ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅನುಭವ ಮಂಟಪ | ಒಳಮೀಸಲು: ತಪ್ಪು ಗ್ರಹಿಕೆ, ತಪ್ಪು ಟೀಕೆಗಳ ಗೋಜಲು

‘ಸುಪ್ರೀಂ’ ತೀರ್ಪು:ಹಾದಿ ತಪ್ಪಿಸುವ ವಿಚಾರಗಳ ಚರ್ಚೆ ಬೇಡ, ಗೊಂದಲ ನಿವಾರಣೆ ಬೇಕು
–ಯೋಗೇಂದ್ರ ಯಾದವ್, ಪ್ರಣವ್ ಧವನ್‌, ಶಿವಂ ಮೋಘಾ
Published : 23 ಸೆಪ್ಟೆಂಬರ್ 2024, 22:16 IST
Last Updated : 23 ಸೆಪ್ಟೆಂಬರ್ 2024, 22:16 IST
ಫಾಲೋ ಮಾಡಿ
Comments

ಒಳಮೀಸಲಾತಿ ಕುರಿತ ಚರ್ಚೆ ಅಪಸ್ವರದೊಂದಿಗೇ ಆರಂಭವಾಗಿದೆ. ಸುಪ್ರೀಂ ಕೋರ್ಟ್‌ನ ತೀರ್ಪಿನಲ್ಲಿರುವ ಕೆಲವು ನೈಜ ಸಮಸ್ಯೆಗಳು ಮತ್ತು ಕಳವಳಗಳನ್ನು ಬಗೆಹರಿಸುವ ಬದಲಿಗೆ ಹಾದಿತಪ್ಪಿಸುವಂತಹ ವಿಚಾರಗಳನ್ನು ಮುಂದಿಟ್ಟು ಚರ್ಚೆಯನ್ನು ಹಳ್ಳಹಿಡಿಸಲಾಗುತ್ತಿದೆ. ಈಗ ಇಲ್ಲಿ ಗದ್ದಲಕ್ಕಿಂತ ಗೊಂದಲ ನಿವಾರಣೆಯ ಅಗತ್ಯವೇ ಹೆಚ್ಚು ಇದೆ.  

ಸುಪ್ರೀಂ ಕೋರ್ಟ್‌ನ ಈ ತೀರ್ಪು ಈಗಿನ ಮೀಸಲಾತಿ ವ್ಯವಸ್ಥೆಯನ್ನು ದುರ್ಬಲ ಮಾಡಿಬಿಡುತ್ತದೆ ಎಂದು ಸಾಮಾಜಿಕ ನ್ಯಾಯದ ಪ್ರತಿಪಾದಕರು ಮತ್ತ ಬೆಂಬಲಿಗರು ತಪ್ಪಾಗಿ ಭಾವಿಸುತ್ತಿರುವುದು ಈ ಹೊತ್ತಿನ ಅತ್ಯಂತ ದೊಡ್ಡ ಸಮಸ್ಯೆ. ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಬರೆದ ಬಹುಮತದ ತೀರ್ಪು ಮತ್ತು ನ್ಯಾಯಮೂರ್ತಿ ಬಿ.ಆರ್‌.ಗವಾಯಿ ಅವರ ತೀರ್ಪನ್ನು ಸರಳವಾಗಿ ಓದಿದರೂ ಈ ತೀರ್ಪು ಸಾಮಾಜಿಕ ನ್ಯಾಯದ ಹಾದಿಯಲ್ಲಿಯೇ ಇದೆ ಎಂಬುದು ಸ್ಪಷ್ಟವಾಗುತ್ತದೆ. ಜತೆಗೆ ಅತ್ಯಂತ ಹಿಂದುಳಿದ ಮತ್ತು ಜಾತಿಶ್ರೇಣಿ ವ್ಯವಸ್ಥೆಯ ಅತ್ಯಂತ ತಳದಲ್ಲಿರುವ ಸಮುದಾಯಗಳಿಗೆ ನ್ಯಾಯ ದೊರಕಿಸುವ ಯತ್ನವನ್ನು ಸುಪ್ರೀಂ ಕೋರ್ಟ್‌ ಮಾಡಿದೆ. ‘ಮೆರಿಟ್’ನ (ಪ್ರತಿಭೆ) ಹೆಸರಿನಲ್ಲಿ ಸಾಮಾಜಿಕ ನ್ಯಾಯ ವ್ಯವಸ್ಥೆಯನ್ನು ಬುಡಮೇಲು ಮಾಡುವಂತಹ ಸಂಭಾವ್ಯ ಯತ್ನಗಳಿಗೆ ಈ ತೀರ್ಪು ಒಂದು ತಡೆಗೋಡೆಯಂತೆ ಕೆಲಸ ಮಾಡುತ್ತದೆ.

ತೀರ್ಪಿನ ಕುರಿತು ಮೇಲಿನ ತಪ್ಪು ಗ್ರಹಿಕೆ ಮಾತ್ರವಲ್ಲದೇ, ವಿಷಯಾಧಾರಿತವಾದರೂ ತಪ್ಪಾದ ಕೆಲ ಟೀಕೆಗಳೂ ಕೇಳುತ್ತಿವೆ. ಸಂಸತ್ತಿನ ಅಧಿಕಾರವನ್ನು ಸುಪ್ರೀಂ ಕೋರ್ಟ್‌ ಕಸಿದುಕೊಂಡಿದೆ ಎಂಬ ಸಾಂವಿಧಾನಿಕ ಆಕ್ಷೇಪ ಅಂತಹ ಟೀಕೆಗಳಲ್ಲಿ ಮೊದಲನೆಯದ್ದು. ಸುಪ್ರೀಂ ಕೋರ್ಟ್‌ನ ಈಗಿನ ತೀರ್ಪನ್ನು ಟೀಕಿಸುವುದಕ್ಕಾಗಿ, ಸಂಸತ್ತಿನ ಮೂಲಕ ರಾಷ್ಟ್ರಪತಿ ಮಾತ್ರವೇ ಮೀಸಲಾತಿ ಪಟ್ಟಿಯನ್ನು ಪರಿಷ್ಕರಿಸಬೇಕು ಎಂಬ ಇ.ವಿ.ಚಿನ್ನಯ್ಯ ಪ್ರಕರಣದ ತೀರ್ಪನ್ನು ಪದೇ ಪದೇ ಉಲ್ಲೇಖಿಸುವುದರಲ್ಲೇ ದೊಡ್ಡ ಸಮಸ್ಯೆ ಇದೆ. ನ್ಯಾಯಾಲಯವು ಸ್ವತಃ ಒಳಮೀಸಲಾತಿಯನ್ನು ಮಾಡಿಲ್ಲ ಅಥವಾ ಒಳಮೀಸಲಾತಿಯನ್ನು ಕಡ್ಡಾಯವೂ ಮಾಡಿಲ್ಲ. 

ಸುಪ್ರೀಂ ಕೋರ್ಟ್‌ನ ತೀರ್ಪನ್ನು ಸರಳವಾಗಿ ಓದಿದರೂ ಈ ತೀರ್ಪು ಸಾಮಾಜಿಕ ನ್ಯಾಯದ ಹಾದಿಯಲ್ಲಿಯೇ ಇದೆ ಎಂಬುದು ಸ್ಪಷ್ಟವಾಗುತ್ತದೆ. ಜತೆಗೆ ಅತ್ಯಂತ ಹಿಂದುಳಿದ ಮತ್ತು ಜಾತಿಶ್ರೇಣಿ ವ್ಯವಸ್ಥೆಯ ಅತ್ಯಂತ ತಳದಲ್ಲಿರುವ ಸಮುದಾಯಗಳಿಗೆ ನ್ಯಾಯ ದೊರಕಿಸುವ ಯತ್ನವನ್ನು ಸುಪ್ರೀಂ ಕೋರ್ಟ್‌ ಮಾಡಿದೆ. ‘ಮೆರಿಟ್’ನ (ಪ್ರತಿಭೆ) ಹೆಸರಿನಲ್ಲಿ ಸಾಮಾಜಿಕ ನ್ಯಾಯ ವ್ಯವಸ್ಥೆಯನ್ನು ಬುಡಮೇಲು ಮಾಡುವಂತಹ ಸಂಭಾವ್ಯ ಯತ್ನಗಳಿಗೆ ಈ ತೀರ್ಪು ಒಂದು ತಡೆಗೋಡೆಯಂತೆ ಕೆಲಸ ಮಾಡುತ್ತದೆ

ಯಾವುದೇ ವೈಜ್ಞಾನಿಕ ಆಧಾರವಿಲ್ಲದೇ ಸುಪ್ರೀಂ ಕೋರ್ಟ್‌ ಇಂತಹ ಮಹತ್ವದ ಆದೇಶ ನೀಡಿದೆ ಎಂಬುದು ಈ ತೀರ್ಪಿನ ಬಗ್ಗೆ ವ್ಯಕ್ತವಾಗುತ್ತಿರುವ ಎರಡನೇ ಟೀಕೆ. ಆದರೆ ವಾಸ್ತವದಲ್ಲಿ ಈ ಟೀಕೆಗೆ ಅರ್ಥವೇ ಇಲ್ಲ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನಸಂಖ್ಯೆ, ಉದ್ಯೋಗ, ಶೈಕ್ಷಣಿಕ ಸ್ಥಿತಿಗತಿ, ಆಸ್ತಿ ವಿವರಕ್ಕೆ ಸಂಬಂಧಿಸಿದ ಕರಾರುವಾಕ್ಕಾದ ದತ್ತಾಂಶಗಳನ್ನು ಜನಗಣತಿ ಒದಗಿಸುತ್ತದೆ. 2011ರ ಜನಗಣತಿಯ ವರದಿಯಲ್ಲಿರುವ ಈ ದತ್ತಾಂಶವು, ಪದವಿ ಅಥವಾ ಅದಕ್ಕಿಂತ ಹೆಚ್ಚಿನ ಶಿಕ್ಷಣ ಪಡೆದ ಈ ಸಮುದಾಯಗಳ ಜನರ ಸಂಖ್ಯೆಯನ್ನು ಸ್ಪಷ್ಟವಾಗಿ ಹೇಳುತ್ತದೆ. 

ಶೈಕ್ಷಣಿಕ ಸ್ಥಿತಿಗತಿ ಈ ಸಮುದಾಯಗಳಲ್ಲಿ ಒಂದೇ ರೀತಿಯಲ್ಲಿಲ್ಲ ಎಂಬುದನ್ನು ಈ ದತ್ತಾಂಶಗಳು ಅತ್ಯಂತ ಢಾಳಾಗಿ ತೋರಿಸುತ್ತವೆ. ಪಂಜಾಬ್‌ನ ಅತ್ಯಂತ ಹಿಂದುಳಿದ ಮಜಬಿ ಸಿಖ್‌ ಸಮುದಾಯದ ಪ್ರತಿ 10,000 ಮಂದಿಯಲ್ಲಿ ಪದವಿ ಪಡೆದವರ ಸಂಖ್ಯೆ 61 ಮಾತ್ರ. ಅದೇ ರಾಜ್ಯದ ವಾಲ್ಮೀಕಿ ಸಮುದಾಯದಲ್ಲಿ ಈ ಸಂಖ್ಯೆ 126 ಇದ್ದರೆ, ರವಿದಾಸಿ ಸಮುದಾಯದವರಲ್ಲಿ ಈ ಸಂಖ್ಯೆ 305 ಇದೆ. ಈ ಮೂರು ಸಮುದಾಯಗಳಲ್ಲೇ ಪದವಿ ಪಡೆದವರ ಸಂಖ್ಯೆ ಪರಸ್ಪರ ಹೋಲಿಕೆಯಲ್ಲಿ ಅರ್ಧದಷ್ಟು ಕಡಿಮೆ ಇದೆ. ಬಿಹಾರದ ಭುಯಾ (ಕೇವಲ 6), ಮುಶಾಹರ್‌ (ಕೇವಲ 5), ತಮಿಳುನಾಡಿನ ಮದಾರಿ (97), ಚಕ್ಕಿಲಿಯನ್‌ (137), ಅವಿಭಜಿತ ಆಂಧ್ರ ಪ್ರದೇಶದ ಜಂಗಮ (106), ಉತ್ತರ ಪ್ರದೇಶದ ವಾಲ್ಮೀಕಿ (115), ಪಾಸಿ (145), ಕರ್ನಾಟಕದ ಮಾದಿಗ (209) ಮತ್ತು ಮಹಾರಾಷ್ಟ್ರದ ಮಾಂಗ್‌ (217)– ಹೀಗೆ ವಿವಿಧ ಸಮುದಾಯಗಳಲ್ಲಿ ಪದವಿ ಪಡೆದವರ ಸಂಖ್ಯೆಯಲ್ಲಿ ಭಾರಿ ವ್ಯತ್ಯಾಸ ಇದೆ.  

ಪ್ರತಿ ರಾಜ್ಯದಲ್ಲಿನ ಇತರ ಪರಿಶಿಷ್ಟ ಜಾತಿಗಳಲ್ಲಿ ಪದವಿ ಪಡೆದವರ ಸಂಖ್ಯೆಯೊಂದಿಗೆ ಈ ಮೇಲಿನ ಸಮುದಾಯಗಳ ಪದವೀಧರರ ಸಂಖ್ಯೆಯನ್ನು ಹೋಲಿಸಿ ನೋಡಿ. ಈ ಅಂಚಿನ ಸಮುದಾಯಗಳು ಇತರ ಪರಿಶಿಷ್ಟ ಜಾತಿಗಳ ಜತೆಗೆ ಸ್ಪರ್ಧೆಗೆ ಇಳಿಯುವುದು ಎಷ್ಟು ಅಸಮಂಜಸ ಎಂಬುದು ಇದರಿಂದ ಗೊತ್ತಾಗುತ್ತದೆ. ಈ ಅಸಮಾನತೆಗೆ ಪ್ರಬಲ ಪರಿಶಿಷ್ಟ ಜಾತಿಗಳ ದಬ್ಬಾಳಿಕೆ ಅಥವಾ ಈ ಸಮುದಾಯಗಳ ಮಾಡಿರುವ ತಾರತಮ್ಯ ಕಾರಣವಲ್ಲ ಎಂಬುದನ್ನು ಹೇಳುತ್ತಲೇ, ಈ ಅಸಮಾನತೆಯನ್ನು ಹೋಗಲಾಡಿಸಲೇಬೇಕು ಎಂಬುದು ಇಂದಿನ ತುರ್ತು.

ಒಳಮೀಸಲಾತಿಯು ದಲಿತರಲ್ಲೇ ರಾಜಕೀಯ ಸಂಘರ್ಷಕ್ಕೆ ಕಾರಣವಾಗುತ್ತದೆ ಎಂಬ ರಾಜಕೀಯ ಪ್ರೇರಿತ ಪ್ರತಿಕ್ರಿಯೆಯೂ ಈ ತೀರ್ಪಿಗೆ ವ್ಯಕ್ತವಾಗುತ್ತಿದೆ. ವಾಸ್ತವದಲ್ಲಿ ಎಲ್ಲ ಪರಿಶಿಷ್ಟ ಜಾತಿಗಳ ಸಾಮಾಜಿಕ ಜೀವನ ಮತ್ತು ರಾಜಕೀಯ ಅಭೀಪ್ಸೆಗಳು ಛಿದ್ರ–ಛಿದ್ರವಾಗಿದ್ದು, ಒಮ್ಮತ ಈಗಾಗಲೇ ಇಲ್ಲವಾಗಿದೆ. ಎಲ್ಲ ಪರಿಶಿಷ್ಟ ಜಾತಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಸರ್ವ ಸಮ್ಮತಿಯ ವ್ಯವಸ್ಥೆಯನ್ನು ಮಾಡಿಕೊಳ್ಳುವುದರಿಂದ ಮಾತ್ರ ಈ ಸಮುದಾಯಗಳಲ್ಲಿ ಒಗ್ಗಟ್ಟು ಮೂಡಿಸಲು ಸಾಧ್ಯ. ದೀರ್ಘಾವಧಿ ಮತ್ತು ಪ್ರಯಾಸದ ಹೋರಾಟದ ಮೂಲಕ ಅತ್ಯಂತ ದುರ್ಬಲ ಪರಿಶಿಷ್ಟ ಜಾತಿಗಳು ಪಡೆದುಕೊಂಡ ಈ ಅವಕಾಶವನ್ನು, ಪ್ರಬಲ ಪರಿಶಿಷ್ಟ ಜಾತಿಗಳು ಅನುಮೋದಿಸಬೇಕು. ಆ ಮೂಲಕ ಅದು ಜಾರಿಗೆ ಬರುವಂತಾಗಬೇಕು. ದುರದೃಷ್ಟವೆಂದರೆ, ‘ಪ್ರಬಲ’ ಜಾತಿಗಳು ಮೀಸಲಾತಿಯನ್ನು ವಿರೋಧಿಸುತ್ತಿರುವಂತೆಯೇ, ಪ್ರಬಲ ಪರಿಶಿಷ್ಟ ಜಾತಿಗಳೂ ಒಳಮೀಸಲಾತಿಯನ್ನು ವಿರೋಧಿಸುವುದರ ಸೂಚನೆಗಳು ಕಾಣುತ್ತಿವೆ.

ಈ ಎಲ್ಲಾ ಅನಗತ್ಯ ಮತ್ತು ಹಾದಿತಪ್ಪಿಸುವಂತಹ ಟೀಕೆಗಳನ್ನು ಬದಿಗಿರಿಸದರೆ, ಸುಪ್ರೀಂ ಕೋರ್ಟ್‌ ತೀರ್ಪಿನಲ್ಲಿರುವ ನಿಜವಾದ ತೊಡಕುಗಳು ಮತ್ತು ಕಳವಳಗಳನ್ನು ಪರಿಶೀಲಿಸಬಹುದು ಹಾಗೂ ಪರಿಹಾರಗಳನ್ನು ಕಂಡುಕೊಳ್ಳಬಹುದು.

ದುರ್ಬಳಕೆ ಅಪಾಯಗಳು: ಒಳಮೀಸಲಾತಿಯ ಅಧಿಕಾರವನ್ನು ರಾಜ್ಯಗಳಿಗೇ ನೀಡುವುದು ದುರುಪಯೋಗಕ್ಕೆ ಕಾರಣವಾಗಬಹದು. ಆಡಳಿತ ಪಕ್ಷವು ಯಾವುದೋ ಒಂದು ಜಾತಿಯನ್ನು ಓಲೈಸಲು ಅಥವಾ ತನ್ನ ಬೆಂಬಲಕ್ಕಿರದ ಜಾತಿಗಳನ್ನು ಶಿಕ್ಷಿಸಲು ಈ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳಬಹುದು ಎಂಬುದು ಮೊದಲ ಆತಂಕ.

ಒಬಿಸಿ ಒಳಮೀಸಲಾತಿ ಹೆಸರಿನಲ್ಲಿ ಬಿಜೆಪಿ ಕೆಲವು ರಾಜ್ಯಗಳಲ್ಲಿ ಇಂತಹ ಅನ್ಯಾಯವನ್ನು ಈಗಾಗಲೇ ಮಾಡಿದೆ. ಆದರೆ ಇಂತಹ ದುರ್ಬಳಕೆಗೆ ಕಡಿವಾಣ ಹಾಕುವ ಉದ್ದೇಶದಿಂದಲೇ ಸುಪ್ರೀಂ ಕೋರ್ಟ್‌, ‘ಒಳಮೀಸಲಾತಿಯು ದತ್ತಾಂಶ ಆಧಾರಿತವಾಗಿರಬೇಕು’ ಎಂದು ಹೇಳಿದೆ. ಆ ದತ್ತಾಂಶ ಯಾವುದು ಎಂಬುದನ್ನು ಸ್ಪಷ್ಟವಾಗಿ ಹೇಳಲು ಅವಕಾಶವಿತ್ತು. ಜನಗಣತಿ ಮತ್ತು ಆರ್ಥಿಕ ಗಣತಿಯ ದತ್ತಾಂಶಗಳು ಈಗಾಗಲೇ ಲಭ್ಯವಿವೆ. ಆದರೆ ಸಂಘಟಿತ ವಲಯಗಳಲ್ಲಿ ಉದ್ಯೋಗ ಮತ್ತು ಉನ್ನತ ಶಿಕ್ಷಣದಲ್ಲಿ ಈ ಎಲ್ಲ ಸಮುದಾಯಗಳ ಸ್ಥಿತಿಗತಿ ಏನು ಎಂಬುದರ ಸ್ಪಷ್ಟ ಚಿತ್ರಣ ಸಿಗಲು ದೇಶದಾದ್ಯಂತ ಜಾತಿಗಣತಿ ನಡೆಸಬೇಕಾಗುತ್ತದೆ.

ಅಭ್ಯರ್ಥಿ ಸಿಗದೇ ಇರುವ ಸ್ಥಿತಿ: ಉನ್ನತ ಹುದ್ದೆಗಳಲ್ಲಿ ಮೀಸಲಾತಿ ಪ್ರಮಾಣವನ್ನು ಕುಗ್ಗಿಸಲು ಒಳಮೀಸಲಾತಿಯನ್ನು ದುರ್ಬಳಕೆ ಮಾಡಿಕೊಳ್ಳಬಹುದು ಎಂಬುದು ಎರಡನೆಯ ಆತಂಕ.

ಉನ್ನತ ಹುದ್ದೆಗಳಿಗೆ ‘ಸೂಕ್ತ ಅಭ್ಯರ್ಥಿ ಸಿಗಲಿಲ್ಲ’ ಎಂದು ನೆಪವೊಡ್ಡಿ, ಹುದ್ದೆಯನ್ನು ಖಾಲಿ ಇರಿಸುವುದು ಮತ್ತು ನಂತರ ಅದನ್ನು ಸಾಮಾನ್ಯ ವರ್ಗಕ್ಕೆ ವರ್ಗಾಯಿಸುವ ಹುನ್ನಾರವನ್ನು ತಳ್ಳಿಹಾಕಲು ಸಾಧ್ಯವೇ ಇಲ್ಲ. ಆದರೆ, ‘ಒಳಮೀಸಲಾತಿ ದೊರೆತ ಜಾತಿಯಲ್ಲಿ ಸೂಕ್ತ ಅಭ್ಯರ್ಥಿ ದೊರೆಯದಿದ್ದರೆ, ಒಳಮೀಸಲಾತಿ ಅನ್ವಯವಾಗುವ ಇನ್ನೊಂದು ಜಾತಿಗೇ ಅದನ್ನು ನೀಡಬೇಕು. ಯಾವುದೇ ಕಾರಣಕ್ಕೂ ಆ ಹುದ್ದೆಯನ್ನು ಸಾಮಾನ್ಯ ವರ್ಗಕ್ಕೆ ನೀಡಬಾರದು’ ಎಂಬ ನಿಯಮ ರೂಪಿಸುವ ಮೂಲಕ ಈ ಆತಂಕವನ್ನು ನಿವಾರಿಸಿಕೊಳ್ಳಬಹುದು.

ಕೆನೆಪದರ ಗೊಂದಲ: ಪರಿಶಿಷ್ಟ ಜಾತಿ ಒಳಮೀಸಲಾತಿಗೆ ಕೆನೆಪದರವನ್ನು ಅನ್ವಯ ಮಾಡುವುದರ ಬಗ್ಗೆ ಪರಿಶೀಲನೆ ನಡೆಸಬಹುದು ಎಂದೂ ಸುಪ್ರೀಂ ಕೋರ್ಟ್‌ ತನ್ನ ತೀರ್ಪಿನಲ್ಲಿ ಹೇಳಿದೆ. ಮೂರನೇ ಸಮಸ್ಯೆಯೆಂದರೆ, ದಿಢೀರ್ ಕೆನೆಪದರ ಅನ್ವಯ ಮಾಡುವುದರಲ್ಲಿ ಹಲವು ತೊಡಕುಗಳು ಎದುರಾಗುತ್ತವೆ.

ಮೀಸಲಾತಿಯ ಕಾರಣದಿಂದ ಪರಿಶಿಷ್ಟ ಜಾತಿಗಳಲ್ಲಿ ಕೆನೆಪದರ ವರ್ಗ ರೂಪುಗೊಂಡಿದೆ ಎಂಬುದಕ್ಕೆ ಯಾವುದೇ ಸಾಮಾಜಿಕ ಪುರಾವೆಗಳಿಲ್ಲ. ಕುಟುಂಬವೊಂದಕ್ಕೆ ದೊರೆತ ಅವಕಾಶ ಮತ್ತು ಸವಲತ್ತುಗಳು ತಲೆಮಾರಿನಿಂದ ತಲೆಮಾರಿಗೆ ವರ್ಗಾವಣೆಯಾಗಿ, ಸಮಾಜದಲ್ಲಿ ಉತ್ತಮ ಸ್ಥಾನ ಲಭ್ಯವಾಗಿದೆ ಎಂಬುದನ್ನು ತೋರಿಸುವ ಪುರಾವೆಗಳೂ ಇಲ್ಲ. ಕೆನೆಪದರ ವರ್ಗವನ್ನು ಹೊರಗಿಡುವುದರಿಂದ, ಮೀಸಲು ಹುದ್ದೆಗಳಿಗೆ ಲಭ್ಯವಿರುವ ಅರ್ಹ ಅಭ್ಯರ್ಥಿಗಳ ಸಂಖ್ಯೆ ಇಳಿಕೆಯಾಗಬಹುದು. ಅಂತಿಮವಾಗಿ ಆ ಹುದ್ದೆಗಳು ಸಾಮಾನ್ಯ ವರ್ಗಕ್ಕೆ ಹೋಗಬಹುದು ಎಂಬ ಆತಂಕ ಇದೆ. 

ಸುಪ್ರೀಂ ಕೋರ್ಟ್‌ನ ತೀರ್ಪಿನಲ್ಲಿ ಇದನ್ನು ಜಾರಿಗೆ ತರಲೇಬೇಕಾದ ಸೂಚನೆಯ ಅಡಿಯಲ್ಲಿ ಹೇಳಿಲ್ಲ. ಆದರೆ ಏಳು ಮಂದಿಯ ಪೀಠದಲ್ಲಿ ನಾಲ್ವರು ನ್ಯಾಯಮೂರ್ತಿಗಳು ಕೆನೆಪದರವನ್ನು ಉಲ್ಲೇಖಿಸಿದ್ದಾರೆ. ‘ಕೆನೆಪದರ’ ಅನ್ವಯ ಮಾಡಿಲ್ಲ ಎಂಬ ನೆಪದಲ್ಲಿ ಒಳಮೀಸಲಾತಿಯನ್ನೇ ನ್ಯಾಯಾಲಯದಲ್ಲಿ ಪ್ರಶ್ನಿಸಲು ಇದನ್ನು ಬಳಕೆ ಮಾಡಿಕೊಳ್ಳುವ ಅಪಾಯವಿದೆ. ಸುಪ್ರೀಂ ಕೋರ್ಟ್‌ ಇದನ್ನು ಸ್ಪಷ್ಟಪಡಿಸದೇ ಇರುವಾಗ, ಕೆನೆಪದರ ಹೇಗೆ ಅನ್ವಯವಾಗಬೇಕು ಎಂಬುದರ ಸ್ವರೂಪವನ್ನು ನಿರ್ಧರಿಸುವ ಮತ್ತು ಆ ಮೂಲಕ ಗೊಂದಲಗಳನ್ನು ನಿವಾರಿಸುವ ಹೊಣೆಗಾರಿಕೆಯನ್ನು ಸಂಸತ್ತು ಎತ್ತಿಕೊಳ್ಳಬೇಕಾಗುತ್ತದೆ.

ಒಳಮೀಸಲಾತಿಯನ್ನು ಅನಗತ್ಯವಾಗಿ ವಿರೋಧಿಸುವ ಮತ್ತು ಅದನ್ನು ಪ್ರತಿಭಟಿಸುವ ಬದಲಿಗೆ, ಸುಪ್ರೀಂ ಕೋರ್ಟ್‌ನ ತೀರ್ಪಿನಲ್ಲಿರುವ ತೊಡಕುಗಳನ್ನು ನಿವಾರಿಸುವತ್ತ ಗಮನ ಕೇಂದ್ರೀಕರಿಸಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಇರುವ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸುವ, ಮೀಸಲಾತಿಗೆ ಇರುವ ಶೇ50ರ ಮಿತಿಯನ್ನು ತೊಡೆದು ಹಾಕುವ ಮತ್ತು ಸರ್ಕಾರಿ ಉದ್ಯೋಗಗಳಾಚೆಗೂ ಮೀಸಲಾತಿಯನ್ನು ದೊರಕಿಸಿಕೊಳ್ಳುವಂತಹ ನಿಜವಾದ ಸಮಸ್ಯೆಗಳ ವಿರುದ್ಧ ಹೋರಾಡಬೇಕಿದೆ. 

ಲೇಖಕರು: ಯೋಗೇಂದ್ರ ಯಾದವ್‌ ಅವರು ಸ್ವರಾಜ್‌ ಇಂಡಿಯಾ ಸದಸ್ಯ, ಪ್ರಣವ್‌ ಧವನ್‌ ಅವರು ದೆಹಲಿಯಲ್ಲಿ ವಕೀಲ ಮತ್ತು ಕಾನೂನು ಸಂಶೋಧಕ, ಶಿವಂ ಮೋಘಾ ಅವರು ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದಲ್ಲಿ ಪಿಎಚ್‌ಡಿ ಸಂಶೋಧಕ

ಕನ್ನಡ ಅನುವಾದ: ಜಯಸಿಂಹ ಆರ್‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT