ಒಳ ಮೀಸಲಾತಿಯು ‘ಅಂಬೇಡ್ಕರ್ ಸಿದ್ಧಾಂತ’ದ ಭಾಗವೇ ಆಗಿದೆ. ಇದರ ಜಾರಿಯಿಂದ ಯಾವ ದಲಿತ ಜಾತಿಯೂ ಮೀಸಲಾತಿಯನ್ನು ಕಳೆದುಕೊಳ್ಳುವುದಿಲ್ಲ. ಆದರೆ, ಜನಸಂಖ್ಯೆ ಮತ್ತು ಪ್ರಾತಿನಿಧ್ಯದ ಆಧಾರದಲ್ಲಿ ಮೀಸಲಾತಿ ಪ್ರಮಾಣ ಮರುವಿಂಗಡಣೆಯಷ್ಟೇ ಆಗುತ್ತದೆ. ಹಾಗಾಗಿ, ಮೀಸಲಾತಿಯ ಪರ ಇರುವವರು ಒಳಮೀಸಲಾತಿಯ ಪರವೂ ಇರಲೇಬೇಕು
ಡಾ.ಬಿ.ಆರ್.ಅಂಬೇಡ್ಕರ್ ಅವರು ತಳಸಮುದಾಯಗಳಿಗೆ ಹೇಳಿದ ಶಿಕ್ಷಣ, ಸಂಘಟನೆ, ಹೋರಾಟ ಎಲ್ಲಾ ಕಾಲದ ತುರ್ತು. ಆದರೆ, ಈ ಸಂಘಟನಾತ್ಮಕ ಹೋರಾಟಕ್ಕೆ ಅರ್ಥ ಸಿಗಬೇಕಿದ್ದರೆ ದಲಿತ ಸಮುದಾಯದೊಳಗಿನ ನೂರೊಂದು ಜಾತಿಗಳು ಈಗ ಒಳಮೀಸಲಾತಿ ಜಾರಿಗಾಗಿ ಆಗ್ರಹಿಸಬೇಕಿದೆ. 32 ವರ್ಷ ತಾವು ಪಡೆಯಲೇಬೇಕಾದ ನ್ಯಾಯಯುತ ಹಕ್ಕಿಗಾಗಿ ಮಾದಿಗ ಸಮುದಾಯ ಬೀದಿಯಲ್ಲಿ ಹೋರಾಡುತ್ತಿದೆ. ಇದೀಗ ಒಳಮೀಸಲಾತಿ ಜಾರಿ ಅಧಿಕಾರವನ್ನು ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಕ್ಕೆ ನೀಡಿರುವುದು ಈ ಹೋರಾಟಕ್ಕೆ ಸಿಕ್ಕ ಜಯವಾಗಿದ್ದರೂ ದಲಿತ ಸಮುದಾಯಗಳ ನಡುವೆ ಬಿರುಕು ಸೃಷ್ಟಿಸುತ್ತಲೇ ಒಂದು ನ್ಯಾಯಯುತ ಬೇಡಿಕೆಯನ್ನು ಈವರೆಗೆ ತಳ್ಳುತ್ತಾ ಬಂದ ಜಾತಿ ರಾಜಕಾರಣದ ವಿರುದ್ಧ ಸಮುದಾಯ ಒಗ್ಗೂಡಬೇಕಿದೆ. ಒಳ ಮೀಸಲಾತಿ ಜಾರಿ ಹೋರಾಟವೇ ದಲಿತರ ಮುಂದಿನ ಹೋರಾಟಗಳ ಅಸ್ಮಿತೆಯಾಗಿ ರೂಪುಗೊಳ್ಳಲಿದೆ. ಸಾಮಾಜಿಕ ನ್ಯಾಯದ ಪರವಾಗಿ ಮಾತನಾಡುವ ಎಲ್ಲರೂ ಒಳ ಮೀಸಲಾತಿ ಜಾರಿಗಾಗಿ ಒಗ್ಗೂಡಲೇಬೇಕಿದೆ. ಯಾಕೆಂದರೆ, ಒಳ ಮೀಸಲಾತಿ ಜಾರಿಯಾಗುವುದೇ ಸಾಮಾಜಿಕ ನ್ಯಾಯದ ನಿಜ ಅರ್ಥವಾಗಿದೆ. ಈಗ ದಲಿತ ಸಂಘಟನೆಗಳು ಹೇಗೆ ವರ್ತಿಸುತ್ತವೆ, ಹೇಗೆ ಒಗ್ಗೂಡುತ್ತವೆ ಎಂಬುದರ ಮೇಲೆ ಈ ಸಮುದಾಯಗಳ ಮುಂದಿನ ಬದುಕು ಮತ್ತು ಹೋರಾಟ ನಿರ್ಧಾರವಾಗುತ್ತದೆ.-ಮಂಜುಳಾ ಹುಲಿಕುಂಟೆ, ಪತ್ರಕರ್ತೆ
ಒಳಮೀಸಲಾತಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಸಿಕಂದರಾಬಾದಿನ ‘ಮಾದಿಗ ವಿಶ್ವರೂಪಂ ಮಹಾ ಸಮ್ಮೇಳನ’ದಲ್ಲಿ ಕೊಟ್ಟ ಮಾತಿನಂತೆ ಕೇಂದ್ರ ಸರ್ಕಾರ ಒಳಮೀಸಲಾತಿ ಬೆಂಬಲಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ ನಂತರ ಸಂವಿಧಾನ ಪೀಠದ ತೀರ್ಪು ಬಂದಿದೆ. ತೀರ್ಪನ್ನು ಸ್ವಾಗತಿಸಿರುವ ಸಿ.ಎಂ ಸಿದ್ದರಾಮಯ್ಯನವರು ಹೈಕಮಾಂಡ್ ಜತೆ ಚರ್ಚಿಸಿ ಒಳ ಮೀಸಲಾತಿ ಜಾರಿ ಮಾಡುವುದಾಗಿ ಹೇಳಿದ್ದಾರೆ. ಇಂದಿನ ಕಾಂಗ್ರೆಸ್ ಹೈಕಮಾಂಡ್ ಆದ ಮಲ್ಲಿಕಾರ್ಜುನ ಖರ್ಗೆ ಅವರು ಒಳ ಮೀಸಲಾತಿಯನ್ನು ಪ್ರಾರಂಭದಿಂದಲೂ ವಿರೋಧಿಸಿಕೊಂಡು ಬಂದ ನಾಯಕರು ಎನ್ನುವುದು ಮಾದಿಗ ಸಮುದಾಯದ ನಾಯಕರ ಆರೋಪ. ಒಳಮೀಸಲಾತಿ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ರಚಿಸಿದ ಸಮಿತಿಯ ಸಭೆಗೆ ಮಾದಿಗ ಸಮುದಾಯದ ಪ್ರಮುಖ ನಾಯಕರಾದ ಕೆ.ಎಚ್.ಮುನಿಯಪ್ಪನವರಿಗೆ ಆಹ್ವಾನವಿರಲಿಲ್ಲ. ಇದು ಒಳಮೀಸಲಾತಿಯ ಜಾರಿ ವಿಚಾರದಲ್ಲಿ ಕಾಂಗ್ರೆಸ್ ಮನಃಸ್ಥಿತಿಯನ್ನು ತೋರಿಸುತ್ತದೆ. ಮಾದಿಗ ಸಮುದಾಯವು ಪರಿಶಿಷ್ಟ ಜಾತಿಯ ಸಮುದಾಯಗಳಲ್ಲಿ ಅತಿ ಹೆಚ್ಚು ತುಳಿತಕ್ಕೊಳಗಾಗಿದೆ. ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂದು ಬೊಬ್ಬೆ ಹೊಡೆಯುವ ಕಾಂಗ್ರೆಸ್ ಸರ್ಕಾರ, ಪರಿಶಿಷ್ಟ ಜಾತಿಯಲ್ಲಿರುವ 101 ಜಾತಿಗಳಿಗೂ ಅವರವರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿಯ ಸಾಮಾಜಿಕ ನ್ಯಾಯ ಒದಗಿಸುವ ಸುವರ್ಣಾವಕಾಶವನ್ನು ಕಳೆದುಕೊಳ್ಳದಿರಲಿ.-ಎಚ್.ವೆಂಕಟೇಶ ದೊಡ್ಡೇರಿ, ಹೈಕೋರ್ಟ್ ವಕೀಲ
ಚುನಾವಣಾ ಸಮಯದಲ್ಲಿ ರಾಜಕೀಯ ಪಕ್ಷಗಳು ಬಹುಸಂಖ್ಯಾತ ಮಾದಿಗ ಸಮುದಾಯವನ್ನು ಮತಬ್ಯಾಂಕ್ ಆಗಿ ಉಪಯೋಗಿಸಿಕೊಂಡವೇ ವಿನಾ, ಈ ಸಮುದಾಯಕ್ಕೆ ಸಾಮಾಜಿಕ ನ್ಯಾಯ ಸಿಗಲು ಅನುಕೂಲ ಕಲ್ಪಿಸಲೇ ಇಲ್ಲ. ಸದಾಶಿವ ಆಯೋಗದ ವರದಿಯನ್ನು ಇಟ್ಟುಕೊಂಡು ಎಲ್ಲಾ ರಾಜಕೀಯ ಪಕ್ಷಗಳು ಮಾದಿಗರನ್ನು ವಂಚಿಸಿವೆ. 2013ರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ಒಳಮೀಸಲಾತಿಗೆ ಒಂದು ತಾರ್ಕಿಕ ಅಂತ್ಯ ಸಿಗಲಿದೆ ಎಂಬ ಭರವಸೆ ಇತ್ತು. ಆದರೆ, ಸರ್ಕಾರದ ಸಂಪುಟದಲ್ಲಿ ಈ ಕುರಿತು ಒಮ್ಮತದ ತೀರ್ಮಾನಕ್ಕೆ ಸಹೋದರ ಸಮುದಾಯಗಳು ಬರಲೇ ಇಲ್ಲ. ಪರಿಶಿಷ್ಟರ ಇತರೆ ಸಮುದಾಯದ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿಯೂ ಸರ್ಕಾರ ಸೋತಿತು. ಇದೀಗ ಎರಡನೇ ಬಾರಿಗೆ ಮುಖ್ಯಮಂತ್ರಿ ಆಗಿರುವ ಸಿದ್ದರಾಮಯ್ಯ ಅವರು ಚುನಾವಣಾ ಸಮಯದಲ್ಲಿ ಒಳಮೀಸಲಾತಿ ಕುರಿತು ನೀಡಿದ ಭರವಸೆಯನ್ನು ಈಗಲಾದರೂ ಈಡೇರಿಸಲಿ. ಸುಪ್ರೀಂ ಕೋರ್ಟ್ ತೀರ್ಪು ಬಂದು ಎರಡು ತಿಂಗಳಾಗುತ್ತಾ ಬಂದರೂ ಸರ್ಕಾರ ಒಳಮೀಸಲಾತಿ ಜಾರಿಗೆ ಸಂಬಂಧಿಸಿದಂತೆ ಪ್ರಕ್ರಿಯೆಗಳಿಗೆ ಚಾಲನೆ ಕೊಟ್ಟಿಲ್ಲ. ಚುನಾವಣೆ ಸಂದರ್ಭದಲ್ಲಿ ಮಾತನಾಡುವ ಮಾತುಗಳು ಕ್ರಿಯೆಗಳಿಗೆ ಇಳಿದಾಗ ಮಾತ್ರ ಆ ಮಾತುಗಳಿಗೆ ಒಂದು ಕಿಮ್ಮತ್ತು ಇರಲಿದೆ.-ಜಡೇಕುಂಟೆ ಮಂಜುನಾಥ್, ಸಾಮಾಜಿಕ ಕಾರ್ಯಕರ್ತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.