ಗುರುವಾರ, 18 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಜಾವಾಣಿ @ 75: ಹೊಸ ಸ್ಪಂದನ, ಹೊಸ ನುಡಿಗಟ್ಟು ಕದಲಿದ ಯಥಾಸ್ಥಿತಿ ವಾದ

Published 13 ಅಕ್ಟೋಬರ್ 2023, 22:17 IST
Last Updated 13 ಅಕ್ಟೋಬರ್ 2023, 22:17 IST
ಅಕ್ಷರ ಗಾತ್ರ

ಎಲ್ಲಾ ಜನವರ್ಗಗಳ ಅಭಿರುಚಿಗೆ ಸ್ಪಂದಿಸಬೇಕಾದ ಮುಖ್ಯವಾಹಿನಿಯ ಜನಪ್ರಿಯ ಪತ್ರಿಕೆಗಳ ಈ ಅನಿವಾರ್ಯಗಳಾಚೆಗೂ ‘ಪ್ರಜಾವಾಣಿ’ ಪುಟಗಳಲ್ಲಿನ ‘ಮಹಿಳಾ ಕಾಳಜಿ’ ಬಿಂಬಿಸಿರುವ ಸೂಕ್ಷ್ಮತೆ ಹಾಗೂ ಘನತೆಯು ಜನರ ಪ್ರಜ್ಞಾವಲಯವನ್ನು ವಿಸ್ತರಿಸಿದೆ. ಸಮಸ್ಯೆಗಳ ಸಂಕೀರ್ಣತೆಗಳನ್ನು ಅರಿಯುವ ಯತ್ನ ನಿರಂತರವಾಗಿದೆ.

ಮಹಿಳಾ ಹಕ್ಕುಗಳ ವಿಚಾರಗಳಲ್ಲಿ ಹೊಸ ಅರಿವು ಮೂಡಿದ ಕಾಲವೆಂದರೆ 1970ರ ದಶಕ. ಭಾರತದಲ್ಲಿನ ಮಹಿಳೆಯರ ಸ್ಥಿತಿಗತಿ ಕುರಿತಂತೆ 1974ರಲ್ಲಿ ಪ್ರಕಟವಾದ ‘ಸಮಾನತೆಯತ್ತ’ ವರದಿಯು ಸ್ವತಂತ್ರ ಭಾರತದಲ್ಲಿ ಮಹಿಳಾ ಹೋರಾಟಕ್ಕೆ ಹೊಸ ಅಸ್ತಿಭಾರ ಹಾಕಿತು. 1975ರ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ನಂತರ 1975-1985ರ ದಶಕವನ್ನು ಮಹಿಳಾ ದಶಕ ಎಂದು ವಿಶ್ವಸಂಸ್ಥೆ ಘೋಷಿಸಿತು. ವೇತನ ಸಮಾನತೆ, ಮಹಿಳೆ ಮೇಲಿನ ಹಿಂಸಾಚಾರ, ಮಾನವಹಕ್ಕುಗಳ ವಿಚಾರಗಳು ಮುನ್ನೆಲೆಗೆ ಬಂದವು. ಈ ಎಲ್ಲಾ ವಿಚಾರಗಳು, ಆ ದಶಕದ ‘ಪ್ರಜಾವಾಣಿ’ ಪುಟಗಳಲ್ಲಿ ಪ್ರತಿಬಿಂಬಿತವಾಗಿವೆ. ಹೊಸ ಕಾಲಕ್ಕೆ ಸ್ಪಂದಿಸುವ ಹೊಸ ದೃಷ್ಟಿಕೋನಗಳ ಬರಹಗಳು ಪ್ರಕಟವಾಗಿವೆ.

ಆಡಳಿತ ವರ್ಗದ ಸಂವೇದನಾಶೀಲತೆ ಹಾಗೂ ಉದಾರ ನಿಲುವಿನಿಂದಾಗಿ ಮಹಿಳೆಯರು ಸೇರಿದಂತೆ ಸಮಾಜದ ವಿವಿಧ ಸ್ತರಗಳ ಸಮುದಾಯಗಳ ವ್ಯಕ್ತಿಗಳಿಗೆ ನಾಲ್ಕು ದಶಕಗಳ ಹಿಂದೆಯೇ ‘ಪ್ರಜಾವಾಣಿ’ಯ ‘ನ್ಯೂಸ್ ರೂಮ್’ನಲ್ಲಿ ಕಾರ್ಯ ನಿರ್ವಹಿಸುವ ಅವಕಾಶ ಲಭ್ಯವಾಗಿದ್ದು ದೊಡ್ಡ ಬೆಳವಣಿಗೆ. ನ್ಯೂಸ್ ಡೆಸ್ಕ್‌ನ ರಾತ್ರಿ ಪಾಳಿಗಳಲ್ಲಿ ಹಾಗೂ ಜಿಲ್ಲೆಗಳಲ್ಲಿ ವರದಿಗಾರ್ತಿಯರಾಗಿ ಕಾರ್ಯ ನಿರ್ವಹಿಸುವಂತಹ ಅವಕಾಶಗಳು ಮಹಿಳೆಯರಿಗೆ ಲಭ್ಯವಾದದ್ದೂ ಹೊಸತನದ ದೃಷ್ಟಿಗಳು, ಮೌಲ್ಯಗಳ ಬೆಳವಣಿಗೆಗೆ ಪೂರಕವಾಗಿದ್ದವು ಎಂದೇ ಹೇಳಬೇಕು. ಹಾಗೆಯೇ ಕನ್ನಡ ಸಾಹಿತ್ಯ ಲೋಕದಲ್ಲಿ ಸ್ತ್ರೀ ಸಂವೇದನೆ ರೂಪುತಳೆಯುತ್ತಿದ್ದ ಕಾಲವದು. ಹೊಸ ಲೇಖಕಿಯರ ಸೃಜನಾತ್ಮಕ ಬರಹಗಳು ಹಾಗೂ ಸ್ತ್ರೀವಾದಿ ನೆಲೆಗಳಿಂದ ಸಾಹಿತ್ಯವನ್ನು ಗ್ರಹಿಸುವ ವಿಮರ್ಶಾ ನೋಟಗಳಿಗೂ ‘ಪ್ರಜಾವಾಣಿ’ ವೇದಿಕೆಯಾಗಿತ್ತು. ಯಥಾಸ್ಥಿತಿವಾದಗಳನ್ನು ಕದಲಿಸಿ ಹೊಸ ದೃಷ್ಟಿಕೋನಗಳನ್ನು ಬೇರೂರಿಸುವ ಯತ್ನಗಳಾಗಿದ್ದವು ಅವು.

‘ಮಹಿಳೆ’ ವಿಶೇಷ ಪುಟ – ಚಿತ್ರಗಳು: ಪ್ರಜಾವಾಣಿ ಆರ್ಕೈವ್‌

‘ಮಹಿಳೆ’ ವಿಶೇಷ ಪುಟ – ಚಿತ್ರಗಳು: ಪ್ರಜಾವಾಣಿ ಆರ್ಕೈವ್‌

ವರದಕ್ಷಿಣೆ ಹಿಂಸೆ ಪ್ರಕರಣದಲ್ಲಿ ತಿಪಟೂರಿನ ವೈದ್ಯರೊಬ್ಬರ ಪತ್ನಿ ಶಶಿಕಲಾ 1987ರ ನವೆಂಬರ್ 6 ರಂದು ಆತ್ಮಹತ್ಯೆ ಮಾಡಿಕೊಂಡ ಪ್ರಕರಣವು ರಾಜ್ಯದಲ್ಲಿ ದೊಡ್ಡ ಹೋರಾಟವನ್ನು ಹುಟ್ಟುಹಾಕಿತ್ತು. ‘ಬೆಂಗಳೂರು ಮಾಧ್ಯಮ ಮಹಿಳೆಯರ ವೇದಿಕೆ’ಯ ನಿಯೋಗವು ತಿಪಟೂರಿಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿತ್ತು. ಕುಟುಂಬದ ವಿರುದ್ಧ ಊರಿನ ಜನರು ಸ್ವಯಂ ಪ್ರೇರಿತರಾಗಿ ‘ತಿಪಟೂರು ಬಂದ್’ ಆಚರಿಸಿದ್ದು ವಿಶಿಷ್ಟವಾಗಿತ್ತು. ಈ ಹಿನ್ನೆಲೆಯಲ್ಲಿ, ವರದಕ್ಷಿಣೆ ಸಮಸ್ಯೆಯ ಬಗ್ಗೆ ಬೆಂಗಳೂರು ಸೇರಿದಂತೆ ಜಿಲ್ಲಾ ಕೇಂದ್ರಗಳ ವರದಿಗಳನ್ನಾಧರಿಸಿದ ಸಾಪ್ತಾಹಿಕ ಪುರವಣಿಯ ಅಗ್ರ ಲೇಖನವು ಕಾನೂನಿನ ಅನುಷ್ಠಾನ ಹಂತದಲ್ಲಿರುವ ನಿರ್ಲಕ್ಷ್ಯ, ಜಾಗೃತಿಯ ಕೊರತೆಯನ್ನು ಪ್ರಸ್ತಾಪಿಸಿತ್ತು (1988 ಸೆಪ್ಟೆಂಬರ್ 25).

ಶಶಿಕಲಾ ಬರೆದಿದ್ದ ಡೈರಿಯ ಮಾತುಗಳನ್ನು ಈ ಬರಹದಲ್ಲಿ ಉಲ್ಲೇಖಿಸಲಾಗಿದೆ: ‘ನಾನು ಗಂಡನಿಗೆ ಆದರ್ಶ ಪತ್ನಿ, ಅತ್ತೆ ಮಾವನಿಗೆ ಒಳ್ಳೆಯ ಸೊಸೆ ಆಗಲಿಲ್ಲವಾದರೆ - ನಾನು ಏತಕ್ಕೆ ಯೋಗ್ಯ? ಅವರು ನನ್ನನ್ನು ಜೀವನದಿಂದ ದೂರ ಏಕೆ ಮಾಡುತ್ತಿದ್ದಾರೆ? ನಾನು ನೇಣು ಹಾಕಿಕೊಂಡು ಸಾಯಲು ಇಚ್ಛಿಸುತ್ತೇನೆ. ಇದಕ್ಕೆ ಹೊಣೆ ನನ್ನ ಅತ್ತೆ, ಮಾವ ಮತ್ತು ಪತಿಯವರೆ. ನನ್ನ ಮಗುವನ್ನು ತಾಯಿಗೆ ಒಪ್ಪಿಸುತ್ತಿದ್ದೇನೆ. ಎಲ್ಲರೂ ಸೇರಿ ಆಕೆಯನ್ನು ಪ್ರೀತಿಯಿಂದ ಸಾಕಿರಿ. ಮಗಳನ್ನು ಓದಿಸಿ ಅವಳಿಗೆ ಇಚ್ಛೆ ಇದ್ದರೆ ಮದುವೆ ಮಾಡಿ. ಇಲ್ಲದಿದ್ದರೆ ಬೇಡ. ಅವಳನ್ನು ಅವರ ತಂದೆ, ತಾತ, ಅಜ್ಜಿಯವರೊಡನೆಯೂ ಯಾವಾಗಲೂ ಸೇರಿಸಬೇಡಿ. ನನ್ನಿಂದ ಸಹಿಸಲು ಸಾಧ್ಯವಿಲ್ಲ. ನಾನು ತಂದೆಯವರ ಹತ್ತಿರ ಹೋಗುತ್ತಿದ್ದೇನೆ. ಪಾಪ ಅವರೊಬ್ಬರೆ ಇದ್ದಾರೆ. ನಾನು ಸತ್ತ ನಂತರ ತಾವುಗಳು, ಗಂಡ, ಅತ್ತೆ ಮಾವ ಇವರುಗಳೊಡನೆ ಯಾವ ಸಂಬಂಧ ಇಟ್ಟುಕೊಳ್ಳಬೇಡಿ. ಸಾಯುವುದಕ್ಕೆ ಮುಂಚೆ ನಾನು ನನ್ನ ಪತಿಯನ್ನು ಕ್ಷಮಿಸಬಹುದು. ಆದರೆ ನನ್ನ ಅತ್ತೆ ಮತ್ತು ಮಾವನವರನ್ನು ನಾನೇನು ಆ ಭಗವಂತನೂ ಕ್ಷಮಿಸಲಾರ’. ವರದಕ್ಷಿಣೆ ಕಿರುಕುಳಗಳ ಬಗ್ಗೆ ಪೊಲೀಸರಿಗೆ ದೂರು ಸಲ್ಲಿಸುವ ಕ್ರಿಯೆ ಜಿಲ್ಲೆಗಳಲ್ಲಿನ್ನೂ ಆರಂಭದ ಹಂತದಲ್ಲಿರುವುದನ್ನು ಜಿಲ್ಲಾ ವರದಿಗಳು ಪ್ರಸ್ತಾಪಿಸಿವೆ. ಸುಟ್ಟ ಗಾಯಗಳಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ಸತ್ತಿರುವ ಯುವ ಮಹಿಳೆಯರ ಕುರಿತಾದ ಹೆಚ್ಚಿನ ಸಂಶೋಧನೆಯ ಅಗತ್ಯವನ್ನೂ ಈ ವರದಿಗಳು ಬೊಟ್ಟು ಮಾಡಿದ್ದವು.

ಜಿಲ್ಲೆಗಳಲ್ಲಿನ ವರದಿಗಾರರು ನೀಡುತ್ತಿದ್ದ ಅಭಿವೃದ್ಧಿಯ ಚಿತ್ರಣಗಳಲ್ಲಿ ಮಹಿಳೆಯೂ ಕೇಂದ್ರವಸ್ತುವಾಗಿರುತ್ತಿದ್ದಳು. ಕಳೆದ ಶತಮಾನದ ಎಂಬತ್ತರ ದಶಕದಲ್ಲಿ ಆಡಳಿತ ರಂಗದಲ್ಲಿ ಮಹಿಳಾ ಅಧಿಕಾರಿಗಳು ಬೆರಳೆಣಿಕೆಯಲ್ಲಿದ್ದರು. ಇತ್ತೀಚೆಗೆ ರಾಜ್ಯದ ಮುಖ್ಯ ಕಾರ್ಯದರ್ಶಿಯಾಗಿ ನಿವೃತ್ತರಾದ ರತ್ನಪ್ರಭಾ ಅವರು, 1986ರಲ್ಲಿ ಚಿಕ್ಕಮಗಳೂರು ವಿಶೇಷ ಜಿಲ್ಲಾಧಿಕಾರಿಯಾಗಿದ್ದರು. ರಾಜ್ಯದ ಪ್ರಥಮ ದಲಿತ ಮಹಿಳಾ ಐಎಎಸ್ ಅಧಿಕಾರಿ ಅವರು. ಅವರ ಸಂದರ್ಶನ ಲೇಖನ ‘ಸಾಪ್ತಾಹಿಕ ಪುರವಣಿ’ಯ ಅಗ್ರಲೇಖನವಾಗಿ (ಮಾರ್ಚ್ 23, 1986) ಪ್ರಕಟವಾಗಿತ್ತು.

‘ಮಹಿಳೆ ಮಹಾ ಶೋಷಿತೆ. ಆದ್ದರಿಂದ ಸರ್ಕಾರದ ಯೋಜನಾ ಸೌಲಭ್ಯಗಳು ನೂರಕ್ಕೆ ನೂರರಷ್ಟು ಮಹಿಳೆಗೇ ಸಿಕ್ಕಬೇಕು. ಕನಿಷ್ಠ ಶೇ 50ರಷ್ಟಾದರೂ ಸಿಕ್ಕದಿದ್ದರೆ ಅದಾವ ಸಾಮಾಜಿಕ ನ್ಯಾಯ?’ ಎಂಬಂಥ ದಿಟ್ಟ ಪ್ರಶ್ನೆಯನ್ನು ಸಾರ್ವಜನಿಕ ಸಮಾರಂಭವೊಂದರಲ್ಲಿ ಕೇಳಿದ್ದವರು ಆಗಿನ ಯುವ ಅಧಿಕಾರಿ ರತ್ನಪ್ರಭಾ. ವಿಶ್ವಸಂಸ್ಥೆ ಘೋಷಿಸಿದ್ದ ಮಹಿಳಾ ದಶಕ ಮುಕ್ತಾಯವಾಗಿ ಮಹಿಳಾ ಹಕ್ಕುಗಳ ಕುರಿತಾದ ಮಹಿಳಾ ಆಂದೋಲನ ವ್ಯಾಪಿಸಿಕೊಳ್ಳುತ್ತಿದ್ದ ಆ ಕಾಲಘಟ್ಟದಲ್ಲಿ ರತ್ನಪ್ರಭಾ ಮಾತು ರಾಜ್ಯದ ಆಡಳಿತರಂಗದಲ್ಲಿ ಹೊಸ ನುಡಿಗಟ್ಟೊಂದನ್ನು ಕಟ್ಟಿದಂತಿತ್ತು. ‘ಕುಟುಂಬದಲ್ಲಿ ಆಸ್ತಿಯ ಹಕ್ಕಿನಿಂದ ಹಿಡಿದು ಸರ್ಕಾರದ ವಿವಿಧ ಯೋಜನೆಗಳ ಎಲ್ಲಾ ಸೌಲಭ್ಯ… ಕಡೆಗೆ ಒಂದು ಜನತಾ ಮನೆ ಕೂಡ ಪುರುಷನ ಹೆಸರಿಗೇ ಹೋಗುತ್ತದೆ… ಮಹಿಳೆಗೆ ಅವಳದೇ ಆದ ಸುಖ-ಸಂತೋಷಗಳಿವೆ. ಅದನ್ನು ಪಡೆಯಲು ಆಕೆಗೂ ಪುರುಷನಷ್ಟೇ ಸಮಾನ ಹಕ್ಕಿದೆ. ಆಕೆ ಕೇವಲ ಕೊಡುವಾಕೆಯಾಗಬಾರದು. ಸ್ವೀಕರಿಸುವಾಕೆ ಕೂಡ ಆಗಬೇಕು. ಸಮಾನತೆಯ ಈ ಮೌಲ್ಯಗಳಿಗೆ ಮಾನ್ಯತೆ ಸಿಗುವುದು ಯಾವಾಗ?’ ಎಂದು ಪ್ರಶ್ನಿಸಿದ್ದ ರತ್ನಪ್ರಭಾ ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಹಿಳೆಯರ ಆರ್ಥಿಕ ಏಳಿಗೆಗಾಗಿ ಕೈಗೊಂಡ ಕ್ರಮಗಳನ್ನು ಈ ಲೇಖನ ಕಟ್ಟಿಕೊಟ್ಟಿತ್ತು.

ಸಂಪಾದಕೀಯ ಪುಟದ ಅಗ್ರ ಲೇಖನಗಳಾಗಿ ಪ್ರಕಟವಾಗುತ್ತಿದ್ದ ‘ಪಿಟಿಐ ಫೀಚರ್’ ಲೇಖನಗಳು, ಮಹಿಳಾ ವಿಚಾರಗಳನ್ನು ರಾಜಕೀಯ ಹಾಗೂ ತಾತ್ವಿಕ ನೆಲೆಗಳಲ್ಲಿ ವಿಶ್ಲೇಷಿಸಿ, ಅಭಿಪ್ರಾಯಗಳನ್ನು ರೂಢಿಸಲೆತ್ನಿಸಿವೆ. ಸ್ವತಂತ್ರ ಭಾರತದ ಆದಿ ಪತ್ರಕರ್ತೆಯರಲ್ಲಿ ಒಬ್ಬರಾದ ಕಮಲಾ ಮಂಕೇಕರ್ ಅವರ ಲೇಖನಗಳೂ ಈ ವಿಭಾಗದಲ್ಲಿ ಪ್ರಕಟವಾಗಿವೆ. ಸ್ತ್ರೀವಾದಿ ನೆಲೆಯ ಅಧ್ಯಯನಗಳ ಹಿನ್ನೆಲೆಯಿರುವ ಲೇಖಕಿಯರಾದ ಹೇಮಲತಾ ಮಹಿಷಿ, ಆರ್. ಇಂದಿರಾ, ವಸು ಮಳಲಿ ಮುಂತಾದವರ ವಿಶ್ಲೇಷಣಾತ್ಮಕ ಬರಹಗಳು ಚಿಂತನೆಯ ದಿಕ್ಕುಗಳಿಗೆ ಹೊಸ ಸ್ಪರ್ಶಗಳನ್ನು ನೀಡಿವೆ.

ಮಹಿಳೆ ವಿಚಾರಗಳ ಪರವಾಗಿ ಸೂಕ್ತ ದೃಷ್ಟಿಕೋನಗಳನ್ನು ಪಸರಿಸುವಲ್ಲಿ ‘ಪ್ರಜಾವಾಣಿ’ಯ ಸಂಪಾದಕೀಯಗಳ ಪಾತ್ರ ಮಹತ್ವದ್ದು. ಶಾಬಾನು ಪ್ರಕರಣದ ನಂತರ, ಮುಸ್ಲಿಂ ಮಹಿಳೆಯರ ಹಕ್ಕು ರಕ್ಷಣೆ ಮಸೂದೆ ಜಾರಿಗೆ ವಿರೋಧ ವ್ಯಕ್ತಪಡಿಸಿ ಕೇಂದ್ರ ಸಚಿವ ಅರೀಫ್ ಮಹಮದ್ ಖಾನ್ ನೀಡಿದ ರಾಜೀನಾಮೆಗೆ ಸಂಬಂಧಿಸಿದ ಸಂಪಾದಕೀಯ 1986ರ ಫೆ. 28ರಂದು ಪ್ರಕಟವಾಗಿದೆ. ಪ್ರತಿಗಾಮಿ ಶಕ್ತಿಗಳೊಂದಿಗೆ ಕೇಂದ್ರ ಸರ್ಕಾರ ರಾಜಿ ಮಾಡಿಕೊಂಡರೆ ಅದರಿಂದ ದೂರಗಾಮಿ ಪ್ರತಿಕೂಲ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂಬುದನ್ನು ಸಂಪಾದಕೀಯ ಎಚ್ಚರಿಸಿತ್ತು. ಮುಂದಿನ ದಿನಗಳಲ್ಲಿ ಅದು ನಿಜವಾದದ್ದಕ್ಕೆ ನಂತರದ ಇತಿಹಾಸವೇ ಸಾಕ್ಷಿ.

‘ಪ್ರಜಾವಾಣಿ’ಯ ಭಾನುವಾರದ ಪುಟಗಳಲ್ಲಿ ‘ಮಹಿಳೆ’ಗೆ ವಿಶೇಷ ಪುಟ ಅಥವಾ ಕಾಲಂಗಳನ್ನು ಮೀಸಲಿಡುವ ಪರಂಪರೆ ಐವತ್ತರ ದಶಕದಿಂದಲೂ ಇದೆ. ‘ವನಿತಾ ವಿಹಾರ’, ‘ಮಹಿಳಾ ವಾಣಿ’ ‘ಸಾಪ್ತಾಹಿಕ ಪುರವಣಿ’ಯಲ್ಲಿ ಅರ್ಧ ಪುಟದಷ್ಟು ಪ್ರಕಟವಾಗುತ್ತಿದ್ದ ‘ಮಹಿಳೆ’, ‘ಕೇಳೇ ಗೆಳತಿ’ ಕಾಲಂಗಳು, ನಂತರದ ದಿನಗಳಲ್ಲಿ ಸಮೃದ್ಧ ನಾಲ್ಕು ಪುಟಗಳ ‘ಭೂಮಿಕಾ’ ಪುರವಣಿ- ಮಹಿಳೆಯರ ವಿವಿಧ ಆಸಕ್ತಿಗಳಿಗೆ ಅಭಿವ್ಯಕ್ತಿ ನೀಡಿವೆ. ಈ ಪುಟಗಳಲ್ಲಿ ಅಂದಂದಿನ ಕಾಲದ ಮಹಿಳಾ ಕಾಳಜಿಯ ವಿಷಯಗಳ ಕುರಿತು ಬಿಸಿಬಿಸಿಯಾದ ಸಂವಾದ ಹಾಗೂ ಮಹಿಳಾ ವಿಷಯಗಳಿಗೆ ತಾತ್ವಿಕ ನೆಲೆ ಕಂಡುಕೊಳ್ಳುವ ಆಶಯದ ಬೌದ್ಧಿಕ ಚರ್ಚೆಗಳು ನಡೆದಿವೆ. ತ್ರಿವೇಣಿ, ಅನುಪಮಾ ನಿರಂಜನ ಸೇರಿದಂತೆ ಹಲವು ಲೇಖಕಿಯರು ಮಹಿಳಾ ಪುಟಗಳಲ್ಲಿ ವಿಚಾರಗಳನ್ನು ಮಂಡಿಸಿದ್ದಾರೆ. ‘ಸ್ವಾಸ್ಥ್ಯ ಸಮಸ್ಯೆ - ಸಲಹೆ’ ವಿಭಾಗದಲ್ಲಿ (1959) ತಮ್ಮ ಸ್ವಂತ ಹಾಗೂ ಕುಟುಂಬ ಸದಸ್ಯರಿಗೆ ಸಂಬಂಧಿಸಿದಂತೆ ಹೆಣ್ಣುಮಕ್ಕಳು ಕೇಳಿದ ಆರೋಗ್ಯ ಸಂಬಂಧಿ ಪ್ರಶ್ನೆಗಳಿಗೆ ಡಾ. ಅನುಪಮಾ ನಿರಂಜನ ಉತ್ತರಿಸಿದ್ದಾರೆ.

ಸಾಪ್ತಾಹಿಕ ಪುರವಣಿಯಲ್ಲಿ ಪ್ರಕಟವಾದ ಬಿ.ಎಸ್. ವೆಂಕಟಲಕ್ಷ್ಮಿ, ನೇಮಿಚಂದ್ರ ಮುಂತಾದ ಲೇಖಕಿಯರ ಲೇಖನಗಳು ಮಹಿಳಾ ಬದುಕಿನ ವಿಭಿನ್ನವಾದ ಆಯಾಮಗಳನ್ನು ಪರಿಚಯಿಸಿವೆ. ಹೆಣ್ಣುಮಕ್ಕಳಿಗೆ ಆಸ್ತಿ ಹಕ್ಕು ವಿಚಾರವಂತೂ ಓದುಗರ ಅನಿಸಿಕೆಗಳಿಂದ ಹಿಡಿದು ವಿವಿಧ ವಿಷಯ ತಜ್ಞರ ವಿಶ್ಲೇಷಣೆಗಳೊಂದಿಗೆ ಎಲ್ಲಾ ಆಯಾಮಗಳಲ್ಲಿ ಕಳೆದ ಹಲವಾರು ವರ್ಷಗಳಲ್ಲಿ ಚರ್ಚಿತವಾಗಿದೆ. ಏಕರೂಪ ನಾಗರಿಕ ಸಂಹಿತೆ ಕುರಿತಾದ ಚರ್ಚೆಗಳು ಸೃಷ್ಟಿಯಾದಾಗಲೆಲ್ಲಾ ‘ಪ್ರಜಾವಾಣಿ’ಯ ವಿವಿಧ ವಿಭಾಗಗಳ ಪುಟಗಳಲ್ಲಿ ಲೇಖನಗಳು ಪ್ರಕಟವಾಗುತ್ತಲೇ ಇವೆ. ಲಿಂಗಾನುಪಾತ ಕುಸಿತಕ್ಕೆ ಕಾರಣವಾಗುತ್ತಿರುವ ಹೆಣ್ಣು ಭ್ರೂಣ ಹತ್ಯೆಯ ಕರಾಳತೆಯನ್ನು ಜನರ ಪ್ರಜ್ಞಾ ವಲಯಕ್ಕೆ ತರಲು ‘ಪ್ರಜಾವಾಣಿ’ ಬರಹಗಳು ಶ್ರಮಿಸುತ್ತಲೇ ಇವೆ.

ಮಹಿಳೆ - ಏಕ ಜಾತಿ, ವರ್ಗವನ್ನು ಪ್ರತಿನಿಧಿಸುವುದಿಲ್ಲ. ಮಹಿಳೆಯರಲ್ಲಿ ಪ್ರಾದೇಶಿಕ ಭಿನ್ನತೆಗಳಿವೆ, ವಿವಿಧ ಸಾಮಾಜಿಕ, ಆರ್ಥಿಕ ವರ್ಗಗಳಿವೆ. ವಯೋ ಗುಂಪುಗಳಿವೆ. ಈ ಮಹಿಳೆಯರ ನಡುವಣ ವ್ಯತ್ಯಾಸಗಳಿಗೆ, ಕಾಳಜಿಗಳಿಗೆ ದನಿ ನೀಡುವ ಕೆಲಸವನ್ನು ‘ಪ್ರಜಾವಾಣಿ’ ಮಾಡಿದೆ.

ಜೈಲಿನಲ್ಲಿರುವ ಮಹಿಳಾ ಕೈದಿಗಳ ಕಷ್ಟಗಳಿಗೆ ‘ಪ್ರಜಾವಾಣಿ’ ಮಿಡಿದಿದೆ. ಅವರ ಸಮಸ್ಯೆಗಳನ್ನು ಮುನ್ನೆಲೆಗೆ ತಂದಿದೆ. ಮನೆಗೆಲಸದವರು, ಪೌರ ಕಾರ್ಮಿಕರು, ಗಾರ್ಮೆಂಟ್ ಮಹಿಳೆಯರು, ಬೀಡಿ ಕಾರ್ಮಿಕರು - ಹೀಗೆ, ಅಸಂಘಟಿತ ಕ್ಷೇತ್ರದ ದುಡಿಯುವ ಮಹಿಳೆಯರ ಸಂಕಷ್ಟಗಳು ಅಕ್ಷರಗಳಾಗಿ ಇಲ್ಲಿ ಮೂಡಿವೆ. ಸ್ಥಳೀಯ ಸಂಸ್ಥೆಗಳ ಮಹಿಳಾ ನೇತಾರರ ಸಾಧನೆಗಳ ಜೊತೆಗೆ ಸಂಕಷ್ಟಗಳ ದನಿಗಳೂ ಇವೆ. ಲಿಂಗತ್ವ ಅಲ್ಪಸಂಖ್ಯಾತರ ಒಳಗೊಳ್ಳುವಿಕೆಯೂ ಇಲ್ಲಿದೆ.

ಉದ್ಯಮಿ ಮಹಿಳೆಯರು, ಮಹಿಳಾ ರಾಜತಾಂತ್ರಿಕರು, ರಾಜಕೀಯ ನೇತಾರರು, ಸೇನೆಯಲ್ಲಿನ ಮಹಿಳೆ, ಐಟಿ ರಂಗದ ಹೊಸ ಮಹಿಳೆ, ಅಷ್ಟೇ ಅಲ್ಲ…. ಪುರುಷರ ಕೋಟೆಯಾಗಿದ್ದ ವಿವಿಧ ಉದ್ಯೋಗ ಕ್ಷೇತ್ರಗಳಲ್ಲಿ ಮಹಿಳೆಯರು ಮೂಡಿಸುತ್ತಿರುವ ಛಾಪು - ಸ್ಫೂರ್ತಿ ಕಥನಗಳಾಗಿ ಹರಿದಿವೆ. ಮೌಲ್ಯಗಳ ಸಂಘರ್ಷಗಳಲ್ಲಿ ತನ್ನ ಅಸ್ಮಿತೆಯನ್ನು ಪ್ರತಿಪಾದಿಸಲು ಹೆಣ್ಣು ನಡೆಸಬೇಕಿರುವ ಹೋರಾಟದ ಕಥನಗಳು, ಸಮಾಜದಲ್ಲಾಗುತ್ತಿರುವ ಪಲ್ಲಟಗಳು ಕಥೆಗಳಾಗಿ, ಕವನಗಳಾಗಿ, ಪ್ರಬಂಧಗಳಾಗಿ, ವಿಮರ್ಶೆಗಳಾಗಿ, ಲೇಖನಗಳಾಗಿ ಅಭಿವ್ಯಕ್ತಿ ಪಡೆಯುತ್ತಾ ಸ್ತ್ರೀ ಸಂವೇದನೆಯನ್ನು ಸಾಂದ್ರವಾಗಿಸುತ್ತಿದೆ.

ಸಾರಾಯಿ ವಿರೋಧಿ ಚಳವಳಿ, ಕಾರ್ಮಿಕ ಹಕ್ಕು, ಅತ್ಯಾಚಾರ ವಿರೋಧಿ ಹೋರಾಟಗಳಲ್ಲದೆ ದಿನನಿತ್ಯದ ‘ಸೆಕ್ಸಿಸಂ’ (ಲಿಂಗ ತಾರತಮ್ಯ), ಸ್ತ್ರೀದ್ವೇಷದ ಉದಾಹರಣೆಗಳನ್ನೂ ಮುನ್ನೆಲೆಗೆ ತಂದು ಸ್ತ್ರೀಪರ ಸಂವೇದನೆಯನ್ನು ಸೂಕ್ಷ್ಮಗೊಳಿಸುವ ಯತ್ನಗಳನ್ನು ‘ಪ್ರಜಾವಾಣಿ’ಯ ಬರಹಗಳು ಮಾಡಿವೆ.

ಮೊದಲ ಪುಟದ ವಿಷಯವಾಗಿ ಸಾಮಾನ್ಯವಾಗಿ ಕಾಣಿಸುವಂತಹ ಸುದ್ದಿ , ಸಂಪಾದಕೀಯ ವಿಷಯಗಳಾಗಿ ಮಾಮೂಲಾಗಿ ಪರಿಗಣಿಸುವಂತಹ ವಿಷಯಗಳಾಚೆಗೆ ಲಿಂಗತ್ವ ನೆಲೆಯಲ್ಲಿ ಸುದ್ದಿ ಮೌಲ್ಯವನ್ನು ಪರಿಭಾವಿಸುವ ಕ್ರಮವನ್ನು ವಿಸ್ತರಿಸುವಂತಹ ಪ್ರಯತ್ನಗಳನ್ನೂ ‘ಪ್ರಜಾವಾಣಿ’ ಮಾಡಿರುವುದು ಜೆಂಡರ್ ಪ್ರತಿಪಾದನೆಯ ಸಮಾಜಶಾಸ್ತ್ರೀಯ ವಿದ್ಯಮಾನವಾಗಿದೆ.

ಲಿಂಗ ತಾರತಮ್ಯದ ಸಮಾಜದ ಯಥಾಸ್ಥಿತಿ ಬಿಂಬಿಸುವ ಬಿಂಬಗಳು, ಫೋಟೊಗಳು, ಕಾರ್ಟೂನ್‌ಗಳು, ಯಥಾಸ್ಥಿತಿ ಮೌಲ್ಯಗಳನ್ನು ಪ್ರತಿಪಾದಿಸುವ ದೃಷ್ಟಿಕೋನಗಳ ಬರಹಗಳು, ಹಾಸ್ಯ ಲೇಖನಗಳು, ಲಘು ಶೈಲಿಯ ಮೂರನೇ ಸಂಪಾದಕೀಯಗಳ ರಂಜನೆಗಳ ಮುಖ್ಯವಾಹಿನಿಯಲ್ಲಿ ಮಹಿಳಾ ವಿಚಾರಗಳು ಕ್ಷುಲ್ಲಕೀಕರಣಗೊಳ್ಳುವುದರ ಜೊತೆ ಜೊತೆಗೇ ಗಂಭೀರ ನೆಲೆಗಳಲ್ಲಿ ಪ್ರಾಧಾನ್ಯ ಪಡೆದುಕೊಳ್ಳುವುದೂ ಇಲ್ಲಿ ಮುಖ್ಯ. ಎಲ್ಲಾ ಜನವರ್ಗಗಳ ಅಭಿರುಚಿಗೆ ಸ್ಪಂದಿಸಬೇಕಾದ ಮುಖ್ಯವಾಹಿನಿಯ ಜನಪ್ರಿಯ ಪತ್ರಿಕೆಗಳ ಈ ಅನಿವಾರ್ಯಗಳಾಚೆಗೂ ‘ಪ್ರಜಾವಾಣಿ’ ಪುಟಗಳಲ್ಲಿನ ‘ಮಹಿಳಾ ಕಾಳಜಿ’ ಬಿಂಬಿಸಿರುವ ಸೂಕ್ಷ್ಮತೆ ಹಾಗೂ ಘನತೆಯು ಜನರ ಪ್ರಜ್ಞಾವಲಯವನ್ನು ವಿಸ್ತರಿಸಿದೆ. ಸಮಸ್ಯೆಗಳ ಸಂಕೀರ್ಣತೆಗಳನ್ನು ಅರಿಯುವ ಯತ್ನ ನಿರಂತರವಾಗಿದೆ. ಈಗಲೂ ಗಂಡಾಳಿಕೆಯ ಸಾಂಸ್ಕೃತಿಕತೆಯೇ ನಮ್ಮನ್ನಾಳುತ್ತಿದೆ. ತರತಮವಿಲ್ಲದ ಹೊಸ ಜಗತ್ತು ಸೃಷ್ಟಿಸುವ ಪ್ರಕ್ರಿಯೆಗೆ ಈ ‘ಅಕ್ಷರಯಜ್ಞ’ ನಿರಂತರವಾಗಿರಬೇಕಿದೆ.

ಸಾಲುಮರದ ತಿಮ್ಮಕ್ಕ

ಸುದ್ದಿಯೆಂದರೆ ಏನು ಎಂಬುದನ್ನು ಅರ್ಥ ಮಾಡಿಕೊಳ್ಳಲು ಹೊಸ ಆಯಾಮಗಳು, ಹೊಸ ವ್ಯಾಖ್ಯೆಗಳನ್ನು ‘ಪ್ರಜಾವಾಣಿ’ ರೂಢಿಸಿದೆ. ಈವರೆಗೆ ಅಗೋಚರರಾಗಿದ್ದವರನ್ನು ಗೋಚರತೆಯ ನೆಲೆಗೆ ಒಯ್ದ ಹೆಗ್ಗಳಿಕೆ ‘ಪ್ರಜಾವಾಣಿ’ಗಿದೆ. ಇದಕ್ಕೆ ಉತ್ತಮ ಉದಾಹರಣೆ, ‘ಸಾಲುಮರಗಳ ಸಂಗಾತಿ ತಿಮ್ಮಕ್ಕ’ ರನ್ನು ಕುರಿತ ಚಿತ್ರಬರಹ (ಸಾಪ್ತಾಹಿಕ ಪುರವಣಿ -1994ರ ಜೂನ್ 19). ‘ಪ್ರಜಾವಾಣಿ’ಯ ಅರೆಕಾಲಿಕ ವರದಿಗಾರರಾಗಿದ್ದ ಎಂ.ವಿ. ನೆಗಳೂರು ಅವರು ಬರೆದ ಈ ಚಿತ್ರ-ಬರಹ, ತಿಮ್ಮಕ್ಕನ ಖ್ಯಾತಿಯನ್ನು ರಾಷ್ಟ್ರ-ಅಂತರರಾಷ್ಟ್ರ ಮಟ್ಟಗಳಿಗೆ ಎತ್ತರಿಸಿತು.

ಕೇಂದ್ರ ಸಚಿವ ಅರೀಫ್ ಮಹಮದ್ ಖಾನ್ ನೀಡಿದ ರಾಜೀನಾಮೆ ಕುರಿತ ಸಂಪಾದಕೀಯ ಇರುವ ಪುಟ

ಕೇಂದ್ರ ಸಚಿವ ಅರೀಫ್ ಮಹಮದ್ ಖಾನ್ ನೀಡಿದ ರಾಜೀನಾಮೆ ಕುರಿತ ಸಂಪಾದಕೀಯ ಇರುವ ಪುಟ

ಸತಿ

1987ರ ಸೆಪ್ಟೆಂಬರ್ 4ರಂದು ರಾಜಸ್ಥಾನದ ದೇವರಾಲಾ ಗ್ರಾಮದಲ್ಲಿ ಮರುಕಳಿಸಿದ ಸತಿ ಪದ್ಧತಿಗೆ ಸಂಬಂಧಿಸಿದಂತೆ ‘ಪ್ರಜಾವಾಣಿ’ಯಲ್ಲಿ ಪ್ರಕಟವಾದ ಬರಹಗಳು ಅಸಂಖ್ಯ. ಕರ್ನಾಟಕದಲ್ಲಿ ‘ಸತಿ’ ಇತಿಹಾಸ ಶೋಧಿಸುವ ಸೂರ್ಯನಾಥ ಕಾಮತರ ಲೇಖನವು (1988ರ ಜೂನ್ 19, ಸಾಪ್ತಾಹಿಕ ಪುರವಣಿ) ಹತ್ತನೆಯ ಶತಮಾನಕ್ಕೆ ಮೊದಲು ಕರ್ನಾಟಕದಲ್ಲಿ ಸಹಗಮನ ರೂಢಿಯಲ್ಲಿರಲಿಲ್ಲ ಎಂಬುದನ್ನು ಚಾರಿತ್ರಿಕ ದಾಖಲೆಗಳ ಮೂಲಕ ನಿರೂಪಿಸಿತ್ತು. ಹತ್ತನೆಯ ಶತಮಾನದ ನಂತರ ಕರ್ನಾಟಕದಲ್ಲಿ ಕಾಣಿಸಿಕೊಂಡ ಈ ಪದ್ಧತಿ, ಬ್ರಿಟಿಷರ ಆಗಮನದ ವೇಳೆಗೆ ಕಣ್ಮರೆಯಾಗುತ್ತಾ ಬಂದಿತ್ತು. 19ನೇ ಶತಮಾನದ ವೇಳೆಗಂತೂ ಹಳೆಯ ಮೈಸೂರು ಸಂಸ್ಥಾನದಲ್ಲಿ ಸತಿ ಹೋಗಲು ಸರ್ಕಾರದ ಅನುಮತಿ ಪಡೆದುಕೊಳ್ಳಬೇಕಿತ್ತು.

‘ಕೇಳೇ ಗೆಳತಿ’ ವಿಶೇಷ ಪುಟ

‘ಕೇಳೇ ಗೆಳತಿ’ ವಿಶೇಷ ಪುಟ

ಅವಳು - ಅವನು

ಮಹಿಳೆಯರ ಲೋಕ ವಿಸ್ತಾರವಾಗಿದೆ. ಹೀಗಾಗಿ ಗಂಡು-ಹೆಣ್ಣಿನ ಸಂಬಂಧಗಳಲ್ಲಿ, ಕುಟುಂಬ ವ್ಯವಸ್ಥೆಯಲ್ಲಿ ಹಲ ಬಗೆಯ ಸ್ಥಿತ್ಯಂತರಗಳು ಸಹಜವಾಗಿಯೇ ಉಂಟಾಗಿವೆ. ಮಹಿಳೆಯ ಈ ಹೊಸ ಆತ್ಮ ವಿಶ್ವಾಸ, ಅಸ್ಮಿತೆಯ ಪ್ರತಿಪಾದನೆಗೆ ಪುರುಷಲೋಕ ಸ್ಪಂದಿಸುವ ಬಗೆ ಎಂತಹದ್ದು ಎಂಬ ಬಗ್ಗೆ ವಿವಿಧ ಕ್ಷೇತ್ರಗಳ, ವ್ಯಕ್ತಿಗಳ ಸಂದರ್ಶನಗಳನ್ನೊಳಗೊಂಡ ಮಾಲಿಕೆಯನ್ನು ‘ಭೂಮಿಕಾ’ ಪುರವಣಿಯಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಶತಮಾನೋತ್ಸವದ ವರ್ಷದಲ್ಲಿ ಪ್ರಕಟಿಸಲಾಗಿದೆ. ಮೊದಲ ಕಂತಿನಲ್ಲಿ (2011ರ ಜನವರಿ 1) ಯು. ಆರ್. ಅನಂತಮೂರ್ತಿ ಹೇಳಿದ್ದ ಮಾತುಗಳಿವು:

‘ಗಂಡು ಬೇರೆ ಹೆಣ್ಣು ಬೇರೆ. ಆದರೆ ಇಬ್ಬರೂ ಸಮಾನ ಅಂತ ಗಾಂಧಿ ಹೇಳಿದ್ರು. ಸಮಾನ ಅಂತ ಹೇಳೋವ್ರು ವಿಭಿನ್ನತೆ ಮರೀತಾರೆ. ವಿಭಿನ್ನತೆ ಅನ್ನೋವ್ರು ಸಮಾನತೆ ಮರೀತಾರೆ.’

‘ಆಧುನಿಕ ಜಗತ್ತಿನ ಅತ್ಯಂತ ಸುಂದರ ಅಭಿವ್ಯಕ್ತಿಯಾಗಿ ಮಹಿಳೆ ಅರಳುತ್ತಿರುವಾಗ ಪುರುಷ ಸಮಾಜ ಮಾನವಪೂರ್ವ ಪಶುನಾಗರಿಕತೆಗೆ ಮರಳುತ್ತಿದೆ. ಒಂದು ಕಡೆ ಬಂಡವಾಳಶಾಹಿಯು, ಮಹಿಳೆಯನ್ನು ಅನುತ್ಪಾದಕ ಜೀವಿಯನ್ನಾಗಿಸುತ್ತಿದ್ದರೆ ಬಲಪಂಥೀಯ ಸಂಘಟನೆಗಳು ಮಹಿಳೆಯರನ್ನು ಇಲ್ಲವಾಗಿಸಿ ಕಂತೆಗಟ್ಟಲೆ ‘ಮಾತೆ’ಯರನ್ನು ಉತ್ಪಾದಿಸುತ್ತಿದೆ’ ಎಂದಿದ್ದವರು ರಾಜೇಂದ್ರ ಚೆನ್ನಿ (2011ರ ಜನವರಿ 8)

ಮಹಿಳೆಯನ್ನು ಘನತೆಯಿಂದ ನಡೆಸಿಕೊಳ್ಳುವ ಸಮಾಜ ಸೃಷ್ಟಿಯಾಗಿಲ್ಲ ಎಂಬುದು ರಹಮತ್ ತರೀಕೆರೆ ಅನಿಸಿಕೆ (2011ರ ಜನವರಿ 22)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT