥ ಪ್ರಕರಣಗಳಲ್ಲಿ ಅಪರಾಧಭಾವ ಮತ್ತು ಅಪಮಾನ– ಇವೆರಡು ಮಹಿಳೆಯನ್ನು ಗಾಢವಾಗಿ ಕಾಡುತ್ತವೆ. ದೌರ್ಜನ್ಯ, ಅತ್ಯಾಚಾರಗಳಿಂದಾದ ಆಘಾತವು ಹೆಣ್ಣುಮಕ್ಕಳ ಜೀವನದುದ್ದಕ್ಕೂ ಇದ್ದುಬಿಡುತ್ತದೆ. ಇದಕ್ಕಾಗಿ ಅವರಿಗೆ ಆಪ್ತ ಸಮಾಲೋಚನೆಯ ಅವಶ್ಯಕತೆ ಇದೆ’ ಎನ್ನುತ್ತಾರೆ ಅವರು.

‘ದೌರ್ಜನ್ಯ ನಡೆದದ್ದು, ಅದರ ವಿಡಿಯೊಗಳು ಹರಿದಾಡುತ್ತಿರುವುದು ಹೆಣ್ಣುಮಕ್ಕಳನ್ನು ಖಿನ್ನತೆಗೆ ದೂಡುತ್ತದೆ. ನಕಾರಾತ್ಮಕ ಆಲೋಚನೆಗಳು ಕಾಡುತ್ತವೆ. ತನ್ನ ಮೇಲೆಯೇ ತಪ್ಪು ಹೊರಿಸಿಕೊಳ್ಳುವುದು, ಭಯ ಪಡುವುದು, ಕೋಪ ಬರುವುದು, ದುಃಖವಾಗುವುದು– ಹೀಗೆ ಎಲ್ಲಾ ಭಾವನೆಗಳು ಒಮ್ಮೆಲೆ ದಾಳಿ ಮಾಡುತ್ತವೆ. ಸಮಾಜದಿಂದ ತಾನು ದೂರಾಗಿದ್ದೇನೆ ಅಥವಾ ನನ್ನನ್ನೂ ದೂರವಿಡಲಾಗಿದೆ ಎಂಬೆಲ್ಲಾ ಆಲೋಚನೆಗಳು ಹೆಣ್ಣುಮಕ್ಕಳನ್ನು ಹೈರಾಣಾಗಿಸುತ್ತವೆ’ ಎನ್ನುತ್ತಾರೆ ಅವರು.

‘ಇಂಥ ಹೆಣ್ಣುಮಕ್ಕಳಿಗೆ ಹೆಚ್ಚಿನ ಸಹಾನುಭೂತಿ ತೋರಿಸಿದರೂ ಕಷ್ಟವೇ, ಕಡಿಮೆ ಮಾಡಿದರೂ ಕಷ್ಟವೇ. ಕುಟುಂಬವಾಗಿ, ಸಮಾಜವಾಗಿ ನಾವೆಲ್ಲರೂ ಸಂತ್ರಸ್ತೆಯರ ಸಹಾಯಕ್ಕೆ ನಿಲ್ಲಬೇಕಾಗಿದೆ. ಅವರನ್ನು ಇಂಥ ಆಲೋಚನೆಗಳಿಂದ ದೂರ ಮಾಡಬೇಕಾಗಿದೆ. ಜೊತೆಯಲ್ಲಿಯೇ ಇದ್ದು, ಅವರ ಭಾವತೀವ್ರತೆಯನ್ನು ಅರ್ಥಮಾಡಿಕೊಳ್ಳ ಬೇಕಾಗುತ್ತದೆ. ಸಂಗೀತ, ಸಾಹಿತ್ಯ ಇಂಥ ಆಲೋಚನೆಗಳನ್ನು ದೂರಮಾಡಬಲ್ಲವು’ ಎಂದು ಅವರು ಸಲಹೆ ನೀಡುತ್ತಾರೆ.

ಗೌಪ್ಯವಾಗಿರಲಿ ಆಪ್ತ ಸಮಾಲೋಚನೆ: ‘ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಸಂತ್ರಸ್ತೆಯರಿದ್ದಾರೆ. ಇವರೆಲ್ಲರಿಗೂ ಆಪ್ತ ಸಮಾಲೋಚನೆ ಅತ್ಯಗತ್ಯ. ಸರ್ಕಾರವು ಈ ಎಲ್ಲ ಹೆಣ್ಣುಮಕ್ಕಳಿಗೆ ಆಪ್ತ ಸಮಾಲೋಚನೆ ಒದಗಿಸುವ ವ್ಯವಸ್ಥೆ ಮಾಡಬೇಕು ಮತ್ತು ಇದು ಗೌಪ್ಯವಾಗಿರಬೇಕು. ಆಪ್ತ ಸಮಾಲೋಚನೆಗೆ ಒಳಗಾಗುವುದು ಎಂದರೆ, ಅದು ಹುಚ್ಚರಿಗೆ ಮಾತ್ರ, ಅದೊಂದು ಕಳಂಕ ಎನ್ನುವ ಅಭಿಪ್ರಾಯ ಜನರಲ್ಲಿದೆ. ಆದ್ದರಿಂದ, ಎಲ್ಲವೂ ಗೌಪ್ಯವಾಗಿರಬೇಕು. ಅವರಿಗೆ ಅಗತ್ಯ ಔಷದೋಪಚಾರಕ್ಕೂ ವ್ಯವಸ್ಥೆಯಾಗಬೇಕು’ ಎಂದು ಅವರು ಹೇಳುತ್ತಾರೆ.

‘ಸಮರ್ಥನೆ ಮತ್ತು ಮೌನ ಅತ್ಯಂತ ಅಪಾಯಕಾರಿ’

ಇಂತಹ ಲೈಂಗಿಕ ದೌರ್ಜನ್ಯವನ್ನು ಭ್ರಷ್ಟಾಚಾರದಿಂದ ಬೇರ್ಪಡಿಸಲು ಸಾಧ್ಯವೇ ಇಲ್ಲ. ಭ್ರಷ್ಟ ಮನಸ್ಸುಗಳು ಮಾತ್ರ ಇಂತಹ ಕೃತ್ಯ ಎಸಗುತ್ತವೆ. ರಾಜಕಾರಣಿಗಳು ಲೈಂಗಿಕ ದೌರ್ಜನ್ಯವನ್ನು ಎಸಗಿದಾಗ ಅದನ್ನು ಸಮರ್ಥಿಸುವುದು ಅಥವಾ ಮೌನವಹಿಸುವುದು, ರಾಜಕಾರಣಿಗಳು ಇದೆಲ್ಲಾ ಮಾಡೇ ಮಾಡುತ್ತಾರೆ ಎನ್ನುವಂತಹ ಮನಃಸ್ಥಿತಿ ಸಮಾಜದಲ್ಲಿ ಸಾಮಾನ್ಯ ಎನ್ನುವಂತಾದರೆ, ಅದಕ್ಕಿಂತ ದೊಡ್ಡ ಅಪಾಯ ಮತ್ತೊಂದಿಲ್ಲ. ಅತ್ಯಾಚಾರ ಕೃತ್ಯ ಸಾಬೀತಾದಂತಹ ಅತ್ಯಾಚಾರಿಗಳನ್ನು ಅವಧಿಗೂ ಮುನ್ನ ಬಿಡುಗಡೆ ಮಾಡಿದಾಗಲೂ ಈ ಸಮಾಜ ಮೌನವಾಗಿಯೇ ಇತ್ತು. ಇಂತಹ ಕೃತ್ಯಗಳಲ್ಲಿ ಲೈಂಗಿಕ ದೌರ್ಜನ್ಯ ಎಸಗುವವರ ಕೇಡು ಎಷ್ಟರಮಟ್ಟಿಗೆ ಇದೆಯೋ, ಅಂಥದ್ದನ್ನು ಪ್ರತಿಭಟಿಸದೇ ಇರುವ ನಮ್ಮ ಕೇಡೂ ಅಷ್ಟೇ ಇದೆ. 

ಆರ್ಥಿಕ ಭ್ರಷ್ಟಾಚಾರ ಎಸಗಿದ ಸ್ಥಿತಿಯಲ್ಲಿ ಜನರು, ಕಷ್ಟಪಟ್ಟು, ಇದ್ದುದ್ದರಲ್ಲೇ ಬದುಕಿಕೊಳ್ಳಬಹುದೇನೋ. ಆದರೆ ಲೈಂಗಿಕ ದೌರ್ಜನ್ಯ ಎಸಗುವುದಿದೆಯಲ್ಲಾ, ಜನರು ಘನತೆಯಿಂದ ಬದುಕುವುದೂ ಸಾಧ್ಯವಿಲ್ಲ ಎಂಬಂತಹ ಸ್ಥಿತಿಯನ್ನು ತಂದುಬಿಡುತ್ತದೆ. ತನ್ನ ಬದುಕನ್ನು ಸ್ವಾಭಿಮಾನದಿಂದ, ನಿರ್ಭೀತಿಯಿಂದ ಬದುಕುತ್ತೇನೆ ಎನ್ನುವ ಸಾಧ್ಯತೆಯನ್ನೂ ಇದು ನಾಶಮಾಡಿಬಿಡುತ್ತದೆ. ಭ್ರಷ್ಟಾಚಾರವನ್ನು ಸಮರ್ಥಿಸಲಾಗದು, ಭ್ರಷ್ಟಾಚಾರವೂ ಅಪಾಯಕಾರಿಯೇ. ಆದರೆ ಲೈಂಗಿಕ ದೌರ್ಜನ್ಯ ಎಂಬುದು ಅಪಾಯಕಾರಿ ಮಾತ್ರವಲ್ಲ, ಅದೊಂದು ಕೇಡೂ ಹೌದು. ಇಂತಹ ಕೇಡನ್ನು ಎಸಗುವವರನ್ನು ನಾವು ವಿರೋಧಿಸದೇ ಹೋದರೆ, ಪ್ರತಿಭಟಿಸದೇ ಹೋದರೆ ಆ ಕೇಡಿನಲ್ಲಿ ನಾವೂ ಭಾಗಿಯಾದಂತೆ ಆಗುತ್ತದೆ. ನಮ್ಮ ದೇಶದ ಜನರು ಈಚಿನ ವರ್ಷಗಳಲ್ಲಿ ಇಂತಹ ಲೈಂಗಿಕ ದೌರ್ಜನ್ಯ, ಅತ್ಯಾಚಾರ ಪ್ರಕರಣಗಳ ಬಗ್ಗೆ ನಿರ್ಲಿಪ್ತರಾಗುತ್ತಿದ್ದಾರೆ. ಇದು ನಮ್ಮ ಸಮಾಜದ ಒಂದು ರೋಗ ಲಕ್ಷಣ.

ಪ್ರಭಾವಿ ರಾಜಕಾರಣಿಗಳು ಇಂಥದ್ದನ್ನೆಲ್ಲಾ ಎಸಗಲು ಸಮಾಜದಿಂದ ‘ಪರ್ಮಿಷನ್‌’ ತೆಗೆದುಕೊಂಡುಬಿಟ್ಟಿದ್ದಾರೆ ಎಂಬಂತಾಗಿದೆ. ಇಂತಹವರು ಪ್ರಭಾವಿಗಳಾಗಿದ್ದೇ ಭ್ರಷ್ಟಾಚಾರದಿಂದ. ಭ್ರಷ್ಟಾಚಾರ ಮಾಡುತ್ತಾರೆ ಎಂದು ಗೊತ್ತಿದ್ದೂ ಜಾತಿ–ಧರ್ಮ ಮತ್ತು ಆ ಕ್ಷಣಕ್ಕೆ ತಮಗೆ ದೊರೆಯುವ ಲಾಭದ ಕಾರಣಕ್ಕೆ ಇಂತಹವರನ್ನು ಆಯ್ಕೆ ಮಾಡಿದರೆ, ಅದಕ್ಕೆ ಹುಸಿ ಭಾವಾವೇಶದಲ್ಲಿ ನೈಜತೆಯನ್ನು ಮರೆತದ್ದೇ ಕಾರಣ. ಹೀಗಾಗಿಯೇ ಇಂತಹವರಿಗೆ ಇಷ್ಟೆಲ್ಲಾ ಧೈರ್ಯ ಬಂದಿರುವುದು. ವಿದ್ಯಾವಂತರು, ವಿದ್ಯೆ ಇಲ್ಲದವರು ಎಲ್ಲರೂ ಮೂಢರ ರೀತಿಯಲ್ಲಿ ಯೋಚನೆ ಮಾಡುತ್ತಿದ್ದಾರೆ. ವ್ಯಕ್ತಿಪೂಜೆ, ಪಕ್ಷಪೂಜೆ, ಜಾತಿಧರ್ಮದ ಆಧಾರದಲ್ಲಿ ಮತ್ತು ಜಾತಿ–ಧರ್ಮ ರಕ್ಷಿಸುತ್ತವೆ ಎಂದು ಬೆಂಬಲ ನೀಡುವುದರ ಪರಿಣಾಮವೇ ಇಂತಹ ಕೃತ್ಯಗಳು.

ಈ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ದೌರ್ಜನ್ಯ ನಡೆಸಿದವರು ಮತ್ತು ದೌರ್ಜನ್ಯಕ್ಕೆ ಒಳಗಾದವರು ಒಂದೇ ಧರ್ಮದವರು ಅಲ್ಲವೇ? ಹಾಗಿದ್ದಲ್ಲಿ ಇವರ ಧರ್ಮ ರಕ್ಷಣೆ ಎಲ್ಲಾಯಿತು? ಬೇರೆ ಧರ್ಮದವರು ಇಂತಹ ಕೃತ್ಯ ಎಸಗಿದಾಗ ಅದು ಲೈಂಗಿಕ ದೌರ್ಜನ್ಯ ಎಂಬಂತೆ ಕಾಣುತ್ತದೆ. ಅದೇ ಧರ್ಮದವರು ಎಸಗಿದಾಗ ಅದು ಲೈಂಗಿಕ ದೌರ್ಜನ್ಯವಾಗುವುದಿಲ್ಲವೇ? ಅಂದರೆ ಇವರಿಂದ ಧರ್ಮ ರಕ್ಷಣೆ ಸಾಧ್ಯವಿಲ್ಲ ಎಂಬುದು ಸ್ಪಷ್ಟವಾಯಿತು. ಇಂತಹ ಕೃತ್ಯ ಎಸಗಿದವರೇನೋ ವಿದೇಶಕ್ಕೆ ಪರಾರಿಯಾಗಿಬಿಡುತ್ತಾರೆ. ಆದರೆ ಇಲ್ಲೇ ಉಳಿಯುವ ಸಂತ್ರಸ್ತ ಹೆಣ್ಣುಮಕ್ಕಳ ಬಗ್ಗೆ ಯಾರು ಯೋಚಿಸುತ್ತಾರೆ? ತಮ್ಮ ಧರ್ಮಕ್ಕೆ ಬೇರೆಯವರಿಂದ ಅಪಾಯ ಬಂದಿದೆ ಎಂಬ ಸುಳ್ಳು ಸಂಕಥನಗಳನ್ನು ನಂಬಿಕೊಂಡು, ತಮ್ಮದೇ ಧರ್ಮದ ಭ್ರಷ್ಟರಿಂದ ಹೆಣ್ಣುಮಕ್ಕಳಿಗೆ ಅಪಾಯವಿದೆ ಎಂಬುದನ್ನು ಅರಿತುಕೊಳ್ಳದೇ ಮತ ನೀಡುವ ವಿದ್ಯಾವಂತರೇ ಇದಕ್ಕೆಲ್ಲಾ ಕಾರಣ.

–  ಸಬಿತಾ ಬನ್ನಾಡಿ, ಲೇಖಕಿ

‘ರೋಗಗ್ರಸ್ಥ ಸಮಾಜದ ಸಂಕೇತ’

ಪ್ರಭಾವಿ ರಾಜಕಾರಣಿಯೊಬ್ಬರದು ಎನ್ನಲಾದ ಅಶ್ಲೀಲ ವಿಡಿಯೊ ಒಳಗೊಂಡ ಪೆನ್‌ಡ್ರೈವ್ ಹಾಸನದ ಬೀದಿ ಬೀದಿಗಳಲ್ಲಿ ಹಂಚಿಕೆಯಾಗುತ್ತಿರುವುದು ಇಡೀ ನಾಗರಿಕ ಸಮಾಜವೇ ತಲೆ ತಗ್ಗಿಸುವ ಸಂಗತಿ. ಒಂದೆಡೆ ವಿಡಿಯೊದ ಸತ್ಯಾಸತ್ಯತೆಯ ಕುರಿತು ಇನ್ನಷ್ಟೇ ತನಿಖೆಯಾಗಬೇಕಿದೆ. ಆದರೆ, ಮತ್ತೊಂದೆಡೆ ಸಾರ್ವಜನಿಕ ವಲಯದಲ್ಲಿ ಸಂತ್ರಸ್ತೆಯ ಖಾಸಗಿತನದ ಹಕ್ಕಿನ ಉಲ್ಲಂಘನೆಯಾಗುತ್ತಲೇ ಇದೆ.

ಒಂದು ವೇಳೆ ವಿಡಿಯೊದಲ್ಲಿ ಕಿಂಚಿತ್ತಾದರೂ ಸತ್ಯಾಂಶವಿದ್ದರೆ, ಅದಾಗಲೇ ದೈಹಿಕವಾಗಿ ಮತ್ತು ಮಾನಸಿಕವಾಗಿ ಜರ್ಜರಿತಳಾಗಿ ಅಸಹಾಯಕ ಸ್ಥಿತಿಯಲ್ಲಿರುವ ಸಂತ್ರಸ್ತೆಯ ಮನಸ್ಸಿನ ಮೇಲೆ ಮತ್ತೊಮ್ಮೆ ಪ್ರಹಾರ ಮಾಡುವಂತಹ ಕೊಳಕು ಮನಃಸ್ಥಿತಿಗೆ ತಲುಪಿರುವುದು ರೋಗಗ್ರಸ್ಥ ಸಮಾಜದ ಲಕ್ಷಣವಲ್ಲದೆ ಮತ್ತೇನೂ ಅಲ್ಲ.

ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ, ವೆಬ್ ತಾಣಗಳಲ್ಲಿ ಯಾವುದೇ ಅಡೆತಡೆಯಿಲ್ಲದೆ, ಕಾನೂನಿನ ನಿಯಂತ್ರಣವಿಲ್ಲದೆ ಇಂಥಾ ಸಾವಿರಾರು ಅಶ್ಲೀಲ ವಿಡಿಯೋಗಳು ಅಪ್ ಲೋಡ್ ಆಗುತ್ತಲೇ ಇವೆ. ಐಪಿಸಿ ಸೆಕ್ಷನ್ 354ಸಿ ಪ್ರಕಾರ ಯಾವುದೇ ವ್ಯಕ್ತಿ, ಮಹಿಳೆಯು ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವ ದೃಶ್ಯಗಳನ್ನು ಸೆರೆಹಿಡಿಯುವುದಾಗಲೀ, ಅಥವಾ ಸೆರೆಹಿಡಿದ ದೃಶ್ಯಗಳನ್ನು ಯಾವುದೇ ಮಾದರಿಯಲ್ಲಿ ಹಂಚುವುದು ಮತ್ತು ಪ್ರಸಾರ ಮಾಡುವುದು ಅಪರಾಧವಾಗಿದ್ದು, ಇಂಥ ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ಮೂರು ವರ್ಷದವರೆಗೆ ಕಠಿಣ ಶಿಕ್ಷೆ ವಿಧಿಸಬಹುದು. ಕಾನೂನಿನ ನಿಬಂಧನೆಗಳೇನೇ ಇದ್ದರೂ ಒಟ್ಟಾರೆ ಸಮಾಜದ ವಿಕೃತ ಲೈಂಗಿಕತೆಯ (Voyeuristic) ಧೋರಣೆ ಮತ್ತು ಪುರುಷ ನೋಟದ (male gaze) ಕಣ್ಗಾವಲಿನಿಂದ ಮಹಿಳೆಯರು ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲದ ಅನಾರೋಗ್ಯಕರ ಸ್ಥಿತಿಗೆ ತಲುಪಿದ್ದೇವೆ.

ಪ್ರಕರಣದ ಕುರಿತ ಮುಖ್ಯಮಂತ್ರಿಗಳ ಟ್ವೀಟ್‌ಗೆ ಬಳಕೆದಾರರ ಪ್ರತಿಕ್ರಿಯೆಗಳನ್ನು ನೋಡಿದರೆ ಸಾಕು ಸಮಾಜದ ರೋಗಗ್ರಸ್ಥ ಮನಃಸ್ಥಿತಿಯ ಅನಾವರಣವಾಗುತ್ತದೆ. ಓರ್ವ ಬಳಕೆದಾರ ‘ಸರ್ ಲಿಂಕ್ ಕೊಡಿ’ ಎಂದು ಪ್ರತಿಕ್ರಿಯಿಸಿರುವುದನ್ನು ನೋಡಿದರೆ ಎಲ್ಲರಿಗೂ ಅಸಹ್ಯ ಎನಿಸುವುದರ ಜೊತೆಗೆ ಭೀತಿ ಹುಟ್ಟುತ್ತದೆ. ಇನ್ನೊಂದು ಆಘಾತಕಾರಿ ವಿಚಾರವೇನೆಂದರೆ, ಇಂಥ ಪ್ರತಿಕ್ರಿಯೆ ನೀಡುವ ಸಭ್ಯತೆಯ ಮುಖವಾಡ ತೊಟ್ಟ ಜನರು ನಮ್ಮ ನೆರೆಹೊರೆಯವರಾಗಿರಲೂಬಹುದು, ಅಥವಾ ಪರಿಚಿತರಾಗಿರಲೂಬಹುದು. ಇದೂ ಒಂದು ರೀತಿಯ ಲೈಂಗಿಕ ದೌರ್ಜನ್ಯ ಎಂದರೆ ತಪ್ಪಾಗಲಾರದು. ನಾಲ್ಕು ಗೋಡೆಗಳ ಮಧ್ಯೆ ಹರಣವಾದ ಗೌರವಕ್ಕೆ ಮತ್ತೆ ಸಾರ್ವಜನಿಕವಾಗಿ ಚ್ಯುತಿ ತರುವುದು ನಿಜಕ್ಕೂ ಅನಾಗರಿಕತೆಯ ಸಂಕೇತ.

– ಸತ್ಯಪ್ರಕಾಶ್ ಎಂ.ಆರ್. 
 ಸಹ ಪ್ರಾಧ್ಯಾಪಕ, ಕುವೆಂಪು ವಿಶ್ವವಿದ್ಯಾಲಯ

‘ಚುನಾವಣಾ ಆಯೋಗವೂ ಕ್ರಮ ತೆಗೆದುಕೊಳ್ಳಬೇಕಿತ್ತು’

ಇಂತಹ ಪ್ರಕರಣಗಳಲ್ಲಿ ಯಾರೋ ದೂರು ನೀಡಲಿ ಎಂದು ಕಾಯುತ್ತಾ ಕೂರುವ ಅವಶ್ಯಕತೆ ಇರಲಿಲ್ಲ. ಇದೆಲ್ಲಾ ನೂರಾರು ಹೆಣ್ಣುಮಕ್ಕಳ ಮೇಲೆ ನಡೆದ ದೌರ್ಜನ್ಯ ಮತ್ತು ಅವೆಲ್ಲವೂ ಈಗ ಜಗಜ್ಜಾಹೀರಾಗಿದೆ. ಇಂತಹ ಸಂದರ್ಭದಲ್ಲಿ ಸರ್ಕಾರವು ಸ್ವಯಂಪ್ರೇರಿತವಾಗಿಯೇ ಕ್ರಮ ತೆಗೆದುಕೊಳ್ಳಬೇಕಿತ್ತು. ಪೊಲೀಸ್ ಇಲಾಖೆ ಸಿಬ್ಬಂದಿ ಸಮವಸ್ತ್ರದಲ್ಲಿ ಇದ್ದಾಗಲೇ ಇಂತಹ ಕೃತ್ಯ ನಡೆದಿದೆ. ಅದನ್ನು ಪೊಲೀಸ್ ಇಲಾಖೆಯೂ ಗಂಭೀರವಾಗಿ ಪರಿಗಣಿಸಿ, ಸ್ವಯಂಪ್ರೇರಿತವಾಗಿ ಕ್ರಮ ತೆಗೆದುಕೊಳ್ಳಬೇಕಿತ್ತು. ಇದು ಚುನಾವಣೆಯ ಸಂದರ್ಭದಲ್ಲಿ ಬಹಿರಂಗವಾಗಿರುವ ಕಾರಣ ಚುನಾವಣಾ ಆಯೋಗವೂ ದೂರು ದಾಖಲಿಸಿಕೊಳ್ಳಬೇಕಿತ್ತು.

ಏನೇ ಆಗಿದ್ದರೂ ಅಂತಿಮವಾಗಿ ಇದು ಹೆಣ್ಣುಮಕ್ಕಳ ಘನತೆಗೆ ಕುಂದು ತಂದಿರುವ ಪ್ರಕರಣ. ಆರೋಪಿಯು ಪ್ರತಿ ಮಹಿಳೆಯ ವಿಡಿಯೊ ಕರೆಯನ್ನೂ ಸ್ಕ್ರೀನ್‌ ರೆಕಾರ್ಡ್‌ ಮಾಡಿಕೊಂಡಿದ್ದಾನೆ ಎಂಬುದು ಆತನಿಗೆ ಮಾನಸಿಕ ಸಮಸ್ಯೆ ಇದೆ ಎಂಬುದನ್ನು ತೋರಿಸುತ್ತದೆ. 55–60 ವರ್ಷದ ಮನೆಗೆಲಸದ ಮಹಿಳೆಯ ಮೇಲೂ ದೌರ್ಜನ್ಯ ಎಸಗಲಾಗಿದೆ. ಎಫ್‌ಐಆರ್‌ ಸಹ ದಾಖಲಾಗಿದೆ. ಇದನ್ನಂತೂ ಗಂಭೀರವಾಗಿ ಪರಿಗಣಿಸಲೇಬೇಕು. ಇಲ್ಲೆಲ್ಲಾ ವಿಡಿಯೊಗಳೇ ದಾಖಲೆಗಳಾಗಿ ನಿಲ್ಲುತ್ತಿರುವಾಗ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಳ್ಳಬೇಕಿತ್ತು.

ಇಲ್ಲಿ ಗಮನಿಸಬೇಕಾದ ಇನ್ನೊಂದು ಅಂಶವಿದೆ. ಇಲ್ಲಿ ಎಲ್ಲಾ ಹೆಣ್ಣುಮಕ್ಕಳೂ ಸಂತ್ರಸ್ತೆಯರೇ ಆಗಿದ್ದಾರೆ ಎನ್ನಲಾಗದು. ಸರ್ಕಾರಿ ಅಧಿಕಾರಿಗಳು, ರಾಜಕಾರಣಿಯ ಇಂತಹ ಕೃತ್ಯಕ್ಕೆ ‘ಬಲಿ’ಯಾಗುತ್ತಾರೆ ಎಂಬುದು ಅಮಾಯಕತೆ ಆಗಿರಲಾರದು. ಭ್ರಷ್ಟಾಚಾರದ ಭಾಗವಾಗಿ ಸರ್ಕಾರಿ ಅಧಿಕಾರಿಗಳು ಇಂಥದ್ದರಲ್ಲಿ ಭಾಗಿಯಾಗಿರಬಹುದು. ಈ ಬಗ್ಗೆ ತನಿಖೆಯಾಗಬೇಕು. ಆ ವಿಡಿಯೊಗಳನ್ನು ಒಳಗೊಂಡ ಪೆನ್‌ಡ್ರೈವ್‌ಗಳನ್ನು ಸಾರ್ವಜನಿಕವಾಗಿ ಎಸೆದ ಕೃತ್ಯವೂ ಅತ್ಯಾಚಾರಕ್ಕೆ ಸಮಾನಾದ ಕೃತ್ಯವೇ ಹೌದು. ಇದಕ್ಕೂ ತಕ್ಕ ಶಿಕ್ಷೆಯಾಗಬೇಕು. 

 –ಸ್ಟ್ಯಾನ್ಲಿ, ‘ಒಡನಾಡಿ’ ಸೇವಾ ಸಂಸ್ಥೆ ಸಂಚಾಲಕ

ಧೈರ್ಯ ಬೆಳೆಸಿಕೊಳ್ಳಬೇಕು. ನಾನು ಇದನ್ನು ಎದುರಿಸಿ ಬದುಕಬಲ್ಲೆ ಎಂದು ಮನನ ಮಾಡಿಕೊಳ್ಳಬೇಕು. ನಾನು ಇದರಲ್ಲಿ ಸಂತ್ರಸ್ತೆ ಮಾತ್ರ. ನಾನು ತಪ್ಪಿತಸ್ಥೆ ಅಲ್ಲ ಎಂದು ಧೈರ್ಯ ತಂದುಕೊಳ್ಳಬೇಕು. ನನ್ನಿಂದಲೇ ತಪ್ಪಾಗಿದೆ ಎನ್ನುವಂಥ ಆಲೋಚನೆಗಳನ್ನು ನಾವೇ ಗೆಲ್ಲಬೇಕು. ಆಪ್ತ ಸಮಾಲೋಚನೆ ಇವುಗಳಿಂದ ಹೊರಬರಲು ಸಹಾಕರ ನೀಡುತ್ತದೆ. ಅತ್ಯಾಚಾರ, ದೌರ್ಜನ್ಯದಂಥ ಪ್ರಕರಣಗಳಲ್ಲಿ ವಿಚಾರಣೆ ಎನ್ನುವುದು ಮಹಿಳೆಯರಿಗೆ ದುಃಸ್ವಪ್ನ ಇದ್ದಂತೆ. ಹಾಗಾಗಿ, ನ್ಯಾಯಾಲಯಲ್ಲಿ ನ್ಯಾಯಾಧೀಶರು ಮಹಿಳೆಯೇ ಆಗಿರುವಂತೆ, ವಕೀಲರು ಕೂಡ ಮಹಿಳೆಯರೇ ಆಗಿರುವಂತೆ ನೋಡಿಕೊಳ್ಳಬೇಕು
ಡಾ. ಸಿ.ಆರ್‌. ಚಂದ್ರಶೇಖರ್‌, ಮನೋವೈದ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT